ವಿಷಯಕ್ಕೆ ಹೋಗು

ಆಂಡ್ರೇ ಮೇರಿ ಆಂಪೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡ್ರೇ ಮೇರಿ ಆಂಪೇರ್
ಆಂಡ್ರೇ ಮೇರಿ ಆಂಪೇರ್
ಜನನ೧೭೭೫ ಜನವರಿ ೨೨
ಫ್ರಾನ್ಸ್
ಮರಣ೧೮೩೬ ಜೂನ್ ೧೦
ರಾಷ್ಟ್ರೀಯತೆಫ್ರಾನ್ಸ್
ಕಾರ್ಯಕ್ಷೇತ್ರಗಳುಖಗೋಳವಿಜ್ಞಾನಿ

ಆಂಪೇರ್ - ಫ್ರಾನ್ಸಿನ ಪ್ರಖ್ಯಾತ ವಿಜ್ಞಾನಿ ಮತ್ತು ಭೌತಶಾಸ್ತ್ರಜ್ಞ

ಅವರು ೧೭೭೫ರ ಜನವರಿ ೨೨ರಂದು ಫ್ರಾನ್ಸಿನ ಲೆಯನ್ಸ್ ಹತ್ತಿರದ ಪೋಲ್‌ಮಿಯಾಕ್ಸ್‌ನಲ್ಲಿ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿ ಜನಿಸಿದರು. ಡೊಮೆನಿಕ್ ಅರಾಗೋ ಎಂಬ ವಿಜ್ಞಾನಿ ಮತ್ತು ಡೆನ್‌ಮಾರ್ಕಿನ ಭೌತವಿಜ್ಞಾನಿ ಹಾನ್ಸ್ ಕ್ರಿಶ್ಚಿಯನ್ ಓರ್‌ಸ್ಟೆಡ್‌ರವರುಗಳ ವಿದ್ಯುದಯಸ್ಕಾಂತ ಸಿದ್ದಾಂತ ಮತ್ತು ತತ್ವಗಳು ಆಂಪೇರರ ಮನಸ್ಸಿನಲ್ಲಿ ತರಂಗಗಳನ್ನೆಬ್ಬಿಸಿದ್ದವು.[] ತತ್ಪರಿಣಾಮವಾಗಿ ಆಂಪೇರ್ ೧೮೨೦ರಲ್ಲಿಯೇ ವಿದ್ಯುದಯಸ್ಕಾಂತವನ್ನು ಕುರಿತಾದ ವಿವರವಾದ ಪ್ರಬಂಧಗಳನ್ನು ಮಂಡಿಸಿದರು. ವಿದ್ಯುದಯಸ್ಕಾಂತದ ಸ್ವಭಾವಗಳು ಸ್ಥಾಯೀ ವಿದ್ಯುತ್‌ಬಲ ಕ್ಷೇತ್ರದ (ಎಲೆಕ್ಟ್ರೋಸ್ಟಾಟಿಕ್ಸ್) ವ್ಯಾಪ್ತಿಗೆ ಬರುವುದಿಲ್ಲ. ಅವು ವಿದ್ಯುತ್‌ಬಲ ಕ್ರಿಯಾ ವಿಜ್ಞಾನದ (ಎಲೆಕ್ಟ್ರೋಡೈನಮಿಕ್ಸ್) ವ್ಯಾಪ್ತಿಗೆ ಬರುತ್ತದೆ ಎಂಬುದಾಗಿ ಆಂಪೇರ್ ಪ್ರತಿಪಾದಿಸಿದರು. ಎರಡು ತಂತಿಗಳಲ್ಲಿ ಹರಿಯುತ್ತಿರುವ ವಿದ್ಯುತ್ತಿನ ದಿಕ್ಕು ಒಂದೇ ಆಗಿದ್ದರೆ, ಆಗ ಆ ತಂತಿಗಳು ವಿಕರ್ಷಣೆಗೆ ಒಳಗಾಗುತ್ತವೆ. ಹಾಗೆಯೇ ವಿದ್ಯುತ್ ಪ್ರವಾಹದ ದಿಕ್ಕುಗಳು ವಿರುದ್ಧವಾಗಿದ್ದರೆ ಆ ತಂತಿಗಳು ಆಕರ್ಷಣೆಗೆ ಒಳಗಾಗುತ್ತವೆ. ಒಂದು ವಿದ್ಯುತ್ ತಂತಿಯನ್ನು ಸುರುಳಿಯಾಕಾರದಲ್ಲಿ ಸುತ್ತಿ ಅದರ ಮೂಲಕ ವಿದ್ಯುತ್ ಹರಿಸಿದಾಗ, ಅದು ಅಯಸ್ಕಾಂತ ದಂಡದಂತೆ (ಬಾರ್ ಮ್ಯಾಗ್ನೆಟ್) ವರ್ತಿಸುತ್ತದೆ. ಇಂತಹ ಅನೇಕ ಸಂಗತಿಗಳನ್ನು ಆಂಪೇರ್ ಕಂಡುಹಿಡಿದರು.[]

ಜೊತೆಗೆ ವಿದ್ಯುತ್ ಪ್ರವಾಹದ ಸನಿಹವಿರುವ ಅಯಸ್ಕಾಂತ ಸೂಜಿ ಪಲ್ಲಟಗೊಳ್ಳುವ ತತ್ವವನ್ನು ಉಪಯೋಗಿಸಿ, ವಿದ್ಯುತ್ತಿನ ಬಲವನ್ನು ಅಳೆಯಬಹುದಾದ ಉಪಕರಣವನ್ನು ನಿರ್ಮಿಸಬಹುದು ಎಂಬುದಾಗಿ ಆಂಪೇರ್ ಅಭಿಪ್ರಾಯ ಸೂಚಿಸಿದರು. ಅವರ ಅಭಿಪ್ರಾಯದ ಆಧಾರದ ಮೇಲೆ ‘ಗ್ಯಾಲ್ವನೋಮೀಟರ್’ ಸೃಷ್ಟಿಯಾಯಿತು. ವಿದ್ಯುತ್ ಪ್ರವಾಹದ ವೇಗ ಮತ್ತು ವಿದ್ಯುತ್ ಚಾಲನೆಗೆ ಪೂರಕವಾದ ಚಾಲಕಬಲಗಳ (ಡ್ರೈವಿಂಗ್ ಫೋರ‍್ಸ್) ವ್ಯತ್ಯಾಸವನ್ನು ಗುರುತಿಸಲು ಸಾಧ್ಯವೆಂದು ಆಂಪೇರ್ ತೋರಿಸಿದರು. ಅವರ ಗೌರವಾರ್ಥವಾಗಿ ಲಾರ್ಡ್ ಕೆಲ್ವಿನ್ ಎಂಬ ವಿಜ್ಞಾನಿ ೧೮೮೩ರಲ್ಲಿ ವಿದ್ಯುತ್ತನ್ನು ಅಳೆಯುವ ಮಾನಕ್ಕೆ ಆಂಪೇರ್ (ಆಂಪಿಯರ್ ಅಥವಾ ಆಂಪ್) ಎಂದು ಬಳಸಿದರು. ಆ ಬಳಕೆ ಈಗಲೂ ಚಾಲ್ತಿಯಲ್ಲಿದೆ.

೧೮೦೨ರಲ್ಲಿ ಆಂಪೇರ್ ಸಂಭಾವ್ಯ ಸಿದ್ಧಾಂತದ (ಪ್ರಾಬಬಲಿಟಿ ಥಿಯರಿ) ಬಗ್ಗೆ ಬರೆದ ಪ್ರಬಂಧ ಉನ್ನತಮಟ್ಟದ್ದಾಗಿತ್ತು. ಆ ಪ್ರಬಂಧದ ಹೆಸರು ‘ಆಟಗಳ ಗಣಿತಸಿದ್ಧಾಂತದ ಬಗ್ಗೆ ಪರಿಗಣನೆ’. ಆಂಪೇರ್‌ರವರು ಮನೋವಿಜ್ಞಾನ, ತತ್ವಶಾಸ್ತ್ರ, ಭೌತವಿಜ್ಞಾನಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರೂ, ಅವರ ಒಲವು ಹೆಚ್ಚಾಗಿ ರಸಾಯನ ವಿಜ್ಞಾನದ ಕಡೆಗಿದ್ದಿತು. ಅವರು ಕ್ಲೋರೀನ್ ಮತ್ತು ಐಯೋಡೀನ್‌ಗಳ ಮೂಲಭೂತ ತತ್ವಗಳ ಬಗ್ಗೆ ಅಧ್ಯಯನ ನಡೆಸಿದ್ದಲ್ಲದೆ, ಮುಂದೆ ಮೆಂಡಲೀಫ್ ಎಂಬ ವಿಜ್ಞಾನಿ ರಚಿಸಿದ ಆವರ್ತಕೋಷ್ಠಕಕ್ಕೆ (ಪಿರಿಯಾಡಿಕ್ ಟೇಬಲ್) ನಾಂದಿ ಹಾಡಿದರು. ೧೮೧೪ರಲ್ಲಿ ಅವಗೆಡ್ರೋ ಸಿದ್ಧಾಂತಗಳು ಮತ್ತು ಬಾಯ್ಲ್ ಪ್ರತಿಪಾದಿಸಿದ ನಿಯಮಗಳಿಗೆ ಕೂಡ ಆಂಪೇರ್ ತಳಹದಿ ಹಾಕಿದರು. ಗಣಿತ ಮತ್ತು ವಿಜ್ಞಾನಗಳ ಬೋಧನ ಕ್ಷೇತ್ರದಲ್ಲಿ ಉಪನ್ಯಾಸಕರಾಗಿ ಸಾಕಷ್ಟು ಸೇವೆ ಮಾಡಿದ ಆಂಪೇರ್ ೧೮೩೬ರ ಜೂನ್ ೧೦ರಂದು ಮಾರ್ಸೆಲ್‌ನಲ್ಲಿ ಪರೀಕ್ಷಣೆಯ ಪ್ರವಾಸದಲ್ಲಿದ್ದಾಗ ನ್ಯುಮೋನಿಯಾ ಜ್ವರಪೀಡಿತರಾಗಿ ಕೊನೆಯುಸಿರೆಳೆದರು.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-03-11. Retrieved 2016-04-22.
  2. http://www.juliantrubin.com/bigten/ampereexperiments.html
  3. https://www.google.co.in/search?client=ubuntu&channel=fs&q=Andre-Marie+Ampere&ie=utf-8&oe=utf-8&gfe_rd=cr&ei=FYMZV8_uM4-AoAPgp4GQDA#channel=fs&q=Andre-Marie+Ampere+death