ವಿಷಯಕ್ಕೆ ಹೋಗು

ಅಷ್ಟಷಟ್ಪದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾನೆಟನ್ನು ಕನ್ನಡಿಗರು ಅಷ್ಟಷಟ್ಪದಿ, ಸುನೀತ ಎಂದು ಕರೆದರು. ಸಾನೆಟ್ - ಇಟಲಿ ಸಾಹಿತ್ಯದಿಂದ ಇಂಗ್ಲಿಷ್ ಭಾಷೆ ಎರವಲು ಪಡೆದುಕೊಂಡ ಭಾವಗೀತೆಯ ಒಂದು ಕಾವ್ಯರೂಪ.

ಚರಿತ್ರೆ

[ಬದಲಾಯಿಸಿ]

ಇಂಗ್ಲಿಷ್ ಸಾಹಿತ್ಯದಲ್ಲಿ ಮೊದಲು ಈ ಪ್ರಕಾರವನ್ನು ಬಳಸಿದವರು ಥಾಮಸ್ ವಯೆಟ್ (1503-42) ಹಾಗೂ ಸರೆಯ ಆರ್ಲ್ ಹೆನ್ರಿ ಹೆವಾರ್ಡ್ (1517-47). ಈ ಪ್ರಕಾರವನ್ನು ಹೆಚ್ಚು ಜನಪ್ರಿಯಗೊಳಿಸಿದವ ಷೇಕ್ಸ್‍ಪಿಯರ್ (1564-1611). ಈತ 154 ಸಾನೆಟ್ ರಚಿಸಿದ್ದಾನೆ.

ಅಷ್ಟಷಟ್ಪದಿ ಲಕ್ಷಣ

[ಬದಲಾಯಿಸಿ]

ಇದು ಹದಿನಾಲ್ಕು ಪಂಕ್ತಿಯ ಕವನ. ಪ್ರತಿ ಪಂಕ್ತಿಯಲ್ಲಿ ಹತ್ತು ಅಕ್ಷರಗಳು (ಸಿಲಬಲ್ಸ್). ಈ ಕವನ ರೂಪದ ಮೊದಲ ಎಂಟು ಪಂಕ್ತಿ ಒಂದು ಭಾಗವಾದರೆ ಉಳಿದ ಆರು ಪಂಕ್ತಿಗಳು ಇನ್ನೊಂದು ಭಾಗ. ಎಂಟು ಪಂಕ್ತಿಗಳಲ್ಲಿ ಒಂದು, ನಾಲ್ಕು, ಐದು ಮತ್ತು ಎಂಟನೆಯ ಪಂಕ್ತಿಗಳಿಗೆ ಪ್ರಾಸ. ಎರಡು, ಮೂರು, ಆರು ಮತ್ತು ಏಳನೆಯ ಪಂಕ್ತಿಗಳಿಗೆ ಸಮಾನ ಪ್ರಾಸ. ಉಳಿದ ಆರು ಪಂಕ್ತಿಗಳ ಪ್ರಾಸದಲ್ಲಿ ವ್ಯತ್ಯಾಸವಾಗಬಹುದು. ಎಂಟನೆಯ ಪಂಕ್ತಿಯಿಂದ ಒಂಬತ್ತನೆಯ ಪಂಕ್ತಿಗೆ ಸಾಗುವಾಗ ಭಾವಾಭಿವ್ಯಕ್ತಿ ತಿರುವು ಪಡೆಯುತ್ತದೆ. ಮೂಲದ ಈ ಶೈಲಿಯನ್ನು ಷೇಕ್ಸ್‍ಪಿಯರ್ ಮಾರ್ಪಡಿಸಿಕೊಂಡ. ಈತನ ಸಾನೆಟ್‍ಗಳಲ್ಲಿ ಮೂರು ಸಮಾನ ಚೌಪದಿಗಳು, ಕಡೆಯಲ್ಲಿ ಪ್ರಾಸಬದ್ಧ ದ್ವಿಪದಿಗಳಿರುತ್ತವೆ. ಪ್ರಾಸ ವಿನ್ಯಾಸದಲ್ಲಿ ಒಂದು ಕ್ರಮವಿದೆ.

ಈ ಪ್ರಕಾರ, ಭಾವ ಪ್ರಕಟಣೆಗೆ ಒತ್ತು ನೀಡುತ್ತದೆ. ಮೊದಲ ನಾಲ್ಕು ಸಾಲುಗಳು ಒಂದು ಭಾವವನ್ನು ಹೇಳುತ್ತವೆ. ಇದನ್ನು ಕ್ರಮವಾಗಿ ಎರಡು ಮತ್ತು ಮೂರನೆಯ ಚೌಪದಿಗಳು ಇನ್ನಷ್ಟು ಮುಂದೆ ಕೊಂಡೊಯ್ಯುತ್ತವೆ, ಉತ್ಕಟಗೊಳಿಸುತ್ತವೆ. ಕೊನೆಯ ದ್ವಿಪದಿ ಒಟ್ಟೂ ಭಾವವನ್ನು ಸಂಗ್ರಹಿಸಿ ಮನಸ್ಸಿಗೆ ನಾಟುವಂತೆ ಹೇಳುತ್ತದೆ.

ಕನ್ನಡದಲ್ಲಿ ಸಾನೆಟಗಳು ರಚನೆ

[ಬದಲಾಯಿಸಿ]

ಕನ್ನಡದಲ್ಲಿ ಮೊಟ್ಟ ಮೊದಲು ಸಾನೆಟಗಳನ್ನು ರಚಿಸಿದವರು ಗೋವಿಂದ ಪೈ. ಗೋವಿಂದ ಪೈ ಈ ಪ್ರಕಾರವನ್ನು ಚತುರ್ದಶಪದಿ ಎಂದು ಕರೆದರು. ಮಾಸ್ತಿ ವೆಂಕಟೇಶ ಆಯ್ಯಂಗಾರ್, ಕುವೆಂಪು, ದ.ರಾ.ಬೇಂದ್ರ, ತೀ.ನಂ. ಶ್ರೀಕಂಠಯ್ಯ, ಪು.ತಿ.ನರಸಿಂಹಾಚಾರ್, ವಿ.ಕೃ. ಗೋಕಾಕ್, ವಿ. ಸೀತಾರಾಮಯ್ಯ ಮೊದಲಾದವರು ಈ ಪ್ರಕಾರ ಬಳಸಿ ಕಾವ್ಯ ರಚಿಸಿದ್ದಾರೆ. ಮಾಸ್ತಿಯವರ ಮಲಾರ, ಕುವೆಂಪು ಅವರ ಕೃತ್ತಿಕೆ ಈ ಪ್ರಕಾರದ ಪ್ರಸಿದ್ಧ ಸಂಕಲನಗಳು.

ಉಲ್ಲೇಖ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: