ಆಂಗ್ ಸಾನ್ ಸೂ ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಗ್ ಸಾನ್ ಸೂ ಕಿ
ಜನನಜೂನ್ ೧೯, ೧೯೪೫
ಬರ್ಮಾದ ರಂಗೂನ್
ವೃತ್ತಿಬರ್ಮಾದ ದಿ ನ್ಯಾಷನಲ್ ಲೀಗ್ ಫಾರ್ ಡೆಮೊಕ್ರಸಿ ಪಕ್ಷದ ಮುಖ್ಯಸ್ಥೆ ಮತ್ತು ಆ ದೇಶದ ಸಂಸತ್ತಿನ ವಿರೋಧ ಪಕ್ಷದ ನಾಯಕಿ

ಆಂಗ್ ಸಾನ್ ಸೂ ಕಿ (ಹುಟ್ಟಿದ್ದು ೧೯ ಜೂನ್ ೧೯೪೫ರಂದು[೧]) ಬರ್ಮಾ ದೇಶದ ವಿರೋಧ ಪಕ್ಷದ ನಾಯಕಿ ಹಾಗೂ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಮುಖ್ಯಸ್ಥೆ ಮತ್ತು ಪ್ರಧಾನ ಕಾರ್ಯದರ್ಶಿ. ತಮ್ಮ ದೇಶದ ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರಜಾಪ್ರಭುತ್ವ ಸ್ಥಾಪಿಸಬೇಕೆಂಬ ಹೋರಾಟದಿಂದ ಅವರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದು ನೋಬೆಲ್ ಪ್ರಶಸ್ತಿ ಗೌರವಕ್ಕೂ ಪಾತ್ರರಾಗಿದ್ದಾರೆ. ೧೯೯೦ರ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪಕ್ಷ ಪಾರ್ಲಿಮೆಂಟಿನಲ್ಲಿ ೮೧ ಪ್ರತಿಶತ ಸ್ಥಾನಗಳನ್ನು ಗೆದ್ದಿತಾದರೂ ೧೯೮೯ ರಿಂದಲೇ ಸೂ ಕಿ ಅವರನ್ನು ಬಂಧನದಲ್ಲಿಟ್ಟಿದ್ದ ಅಲ್ಲಿನ ಮಿಲಿಟರಿ ಆಡಳಿತ, ಅಧಿಕಾರ ಹಸ್ತಾಂತರಕ್ಕೊಪ್ಪದೆ ಚುನಾವಣೆಯ ಫಲಿತಾಂಶವನ್ನು ಶೂನ್ಯಗೊಳಿಸಿತು. ಹೀಗಾಗಿ ಅವರು ಸುಮಾರು ಹದಿನೈದು ವರ್ಷಗಳನ್ನು ಸೆರೆಮನೆಯಲ್ಲೇ ಕಳೆದಿದ್ದಾರೆ.

ಆಂಗ್ ಸಾನ್ ಸೂ ಕಿ

ಬಂಧನದಲ್ಲಿರುವಾಗಲೇ ೧೯೯೧ರ ನೋಬೆಲ್ ಶಾಂತಿ ಪ್ರಶಸ್ತಿಯನ್ನೊಳಗೊಂಡು ಅನೇಕ ಜಾಗತಿಕ ಪ್ರಶಸ್ತಿಗಳು ಸಂದ ಆಂಗ್ ಸಾನ್ ಸೂ ಕಿ ವಿಶ್ವಪ್ರಸಿದ್ಧರಾದರು. ಕೆನಡಾ ದೇಶ ಸೂ ಕಿ ಅವರಿಗೆ ವಿಶ್ವದ ಕೇವಲ ಆರು ಗಣ್ಯರಿಗೆ ಮಾತ್ರ ನೀಡಲಾಗಿರುವ ಸ್ವಯಂ ಘೋಷಿತ ಪೌರತ್ವವನ್ನು ಕೂಡಾ ಉದ್ಘೋಷಿಸಿತು. ಭಾರತ ಸರ್ಕಾರ ಸಹಾ ಇವರಿಗೆ ಅಂತಾರಾಷ್ಟ್ರೀಯ ತಿಳುವಳಿಕೆಗಾಗಿನ ಪ್ರಶಸ್ತಿಯನ್ನು ಕೊಟ್ಟಿತು. ತನಗೆ ಬಂದ ಪ್ರಶಸ್ತಿಯ ಹಣವನ್ನೆಲ್ಲಾ ಸೂ ಕಿ ಅವರು ಬರ್ಮಾ ದೇಶದ ಜನರ ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿಗಾಗಿನ ನಿಧಿ ರೂಪವಾಗಿ ಪರಿವರ್ತಿಸಿದರು.

