ಅಶ್ವಶಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುದುರೆ ಲಾಯದ ಆಂತರಿಕ ನೋಟ

ಅಶ್ವಶಾಲೆ ಜಾನುವಾರುಗಳನ್ನು, ವಿಶೇಷವಾಗಿ ಕುದುರೆಗಳನ್ನು ಇಡುವ ಒಂದು ಕಟ್ಟಡ. ಅತ್ಯಂತ ಸಾಮಾನ್ಯವಾಗಿ ಇದರರ್ಥ ಪ್ರತ್ಯೇಕ ಪ್ರಾಣಿಗಳಿಗೆ ಪ್ರತ್ಯೇಕ ಕೊಟ್ಟಿಗೆಗಳಾಗಿ ವಿಭಜಿಸಲಾದ ಒಂದು ಕಟ್ಟಡ. ಇಂದು ಅನೇಕ ಭಿನ್ನ ಪ್ರಕಾರಗಳ ಅಶ್ವಶಾಲೆಗಳು ಬಳಕೆಯಲ್ಲಿವೆ; ಉದಾಹರಣೆಗೆ, ಅಮೇರಿಕ ಶೈಲಿಯ ಕೊಟ್ಟಿಗೆಯು ಪ್ರತಿ ಕೊನೆಯಲ್ಲಿ ಒಂದು ಬಾಗಿಲು ಹೊಂದಿರುವ ಮತ್ತು ಒಳಗೆ ಪ್ರತ್ಯೇಕ ಅಂಕಣಗಳು ಅಥವಾ ಮೇಲಿನಿಂದ ಅಥವಾ ಕೆಳಗಿನಿಂದ ತೆರೆಯುವ ಬಾಗಿಲುಗಳ ಸ್ವತಂತ್ರವಾಗಿ ನಿಂತಿರುವ ಲಾಯಗಳಿರುವ ದೊಡ್ಡ ಕಟ್ಟಡವಾಗಿರುತ್ತದೆ.

ವಾಯುಗುಣ, ನಿರ್ಮಾಣ ಸಾಮಗ್ರಿ, ಐತಿಹಾಸಿಕ ಕಾಲ ಮತ್ತು ವಾಸ್ತುಶಾಸ್ತ್ರದ ಸಾಂಸ್ಕೃತಿಕ ಶೈಲಿಗಳನ್ನು ಆಧರಿಸಿ, ಅಶ್ವಶಾಲೆಯ ಬಾಹ್ಯ ವಿನ್ಯಾಸ ವ್ಯಾಪಕವಾಗಿ ಬದಲಾಗಬಹುದು. ಇಟ್ಟಿಗೆಗಳು, ಕಲ್ಲು, ಕಟ್ಟಿಗೆ ಮತ್ತು ಉಕ್ಕು ಸೇರಿದಂತೆ, ವ್ಯಾಪಕ ಶ್ರೇಣಿಯ ನಿರ್ಮಾಣ ಸಾಮಗ್ರಿಗಳನ್ನು ಬಳಸಬಹುದು. ಅಶ್ವಶಾಲೆಗಳು ಗಾತ್ರದಲ್ಲಿ ಒಂದು ಅಥವಾ ಎರಡು ಪ್ರಾಣಿಗಳಿರುವ ಸಣ್ಣ ಕಟ್ಟಡದಿಂದ ಹಿಡಿದು ನೂರಾರು ಪ್ರಾಣಿಗಳು ವಾಸಿಸಬಹುದಾದ ಕೃಷಿ ಉತ್ಸವಗಳು ಅಥವಾ ಓಟದ ಪಥಗಳಲ್ಲಿನ ಸೌಲಭ್ಯಗಳವರೆಗೆ ವ್ಯಾಪಿಸಬಹುದು.

ಅಶ್ವಶಾಲೆಯು ವಿಶಿಷ್ಟವಾಗಿ ಐತಿಹಾಸಿಕವಾಗಿ ಒಕ್ಕಲು ಜಮೀನಿನ ಮೇಲಿನ ಎರಡನೇ ಅತ್ಯಂತ ಹಳೆಯ ಕಟ್ಟಡ ಪ್ರಕಾರವಾಗಿದೆ. ವಿಶ್ವದ ಅತ್ಯಂತ ಹಳೆಯ ಕುದುರೆ ಲಾಯಗಳನ್ನು ಪ್ರಾಚೀನ ಈಜಿಪ್ಟ್‌ನ ಪಿ-ರಮೆಸೆಸ್ ನಗರದಲ್ಲಿ ಪತ್ತೆಹಚ್ಚಲಾಯಿತು ಮತ್ತು ಇವನ್ನು ಎರಡನೇ ರಮೆಸ್ಸೆಸ್ಸನು ಸ್ಥಾಪಿಸಿದ್ದನು (ಸು. ಕ್ರಿ.ಪೂ. ೧೩೦೪-೧೨೩೭). ಈ ಅಶ್ವಶಾಲೆಗಳು ಸರಿಸುಮಾರು ೧೮೨,೯೮೬ ಚದರ ಅಡಿಯನ್ನು ವ್ಯಾಪಿಸಿದ್ದು, ಚರಂಡಿಗಾಗಿ ಇಳಿಜಾರಿನ ನೆಲಗಳನ್ನು ಹೊಂದಿದ್ದವು, ಮತ್ತು ಸುಮಾರು ೪೮೦ ಕುದುರೆಗಳನ್ನು ಹಿಡಿಸುತ್ತಿದ್ದವು.[೧] ಸ್ವತಂತ್ರವಾಗಿ ನಿಂತ ಅಶ್ವಶಾಲೆಗಳ ನಿರ್ಮಾಣ ೧೬ನೇ ಶತಮಾನದಿಂದ ಆರಂಭವಾಯಿತು. ಇವು ಚೆನ್ನಾಗಿ ನಿರ್ಮಾಣಗೊಂಡಿದ್ದು ಭಾರ ಎಳೆಯುವ ಪ್ರಾಣಿಗಳಾಗಿ ಕುದುರೆಗಳ ಮೌಲ್ಯದ ಕಾರಣ ಮನೆಯ ಹತ್ತಿರವಿರುತ್ತಿದ್ದವು. ಉನ್ನತ ಸ್ಥಾನಮಾನದ ಉದಾಹರಣೆಗಳು ಧೂಳು ಕುದುರೆಗಳ ಕಣ್ಣುಗಳಲ್ಲಿ ಬೀಳುವುದನ್ನು ತಡೆಯಲು ಗಾರೆಹಚ್ಚಿದ ಛಾವಣಿಗಳನ್ನು ಹೊಂದಿರಬಹುದಿತ್ತು. ೧೯ನೇ ಶತಮಾನದ ಮಧ್ಯಭಾಗದ ಅಥವಾ ಅದಕ್ಕೂ ಮುಂಚಿನ ಪೂರ್ಣ ಒಳಾಂಗಣಗಳ (ಅಂದರೆ ಅಂಕಣಗಳು, ಮೇವಿನ ತೊಟ್ಟಿಗಳು ಮತ್ತು ಮೇವು ಬಡುಗಳಿರುವ) ತುಲನಾತ್ಮಕವಾಗಿ ಕಡಿಮೆ ಉದಾಹರಣೆಗಳು ಉಳಿದುಕೊಂಡಿವೆ.

ಸಾಂಪ್ರದಾಯಿಕವಾಗಿ, ಗ್ರೇಟ್ ಬ್ರಿಟನ್‍ನಲ್ಲಿನ ಅಶ್ವಶಾಲೆಗಳು ಮೊದಲ ಮಹಡಿಯ ಮೇಲೆ ಒಣಹುಲ್ಲಿನ ಅಟ್ಟ ಹೊಂದಿರುತ್ತಿದ್ದವು. ಬಾಗಿಲುಗಳು ಮತ್ತು ಕಿಟಕಿಗಳನ್ನು ಸಮ್ಮಿತೀಯವಾಗಿ ಹೊಂದಿಸಲಾಗುತ್ತಿತ್ತು. ಒಳಾಂಗಣವನ್ನು ಅಂಕಣಗಳಾಗಿ ವಿಭಜಿಸಲಾಗುತ್ತಿತ್ತು ಮತ್ತು ಸಾಮಾನ್ಯವಾಗಿ ಹೆಣ್ಣು ಕುದುರೆ ಅಥವಾ ಅಸ್ವಸ್ಥ ಕುದುರೆಗಾಗಿ ಒಂದು ದೊಡ್ಡ ಅಂಕಣ ಇರುತ್ತಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. "Oldest horse stables". Guinness World Records. Retrieved 2016-06-27.