ಆಟೊ ಚಕ್ರವರ್ತಿಗಳು
ಜರ್ಮನಿಯ ರಾಜರುಗಳಾಗಿದ್ದು ಚಕ್ರವರ್ತಿಗಳಾದ ನಾಲ್ವರ ವಿಷಯವನ್ನಿಲ್ಲಿ ಪ್ರಸ್ತಾಪಿಸಲಾಗಿದೆ.
ಆಟೊ I:(912-973)
[ಬದಲಾಯಿಸಿ]ಜರ್ಮನಿಯ ದೊರೆ ಒಂದನೆಯ ಹೆನ್ರಿಯ ಮಗ. 936ರಲ್ಲಿ ಪಟ್ಟಕ್ಕೆ ಬಂದು ತನ್ನ ಸಾಮಥ್ರ್ಯದಿಂದ 962ರಲ್ಲಿ ಇಟಲಿ ಜರ್ಮನಿಗಳೆರಡನ್ನೂ ಒಳಗೊಂಡ ರೋಮನ್ ಚಕ್ರಾಧಿಪತ್ಯದ ಮೊದಲ ಸಾಮ್ರಾಟನಾದ. ಮಹಾಶಯನೆಂಬ ಕೀರ್ತಿಗಳಿಸಿದ. ಜರ್ಮನಿಯ ರಾಜಕೀಯದಲ್ಲಿ ಪೋಪನ ಪ್ರಭಾವವನ್ನು ಕುಗ್ಗಿಸಲೋಸ್ಕರ, ರೋಮನ್ ಕ್ಯಾಥೊಲಿಕ್ ಪುರೋಹಿತವರ್ಗ ತನ್ನ ಅಧೀನದಲ್ಲಿರತಕ್ಕದ್ದೆಂದು ಆಜ್ಞೆ ಮಾಡಿದ. ಆಗಿನ ಕಾಲಕ್ಕೆ ತಕ್ಕಂತೆ ಮತ ವಿಚಾರಗಳಲ್ಲಿ ಗಾಢಭಕ್ತಿ ಅಂಧಶ್ರದ್ಧೆಗಳಿದ್ದವು; ರೋಮನ್ ಕ್ಯಾಥೊಲಿಕ್ ಧರ್ಮ ಜನರಲ್ಲಿ ಹರಡಿ ನೆಲೆಸುವುದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಕೈಗೊಂಡ. ವಿದ್ರೋಹಿಸಾಮಂತರನ್ನಡಗಿಸಿ ಪೂರ್ವದಿಂದ ದಾಳಿ ನಡೆಸಲೆತ್ನಿಸಿದ್ದ ಮಾಗ್ಯಾರರನ್ನು ಹೊಡೆದಟ್ಟಿ ದೇಶದ ಭದ್ರತೆಯನ್ನು ಬಲಪಡಿಸಿದ. ಈತ ಸಮರ್ಥ ಯೋಧ. ವಿದ್ಯಾಪ್ರೇಮಿ. ವಿದ್ವಾಂಸರನ್ನು ಆಸ್ಥಾನಕ್ಕೆ ಬರಮಾಡಿಕೊಂಡು ಗೌರವಿಸಿದ್ದಲ್ಲದೆ, ವಿದ್ಯಾಪ್ರಸಾರಕ್ಕಾಗಿ ದುಡಿಯುತ್ತಿದ್ದ ತನ್ನ ತಮ್ಮ ಬ್ರೂನೋಗೆ ನೆರವು ನೀಡಿದ.[೧][೨]
ಆಟೊ II:(955-983)
[ಬದಲಾಯಿಸಿ]ಒಂದನೆಯ ಆಟೊ ಮಹಾಶಯನ ಮಗ; ತಂದೆ ರೋಮನ್ ಸಾಮ್ರಾಟನಾದಾಗ ಜರ್ಮನಿಗೆ ದೊರೆಯಾದ. ಡೇನರು ಬೊಹಿಮಿಯನ್ನರು ನಡೆಸುತ್ತಿದ್ದ ದಾಳಿಗಳನ್ನು ಅಡಗಿಸಿದ್ದಲ್ಲದೆ ದೇಶದ್ರೋಹಿಗಳಾದ ಸಾಮಂತರನ್ನು ಶಿಕ್ಷಿಸಿದ. 980ರಲ್ಲಿ ರೋಮನ್ ಸಾಮ್ರಾಟನಾದ. ಆಟೊಮನ್ ಸುಲ್ತಾನನ ಬೆಂಬಲದಿಂದ ಅರಬ್ಬರು ಇಟಲಿಗೆ ನುಗ್ಗಿದಾಗ (987) ಕೆಲೆಬ್ರಿಯ ಎಂಬಲ್ಲಿ ಸೋತು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಈ ಪರಾಭವದಿಂದಾದ ಅಪಯಶಸ್ಸನ್ನು ತೊಡೆದುಹಾಕಲು ಪುನಃ ಅರಬ್ಬರ ಮೇಲೆ ಯುದ್ಧ ನಡೆಸುವ ಪ್ರಯತ್ನದಲ್ಲಿದ್ದಾಗ ಕಾಲವಾದ.[೩]
ಆಟೊ III:(980-1002)
[ಬದಲಾಯಿಸಿ]ಎರಡನೆಯ ಆಟೊನ ಮಗ. ದೊರೆಯಾದಾಗ ಮೂರು ವರ್ಷದವ. ಆದ್ದರಿಂದ ಕೆಲವು ಕಾಲ ಅವನ ತಾಯಿ, ಅನಂತರ ಅವನ ಅಜ್ಜ ರಾಜಪ್ರತಿನಿಧಿಯಾಗಿ (ರೀಜೆಂಟ್) ರಾಜ್ಯದ ಆಡಳಿತ ನಡೆಸಿದರು. ಬವೇರಿಯದ ಡ್ಯೂಕ್ ಆಗಿದ್ದ ಎರಡನೆಯ ಹೆನ್ರಿ ಇವನಿಗೆ ಸಿಂಹಾಸನಕ್ಕೆ ಹಕ್ಕುದಾರಿಯಲ್ಲವೆಂಬ ವ್ಯಾಜ್ಯ ಹೂಡಿ ತಾನೇ ರಾಜನಾಗಲು ಮಾಡಿದ ಪ್ರಯತ್ನ ಫಲಿಸಲಿಲ್ಲ. ತುಂಬ ಮೇಧಾವಿ, ವಿದ್ಯಾವಂತ. ಪೋಪನೂ ತನಗೆ ಅನುಕೂಲನಾಗಿರಬೇಕೆಂಬ ಉದ್ದೇಶದಿಂದ ತನ್ನವರನ್ನೇ ಆ ಪದವಿಗೇರಿಸಿದ. ಹಿಂದಿನ ರೋಮನ್ ಸಾಮ್ರಾಜ್ಯದ ವೈಭವ, ಪರಾಕ್ರಮ, ಆಡಳಿತ ನೀತಿಗಳಿಗೆ ಮಾರುಹೋಗಿದ್ದು ತನ್ನ ಸಾಮ್ರಾಜ್ಯವನ್ನೂ ಅದೇ ಮಾದರಿಯಲ್ಲಿ ರೂಪಿಸಲೆತ್ನಿಸಿದ. ಈ ನೀತಿಯಿಂದ ಜರ್ಮನಿ ಇಟಲಿ ಎರಡು ದೇಶಗಳಲ್ಲೂ ಜನಾನುರಾಗವನ್ನು ಕಳೆದುಕೊಂಡ. ರೊಚ್ಚಿಗೆದ್ದಿದ್ದ ರೋಮನ ಪ್ರಜೆಗಳಿಂದ ತಪ್ಪಿಸಿಕೊಂಡು ಪೆಟಿರ್ನೋಗೆ ಓಡಿಹೋಗಿ ಅಲ್ಲಿ ಕಾಲವಾದ. ಜರ್ಮನರು ಇಟಾಲಿಯನ್ನರು ಇಬ್ಬರನ್ನೂ ಒಂದೇ ರಾಜಾಧಿಪತ್ಯಕ್ಕೊಳಪಡಿಸುವುದು ಸಾಧ್ಯವಾಗದ ವಿಷಯ ಎಂಬುದು ಇವನ ಆಳ್ವಿಕೆಯಲ್ಲಿ ಖಚಿತವಾಯಿತು.[೪][೫]
ಆಟೊ IV:(1182-1218)
[ಬದಲಾಯಿಸಿ]ಸ್ಯಾಕ್ಸೊನಿಯ ಡ್ಯೂಕ್ ಹೆನ್ರಿಯ ಮಗ. ಇಂಗ್ಲೆಂಡಿನ ದೊರೆ ಎರಡನೆಯ ಹೆನ್ರಿಯ ಮೊಮ್ಮಗ ಇಂಗ್ಲೆಂಡಿನಲ್ಲೇ ಶಿಕ್ಷಣ ಪಡೆದ. ಅಲ್ಲಿದ್ದಾಗಲೇ ಯುದ್ಧದಲ್ಲಿ ಉತ್ತಮ ಅನುಭವ ಗಳಿಸಿದ. ಸಾಮ್ರಾಟ್ ಪದವಿ ಪಡೆದದ್ದು 1208ರಲ್ಲಿ. ಅನೇಕ ಯುದ್ಧಗಳಲ್ಲಿ ಹೋರಾಡಿ ಇಟಲಿಯ ದಕ್ಷಿಣ ಭಾಗವನ್ನೂ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಜರ್ಮನಿಯಲ್ಲಿ ಶತ್ರುಗಳು ಅವನನ್ನು ಸಿಂಹಾಸನದಿಂದ ಇಳಿಸಲು ಒಳಸಂಚು ನಡೆಸಿದರು. 1214ರಲ್ಲಿ ಫ್ರೆಂಚರಿಂದ ಸೋತ. ಮುಂದೆ ಕಷ್ಟಪರಂಪರೆಗಳು ಮೇಲಿಂದ ಮೇಲೆ ಬಂದೊದಗಿದವು. ಪೋಪ್ ಇವನನ್ನು ಜಾತಿಯಿಂದ ಹೊರಹಾಕಿದ. ಜರ್ಮನಿಯ ಶ್ರೀಮಂತರು ಇವನಿಗೆ ವಿರೋಧಿಗಳಾದರು. ಫ್ರಾನ್ಸಿನ ದೊರೆ ಎರಡನೆಯ ಫಿಲಿಪ್ಸ್‍ನಿಂದ ಬೋವೈನ್ ಕದನದಲ್ಲಿ ಪರಾಜಿತನಾಗಿ, ಸಾಮ್ರಾಟ್ ಪದವಿಯನ್ನು ಕಳೆದುಕೊಂಡು ಸ್ಯಾಕ್ಸನಿಗೆ ಹೋಗಿ ತನ್ನ ಕೊನೆಗಾಲವನ್ನು ಕಳೆದ.[೬][೭]
ಉಲ್ಲೇಖಗಳು
[ಬದಲಾಯಿಸಿ]- ↑ https://www.britannica.com/biography/Otto-I
- ↑ http://www.geni.com/people/Otto-I-Holy-Roman-emperor/6000000000701225368
- ↑ https://www.britannica.com/biography/Otto-II-Holy-Roman-emperor
- ↑ https://www.britannica.com/biography/Otto-III
- ↑ https://biography.yourdictionary.com › Reference › Biography › Otto III
- ↑ https://www.britannica.com/biography/Otto-IV
- ↑ http://www.historytoday.com/richard-cavendish/otto-great-crowned-emperor-romans