ವಿಷಯಕ್ಕೆ ಹೋಗು

ಅಳಿಯ ಲಿಂಗರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಳಿಯ ಲಿಂಗರಾಜ (1823 -1874). ರಾಜಾಶ್ರಯದಲ್ಲಿದ್ದು ಸಂಸ್ಕøತ ಮತ್ತು ಕನ್ನಡ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದು ಹಲವಾರು ಗ್ರಂಥಗಳನ್ನು ರಚಿಸಿದ. ಚಂಪೂ, ಸಾಂಗತ್ಯ, ಷಟ್ಟದಿ, ಯಕ್ಷಗಾನ, ಶತಕ, ಹಾಡು, ಲಾವಣಿ-ಮೊದಲಾಗಿ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ, ಈತನ ಲೇಖನಿ ಹರಿದಿದೆ. ತಾಯಿ ಕೆಂಪದೇವಾಂಬಿಕೆ, ತಂದೆ ಲಿಂಗರಾಜ. ಮೈಸೂರು ರಾಜನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರವರ ಪೋಷಣೆಯಲ್ಲಿ ವಿದ್ಯಾವಂತನಾದವ. ರಾಜರು ದೊಡ್ಡ ಪುಟ್ಟತಾಯಮ್ಮಣ್ಣಿ, ಚಿಕ್ಕ ಪುಟ್ಟತಾಯಮ್ಮಣ್ಣಿ ಎಂಬಿಬ್ಬರನ್ನು ಇವನಿಗೆ ಕೊಟ್ಟು ಮದುವೆಮಾಡಿದ್ದುದರಿಂದ ಅಳಿಯ ಲಿಂಗರಾಜ ಎಂಬ ಹೆಸರು ಬಂದಿತು.

ಈತ ಹರಿಹರ, ರಾಘವಾಂಕ, ದೇವೇಶ್ವರ, ಹಂಪ, ನಾಗವರ್ಮ-ಮೊದಲಾದ ಪೂರ್ವಕವಿಗಳನ್ನೂ ಸ್ತುತಿಸಿದ್ದಾನೆ. ಗಯಚರಿತ್ರೆ ಮತ್ತು ನಳಕೂಬರವಿಳಾಸಗಳು ಚಂಪೂರೂಪವಾಗಿಯೂ ಯಕ್ಷಗಾನ ರೂಪವಾಗಿಯೂ ರಚಿತವಾಗಿವೆ. ನರಪತಿಚರಿತವೆಂಬ ಚಂಪೂ ಒಂದು ಅಲಂಕಾರ ಗ್ರಂಥ. ಪ್ರಭಾವತಿ ಪರಿಣಯ ವಾರ್ಧಕ ಷಟ್ಪದಿಯಲ್ಲೂ ವೀರಭದ್ರ ಶತಕ ವೃತ್ತರೂಪವಾಗಿಯೂ ಮಹಾಲಿಂಗ ಶತಕ ಕಂದ ರೂಪವಾಗಿಯೂ ಇವೆ. ಉಳಿದವುಗಳಲ್ಲಿ ಹಾಡುಗಳನ್ನೂ ಲಾವಣಿಗಳನ್ನೂ ಬಿಟ್ಟರೆ ಮಿಕ್ಕೆಲ್ಲವೂ ಯಕ್ಷಗಾನ ರೂಪವಾಗಿವೆ. ಈತನ ಕಾವ್ಯರಚನೆ ಬಹುಮುಖ್ಯವಾಗಿದ್ದರೂ ಅವುಗಳಲ್ಲಿನ ಕಾವ್ಯಮೌಲ್ಯ ಅಷ್ಟೇನೂ ಹಿರಿದಲ್ಲ.

ಕೃತಿಗಳು

[ಬದಲಾಯಿಸಿ]

ಈತ ಅಂಗದಸಂಧಾನ, ಇಂದ್ರಕೀಲ, ಕುಶಲವರ ಕಥೆ, ಕೃಷ್ಣಬಾಲಲೀಲೆ, ಕೃಷ್ಣಾರ್ಜುನರಕಾಳಗ, ಗಯಚರಿತ್ರೆ, ಗಿರಿಜಾಕಲ್ಯಾಣ, ಚಂದ್ರಾವಳೀ ಕಥೆ, ಚಂದ್ರಾವಳಿಯ ಜೋಗಿಯ ಹಾಡುಗಳು, ಚಿಕ್ಕ ಪಟ್ಟಾಭಿಷೇಕ, ಚೂಡಾಮಣಿ ಜಲಂಧರ ಕಾಳಗ, ತಾರಕವಧೆ, ದ್ರೌಪದಿ ಸ್ವಯಂವರ, ನರಪತಿ ಚರಿತೆ, ನಳಕೂಬರ ವಿಳಾಸ, ನಳಚರಿತ್ರೆ, ಪಂಚವಿಂಶತಿ ಲೀಲೆ, ಪಾರಿಜಾತಾಪಹರಣ, ಪುತ್ರಕಾಮೇಷ್ಟಿ, ಪ್ರಭಾವತೀ ಪರಿಣಯ, ಬಬ್ರುವಾಹನ ಕಾಳಗ, ಬಾಲಲೀಲೆ, ಮಕರಾಂಕಸೇನ ಕಥೆ, ಮದಾಲಸಾ ಪರಿಣಯ, ಮಹಾಲಿಂಗ ಶತಕ, ಮೈರಾವಣನ ಕಥೆ, ಮೋಡಿನಾಟಕ, ರಾಮೋದಯ ಕಥೆ, ರುಕ್ಮಾಂಗದ ಚರಿತ್ರೆ, ಲಾವಣಿಗಳು, ವನವಾಸ ರಾಮಾಯಣ, ವಾಲಿಸುಗ್ರೀವರ ಕಾಳಗ, ವಿರಾಟ ಪರ್ವ, ವೀರಭದ್ರ ಶತಕ, ಶೃಂಗಾರ-ಸೂತ್ರೋದಾಹರಣ ಪದ, ಸೀತಾಕಲ್ಯಾಣ, ಸೀತಾಪಹಾರ, ಸೀತಾ ಸ್ವಯಂವರ, ಸುಧನ್ವನ ಕಾಳಗ, ಸೇತುಬಂದ, ಸ್ಯಮಂತಕೋಪಾಖ್ಯಾನ, ಎಂಬ ಗ್ರಂಥಗಳನ್ನು ರಚಿಸಿರುವನು. ಇವಲ್ಲದೆ ಶಿವಭಕ್ತಿರತ್ನಾಕರ, ಮಹಾಲಿಂಗ ನಕ್ಷತ್ರ ಮಾಲಿಕೆ, ಶ್ರೀಕಂಠನಕ್ಷತ್ರಮಾಲಿಕೆ, ವೀರೇಶತಾರಾವಳಿ, ಲಂಕಾದಹನ ಎಂಬ ಗ್ರಂಥಗಳನ್ನು ರಚಿಸಿರುವನೆಂದು ಕೆಲವರು ಹೇಳುತ್ತಾರೆ. (ಎಸ್.ಬಿ.ಎಸ್.)