ವಿಷಯಕ್ಕೆ ಹೋಗು

ಆದಿಮಜನರ ಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಧುನಿಕ ನಾಗರಿಕತೆಯ ಪ್ರಭಾವಗಳಿಗೆ ಒಳಗಾಗದೆ ಪ್ರಾಕ್ತನ ಕಾಲೀನ ಸಂಸ್ಕøತಿಗಳ ವಿವಿಧ ಹಂತಗಳಲ್ಲಿ ಜೀವಿಸುತ್ತಿದ್ದ ಈಗಲೂ ಹಲವೆಡೆ ಜೀವಿಸುತ್ತಿರುವ ಜನರಿಗೆ ಸಂಬಂಧಿಸಿದ್ದು (ಪ್ರಿಮಿಟೀವ್‍ಆರ್ಟ್). ಇದಕ್ಕೂ ಹಿಂದೆ ಇದ್ದ ಆದಿಮಾನವರ ಜೀವನ, ಕಲೆಗಳ ಬಗ್ಗೆ ಪ್ರತ್ಯೇಕ ಲೇಖನವಿದೆ. (ನೋಡಿ- ಆದಿಮಾನವ-ಕಲೆ) ಆದಿಮಜನರೆಂದರೆ ಮಿತವಾದ, ಪ್ರತ್ಯೇಕವಾದ, ಸಮಾನರೂಪದ, ನಿಕಟವಾದ ಸಂಬಂಧಗಳನ್ನುಳ್ಳ ನಿರಕ್ಷರಸ್ಥ, ಅವಿಧ್ಯುಕ್ತ ಸಾಮಾಜಿಕ ಹತೋಟಿ ಮತ್ತು ಬಲಿಷ್ಠ ಸಾಮಾಜಿಕ ಒಗ್ಗಟ್ಟುಗಳಿಂದ ನಿಯುಕ್ತವಾದ ಸಮಾಜವೆಂದು ಅನೇಕ ವಿದ್ವಾಂಸರೂ ಅಭಿಪ್ರಾಯಪಟ್ಟಿದ್ದಾರೆ. ಹಾಗೆಂದಮಾತ್ರಕ್ಕೆ ಈ ಜನ ಅನಾಗರಿಕರೆಂದೂ ಅವರ ಕಲೆಗಾರಿಕೆಯಲ್ಲಿ ಉತ್ತಮಾಂಶಗಳಿಲ್ಲವೆಂದೂ ಭಾವಿಸುವುದು ತಪ್ಪು. ಉನ್ನತ ಮಟ್ಟದ ಕಲಾಕೃತಿಗಳಲ್ಲಿ ನಿರ್ಮಿಸಿರುವ ಈ ಸಂಪ್ರದಾಯಗಳಲ್ಲಿ ಕಂಡುಬರುವ ಅವರ ವಿಕೃತ ರೂಪಗಳು ಅವರ ಸಾಂಪ್ರದಾಯಿಕ, ಸಾಂಕೇತಿಕ ಶೈಲಿಗಳ ಪ್ರತೀಕಗಳಾಗಿದ್ದು ಮಹತ್ವದ ವಸ್ತುನಿರೂಪಣೆಗಾಗಿ ಉಪಯೋಗಿಸಿದ ತಂತ್ರಗಳಾಗಿವೆ. ಈ ಕಲಾವಿದರು ಸಾಮಾನ್ಯವಾಗಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಹಿರಿಯ ಕಲಾವಂತರ ಬಳಿ ಶಿಷ್ಯವೃತ್ತಿ ನಡೆಸಿ ಕಲಾವಿಧಾನಗಳನ್ನು ಕಲಿತಿರುವುದರಿಂದ ಪ್ರತಿಯೊಂದು ಪಂಗಡದ ಅನುವಂಶಿಕ ನಂಬಿಕೆ, ಆಚಾರಗಳೂ ಅವರ ಕಲೆಗಳಲ್ಲಿ ಪ್ರತಿಬಿಂಬಿತವಾಗಿರುತ್ತವೆ. ಸಾಮಾನ್ಯವಾಗಿ ಪ್ರಾಣಿ ಮನುಷ್ಯ ಅಥವಾ ಅವೆರಡರ ಸಂಕೀರ್ಣ ರೂಪಗಳು ಈ ಕಲೆಗೆ ವಸ್ತುವನ್ನೊದಗಿಸಿ, ಮತೀಯ ಅಥವಾ ನಾಟಕೀಯ ದೃಶ್ಯಗಳ ನಿರೂಪಣೆಯೋ ಅಧಿಕಾರ ಅಥವಾ ಗೌರವಸೂಚನೆಯೋ ಈ ಕಲೆಯ ಮುಖ್ಯ ಗುರಿಯಾಗಿದೆ. ಕಲೆಗಾಗಿ ಕಲೆ ಎಂಬ ತತ್ತ್ವ ಈ ಸಂಪ್ರದಾಯಕ್ಕೆ ಅನ್ವಯಿಸುವುದಿಲ್ಲ. ಸಾಮಾಜಿಕವಾಗಿ ವಾತಾವರಣದ ನೆರಳಿನಲ್ಲಿ ಕಲೆ ಮಾಡಬೇಕಾದ ನಿಯೋಜಿತ ಕರ್ತವ್ಯಗಳ ಹೊರತಾಗಿ ವಸ್ತು ನಿರೂಪಣೆ ಅಥವಾ ಅಲಂಕರಣಕಾರ್ಯ ಇದರ ಗುರಿಯಲ್ಲ. ಈ ಕಲೆಯ ಪ್ರೌಢಿಮೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ವಿಮರ್ಶಕ ತನ್ನ ದೃಷ್ಟಿಕೋನದಿಂದ ಅದನ್ನು ಅಳೆಯದೇ ಆ ಕಲೆಯ ಸಾಂಸ್ಕøತಿಕ ಹಿನ್ನೆಲೆ ಮತ್ತು ಅದರ ನಿಯೋಜಿತ ಗುರಿಯ ಆಧಾರದ ಮೇಲೆ ಪರಿಶೀಲಿಸಬೇಕು.

ಆದಿಮಜನಾಂಗಗಳ ಕಲೆ

[ಬದಲಾಯಿಸಿ]

ಈ ಅಂಶಗಳನ್ನೇ ಗಮನದಲ್ಲಿಟ್ಟುಕೊಂಡು ವಿಶ್ವದ ವಿವಿಧ ಆದಿಮಜನಾಂಗಗಳ ಕಲೆಗಳನ್ನಿಲ್ಲಿ ಸಂಕ್ಷೇಪವಾಗಿ ಪರಿಶೀಲಿಸಲಾಗಿದೆ. ಮಾನವನ ಉಗಮಕಾಲದ ಕಲಾಕೃತಿಗಳ ವಿಷಯ ತಿಳಿದುಬಂದಿಲ್ಲ. ಆದರೆ ಆ ಕಾಲಗಳಲ್ಲಿ ಕಲಾಸೃಷ್ಟಿಯಾಗಿಲ್ಲವೆಂದು ಭಾವಿಸಲಾಗದು. ಏಕೆಂದರೆ ಎಲ್ಲಿ ಬುದ್ಧಿಶಕ್ತಿಯ ಕೆಲಸ, ಹೃದಯದ ಉದ್ರೇಕಗಳಿವೆಯೋ ಅಲ್ಲೆಲ್ಲ ಒಂದಲ್ಲ ಒಂದು ರೀತಿಯ ವಿನೋದ, ವಿಹಾರ, ಉದ್ರೇಕ, ಉಕ್ಕು ಇದ್ದೇ ಇದೆ. ಇದು ಆದಿಯ ಜನರಲ್ಲೂ ಅವರ ಹಿಂದಿನವರಲ್ಲೂ ಇದ್ದ ಗುಣ. ಅವರ ಕಲೆ, ಕೈಗಾರಿಕೆಗಳು, ಜೀವನ ಕ್ರಮಗಳು ಹೇಗಿದ್ದವೆಂದು ಊಹಿಸಲು ನಮಗೆ ದೊರೆತಿರುವ ಪಳೆಯುಳಿಕೆಗಳು ಆಧಾರಗಳನ್ನೊದಗಿಸುತ್ತವೆ. ಜೀವಂತ ಪಳೆಯುಳಿಕೆಗಳಾಗಿ ನಾಗರಿಕ ಪ್ರಪಂಚದಿಂದ ದೂರವಾಗಿ ಜೀವನ ನಡೆಸುತ್ತಿರುವ ಅನೇಕ ಆದಿ, ಆದಿಮಜನಪಂಗಡಗಳೂ ಸಾಕಷ್ಟು ಆಧಾರ ಒದಗಿಸುತ್ತವೆ. ಸದ್ಯಕ್ಕೆ ಇಷ್ಟು ಹೇಳಬಹುದು. ಹಲವಾರು ಲಕ್ಷ ವರ್ಷಗಳಷ್ಟು ಹಿಂದೆ ನಿರ್ಮಿತವಾದ ಕೃತಿಗಳು ಅನೇಕ ಪ್ರಕೃತಿನಿಯಮಗಳ ಪ್ರಭಾವದಿಂದ ಅಳಿದುಹೋಗಿರಬಹುದು. ನಮಗೆ ದೊರೆತಿರುವ ಅತ್ಯಂತ ಹಳೆಯ ಕಲೆ ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ಅಂದರೆ ಸುಮಾರು ಕ್ರಿ.ಪೂ. 60,000-10,000 ವರ್ಷಗಳ ಹಿಂದೆ ಯುರೋಪಿನ ಫ್ರಾನ್ಸ್, ಸ್ಪೇನ್ ಮತ್ತು ಅನಂತರದ ಕಾಲಕಾಲಕ್ಕೆ ನಿರ್ದೇಶಿಸಬಹುದಾದ ಉತ್ತರ ಆಫ್ರಿಕ ಪ್ರದೇಶಗಳಿಗೆ ಸೇರಿದ್ದು. ಕೆತ್ತನೆ, ಉಬ್ಬುಶಿಲ್ಪ, ಪ್ರತಿಮಾ ಶಿಲ್ಪ ಮತ್ತು ಬಹಳ ಉತ್ತಮ ದರ್ಜೆಯ ವರ್ಣಚಿತ್ರಗಳಿಂದ ಕೂಡಿದ್ದು ಆ ಕಲೆಯ ಹಲವಾರು ಅಂಶಗಳಲ್ಲಿ ಆಧುನಿಕ ಕಲೆಗಿಂತ ಉತ್ತಮವೆಂದು ಪರಿಗಣಿಸಲ್ಪಡದಿದ್ದರೂ ಕಡೆಯ ಪಕ್ಷ ಅದರ ಸರಿಸಮಾನವೆಂದು ಎಣಿಸಲ್ಪಟ್ಟಿದೆ. ಅರಿಗ್ನೇಷಿಯನ್, ಪೆರಿಗಾರ್ಡಿಯನ್ ಸಂಸ್ಕøತಿಗಳ ಕಾಲದಲ್ಲಿ ಮೂಳೆ, ದಂತ ಅಥವಾ ಕಲ್ಲುಚಕ್ಕೆಗಳ ಮೇಲೆ ಕೆತ್ತಲಾದ ಉಬ್ಬುಶಿಲ್ಪಗಳು, ಕಲ್ಲು ಅಥವಾ ಜೇಡಿಮಣ್ಣಿನ ಪ್ರತಿಮೆಗಳು ರೂಕ್ಷವಾಗಿದ್ದರೂ ಅಲಂಕಾರಪ್ರಧಾನವಾಗಿವೆ. ಮ್ಯಾಗ್ಡಲೀನಿಯನ್ ಸಂಸ್ಕøತಿಯ ಕಾಲದಲ್ಲಿ ಪರ್ವತ ಗುಹೆಗಳ ಚಾವಣಿ ಮತ್ತು ಗೋಡೆಗಳ ಮೇಲೆ ವಿವಿಧ ವರ್ಣಗಳಲ್ಲಿ ಚಿತ್ರಿತವಾಗಿರುವ ಪ್ರಾಣಿಗಳ, ಸಾಮೂಹಿಕ ನೃತ್ಯ, ಬೇಟೆ ಮುಂತಾದ ದೃಶ್ಯಗಳ ಕಲೆ ಬಹಳ ಉತ್ತಮ ಕೈಚಳಕದ ನಿದರ್ಶನಗಳಾಗಿದ್ದು ಅಲ್ಲಿ ಆದಿಮಾನವನ ಕಲಾ ಪ್ರೌಢಿಮೆ ಆಧುನಿಕ ಚಿತ್ರಕಾರರ ಮಟ್ಟವನ್ನೂ ಮೀರಿಸಿವೆಯೆಂದರೆ ತಪ್ಪಾಗಲಾರದು. ಉತ್ತರ ಆಫ್ರಿಕ ಮತ್ತು ಸ್ಪೇನಿನ ಸ್ವಲ್ಪ ಈಚಿನ ಕಲೆ ಇಷ್ಟು ಉನ್ನತಮಟ್ಟವನ್ನು ತಲುಪದಿದ್ದರೂ ಅನೇಕ ನೈಜ, ಸತ್ತ್ವಪೂರ್ಣ, ಜೀವಂತ ದೃಶ್ಯಗಳಲ್ಲಿ ಪ್ರಾಣಿಗಳ ವಿವಿಧ ಭಂಗಿಗಳನ್ನೂ ಮಾನವಜೀವನದ ವಿವಿಧ ಕಾರ್ಯಗಳನ್ನೂ ಅದರಲ್ಲೂ ಬೇಟೆಯ ದೃಶ್ಯಗಳನ್ನೂ ಅಮೋಘವಾಗಿ ರೂಪಿಸಿವೆ.

