ಆದಾಯ, ಸಾರ್ವಜನಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾರ್ವಜನಿಕ ಆದಾಯ ಇದು ಸಾರ್ವಜನಿಕ ವರಮಾನ, ಸಲಿಕೆ, ಲಾಭ ಮುಂತಾದ ಮೂಲಗಳಿಂದ ಸರ್ಕಾರ ಪಡೆಯುವ ಹಣ. (ಪಬ್ಲಿಕ್ ರೆವಿನ್ಯೂ). ರಾಜಸ್ವ ಎಂದೂ ಹೇಳಬಹುದು. ಇಂಥ ಆದಾಯ ಎಲ್ಲ ದೇಶಗಳಲ್ಲೂ ವಸೂಲಾಗುತ್ತಿದೆ. ಇದೇ ರೂಢಿಯಲ್ಲಿ ಸಾರ್ವಜನಿಕ ಆದಾಯ. ಇಂಥ ಆದಾಯದ ಉತ್ಪತ್ತಿಮೂಲ ಎಲ್ಲ ರಾಷ್ಟ್ರಗಳಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಕೆಲವು ರಾಷ್ಟ್ರಗಳಲ್ಲಿ ಸಾರ್ವಜನಿಕ ಅಥವಾ ಭೂ ಸ್ವತ್ತಿನಿಂದ ಹೆಚ್ಚು ಆದಾಯ ಬರುವುದು. [೧]

ದೇಶಾವಾರು ಲೆಕ್ಕ[ಬದಲಾಯಿಸಿ]

ಉದಾಹರಣೆಗೆ, ರಷ್ಯದೇಶದಲ್ಲಿ ಅನಿಲ ಮತ್ತು ಪೆಟ್ರೋಲ್ ಉತ್ಪನ್ನಗಳಿಂದ ಆದಾಯದ ಹೆಚ್ಚು ಭಾಗ ಕೂಡಿಸಲಾಗುತ್ತಿದೆ. ಇನ್ನೂ ಕೆಲವು ರಾಜ್ಯಗಳ ಆದಾಯ ರೈಲು, ಅಂಚೆ, ತಂತಿ ಇಲಾಖೆಗಳಿಂದ ಬರುತ್ತದೆ. ಹೆಚ್ಚು ಆರ್ಥಿಕ ಪ್ರಗತಿ ಪಡೆದಿರುವ ದೇಶಗಳಲ್ಲಿ, ಆದಾಯವನ್ನು ಬಹುತೇಕ ತೆರಿಗೆಯ ಮೂಲದಿಂದ ಪಡೆಯಲಾಗುತ್ತಿದೆ. ಭಾರತದಲ್ಲಿ ಸೇವಾವಲಯದಿಂದ ಹೆಚ್ಚು ಆದಾಯವನ್ನು ಸರ್ಕಾರ ಗಳಿಸುತ್ತಿದೆ.

ಆದಾಯದ ಬಗೆಗಳು[ಬದಲಾಯಿಸಿ]

ಸರ್ಕಾರದ ಆದಾಯದಲ್ಲಿ ತೆರಿಗೆ, ಶುಲ್ಕ, ವ್ಯಾವಸಾಯಿಕ ಆದಾಯ ಎಂದು ಮೂರು ಬಗೆ ಇವೆ. ಇವಲ್ಲದೆ, ನೈಸರ್ಗಿಕ ಸಂಪತ್ತಿನಿಂದ, ಸಾಮಂತರ ಕಾಣಿಕೆಯಿಂದ, ಯುದ್ಧದಲ್ಲಿ ಸೋತವರು ಕೊಡುವ ದಂಡ ಮತ್ತು ಪರಿಹಾರಧನದಿಂದ, ಯುದ್ಧಕ್ಕಾಗಿ ಎತ್ತುವ ಚಂದಾಹಣದಿಂದ, ಸರ್ಕಾರ ನಿತ್ಯವ್ಯವಹಾರದಲ್ಲಿ ವಿಧಿಸುವ ದಂಡದಿಂದ ಸರ್ಕಾರದ ಬೊಕ್ಕಸ ತುಂಬುತ್ತದೆ. ಇವೆಲ್ಲ ಸಾರ್ವಜನಿಕ ಆದಾಯ. ಹೀಗೆ ವಸೂಲಾಗುವ ಆದಾಯದಲ್ಲಿ ಸ್ಥಳೀಯ ಸಂಸ್ಥೆಗಳ ಆದಾಯವೂ ಸೇರುವುದು. ಸ್ಥಳೀಯ ಸಂಸ್ಥೆಗಳು ತೆರಿಗೆ ವಿಧಿಸುವುದರಲ್ಲಿ ಪೂರ್ಣ ಸ್ವಾತಂತ್ರ್ಯ ಹೊಂದಿಲ್ಲ. ಅವುಗಳ ಅಧಿಕಾರ ಒಂದು ಪರಿಮಿತಿಗೊಳಪಟ್ಟಿದೆ. ಅನೇಕ ವೇಳೆ ಸ್ಥಳೀಯ ಸಂಸ್ಥೆಗಳು ಸರ್ಕಾರದ ಬೊಕ್ಕಸದಿಂದ ಸಹಾಯದ್ರವ್ಯ ಪಡೆಯುವುವು.[೨]

