ಆಂಟಿಗೊನಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಂಟಿಗೊನಾನ್ ಲೆಪ್ಟೋಪಸ್

ಆಂಟಿಗೊನಾನ್ ಪಾಲಿಗೊನೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಉದ್ದವಾಗಿ ಡೊಂಕು ಡೊಂಕಾಗಿ ಹಬ್ಬುವ ಬಳ್ಳಿ. ಗ್ರೀಕ್ ಭಾಷೆಯಲ್ಲಿ ಆಂಟಿಗೊನಾನ್ ಎಂದರೆ ಡೊಂಕು ಡೊಂಕಾಗಿರುವುದು ಎಂದು ಅರ್ಥ. ಈ ಬಳ್ಳಿಯನ್ನು ಮನೆಯ ಮುಂದೆ ಮತ್ತು ಮನೆಗಳ ಮೇಲೆ ಚಾವಣಿಗಳ ಮೇಲೆ ಅಲಂಕಾರಕ್ಕಾಗಿ ಹಬ್ಬಿಸುತ್ತಾರೆ. ಬಳ್ಳಿಯಲ್ಲಿ ಬಿಡುವ ಹೂಗೊಂಚಲನ್ನು ಬಿಡಿ ಹೂವಾಗಿಯೂ ಪುಷ್ಪಕರಂಡಕದಲ್ಲಿಯೂ ಉಪಯೋಗಿಸುವುದುಂಟು.[೧]

ವಿವರಣೆ[ಬದಲಾಯಿಸಿ]

ಆಂಟಿಗೊನಾನ್ ಬಳ್ಳಿಯ ಎಲೆ ಹೃದಯಾಕಾರ, ಇಲ್ಲವೆ ಕರಣೆಯಾಕಾರ; ಅಲೆಯಾಕಾರದ ಅಂಚನ್ನು ಮೊನಚಾದ ತುದಿಯನ್ನೂ ಪಡೆದಿದೆ; ಮೇಲು ಭಾಗ ಒರಟಾಗಿದೆ; ನಡು ದಿಂಡು ಮತ್ತು ನಾಳಗಳು ಎಲೆಯ ಅಲಗಿನ ಮಟ್ಟಕ್ಕಿಂತ ತಗ್ಗಾಗಿ ಇರುತ್ತವೆ. ಅನೇಕ ಸುತ್ತು ಬಳ್ಳಿಗಳನ್ನು (ಟೆಂಡ್ರಿಲ್[೨]) ಬೆಳೆಸಿಕೊಂಡು ಆಶ್ರಯಗಳನ್ನು ಹಬ್ಬುತ್ತವೆ. ಕಾರಣಾಂತರದಿಂದ ಸಸ್ಯದ ಕಾಂಡ ಸತ್ತುಹೋದರೆ ಗೆಡ್ಡೆ ಬೇರಿನಿಂದ ಮೇಲೆ ಬಂದು ಮೊದಲಿನಂತೆಯೆ ಹಬ್ಬಿಕೊಳ್ಳುತ್ತದೆ. ಹೂಗೊಂಚಲು ಅಂತ್ಯಾರಂಭಿ ಅಥವಾ ಸ್ಟೈಕ್ ಮಾದರಿಯದು. ನಿಬಿಡವಾಗಿ ಹರಡಿರುವ ಹಸುರು ಚಪ್ಪರದ ಮೇಲೆ ಕೆಂಪು ಅಥವಾ ಬಿಳಿ ಬಣ್ಣದ ಹೂಗೊಂಚಲು ಬಹಳ ರಮ್ಯವಾಗಿ ಕಾಣುತ್ತದೆ. ಆಂಟಿಗೊನಾನ್ ಬಳ್ಳಿ ಅಧಿಕವಾಗಿ ಬೀಜಗಳನ್ನು ಕೊಡುತ್ತಿದ್ದು, ಅವುಗಳಿಂದ ವೃದ್ಧಿ ಮಾಡಬಹುದು.

ಸುತ್ತು ಬಳ್ಳಿಗಳನ್ನು (ಟೆಂಡ್ರಿಲ್)


ವಿಧಗಳು[ಬದಲಾಯಿಸಿ]

ಆಂಟಿಗೊನಾನ್ ಲೆಪ್ಟೋಪಸ್ ಎಂಬುದು ಪ್ರಸಿದ್ಧವಾದ ಬಗೆ. ಈ ಪ್ರಭೇದದ ಸಸ್ಯದ ಬೇರು ಗೆಡ್ಡೆಯಂತಿರುತ್ತದೆ. ಕಾಂಡ ಸಣ್ಣ ಮತ್ತು ಉದ್ದವಾಗಿದೆ. ಹೂಗೊಂಚಲು ೬ - ೧೬ ಹೂಗಳಿಂದ ಕೂಡಿದ್ದು, ಅಂತ್ಯಾರಂಭಿ ಮಾದರಿಯದು. ಕಡುಗೆಂಪು ಬಣ್ಣದ ಹೂಗಳಿಂದಾಗಿ ಚೆಲುವಾಗಿ ಕಾಣುತ್ತದೆ.[೩]

ಆಂಟಿಗೊನಾನ್ ಗ್ವಾಟೆಮಾಲೆನ್ಸ್ ಎಂಬುದು ಇನ್ನೊಂದು. ಇದರ ಕಾಂಡ ಸಣ್ಣ ಮತ್ತು ಕೋಣಾಕಾರ. ಇದರ ಎಲೆಗಳು ಲೆಪ್ಟೋಪಸ್ ಬಗೆಯ ಎಲೆಗಳಿಗಿಂತ ದೊಡ್ಡದು ಮತ್ತು ಇದರ ಹೂಗೊಂಚಲಿನಲ್ಲಿ ಹೆಚ್ಚಿನ ಸಂಖ್ಯೆಯ ಹೂಗಳಿರುತ್ತವೆ. [೪] (ಡಿ.ಎಂ.) (ಪರಿಷ್ಕರಣೆ: ಕೆ ಬಿ ಸದಾನಂದ)

ಉಲ್ಲೇಖಗಳು[ಬದಲಾಯಿಸಿ]