ಆಂಫಿಯಾಕ್ಸಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂಫಿಯಾಕ್ಸಸ್

ಬ್ರಾಂಕಿಯೋಸ್ಟೋಮ ಲಾನ್ಸಿಯೊಲೇಟಮ್

ಬ್ರಾಂಕಿಯೊಸ್ಟೋಮ ಅಥವಾ ಲಾನ್ಸೆಲೆಟ್[೧] ಎಂಬ ಹೆಸರಿನ ಈ ಪ್ರಾಣಿ ಸಿಫಾಲೊ ಕಾರ್ಡೆಟ ಎಂಬ ಉಪವಂಶಕ್ಕೆ ಸೇರಿದೆ. ಸಣ್ಣ ಮೀನಿನಾಕಾರದ ಪಾರದರ್ಶಕ ಸಮುದ್ರ ವಾಸಿ. 28 ಪ್ರಭೇದಗಳಿವೆ. ಪ್ರಪಂಚದ ಎಲ್ಲ ಸಮುದ್ರಗಳಲ್ಲೂ ಜೀವಿಸುತ್ತವೆ. ಉದ್ದ ಒಂದು ಅಥವಾ ಎರಡು ಅಂಗುಲದಷ್ಟು ಬೆಳೆಯುವದು. ಸುಲಭವಾಗಿ ಈಜುತ್ತವೆ. ಮರಳಿನಲ್ಲಿ ವೇಗವಾಗಿ ನುಗ್ಗಿ ಮುಂಭಾಗ ಮಾತ್ರ ಮರಳಿನ ಮೇಲೆ ಕಾಣುವಂತೆ ಅವಿತುಕೊಳ್ಳುತ್ತದೆ. ಜೀವಮಾನದ ಹೆಚ್ಚಿಗೆ ಕಾಲವನ್ನು ಸ್ಥಾಯಿಜೀವಿಯಾಗಿ ಕಳೆಯುತ್ತದೆ. ಉದ್ದವಾದ ಎಡಬಲ ಪಕ್ಕಕ್ಕೆ ಚಪ್ಪಟೆಯಾಗಿದ್ದು ಆಕಾರದಲ್ಲಿ ಭರ್ಜಿಯನ್ನು ಹೋಲುತ್ತದೆ. ನಿರ್ದಿಷ್ಟವಾದ ತಲೆ, ದವಡೆಗಳು, ಹೃದಯ, ಜ್ಞಾನೇಂದ್ರಿಯಗಳು, ವಿಶಿಷ್ಟ ರೀತಿಯ ಮೆದುಳು ಇವಾವುವೂ ಇಲ್ಲ. ದೇಹದ ಮುಂದಿನ ತುದಿಯ ಕೆಳ ಭಾಗದಲ್ಲಿರುವ ಬಾಯಿ ಕುಂಚಿಗೆಯಲ್ಲಿದೆ. ಬಾಯಿ ಕುಂಚಿಗೆಯ ಅಂಚಿನಲ್ಲಿ ಸಣ್ಣ ಸಣ್ಣ ತಂತುಗಳು ಸುತ್ತುಗಟ್ಟಿಕೊಂಡಿವೆ. ಬೆನ್ನು ಈಜುರೆಕ್ಕೆ, ಬಾಲದ ಈಜುರೆಕ್ಕೆ ಮತ್ತು ಆಸನ ದ್ವಾರದವರೆಗೂ ಹರಡಿರುವ ಕೆಳಗಿನ ಈಜು ರೆಕ್ಕೆ ಇವೆ. ದೇಹದ ತಳಭಾಗದ ಉದ್ದಕ್ಕೂ ಏಟ್ರಿಯಂ ದ್ವಾರದವರೆಗೆ ಮೆಟಪ್ಲೂರಲ್ ಮಡಿಕೆಗಳಿವೆ. ಇವುಗಳ ಹಿಂದೆ ಏಟ್ರಿಯಂ ರಂಧ್ರವಿದೆ. ಬಾಲದ ಈಜುರೆಕ್ಕೆಯ ಮುಂಭಾಗದ ಎಡದಲ್ಲಿ ಗುದದ್ವಾರವಿದೆ. ದೇಹದ ಎರಡುಪಕ್ಕಗಳಲ್ಲೂ <-ಆಕಾರದ ಮಯೋಟೋನ್ ಸ್ನಾಯುಗಳು ಅವುಗಳ ಮಧ್ಯೆ ತಡಿಕೆಗಳಂತೆ ಮಯೋಕಾಮೆಟಗಳೂ ಇವೆ. ಸ್ನಾಯುಗಳು ಈಜಲು ಸಹಕರಿಸುತ್ತವೆ. ಜೀವಿಯ ಅಕ್ಷದಲ್ಲಿ ಆಧಾರ ಸ್ತಂಭದಂತಿರುವ ನೋಟೊಕಾರ್ಡ್ (ಬೆನ್ನುಮೂಳೆಗೆ ವಿಕಾಸದ ಮೂಲವೆನಿಸಿದ ಅರ್ಧಮೃದ್ವಸ್ಥಿಯ ಪಟ್ಟಿ) ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಚಾಚಿದೆ. ನೋಟೊಕಾರ್ಡಿನ ಮೇಲೆ ಉದ್ದಕ್ಕೂ ಟೊಳ್ಳಾದ ನರಬಳ್ಳಿಯಿದೆ. ಇದು ಮುಂದಿನ ತುದಿಯಲ್ಲಿ ಸರಳ ರಚನೆಯ ಮಿದುಳಾಗಿ ರೂಪುಗೊಂಡಿದೆ. ನರಬಳ್ಳಿಯಿಂದ ಅಂತರ್ವಾಹಿ ಮತ್ತು ಬಹಿರ್ವಾಹಿ ನರತಂತುಗಳು ಹೊರಬಂದಿವೆ.[೨] ಬಾಯಿ ಮೂಲಕ ದೇಹಕ್ಕೆ ಹೋಗುವ ನೀರು ಆಹಾರ ಪದಾರ್ಥಗಳನ್ನೂ ಉಸಿರಾಡಲು ಆಕ್ಸಿಜನ್ನನ್ನೂ ಒದಗಿಸುತ್ತದೆ. ಪೀಪಾಯಿ ಆಕಾರದ ಗಂಟಲಿನ ಪಕ್ಕೆಗಳಲ್ಲಿ ಸುಮಾರು 50-230 ಕಂಡಿಗಳಂತಿರುವ ರಂಧ್ರಗಳಿವೆ. ಕಿವಿರುಗಳ ಮಧ್ಯೆಯಿರುವ ಗಂಟಲಿನ ಅಡ್ಡೆಡೆಗಳಲ್ಲಿ ಕೈಟಿನ್ ಪದಾರ್ಥದ ಸೈನಾಪ್ಟಿಕ್ಯುಲೆ ಎಂಬ ಅಸ್ಥಿಪಂಜರ ರಚನೆಗಳಿವೆ. ಗಂಟಲೊಳಗಿನ ತಳಭಾಗದ ಉದ್ದಕ್ಕೂ ಶಿಲಕೆ ಮತ್ತು ಗ್ರಂಥಿಗಳಿಂದ ಕೂಡಿದ ಎಂಡೊಸ್ಟೈಲ್ ಇದೆ. ಇದೇ ರೀತಿ ಗಂಟಲಿನ ಮೇಲ್ಭಾಗದ ಉದ್ದಕ್ಕೂ ಒಳಗಡೆ ಶಿಲಕೆಗಳಿಂದ ಕೂಡಿದ ಹೈಪರ್ ಫರಿಂಜಿಲ್ ಎಂಬ ಕಾಲುವೆ ಇದೆ. ಇವೆರಡನ್ನೂ ಸಂಬಂಧಿಸುವಂತೆ ಗಂಟಲಿನ ಮುಂಭಾಗದಲ್ಲಿ ಇಕ್ಕೆಡೆಯಲ್ಲೂ ಒಂದೊಂದು ಶಿಲಕೆಯಿಂದ ಕೂಡಿದ ಪೆರಿಫೆರಿಂಜಲ್ ಕಾಲುವೆಗಳಿವೆ. ಸಮುದ್ರದ ನೀರು ಗಂಟಲಿನೊಳಗೆ ಬಂದಾಗ, ಎಂಡೊಸ್ಟೈಲ್ ಸ್ರವಿಸುವ ಲೋಳೆಗಳಲ್ಲಿ ಸಣ್ಣ ಜೀವಿಗಳು ಸಿಕ್ಕಿಬೀಳುತ್ತವೆ. ಶಿಲಕೆಗಳು ಅವನ್ನು ಚಟುವಟಿಕೆಯಿಂದ ಮುಂದಕ್ಕೆ ಸಾಗಿಸುತ್ತದೆ. ಅವು ಪೆರಿಫೆರಿಂಜಿಲ್ ಕಾಲುವೆಗಳ ಮಾರ್ಗವಾಗಿ ಎಪಿಫೆರಿಂಜಿಯಲ್ ಕಾಲುವೆಗೆ ಬಂದು ಕೊನೆಗೆ ಅನ್ನನಾಳದಲ್ಲಿ ಬೀಳುತ್ತದೆ. ಪಿತ್ತಜನಕಾಂಗವನ್ನು ಹೋಲುವ ಹಿಪಾಟಿಕ್ ಸೀಕಂ ಸ್ರವಿಸುವ ದ್ರವ ಆಹಾರವನ್ನು ಜೀರ್ಣಿಸಲು ಸಹಾಯ ಮಾಡುತ್ತದೆ. ದೇಹದಿಂದ ಹೊರಹೋಗುವ ವಸ್ತುವಿನಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಇತರ ವಿಸರ್ಜನಾ ವಸ್ತುಗಳಿರುತ್ತವೆ. ಖಚಿತವಾದ ಹೃದಯವಿಲ್ಲದ್ದಿದ್ದರೂ ರಕ್ತಪರಿಚಲನೆಯಾಗುತ್ತದೆ. ಇದಕ್ಕೆ ದೇಹದೊಳಗಿರುವ ಲೋಮನಾಳಗಳು ಮತ್ತು ಸಂಕುಚಿತ ಶಕ್ತಿಯುಳ್ಳ ರಕ್ತನಾಳಗಳು ಕಾರಣ. ನೆಫ್ರೀಡಿಯಗಳು ಶುದ್ಧೀಕರಣ ಕ್ರಿಯೆಯನ್ನು ನಡೆಸುತ್ತವೆ.[೩]

