ಅಶ್ವಗಂಧಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಶ್ವಗಂಧಾ
ಚಿತ್ರ:WithaniaFruit.jpg
ವೈಜ್ಞಾನಿಕ ವರ್ಗೀಕರಣ
Kingdom: Plantae
(unranked): Angiosperms
(unranked): Eudicots
(unranked): Asterids
Order: Solanales
Family: Solanaceae
Genus: Withania
Species: W. somnifera
ದ್ವಿಪದ ಹೆಸರು
Withania somnifera
(L.) Dunal
Synonyms[೧]
  • Physalis somnifera L.
  • Withania kansuensis Kuang & A. M. Lu
  • Withania microphysalis Suess.
Withania somnifera

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ 'ಹಿರೇಮದ್ದು' ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ. ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಇಂಗ್ಲೀಷ್ ನಲ್ಲಿ ಇದಕ್ಕೆ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್, ರಾಜಾಸ್ಥಾನ್, ಮದ್ಯಪ್ರದೇಶ, ಉತ್ತರಪ್ರದೇಶ, ಪಂಜಾಬ್, ಮಹಾರಾಷ್ತ್ರ, ವಾಯವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು. ಸೊಲನೇಸೀ ಕುಟುಂಬಕ್ಕೆ ಸೇರಿದ, ಔಷಧೀಯ ಮಹತ್ತ್ವವುಳ್ಳ ಸಸ್ಯ (ಪಿಂಟರ್ ಚೆರ್ರಿ). ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದಕ್ಕಿದೆ. ಇದರ ವೈಜ್ಞಾನಿಕ ಹೆಸರು ವಿತಾಸಿಯ ಸಾಮ್ನಿಫೆರ. ಸು. 1 ಮೀ ಎತ್ತರಕ್ಕೆ ಬೆಳೆಯುವ ಮೂಲಿಕೆ. ಆಫ್ರಿಕ, ಮೆಡಿಟರೇನಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.

ಮಣ್ಣು[ಬದಲಾಯಿಸಿ]

ಮರಳು ಮಿಶ್ರಿತ ಗೋಡು ಮಣ್ಣು ಅಥವಾ ಕೆಂಪುಮಣ್ಣು ಈ ಬೆಳೆಗೆ ಉತ್ತಮ. ಮಣ್ಣಿನ ರಸಸಾರ 7.5-8.0 ಇದ್ದು ನೀರು ಬಸಿದು ಹೋಗುವಂತಿರಬೇಕು.

ಹವಾಗುಣ[ಬದಲಾಯಿಸಿ]

ಅಶ್ವಗಂಧ ಹಿಂಗಾರಿನಲ್ಲಿ ಬೆಳೆಯಬಹುದಾದ ಬೆಳೆ. ಈ ಬೆಳೆಗೆ ಶುಷ್ಕ ವಾತಾರಣವೂ ಉತ್ತವ. ಬೇರುಗಳ ಬೆಳೆವಣೆಗೆಗೆ ಒಂದೆರಡು ಬಾರಿ ಮಳೆಯ ಅಗತ್ಯವೂ ಇದೆ. ವಾರ್ಷಿಕ 66-75 ಸೆಂ.ಮೀ ಮಳೆ ಬೀಳುವ ಪ್ರದೇಶಗಳು ಈ ಬೆಳೆಗೆ ಯೋಗ್ಯವಾಗಿರುತ್ತವೆ.

ತಳಿಗಳು[ಬದಲಾಯಿಸಿ]

  • ಜವಾಹರ್ ಅಸ್ಗಂಧ್-20 : ಈ ತಳಿ ಬೇರಿನಲ್ಲಿ ಶೇ. 0.27 ರಷ್ಟು ಸಸ್ಯಕ್ಷಾರ ಅಂಶವನ್ನು ಹೊಂದಿದೆ. ಪ್ರತಿ ಹೆಕ್ಟೇರಿಗೆ 639 ಕಿ.ಗ್ರಾಂ ಒಣಗಿದ ಬೇರಿನ ಇಳುವರಿಯನ್ನು ಪಡೆಯಬಹುದು.
  • ಪೋಷಿತಾ: ಈ ತಳಿಯು ಪ್ರತಿ ಹೆಕ್ಟೇರಿಗೆ 14 ಕ್ಟಿಂಟಲ್ ಒಣಗಿದ ಬೇರುಗಳ ಇಳುವರಿಯನ್ನು ಕೊಡುತ್ತದೆ.

ಬೇಸಾಯ ಸಾಮಗ್ರಿಗಳು[ಬದಲಾಯಿಸಿ]

ಕ್ರಸಂ. ವಿವರ ಎಕರೆಗೆ ಹೆಕ್ಟೇರಿಗೆ
ಬಿತ್ತನೆ ಬೀಜ (ಕಿ.ಗ್ರಾಂ.) 10-12 25-30
ಕೊಟ್ಟಿಗೆ ಗೊಬ್ಬರ (ಟನ್) ಈ ಬೆಳೆಯನ್ನು ಮಣ್ಣಿನಲ್ಲಿ ಅಳಿದು ಉಳಿದಿರುವ ಫಲವತ್ತತೆಯಲ್ಲೇ ಬೆಳೆಯಲ್ಪಡುವುದರಿಂದ ಕೊಟ್ಟಿಗೆ ಅಥವಾ ರಸಗೊಬ್ಬರಗಳ ಆವಶ್ಯಕತೆ ಇಲ್ಲ 30
ರಾಸಾಯನಿಕ ಗೊಬ್ಬರ ಆವಶ್ಯಕತೆ ಇಲ್ಲ ಆವಶ್ಯಕತೆ ಇಲ್ಲ

ಬೇಸಾಯ ಕ್ರಮಗಳು[ಬದಲಾಯಿಸಿ]

ನೇರ ಬಿತ್ತನೆ[ಬದಲಾಯಿಸಿ]

ರಾಗಿಯನ್ನು ಬಿತ್ತುವಂತೆ ಈ ಬೆಳೆಯ ಬೀಜವನ್ನು ಚೆಲ್ಲಿ (ಆಗಸ್್ಟ ತಿಂಗಳು) ಬಿತ್ತನೆ ಮಾಡಬಹುದು. ಸಾಮಾನ್ಯವಾಗಿ ಇದನ್ನು ಮಳೆಗಾಲದ ಬೆಳೆಯಾಗಿ ಬೆಳೆಯುವುದರಿಂದ, ಬಿತ್ತನೆ ಮಳೆಯನ್ನು ಅವಲಂಬಿಸುತ್ತದೆ. ಮಣ್ಣಿನಲ್ಲಿ ಸಾಕಷ್ಟು ತೇವವಿದ್ದಾಗ ಬಿತ್ತನೆ ಮಾಡಬೇಕು.

ಸಸಿಗಳ ರಕ್ಷಣೆ[ಬದಲಾಯಿಸಿ]

ನೇರವಾಗಿ ಬೀಜ ಬಿತ್ತಿ ಬೆಳೆದ ಗಿಡಗಳನ್ನು 25-30 ದಿನಗಳ ನಂತರ ಸಾಕಷ್ಟು ಅಂತರವಿರುವಂತೆ, ಹೆಚ್ಚುವರಿ ಸಸಿಗಳನ್ನು ಕೀಳಬೇಕು. 25-30 ದಿನಗಳ ಅಂತರದಲ್ಲಿ ಕಳೆ ಕೀಳುವುದರಿಂದ ಕಳೆಗಳನ್ನು ಹತೋಟಿಯಲ್ಲಿಡುವುದು ಸಾಧ್ಯ.

ಸಸ್ಯ ಸಂರಕ್ಷಣೆ[ಬದಲಾಯಿಸಿ]

  • ಕೀಟಗಳು : ಸುರಳಿಹುಳು ನುಸಿ ಮತ್ತು ಕಂಬಳಿ ಹುಳು.
  • ರೋಗಗಳು : ಬೀಜ ಕೊಳೆತ, ಸಸಿಗಳ ಕೊಳೆಯುವಿಕೆ ಹಾಗೂ ಎಲೆಸೊರಗು ರೋಗ, ನಂಜಾಣುರೋಗ.
  • ಹತೋಟಿ ಕ್ರಮ

1. ಬಿತ್ತನೆಗೆ ಮೊದಲು ಪ್ರತಿ ಕಿ.ಗ್ರಾಂ ಬೀಜಕ್ಕೆ 3 ಗ್ರಾಂ ಮ್ಯಾಂಕೊಜೆಬ್ ನಿಂದ ಉಪಚರಿಸಬೇಕು. 2. 30 ದಿನಗಳ ಬೆಳೆಗೆ 1.5 ಮಿ.ಲೀ ಮಾನೊಕ್ರೊಟೋಫಾಸ್ ಮತ್ತು 3 ಗ್ರಾಂ ಮ್ಯಾಂಕೊಜೆಬ್ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇದೇ ಸಿಂಪರಣೆಯನ್ನು 15 ದಿನಗಳ ಅನಂತರ ಪುನರಾವರ್ತಿಸಬೇಕು.

ಕೊಯ್ಲು ಮತ್ತು ಇಳುವರಿ[ಬದಲಾಯಿಸಿ]

ಜನವರಿ ತಿಂಗಳಲ್ಲಿ ಪ್ರಾರಂಭವಾಗಿ ಮಾರ್ಚ್ ತಿಂಗಳವರೆಗೂ ಮುಂದುವರೆಯುತ್ತದೆ (ಬಿತ್ತನೆಯಾದ 150-170 ದಿನಗಳ ನಂತರ). ಎಲೆಗಳು ಹಣ್ಣಾಗಿ ಒಣಗಿ ಕೆಂಪುಬಣ್ಣಕೆ ತಿರುಗಿದಾಗ ಬೆಳೆಯು ಕೊಯ್ಲಿಗೆ ಸಿದ್ಧವಾಗಿರುತ್ತದೆ. ಬೇರುಗಳ ಕೊಯ್ಲಿಗೆ ಪೂರ್ತಿ ಗಿಡವನ್ನೇ ಕಿತ್ತು 1-2 ಸೆಂಮೀ ಎತ್ತರಕ್ಕೆ ಕತ್ತರಿಸಬೇಕು. ಕೆಲವು ವೇಳೆ ಒಣಗಿದ ಗಿಡಗಳಿಂದ ಹಣ್ಣುಗಳನ್ನು ಕಿತ್ತು ಬೀಜಗಳನ್ನು ಸಂಗ್ರಹಿಸಬಹುದು. ಪ್ರತಿ ಹೆಕ್ಟೇರಿನಿಂದ ಸರಾಸರಿ 400-500 ಕಿ.ಗ್ರಾಂ ಬೇರು ಮತ್ತು 50 ಕಿ.ಗ್ರಾಂ ಬೀಜದ ಇಳುವರಿಯನ್ನು ನಿರೀಕ್ಷಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Withania somnifera (L.) Dunal". Tropicos. Missouri Botanical Garden. Retrieved 25 Feb 2012. 
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಶ್ವಗಂಧಾ&oldid=684646" ಇಂದ ಪಡೆಯಲ್ಪಟ್ಟಿದೆ