ಈಜಿಪ್ಟ್ ಅಕ್ಷರಸ್ಥ ನಾಗರಿಕತೆ

[ಬದಲಾಯಿಸಿ]

ಯೂರೋಪು ಏಷ್ಯದ ಅನೇಕ ಭಾಗಗಳು ಮತ್ತು ಈಜಿಪ್ಟ್ ಅಕ್ಷರಸ್ಥ ನಾಗರಿಕತೆಗಳನ್ನು ಬೆಳೆಸಿಕೊಂಡು ಪುರೋಗಾಮಿಪಥದಲ್ಲಿ ಮುನ್ನಡೆಯುತ್ತಿದ್ದಾಗ ಆಫ್ರಿಕದ ವಿವಿಧ ಪ್ರದೇಶಗಳು, ಅಮೆರಿಕದ ಭೂಭಾಗ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತು ಪಾಲಿನೇಷ್ಯ, ಮೆಲನೇಷ್ಯ ಮತ್ತು ಮೈಕ್ರೋನೇಷ್ಯಗಳೆಂದು ಕರೆಯಲ್ಪಡುವ ಸಮುದ್ರ ಮಧ್ಯ ಭೂಪ್ರದೇಶಗಳಲ್ಲಿ (ಓಷಿಯಾನಿಂiÀi) ಪ್ರಗತಿದೂರವಾದ ಅಥವಾ ಕ್ರಮೇಣ ಅವನತಿ ಮಾರ್ಗದ ಸಂಸ್ಕøತಿಗಳ ಹಿಡಿತಕ್ಕೆ ಮಾನವವರ್ಗ ಸಿಕ್ಕಿಬಿದ್ದಿದ್ದುದರಿಂದ ಆ ಸಮಾಜಗಳ ಕಲೆ ಕ್ಷೀಣಿಸುತ್ತಿದ್ದವು.

ಆಫ್ರಿಕದ ದೇಶೀಯ ಜನರ ಕಲೆಗಳು

[ಬದಲಾಯಿಸಿ]

ಆಫ್ರಿಕದ ದೇಶೀಯ ಜನರ ಕಲೆಗಳು ಅವರ ಮತೀಯ ಅಥವಾ ಸಾಮಾಜಿಕ ಕಲ್ಪನೆಗಳಿಂದ ಹುಟ್ಟಿ, ಶಿಲ್ಪ, ಸಂಗೀತ ಮತ್ತು ನೃತ್ಯ ರೂಪದಲ್ಲಿ ಪ್ರದರ್ಶಿಸಲ್ಪಟ್ಟಿವೆ. ಆಧುನಿಕ ಯೂರೋಪಿಯನ್ನರ ಸಂಪರ್ಕಕ್ಕೆ ಬಹಳ ಮೊದಲೇ ದಕ್ಷಿಣ ಮಧ್ಯ ಮತ್ತು ಪೂರ್ವ ಆಫ್ರಿಕದ ಜನ ವಿಪುಲವಾದ, ತಮ್ಮ ಸಂಸ್ಕøತಿಯ ಪ್ರತೀಕವಾಗಿದ್ದ ಸಾಂಪ್ರದಾಯಿಕ ಕಲೆಯನ್ನು ಸೃಷ್ಟಿಸಿದ್ದರು. ಬೇರೆ ಬೇರೆ ಬುಡಕಟ್ಟುಗಳಿಗೆ ಸೇರಿದ್ದರೂ ಆಚಾರ, ವ್ಯವಹಾರ ನಂಬಿಕೆ ಮತ್ತು ಸಾಮಾಜಿಕ ಆಚರಣೆಗಳಲ್ಲಿ ವ್ಯತ್ಯಾಸಗಳಿದ್ದರೂ ಅವರ ಕಲೆಯಲ್ಲಿ ಕೆಲವು ಮೂಲಭೂತ ಸಾಮ್ಯಗಳಿದ್ದು ಅಲ್ಲಿ ಒಂದು ರೀತಿಯ ಐಕ್ಯವನ್ನೂ ವೈಶಿಷ್ಟ್ಯವನ್ನೂ ಕಾಣಬಹುದು. ನೇಯ್ಗೆ, ಕಬ್ಬಿಣದ ಕೆಲಸ, ಬುಟ್ಟಿಗಳ ಹೆಣೆತ-ಮುಂತಾದ ಕೆಲಸಗಳಲ್ಲಿ ಕಲಾಭಿರುಚಿ ಕಂಡುಬಂದರೂ ಶಿಲ್ಪಕಲೆಯಲ್ಲಿ ಅವರ ವೈಶಿಷ್ಟ್ಯ ಎದ್ದು ಕಾಣುತ್ತದೆ. ಲೋಹಗಳ ಉಪಕರಣಗಳಿಂದ ವ್ಯಕ್ತಿಚಿತ್ರಗಳು, ಮುಖವಾಡಗಳು ಮತ್ತು ಮತಸಂಸ್ಕಾರಗಳಿಗೆ ಬೇಕಾದ ಶಿಲ್ಪಗಳನ್ನು ಮರ, ದಂತ ಅಥವಾ ಜೇಡಿಮಣ್ಣಿನಲ್ಲಿ ಅವರು ಕೆತ್ತಿದ್ದಾರೆ. ಉಬ್ಬುಶಿಲ್ಪ, ಪ್ರತಿಮೆಗಳು ಅಥವಾ ಮಣಿಗಳಿಂದ ಶೃಂಗರಿಸುತ್ತಿದ್ದರು. ಆಫ್ರಿಕದ ಶಿಲ್ಪಿ ದೀರ್ಘಕಾಲ ಗುರುವಿನ ಕೈಕೆಳಗೆ ಶಿಕ್ಷಣ ಪಡೆದು ತನ್ನ ಕಲಾಸಂಪ್ರದಾಯದಲ್ಲಿ ಕುಶಲಿಯೂ ನಿಷ್ಣಾತನೂ ಆಗಿರುತ್ತಿದ್ದ. ಸಂಪ್ರದಾಯಬದ್ಧನಾಗಿರಬೇಕಾಗಿದ್ದರೂ ತನ್ನ ಪ್ರೌಢಿಮೆಯನ್ನು ಪ್ರದರ್ಶಿಸುವ ಅವಕಾಶವಿದ್ದುದರಿಂದ ಕಲೆಯಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಮಾನವ ರೂಪವೇ ಮುಖ್ಯವಸ್ತುವಾಗಿದ್ದರೂ ಪ್ರಾಣಿ ಅಥವಾ ಮಿಶ್ರ ಜೀವಿಗಳನ್ನೂ ರೂಪಿಸಲಾಗಿದೆ. ಮತೀಯ, ವ್ಯಾವಹಾರಿಕ, ಸಾಮಾಜಿಕ ಮತ್ತು ರಾಜಕೀಯ ಸಂಬಂಧವಾದ ಆಚರಣೆಗಳಿಂದ ಉಪಯೋಗಿಸಲ್ಪಡುತ್ತಿದ್ದುದರಿಂದ ಈ ಶಿಲ್ಪಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಮೃತರ ಆತ್ಮಗಳು, ದೇವತೆಗಳು ಮತ್ತು ಅತಿಮಾನವ ಶಕ್ತಿಗಳು ಮಾನವ ಜೀವನದ ಮೇಲೆ ಪ್ರಭಾವ ಬೀರುವುವೆಂಬ ನಂಬಿಕೆ ಬಲವಾಗಿದ್ದು, ಆ ಶಕ್ತಿಗಳನ್ನು ಮಾನವ ರೂಪದಲ್ಲಿ ರೂಪಿಸುವುದಲ್ಲದೆ ಮತೀಯ ಅಥವಾ ಸಂಸ್ಕಾರಗಳ ಆಚರಣೆಯ ಸಂದರ್ಭಗಳಲ್ಲಿ ಆ ಶಕ್ತಿಗಳ ಇರುವಿಕೆಯನ್ನು ಮುಖವಾಡ ಅಥವಾ ಶಿಲ್ಪ ರೂಪದಲ್ಲಿ ತೋರಿಸಲಾಗುತ್ತಿತ್ತು. ಉನ್ನತವರ್ಗದ ವ್ಯಕ್ತಿಗಳ ಉಪಯೋಗಕ್ಕಾಗಿ ಅನೇಕ ಉಪಕರಣಗಳನ್ನು ಕೆತ್ತನೆ ಕೆಲಸದಿಂದ ಕೇವಲ ಸೌಂದರ್ಯೋಪಾಸನೆಯ ದೃಷ್ಟಿಯಿಂದಲೇ ಶೃಂಗರಿಸುತ್ತಿದ್ದುದೂ ಉಂಟು. ಆಫ್ರಿಕದ ವಿವಿಧ ಪ್ರದೇಶಗಳಲ್ಲಿ ಭಿನ್ನ ಶೈಲಿಗಳ ಶಿಲ್ಪಕಲೆ ಬೆಳೆದು ಬಂದರೂ ಅವುಗಳ ಹೊರಲಕ್ಷಣ, ಅಲಂಕಾರ ವಿಧಾನ, ತಾಂತ್ರಿಕತೆ ಮುಂತಾದ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದರೂ ನೈಜ ರೂಪಗಳನ್ನು ಚಿತ್ರಿಸುವುದಕ್ಕಿಂತ ಸಾಂಕೇತಿಕವಾಗಿ, ಆ ಸಂದರ್ಭ ಅಥವಾ ಅದರ ಹಿಂದಿರುವ ಶಕ್ತಿಗಳನ್ನು ರೂಪಿಸುವುದೇ ಆ ಕಲೆಯ ಗುರಿಯಾಗಿರುತ್ತಿತ್ತು. ಆದ್ದರಿಂದ ನೀಗ್ರೋ ಶಿಲ್ಪಗಳು ವ್ಯಕ್ತಿ ಅಥವಾ ಪ್ರಾಣಿಗಳನ್ನು ಹೋಲುವುದಕ್ಕಿಂತ ಪ್ರತಿಯೊಂದು ಶೈಲಿಯೂ ತನ್ನದೇ ಆದ ಸಾಂಸ್ಕøತಿಕ ಹಿನ್ನೆಲೆಯನ್ನೂ ಅದರ ಸತ್ವವನ್ನೂ ರೂಪಿಸುವ ಮಾಧ್ಯಮವಾಗಿದೆ.

ನೀಗ್ರೋಗಳ ಕೆತ್ತನೆ ಮತ್ತು ವರ್ಣಚಿತ್ರದ ಕೃತಿಗಳು

[ಬದಲಾಯಿಸಿ]

ದಕ್ಷಿಣ ಮತ್ತು ಮಧ್ಯ ಆಫ್ರಿಕದಲ್ಲಿ ಪುರಾತನವಾದ ನೀಗ್ರೋಗಳ ಕೆತ್ತನೆ ಮತ್ತು ವರ್ಣಚಿತ್ರದ ಕೃತಿಗಳು ಪರ್ವತ ಗುಹೆಯಲ್ಲಿ ಕಂಡುಬಂದಿವೆ. ಕ್ರಿ.ಶ. 19ನೆಯ ಶತಮಾನದಿಂದ ಕ್ರಿ. ಪೂ. ಸಾವಿರಾರು ವರ್ಷಗಳವರೆಗೂ ವ್ಯಾಪ್ತವಾಗಿರುವ ಬುಷ್‍ಮೆನ್ ಪಂಗಡದ ಜನರದೆಂದು ಹೇಳಲಾಗುವ ಈ ವರ್ಣಚಿತ್ರ ಕಲೆಯಲ್ಲಿ ಒಂಟಿ ಪ್ರಾಣಿಗಳ, ಸೂಚ್ಯ ಮನುಷ್ಯರೂಪದ ಚಿತ್ರಗಳೂ ಸಹಜವಾಗಿ ರೂಪಿತವಾಗಿವೆ. ಸಾಧಾರಣವಾಗಿ ಕಪ್ಪು ಅಥವಾ ಕೆಂಪುಗಳಿಂದಲೂ ಹಲವು ಬಾರಿ ಮನೋಹರವಾದ ವಿವಿಧ ಬಣ್ಣಗಳಿಂದಲೂ ಚಿತ್ರಿತವಾದ ಭಿನ್ನ ಕಾಲಗಳ ಚಿತ್ರಗಳು ಪದರ ಪದರಗಳಾಗಿ ಒಂದರ ಮೇಲೊಂದು ಚಿತ್ರಿಸಲ್ಪಟ್ಟಿವೆ. ಈ ಚಿತ್ರಕಲೆ ನೀಗ್ರೋ ಶಿಲ್ಪಕಲೆಯಿಂದ ಬೇರಾಗಿದ್ದು ಪ್ರಾಗೈತಿಹಾಸಿಕ ಯೂರೋಪಿನ ಚಿತ್ರಕಲೆಯೊಂದಿಗೆ ಸಾಮೀಪ್ಯ ಪಡೆದಿದೆ.

ಕೊಲಂಬಸ್‍ನ ಪ್ರವೇಶಪೂರ್ವದ ದೇಶೀಯ ಜನಾಂಗಗಳು

[ಬದಲಾಯಿಸಿ]

ಅಮೆರಿಕದಲ್ಲಿ ಕೊಲಂಬಸ್‍ನ ಪ್ರವೇಶಪೂರ್ವದ ದೇಶೀಯ ಜನಾಂಗಗಳು ವಿಪುಲವಾದ ಕಲಾಕೃತಿಗಳನ್ನು ನಿರ್ಮಿಸಿದ್ದುವು. ಉತ್ತರದ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಪ್ರಾಗೈತಿಹಾಸಿಕ ಬೇಟೆಗಾರರು ಮೂಳೆಗಳ ಮೇಲೆ ನಿರ್ಮಿಸಿದ್ದ ಕೆತ್ತನೆಗಳು ಮೆಕ್ಸಿಕೊ ಮತ್ತು ನೈರುತ್ಯ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರದೇಶಗಳಲ್ಲಿ ದೊರಕಿದ್ದು ಯುರೋಪಿನ ಶಿಲಾಯುಗದ ಅಂತ್ಯಕಾಲದ ಕೃತಿಗಳನ್ನು ಹೋಲುತ್ತದೆ. ಈ ರೀತಿಯ ಮೂಳೆ ಮತ್ತು ದಂತಗಳ ಕೆತ್ತನೆ ಕೆಲಸ ಈ ಜನರಲ್ಲಿ ಮುಂದುವರಿದು ಸುಮಾರು 2000 ವರ್ಷಗಳ ಹಿಂದಿನ ಬೇರಿಂಗ್ ಮತ್ತು ಚುಕ್ಕೀ ಸಮುದ್ರಪ್ರದೇಶಗಳ ಜನರಿಂದ ನಿರ್ಮಿತವಾದ ತಿರುವಿದ ದಂತದ ದಂಡಗಳ, ಸರಪಳಿಗಳ, ವಿಕೃತವಾದ, ಶವಸಂಸ್ಕಾರಕ್ಕೆ ಸಂಬಂಧಿಸಿದ ಮುಖವಾಡಗಳ ಮತ್ತು ಮಾನವನ ತಲೆಗಳ ಶಿಲ್ಪಗಳಲ್ಲಿ ತಲೆದೋರಿದೆ. ಇವು ಕ್ರಿ.ಶ. 19ನೆಯ ಶತಮಾನದ ಎಸ್ಕಿಮೊ ಶಿಲ್ಪಗಳನ್ನು ಹೋಲುತ್ತದೆ. ಉತ್ತರಭಾಗದ ಕಲಾಕೃತಿಗಳು ಸಣ್ಣವಾಗಿದ್ದು ಸಾಂಪ್ರದಾಯಿಕ ಶವಸಂಸ್ಕಾರಕ್ಕೆ ಸಂಬಂಧಿಸಿದ ಮತ್ತು ಅಲಂಕೃತ ಉಪಕರಣಗಳನ್ನೊಳಗೊಂಡಿರುತ್ತಿದ್ದವು. ಇತ್ತೀಚಿನ ಎಸ್ಕಿಮೊಗಳ ಕೆತ್ತನೆಗಳು ನೈಜವಾಗಿಯೂ ವಿವರಣಾತ್ಮಕವಾಗಿಯೂ ಹಾಸ್ಯಪೂರ್ಣವಾಗಿಯೂ ಇವೆ. ಸಾಂಕೇತಿಕ ಮುಖವಾಡಗಳು, ಗರಿಗಳ ಅಥವಾ ಮೂಳೆಯ ಆಭರಣಗಳು ಸರಳವಾಗಿದ್ದು ಭಾವರಹಿತವಾಗಿವೆ. ವಾಯುವ್ಯ ಪ್ರದೇಶಗಳಲ್ಲಿ ಪುರಾತನ ಕಲ್ಲಿನ ಶಿಲ್ಪಗಳು ದೊರಕಿವೆ. ಕ್ರಿ.ಶ. 18-19 ನೆಯ ಶತಮಾನಗಳಲ್ಲಿ ಮರದ ಶಿಲ್ಪಗಳೂ ಮುಖವಾಡಗಳೂ ಮನೆಗಳ ಕಂಬಗಳೂ ಪ್ರಾಣಿ ಮತ್ತು ಮಾನವ ಚಿತ್ರಗಳೂ ಬಹಳವಾಗಿ ನಿರ್ಮಿತವಾಗಿ, ದಂತ, ತಾಮ್ರ ಮತ್ತು ಬೆಲೆಬಾಳುವ ಕಲ್ಲುಗಳಿಂದ ಅಲಂಕರಿಸಲ್ಪಟ್ಟಿವೆ. ಆಭರಣಗಳು, ಉಡುಪುಗಳು ಮತ್ತು ಮತೀಯ ಆಚರಣೆಗಳಲ್ಲಿ ಉಪಯೋಗಿಸಲ್ಪಡುವ ವಸ್ತುಗಳನ್ನು ಈ ರೀತಿ ಶೃಂಗರಿಸಲಾಗಿದೆ. ಮಾನವಾಕೃತಿಯೂ ನೈಜವಾಗಿ, ಸತ್ತ್ವಪೂರ್ಣವಾಗಿ ರೂಪಿತವಾಗಿದೆ. ಸಾಂಕೇತಿಕ ಮತ್ತು ಮಿಶ್ರಜೀವಿಗಳೂ ಹೆಚ್ಚಾಗಿ ಚಿತ್ರಿತವಾಗಿವೆ. ಪಶ್ಚಿಮ ಪ್ರದೇಶಗಳಲ್ಲಿ ಆದಿಮಜನರ ಕಲಾಕೃತಿಗಳು ಉನ್ನತಮಟ್ಟದ ಶೈಲಿ ಮತ್ತು ತಾಂತ್ರಿಕತೆಯಿಂದ ಕೂಡಿದ್ದು ಬಹಳ ಸೂಕ್ಷ್ಮವೂ ವಿವಿಧ ಬಣ್ಣಗಳಿಂದ ಕೂಡಿದ್ದೂ ಆಗಿವೆ. ಈ ಸಂಪ್ರದಾಯಕ್ಕೆ ಸೇರಿದ ಕೊಳವೆ, ಪಾತ್ರೆ ಮತ್ತು ತಾಯಿತಗಳು ದೊರಕಿವೆ. ವಿವಿಧ ಬಣ್ಣಗಳ ನಾರು, ಬೇರುಗಳಿಂದ ಅಂದವಾದ ಬುಟ್ಟಿಗಳನ್ನು ಹೆಣೆಯುವುದರಲ್ಲಿ ಇವರು ಅದ್ವಿತೀಯರಾಗಿದ್ದರು. ಗರಿಗಳಿಂದ ಮಾಡಿದ ಅಧಿಕಾರ ದಂಡ, ಶಿರಸ್ತ್ರಾಣಗಳೂ ನಯಮಾಡಿದ ಕಲ್ಲಿನ, ಶಂಖದ ಮತ್ತು ಕೆತ್ತಿದ ಮೂಳೆಯ ಆಭರಣಗಳೂ ಈ ಕಲೆಯ ಉನ್ನತ ಕೃತಿಗಳಾಗಿವೆ. ಪೂರ್ವದ ಕಾಡುಪ್ರದೇಶಗಳ ಜನರು ಉತ್ತಮ ಶಿಲ್ಪಿಗಳಾಗಿದ್ದು ನೈಜ, ಸೂಕ್ಷ್ಮ, ಸಭ್ಯತಾಪೂರ್ಣವಾದ ಕೃತಿಗಳನ್ನು ನಿರ್ಮಿಸಿದ್ದಾರೆ. ಮಧ್ಯದ ಮತ್ತು ಉತ್ತರದ ಅಮೆರಿಕ ಮತ್ತು ಏಷ್ಯ ಪ್ರದೇಶಗಳ ಪ್ರಭಾವಗಳು ಈ ಕಲೆಯಲ್ಲಿ ಕಂಡುಬಂದರೂ ಅವುಗಳೆಲ್ಲವೂ ಸಮ್ಮಿಳಿತಗೊಂಡಿವೆ. ಕ್ರಿ.ಶ. ಮೊದಲನೆಯ ಶತಮಾನದ ಶವಸಂಸ್ಕಾರಗಳಿಗೆ ಸೀಮಿತವಾಗಿದ್ದ ಪಿರಮಿಡ್ಡುಗಳನ್ನು 800ರ ಅನಂತರ ದೇವಾಲಯಗಳ ಜಗತಿಗಳಾಗಿ ಉಪಯೋಗಿಸಲಾಯಿತು. ಮಣ್ಣಿನ, ಶಂಖದ ಮತ್ತು ತಾಮ್ರದ ವಸ್ತುಗಳನ್ನು ಹಾವು, ವಿಜಯ ಸ್ಮಾರಕ ತಲೆ, ಯೋಧ ಮತ್ತಿತರ ಮತೀಯ ಚಿತ್ರಗಳಿಂದ ಅಲಂಕರಿಸಲಾಗುತ್ತಿತ್ತು. ಯೂರೋಪಿಯರ ಪ್ರಭಾವ ಬಂದ ಅನಂತರ ಈ ಕಲೆ ಅವನತವಾಯಿತು. ಅಮೆರಿಕದ ವಿಶಾಲ ಮೈದಾನ ಭಾಗಗಳಲ್ಲಿದ್ದ ಅಲೆಮಾರಿ ಜನಾಂಗಗಳಲ್ಲಿ ವಿಭಿನ್ನ ಮತ್ತು ಸತ್ತ್ವಶಾಲಿಯಾದ ಉಡುಪುಗಳು ಮತ್ತಿತರ ಪದಾರ್ಥಗಳು, ಬಾಣಬತ್ತಳಿಕೆಗಳು, ವಿವಿಧ ರೀತಿಯ ಕಸೂತಿ ಮತ್ತು ಬಣ್ಣದ ಕೆಲಸಗಳಿಂದ ಶೃಂಗರಿಸಲ್ಪಡುತ್ತಿದ್ದುವು. ಗಂಡಸರಲ್ಲಿ ಭೂತಗಳ, ಮಾಂತ್ರಿಕರ ಪ್ರಭಾವ ಜಾಸ್ತಿಯಾಗಿದ್ದು ತತ್‍ಸಂಬಂಧವಾದ ಅಲಂಕೃತ ಗುರಾಣಿ, ವ್ರತನಿಯಮಗಳಿಗೆ ಸಂಬಂಧಿಸಿದ ಮತ್ತಿತರ ವಸ್ತುಗಳ ಮೇಲೆ ವರ್ಣರಂಜಿತ ಮಾಂತ್ರಿಕ ದೃಶ್ಯಗಳನ್ನು ಚಿತ್ರಿಸುತ್ತಿದ್ದರು. ಪಕ್ಷಿಗಳ ಗರಿ ಅಥವಾ ಮುಳ್ಳುಹಂದಿಗಳ ಮುಳ್ಳುಗಳಿಂದ ಅಲಂಕೃತವಾದ ಉಡುಪು ಮತ್ತು ಪಾತ್ರೆಗಳು ಕ್ರಮೇಣ ಮಣಿಗಳಿಂದ ಅಲಂಕೃತವಾದ ಯೂರೋಪಿಯನ್ನರ ಬಣ್ಣದ ಬಟ್ಟೆ ಮತ್ತು ಉಪಕರಣಗಳಿಗೆ ಎಡೆಮಾಡಿಕೊಟ್ಟವು.

ಆದಿವಾಸಿಗಳ ಸಂಸ್ಕøತಿ

[ಬದಲಾಯಿಸಿ]

ಮಧ್ಯ ಅಮೆರಿಕದಲ್ಲಿ ಆದಿವಾಸಿಗಳ ಸಂಸ್ಕøತಿ, ಕಲೆಗಳು ಬಹಳ ಉನ್ನತಮಟ್ಟದ್ದಾಗಿದ್ದುವು. ಅಭಿವೃದ್ಧಿ ಹೊಂದುತ್ತಿದ್ದ ನಗರಗಳೂ ಮತೀಯ ಕೇಂದ್ರಗಳೂ ಕಲೆಗಾರರಿಗೆ ಉತ್ತೇಜನ ನೀಡಿ ಮತೀಯ ಕಾರ್ಯಗಳನ್ನೂ ನಿಯೋಜಿಸುತ್ತಿದ್ದುವು. ಮಧ್ಯ ಅಮೆರಿಕದ ಎಲ್ಲ ಭಾಗಗಳಲ್ಲೂ ಪರಸ್ಪರ; ಪ್ರಭಾವಿತ ಕಲಾಶೈಲಿಗಳಿದ್ದರೂ, ಪ್ರಾದೇಶಿಕ ವೈಶಿಷ್ಟ್ಯಗಳೂ ಕಂಡುಬರುತ್ತದೆ. ಮೆಕ್ಸಿಕೊ ಭೂಶಿರ ಮತ್ತು ಕೆರೆಬಿಯನ್ ತೀರಪ್ರದೇಶಗಳಲ್ಲಿ ಆಜ್ಟೆಕ್, ಮಾಂiÀi ಮತ್ತು ವೆರಾಕ್ರುeóï ಜನಸಾಂಕೇತಿಕತೆ, ಸೂಕ್ಷ್ಮತೆ ಮತ್ತು ನೈಜತೆಗಳಿಂದ ಕೂಡಿದ್ದ ವೈಭವಪೂರ್ಣ ಮತ್ತು ವಿಸ್ತøತವಾದ ಕಲೆಯನ್ನು ಸೃಷ್ಟಿಸಿದ್ದರು. ಅಲಂಕೃತ ಪಿರಮಿಡ್ಡುಗಳು, ದೇವಾಲಯಗಳು ಮತ್ತು ಅರಮನೆಗಳು ಸುಂದರಶಿಲ್ಪ ಮತ್ತು ವರ್ಣಚಿತ್ರಗಳಿಂದ ಕೂಡಿದ್ದು ದೇವತೆ ಮತ್ತು ಮತೀಯ ನಾಯಕರ ಸ್ಮಾರಕಗಳಾಗಿದ್ದವು. ಬೆಲೆಬಾಳುವ ಕಲ್ಲು, ಮೂಳೆ ಮತ್ತು ಶಂಖಗಳನ್ನು ಕೊರೆದು ದೇವಾಲಯಗಳಿಗೆ ಮುಡಿಪು ಮತ್ತು ಆಭರಣಗಳನ್ನೂ ಮಾಡಿದ್ದರು. ನಯವಾದ ಬಟ್ಟೆ ಅಥವಾ ಕಾಡುಗರಿ ಪುಕ್ಕಗಳ ಉಡುಪುಗಳನ್ನೂ ಮತೀಯ ಸಮಾರಂಭಗಳಲ್ಲಿ ಉಪಯೋಗಿಸುತ್ತಿದ್ದರು. ಮಡಕೆ ಕುಡಿಕೆಗಳ ಮೇಲೆ, ಸಂಕೀರ್ಣ ಪ್ರಾಣಿಗಳ ಚಿತ್ರಗಳನ್ನೂ ಮತೀಯ ದೃಶ್ಯಗಳನ್ನೂ ಸಾಂಕೇತಿಕ ಪ್ರಾಣಿರೂಪದ ಕಾಲು, ಕೈಪಿಡಿಗಳುಳ್ಳ ಪಾತ್ರೆಗಳನ್ನೂ ಸಣ್ಣ ಮತ್ತು ದೊಡ್ಡ ಮಣ್ಣಿನ ಗೊಂಬೆಗಳನ್ನೂ ಹೇರಳವಾಗಿ ನಿರ್ಮಿಸುತ್ತಿದ್ದರು. ಮಧ್ಯ ಅಮೆರಿಕದ ನಡುವಣ ಮೈದಾನಪ್ರದೇಶಗಳಲ್ಲಿ ವಿಭಿನ್ನವಾದ ಶೈಲಿಯೊಂದು ಬೆಳೆದುಬಂದಿತು. ಓಯಕ್ಸಕ ಮತ್ತು ತಿಯೋಟಿ ಹುವಕನ್‍ಗಳಲ್ಲಿ ಬೃಹತ್ತಾದ ಪಿರಮಿಡ್ಡುಗಳೂ ದೇವಾಲಯಗಳೂ ಕಟ್ಟಲ್ಪಟ್ಟು ಬಿಗಿಯಾದ ಶೈಲಿಯ ದೊಡ್ಡ ಪ್ರತಿಮೆ ಮತ್ತು ವರ್ಣಚಿತ್ರಗಳಿಂದ ಅಲಂಕೃತವಾಗಿದ್ದವು. ಹೊಳೆಯುವ ಬಣ್ಣಗಳು ಆ ಕಟ್ಟಡಗಳ ಭವ್ಯತೆಯನ್ನು ಹೆಚ್ಚಿಸುತ್ತಿದ್ದವು. ತಿಯೋಟಿ ಹುವಕನ್‍ನಲ್ಲಿ ಮುಖವಾಡಗಳೂ ಪ್ರತಿಮೆಗಳೂ ಓಯಕ್ಸಕದಲ್ಲಿ ಜೇಡಿಮಣ್ಣಿನ ಗೊಂಬೆ ದೇವಾಕಾರದ ಶವಕುಂಭಗಳೂ ವೈಶಿಷ್ಟ್ಯಪೂರ್ಣವಾಗಿದ್ದವು. 10ನೆಯ ಶತಮಾನದ ಅನಂತರ ವಿಸ್ತಾರ ರಾಜ್ಯಗಳ ಸ್ಥಾಪನೆಯಾಗಿ ಟಾಲ್ಟೆಕ್, ಮಿಕ್ಸ್‍ಟೆಕ್ ಮತ್ತು ಆಜ್ಟೆಕ್ ಪ್ರಭಾವಗಳು ಹಬ್ಬಿದುವು. ಟಾಲ್ಟೆಕ್ ಸಂಸ್ಕøತಿಯಲ್ಲಿ ಯೋಧ ಸರ್ಪಾಕಾರದ ಸ್ತಂಭಗಳು ಚಿರತೆ ಮತ್ತು ಹದ್ದುಗಳ ಭಯಂಕರ ಉಬ್ಬುಶಿಲ್ಪಗಳೂ ವಿಶಿಷ್ಟವಾದರೆ ಮಿಕ್ಸ್‍ಟೆಕ್ ಕಲೆಯಲ್ಲಿ ಶ್ರೀಮಂತ ವರ್ಗಕ್ಕೆ ಪ್ರಾಧಾನ್ಯವಿದ್ದು ಅವರ ಉಪಯೋಗಕ್ಕಾಗಿ ಚಿನ್ನ, ಬೆಳ್ಳಿ ಮತ್ತು ತಾಮ್ರಗಳಿಂದ ಅದ್ಭುತವಾದ ಆಭರಣಗಳು ಬೆಲೆಬಾಳುವ ಕಲ್ಲು ಮತ್ತು ಮರದ ವಸ್ತು ಆಯುಧಗಳೂ ನಿರ್ಮಿತವಾದವು. ಆಜ್ಟೆಕ್ ಕಲೆಯಲ್ಲಿ ಭಯಂಕರ ಸರ್ಪ, ದೈತ್ಯ ಅಥವಾ ಮೃತರ ರೂಪದ ದೇವತೆಗಳಿಗೂ ಚಿನ್ನದ, ವಜ್ರದ, ಮರದ ಕೆತ್ತನೆಗಳಿಗೂ, ವರ್ಣ ಬತಹಗಳಿಗೂ ಪ್ರಾಮುಖ್ಯವಿತ್ತು.[]

ಕಲೆಯ ಅವಶೇಷಗಳು

[ಬದಲಾಯಿಸಿ]

ಇದೇ ಉನ್ನತಮಟ್ಟವನ್ನು ತೋರುವ ಕಲೆಯ ಅವಶೇಷಗಳು ಪನಾಮ. ಈಕ್ವಡಾರ್ ಮತ್ತು ಕೊಲಂಬಿಯ ಪ್ರದೇಶಗಳಲ್ಲಿ ಕಂಡುಬಂದರೂ ಅದರಲ್ಲಿ ಮಧ್ಯ ಅಥವಾ ದಕ್ಷಿಣ ಅಮೆರಿಕದ ಪ್ರಭಾವ ಅಧಿಕವಾಗಿದೆ. ಕೆರಿಬಿಯನ್ ದ್ವೀಪಗಳಲ್ಲಿ ಕ್ರಿ. ಶ. ಮೊದಲ ಶತಮಾನದ ಟೈನೊ ಸಂಸ್ಕøತಿಯ ಕಲೆ ಗಮನಾರ್ಹವಾದುದು. ಈ ಜನರ ಪುರಾತನ ನೃತ್ಯವೇದಿಕೆಗಳೂ ಮತೀಯಜಗತಿಗಳೂ ಮಧ್ಯ ಅಮೆರಿಕದ ಪ್ರಭಾವವನ್ನೂ, ಮಡಕೆ ಕುಡಿಕೆಗಳ ಮೇಲಿನ ಚಿತ್ರಕಲೆ ಕೆತ್ತನೆಗಳು ದಕ್ಷಿಣ ಅಮೆರಿಕದ ಪ್ರಭಾವವನ್ನೂ ತೋರುತ್ತದೆ. ಆದರೆ ಕಲ್ಲು ಕೆತ್ತನೆಯ ಕೃತಿಗಳು ವೈಶಿಷ್ಟ್ಯಪೂರ್ಣ ಪ್ರತ್ಯೇಕತೆಯನ್ನು ತೋರುತ್ತದೆ. ಬೃಹದಾಕಾರದ ನಯಗೊಳಿಸಿದ ಮುಖವಾಡಗಳನ್ನು ಧರಿಸಿ ನಗುತ್ತಿರುವ ಮಾನವ ತಲೆಗಳಾಕಾರದ ಈ ಶಿಲ್ಪಗಳು ಜನರ ಶಕ್ತಿ ಸಾಮಥ್ರ್ಯಗಳ ಮೂಲವೆಂದು ನಂಬಲಾಗಿತ್ತು.[]

ಅಮೆರಿಕ ಕಲೆ

[ಬದಲಾಯಿಸಿ]