ಶಾಸನ[ಬದಲಾಯಿಸಿ]

ಸಾರ್ವಜನಿಕ ಆದಾಯವನ್ನು ಕೂಡಿಸುವುದರಲ್ಲಿ ಬಲಾತ್ಕಾರದ ಅಂಶವಿದೆ. ವಿರೋಧಿಸುವವರನ್ನು ಶಾಸನರೀತ್ಯ ಶಿಕ್ಷಿಸುವ ಅವಕಾಶವಿದೆ. ಪ್ರಜಾಸಮುದಾಯದಲ್ಲಿ ಎಲ್ಲ ವರ್ಗಗಳಿಗೂ ನ್ಯಾಯ ದೊರೆಯಬೇಕೆಂಬ ಸೂತ್ರದ ಮೇಲೆ ಆದಾಯ ವಸೂಲಾಗಬೇಕು. ಹೀಗೆ ಆದಾಯವನ್ನು ವಸೂಲು ಮಾಡಿ ನಿರ್ವಹಿಸುವವರು ಸಾರ್ವಜನಿಕ ಹಣದ ಅಪವ್ಯಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಖಾಸಗಿ ವ್ಯಕ್ತಿಯ ದುವ್ರ್ಯಯದ ಪರಿಣಾಮ ಅವನ ಮತ್ತು ಅವನ ಪರಿವಾರದ ಅಥವಾ ಉದ್ಯಮದ ಮೇಲೆ ಮಾತ್ರ ಕರಿನೆರಳು ಹಾಯಿಸುವುದು. ಆದರೆ ಸಾರ್ವಜನಿಕ ಹಣದ ದುರುಪಯೋಗ ಇಡೀ ಜನಾಂಗಕ್ಕೆ ಕೇಡನ್ನು ಉಂಟುಮಾಡುವುದು. ಅಪವ್ಯಯ, ಅಜಾಗರೂಕತೆಗಳನ್ನು ಮನ್ನಿಸಲು ಸಾಕಷ್ಟು ನಿಧಿ ಸಂಗ್ರಹವಾಗದಿರುವ ದೇಶಗಳಲ್ಲಿ ಸರ್ಕಾರ ಎಚ್ಚರಿಕೆಯಿಂದಿರಬೇಕಾದುದು ಅಗತ್ಯ.[೩]

ತೆರಿಗೆ[ಬದಲಾಯಿಸಿ]

ಆದಾಯದ ಬಹುಭಾಗ ತೆರಿಗೆಯ ಮೂಲದಿಂದ ವಸೂಲಾಗುವ ಕಡೆ, ತೆರಿಗೆಯಲ್ಲಿ ಸಮಾನತೆ ಇರಬೇಕು. ಅದನ್ನು ಕೊಡುವ ಸಾಮಥ್ರ್ಯ ಆಯಾ ವರ್ಗದ ವ್ಯಕ್ತಿಗಳಲ್ಲಿ ಇರಬೇಕು. ಸಾಮಾನ್ಯವಾಗಿ ಪ್ರಜೆಗಳು ತಾವು ಗಳಿಸುವ ಹಣದ ಮೊತ್ತಕ್ಕನುಗುಣವಾಗಿ ಒಂದು ಭಾಗವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಕೊಡಬೇಕೆಂದು ಅರ್ಥಶಾಸ್ತ್ರದ ಪಿತಾಮಹ ಆಡಂ ಸ್ಮಿತ್ ತಿಳಿಸಿದ್ದಾನೆ. ತೆರಿಗೆಯಲ್ಲಿ ಸಾಕಷ್ಟು ನಿಶ್ಚಿತತೆ ಇರಬೇಕು. ತೆರಿಗೆ ಎಷ್ಟು ಕೊಡಬೇಕು, ಯಾವಾಗ ಕೊಡಬೇಕು, ಯಾವ ರೂಪದಲ್ಲಿ ಕೊಡಬೇಕು, ಯಾವ ವಿಭಾಗಕ್ಕೆ ಕೊಡಬೇಕು - ಎಂಬುದನ್ನು ಪ್ರಜೆಗಳಿಗೆ ಸ್ಪಷ್ಟಪಡಿಸಬೇಕು. ಪಾವತಿ ಮಾಡುವ ವಿಧಾನ ಸುಲಭವಾಗಿರಬೇಕು. ವಸೂಲು ಮಾಡುವ ಸಮಯ ಪ್ರಜೆಗಳಿಗೆ ಅನುಕೂಲವಾಗಿರಬೇಕು. ವಸೂಲು ಮಾಡುವ ವೆಚ್ಚ ಮಿತವಾಗಿರಬೇಕು. ಇಂಥ ಮಿತವ್ಯಯಕ್ಕೆ ಇಂಗ್ಲೆಂಡ್ ಆದರ್ಶವಾಗಿದೆ. ಒಂದು ಸಾವಿರ ಪೌಂಡುವರಮಾನ ತೆರಿಗೆ ವಸೂಲು ಮಾಡುವುದಕ್ಕೆ ಅಲ್ಲಿ ಕೇವಲ ಒಂದೂವರೆ ಪೌಂಡು ವೆಚ್ಚವಾಗುತ್ತದೆ. ತೆರಿಗೆದಾರರು ಪ್ರಯಾಸದಿಂದ ತೆರಿಗೆ ಕೊಡುವವರಾದುದರಿಂದ ಭಾರತದಂಥ ದೇಶಗಳಲ್ಲಿ ವಸೂಲಿ ವೆಚ್ಚದಲ್ಲಿ ಎಷ್ಟು ಕಡಿಮೆಯಾದರೆ ಅಷ್ಟೂ ಒಳ್ಳೆಯದು. ನ್ಯಾಯಾಲಯಕ್ಕೆ ಪ್ರಜೆಗಳು ನ್ಯಾಯತೀರ್ಮಾನಕ್ಕೆ ಹೋಗುವಾಗ, ಶಾಲೆಗಳಲ್ಲಿ ಶಿಕ್ಷಣ ಪಡೆಯುವಾಗ, ಕಚೇರಿಯಲ್ಲಿ ಪತ್ರ ರಿಜಿಸ್ಟರ್ ಮಾಡಿಸುವಾಗ, ಪ್ರಜೆಗಳು ಕೊಡುವ ಹಣವೇ ಶುಲ್ಕ (ಫೀಸು). ತೆರಿಗೆಗೂ ಶುಲ್ಕಕ್ಕೂ ವ್ಯತ್ಯಾಸವಿದೆ. ಪ್ರತ್ಯಕ್ಷ ಲಾಭವಿರಲಿ, ಇಲ್ಲದೇ ಹೋಗಲಿ, ವಿಧಿಸಿದ ತೆರಿಗೆ ತೆರಲೇಬೇಕು. ಫೀಸಿನ ವಿಷಯ ಹಾಗಲ್ಲ. ನಮಗೆ ಬೇಕಾದಾಗ ಮಾತ್ರ ಕೊಡಬಹುದು. ರೈಲ್ವೆ, ಅಂಚೆ ಇಲಾಖೆ, ನೀರಾವರಿ, ವಿದ್ಯುಚ್ಛಕ್ತಿ, ಇತರ ಇಲಾಖೆ ಮತ್ತು ಯೋಜನೆಗಳು ಸರ್ಕಾರಕ್ಕೆ ಪಾವತಿ ಮಾಡುವ ಸಂಭಾವನೆಗೆ ವ್ಯಾವಸಾಯಿಕ ಆದಾಯ ಎಂದು ಹೆಸರು. ನಗರಸಭೆ, ಜಿಲ್ಲಾಬೋರ್ಡ್, ರೈತರು - ಮುಂತಾದವರಿಗೆ ಕೊಟ್ಟ ಸಾಲದ ಬಡ್ಡಿ, ಸೈನ್ಯದ ಇಲಾಖೆಯಿಂದ ಬರುವ ಹಣ, ಸರ್ಕಾರಿ ವರದಿ ಮತ್ತು ಸ್ಟೇಷನರಿ ಮಾರಾಟದಿಂದ ಬರುವ ಹಣ - ಇವೆಲ್ಲಾ ಆದಾಯದ ಭಾಗಗಳಾಗಿವೆ.[೪]

ಬಾಬ್ತುಗಳು[ಬದಲಾಯಿಸಿ]

ಸಾರ್ವಜನಿಕ ಆದಾಯದ ಬಾಬುಗಳನ್ನು ಕೆಳಗೆ ಕಂಡಂತೆ ವಿಭಾಗಿಸಬಹುದು ಪ್ರತ್ಯಕ್ಷ ತೆರಿಗೆ - ವರಮಾನ ತೆರಿಗೆ, ತೀರುವೆಯ ಶುಲ್ಕ, ಪರೋಕ್ಷ ತೆರಿಗೆ - ಆಮದು ರಫ್ತು ಸುಂಕ, ಅಬ್ಕಾರಿ, ಮನೋರಂಜನೆ ತೆರಿಗೆ, ವ್ಯಾಪಾರ ತೆರಿಗೆ, ಸ್ಟಾಂಪು ರಿಜಿಸ್ಟ್ರೇಷನ್, ಪೊಲೀಸು, ನ್ಯಾಯ, ಶಿಕ್ಷಣ, ಆರೋಗ್ಯ ಮತ್ತು ಚಿಕಿತ್ಸೆ ಇತ್ಯಾದಿಗಳ ಮೇಲಿನ ಶುಲ್ಕ; ವ್ಯಾವಸಾಯಿಕ ಆದಾಯ - ಟಂಕಸಾಲೆ, ರೈಲ್ವೆ, ಕಾಡು, ನೀರಾವರಿ, ವಿದ್ಯುಚ್ಛಕ್ತಿ, ರಾಷ್ಟ್ರೀಕರಣ ಉದ್ಯಮಗಳು.[೫]

ಪರೋಕ್ಷ ಮತ್ತು ಪ್ರತ್ಯಕ್ಷ ಆದಾಯ[ಬದಲಾಯಿಸಿ]

ಮನೆಯ ತೆರಿಗೆ ಪ್ರತ್ಯಕ್ಷ ತೆರಿಗೆಯಾದರೆ ಮೇಲಿನದು ಪರೋಕ್ಷ. ಸಾಮಾನ್ಯವಾಗಿ ಸಕ್ಕರೆ, ಪೆಟ್ರೋಲು, ಸೀಮೆ ಎಣ್ಣೆ, ಬಟ್ಟೆ - ಮುಂತಾದ ಅನುಭೋಗ ಸಾಮಗ್ರಿಗಳ ಮೇಲೂ ಮನೋರಂಜನೆ ಇತ್ಯಾದಿ ವ್ಯವಹಾರಗಳ ಮೇಲೂ ವಿಧಿಸಲಾಗುವ ತೆರಿಗೆಗೆ ಪರೋಕ್ಷ ತೆರಿಗೆ ಎಂದು ಹೇಳುವುದು ವಾಡಿಕೆ. ಜನಸಂಖ್ಯೆಯ ಒತ್ತಡ ಮತ್ತು ಬಡತನ ಅಧಿಕವಾಗಿರುವ ದೇಶಗಳಲ್ಲಿ ಪರೋಕ್ಷ ತೆರಿಗೆ ಒಳ್ಳೆಯದು. ಆರ್ಥಿಕ ಪ್ರಗತಿ ಸಾಧಿಸಿರುವ ದೇಶಗಳಲ್ಲಿ ಪ್ರತ್ಯಕ್ಷ ತೆರಿಗೆಗಳು ಹೆಚ್ಚು ಪ್ರಕಾಶಮಾನಕ್ಕೆ ಬರುವುವು. ವರಮಾನ ತೆರಿಗೆಯ ಆಡಳಿತದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ತೆರಿಗೆ ಕಳ್ಳರು, ವಂಚಕರು ಅಲ್ಲಿ ಹೆಚ್ಚು. ಕೃಷಿಯಿಂದ ಬರುವ ವರಮಾನವನ್ನು ತೆರಿಗೆಯ ವ್ಯಾಪ್ತಿಯಿಂದ ಹೊರಗಿಡುವುದು ಒಂದು ದೊಡ್ಡ ದೋಷ. ರಾಷ್ಟ್ರದ ಆರ್ಥಿಕಾಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಬಂಡವಾಳವನ್ನು ಸರ್ಕಾರ ಪ್ರತ್ಯಕ್ಷ ತೆರಿಗೆಗಳಿಂದ ಕೂಡಿಸಬೇಕೇ ವಿನಾ ಪರೋಕ್ಷ ತೆರಿಗೆಗಳ ಜಾಲವನ್ನು ಹರಡಬಾರದು ಎಂದು ಅರ್ಥಶಾಸ್ತ್ರಕಾರರು ಅಭಿಪ್ರಾಯಪಡುತ್ತಾರೆ. [೬]


ಉಲ್ಲೇಖಗಳು[ಬದಲಾಯಿಸಿ]

  1. http://www.accountingnotes.net/financial-management/public-revenue/public-revenue-meaning-and-classification/10022
  2. https://www.knowledgiate.com/different-sources-of-public-revenue/
  3. http://www.yourarticlelibrary.com/finance/public-revenue-meaning-tax-revenue-non-tax-revenue-with-classification-of-public-revenue/26277
  4. https://www.sciencedirect.com/topics/social-sciences/public-revenue
  5. https://sa-tied.wider.unu.edu/article/public-revenue-mobilization-and-inequality
  6. https://www.scribd.com/document/127135653/PUBLIC-REVENUE-pdf