ಇದು ಏಕಲಿಂಗ ಪ್ರಾಣಿ. ಪ್ರೌಢಜೀವಿಯಲ್ಲಿ 26-33 ಜೊತೆ ಜನನೇಂದ್ರಿಯಗಳಿರುತ್ತವೆ. ಪ್ರಜನನ ಕ್ಷಣಗಳು ಪಕ್ವವಾದಾಗ ಜನನೇಂದ್ರಿಯವನ್ನುಳಿದು ಏಟ್ರಿಯಂಗೆ ಬಿದ್ದು ಅಲ್ಲಿಂದ ದ್ವಾರದ ಮೂಲಕ ಹೊರಬರುತ್ತವೆ. ತತ್ತಿಗಳಿಡುವ ಕಾಲವಾದ ಸಾಯಂಕಾಲ ಮತ್ತು ರಾತ್ತಿವೇಳೆಯಲ್ಲಿ ಇವು ಬಿರುಸಿನಿಂದ ಈಜಾಡುತ್ತವೆ. ಇವು ಪ್ರೌಢಜೀವಿಗಿಂತ ಹೆಚ್ಚು ಚಟುವಟಿಕೆಯಿಂದಿದ್ದು ಈಜುತ್ತ ಕ್ರಮೇಣ ಪ್ರಬುದ್ಧಾವಸ್ಥೆಯನ್ನು ತಲಪುತ್ತವೆ.

ಲಾರ್ವದ ಬಾಯಿ ಎಡಗಡೆಯೂ ಕಿವಿರಿನ ರಂಧ್ರಗಳು ಬಲಗಡೆಯೂ ಇವೆ. ಆದ್ದರಿಂದ ಎಡಭಾಗಗಳಲ್ಲಿ ಪಾಶ್ರ್ವ ಸಮಾನತೆ ಇಲ್ಲ. ಸುಮಾರು ಮೂರು ತಿಂಗಳುಗಳ ಕಾಲ ಈಜು ಜೀವನ ನಡೆಸಿ ಸಮುದ್ರದ ಆಳ ಸೇರಿ ವಿಶಿಷ್ಟ ರೀತಿಯಲ್ಲಿ ರೂಪ ಪರಿವರ್ತನೆ ಹೊಂದುತ್ತದೆ. ಲಾರ್ವದ ಅವಸ್ಥೆಯಲ್ಲಿ ಕ್ರಮವಾಗಿ ಅಂಗಸಮಷ್ಟಿ ಏರ್ಪಟ್ಟು ಲಾರ್ವ ಪ್ರೌಢ ಜೀವಿಯಾಗುತ್ತದೆ.

ಈ ಪ್ರಾಣಿಯನ್ನು ದವಡೆಗಳಿಲ್ಲದ ಚಕ್ರಾಸ್ಯಗಳಿಗೆ ಹೋಲಿಸಬಹುದೆಂದು ತಲೆರೂಪಗೊಂಡಿರುವ ಕಶೇರುಕಗಳ ರಚನೆಗೆ ಇದು ಸಮೀಪದ್ದೆಂದು ಗ್ರಿಗೊರಿ ವಾದಿಸುತ್ತಾನೆ. ಕಶೇರುಕಗಳ ವಿಕಾಸಕ್ಕೆ ಈ ಪ್ರಾಣಿ ಮೂಲಭೂತವಾಗಿರಬೇಕೆಂದು ಕೆಲವರು ಊಹಿಸುತ್ತಾರೆ. ಆದ್ದರಿಂದ ಈ ಪ್ರಾಣಿಗಳು ಪ್ರಾಣಿಶಾಸ್ತ್ರಜ್ಞರ ಪರೀಕ್ಷೆಗಳಿಗೆ, ವಿಶೇಷ ಪ್ರಯೋಗಗಳಿಗೆ ಈಡಾಗಿವೆ. ಪೂರ್ತಿ ಬೆಳೆದ ನೋಟೊಕಾರ್ಡ ಆಸರೆ ಕಿವಿರು ರಂಧ್ರಗಳು ಮತ್ತು ಕೊಳವೆಯಂಥ ನರದ ಬಳ್ಳಿಯಿರುವುದರಿಂದ ಈ ಪ್ರಾಣಿ ಕಶೇರುಕಗಳ ರಚನೆಯ ಮೂಲ ಸ್ವರೂಪವನ್ನು ಪ್ರತಿನಿಧಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.ucmp.berkeley.edu/chordata/cephalo.html
  2. "ಆರ್ಕೈವ್ ನಕಲು". Archived from the original on 2016-11-14. Retrieved 2016-10-21.
  3. http://rstb.royalsocietypublishing.org/content/228/553/269