ಆಘ್ರಾಣ

ವಿಕಿಪೀಡಿಯ ಇಂದ
Jump to navigation Jump to search
ಮಾನವರಲ್ಲಿ ಆಘ್ರಾಣ ವ್ಯವಸ್ಥೆ

ಆಘ್ರಾಣ ವಾಸನೆಯ ಶಕ್ತಿಯನ್ನು ರೂಪಿಸುವ ಒಂದು ರಸಾಯನಗ್ರಹಿಕೆ. ಆಘ್ರಾಣ ಅನೇಕ ಉದ್ದೇಶಗಳನ್ನು ಹೊಂದಿದೆ, ಉದಾಹರಣೆಗೆ ಅಪಾಯಗಳು, ಫ಼ೆರೊಮೋನ್, ಮತ್ತು ಆಹಾರವನ್ನು ಪತ್ತೆಮಾಡುವುದು. ಇದು ಇತರ ಇಂದ್ರಿಯಗಳೊಂದಿಗೆ ಒಂದಾಗಿ ಘ್ರಾಣಶಕ್ತಿಯನ್ನು ರೂಪಿಸುತ್ತದೆ.[೧] ವಾಸನೆ ಹೊಮ್ಮಿಸುವ ವಸ್ತುಗಳು ಮೂಗಿನ ಕುಳಿಯಲ್ಲಿ ಸ್ಥಿತವಾದ ಆಘ್ರಾಣ ಗ್ರಾಹಿಗಳ ಮೇಲಿನ ನಿರ್ದಿಷ್ಟ ಸ್ಥಳಗಳಿಗೆ ಬಂಧಗೊಂಡಾಗ ಆಘ್ರಾಣ ಉಂಟಾಗುತ್ತದೆ. ಗ್ಲೊಮೇರ‍್ಯುಲಸ್‍ಗಳು ಈ ಗ್ರಾಹಿಗಳಿಂದ ಬರುವ ಸಂದೇಶಗಳನ್ನು ಸಂಗ್ರಹಿಸಿ ಘ್ರಾಣ ಗೆಡ್ಡೆಗೆ ರವಾನಿಸುತ್ತವೆ. ಅಲ್ಲಿ ಸಂವೇದನಾತ್ಮಕ ಆದಾನವು ವಾಸನೆಯ ಗುರುತಿಸುವಿಕೆ, ನೆನಪು ಮತ್ತು ಭಾವನೆಗೆ ಜವಾಬ್ದಾರವಾದ ಮಿದುಳಿನ ಭಾಗಗಳೊಂದಿಗೆ ಪರಸ್ಪರ ಕ್ರಿಯೆ ನಡೆಸಲು ಆರಂಭಿಸುತ್ತದೆ. ಹಲವುವೇಳೆ, ಭೂಜೀವಿಗಳು ವಾಸನೆ ಮತ್ತು ರುಚಿಗಾಗಿ ಪ್ರತ್ಯೇಕ ಆಘ್ರಾಣ ವ್ಯವಸ್ಥೆಗಳನ್ನು ಹೊಂದಿರುತ್ತವೆ, ಆದರೆ ಜಲಚರಗಳು ಸಾಮನ್ಯವಾಗಿ ಕೇವಲ ಒಂದು ವ್ಯವಸ್ಥೆಯನ್ನು ಹೊಂದಿರುತ್ತವೆ.

ಕಶೇರುಕಗಳಲ್ಲಿ, ಘ್ರಾಣ ಸಂವೇದಕ ನರಕೋಶಗಳು ಘ್ರಾಣ ಹೊರಪದರದಲ್ಲಿ ವಾಸನೆಗಳನ್ನು ಗ್ರಹಿಸುತ್ತವೆ. ಘ್ರಾಣ ಹೊರಪದರವು ಕನಿಷ್ಠಪಕ್ಷ ಆರು ರೂಪವೈಜ್ಞಾನಿಕವಾಗಿ ಮತ್ತು ಜೀವರಾಸಾಯನಿಕವಾಗಿ ಭಿನ್ನ ಜೀವಕೋಶ ಪ್ರಕಾರಗಳಿಂದ ರೂಪಗೊಂಡಿರುತ್ತದೆ. ಶ್ವಸನ ಹೊರಪದರಕ್ಕೆ ಹೋಲಿಸಿದರೆ ಘ್ರಾಣ ಹೊರಪದರದ ಪ್ರಮಾಣವು ಪ್ರಾಣಿಯ ಘ್ರಾಣ ಸೂಕ್ಷ್ಮತೆಯ ಸೂಚನೆ ನೀಡುತ್ತದೆ. ಮಾನವರು ಸುಮಾರು ೧.೬ ಚದರ ಅಂಗುಲದಷ್ಟು ಘ್ರಾಣ ಹೊರಪದರವನ್ನು ಹೊಂದಿರುತ್ತಾರೆ. ಕೆಲವು ನಾಯಿಗಳು ೨೬ ಚದರ ಅಂಗುಲದಷ್ಟು ಘ್ರಾಣ ಹೊರಪದರವನ್ನು ಹೊಂದಿರುತ್ತವೆ. ನಾಯಿಯ ಘ್ರಾಣ ಹೊರಪದರವು ಗಣನೀಯವಾಗಿ ಹೆಚ್ಚು ದಟ್ಟವಾಗಿ ನರಗಳನ್ನು ಹೊಂದಿರುತ್ತದೆ, ಚದರ ಸೆಂಟಿಮೀಟರ್‍ಗೆ ನೂರು ಪಟ್ಟು ಹೆಚ್ಚು ಗ್ರಾಹಿಗಳಿರುತ್ತವೆ.

ನಾಸಿಕ ಮಾರ್ಗಗಳ ಹೊರ ನಾಸಿಕ ಕುಳಿಯ ಮೂಲಕ ಸಾಗುವ ವಾಸನೆ ಹೊಮ್ಮಿಸುವ ವಸ್ತುಗಳ ಅಣುಗಳು ಕುಹರದ ಬಾಹ್ಯ ಭಾಗಕ್ಕೆ ಅಂಟಿರುವ ಲೋಳೆಯಲ್ಲಿ ಕರಗುತ್ತವೆ ಮತ್ತು ಘ್ರಾಣ ಸಂವೇದಕ ನರಕೋಶಗಳ ಡೆಂಡ್ರೈಟ್‍ಗಳ ಮೇಲಿನ ಘ್ರಾಣ ಗ್ರಾಹಿಗಳಿಂದ ಕಂಡುಹಿಡಿಯಲ್ಪಡುತ್ತವೆ. ಇದು ವಿಸರಣ ಅಥವಾ ವಾಸನೆ ಹೊಮ್ಮಿಸುವ ವಸ್ತುವು ಬಂಧಕ ಪ್ರೋಟೀನುಗಳಿಗೆ ಬಂಧಗೊಳ್ಳುವುದರಿಂದ ಸಂಭವಿಸಬಹುದು. ಹೊರಪದರದ ಮೇಲಿರುವ ಲೋಳೆಯು ಮ್ಯೂಕೊಪಾಲಿಸ್ಯಾಕರೈಡ್‍ಗಳು, ಲವಣಗಳು, ಕಿಣ್ವಗಳು ಮತ್ತು ಪ್ರತಿಕಾಯಗಳನ್ನು (ಇವು ಅತಿಮುಖ್ಯ, ಏಕೆಂದರೆ ಘ್ರಾಣ ನರಕೋಶಗಳು ಸೋಂಕು ಮಿದುಳಿಗೆ ಸಾಗಲು ನೇರ ಮಾರ್ಗವನ್ನು ಒದಗಿಸುತ್ತವೆ) ಹೊಂದಿರುತ್ತದೆ. ಈ ಲೋಳೆಯು ವಾಸನೆ ವಸ್ತುಗಳ ಅಣುಗಳಿಗೆ ದ್ರಾವಕವಾಗಿ ಕಾರ್ಯನಿರ್ವಹಿಸುತ್ತದೆ, ನಿರಂತರವಾಗಿ ಹರಿಯುತ್ತಿರುತ್ತದೆ, ಮತ್ತು ಸರಿಸುಮಾರು ಹತ್ತು ನಿಮಿಷಗಳಿಗೊಮ್ಮೆ ಬದಲಾಯಿಸಲ್ಪಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಆಘ್ರಾಣ&oldid=815260" ಇಂದ ಪಡೆಯಲ್ಪಟ್ಟಿದೆ