ಮಧ್ಯ ಆಂಡೀಸ್ ಪರ್ವತದ ನೆರಳಿನಲ್ಲಿ ಪೆರು ಮತ್ತು ಬೊಲಿವಿಯ ಪ್ರದೇಶಗಳಲ್ಲಿ ಮಧ್ಯ ಅಮೆರಿಕ ಕಲೆಯಷ್ಟೇ ಉನ್ನತವಾದ ಕಲೆ ಕ್ರಿ.ಪೂ. ಮೊದಲನೆಯ ಶತಮಾನದಿಂದ ಬೆಳೆದುಬಂದಿತು. ಆ ಕಾಲದ ಚಾವಿನ್ ಕಲೆಯಲ್ಲಿ ರೆಕ್ಕೆಗಳಿದ್ದ ಬೆಕ್ಕಿನ ಜಾತಿಯ ದೇವತೆಯ ಚಿತ್ರಗಳು ಮಣ್ಣಿನ ಪಾತ್ರೆಗಳ ಮೇಲೂ ಶಿಲ್ಪರೂಪದಲ್ಲೂ ಆಭರಣಗಳ ರೂಪದಲ್ಲೂ ಪ್ರಾಮುಖ್ಯವಾಗಿವೆ. ಮೋಚಿಕ ಸಂಸ್ಕøತಿಯಲ್ಲಿ ಮಹೋನ್ನತವಾದ ಮತೀಯ ಸಂಬಂಧವಾದ ಪಾತ್ರೆಗಳ ಮೇಲಿನ ಅಲಂಕಾರಿಕ ಚಿತ್ರಗಳು ಜನಜೀವನರೀತಿಗಳನ್ನು ನಿರೂಪಿಸುತ್ತವೆ. ಚಿನ್ನದ ಆಭರಣಗಳು, ತಾಮ್ರ, ಬೆಳ್ಳಿ ಮತ್ತು ಮರದ ಕೆತ್ತನೆಗಳೂ ಮೋಚಿಕ ಕಲೆಯ ಉತ್ತಮ ಪ್ರತೀಕಗಳಾಗಿವೆ. ಶ್ರೀಮಂತವರ್ಗ, ದೇವಾಲಯ ಮತ್ತು ಅರಮನೆಗಳ ಉಪಯೋಗಕ್ಕೆ ಮೀಸಲಾಗಿದ್ದ ಈ ಕಲೆಯಲ್ಲಿ ಅತ್ಯುತ್ತಮವಾದ ದೇವತೆ ಮತ್ತು ಮತೀಯ ನಾಯಕರ ಭಿತ್ತಿಚಿತ್ರಗಳು ಅಸಾಧಾರಣಕೃತಿಗಳಾಗಿವೆ. ದಕ್ಷಿಣ ತೀರದ ಪರಾಕ ಮತ್ತು ನಾಜû್ಕ ಕಲೆಯಲ್ಲಿ ಉತ್ತಮವಾಗಿ ಚಿತ್ರಿತವಾದ ಮಣ್ಣಿನ ಪಾತ್ರೆಗಳ ಉಡುಗೆ ತೊಡುಗೆಗಳೂ ಗಮನಾರ್ಹವಾಗಿವೆ. ಚಿನ್ನ, ಮರ ಮತ್ತು ಗರಿಗಳಿಂದ ಮಾಡಿದ ವಸ್ತುಗಳನ್ನು ಸಮಾಧಿಗಳಲ್ಲಿ ಕಾಣಿಕೆಗಳಾಗಿ ಅರ್ಪಿಸುತ್ತಿದ್ದರು. ಬೊಲಿವಿಯದ ಪ್ರಸ್ಥಭೂಮಿ ಪ್ರದೇಶದಲ್ಲಿರುವ ಥಿಯಹುವನಕೊದ ವಿಶಾಲ ದೇವಾಲಯ, ಅರಮನೆಯ ಅಂಗಣಗಳಲ್ಲೂ ಮಹಾದ್ವಾರಗಳಮೇಲೂ ಮಹತ್ತರವಾದ ಶಿಲ್ಪಗಳೂ ನಿರ್ಮಿತವಾಗಿದ್ದು ಮಧ್ಯ ಆಂಡೀಸ್ ಪ್ರದೇಶದಲ್ಲೆಲ್ಲ ಪ್ರಭಾವ ಬೀರಿದೆ. ಚಿಮು ಸಂಸ್ಕøತಿಯಲ್ಲಿ ಪುನರುಜ್ಜೀವಿತವಾದ ಮೋಚಿಕ ಕಲೆಯ ಮಣ್ಣಿನ ಪಾತ್ರೆ ಮತ್ತು ಚಿನ್ನದ ಕೆತ್ತನೆ ಕೆಲಸಗಳು ಉತ್ತಮ ಕೃತಿಗಳಾಗಿವೆ.

ಅಮೆರಿಕದ ಆದಿಮಜನರ ಸಂಸ್ಕøತಿ ಕಲೆ

[ಬದಲಾಯಿಸಿ]

ಅಮೆರಿಕದ ಆದಿಮಜನರ ಸಂಸ್ಕøತಿ ಕಲೆಗಳಲ್ಲಿ ಇಂಕಾಜನರ ಸಂಸ್ಕøತಿ ಕೊನೆಯದು ಮತ್ತು ಉನ್ನತವಾದುದೆಂದರೆ ತಪ್ಪಾಗಲಾರದು. ಉಪಯೋಗಪ್ರಧಾನ ಶೈಲಿಯಿಂದ ಕೂಡಿದ್ದರೂ ಕಲಾಪ್ರೌಢಿಮೆ ಪಡೆದಿದ್ದ ವಾಸ್ತುಶಿಲ್ಪ, ಮಣ್ಣಿನ ಪಾತ್ರೆಗಳ ನಿರ್ಮಾಣ ಮತ್ತು ಉಡುಗೆ ತೊಡುಗೆಗಳು ಈ ಸಂಸ್ಕøತಿಯ ವಿಶಿಷ್ಟಕೊಡುಗೆಗಳಾಗಿವೆ. ದಕ್ಷಿಣ ಆಂಡೀಸ್ ಪರ್ವತ ಪ್ರದೇಶಗಳಲ್ಲಿ ಸಾಮಾನ್ಯ ಮಟ್ಟದ ಕಲೆ ಕಂಡುಬಂದರೂ, ಅವರ ಸಮಾಧಿಗಳಲ್ಲಿ ನಿಕ್ಷಿಪ್ತವಾಗಿದ್ದ ವಸ್ತುಗಳು ಜೇಡಿಮಣ್ಣಿನ ಕೊಳವೆಗಳು, ಮೂಳೆಯ ಕೊಳಲುಗಳು, ಬಟ್ಟೆಗಳು, ಉಡುಪುಗಳು ಮತ್ತು ಮಣ್ಣಿನ ಪಾತ್ರೆಗಳು ಕಲಾಪೂರ್ಣವಾಗಿವೆ. ಇತರ ದೇಶಗಳ ಪ್ರಭಾವ ಹೆಚ್ಚಾಗಿದ್ದರೂ ಇಲ್ಲಿನ ಮನುಷ್ಯಾಕಾರದ ವರ್ಣಚಿತ್ರಿತ ಶವಕುಂಭಗಳೂ ತಾಮ್ರ ಮತ್ತು ಕಂಚಿನ ಉಬ್ಬು ಶಿಲ್ಪಗಳ ಫಲಕಗಳೂ ಗಮನಾರ್ಹವಾದುವು.ಸಮುದ್ರಮಧ್ಯ ಭೂಪ್ರದೇಶಗಳ ಕಲೆಗಳಲ್ಲಿ ಮತೀಯ ಅಥವಾ ಸಾಮಾಜಿಕ ಗುರಿ ಪ್ರಧಾನವಾಗಿದ್ದು ಸೌಂದರ್ಯೋಪಾಸನೆಗೆ ಅವಕಾಶವಿಲ್ಲವಾಗಿದೆ. ಮಾಂತ್ರಿಕ, ಮತೀಯ ಭಾವನೆಗಳು ಆಸ್ಟ್ರೇಲಿಯ, ಮೆಲನೇಷ್ಯಗಳ ಕಲೆಯಲ್ಲಿ ಪ್ರಭಾವಾಗಿದ್ದು ಪಾಲಿನೇಷ್ಯ, ಮೈಕ್ರೋನೇಷ್ಯ ಪ್ರದೇಶದಲ್ಲಿ ಸಾಮಾಜಿಕ ಉದ್ದೇಶಗಳು ಮೇಲುಗೈ ಪಡೆದಿವೆ. 19ನೆಯ ಶತಮಾನದಲ್ಲಿ ಯೂರೋಪಿಯರ ಸಂಪರ್ಕದಿಂದ ಲೋಹಗಳ ಉಪಕರಣಗಳು ದೊರಕುವವರೆಗೂ ಶಿಲಾಯುಗ ಸಂಸ್ಕøತಿ ಹಂತದಲ್ಲಿದ್ದ ಇವರ ಕಲಾ ಪ್ರೌಢಿಮೆ ಅಭಿನಂದನೀಯವಾಗಿದೆ. ಆಫ್ರಿಕದ ನೀಗ್ರೊಗಳು ಶಿಲ್ಪಗಳಲ್ಲಿ ಸಾಂಪ್ರದಾಯಿಕ ಅಂಶಗಳಿಗೆ ಗಮನ ಕೊಟ್ಟರೆ ಇಲ್ಲಿಯ ಕಲೆಗಾರರು ಅಲಂಕಾರ ಭಾಗಕ್ಕೆ ಪ್ರಾಧಾನ್ಯ ಕೊಟ್ಟಿದ್ದಾರೆ. ಈ ಕಲಾ ಸಂಪ್ರದಾಯದಲ್ಲಿ ಉದ್ವೇಗಪೂರ್ಣ ಭಾವನಾಮಯವಾದ ಬಾಹ್ಯರೂಪವಾದ ಚಿತ್ರ ದೃಶ್ಯದ ಪರಿಣಾಮವನ್ನು ಹೆಚ್ಚಿಸುತ್ತದೆ.

ಆಸ್ಟ್ರೇಲಿಯದ ಆದಿಮಜನರ ಕಲೆ

[ಬದಲಾಯಿಸಿ]

ಆಸ್ಟ್ರೇಲಿಯದ ಆದಿಮಜನರ ಕಲೆ ಪುರಾತನ, ಕಾಲ್ಪನಿಕ ಸ್ವಪ್ನಲೋಕದ ಸರ್ವಶಕ್ತವಾದ ದೈವಗಳಿಗೆ ನಿರ್ದೇಶಿತವಾಗಿದೆ. ಕೆಲವು ಬಂಡೆಗಳ ಮೇಲಿನ ವರ್ಣಚಿತ್ರ ಮತ್ತು ರೇಖಾಚಿತ್ರಗಳು ಸಾಮಾಜಿಕವಾಗಿದ್ದರೂ ಮುಖ್ಯ ಕಲಾಕೃತಿಗಳೆಲ್ಲವೂ ಪವಿತ್ರ ಮತೀಯ ವಸ್ತುಗಳನ್ನೇ ರೂಪಿಸುತ್ತದೆ. ವರ್ಣಚಿತ್ರಗಳ ಶೈಲಿಗಳು ಭಿನ್ನವಾಗಿದ್ದು, ಸಣ್ಣ ಜೀವಂತ ಕೃತಿಗಳಿಂದ ಆರಂಭಿಸಿ ಮಹತ್ತರವಾದ ಅತಿಮಾನವರೂಪಗಳ ಚಿತ್ರಣದವರೆಗೂ ವ್ಯಾಪ್ತವಾಗಿವೆ. ಪರ್ವತಗುಹೆಗಳೊಳಗಿನ ಕಲ್ಲುಬಂಡೆಗಳ ಮೇಲಿರುವ ಈ ಕೃತಿಗಳನ್ನು ಉತ್ತರ ಆಫ್ರಿಕ, ಸ್ಪೇನ್‍ಗಳ ಗುಹಾಂತರ್ಗತ ಪ್ರಾಗೈತಿಹಾಸಿಕ ಕಲೆಗೆ ಹೋಲಿಸಲಾಗಿದೆ. ಕ್ಷ-ಕಿರಣ ಶೈಲಿಯಲ್ಲಿ ದೇಹದ ಒಳಭಾಗದ ಅಂಗಗಳನ್ನು ಸೂಚ್ಯವಾಗಿ ಬಾಹ್ಯಗೋಚರವಾಗುವಂತೆ ತೋರಿಸಿರುವುದು ಈ ಕಲೆಯ ವೈಶಿಷ್ಟ್ಯಗಳಲ್ಲೊಂದು. ಸಮುದ್ರ ಮಧ್ಯಭೂಭಾಗಗಳ ಇತರ ಪ್ರದೇಶಗಳಲ್ಲಿರುವ ವರ್ಣಚಿತ್ರ ತಂತ್ರ ಮತ್ತು ಮಾಧ್ಯಮಗಳು ಆಸ್ಟ್ರೇಲಿಯದಲ್ಲಿ ಬಳಕೆಯಲ್ಲಿದ್ದರೂ ಅವುಗಳಲ್ಲಿ ಹಲವಾರು ಪ್ರಾದೇಶಿಕ ವೈಪರೀತ್ಯಗಳು ಇದ್ದುವು. ಮರ, ಜೇಡಿಮಣ್ಣು ಮತ್ತು ಮೇಣದ ಕಂಡರಿಸಿದ ಗೊಂಬೆಗಳು ವಿರಳವಾದರೂ ಕೆತ್ತಿದ ಮತ್ತು ಬಣ್ಣ ಹಾಕಿದ ಸ್ಮಾರಕ ಸ್ತಂಭಗಳು ಗುಂಪುಗುಂಪಾಗಿ ಮೇಲ್ವಿಲ್ ದ್ವೀಪದ ಶ್ಮಶಾನಭೂಮಿಯಲ್ಲಿ ಕಂಡುಬರುತ್ತವೆ. ಮರದಕಾಂಡ ಮತ್ತು ಭೂಮಿಯ ಮೇಲ್ಭಾಗದಲ್ಲಿ ಕೊರೆಯಲಾದ ಸಾಂಕೇತಿಕ ಪ್ರಾಣಿಸಂಬಂಧಸೂಚಕ ನಕ್ಷೆಗಳು (ಟೋಟೆಮಿಕ್ ಡಿಸೈನ್ಸ್) ಅವರ ಆಯುಧಗಳ ಮೇಲಣ ಕೆತ್ತನೆಗಳ ಮಾದರಿಯಲ್ಲಿದ್ದ ಏಕಕೇಂದ್ರವೃತ್ತ, ಸುರುಳಿಯಾಕಾರ, ಕುಣಿಕೆ ಅಥವಾ ಡೊಂಕಾದ ಗೆರೆಗಳ ರೂಪವನ್ನು ಹೊಂದಿವೆ.

ಮೆಲನೇಷ್ಯದ ಕಲೆ

[ಬದಲಾಯಿಸಿ]

ನ್ಯೂಗಿನಿಯಲ್ಲಿ ಕೇಂದ್ರೀಕೃತವಾಗಿರುವ ಮೆಲನೇಷ್ಯದ ಕಲೆ ಅವರ ವ್ರತನಿಯಮಗಳ ಅಂಗವಾಗಿ ಬೆಳೆದ ಸಾಂಪ್ರದಾಯಿಕ ಜೀವನದೊಂದಿಗೆ ನಿಕಟಸಂಪರ್ಕ ಹೊಂದಿದೆ. ಅಲ್ಲಿನ ಅನೇಕ ಕಲಾ ಶೈಲಿಗಳಲ್ಲಿ ಸೆಪಿಕ್ ನದೀತೀರದ ಕಲೆ ಪ್ರಮುಖವಾಗಿದ್ದು ವೈವಿಧ್ಯ ಮತ್ತು ವಿಪುಲತೆಯಿಂದ ಕೂಡಿದೆ. ಈ ಕಲೆಯಲ್ಲಿ ಪೂರ್ವಿಕರ ಗೊಂಬೆಗಳು, ಮತೀಯವಾದ ಕೊಳಲುಗಳು, ಮರದ ಕೆತ್ತನೆಯ ಕಾಲುಮಣೆಗಳು, ಗುರಾಣಿಗಳು, ಢಮರುಗಗಳು ಮುಂತಾದ ವಸ್ತುಗಳನ್ನು ವೈವಿಧ್ಯಪೂರ್ಣವಾಗಿಯೂ ಮನೋಹರವಾಗಿಯೂ ನಿರ್ಮಿಸಲಾಗಿದೆ. ಶಿಲ್ಪಗಳಲ್ಲಿ, ಚೂಪು ಆಕಾರದ ತಲೆ, ಪ್ರಮುಖವಾದ ಮೂಗು ಮತ್ತು ಲಂಬಿತದೇಹ-ಈ ಲಕ್ಷಣಗಳು ಗಮನಾರ್ಹವಾಗಿವೆ. ಬಣ್ಣ ಹಾಕಿರುವುದಕ್ಕೂ ಮುಖದ ರೂಪುರೇಖೆಗಳಿಗೂ ಹೊಂದಿಕೆಯಿಲ್ಲದಿರುವುದರಿಂದ, ಕೆತ್ತನೆ ಮತ್ತು ಚಿತ್ರಕಾರ್ಯಗಳ ನಡುವೆ ಒಂದು ಬಿರುಸು ಕಂಡುಬರುತ್ತದೆ. ಇಂಥ ಚಿತ್ರಗಳನ್ನು ಮುಟ್ಟುವುದರಿಂದ ನಾಯಕರಿಗೆ ವಾಚಾಳತನ ಬರುವುದೆಂಬ ನಂಬಿಕೆ ಇತ್ತು. ಸ್ಮಾರಕಫಲಕಗಳು ಮತ್ತು ಮರದ ಮುಖವಾಡಗಳು ಈ ಶೈಲಿಯ ಕಲಾಕೃತಿಗಳಲ್ಲಿ ಮುಖ್ಯವಾದುವು. ನ್ಯೂ ಐರ್ಲೆಂಡಿನಲ್ಲಿನ ಕಲೆ ಮೆಲನೇಷ್ಯದ ಕಲೆಗಳಲ್ಲಿ ಶ್ರೇಷ್ಠವಾದದ್ದು. ಮೃತರ ಸ್ಮಾರಕಾರ್ಥವಾಗಿ ನಡೆಸುವ ಮಲಗನ್ ಹಬ್ಬಕ್ಕೋಸ್ಕರ ಸಿದ್ಧಗೊಳಿಸುವ ಕೆತ್ತನೆಗಳು ಬಹಳ ವ್ಯಾಪ್ತವಾದುವು. ಅದಕ್ಕೋಸ್ಕರ ನಿರ್ಮಿತವಾದ ಆವರಣದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಅನೇಕ ಶಿಲ್ಪಿಗಳು ಕೆಲಸ ಮಾಡಿ ಸ್ಮಾರಕಫಲಕಗಳು, ಶಿಲೆಗಳಿಂದ ಕೂಡಿದ ಮುಖವಾಡಗಳು ಮತ್ತು ಎತ್ತರವಾದ ಸ್ಮಾರಕ ಸ್ತಂಭಗಳನ್ನು ಕಡೆಯುತ್ತಿದ್ದರು. ಅನಂತರ ಈ ಕೃತಿಗಳನ್ನೆಲ್ಲ ಪ್ರದರ್ಶಿಸುತ್ತಿದ್ದರು. ಈ ಶಿಲ್ಪಗಳ ಮೇಲೆ ಕಂಡುಬರುವ ಹಂದಿ, ಮೊಸಳೆ, ಪಕ್ಷಿಗಳು ಮತೀಯ ಸಂಕೇತಗಳಾಗಿದ್ದುವು. ಈ ಕೆತ್ತನೆ ಮತ್ತು ಮುಖವಾಡಗಳಿಗೆ ಬಣ್ಣಗಳನ್ನು ಹಾಕುತ್ತಿದ್ದುದಲ್ಲದೆ ಕಣ್ಣುಗಳನ್ನು ಕಪ್ಪೆಚಿಪ್ಪುಗಳಿಂದ ತೋರಿಸುತ್ತಿದ್ದರು. ನ್ಯೂಬ್ರಿಟನ್ ದ್ವೀಪದಲ್ಲಿ ವಿಶಿಷ್ಟವಾದ ಮುಖವಾಡಗಳನ್ನೂ ನ್ಯೂಕೆಲೆಡೋನಿಯದಲ್ಲಿ ದ್ವಾರಸ್ತಂಭ ಮತ್ತು ಸಮುದ್ರಶಕ್ತಿಗಳ ಮುಖವಾಡಗಳನ್ನೂ ಸಾಲಮನ್ ದ್ವೀಪಗಳಲ್ಲಿ ಶಂಖಗಳಿಂದ ಅಲಂಕೃತವಾದ ಗೊಂಬೆಗಳು ಮತ್ತು ದೋಣಿಗಳಿಗೆ ಜೋಡಿಸಿದ ಗೊಂಬೆಗಳ ತಲೆಗಳನ್ನೂ ವಿಶಿಷ್ಟವಾದ ಕಲಾಕೃತಿಗಳೆಂದು ಪರಿಗಣಿಸಬಹುದು.

ಪಾಲಿನೇಷ್ಯದ ದ್ವೀಪ

[ಬದಲಾಯಿಸಿ]

ಪಾಲಿನೇಷ್ಯದ ದ್ವೀಪಗಳಲ್ಲಿ ಜ್ಯಾಮಿತಿಕ ನಕಾಶೆಗಳನ್ನು ಕೆತ್ತುವ ಕಲೆ ರೂಢಿಯಲ್ಲಿತ್ತು. ಈ ನಕಾಶೆಗಳನ್ನು ಕೊಡಲಿ ಮತ್ತು ದೋಣಿಯ ಹುಟ್ಟುಗಳ ಮೇಲೆ ಕೆತ್ತಿರುತ್ತಿದ್ದರು. ಕೆಲವು ಸಲ ಅವರ 'ತಪಾ ಉಡುಗೆಗಳ ಮೇಲೂ ಬಿಡಿಸುತ್ತಿದ್ದರು. ಕುಕ್ ಮತ್ತು ಆಸ್ಟ್ರಲ್ ದ್ವೀಪಗಳಲ್ಲಿ ಕೊಡಲಿ, ಹುಟ್ಟು ಮತ್ತು ಭರ್ಜಿಗಳು ಉಪಯೋಗಿಸಲಾಗದಷ್ಟು ದೊಡ್ಡದಾಗಿದ್ದು ಈ ನಕಾಶೆಗಳಿಂದ ಅಲಂಕರಿಸಲ್ಪಟ್ಟಿರುತ್ತಿದ್ದುವು. ಬಹಳ ಅಂದವಾಗಿಯೂ ತುಲನಾತ್ಮಕವಾಗಿಯೂ ರೇಖಾಚಿತ್ರಗಳಿಂದ ಅಲಂಕೃತವಾದ ಈ ವಸ್ತುಗಳು ಉತ್ತಮ ಕಲಾಕೃತಿಗಳೆಂದು ಪರಿಗಣಿಸಲ್ಪಟ್ಟಿವೆ. ಮಧ್ಯ ಪಾಲಿನೇಷ್ಯದಲ್ಲಿ ಶಿಲ್ಪಗಳು ನಿರ್ಮಿತವಾದರೂ ಮೆಲನೇಷ್ಯ ಪ್ರದೇಶಗಳಲ್ಲಿರುವಂತೆ ಹೇರಳವಾಗಿರಲಿಲ್ಲ. ಕುಕ್ ದ್ವೀಪನಿವಾಸಿಗಳು ದೇವತೆಗಳನ್ನು ಈ ರೀತಿ ಕಡೆಯುತ್ತಿದ್ದರು. ಮಾಕ್ರ್ವಿಸ್ ದ್ವೀಪದ ಕಲೆ ಪ್ರಗತಿದಾಯಕವಾಗಿದ್ದು, ಹೆಚ್ಚಾಗಿ ಒಂದು ಸಾಂಕೇತಿಕವಾದ ಮಾನವತಲೆಯ ಚಿತ್ರವನ್ನು ತಲೆಪಟ್ಟಿ, ಮೂಳೆಯ ಕಿವಿಯುಂಗುರ, ನೇತಾಡುವ ಹಾರ ಮತ್ತು ದಂಡೆಗಳ ಮೇಲೆ ಮೂಡಿಸಿರುತ್ತಿದ್ದರು. ಮರ ಮತ್ತು ಕಲ್ಲಿನ ಸಣ್ಣ ಮತ್ತು ದೊಡ್ಡ ಪ್ರತಿಮೆಗಳನ್ನು ಮಾಡಿದರೂ ಒಂದೇ ರೀತಿಯ ಅಲಂಕಾರಶೈಲಿಯನ್ನು ಅನುಸರಿಸುತ್ತಿದ್ದುದರಿಂದ, ಏಕರೂಪತೆ ಮತ್ತು ಹೊಸ ವಿಧಾನಗಳಿಲ್ಲದಿರುವುದು ಈ ಕಲೆಯ ಮುಖ್ಯ ಲಕ್ಷಣಗಳಾಗಿವೆ. ನ್ಯೂಜಿûಲೆಂಡಿನ ಮಾವೊರಿಜನರ ಕಲೆ ವಿಸ್ತ್ರತವಾಗಿದ್ದು ಅವರ ದೋಣಿಗಳು, ಸಾಮೂಹಿಕ ಗೃಹಗಳು, ಭಾಷಣದಂಡ (ಆರೇಟರ್ ಸ್ಟ್ಯಾಫ್), ಮಕ್ಕಳ ಪುಕ್ಕಗಳ ಪೆಟ್ಟಿಗೆ ಮತ್ತು ಯುದ್ಧದಂಡಗಳು ಬಹಳ ಅಂದವಾಗಿ ಶೃಂಗರಿಸಲ್ಪಟ್ಟಿರುತ್ತಿದ್ದವು. ಹೆಯಿಟಿಕಿ ಎಂಬ ಹೆಸರಿನ ಯಂತ್ರ ಮತ್ತು ಯುದ್ಧದಂಡಗಳನ್ನು ಮರ ಅಥವಾ ಪಚ್ಚಶಿಲೆಯಲ್ಲಿ (ಜೇಡ್) ಕೆತ್ತುತ್ತಿದ್ದರು. ಮಾವೊರಿನಕಲೆ ಸಾಮಾಜಿಕವಾಗಿದ್ದು ಅಲ್ಲಿ ಮತೀಯ ಪ್ರಭಾವಗಳು ಕಂಡುಬರುವುದಿಲ್ಲ. ಅವರ 80' ದೊಡ್ಡದಾದ ದೋಣಿಗಳನ್ನು ಚಿತ್ರಾಲಂಕಾರಗಳಿಂದಲೂ ದೊಡ್ಡ ಫಲಕಗಳಿಂದಲೂ ಶೃಂಗರಿಸುತ್ತಿದ್ದರು. ಈ ಕಲೆಯಲ್ಲಿ ಹೂವಿನ ಮತ್ತು ಸುರುಳಿಯಾಕಾರದ ಕೆತ್ತನೆಗಳು ಬಹಳ ಪರಿಣಾಮಕಾರಿಯಾಗಿ ಉಪಯೋಗಿಸಲ್ಪಟ್ಟಿವೆ. ಪಕ್ಕದ ಈಸ್ಟರ್ ದ್ವೀಪಗಳಲ್ಲಿ ಒಳ್ಳೆಯ ಮರದ ಅಭಾವವಿದ್ದುದರಿಂದ ಕಲ್ಲಿನಲ್ಲಿ ಪೂರ್ವಿಕರ ಶಿಲ್ಪಗಳನ್ನು ಕಡೆಯುತ್ತಿದ್ದರು. ಬೃಹದಾಕಾರದ ಈ ಶಿಲ್ಪಗಳನ್ನು ಅಗ್ನಿಪರ್ವತಗಳ ಇಳಿಜಾರಿನಲ್ಲಿ ಸ್ಥಾಪಿಸಿರುತ್ತಿದ್ದರು; ಪ್ರವಾಹದಲ್ಲಿ ಕೊಚ್ಚಿಬಂದ ಮರದಲ್ಲಿ ಸಣ್ಣ ಪ್ರತಿಮೆಗಳನ್ನೂ ಹೃದಯಾಭರಣಗಳನ್ನೂ ಇನ್ನಿತರ ಸಣ್ಣ ವಸ್ತುಗಳನ್ನೂ ಬಹಳ ಸೂಕ್ಷ್ಮವಾಗಿ ಕೆತ್ತುತ್ತಿದ್ದರು. ಹವಾಯ್ ದ್ವೀಪದಲ್ಲಿ ಯುದ್ಧದೇವತೆ 'ಕುನ ಪೂಜೆ ಮುಖ್ಯವಾದ ಮತೀಯ ಆಚರಣೆಯಾಗಿತ್ತು. ದೇವಾಲಯಗಳ ಸುತ್ತ ಆರಡಿಗಳಷ್ಟು ಎತ್ತರದ ಆವರಣವಿದ್ದು ನಾಯಕ ಮತ್ತು ಅರ್ಚಕರು ಮಾತ್ರ ಪ್ರವೇಶಿಸಿ ಯುದ್ಧಾಭಿಮಾನಿ ದೇವತೆಯ ಭಯಂಕರ ಪ್ರತಿಮೆಯನ್ನು ನೋಡಬಹುದಾಗಿತ್ತು. ಪುಕ್ಕಗಳ ಉಡುಗೆ, ಪುಕ್ಕಗಳ ಉಡುಪುಳ್ಳ ಜೊಂಡಿನ ಗೊಂಬೆ ಮತ್ತು ಚಿತ್ರಿತ ಬೋಗುಣಿಗಳನ್ನೂ ಈ ಜನ ನಿರ್ಮಿಸುತ್ತಿದ್ದರು.

ಮೆಲನೇಷ್ಯದ ಕಲೆ

[ಬದಲಾಯಿಸಿ]

ಮೆಲನೇಷ್ಯದ ಕಲೆ ಸರಳವಾಗಿದ್ದು, ಕಲಾವಸ್ತುಗಳ ಅಭಾವದಿಂದ ಹಿಂದುಳಿದಿತ್ತು. ಆಭರಣ ತಟ್ಟೆಗಳು, ಕರುಮಾಡಿನ ಮುಖವಾಡಗಳು ಮತ್ತು ಕೊಂಚಮಟ್ಟಿಗೆ ಗೊಂಬೆಗಳು ಇವರ ಮುಖ್ಯ ಕಲಾಕೃತಿಗಳಾಗಿದ್ದವು. ಇವರ ಕಲಾಕೃತಿಗಳೆಲ್ಲ ಉಪಯುಕ್ತವಾಗಿದ್ದುವು. ಮಾರ್ಷಲ್‍ದ್ವೀಪನಿವಾಸಿಗಳ ಮರದಲ್ಲಿ ಕೆತ್ತಿದ ಭೂಪಟಗಳು, ಕೆರೊಲಿನ್ ದ್ವೀಪವಾಸಿಗಳ ಷಾರ್ಕ್ ಮೀನಿನ ಹಲ್ಲುಗಳಿಂದ ಕೂಡಿದ್ದ ಉತ್ತಮ ದರ್ಜೆಯ ಖಡ್ಗಗಳು, ಮ್ಯಾಟಿದ್ವೀಪವಾಸಿಗಳ ಮರದ ತಟ್ಟೆಗಳು ಈ ಕಲೆಗಾರರ ಕುಶಲತೆಗೆ ಸಾಕ್ಷಿಯಾಗಿವೆ. ಹೊರಗಿನವರಿಗೆ ರೂಕ್ಷ ಅಥವಾ ಅನಾಗರಿಕವಾಗಿ ಕಂಡರೂ, ಆದಿಮಜನರ ಕಲೆ ಉತ್ತಮ ಅಭಿರುಚಿ, ಪ್ರೌಢಿಮೆ ಮತ್ತು ತಾಂತ್ರಿಕತೆಗಳನ್ನೊಳಗೊಂಡಿದ್ದು ಆ ಜನರ ಉನ್ನತಸಾಧನೆಯ ಪ್ರತೀಕಗಳಾಗಿವೆ.

ಉಲ್ಲೇಖಗಳು

[ಬದಲಾಯಿಸಿ]