ಅಸಾಧಾರಣ ಮಕ್ಕಳು

ವಿಕಿಪೀಡಿಯ ಇಂದ
Jump to navigation Jump to search

ಮಾನಸಿಕವಾಗಿ ಅಥವಾ ದೈಹಿಕವಾಗಿ ಹುಟ್ಟಿನಿಂದ ಅಥವಾ ಅನಂತರದ ಕಾರಣದಿಂದ ವೈಕಲ್ಯ ಹೊಂದಿದ ಮಕ್ಕಳು, ಅಂದರೆ ಸಾಧಾರಣ ಮಕ್ಕಳಿಗಿಂತ ಮನಸ್ಸು ಮತ್ತು ಅಂಗಗಳಲ್ಲಿ ಭಿನ್ನವಾಗಿರುವವರು (ಟಿಪಿಕಲ್ ಚಿಲ್ಡ್ರನ್ಸ್‌); ಮಾನಸಿಕ ವೈಕಲ್ಯವಿರುವ ಮಕ್ಕಳಿಗೆ ರೂಢಿಯಲ್ಲಿ ಈ ಹೆಸರಿದೆ. ಬುದ್ಧಿಶಕ್ತಿಯಲ್ಲಿರುವ ವ್ಯತ್ಯಾಸಗಳನ್ನು ಮಾನಸಿಕ ಪರೀಕ್ಷೆಗಳಿಂದ ನಿರ್ಣಯಿಸಬಹುದು. ಸಾಧಾರಣ ಮಕ್ಕಳ ಐ. ಕ್ಯೂ. 100 ಆಗಿದ್ದರೆ ಮಾನಸಿಕ ವೈಕಲ್ಯವಿರುವ ಅಂದರೆ ಅಸಾಧಾರಣ ಮಕ್ಕಳ ಐ. ಕ್ಯೂ. ಎಪ್ಪತ್ತಕ್ಕಿಂತ ಕಡಿಮೆ ಅಥವಾ 140ಕ್ಕಿಂತ ಹೆಚ್ಚು (ಇವರು ಅತಿಬುದ್ಧಿವಂತರು) ಇರುವುದು. ಅಸಾಧಾರಣ ಮಕ್ಕಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು. 1. ಐ. ಕ್ಯೂ. 50-70ರವರೆಗೆ ಇರುವ ಮಕ್ಕಳು. ಇವರಿಗೆ ಪ್ರಾಥಮಿಕ ವಿದ್ಯಾಭ್ಯಾಸ ಪುರೈಸಲು ಸಾಧ್ಯವಿದೆ. ಇದಕ್ಕಿಂತ ಹೆಚ್ಚು ಮಟ್ಟದ ವಿದ್ಯಾಭ್ಯಾಸ ಸಾಧ್ಯವಾಗದು. ಇವರಿಗೆ ಪ್ರತ್ಯೇಕ ತರಗತಿಗಳಲ್ಲಿ ಶಿಕ್ಷಣವಿತ್ತರೆ ಅವರ ಕಲಿಯುವಿಕೆ ಚೆನ್ನಾಗಿ ಮುಂದುವರಿಯುವುದು. ಇಂಥವರು ಅಕ್ಷರಸ್ಥರಾಗುವರೇ ವಿನಾ ವಿದ್ಯಾವಂತರಾಗಲಾರರು. ಸಮಾಜದಲ್ಲಿ ಸಾಧಾರಣವಾದ ಕೆಲಸಗಳನ್ನು ಮಾಡಿ ತಮ್ಮ ಜೀವನೋಪಾಯವನ್ನು ಗಳಿಸುವರು. 2. ಐ. ಕ್ಯೂ 30-50 ರವರೆಗೆ ಇರುವ ಮಕ್ಕಳು. ಅಕ್ಷರಾಭ್ಯಾಸವನ್ನು ಮಾಡಲು ಸಹ ಸಾಧ್ಯವಿಲ್ಲ. ಇವರಿಗೆ ಪ್ರತ್ಯೇಕ ಶಾಲೆಗಳಲ್ಲಿ ತಕ್ಕ ತರಬೇತನ್ನು ಪಡೆದಿರುವ ಉಪಾಧ್ಯಾಯರ ಮೂಲಕ ಅತಿ ಸುಲಭವಾದ ಕೆಲಸಕಾರ್ಯಗಳನ್ನು ಮಾಡುವುದನ್ನೂ ತಮ್ಮ ನಿತ್ಯ ಕಾರ್ಯಗಳನ್ನು ಮಾಡುವುದನ್ನೂ ಕಲಿಸಬಹುದು. 3. ಐ. ಕ್ಯೂ. 30ಕ್ಕಿಂತ ಕಡಿಮೆ ಇರುವ ಮಕ್ಕಳು. ಇವರಿಗೆ ಏನನ್ನು ಮಾಡಲೂ ಸಾಧ್ಯವಿಲ್ಲ. ಇವರನ್ನು ಪ್ರತ್ಯೇಕ ಸಂಸ್ಥೆಗಳಲ್ಲಿ ಇಟ್ಟು ರಕ್ಷಿಸ ಬೇಕಾಗುವುದು. 4. ಅತಿ ಬುದ್ಧಿವಂತ ಮಕ್ಕಳು (ಐ. ಕ್ಯೂ. 140 ಕ್ಕಿಂತ ಹೆಚ್ಚು). ಇವರಿಗೂ ಪ್ರತ್ಯೇಕವಾದ ತರಬೇತನ್ನು ಕೊಡಬೇಕಾಗುವುದು. ಸಾಧಾರಣ ಶಾಲೆಗಳಲ್ಲಿ ಇವರ ಬುದ್ಧಿಶಕ್ತಿಗೆ ಸಾಕಾಗುವಷ್ಟು ಅವಕಾಶಗಳಿರುವುದಿಲ್ಲ; ಶಿಕ್ಷಣಸೌಲಭ್ಯಗಳೂ ಇರುವುದಿಲ್ಲ. ಭಾವಜೀವನದಲ್ಲಿ ಸರಿಯಾದ ಬೆಳೆವಣಿಗೆಯನ್ನು ಹೊಂದದಿರುವ ಮಕ್ಕಳು ಅನೇಕ ವರ್ತಾನಾಸಮಸ್ಯೆಗಳಿಗೆ ತುತ್ತಾಗುವರು. ಮನೆಯಿಂದ ಓಡಿಹೋಗುವುದು, ಅತಿ ಹೆಚ್ಚಾಗಿ ಕೋಪಗೊಳ್ಳುವುದು, ಹೆಬ್ಬೆಟ್ಟನ್ನು ಚೀಪುತ್ತ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವುದು, ಹಾಸಿಗೆಯಲ್ಲಿ ಮೂತ್ರವಿಸರ್ಜಿಸಿಕೊಳ್ಳುವುದು, ತೊದಲು ಮಾತನ್ನು ಆಡುವುದು ಮುಂತಾದುವು ವರ್ತಾನಾಸಮಸ್ಯೆಗಳು. ಇವು ಉಂಟಾಗುವುದಕ್ಕೆ ತಂದೆತಾಯಿಗಳೂ, ಕುಟುಂಬದ ವಾತಾವರಣವೂ ಕಾರಣ. ಕೆಲ ತಂದೆ ತಾಯಿಗಳು ಮಕ್ಕಳನ್ನು ಅತಿ ಮುದ್ದಿನಿಂದ ಬೆಳೆಸಿ, ಅವರ ಭಾವಜೀವನದಲ್ಲಿ ವೈಪರೀತ್ಯವನ್ನು ಉಂಟುಮಾಡುವರು. ಹೀಗೆಯೇ ಮಕ್ಕಳನ್ನು ಪ್ರೀತಿಯಿಂದ ನೋಡದೆ ತಿರಸ್ಕರಿಸಿದಾಗಲೂ ಭಾವಜೀವನ ಸರಿಯಾಗಿರುವುದಿಲ್ಲ. ಅಣ್ಣತಮ್ಮಂದಿರಲ್ಲಿ ಅಥವಾ ಅಕ್ಕ ತಂಗಿಯರಲ್ಲಿ ಅತಿ ಹೆಚ್ಚಾದ ದ್ವೇಷ ಭಾವಜೀವನದ ವೈಪರೀತ್ಯವನ್ನು ಉಂಟುಮಾಡುವುದು. ಮಲತಾಯಿಯ ದ್ವೇಷವೂ ಇಂಥ ವರ್ತನೆಗೆ ಕಾರಣವಾಗಬಹುದು. ಇದರ ಪರಿಣಾಮ ವಿದ್ಯಾಭ್ಯಾಸದ ಮೇಲೂ ಆಗಬಹುದು. ಓದುವುದರಲ್ಲಿ ಉಂಟಾಗುವ ಕಷ್ಟ ಇಂಥ ಭಾವಜೀವನದ ವೈಪರೀತ್ಯದಿಂದ ಉಂಟಾಗ ಬಹುದು. ತಂದೆ ತಾಯಿಗಳು ಇಂಥ ಮಕ್ಕಳನ್ನು ವರ್ತಾನಾಚಿಕಿತ್ಸಾಲಯಗಳಿಗೆ ಕರೆದುಕೊಂಡು ಹೋಗಿ, ಅವರಿಗೆ ತಕ್ಕ ಚಿಕಿತ್ಸೆಯನ್ನು ಮಾಡಿಸುವುದಲ್ಲದೆ ತಮ್ಮ ವರ್ತನೆಯಲ್ಲೂ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು. ಸಾಮಾಜಿಕ ವರ್ತನೆಯಲ್ಲಿ ವೈಪರೀತ್ಯ ಅಸಾಧಾರಣವರ್ತನೆಗೆ ಕಾರಣವಾಗಬಹುದು. ಮಕ್ಕಳು ಸಾಮಾಜಿಕ ನಿಯಮಗಳನ್ನು ತಿರಸ್ಕರಿಸಿ ಸುಳ್ಳುಹೇಳುವುದು, ಕಳ್ಳತನಮಾಡುವುದು, ಮನೆಯಿಂದ ಓಡಿಹೋಗುವುದು ಮುಂತಾದ ಅಪರಾಧಗಳಲ್ಲಿ ತೊಡಗುವರು. 16-18 ವರ್ಷಗಳಿಗೆ ಮೇಲ್ಪಟ್ಟ ವ್ಯಕ್ತಿಗಳು ಇಂಥ ಕಾರ್ಯಗಳನ್ನು ಮಾಡಿದರೆ ಅವರನ್ನು ಪೊಲೀಸರು ಹಿಡಿದು ನ್ಯಾಯಸ್ಥಾನದ ಮೂಲಕ ಶಿಕ್ಷೆಗೆ ಗುರಿಪಡಿಸುವರು. ಇದೇ ಕಾರ್ಯಗಳನ್ನು 16 ವರ್ಷದೊಳಗಿರುವ ಮಕ್ಕಳು ಮಾಡಿದರೆ, ಅವರ ಶಿಕ್ಷಣ ಸರಿಯಾಗಿಲ್ಲವೆಂದು ಅವರನ್ನು ಪ್ರತ್ಯೇಕ ಶಾಲೆಗಳಿಗೆ ಕಳುಹಿಸಿ ಅವರಿಗೆ ತಕ್ಕ ತರಬೇತನ್ನು ಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡುವುದು. ಇಂಥ ಮಕ್ಕಳಿಗೆ ಪ್ರತ್ಯೇಕ ಪೊಲೀಸರನ್ನೂ ನ್ಯಾಯಾಧೀಶರನ್ನೂ ಸಮಾಜ ಸೇವಕರನ್ನೂ ಕೆಲವು ದೇಶಗಳಲ್ಲಿ ನಿಯಮಿಸಿರುವರು.