ಅಲಿಘರ್ ಚಳವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

19ನೆಯ ಶತಮಾನದ ಕೊನೆಯ ದಶಕದಲ್ಲಿ ರಾಷ್ಟ್ರೀಯ ಆಂದೋಲನದ ಬಗ್ಗೆ ಮುಸ್ಲಿಮರ ಮನೋಧರ್ಮ ಕೊಂಚ ಬದಲಾದುದನ್ನು ಸೂಚಿಸುವ ಒಂದು ಘಟನೆ.

ರಾಮಮೋಹನರಾಯ್, ಟಿಳಕ್, ರಾನಡೆ ಮುಂತಾದ ಅನೇಕ ಸಮಾಜ ಸುಧಾರಕರ ನಿರಂತರ ಶ್ರಮದ ಫಲವಾಗಿ ಹಿಂದೂಗಳಲ್ಲಿ ಜನಜಾಗೃತಿಯುಂಟಾಗಿತ್ತು; ಅವರು ಇಂಗ್ಲಿಷ್ ವ್ಯಾಸಂಗ ಮಾಡಿ ಸರ್ಕಾರದ ಹುದ್ದೆಗಳನ್ನು ದೊರಕಿಸಿಕೊಂಡಿದ್ದರು. ಮುಸ್ಲಿಮರು ಮಾತ್ರ ಹಿಂದುಳಿದಿದ್ದರು. ಹಿಂದೂಗಳಂತೆಯೇ ಅವರೂ ಆಧುನಿಕ ಶಿಕ್ಷಣ ಪಡೆದು ಮುಂದುವರಿಯಲೆಂಬ ಉದ್ದೇಶದಿಂದ ಆಗ ಮುಸಲ್ಮಾನರ ಮುಖಂಡರಾಗಿದ್ದ ಸರ್ ಸೈಯದ್ ಅವರ ಪ್ರೇರಣೆಯಂತೆ ಅಲಿಘರ್‍ನಲ್ಲಿ ಮಹಮ್ಮದ್ ಆಂಗ್ಲೊ ಓರಿಯಂಟಲ್ ಕಾಲೇಜ್ ಎಂಬ ವಿದ್ಯಾಸಂಸ್ಥೆ ಸ್ಥಾಪಿತವಾಯಿತು (1875).

ಭಾರತದಲ್ಲಿ ಅಂದು ಬೀಸುತ್ತಿದ್ದ ರಾಜಕೀಯ ಮಾರುತದ ವೇಗ ಒತ್ತಡಗಳ ಸೂಕ್ಷ್ಮವನ್ನರಿತ ಬ್ರಿಟಿಷ್ ಅಧಿಕಾರವರ್ಗ ಹಿಂದೂ ಮುಸಲ್ಮಾನರ ಐಕ್ಯದಿಂದ ಒದಗಬಹುದಾದ ವಿಪತ್ತನ್ನು ಮನಗಂಡು ಅದನ್ನು ಆಗದಂತೆ ಮಾಡಲು ಯತ್ನಿಸಿದರು. ಹೆಚ್ಚಾಗಿ ಹಿಂದೂಗಳೇ ಇದ್ದ ಕಾಂಗ್ರೆಸ್ಸಿಗೆ ಮುಸ್ಲಿಮರು ಸೇರದಂತೆ ಮಾಡಲೆತ್ನಿಸಿದರು. 1883-1899ರವರೆಗೆ ಅಲಿಘರ್ ಕಾಲೇಜಿನ ಪ್ರಾಧ್ಯಾಪಕನಾಗಿದ್ದ ಬೆಕ್, ಸೈಯದ್ ಅಹಮದ್ ಮತ್ತು ಇತರ ಮುಸ್ಲಿಂ ಮುಖಂಡರ ಮನಸ್ಸನ್ನು ಕಾಂಗ್ರೆಸ್ಸಿಗೆ ವಿರೋಧವಾಗಿ ತಿರುಗಿಸುವ ಕಾರ್ಯದಲ್ಲಿ ಯಶಸ್ವಿಯಾದ; ಕಾಂಗ್ರೆಸ್ಸಿಗೆ ಸೇರಿದರೆ ಅಲ್ಪ ಸಂಖ್ಯಾತರಾದ ಮುಸ್ಲಿಮರಿಗೆ ಯಾವ ರೀತಿಯ ಪ್ರಯೋಜನವೂ ಇಲ್ಲ; ಅವರು ಬಹುಸಂಖ್ಯಾತರಾದ ಹಿಂದೂಗಳ ಅಡಿಯಾಳುಗಳಾಗಿ ಬಾಳಬೇಕಾಗುತ್ತದೆ ಎಂದು ಬೋಧಿಸಿದ. ಅವನ ಯತ್ನ ಫಲಿಸಿತು. ಸರ್ ಸೈಯದ್ ಅಹಮದ್ ಕೂಡ ಕಾಂಗ್ರೆಸ್ಸಿಗೆ ಸೇರುವುದರಿಂದ ಮುಸ್ಲಿಮರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ನಂಬಿದ.

ಅಲಿಘರ್‍ನಲ್ಲಿ ಹೀಗೆ ಪ್ರಾರಂಭವಾದ ಈ ಚಳವಳಿ, ಬ್ರಿಟಿಷ್ ರಾಜಕಾರಣಿಗಳ ಒಡೆದು ಆಳುವ ನೀತಿಯಿಂದ ಪುಷ್ಟಿಗೊಂಡು ಬೆಳೆಯಿತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: