ಅಲೆಗ್ಸಾಂಡರ್ ಗಾರ್ಡ್ನರ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಅಲೆಗ್ಸಾಂಡರ್ ಗಾಡರ್ನರ್, 1785-1877. 1785ರಲ್ಲಿ ಜನಿಸಿದ ಒಬ್ಬ ಐರಿಷ್ ಸೈನಿಕ. ಅದೃಷ್ಟವನ್ನರಸುತ್ತಾ ಆಫ್ಘಾನಿಸ್ತಾನಕ್ಕೆ ಬಂದ ಈತ ಹಬೀಬುಲ್ಲಾಖಾನನ ಆಶ್ರಯ ಪಡೆದ. ಮಾವನಾದ ಅಮೀರ್ ದೋಸ್ತ್ ಮಹಮ್ಮದನೊಡನೆ ಹಬೀಬುಲ್ಲಾ ಅಧಿಕಾರಕ್ಕಾಗಿ ನಡೆಸಿದ ಹೋರಾಟಗಳಲ್ಲಿ ಈತನೂ ಪಾಲ್ಗೊಂಡ. ಆದರೆ ಇವನು ಬಹಳ ಕಾಲ ಅಲ್ಲಿರಲಿಲ್ಲ. 1826ರ ಸುಮಾರಿಗೆ ಪಂಜಾಬಿಗೆ ಬಂದು ರಣಜಿತ್ ಸಿಂಗನ ಕೆಳಗೆ ಕರ್ನಲ್ ಹುದ್ದೆ ಪಡೆದ. ಸಿಖ್ ಸೈನಿಕರಿಗೆ ಯುದ್ಧದ ತರಬೇತು ನೀಡುತ್ತಿದ್ದ ಈತ, ರಣಜಿತ್ ಸಿಂಗ್ ಆಫ್ಘನ್ನರೊಡನೆ ಹೂಡಿದ ಕದನಗಳಲ್ಲಿ ಅವನಿಗೆ ಬೆಂಬಲವಾಗಿದ್ದ, ರಣಜಿತ್ಸಿಂಗ್ನ ಮರಣಾನಂತರ ಅವನ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ನಡೆದ ಹೋರಾಟಗಳ ಪ್ರತ್ಯಕ್ಷದರ್ಶಿಯಾಗಿದ್ದ. ಬ್ರಿಟಿಷರು ಸಿಖ್ಖರೊಡನೆ ನಡೆಸಿದ ಮೊದಲನೆಯ ಕದನದಲ್ಲಿ ಇವನು ಯಾವ ಪಾತ್ರವನ್ನೂ ವಹಿಸದಿದ್ದರೂ ಅಂದಿನ ಘಟನೆಗಳ ಹಲವು ವಿವರಗಳನ್ನು ಬರೆದಿಟ್ಟಿದ್ದಾನೆ. ತದನಂತರ ಜಮ್ಮು-ಕಾಶ್ಮೀರದ ದೊರೆ ಗುಲಾಬ್ ಸಿಂಗ್ನ (ನೋಡಿ- ಗುಲಾಬ್-ಸಿಂಗ್) ಅಧೀನದಲ್ಲಿ ಕೆಲಕಾಲ ದುಡಿದ.
ಬರಹ
[ಬದಲಾಯಿಸಿ]ಈತ ಬರೆದಿಟ್ಟಿರುವ ಸಮಕಾಲೀನ ಘಟನೆಗಳ ವರದಿಗಳನ್ನು ಮೆಮ್ವಾರ್ಸ ಆಫ್ ಅಲೆಗ್ಸಾಂಡರ್ ಗಾಡರ್ನರ್ ಎಂಬ ಗ್ರಂಥದಲ್ಲಿ ಹ್ಯೂ ಪಿಯರ್ಸ್ ಸಂಗ್ರಹಿಸಿದ್ದಾನೆ.
1831ರಲ್ಲಿ ಸೈಯದ್ ಅಹಮದನ ನೇತೃತ್ವದಲ್ಲಿ ಮಹಮ್ಮದೀಯರು ಸಿಖ್ಖರ ವಿರುದ್ದ ದಂಗೆ ಎದ್ದು ಮನ್ಸೆಹ್ರಾದ ಬಳಿಯ ಬಾಲಾಕೋಟ್ ಎಂಬಲ್ಲಿ ನಡೆಸಿದ ಧಾಳಿಯಲ್ಲಿ ಸಿಖ್ ಸೈನಿಕರಿಂದ ಅಹಮದ್ ಕೊಲ್ಲಲ್ಪಟ್ಟದ್ದನ್ನು ಕೆಲವೇ ಗಜಗಳ ದೂರದಲ್ಲಿ ನಿಂತು ನೋಡಿದೆನೆಂದು ಗಾಡರ್ನರ್ ಹೇಳಿಕೊಂಡಿದ್ದಾನೆ; ಆಗ ಯಾವ ದೇವದೂತನೂ ಈ ವೀರನನ್ನು ದಿವ್ಯಲೋಕಕ್ಕೆ ಕೊಂಡೊಯ್ಯಲು ಬರಲಿಲ್ಲವೆಂದು ವ್ಯಂಗ್ಯವಾಗಿ ನುಡಿದಿದ್ದಾನೆ. 1839ರ ಅಕ್ಟೋಬರ್ 9ರಂದು ರಣಜಿತ್ಸಿಂಗ್ನ ಮಗನಾದ ಖಡಕ್ಸಿಂಗನ ಮಂತ್ರಿ ಜೇತ್ಸಿಂಗ್ ಬಾಜ್ವಾನನ್ನು ಧ್ಯಾನ್ಸಿಂಗ್ ಡೋಗ್ರಾ ಎಂಬವನು ರಾಜಕುಮಾರನ ಎದುರಿನಲ್ಲೇ ಇರಿದು ಕೊಂದುದನ್ನು ಕಂಡೆನೆಂಬುದು ಅವನ ಹೇಳಿಕೆ. ಖಡಕ್ಸಿಂಗ್ 1840ರ ನವೆಂಬರ್ 5ರಂದು ಮರಣ ಹೊಂದಿದಾಗ, ಅವನ ದೇಹವನ್ನೂ ಅವನೊಡನೆ ಸತಿ ಹೋದ ಅವನ ಇಬ್ಬರು ಪತ್ನಿಯರ ದೇಹಗಳನ್ನೂ ಚಿತೆಗೆ ಒಪ್ಪಿಸಿ ಅವನ ಮಗ ನವ್ನಿಹಲ್ಸಿಂಗ್ ಅರಮನೆಗೆ ಹಿಂದಿರುಗುತ್ತಿದ್ದಾಗ ಕೋಟೆಯ ದ್ವಾರದ ಕಮಾನು ಕುಸಿದು ನವ್ನಿಹಲ್ಸಿಂಗ್ ಸತ್ತನೆಂದು ಹೇಳುತ್ತಾನೆ. ಗಾಡರ್ನರ್ ಬಖೈರಿನಲ್ಲಿರುವ ಇಂಥ ಅನೇಕ ಹೇಳಿಕೆಗಳಲ್ಲಿ ಹಲವು ಸತ್ಯಕ್ಕೆ ದೂರವೆಂದು ಇತಿಹಾಸಕಾರರು ತೋರಿಸಿಕೊಟ್ಟಿದ್ದಾರೆ.