ಕೌಟುಂಬಿಕ ಹಿನ್ನೆಲೆ[ಬದಲಾಯಿಸಿ]

ಸೂ ಕಿ ಅವರ ತಂದೆ ಆಂಗ್ ಸಾನ್ ಆಧುನಿಕ ಬರ್ಮಾದ ತಂದೆ ಎನಿಸಿಕೊಂಡಿದ್ದಾರೆ. ಆಂಗ್ ಸಾನ್ ೧೯೪೭ರಲ್ಲಿ ಬರ್ಮಾ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರಾದರೂ ಅದೇ ವರ್ಷ ಅವರ ವಿರೋಧಿಗಳಿಂದ ಹತ್ಯೆಗೊಳಗಾದರು[೨]. ಈಕೆಯ ತಮ್ಮ ೮ ವರ್ಷದವನಿದ್ದಾಗ ತೀರಿಕೊಂಡ. ಅಣ್ಣ ಕ್ಯಾಲಿಫೋರ್ನಿಯಾಕ್ಕೆ ತೆರಳಿ ಅಮೇರಿಕ ದೇಶದ ನಾಗರಿಕತೆ ಪಡೆದುಕೊಂಡ. ತಾಯಿ ಭಾರತ ಹಾಗೂ ನೇಪಾಳ ದೇಶಗಳಿಗೆ ರಾಯಭಾರಿಯಾಗಿದ್ದರು. ಆಂಗ್ ಸಾನ್ ಸೂ ಕಿ ಭಾರತದಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ೧೯೬೪ರಲ್ಲಿ ರಾಜಕೀಯ ಶಾಸ್ತ್ರದ ಪದವಿ ಪಡೆದರು. ಮುಂದೆ ಆಕ್ಸಫರ್ಡ್ ನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ನ್ಯೂಯಾರ್ಕ್ ಗೆ ತೆರಳಿದರು. ಅಲ್ಲಿ ಅವರ ಮದುವೆಯಾಗಿ ಎರಡು ಮಕ್ಕಳು ಹುಟ್ಟಿದರು. ನಂತರ ಲಂಡನ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ . ಮಾಡಿದರು. ಮುಂದೆ ಸಿಮ್ಲಾದಲ್ಲಿ ಎರಡು ವರ್ಷ ಇದ್ದರು. ನಂತರ ಬರ್ಮಾ ಸರಕಾರದ ಸೇವೆಯಲ್ಲಿ ಕೆಲಕಾಲ ಇದ್ದರು.

ದಿಗ್ಬಂಧನ[ಬದಲಾಯಿಸಿ]

ಮುಂದೆ ೧೯೮೮ರಲ್ಲಿ ತಾಯಿಯ ಅನಾರೋಗ್ಯದ ಕಾರಣ ಬರ್ಮಾಕ್ಕೆ ಮರಳಿದರು. ನಂತರ ಪ್ರಜಾಸತ್ತೆಯ ಪರವಾದ ಚಳುವಳಿಯ ಮುಂದಾಳತ್ವ ವಹಿಸಿದರು. ಪತಿಗೆ ಅನಾರೋಗ್ಯವುಂಟಾಗಿ ಪರಿಸ್ಥಿತಿ ಗಂಭೀರವಾದಾಗ್ಯೂ ಬರ್ಮಾದ ಆಡಳಿತವು ಅವರಿಗೆ ಬರ್ಮಾದೊಳಕ್ಕೆ ಪ್ರವೇಶಿಸಲು ಬಿಡಲಿಲ್ಲ. ಆಂಗ್ ಸಾನ್ ಸೂಕಿಯವರಿಗೇ ದೇಶದಿಂದ ಹೊರಹೋಗಿ ಗಂಡನನ್ನು ಭೆಟ್ಟಿಯಾಗುವುದಕ್ಕಾಗಿ ಸೂಚಿಸಿತು. ಒಮ್ಮೆ ಬರ್ಮಾ ತೊರೆದರೆ ಮತ್ತೆ ಒಳಬರಲು ಬರ್ಮಾ ಆಡಳಿತವು ಬಿಡಲಿಕ್ಕಿಲ್ಲ ಎಂದು ಆಂಗ್ ಸಾನ್ ಸೂಕಿ ಬರ್ಮಾ ಬಿಡಲು ಒಪ್ಪಲಿಲ್ಲ. ಅವರ ಪತಿಯು ೧೯೯೯ರಲ್ಲಿ ತೀರಿಕೊಂಡರು. ೧೯೮೯ರಲ್ಲಿ ಮೊದಲ ಬಾರಿಗೆ ಗೃಹಬಂಧನದಲ್ಲಿ ಇಟ್ಟಾಗಿನಿಂದ ಅವರಿಗೆ ತಮ್ಮ ಪತಿಯನ್ನು ಕೇವಲ ಐದುಬಾರಿ ಮಾತ್ರ ಭೆಟ್ಟಿಯಾಗಲು ಸಾಧ್ಯವಾಯಿತು. ಮಕ್ಕಳು ಯುನೈಟೆಡ್ ಕಿಂಗಡಂನಲ್ಲಿ ಇರುವ ಕಾರಣ ಆಂಗ್ ಸಾನ್ ಸೂ ಕಿ ಮಕ್ಕಳಿಂದಲೂ ದೂರವಾಗಿದ್ದರು. ಅವರು ಬಂಧನದಲ್ಲಿದ್ದಾಗ ಅವರನ್ನು ಭೇಟಿ ಮಾಡಲು ಕೆಲವೊಂದು ಪ್ರತಿಷ್ಟಿತ ರಾಷ್ಟ್ರಗಳಿಂದ ಬಂದ ಅಂತರರಾಷ್ಟ್ರೀಯ ಗಣ್ಯರಿಗೆ ಮಾತ್ರ ಅವಕಾಶವಿತ್ತು. ಉಳಿದಂತೆ ಅವರು ಏಕಾಕಿ ಜೀವನ ಕಳೆಯುವ ಸ್ಥಿತಿ ಇತ್ತು. ಒಬ್ಬ ಪತ್ರಕರ್ತರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಯಿತಾದರೂ ಅವರು ದೇಶದಿಂದ ಹೊರಹೋಗುವಾಗ ಅವರ ಬಳಿ ಇದ್ದ ಫಿಲ್ಮ್ ರೋಲ್ ಅಂಥಹ ಎಲ್ಲಾ ಸಾಮಗ್ರಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಬಿಡುಗಡೆ[ಬದಲಾಯಿಸಿ]

ವಿಶ್ವದೆಲ್ಲೆಡೆಯಿಂದ ಆಂಗ್ ಸಾನ್ ಸೂ ಕಿ ಅವರನ್ನು ಬಿಡುಗಡೆ ಮಾಡಲು ಒತ್ತಡ ಹೊಂದಿದ್ದ ಬರ್ಮಾ ಸರ್ಕಾರ ೨೦೧೦ರ ವರ್ಷದ ನವೆಂಬರ್ ತಿಂಗಳಲ್ಲಿ ತನಗಿಷ್ಟ ಬಂದ ಹಾಗೆ ಚುನಾವಣೆ ನಡೆಸಿಕೊಂಡು, ಚುನಾವಣೆ ಮುಗಿದ ಒಂದು ವಾರದ ನಂತರದಲ್ಲಿ ೧೩ ನವಂಬರ್ ೨೦೧೦ರಂದು ಸೂ ಕಿ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಿತು.

ವಿರೋಧಪಕ್ಷವಾಗಿ ಪ್ರವೇಶ[ಬದಲಾಯಿಸಿ]

೨೦೧೨ರ ವರ್ಷದ ಏಪ್ರಿಲ್ ಮಾಸದಲ್ಲಿ ಆಂಗ್ ಸಾನ್ ಸೂ ಕಿ ಅವರನ್ನೊಳಗೊಂಡಂತೆ ಅವರ ಪಕ್ಷವು ಬರ್ಮಾದಲ್ಲಿನ ಕೆಲವೊಂದು ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ೪೫ ಸ್ಥಾನಗಳಲ್ಲಿ ೪೩ ಸ್ಥಾನಗಳನ್ನು ಗಳಿಸಿತು. ಸೂ ಕಿ ಅವರು ಹೇಳುವಂತೆ ಚುನಾವಣೆಯಲ್ಲಿ ಫಲಿತಾಂಶವನ್ನು ತನ್ನ ಪರವಾಗಿಸಿಕೊಳ್ಳಲು ಅಲ್ಲಿನ ಸರ್ಕಾರ ಸಾಕಷ್ಟು ಅಕ್ರಮಗಳನ್ನು ನಡೆಸಿತು.ಸೂ ಕಿ ಅವರಿಗೆ ಅನಾರೋಗ್ಯ ಉಂಟಾಗಿ ಸರಿಯಾಗಿ ಪ್ರಚಾರವನ್ನೂ ಮಾಡಿಕೊಳ್ಳಲು ಆಗಲಿಲ್ಲ. ಆದರೂ ಸೂ ಕಿ ಮತ್ತು ಅವರ ಸಂಗಡಿಗರಿಗೆ ದೊರೆತ ಬಹುಮತ ಅತ್ಯಂತ ಬೃಹತ್ತಾಗಿತ್ತು. ಅದನ್ನು ಅಲ್ಲಿನ ಸರ್ಕಾರಕ್ಕೆ ಅಲ್ಲಗೆಳೆಯಲಾಗಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂ ಕಿ ಅವರ ಪರವಾಗಿರುವ ನಿಲುವುಗಳನ್ನು ಒಪ್ಪದೆ ವಿಧಿ ಇಲ್ಲದ ಸ್ಥಿತಿಯಲ್ಲಿದ್ದ ಬರ್ಮಾದ ಸರ್ಕಾರ ಸೂ ಕಿ ಮತ್ತು ಆಕೆಯ ಸಂಗಡಿಗರ ಗೆಲುವನ್ನು ದೃಢೀಕರಿಸಿತು. ಆದರೆ ಪ್ರಮಾಣ ಸ್ವೀಕರಿಸುವಾಗ “ನಮ್ಮ ದೇಶದ ಸಂವಿಧಾನವನ್ನು ಗೌರವಿಸುತ್ತೇನೆ” ಎಂದು ಹೇಳಲು ಸೂ ಕಿ ಅವರಿಗೆ ಮನಸ್ಸಿರಲಿಲ್ಲ. ಆದರೆ, ಎಲ್ಲೋ ಹೊರಗಿದ್ದು ಹೋರಾಡುವುದಕ್ಕಿಂತ ಆಡಳಿತ ಪಕ್ಷದೊಡನೆ ವಿರೋಧಪಕ್ಷವಾಗಿ ಕುಳಿತು ಹೋರಾಡುವುದೇ ಅರ್ಥಪೂರ್ಣ ಎಂಬ ನಿಲುವಿನಿಂದ ಅವರು ತಮ್ಮ ದೇಶದ ಸಂಸತ್ತನ್ನು ಪ್ರವೇಶಿಸಿದರು.

ಮತ್ತೊಮ್ಮೆ ವಿಶ್ವದೆಲ್ಲೆಡೆ ಸಂಚಾರ[ಬದಲಾಯಿಸಿ]

ಸೂ ಕಿ ಅವರು ಇದೀಗ ವಿಶ್ವದ ಹಲವೆಡೆ ಸಂಚರಿಸುವ ಹಾಗಾಗಿದೆ. ೧೯೯೧ರ ವರ್ಷದಲ್ಲಿ ಘೋಷಿತವಾಗಿದ್ದ ನೊಬೆಲ್ ಪಾರಿತೋಷಕವನ್ನು ಜೂನ್ ೨೦೧೨ ಮಾಸದಲ್ಲಿ ಸ್ವೀಕರಿಸಿದ್ದಾರೆ.

೨೦೧೫ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ[ಬದಲಾಯಿಸಿ]

ಆಂಗ್ ಸಾನ್ ಸೂ ಕಿ 2015ರ ವರ್ಷದಲ್ಲಿ ನಡೆಯುವ ಬರ್ಮಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಬರ್ಮ ಕ್ಯಾಂಪೇನ್ ಜಾಲತಾಣದಲ್ಲಿ ಆಂಗ್ ಸ್ಯಾನ್ ಸೂಕಿ ಯವರ ಬದುಕಿನ ಕುರಿತ ಬರಹ[ಶಾಶ್ವತವಾಗಿ ಮಡಿದ ಕೊಂಡಿ]
  2. "ಇರಾವಡ್ಡಿ ಜರ್ನಲ್ ವರದಿ". Archived from the original on 2013-12-02. Retrieved 2017-07-09.