ವಿಷಯಕ್ಕೆ ಹೋಗು

ಅಲೆಕ್ಸಾಂಡರ್ ಪೋಪರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆಕ್ಸಾಂಡ್ ಪೋಪ್ ೧(ಸಿಸ್ತೈನ್ ಚಾಪೆಲ್)

ಅಲೆಕ್ಸಾಂಡರ್ ಪೋಪ್ I[ಬದಲಾಯಿಸಿ]

ಪೋಪ್ ಪರಂಪರೆಯಲ್ಲಿ ಐದನೆಯವ. ಅಧಿಕಾರಾವಧಿ 106-115 ಅಥವಾ 109-110. ಹುಟ್ಟಿನಿಂದ ರೋಮನ್ ನಾಗಿದ್ದು ಟ್ರೋಜನರ ಕಾಲದಲ್ಲಿ ಚರ್ಚಿನ ಆಡಳಿತ ವಹಿಸಿದ್ದು ವೀರಮರಣ ಪಡೆದ. ಕ್ರೈಸ್ತರು ಶುದ್ಧೀಕರಣಕ್ಕಾಗಿ ಉಪ್ಪು ಬೆರಸಿದ ಪವಿತ್ರ ಜಲವನ್ನು ಉಪಯೋಗಿಸುವ ಪದ್ಧತಿಯನ್ನು ಬಳಕೆಗೆ ತಂದನೆಂದು ಹೇಳಲಾಗಿದೆ. 1855ರಲ್ಲಿ ರೋಮಿನ ಸಮೀಪದಲ್ಲಿ ಈತನ ಸಮಾಧಿ ಇರುವ ವಿಷಯ ಗೊತ್ತಾಯಿತು.[೧]

ಅಲೆಕ್ಸಾಂಡರ್ ಪೋಪ್ II[ಬದಲಾಯಿಸಿ]

1061-73. ಪೂರ್ವನಾಮ ಎನ್ಸಲ್ಮ್. ಕುಲೀನ ಕುಟುಂಬ ದವ. ಸುಧಾರಣೆಗಳನ್ನು ಬಳಕೆಗೆ ತರಲು ಬಹಳ ಕುತೂಹಲವುಳ್ಳವನಾಗಿದ್ದ. 1057ರಲ್ಲಿ ಚಕ್ರವರ್ತಿ ಮೂರನೆಯ ಹೆನ್ರಿ ಲಕ್ಕಾದ ಗುರು ಸ್ಥಾನಕ್ಕೆ ಇವನನ್ನು ನೇಮಿಸಿದ. ಪೋಪ್ ನಿಕೊಲಸ್‍ನ ಮರಣಾನಂತರ ಇವನನ್ನು ಪೋಪನನ್ನಾಗಿ ಆರಿಸಿ ಎರಡನೆಯ ಅಲೆಕ್ಸಾಂಡರ್ ಎಂದು ಕರೆದರು. ಆದರೆ ರೋಮನ್ ಆಢ್ಯರ ನಿಯೋಗವೊಂದು ಮರುಚುನಾವಣೆ ಆಗಬೇಕೆಂದು ಬಯಸಿ ಪ್ರತಿಸ್ಪರ್ಧಿಯನ್ನು ನಿಲ್ಲಿಸಿದರೂ ಅಲೆಕ್ಸಾಂಡರನೇ ನ್ಯಾಯವಾದ ಪೋಪನೆಂದು ಕೊನೆಗೆ ಮಾನ್ಯ ಮಾಡಲಾಯಿತು.

ಅಲೆಕ್ಸಾಂಡರ್ ಪೋಪ್ III[ಬದಲಾಯಿಸಿ]

1159-81. ಇಟಲಿಯ ಪ್ರಸಿದ್ಧ ಸೈಯನೀಸ್ ಕುಟುಂಬದಲ್ಲಿ ಜನಿಸಿ, ಪ್ರಾಧ್ಯಾಪಕನಾಗಿ ಹೆಸರು ಗಳಿಸಿದ್ದು, 1159ರಲ್ಲಿ ಪೋಪನಾಗಿ ಆರಿಸಲ್ಪಟ್ಟ. ಚಕ್ರವರ್ತಿಯನ್ನು ಬಹಿಷ್ಕರಿಸಿ ಪ್ರಜೆಗಳನ್ನು ರಾಜಭಕ್ತಿಯ ಪ್ರಮಾಣಗಳಿಂದ ಬಿಡುಗಡೆಗೊಳಿಸಿದ. 1179ರಲ್ಲಿ 300ಕ್ಕೂ ಮೇಲ್ಪಟ್ಟು ಬಿಷಪ್ಪರ ಸಭೆ ಕೂಡಿಸಿ ಅದರ ಅಧ್ಯಕ್ಷ ಸ್ಥಾನದಿಂದ ಕ್ರೈಸ್ತ ಧರ್ಮದ ಏಳಿಗೆಗೆ ಸಂಬಂಧಿಸಿದ ಹಲವು ಮಹತ್ವದ ತೀರ್ಪುಗಳನ್ನಿತ್ತ.

ಅಲೆಕ್ಸಾಂಡರ್ ಪೋಪ್ IV[ಬದಲಾಯಿಸಿ]

1254-61. ಪ್ರಸಿದ್ಧ ಪೋಪರಾದ ಮೂರನೆಯ ಇನೊಸೆಂಟ್ ಮತ್ತು ಒಂಬತ್ತನೆಯ ಗ್ರೆಗರಿ-ಇವರ ಮನೆತನದವ. ಒಮ್ಮತದಿಂದ ಪೋಪ್ ಪದವಿಗೆ ಆರಿಸಲ್ಪಟ್ಟ. ದಯಾಳುವೂ ಧರ್ಮಾಭಿಮಾನಿಯೂ ಕಡು ವಿರಾಗಿಯೂ ಆಗಿದ್ದರೂ ಹೊಗಳುಭಟ್ಟರ ಮಾತಿಗೆ ಮಾತ್ರ ಬಹು ಸುಲಭದಲ್ಲಿ ಮರುಳಾಗುತ್ತಿದ್ದ. ವಿವೇಕ ಹಾಗೂ ವರ್ಚಸ್ಸಿನಿಂದ ಚರ್ಚಿನ ಕಾರ್ಯಕಲಾಪಗಳನ್ನು ನಿರ್ವಹಿಸಿದವನೆಂಬ ಕೀರ್ತಿಗೆ ಭಾಜನನಾದ.

ಅಲೆಕ್ಸಾಂಡರ್ ಪೋಪ್ V[ಬದಲಾಯಿಸಿ]

1409-10. 1339ರಲ್ಲಿ ಕ್ರೀಟ್ ದ್ವೀಪದಲ್ಲಿ ಜನಿಸಿದ ಪೀಟರ್ ಎಂಬ ಹೆಸರಿನ ಅನಾಥಬಾಲಕನನ್ನು ಕಾಪುಚಿನ್ ಗುರುವೊಬ್ಬ ಸಲಹಿದ, ಈತ ಅಸಾಮಾನ್ಯ ಬುದ್ಧಿವಂತಿಕೆಯಿಂದ ಇಟಲಿ, ಆಕ್ಸಫರ್ಡ್ ಮತ್ತು ಪ್ಯಾರಿಸ್ನಲ್ಲಿ ಶಿಕ್ಷಣ ಪಡೆದು ಪ್ರಾಧ್ಯಾಪಕನಾಗಿಯೂ ಧರ್ಮೋಪದೇಶಕನಾಗಿಯೂ ಗ್ರಂಥಕರ್ತನಾಗಿಯೂ ಪ್ರಸಿದ್ಧಿ ಹೊಂದಿದ. 1409 ಜೂನ್ 26ರಂದು ಪೋಪನಾಗಿ ಒಮ್ಮತದಿಂದ ಚುನಾಯಿಸಲ್ಪಟ್ಟ. ಅತ್ಯುತ್ತಮವಾದ ಸ್ವಭಾವ, ವಿಶಾಲವಾದ ತಿಳಿವಳಿಕೆ ಮತ್ತು ಆಡಳಿತ ಸಾಮಥರ್್ಯದಿಂದಾಗಿ ಪೋಪನ ಪದವಿಗೂ ಚರ್ಚಿಗೂ ಘನತೆಯನ್ನು ತಂದ.

ಅಲೆಕ್ಸಾಂಡರ್ ಪೋಪ್ VI[ಬದಲಾಯಿಸಿ]

1492-1503 ಸ್ಪೇನ್‌ನಲ್ಲಿ ಜನವರಿ ಒಂದರಂದು ಜನಿಸಿದ. ರೊಡ್ರಿಗೊ ಬೊರ್ಜಿಯ ಈತನ ಮೊದಲ ಹೆಸರು. ಸೋದರಮಾವ ಪೋಪ್ ಮೂರನೆಯ ಕ್ಯಾಲಿಕ್ಸ್ಟಸ್ನಿಂದ ಕಾಯಿದೆ ಶಿಕ್ಷಣ ಪಡೆಯುವ ಸಲುವಾಗಿ ವಿಶ್ವವಿದ್ಯಾಲಯ ಸೇರಿದ. 25ನೆಯ ವರ್ಷದಲ್ಲಿ ಕಾರ್ಡಿನಲ್ ಬಿಷಪ್ ಆಗಿಯೂ ಕ್ರಮೇಣ ರೋಮ್ ಚರ್ಚಿನ ಉಪಕುಲಪತಿಯಾಗಿಯೂ ನೇಮಕ ಹೊಂದಿದ. 1492 ಆಗಸ್ಟ್‌ 11 ರಂದು ಬಹುಮತದಿಂದ ಪೋಪನಾಗಿ ಆಯ್ಕೆಯಾದ. ಪಟ್ಟಣದಲ್ಲಿದ್ದ ಅನ್ಯಾಯಗಳಿಗೆಲ್ಲ ತಡೆ ಹಾಕಿ ಬಹು ಸಾಮರ್ಥ್ಯದಿಂದ ನ್ಯಾಯಪಾಲನೆ ಮಾಡುತ್ತಿದ್ದ. ವಿಜ್ಞಾನ, ಸಾಹಿತ್ಯ, ನಾಟಕ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟ. ಅವನ ಭವ್ಯವಾದ ರೂಪು ನಡೆಯುತ್ತಿದ್ದ ಧಾರ್ಮಿಕ ಸಮಾರಂಭಗಳಿಗೆ ವಿಶೇಷವಾದ ಅಲಂಕಾರವನ್ನೂ ಘನತೆಯನ್ನೂ ನೀಡುತ್ತಿತ್ತು. ಹೊಸತಾಗಿ ವಶವಾದ ಪ್ರದೇಶಗಳ ಬಗ್ಗೆ ಸ್ಪೇನ್ ಮತ್ತು ಪೋರ್ಚುಗಲ್‍ಗೊಳೊಳಗೆ ಆಗಬಹುದಾಗಿದ್ದ ಘರ್ಷಣೆಯನ್ನು ತಪ್ಪಿಸಿದ. ಫ್ರಾನ್ಸಿನ ಎಂಟನೆಯ ಚಾರಲ್ಸ್ ಇಟಲಿಯನ್ನು ಆಕ್ರಮಿಸುವುದನ್ನು ತಡೆದ. ಚೆಲುವಿನ ರೋಮನ್ ಸುಂದರಿಯೊಬ್ಬಳೊಡನೆ ಸಂಬಂಧವಿಟ್ಟು ಕೊಂಡುದರಿಂದ ಅಪಕೀರ್ತಿಗೊಳಗಾದ. ತನ್ನ ಮಕ್ಕಳನ್ನು ಉನ್ನತ ಪದವಿಗಳಿಗೇರಿಸಲು ಸರ್ವಪ್ರಯತ್ನವನ್ನೂ ಮಾಡಿದ. ಫ್ರಾನ್ಸ್ ಮತ್ತು ಸ್ಪೇನ್‍ಗಳ ನಡುವೆ ಯುದ್ಧವಾದಾಗ ಯಾರ ಪಕ್ಷ ವಹಿಸಬೇಕೆಂದು ತಿಳಿಯದೆ ಪೇಚಾಡಿದ.

ಅಲೆಕ್ಸಾಂಡರ್ ಪೋಪ್ VII[ಬದಲಾಯಿಸಿ]

1655-67. 1599ರ ಫೆಬ್ರವರಿ 13ರಂದು ಇಟಲಿಯ ಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದ. ತಾಯಿ ತಂದೆಗಳಿಂದ ಉತ್ತಮ ಶಿಕ್ಷಣ ಪಡೆದ ಬಳಿಕ ಸೈನ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ಮತ್ತು ನ್ಯಾಯಶಾಸ್ತ್ರಗಳಲ್ಲಿ ಡಾಕ್ಟರೇಟ್ ಪದವಿ ಗಳಿಸಿದ. 1626ರಲ್ಲಿ ಧರ್ಮೋಪದೇಶಕನಾಗಿ 1655ರಲ್ಲಿ ಪೋಪ್ ಪದವಿಗೆ ಆಯ್ಕೆಯಾದ. ಜೀವನ ಪವಿತ್ರತೆ, ನೈತಿಕ ನಿಷ್ಠೆ , ವೈರಾಗ್ಯಗಳಿಂದ ಜನಾದರಣೆ ಗಳಿಸಿದ. ರೋಮ್ ನಗರವನ್ನು ಅಂದಗೊಳಿಸಲು ಬಹಳ ಶ್ರಮಿಸಿದ. ಅಲ್ಲಿಯ ವಿಶ್ವವಿದ್ಯಾಲಯವನ್ನು ಊರ್ಜಿತಗೊಳಿಸಿದ.

ಅಲೆಕ್ಸಾಂಡರ್ ಪೋಪ್ VIII[ಬದಲಾಯಿಸಿ]

1689-91. ವೆನಿಸ್‌ನ ಪ್ರಧಾನಿಯ ಮಗನಾಗಿ 1610ರ ಏಪ್ರಿಲ್ನಲ್ಲಿ ಜನಿಸಿದ. ಕ್ರೈಸ್ತ ಧರ್ಮಶಾಸ್ತ್ರ ಸಂಹಿತೆಯಲ್ಲೂ ಕಾಯಿದೆ ಶಾಸ್ತ್ರದಲ್ಲೂ ಪಾರಂಗತನಾಗಿ ಡಾಕ್ಟರೇಟ್ ಪದವಿ ಗಳಿಸಿದ. 1689ರಲ್ಲಿ ಪೋಪ್ನ ಸ್ಥಾನಕ್ಕೆ ಚುನಾಯಿತನಾದ. ಈತನ ಶಾಂತಗುಣ, ಪ್ರಭಾವಗಳಿಂದ ಫ್ರಾನ್ಸಿನ ರಾಜನಾಗಿದ್ದ ಹದಿನಾಲ್ಕನೆಯ ಲೂಯಿ ಬಹಳ ಪ್ರಯೋಜನ ಹೊಂದಿದ.

ಉಲ್ಲೇಖ[ಬದಲಾಯಿಸಿ]

  1. http://study.com/academy/lesson/introduction-to-alexander-pope-biography-essays-and-poems.html
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: