ವಿಷಯಕ್ಕೆ ಹೋಗು

ಅಲೆತಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Breakwaters create safer harbours, but can also trap sediment moving along the coast. Alamitos Bay, CA entrance channel.

ಅಲೆತಡೆ ಸಮುದ್ರದ ಅಲೆಗಳ ರಭಸ ತಡೆಯಲು ನಿರ್ಮಿಸಿದ ಕೃತಕ ತಡೆ (ಬ್ರೇಕ್ ವಾಟರ್). ಕೃತಕ ಬಂದರುಗಳಿಗೆ ಇದು ಅಲೆಗಳಿಂದ ರಕ್ಷಣೆ ಒದಗಿಸುತ್ತದೆ. ನೈಸರ್ಗಿಕ ಬಂದರುಗಳಲ್ಲಿ ರಕ್ಷಣೆ ಪೂರ್ತಿ ಮಾಡುತ್ತದೆ. ಅಲೆತಡೆಗಳನ್ನು ಸಾಮಾನ್ಯವಾಗಿ ದಡಕ್ಕೆ ಭದ್ರವಾಗಿ ಬಿಗಿಯುತ್ತಾರೆ. ಒಂದೇ ಕಟ್ಟಡವನ್ನು ದೋಣಿಗಳನ್ನು ನಿಲ್ಲಿಸುವುದಕ್ಕೂ, ಅಲೆಗಳನ್ನು ಎದುರಿಸುವುದಕ್ಕೂ ಉಪಯೋಗವಾಗುವ ಹಾಗೆ ಕಟ್ಟಬಹುದಾದರೂ ರಕ್ಷಣೆಯ ಭಾಗವೇ ಇದರಲ್ಲಿ ಮುಖ್ಯ. ಅಲೆತಡೆಗಳನ್ನು ಕಟ್ಟುವುದಕ್ಕೆ ಖರ್ಚು ವಿಶೇಷವಾಗುವುದರಿಂದ ಅವುಗಳ ಸ್ಥಾನನಿರ್ದೇಶನವನ್ನು ಜಾಗರೂಕತೆಯಿಂದ ಮಾಡಬೇಕು. ಕಟ್ಟಡದ ಮೇಲೆ ಅಲೆಗಳು ನೇರವಾಗಿ ಬಡಿದರೆ ಆಘಾತ ಹೆಚ್ಚು. ಆದರೆ ಓರೆಯಾಗಿ ಹೊಡೆದಾಗ ಕಟ್ಟಡದ ಮೇಲಿನ ಹೊಡೆತ ಕಡಿಮೆಯಾದರೂ ಬಂದರಿನ ಪ್ರವೇಶಮಾರ್ಗಕ್ಕೆ ಅಡ್ಡಲಾಗಿ ಅಲೆಗಳು ಹರಿದು ಸಮುದ್ರ ಪ್ರಕ್ಷುಬ್ಧವಾಗಿದ್ದಾಗ ಹಡಗುಗಳು ಒಳಗೆ ಬರುವುದೇ ಅಪಾಯವಾಗಬಹುದು. ಅದಕ್ಕಾಗಿ ಅಲೆತಡೆಗಳನ್ನು ಯಾವ ದಿಕ್ಕಿನಲ್ಲಿ ಕಟ್ಟಿದರೆ ಅಲೆಗಳು ಬೇರೆ ದಿಕ್ಕಿಗೆ ತಿರುಗಿ ಬಂದರಿನ ಹೊರಗಡೆಯ ತೀರಕ್ಕೆ ಬಡಿಯುವುವೋ ಆ ದಿಕ್ಕಿನಲ್ಲಿ ಕಟ್ಟಬೇಕು. ನದಿಗಳ ಅಳಿವೆಗಳಲ್ಲಿ ಬಂದರುಗಳಿರುವಾಗ ಅಲೆಗಳನ್ನು ಎಲ್ಲ ಕಾಲದಲ್ಲಿಯೂ ತಡೆಯುವುದು ಸಾಧ್ಯವಾಗಲಾರದು. ಅಂಥ ಕಡೆಗಳಲ್ಲಿ ಅಲೆಬಲೆಗಳನ್ನು (ವೇವ್-ಟ್ರ್ಯಾಪ್ಸ್) ಕಟ್ಟಬೇಕಾಗುತ್ತದೆ. ಪ್ರವೇಶನಾಲೆಯ ಪಕ್ಕಗಳಲ್ಲಿ ಸಮುದ್ರದ ಕಡೆಗೆ ಮುಖವನ್ನು ತಿರುಗಿಸಿರುವ ಈ ಆಳವಾದ ಬಾಯಿಗಳು ಅಲೆಗಳನ್ನು ಹೀರುತ್ತವೆ. ಸಮುದ್ರತೀರದಲ್ಲಿರುವ ಒಳಚಾಚುಗಳು, ಭೂಶಿರಗಳು, ತೀರಕ್ಕೆ ದೂರವಾದ ದ್ವೀಪಗಳು, ನೀರೊಳಗಣ ಬಂಡೆಗಳು-ಇವನ್ನೆಲ್ಲ ಸರಿಯಾಗಿ ಬಳಸಿಕೊಳ್ಳಬೇಕು. ಬಂದರಿನ ಪ್ರವೇಶಮಾರ್ಗದಲ್ಲಿ ಯಾವ ಅಡಚಣೆಗಳೂ ಇಲ್ಲದೆ ದೊಡ್ಡ ಹಡಗುಗಳೂ ಸರಾಗವಾಗಿ ಒಳಕ್ಕೆ ಬರುವ ಹಾಗಿರಬೇಕು. ಬಂದರಿನಲ್ಲಿರಬೇಕಾದ ನೀರಿನ ಕನಿಷ್ಠ ಆಳಕ್ಕೆ ಅನುಸಾರವಾಗಿ ಅಲೆತಡೆಯ ಕನಿಷ್ಠ ಎತ್ತರವನ್ನು ನಿರ್ಣಯಿಸಬೇಕು. ನೀರಿನ ಆಳ 23 ಮೀ.ಗಿಂತಲೂ ಹೆಚ್ಚಾದರೆ ಅಲೆತಡೆಯ ಬಾಹುಗಳ ಉದ್ದವೂ ಹೆಚ್ಚಾಗುತ್ತದೆ. ಕಟ್ಟಡದ ಖರ್ಚೂ ವಿಪರೀತವಾಗುತ್ತದೆ. ಹೂಳನ್ನೆತ್ತುವುದು (ಡ್ರೆಡ್ಜಿಂಗ್) ಹೆಚ್ಚಾಗದ ಹಾಗೂ ಆವಶ್ಯಕವಾದ ಬಂದರಿನ ವಿಸ್ತೀರ್ಣ ದೊರಕುವ ಹಾಗೂ ಅಲೆತಡೆಯ ಜಾಗವನ್ನು ಆಖೈರಾಗಿ ನಿಶ್ಚಯಿಸಬೇಕಾಗುತ್ತದೆ. ಈ ವಿಸ್ತೀರ್ಣವನ್ನು ದಡದ ಕಡೆಗೆ ಹೂಳನ್ನು ತೆಗೆಯುವುದರಿಂದಲೂ, ಸಮುದ್ರದ ಕಡೆಗೆ ಅಲೆತಡೆಯ ಉದ್ದವನ್ನು ಹೆಚ್ಚಿಸುವುದರಿಂದಲೂ ಬೇಕಾದಷ್ಟು ದೊಡ್ಡದಾಗಿ ಮಾಡಬಹುದು. ತಳಪಾಯದ ಸ್ವಭಾವದ ಮೇಲೂ ಅಲೆತಡೆಯ ಜಾಗ ಬದಲಾಗಬಹುದು. ತಳದಲ್ಲಿ ಬಹಳ ಆಳದವರೆಗೂ ಮೆದುವಾದ ಮಣ್ಣೇ ಇದ್ದರೆ ಅದಕ್ಕೆ ಕಟ್ಟಡದ ಭಾರವನ್ನು ಹೊರುವ ಸಾಮರ್ಥ್ಯವಿರುವುದಿಲ್ಲ. ಗಟ್ಟಿಯಾದ ತಳಪಾಯವಿರುವ ಕಡೆ ನೀರಿನ ಆಳ ಹೆಚ್ಚಾಗಿದ್ದರೂ ಚಿಂತೆಯಿಲ್ಲ. ಅಲೆತಡೆಯ ಪರಿಣಾಮವಾಗಿ ಸಮುದ್ರತೀರದಲ್ಲಿ ಮಣ್ಣು ಕೊರೆದು ಹೋಗಬಹುದು; ಇಲ್ಲವೆ ತುಂಬಿಕೊಳ್ಳಬಹುದು. ಅಲೆಗಳು ಸಮುದ್ರತೀರವನ್ನು ಓರೆಯಾಗಿ ಬಡಿದರೆ ಉತ್ಪನ್ನವಾಗುವ ಪ್ರವಾಹಗಳು ತೀರದ ಮಣ್ಣನ್ನು ಕೊರೆದು ಬೇರೆ ಕಡೆಗೆ ಸಾಗಿಸಬಹುದು. ಇದರಿಂದ ಅಲೆತಡೆಯ ಪಕ್ಕದಲ್ಲಿ ಕೆಲವು ಕಿಲೋಮೀಟರುಗಳವರೆಗೂ ಸಮುದ್ರತೀರದ ಆಸ್ತಿಗಳಿಗೆ ನಷ್ಟವಾಗಬಹುದು. ಭಾರತದ ಉಬ್ಬರವಿಳಿತಗಳ ವ್ಯಾಪ್ತಿಯೂ ಅಲೆತಡೆಯ ಜಾಗದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಉಬ್ಬರದ ನೀರಿನ ಇಳಿತದ ಪ್ರವಾಹ ಕಡಿಮೆಯಾಗಿದ್ದರೆ ಬಂದರಿನ ದಾರಿಯಲ್ಲಿ ಆಳ ಕಡಿಮೆಯಾಗುವುದಿಲ್ಲ. ಸಮುದ್ರವನ್ನು ಸೇರುವ ನದಿಗಳ ಪ್ರವಾಹವನ್ನೂ ಅಲೆತಡೆಯ ಜಾಗವನ್ನು ನಿರ್ಣಯಿಸುವಾಗ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ನದಿಯಲ್ಲಿ ಬರುವ ನೀರಿನ ಪ್ರಮಾಣ, ಅದರ ವೇಗ, ಮೇಲಿನಿಂದ ಬರುವ ಮೆಕ್ಕಲುಮಣ್ಣು-ಇವುಗಳಿಂದ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು.

ಮಾರುತಗಳು[ಬದಲಾಯಿಸಿ]

ಗಾಳಿಯಿಂದ ಅಲೆಗಳು ಉತ್ಪನ್ನವಾಗುತ್ತವೆ. ಬಂದರಿನ ಪ್ರವೇಶಮಾರ್ಗದಲ್ಲಿಯೂ ಒಳಗಡೆಯೂ ಹಡಗುಗಳ ಚಲನೆಗಳಿಗೆ ಗಾಳಿಯಿಂದ ತೊಂದರೆಯಾಗುವುದುಂಟು. ಸಮುದ್ರವು ವರ್ಷದ ಯಾವ ಕಾಲದಲ್ಲಿ ಶಾಂತವಾಗಿರುವುದೆಂದು ನೋಡಿ ಅಲೆತಡೆಗಳ ರಿಪೇರಿಯನ್ನು ತೆಗೆದುಕೊಳ್ಳಬೇಕು. ಭಾರತದಲ್ಲಿರುವ ಹಾಗೆ ಕ್ಲುಪ್ತಮಾರುತಗಳು (ಮಾನ್ಸೂನ್ಸ್) ಬೀಸುವ ಕಡೆ ಋತುಗಳಿಗೆ ಅನುಸಾರವಾಗಿ ಗಾಳಿಯ ದಿಕ್ಕೂ ಬಲವೂ ನಿಯತಕ್ರಮದಲ್ಲಿ ಬದಲಾಗುತ್ತವೆ. ಚಂಡಮಾರುತಗಳೂ ಸುಂಟರಗಾಳಿಗಳೂ ಕ್ಲುಪ್ತಕಾಲದಲ್ಲಿ ಬೀಸುತ್ತವೆ.

Three of the four breakwaters forming Portland Harbour
The eight offshore breakwaters at Elmer, UK

ಅಲೆಗಳನ್ನು ಹೆಚ್ಚು ಆಳವಾದ ನೀರಿನ ಅಲೆಗಳು ಮತ್ತು ಆಳ ಕಡಿಮೆಯಾದ ನೀರಿನ ಅಲೆಗಳು ಎಂದು ಎರಡು ಭಾಗವಾಗಿ ವಿಂಗಡಿಸಬಹುದು. ಅಲೆಯ ಉದ್ದದ ಅರ್ಧಕ್ಕಿಂತಲೂ ಹೆಚ್ಚು ಆಳದ ನೀರಿನ ಅಲೆಗಳು ಮೊದಲನೆಯ ವರ್ಗಕ್ಕೆ ಸೇರುತ್ತವೆ. ಇವುಗಳಲ್ಲಿ ಅಲೆಗಳ ವೇಗ ಅವುಗಳ ಉದ್ದಕ್ಕೆ ಅನುಗುಣವಾಗಿದೆ. ಆಳ ಕಡಿಮೆಯಾದ ಕಡೆ ಸಮುದ್ರದ ತಳದ ಎಳೆತಕ್ಕೆ ಅಲೆಗಳು ಒಳಪಟ್ಟು ಅಲೆಯ ವೇಗ ಕಡಿಮೆಯಾಗುತ್ತದೆ. ನೀರು ಗಾಳಿಗೆ ಒಡ್ಡಿದ ದೂರ (ಫೆಚ್) ಹೆಚ್ಚಾದಷ್ಟೂ ಗಾಳಿಯ ವೇಗವೂ ಅದು ಬೀಸುವ ಅವಧಿಯೂ ಹೆಚ್ಚಾಗಿ ಅಲೆಗಳ ಎತ್ತರವೂ ಉದ್ದವೂ ವೇಗವೂ ಹೆಚ್ಚಾಗುತ್ತವೆ. ಕೆಲವು ಸಾಗರದ ಅಲೆಗಳು ಉತ್ಪತ್ತಿಯಾದ ಜಾಗದಿಂದ ಸಾವಿರಾರು ಮೈಲಿಗಳ ದೂರ ಸಂಚರಿಸಿ ದಡವನ್ನು ಬಡಿಯುತ್ತವೆ. ಸಾಮಾನ್ಯವಾಗಿ ಸಮುದ್ರ ಮಧ್ಯದಲ್ಲಿ ಕಾಣುವ ದೊಡ್ಡ ಅಲೆಗಳು ದಡವನ್ನು ತಲುಪುವುದೇ ಇಲ್ಲ. ಆಲಿಕೆಯಂತೆ (ಫನಲ್) ಅಗಲ ಕಿರಿದಾಗುತ್ತ ಹೋಗುವ ಕೊಲ್ಲಿಯಲ್ಲಿ ಅಲೆಗಳ ಎತ್ತರವೂ ವಿಧ್ವಂಸಕ ಶಕ್ತಿಯೂ ಹೆಚ್ಚು. ಕೊಲ್ಲಿ ಬಲಿಷ್ಠವಾದ ಮಾರುತಗಳ ದಿಕ್ಕಿಗೆ ಅಭಿಮುಖವಾಗಿದ್ದರಂತೂ ಈ ಶಕ್ತಿ ಇನ್ನೂ ಹೆಚ್ಚಾಗುತ್ತದೆ. ಅಲೆಗಳು ಸಂಚರಿಸುವ ವೇಗ ಅಲೆಗಳ ಉದ್ದಕ್ಕೆ ಅನುಗುಣವಾಗಿದೆ. ಆಳವಾದ ನೀರಿನಲ್ಲಿ 600 ಉದ್ದವಾದ ಅಲೆಗಳ ಉದ್ದ 33 ನಾಟುಗಳು ಎಂದರೆ ಗಂಟೆಗೆ 31 ಕಿ.ಮೀ. ಅಲೆ ಸಮುದ್ರತೀರವನ್ನು ತಲುಪಿದಾಗ ಅದು ಒಡೆದು ಚದರಿಹೋಗುತ್ತದೆ ಇಲ್ಲವೇ ಪ್ರತಿಫಲಿತವಾಗುತ್ತದೆ. ಆಳವಿಲ್ಲದ ನೀರಿನಲ್ಲಿ ಮರಳುದಿಬ್ಬಕ್ಕೆ ತಗುಲಿದಾಗ ಅಲೆ ಒಡೆದು ಇಳಿಜಾರಾದ ದಿಬ್ಬಕ್ಕೆ ಎದುರಾಗಿ ನುಗ್ಗಿ ಬಲವನ್ನೆಲ್ಲಾ ಕಳೆದುಕೊಂಡು ಸಮುದ್ರದ ಮೇಲೆ ಹಿನ್ನೆಗೆಯುತ್ತದೆ. ದಡದ ಕಡೆಗೆ ಉರುಳುವಾಗ ಸುಮಾರಾಗಿ ಲಂಬವಾಗಿರುವ (ವರ್ಟಿಕಲ್) ಅಡಚಣೆಯನ್ನು ಬಲವಾಗಿ ಒದೆಯುತ್ತದೆ. ಒಡೆಯುವ ಅಲೆ ಒಂದು ಪರಿಮಿತ ಜಾಗದ ಮೇಲೆ ಬೀಳುವುದರಿಂದ ಅದರ ಆಘಾತ ಪ್ರತಿಫಲಿತ ಅಲೆಯ ಆಘಾತಕ್ಕಿಂತ ಹೆಚ್ಚು. ಅಲೆಗಳು ಒಡೆದ ಕಡೆ ಸಮುದ್ರದ ತೀರ ಕೊರೆದುಹೋಗುತ್ತದೆ. ಅಂಥ ಇಳಿಕಲುಗಳು ಮತ್ತಷ್ಟು ಕೊರೆಯದ ಹಾಗೆ ಮಾಡಲು ದೊಡ್ಡ ಕಾಂಕ್ರೀಟಿನ ದಿಮ್ಮಿಗಳನ್ನು ಪೇರಿಸಬೇಕಾಗುತ್ತದೆ. ಆದರೆ ಲಂಬವಾದ ಅಡಚಣೆಯ ಮೇಲೆಯೇ ಅಲೆಗಳು ಒಡೆದರೆ ಅಲ್ಲಿ ಆಳ ಸಾಕಷ್ಟು ಇಲ್ಲದೆ ಹೋದಾಗ ಅಡಚಣೆಯ ತಳದಲ್ಲಿನ ಮರಳು ತೊಳೆದುಹೋಗುತ್ತದೆ. ನೈಸರ್ಗಿಕ ಸನ್ನಿವೇಶಗಳ ಮಾದರಿಗಳನ್ನು ಜಲಶಾಸ್ತ್ರದ ಪ್ರಯೋಗಶಾಲೆಗಳಲ್ಲಿ ಕಟ್ಟಿ ಅಲೆಗಳ ಒತ್ತಡವನ್ನು ಈಗ ಅಳೆಯುತ್ತಾರೆ. ಹೀಗೆ ಶುದ್ಧವಿಜ್ಞಾನದ ನೆರವನ್ನು ಪಡೆದು ಪ್ರಯೋಗವಿಜ್ಞಾನ ಸಂವಿಧಾನಗಳನ್ನು ಶಾಸ್ತ್ರೀಯವಾಗಿ ಮಾಡುವುದರಿಂದ ಇಂಥ ಅನಿಶ್ಚಿತ ವಾದ ಪರಿಸ್ಥಿತಿಗಳಲ್ಲಿ ತುಂಬ ಅನುಕೂಲವಾಗುತ್ತಿದೆ. ಪ್ರತಿಫಲಿತ ಅಲೆಯಿಂದ ಅಲೆತಡೆಯ ಮೇಲಿನ ಆಘಾತ ಚದರ ಅಡಿಗೆ ಒಂದು ಟನ್ನಿನಷ್ಟಿರಬಹುದು. ಆದರೆ ಅಲೆಗಳು ಒಡೆಯುವ ಮಿತವಾದ ಜಾಗದಲ್ಲಿ ಇದು ಚದರ ಅಡಿಗೆ 6 ಟನ್ನುಗಳವರೆಗೂ ಹೋಗಬಹುದು.

ಅಲೆತಡೆಗಳ ನಮೂನೆಗಳು[ಬದಲಾಯಿಸಿ]

ಮುಖ್ಯವಾಗಿ ಇವು ಮೂರು ನಮೂನೆಗಳಲ್ಲಿರುತ್ತವೆ: 1. ಭರ್ತಿ ಕಲ್ಲಿನ ಮಾದರಿ; 2. ಸಂಕೀರ್ಣ ಮಾದರಿ; 3. ಲಂಬವಾದ ಗೋಡೆಯ ಮಾದರಿ.

ಭರ್ತಿಕಲ್ಲಿನ ಮಾದರಿ[ಬದಲಾಯಿಸಿ]

3D simulation of wave motion near a sea wall.[೧]
The same wave motion at the Visby breakwater

ಇಲ್ಲಿ ಕಲ್ಲುಗಳನ್ನು ಒಂದರ ಮೇಲೊಂದು ಪೇರಿಸಿ ಹೊರಗಡೆ ದೊಡ್ಡ ಕಲ್ಲುಗಳಿಂದ ರಕ್ಷಣೆಯನ್ನು ಕೊಡುತ್ತಾರೆ. ಇದನ್ನು ಉಬ್ಬರವಿಳಿತದ ವ್ಯಾಪ್ತಿ ಹೆಚ್ಚಾಗಿರದೆ ಇರುವ ಕಡೆ 18 ಮೀ. ನೀರಿನ ಆಳದವರೆಗೆ ಉಪಯೋಗಿಸಬಹುದು. ತಳಪಾಯ ಗಟ್ಟಿಯಾಗಿರದ ಕಡೆ ಕಲ್ಲಿನ ರಾಶಿ ಕೆಳಕ್ಕೆ ಇಳಿದರೆ ಹೊಸದಾಗಿ ಕಲ್ಲುಗಳನ್ನು ತುಂಬಿ ಸರಿಮಾಡಬಹುದು. ಈ ನಮೂನೆಯಲ್ಲಿ ಭರತದ ಕೆಳಮಟ್ಟದಲ್ಲಿ ಅಲೆಗಳಿಂದ ಕಟ್ಟಡಕ್ಕೆ ಅಪಾಯ ಹೆಚ್ಚು. ಒಳಕ್ಕೆ ಬರುವ ಅಲೆಗಳು ಕಲ್ಲುಗಳನ್ನು ಎತ್ತಿ ಸಾಗಿಸುತ್ತವೆ. ನೀರು ಹಿಂದಕ್ಕೆ ಸರಿದಾಗ ಕಲ್ಲುಗಳು ಕೆಳಕ್ಕೆ ಉರುಳುತ್ತವೆ. ಏರಿಯ ಆಕಾರ ಅನೇಕ ವಿಧ. ಸಾಮಾನ್ಯವಾಗಿ ಮಧ್ಯದಲ್ಲಿ ಸಣ್ಣ ಕಲ್ಲುಗಳನ್ನು ತುಂಬಿ ಇಳಿಕಲಿನ ಹೊರಭಾಗದಲ್ಲಿ ದಪ್ಪ ಕಲ್ಲುಗಳನ್ನು ಜೋಡಿಸುತ್ತಾರೆ. ತಳಪಾಯ ಮೆದುವಾಗಿರುವ ಕಡೆ ಕಲ್ಲಿನ ರಾಶಿಯೇ 6 ರಿಂದ 10ಮೀ.ವರೆಗೂ ಕೆಳಕ್ಕೆ ಇಳಿದ ನಿದರ್ಶನಗಳಿವೆ. ಏರಿಯ ಹೊರಭಾಗದಲ್ಲಿ ಮೇಲುಗಡೆ ಕಲ್ಲು ಇಲ್ಲವೆ ವಿಶಿಷ್ಟವಾದ ಆಕಾರದ ಕಾಂಕ್ರೀಟಿನ ದಿಮ್ಮಿಗಳನ್ನು ಮಾಡಿ ಅಡ್ಡಾದಿಡ್ಡಿಯಾಗಿ ಪೇರಿಸುತ್ತಾರೆ. ಭಾರವಾದ ಕಲ್ಲುಗಳನ್ನು ಏರಿಯ ನೆತ್ತಿಯ ಮೇಲೂ ಸಮುದ್ರದ ಕಡೆ ನೀರಿನ ಕೆಳಮಟ್ಟಕ್ಕಿಂತ 3-6 ಮೀ. ಆಳದವರೆಗೂ ತುಂಬುತ್ತಾರೆ. ಅಲೆಗಳ ಬಲವಾದ ಒದೆತವನ್ನು ಎದುರಿಸಬೇಕಾಗಿರುವುದರಿಂದ ಈ ಕೆಲಸಕ್ಕೆ ಉಪಯೋಗಿಸುವ ಭಾರವಾದ ಕಲ್ಲಿನ ತೂಕ 10-20 ಟನ್ನುಗಳವರೆಗೂ ಕಾಂಕ್ರೀಟಿನ ದಿಮ್ಮಿಗಳ ತೂಕ 40 ಟನ್ನುಗಳವರೆಗೂ ಹೋಗುತ್ತದೆ. ನಡುವಂತರದ ಕಲ್ಲುಗಳ ತೂಕ 1-10 ಟನ್ನುಗಳವರೆಗೂ ಸಣ್ಣ ಕಲ್ಲುಗಳ ತೂಕ 100 ಪೌಂಡುಗಳವರೆಗೂ ವ್ಯತ್ಯಾಸವಾಗುತ್ತದೆ. ಈ ಅಲೆತಡೆಗಳನ್ನು ಕಟ್ಟುವಾಗ ದಸಿಗಳ ತಳಪಾಯದ (ಪೈಲ್ ಫೌಂಡೇಷನ್ಸ್) ಮೇಲೆ ನಿಲ್ಲಿಸಿದ ಊರೆಕಟ್ಟುಗಳ (ಟ್ರೆಸ್ಲ್ಸ್) ಮೇಲೆ ರೈಲ್ವೆಕಂಬಿಗಳನ್ನೆಳೆದು ಟ್ರಾಲಿಗಳ ಮೇಲೆ ಭಾರವಾದ ಕಲ್ಲುಗಳನ್ನು ಸಾಗಿಸಬೇಕಾಗುತ್ತದೆ. ವಿಶೇಷಭಾರವನ್ನು ಹೊರಬಲ್ಲ ಆಧುನಿಕ ಟ್ರಕ್ಕುಗಳೂ ಕ್ರೇನುಗಳೂ ಬಂದಮೇಲೆ ಕೆಲಸ ಸುಲಭವಾಗಿದೆ. ಈಚೆಗೆ ಒಂದು ಅಲೆತಡೆಯ ಮುಂದೆ ಇನ್ನೊಂದನ್ನು ಕಟ್ಟುವುದು ರೂಢಿಯಾಗುತ್ತಿದೆ. ಈ ಕ್ರಮದಲ್ಲಿ ಎರಡು ಪ್ರತ್ಯೇಕವಾದ ಕಲ್ಲಿನ ಏರಿಗಳಿವೆ. ಹಿಂದಿನದು ದೊಡ್ಡ ಏರಿ. ಎರಡು ಏರಿಗಳಿಗೂ ನಡುವೆ ಅಲೆಗಳು ಸ್ತಬ್ಧವಾಗುವುದಕ್ಕೆ ಅವಕಾಶವಿದೆ. ಸಮುದ್ರದ ಕಡೆಯ ಏರಿ ತಗ್ಗಾಗಿದ್ದು ದಡದ ಕಡೆಯ ದೊಡ್ಡ ಏರಿಯನ್ನು ಕಾಪಾಡುತ್ತದೆ. ಉಬ್ಬರವಿಳಿತಗಳ ವ್ಯಾಪ್ತಿ ಕಡಿಮೆಯಾಗಿರುವ ಕಡೆ ಈ ಮಾದರಿಯ ಉಪಯೋಗ ಹೆಚ್ಚು.

ಸಂಕೀರ್ಣ ಮಾದರಿ (ಕಾಂಪೊಸಿಟ್ ಟೈಪ್)[ಬದಲಾಯಿಸಿ]

ನೀರು ಬಹಳ ಆಳವಾಗಿರುವ ಕಡೆಗಳಲ್ಲಿಯೂ ಉಬ್ಬರವಿಳಿತಗಳ ವ್ಯಾಪ್ತಿ ಹೆಚ್ಚಾಗಿರುವ ಕಡೆಗಳಲ್ಲಿಯೂ ತಳದಿಂದ ಮೇಲಿನವರೆಗೂ ಭರ್ತಿಕಲ್ಲನ್ನೇ ತುಂಬುವುದು ಸಾಧ್ಯವಾಗದು. ಅಂಥ ಕಡೆಗಳಲ್ಲಿ ಭರ್ತಿಕಲ್ಲಿನ ತಳಪಾಯದ ಮೇಲೆ ಬೇರೆ ನಮೂನೆಯ ಕಟ್ಟಡವನ್ನು ಕಟ್ಟುತ್ತಾರೆ. ಭದ್ರವಾದ ಮೇಲುಕಟ್ಟಡ ನೀರಿನ ಮಟ್ಟದವರೆಗೂ ಹೋಗಬಹುದು ಅಥವಾ ನೀರಿನ ಮಟ್ಟಕ್ಕೆ ಕೊಂಚ ಕೆಳಗಡೆ ಇರಬಹುದು. ಈ ನಮೂನೆಯಲ್ಲಿ ದಪ್ಪಕಲ್ಲು ಹೆಚ್ಚಾಗಿ ಬೇಕಾಗುವುದಿಲ್ಲ. ಅಲೆಗಳಿಂದ ತೊಂದರೆಯಿಲ್ಲ. ಮೇಲು ಕಟ್ಟಡದ ಲಂಬವಾದ ಗೋಡೆಗಳ ಮೇಲೆ ಅಲೆಗಳು ಹೊಡೆಯುವುದರಿಂದ ಅದು ಕೆಳಕ್ಕೆ ಉರುಳದಷ್ಟು ಬಲವಾಗಿರಬೇಕು. ಮೇಲು ಕಟ್ಟಡವನ್ನು ತಳಪಾಯದ ಏರಿಯ ಮೇಲೆ ಕಾಂಕ್ರೀಟಿನ ದಿಮ್ಮಿಗಳನ್ನು ವರಸೆಯಾಗಿ ಇಟ್ಟು ಕಟ್ಟಬಹುದು. ಇದರ ಎತ್ತರ ಉಬ್ಬರವಿಳಿತದ ವ್ಯಾಪ್ತಿಯ ಮೇಲೆ ಹೋಗುತ್ತದೆ. ನೀರಿನ ಮಟ್ಟದಿಂದ 10 ಮೀ. ಆಳದವರೆಗೂ ಬಲಿಷ್ಠವಾದ ಅಲೆಗಳು ಕಟ್ಟಡಗಳನ್ನು ಉರುಳಿಸಬಲ್ಲವು. ಫ್ರಾನ್ಸಿನಲ್ಲಿ ಮಾರ್ಸೇಲ್ಸಿನ ಅಲೆತಡೆಯನ್ನು ಆರಿಸಿದ ಭರ್ತಿಕಲ್ಲುಗಳಿಂದ ಕಟ್ಟಿದ್ದಾರೆ. ಸಮುದ್ರದ ಕಡೆಯ ಇಳಿಕಲಿನಲ್ಲಿ ಭಾರವಾದ ಕಾಂಕ್ರೀಟಿನ ದಿಮ್ಮಿಗಳನ್ನು ಕಲ್ಲಿನ ಏರಿಯ ಮೇಲೆ ಅಡ್ಡಾದಿಡ್ಡಿಯಾಗಿ ತುಂಬಿ ಏರಿಯ ಕಲ್ಲು ಕೊರೆದುಹೋಗದ ಹಾಗೆ ಮಾಡಿದ್ದಾರೆ. ಒಳಮುಖದಲ್ಲಿ ಹಡಗಿನ ಭರ್ತಿಕಟ್ಟೆಯಿದೆ (ಕ್ವೇ). ಏರಿಯ ಮೇಲುಭಾಗದಲ್ಲಿ ಕಾಂಕ್ರೀಟಿನ ದಿಮ್ಮಿಗಳನ್ನಿಟ್ಟು ರಕ್ಷಣೆಯನ್ನು ಕೊಟ್ಟಾಗ ಈ ವರಸೆಗಳು ನೀರಿನ ಹೊಡೆತದಿಂದ ಒಂದು ಹೆಚ್ಚು, ಇನ್ನೊಂದು ಕಮ್ಮಿಯಾಗಿ ಇಳಿಯುವುದರಿಂದ ಸಮುದ್ರದ ಕಡೆಯ ಮುಖವನ್ನು ಕಾಪಾಡುವುದು ಮಾರ್ಸೇಲ್ಸಿನಲ್ಲಿ ಜಾಗರೂಕತೆಯಿಂದ ಮಾಡಬೇಕಾದ ಕೆಲಸ. ಭರ್ತಿಕಲ್ಲನ್ನೇ ಉಬ್ಬರವಿಳಿತದ ಮೇಲಿನ ಮಟ್ಟದವರೆಗೂ ತುಂಬಿ ಮೇಲುಗಡೆ ಕಾಂಕ್ರೀಟಿನ ಮೇಲುಕಟ್ಟಡ ವನ್ನೂ ಕೈಪಿಡಿಯ ಗೋಡೆಯನ್ನೂ ಕಟ್ಟಿದಾಗ ಸಮುದ್ರದ ಮುಖದ ಕಡೆ ಕಲ್ಲುಗಳು ಉರುಳಿ ಅಪಾರವಾದ ನಷ್ಟವಾಗುತ್ತದೆ. ಅದಕ್ಕಾಗಿ 40 ಟನ್ ತೂಕದ ಕಾಂಕ್ರೀಟಿನ ದಿಮ್ಮಿಗಳನ್ನು ಅಡ್ಡಾದಿಡ್ಡಿಯಾಗಿ ಭರತದ ಕೆಳಮಟ್ಟದ ಮೇಲುಗಡೆ ತುಂಬುತ್ತಾರೆ. ಅಲೆಗಳು ಪ್ರಬಲವಾಗಿದ್ದಾಗ 300 ಟನ್ನಿನ ತೂಕದ ಕಾಂಕ್ರೀಟಿನ ದಿಮ್ಮಿಗಳನ್ನೂ ಜಾರಿಸಬಲ್ಲವು. ಸಂಕೀರ್ಣ ಮಾದರಿಯ ಅಲೆತಡೆಗಳ ಮೇಲುಕಟ್ಟಡವನ್ನು ಕಟ್ಟುವಾಗ ಟೊಳ್ಳಾದ ಇಟ್ಟಿಗೆಗಳೂ ಬಹು ಭಾರವಾದ ಕಲ್ಲುಗಳೂ ಬಳಕೆಗೆ ಬರುವುದಕ್ಕೆ ಮುಂಚೆ ಪ್ರಬಲಿತ ಕಾಂಕ್ರೀಟ್ ಇಲ್ಲವೆ ಉಕ್ಕಿನಿಂದ ಮಾಡಿದ ಕೇಸಾನುಗಳನ್ನು ತಳಪಾಯದಲ್ಲಿ ಉಪಯೋಗಿಸುತ್ತಿದ್ದರು. ಸಮುದ್ರತಳ ಕೊರೆದು ಹೋಗದಂತೆ ಗಟ್ಟಿಯಾಗಿದ್ದರೆ ಕೇಸಾನುಗಳನ್ನು ಧಾರಾಳವಾಗಿ ಉಪಯೋಗಿಸಬಹುದು. ಹಿಂದಿನ ಕಾಲದಲ್ಲಿ ದಡದ ಮೇಲೆ ಕೇಸಾನುಗಳನ್ನು ಕಟ್ಟಿ ದೋಣಿಗಳಲ್ಲಿ ಸಾಗಿಸಿ ಸರಿಯಾದ ಜಾಗದಲ್ಲಿ ಇಳಿಸುವುದು ಕಷ್ಟವಾಗಿತ್ತು. ಆದರೆ ಈಚೆಗೆ ತಾಂತ್ರಿಕ ಕೌಶಲ ಹೆಚ್ಚಾಗಿದೆ. ಎರಡನೆಯ ಮಹಾಯುದ್ಧದ ಕಾಲದಲ್ಲಿ 60 ಮೀ. ಉದ್ದ, 18 ಮೀ. ಅಗಲ, 10 ಮೀ. ಎತ್ತರದ ಕೇಸಾನುಗಳನ್ನು ಕಟ್ಟಿ ಇಂಗ್ಲಿಷ್ ನಾಲೆಯ ಮೇಲೆ ಸಾಗಿಸಿ ಕೃತಕವಾದ ಬಂದರನ್ನು ಉತ್ತರ ಫ್ರಾನ್ಸಿಗೆ ಮುತ್ತಿಗೆ ಹಾಕುವಾಗ ನಿರ್ಮಿಸಿದರು.

  • ಕೊಲಂಬೊ ಬಂದರಿನ ಅಲೆತಡೆಯನ್ನು ಸಮುದ್ರದ ತಳದ ಮೇಲೆ ಭರ್ತಿಕಲ್ಲಿನ ಏರಿಯನ್ನು ಕಟ್ಟಿ, ಅದರ ತಳಪಾಯದ ಮೇಲೆ ಇಳಿಜಾರಾದ ಕಾಂಕ್ರೀಟಿನ ದಿಮ್ಮಿಗಳ ಸಾಲುಗಳನ್ನು ಉಬ್ಬರದ ಮೇಲಿನ ಮಟ್ಟಕ್ಕೂ ಎತ್ತರವಾಗಿ ಕಟ್ಟಿ, ಅದರ ಮೇಲು ಭಾಗದಲ್ಲಿ ಕಾಂಕ್ರೀಟನ್ನು ರಸ್ತೆಯ ಮಟ್ಟದಲ್ಲಿ ತುಂಬಿದ್ದಾರೆ. ಸಮುದ್ರದ ಕಡೆಯ ಮುಖದಲ್ಲಿ 30 ಟನ್ ತೂಕದ ಭಾರವಾದ ಕಾಂಕ್ರೀಟಿನ ದಿಮ್ಮಿಗಳನ್ನು ಅಲೆಗಳನ್ನು ಒಡೆಯುವುದಕ್ಕಾಗಿ ಅಡ್ಡಾದಿಡ್ಡಿಯಾಗಿ ಭರ್ತಿಕಲ್ಲಿನ ಏರಿಯ ಮೇಲುಗಡೆ ತುಂಬಿದ್ದಾರೆ.
  • ಮದರಾಸಿನ ಬಂದರಿನಲ್ಲಿಯೂ ಮಾರ್ಮಗೋವ ಬಂದರಿನಲ್ಲಿಯೂ ಅಲೆತಡೆಗಳು ಇದೇ ಮಾದರಿಯಾಗಿವೆ.
  • ಪೆಸಿಫಿಕ್ ಸಾಗರದ ಉತ್ತರ ದಿಕ್ಕಿನ ಚಂಡಮಾರುತಗಳನ್ನು ಎದುರಿಸಬೇಕಾಗಿರುವ ಚಿಲಿಯ ವಾಲ್ಪರೈಸೊ ಬಂದರಿನಲ್ಲಿ ಅಲೆತಡೆಗಳು ಸಂಕೀರ್ಣ ಮಾದರಿಯಲ್ಲಿವೆ. ಒಳಭಾಗದಲ್ಲಿ ಆಳವಾದ ಭರ್ತಿಕಲ್ಲಿನ ಏರಿಯ ಮೇಲೆ ಮಟ್ಟವಾಗಿ ವರಸೆಯಾಗಿ ಕಾಂಕ್ರೀಟಿನ ದಿಮ್ಮಿಗಳನ್ನು ಜೋಡಿಸಿದೆ. ಇದರ ಸಮುದ್ರದ ಕಡೆಯ ಇಳಿಕಲಿನಲ್ಲಿ ಕೊಲಂಬೊ ಬಂದರಿನಲ್ಲಿ ಇರುವ ಹಾಗೆ ಕಾಂಕ್ರೀಟಿನ ದಿಮ್ಮಿಗಳನ್ನು ಅಡ್ಡಾದಿಡ್ಡಿಯಾಗಿ ತುಂಬಿದ್ದಾರೆ. ಹೊರಭಾಗದ ಮೇಲು ಕಟ್ಟಡದಲ್ಲಿ ಭದ್ರಕಾಂಕ್ರೀಟಿನ ಕೇಸಾನುಗಳನ್ನು ದಡದ ಮೇಲೆ ತಯಾರಿಸಿ ದೋಣಿಗಳ ಮೇಲೆ ಸ್ಥಳಕ್ಕೆ ತಂದು ಸಮುದ್ರದ ಸರಾಸರಿ ಮಟ್ಟದ ಕೆಳಗೆ 12 ಮೀ. ಆಳದಲ್ಲಿ ಇಳಿಸಿದ್ದಾರೆ. ಒಂದೊಂದು ಕೇಸಾನೂ 19.5ಮೀ. ಉದ್ದ, 15.6 ಮೀ. ಅಗಲ, 14.7 ಮೀ. ಎತ್ತರವಾಗಿದೆ. ಈ ಕೇಸಾನುಗಳ ಒಳಗಡೆ ಕಾಂಕ್ರೀಟನ್ನು ತುಂಬಿದ್ದಾರೆ. ಇವುಗಳ ಮೇಲುಗಡೆ ಕಾಂಕ್ರೀಟಿನ ಮೇಲುಕಟ್ಟಡವನ್ನೂ ಕೈಪಿಡಿಯ ಗೋಡೆಯನ್ನೂ ಕಟ್ಟಿದ್ದಾರೆ.
  • ಕೆನಡದಲ್ಲಿ ವೆಲ್ಲಂಡ್ ಹಡಗಿನ ನಾಲೆಯ ರಕ್ಷಣೆಗಾಗಿ ಕಟ್ಟಿದ ಅಲೆತಡೆಗಳಲ್ಲಿ 33 ಮೀ. ಉದ್ದ, 11.8 ಮೀ. ಅಗಲ, 10.2ಮೀ. ಎತ್ತರದ ಕಾಂಕ್ರೀಟಿನ ಕೇಸಾನುಗಳನ್ನು ಉಪಯೋಗಿಸಿದ್ದಾರೆ. ಸಂಯುಕ್ತಸಂಸ್ಥಾನ ಗಳಲ್ಲಿ ಮಹಾಸರೋವರಗಳ ಪ್ರದೇಶದಲ್ಲಿ ಕಟ್ಟಿದ ಸಂಕೀರ್ಣ ಮಾದರಿಯ ಅಲೆತಡೆಗಳಲ್ಲಿಯೂ ಕಾಂಕ್ರೀಟಿನ ಕೇಸಾನುಗಳನ್ನು ಬಳಸಿದ್ದಾರೆ. ಒಳಗಡೆ ಕಲ್ಲನ್ನು ತುಂಬಿದ್ದಾರೆ.

ಲಂಬವಾದ ಗೋಡೆಯ ಮಾದರಿ[ಬದಲಾಯಿಸಿ]

ಇವು ನೀರಿನಲ್ಲಿ ತಳಪಾಯವನ್ನು ಹಾಕಿ ಎತ್ತಿದ ಗಟ್ಟಿಯಾದ ಕಟ್ಟಡಗಳು. ಇವನ್ನು ಸಮುದ್ರದ ತೀರಕ್ಕೆ ಸೇರಿಸಿದ್ದರೆ ಅಲೆಗಳು ಅವುಗಳ ಮೇಲೆ ಬಡಿಯುವುದರಿಂದ ಸಾಕಷ್ಟು ಭದ್ರವಾಗಿರಬೇಕು. ಇಂಗ್ಲೆಂಡಿನಲ್ಲಿ ಡೋವರ್ ಬಂದರಿನ ಅಲೆತಡೆ ಈ ಮಾದರಿಯಲ್ಲಿದೆ. ಅಲೆತಡೆಗಳನ್ನು ಕಾಂಕ್ರೀಟಿನ ದಿಮ್ಮಿಗಳಿಂದ ವರಸೆಯಾಗಿ ಕಟ್ಟಿದ್ದಾರೆ. ಉಬ್ಬರವಿಳಿತದ ತಗ್ಗಿನ ನೀರಿನ ಮಟ್ಟದ ಮೇಲುಗಡೆ ಹೊರಗೋಡೆಯನ್ನು ಕಗ್ಗಲ್ಲುಗಾರೆಯಿಂದ ಕಟ್ಟಿದ್ದಾರೆ. ಈ ದಿಮ್ಮಿಗಳನ್ನು ಸಂಚರಿಸುವ ಕ್ರೇನುಗಳಿಂದ ಕೆಳಕ್ಕೆ ಇಳಿಸಲಾಯಿತು.

  • ಇಂಗ್ಲೆಂಡಿನಲ್ಲಿ ಟೈನ್ ನದಿಯ ಮುಖದಲ್ಲಿರುವ ಎರಡು ಅಲೆತಡೆಗಳನ್ನು ಮೊದಲು ಸಂಕೀರ್ಣ ನಮೂನೆಯಲ್ಲಿ ಕಟ್ಟಿದರು. ಆದರೆ ಕೆಲವು ಕಾಲದ ಮೇಲೆ ಒಂದು ಕಂಬ ಅದರ ತಳಪಾಯ ಕೊರೆದು ಹೋದದ್ದರಿಂದ ಬಿರುಕು ಬಿಟ್ಟಿತು. ಅದನ್ನು ಆಮೇಲೆ ಡೋವರ್ ಬಂದರಿನ ಅಲೆತಡೆಯ ಮಾದರಿಯಲ್ಲಿ ಕಟ್ಟಿದರು.
  • ಅಮೆರಿಕದ ಮಹಾಸರೋವರಗಳಲ್ಲಿ ಲಂಬವಾದ ಮುಖಗಳುಳ್ಳ ಅಲೆತಡೆಗಳನ್ನು ಇಳಿಸಿದ ಕೇಸಾನು ಗಳಿಂದ ಈ ನಮೂನೆಯ ಅಲೆತಡೆಗಳನ್ನು ಫ್ರಾನ್ಸಿನಲ್ಲಿ ಕಟ್ಟಿದ್ದಾರೆ. ಕಾಂಕ್ರೀಟಿನ ಕೇಸಾನುಗಳಿಂದಲೂ ಅಲೆತಡೆಗಳನ್ನು ಕಟ್ಟಬಹುದು.

ಅಲೆತಡೆಗಳ ಸಂವಿಧಾನವನ್ನು ಮಾಡುವಾಗ ಒಂದೊಂದು ಕಟ್ಟಡದ ಮೇಲೂ ಬೀಳುವ ಅಲೆಗಳ ವೈಲಕ್ಷಣ್ಯ , ಅಲೆಗಳ ಒತ್ತಡಗಳನ್ನು ಪರಿಶೀಲಿಸಿ ಅಲೆತಡೆಯ ನಮೂನೆ ಮತ್ತು ಅದರ ಅಡ್ಡಕೊಯ್ತದ ರೂಪ (ಕ್ರಾಸ್ ಸೆಕ್ಷನ್) ಇವನ್ನು ನಿರ್ಧರಿಸಬೇಕು.

ಉಲ್ಲೇಖಗಳು[ಬದಲಾಯಿಸಿ]

  1. MEDUS. (2011) Marine Engineering Division of University of Salerno. Retrieved online 10 April 2011 from: http://www.diciv.unisa.it/docenti/dentale/medus_.php (MEDUS)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಅಲೆತಡೆ&oldid=1059941" ಇಂದ ಪಡೆಯಲ್ಪಟ್ಟಿದೆ