ಅವಂತೀ ದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಳನೆಯ ಶತಮಾನದಲ್ಲಿ ಅವಂತಿದೇಶದ ವಿಸ್ತಾರ

ಅವಂತೀ ದೇಶಪ್ರ.ಶ.ಪೂ. 6ನೆಯ ಶತಮಾನದಲ್ಲಿ ಕೋಸಲ, ವತ್ಸ ಮತ್ತು ಮಗಧರಾಜ್ಯಗಳ ಜೊತೆಗೆ ಪಶ್ಚಿಮ ಭಾರತದಲ್ಲಿದ್ದ ಒಂದು ಪ್ರಮುಖ ರಾಜ್ಯ. ಆ ಕಾಲಕ್ಕೆ ಭಾರತದಲ್ಲಿ ಅನೇಕ ಚಿಕ್ಕ ಮತ್ತು ದೊಡ್ಡ ರಾಜ್ಯಗಳೂ ಗಣರಾಜ್ಯಗಳೂ ಇದ್ದು ರಾಜಕೀಯ ದೃಷ್ಟಿಯಿಂದ ಅದು ಅಂದಿನ ಗ್ರೀಸ್ ದೇಶವನ್ನು ಹೋಲುತ್ತಿತ್ತು. ಆ ಕಾಲದ ವಿಷಯಗಳನ್ನು ನಾವು ಜೈನ ಮತ್ತು ಬೌದ್ಧ ಗ್ರಂಥಗಳಿಂದ ತಿಳಿಯಬಹುದು.

ಅವಂತೀ ದೇಶದ ವಿಸ್ತಾರ[ಬದಲಾಯಿಸಿ]

ಅವಂತೀ ಈಗಿನ ಮಾಳವ, ನಿಮಾರ್ ಮತ್ತು ಮಧ್ಯಪ್ರದೇಶದ ನೆರೆಯಲ್ಲಿರುವ ಪ್ರದೇಶಗಳನ್ನೊಳಗೊಂಡಿತ್ತು. ರಾಜಧಾನಿಯಾದ ಉಜ್ಜಯಿನಿಯನ್ನು ಅಚ್ಯುತಗಾಮಿಯೆಂಬ ರಾಜ ಕಟ್ಟಿದ. ಅದು ಬೌದ್ಧಧರ್ಮದ ಕೇಂದ್ರಗಳಲ್ಲೊಂದಾಗಿದ್ದು ಮಹಾತಸೇನ, ಸೋನ, ಅಭಯ ಕುಮಾರ ಮುಂತಾದ ಬೌದ್ಧಧರ್ಮದ ಅನುಯಾಯಿಗಳ ತವರೂರಾಗಿತ್ತು.

ಪ್ರದ್ಯೋತನ ಆಳ್ವಿಕೆಯಲ್ಲಿ[ಬದಲಾಯಿಸಿ]

  • ಅವಂತಿ 6ನೆಯ ಶತಮಾನದ ಆದಿಯಲ್ಲಿ ಭರತನ ವಂಶಕ್ಕೆ ಸೇರಿದ ಏಳು ಮಂದಿ ಸಮಕಾಲೀನ ರಾಜರಲ್ಲಿ ಒಬ್ಬನಾದ ವಿಸಾಭುವಿನ ಆಡಳಿತಕ್ಕೆ ಒಳಪಟ್ಟಿತು. ತರುವಾಯ ವುಲಿಕನೆಂಬುವನು ಸ್ವಾಮಿಯನ್ನು ಕೊಂದು ಮಗನಾದ ಚಂಡ ಪ್ರದ್ಯೋತ ಮಹಾಸೇನನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದ. ಆತ ಗೌತಮ ಬುದ್ಧನ ಸಮಕಾಲೀನನಾಗಿದ್ದು, ಬಹು ಬಲಾಢ್ಯ ರಾಜನಾಗಿದ್ದ.
  • ಅವನ ಕಾಲದಲ್ಲಿ ಅವಂತಿ ನೆರೆಹೊರೆಯ ರಾಜ್ಯಗಳಾದ ವತ್ಸ, ಮಗಧ ಮತ್ತು ಕೋಸಲಗಳೊಂದಿಗೆ ವೈರಭಾವದಿಂದಿತ್ತು. ವತ್ಸರಾಜನಾದ ಉದಯನ ತನ್ನ ಕಡುವೈರಿಯಾಗಿದ್ದರೂ ಪ್ರದ್ಯೋತ ಅವನ ಮೇಲೆ ದಂಡೆತ್ತಿ ಹೋಗದೆ ಉಪಾಯದಿಂದ ಅವನನ್ನು ಸೆರೆಹಿಡಿದ. ತರುವಾಯ ಅವನಿಂದ ಆನೆಗಳನ್ನು ಪಳಗಿಸುವ ವಿದ್ಯೆಯನ್ನು ಕಲಿಯಲು ತನ್ನ ಮಗಳಾದ ವಾಸವದತ್ತೆಯನ್ನು ನಿಯಮಿಸಿದ. ಆದರೆ ಕೆಲದಿನಗಳ ತರುವಾಯ ಅವರಿಬ್ಬರೂ ಪ್ರೇಮಿಗಳಾಗಿ ತಪ್ಪಿಸಿಕೊಂಡು ಓಡಿಹೋಗಿ ವಿವಾಹವಾದರು.
  • ಈ ಕಥೆ ಬಹು ಪ್ರಸಿದ್ಧವಾಗಿದ್ದು ಬೃಹತ್ಕಥೆಯಲ್ಲಿ ಕಂಡು ಬರುತ್ತದೆಯಲ್ಲದೆ, ಭಾಸಕವಿ ಈ ವಿಷಯವನ್ನಾಧರಿಸಿ ಎರಡು ಸೊಗಸಾದ ನಾಟಕಗಳನ್ನು ಬರೆದಿದ್ದಾನೆ. ಮಗಧರಾಜನಾದ ಅಜಾತಶತ್ರು ಸಹ ಪ್ರದ್ಯೋತ ತನ್ನ ರಾಜ್ಯದ ಮೇಲೆ ದಂಡೆತ್ತಿ ಬರಬಹುದೆಂದು ಶಂಕಿಸಿ ರಾಜಧಾನಿಯಾದ ರಾಜಗೃಹದ ಕೋಟೆಯನ್ನು ಬಲಪಡಿಸಿದ. ಪುರಾಣಗಳ ಪ್ರಕಾರ ಪ್ರದ್ಯೋತ ತನ್ನ ನೆರೆಹೊರೆಯ ರಾಜರನ್ನು ಅಂಕಿತದಲ್ಲಿಟ್ಟುಕೊಂಡಿದ್ದ. ಆದರೆ ಅವನು ಕ್ರೂರಿಯೂ ರಾಜನೀತಿಬಾಹಿರನೂ ಆಗಿದ್ದ.
  • ಪ್ರದ್ಯೋತ ಸು. ೨೩ ವರ್ಷಗಳ ಕಾಲ ರಾಜ್ಯವಾಳಿದ. ಅವನ ತರುವಾಯ ಪಾಲಕ, ವಿಸಾಖಯುಪ, ಆರ್ಯಕ ಮತ್ತು ನದಿವರ್ಧನರು ಅನುಕ್ರಮವಾಗಿ ೨೪, ೫೦, ೨೧ ಮತ್ತು ೨೦ ವರ್ಷಗಳ ಕಾಲ ರಾಜ್ಯಭಾರ ಮಾಡಿದರು. ಕೊನೆಯ ರಾಜ ಶಿಶುನಾಗನಿಂದ ಸೋಲಿಸಲ್ಪಟ್ಟು ಅವಂತಿ ಮಗಧರಾಜ್ಯದಲ್ಲಿ ಲೀನವಾಯಿತು.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: