ಆಡಮ್ ಲಿಂಡ್‍ಸೇ ಗೋರ್ಡನ್

ವಿಕಿಪೀಡಿಯ ಇಂದ
Jump to navigation Jump to search
Adam Lindsay Gordon
ಜನ್ಮನಾಮ(1833-10-19)19 ಅಕ್ಟೋಬರ್ 1833ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
ಫಾಯಲ್, ಅಝೋರ್ಸ್
ಮರಣ24 June 1870(1870-06-24) (aged 36)
Melbourne, Victoria, Australia
ವೃತ್ತಿಕವಿ, ಲಾವಣಿ ಕವಿ, ರಾಜಕಾರಣಿ
Adam Lindsay Gordon – Melbourne monument, which carries the verse:
Life is mainly froth and bubble
Two things stand like stone —
Kindness in another’s trouble.
Courage in your own.

ಆಡಮ್ ಲಿಂಡ್‍ಸೇ ಗೋರ್ಡನ್(1833-70). ಆಸ್ಟ್ರೇಲಿಯನ್ ಕವಿ.

ಬದುಕು[ಬದಲಾಯಿಸಿ]

ಹುಟ್ಟಿನಿಂದ ಇಂಗ್ಲಿಷಿನವ. ವಿದ್ಯಾಭ್ಯಾಸವಾದುದೂ ಇಂಗ್ಲೆಂಡಿನಲ್ಲಿಯೇ. ನಿರ್ಲಕ್ಷ್ಯದ, ಬೇಜವಾಬ್ದಾರಿಯ ಯುವಕನೆಂಬ ಕಾರಣದಿಂದ ಆಸ್ಟ್ರೇಲಿಯಕ್ಕೆ ಕಳುಹಿಸಲ್ಪಟ್ಟು ಅಲ್ಲಿಯೇ ನೆಲೆಸಿದ. ಅಲ್ಲಿ ಕುದುರೆ ಸವಾರಿಯ ಪೋಲಿಸು ದಳದವನಾಗಿ ಕೆಲಸ ಮಾಡಲಾರಂಭಿಸಿದ. ಹಳ್ಳಿಗಾಡು ಕುದುರೆಜೂಜಿನಲ್ಲಿ ಸವಾರನಾಗಿ (ಸ್ಟೀಪಲ್ಚೇಸ್ ರೈಡರ್) ಕೆಲವು ವರ್ಷ ದುಡಿದ ಈತ ಅತ್ಯುತ್ತಮ ಸವಾರನೆಂದು ದಕ್ಷಿಣ ಆಸ್ಟ್ರೇಲಿಯದಲ್ಲೆಲ್ಲ ಖ್ಯಾತಿ ಪಡೆದ. ಇಪ್ಪತ್ತನಾಲ್ಕನೆಯ ವರ್ಷದಲ್ಲಿ ಅತ್ಯಲಂಕಾರಶೈಲಿಯಲ್ಲಿ ಭಾವಗೀತೆಗಳನ್ನು ಬರೆಯತೊಡಗಿದ. ಇಪ್ಪತ್ತೆಂಟನೆಯ ವರ್ಷದಲ್ಲಿ ತಾಯಿಯ ಆಸ್ತಿಗೆ ಉತ್ತರಾಧಿಕಾರಿಯಾಗಿ ಬಾಡಿಗೆ ಕುದುರೆಗಳ ಲಾಯವೊಂದನ್ನು ತೆರೆದ. ಮುವತ್ತನಾಲ್ಕನೆಯ ವರ್ಷದಲ್ಲಿ ಸೀ-ಸ್ಪ್ರೇ ಅಂಡ್ ಸ್ಮೋಕ್ ಡ್ರಿಫ್ಟ್‌ ಮತ್ತು ಆಶ್ಟರೋತ್ ಎಂಬ ಎರಡು ಕವನಸಂಕಲನಗಳನ್ನು ಪ್ರಕಟಿಸಿದ. ಮೂವತ್ತೇಳನೆಯ ವರ್ಷದಲ್ಲಿ ಬುಷ್ ಬ್ಯಾಲಡ್ಸ್‌ ಅಂಡ್ ಗ್ಯಾಲಪಿಂಗ್ ರೈಮ್ಸ್‌ ಎಂಬ ಮೂರನೆಯ ಕವನಸಂಕಲನವನ್ನು ಪ್ರಕಟಿಸಿದ. ಈ ಕೃತಿಗಳು ಈತನಿಗೆ ಹಣಕ್ಕಿಂತ ಹೆಚ್ಚಾಗಿ ಹೊಗಳಿಕೆಯನ್ನು ತಂದುವು. 1870ರಲ್ಲಿ ಕುದುರೆಸವಾರಿ ಮಾಡುವಾಗ ಬಿದ್ದು ಏಟು ತಿಂದ. ಸ್ಕಾಟ್ಲೆಂಡಿನಿಂದ ಬರಬೇಕಾದ ಒಂದು ಆಸ್ತಿ ಗಿಟ್ಟಲಿಲ್ಲ. ತಾನು ಕವಿಯಾಗಿಯೇ ಯಶಸ್ಸನ್ನು ಪಡೆಯುವುದು ಶಕ್ಯವಲ್ಲವೆಂಬ ಭಾವನೆ ಪ್ರಬಲವಾಯಿತು. ಈ ಎಲ್ಲ ಕಾರಣಗಳಿಂದ ಜೀವನದ ಬಗ್ಗೆ ತುಂಬ ಜುಗುಪ್ಸೆ ಪಟ್ಟುಕೊಂಡು ತನ್ನ ತಲೆಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಕಾವ್ಯ[ಬದಲಾಯಿಸಿ]

The Adam Lindsay Gordon obelisk at the Blue Lake.

ಆಸ್ಟ್ರೇಲಿಯದ ಮೂಲ ನಿವಾಸಿಗಳ ನಿತ್ಯಜೀವನದ ವಿವಿಧ ನೋಟಗಳನ್ನು ಈತ ತನ್ನ ಕವಿತೆಗಳಲ್ಲಿ ಸೆರೆಹಿಡಿದಿದ್ದಾನೆ. ಆಸ್ಟ್ರೇಲಿಯನ್ ಜನತೆಗೆ ವಿಶಿಷ್ಟವಾದ ನುಡಿಗಟ್ಟನ್ನೇ ಬಳಸಿಕೊಂಡ ಕವಿಗಳಲ್ಲಿ ಈತ ಮೊದಲಿಗ. ಆದರೆ ಇವನ ಕವಿತೆಗಳಲ್ಲಿ ಅತ್ಯುತ್ತಮವಾದವು ಅವುಗಳ ವಸ್ತುಗಳಿಂದಾಗಿ, ಅವುಗಳ ಭಾವನೆಗಳಿಂದಾಗಿ ಆಸ್ಟ್ರೇಲಿಯನ್ ಆಗುವುದಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಆಗಿವೆ ಎಂದು ವಿಮರ್ಶಕರ ಅಭಿಪ್ರಾಯ. ಜೋರಾದ ಛಂದೋಗತಿ ಹಾಗೂ ಅಭಿವ್ಯಕ್ತವಾಗಿರುವ ಸರಳವಾದ ಮತ್ತು ಅನಾಡಂಬರದ ಜೀವನದರ್ಶನದಿಂದಾಗಿ ಇವು ಓದುಗರ ಮೆಚ್ಚುಗೆಯನ್ನು ಪಡೆದಿವೆ. ಇವನ ಕವಿತೆಗಳ ಹಲವಾರು ಸಾಲುಗಳು ಆಸ್ಟ್ರೇಲಿಯನ್ ಜನತೆಯ ನಿತ್ಯಜೀವನದ ಮಾತುಕತೆಯಲ್ಲಿ ಹಾಸುಹೊಕ್ಕಾಗಿ ಬಿಟ್ಟಿವೆಯಂತೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: