ಅಲಿಸಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಅಲಿಸ್ಮ

ಬ್ರಾಸಿಕೇಸೀ (ಕ್ರುಸಿಫೆರೀ) ಕುಟುಂಬದ ಅಲಂಕಾರ ಸಸ್ಯ. ಗಿಡ ಕುಳ್ಳು ಬಗೆಯದು. ಎತ್ತರ 8-25 ಸೆಂಮೀ ಮಾತ್ರ. ಹಲವಾರು ಪುಟ್ಟ ಬಿಳಿ ಪುಷ್ಪಗಳ ಗುಚ್ಛಗಳಿಂದಾಗಿ ಇದು ನೋಡಲು ಬಲು ಅಂದ. ಸುವಾಸನೆ ಇದೆ. ಗುಂಪಿನಲ್ಲಿ, ಮಡಿಗಳ ಅಂಚಿನಲ್ಲಿ, ಕಾರ್ಪೆಟ್ ಮಡಿಗಳಲ್ಲಿ ಮತ್ತು ತೂಗುಬುಟ್ಟಿಗಳಲ್ಲಿ ಬೆಳೆಸಲು ಗಿಡ ಬಹು ಚೆನ್ನಾಗಿದೆ. ಇದನ್ನು ಪ್ರದರ್ಶನಾಲಯಗಳಲ್ಲಿ ಪ್ರದರ್ಶಿಸುವುದಕ್ಕೂ ಕುಂಡಗಳಲ್ಲಿ ಬೆಳೆಸಬಹುದು. ಬೀಜವನ್ನು ನೇರವಾಗಿ ಮಡಿಗಳಲ್ಲಿ ಇಲ್ಲವೆ ಕುಂಡಗಳಲ್ಲಿ ಬಿತ್ತನೆ ಮಾಡಿ, ಸಸಿಗಳು 5-8 ಸೆಂಮೀ ಎತ್ತರ ಬೆಳೆದ ಮೇಲೆ 15 ಸೆಂಮೀ ಅಂತರಕ್ಕೆ ಒಂದು ಸಸಿ ಇರುವಂತೆ ಉಳಿಸಿಕೊಂಡು ಉಳಿದವುಗಳನ್ನೆಲ್ಲ ಕಿತ್ತುಹಾಕಬೇಕು. ಬಿತ್ತನೆಯಾದ 15ನೆಯ ದಿವಸ ಒಂದು ಸಾರಿ ಗೊಬ್ಬರವನ್ನು ಮೇಲ್ಪದರವಾಗಿ ಕೊಡಬೇಕು. 20, 35 ಮತ್ತು 50ನೆಯ ದಿವಸಗಳಲ್ಲಿ 3 ಸಾರಿ ಹಿಂಡಿಯ ಗೊಬ್ಬರದ ದ್ರಾವಣವನ್ನು ಕೊಡಬೇಕು. 20, 30 ಮತ್ತು 40ನೆಯ ದಿವಸಗಳಲ್ಲಿ ತುದಿಯನ್ನು ಚಿವುಟಿದರೆ, ಗಿಡ ಹರಡಿಕೊಂಡು ಬೆಳೆದು 60 ದಿವಸಗಳಲ್ಲಿ ಪೂರ್ಣ ಹೂವಿಗೆ ಬರುತ್ತದೆ. ಮುಂದೆ 90-100 ದಿವಸಗಳಲ್ಲಿ ಬೀಜಗಳಾಗುತ್ತವೆ. ಸುಣ್ಣದ ಅಂಶವುಳ್ಳ ಹಗುರವಾದ ಭೂಮಿಯಲ್ಲಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಅಕ್ಟೋಬರ್‌ನಿಂದ ಜನವರಿ ತಿಂಗಳವರೆಗೆ ಮೈದಾನ ಪ್ರದೇಶಗಳಲ್ಲೂ ಮಾರ್ಚ್‌ನಿಂದ ಜೂನ್ ತಿಂಗಳವರೆಗೆ ಬೆಟ್ಟಗುಡ್ಡಗಳ ಪ್ರದೇಶಗಳಲ್ಲೂ ಬಿತ್ತನೆ ಮಾಡಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಲಿಸಮ್&oldid=1000688" ಇಂದ ಪಡೆಯಲ್ಪಟ್ಟಿದೆ