ಅರ್ಹತೆಗಳು
ಗೋಚರ
ಅರ್ಹತೆಯ ಮಾನದಂಡಗಳು
[ಬದಲಾಯಿಸಿ]- ಯಾವುದೇ ಹುದ್ದೆಗಾದರೂ ಅಭ್ಯರ್ಥಿಯನ್ನು ಆರಿಸುವಾಗ ಆತನಲ್ಲಿ ಇರಬೇಕಾದ ಗುಣಗಳು (ಕ್ವಾಲಿಫಿಕೇಷನ್ಸ್), ವಿಶ್ವವಿದ್ಯಾನಿಲಯದ ಅಥವಾ ಬೇರೆ ತರಹದ ಪದವಿ (ಡಿಗ್ರಿ), ಅನುಭವ (ಎಕ್ಸ್‌ಪೀರಿಯನ್ಸ್), ಸಂಶೋಧನ ಪತ್ರಗಳು, ಗ್ರಂಥರಚನೆ ಇತ್ಯಾದಿ ಉದಾಹರಣೆಗಳು. ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ತತ್ತ್ವ ಸರ್ಕಾರದ ಆಡಳಿತ ಪದ್ಧತಿಯಲ್ಲಿ ಬಹು ಮುಖ್ಯವಾದುದು. ಇತರ ಖಾಸಗಿ ಸಂಸ್ಥೆಗಳಿಗೂ ಈ ತತ್ತ್ವ ಅನ್ವಯವಾಗುವುದು.
- ಆಡಳಿತದ ಯಾವುದೇ ಒಂದು ಹುದ್ದೆಗೆ ಹಲವಾರು ಅಭ್ಯರ್ಥಿಗಳು ಇರುತ್ತಾರೆ. ಅವರಲ್ಲಿ ಹೆಚ್ಚಿನ ಅರ್ಹತೆಗಳು ಆ ಹುದ್ದೆಯ ಆವಶ್ಯಕತೆಗಳಿಗೆ ಅನುಗುಣವಾಗಿ ಯಾರಿಗೆ ಇವೆಯೋ ಅವರು ನೇಮಕಗೊಳ್ಳಬೇಕಾದುದು ಕ್ರಮ. ಸರ್ಕಾರದಲ್ಲಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಯಾವುದೇ ಒಂದು ಸ್ಥಾನ ಖಾಲಿಯಾದಾಗ ಅದಕ್ಕೆ ಕೆಲವು ಅರ್ಹತೆಗಳನ್ನು ಗೊತ್ತು ಮಾಡಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ತೆಗೆದುಕೊಳ್ಳಲಾಗುವುದು. ಪ್ರತಿಯೊಬ್ಬ ಅಭ್ಯರ್ಥಿಯೂ ನಿಗದಿಯಾದ ಕನಿಷ್ಠ ಅರ್ಹತೆಗಳನ್ನು ಹೊಂದಿರಲೇಬೇಕು.
ಅರ್ಹತೆಯ ವಿಧಗಳು
[ಬದಲಾಯಿಸಿ]ಈ ಅರ್ಹತೆಗಳನ್ನು ಎರಡು ಪಂಗಡಗಳಾಗಿ ವಿಂಗಡಿಸಬಹುದು:
- 1. ಸಾಮಾನ್ಯ ಅರ್ಹತೆಗಳು;
- 2. ವಿಶಿಷ್ಟ ಅಥವಾ ವಿಶೇಷ ಅರ್ಹತೆಗಳು. ಹುದ್ದೆಗೆ ಅಭ್ಯರ್ಥಿಯನ್ನು ನೇಮಕ ಮಾಡುವ ಪದ್ಧತಿಯಲ್ಲಿ ಇವೆರಡು ಅರ್ಹತೆಗಳೂ ಬಹು ಮುಖ್ಯವೆಂದು ಪರಿಗಣಿಸಲಾಗಿದೆ.
- ಅದರಂತೆ ಪ್ರತಿಯೊಬ್ಬ ಅಭ್ಯರ್ಥಿಯೂ ಕೆಲವು ಸಾಮಾನ್ಯ ಅರ್ಹತೆಗಳನ್ನು ಪಡೆದಿರಲೇಬೇಕು. ಇಂಥವುಗಳಲ್ಲಿ ನಿವಾಸ ಸಂಬಂಧ ಅರ್ಹತೆ ಒಂದು. ಅದರ ಪ್ರಕಾರ ಅಭ್ಯರ್ಥಿ ಆ ದೇಶದ ಪ್ರಜೆಯಾಗಿರಬೇಕು. ನಮ್ಮ ದೇಶದಲ್ಲಿ ಈ ಅರ್ಹತೆ ಬಹು ಮುಖ್ಯ. ಬೇರೆ ದೇಶದ ಪ್ರಜೆಗಳು ಹುದ್ದೆಗಳಿಗೆ ಅಭ್ಯರ್ಥಿಗಳಾಗಲು ಅವಕಾಶವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಸರಿಯಾದ ಅರ್ಹತೆಗಳನ್ನು ಪಡೆದಿರುವ ಸ್ಥಳೀಯ ಅಭ್ಯರ್ಥಿಗಳು ಸಿಗದಿದ್ದಾಗ ಇದರಿಂದ ತೊಂದರೆಯಾಗುತ್ತದೆ.
- ಸಾಮಾನ್ಯ ಅರ್ಹತೆಗಳಲ್ಲಿ ವಯಸ್ಸಿನ ಅರ್ಹತೆಯೂ ಸೇರಿದೆ. ಇದರ ಪ್ರಕಾರ ಅಭ್ಯರ್ಥಿಗಳು ಒಂದು ಗೊತ್ತುಪಡಿಸಿದ ವಯಸ್ಸಿನೊಳಗಿರಬೇಕು. ಈ ವಯೋಮಿತಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆಬೇರೆ ರೀತಿ. ನಾಗರಿಕ ಗಣ್ಯತೆಯೂ ಸಾಮಾನ್ಯ ಅರ್ಹತೆಗಳಲ್ಲಿ ಒಂದು. ಅದರ ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಯೂ ಒಂದು ಗೊತ್ತಾದ ನಾಗರಿಕ ಗಣ್ಯತೆ ಅಥವಾ ಮಾನ್ಯತೆ ಹೊಂದಿರಬೇಕು.
- ಇವುಗಳ ಜೊತೆಗೆ ಅಭ್ಯರ್ಥಿ ಗಂಡೋ ಹೆಣ್ಣೋ ಎಂಬುದೂ ಅರ್ಹತೆಗೆ ಆವಶ್ಯಕವೆಂದು ಪರಿಗಣಿಸಬಹುದು. ಕೆಲವು ಹುದ್ದೆಗಳಿಗೆ ಪುರುಷರು ಮಾತ್ರ ಅರ್ಹರಾಗಿರುತ್ತಾರೆ; ಮತ್ತೆ ಕೆಲವು ಹುದ್ದೆಗಳಿಗೆ ಸ್ತ್ರೀಯರು ಮಾತ್ರ ಅರ್ಹರಾಗಿರುತ್ತಾರೆ. ಹಿಂದೆ ಇಂಥ ಅರ್ಹತೆ ಮುಖ್ಯವಾಗಿತ್ತು. ಆದರೆ ಇಂದು ಸಾಮಾನ್ಯವಾಗಿ ಲಿಂಗಭೇದ ಅರ್ಹತೆಯ ಪಟ್ಟಿಯಲ್ಲಿ ಇರುವುದಿಲ್ಲ.
- ಸಾಮಾನ್ಯ ಅರ್ಹತೆಗಳ ಜೊತೆಗೆ ಅಭ್ಯರ್ಥಿಗಳು ಕೆಲವು ವಿಶೇಷ ಅರ್ಹತೆಗಳನ್ನು ಪಡೆದಿರಬೇಕು. ಮೊದಲನೆಯದು ವಿದ್ಯಾ ಅರ್ಹತೆ. ಈ ಅರ್ಹತೆ ಅಭ್ಯರ್ಥಿಯ ಶಿಕ್ಷಣಕ್ಕೆ ಸಂಬಂಧಿಸಿದುದು. ಪ್ರತಿಯೊಬ್ಬ ಅಭ್ಯರ್ಥಿಯೂ ನಿಯಮಿತ ವಿದ್ಯಾ ವ್ಯಾಸಂಗ ಮಾಡಿರಬೇಕು. ಎರಡನೆಯದು ವೈಯಕ್ತಿಕ ಗುಣಗಳು: ಪ್ರಾಮಾಣಿಕತೆ, ನಿಷ್ಕಾಪಟ್ಯ, ನೈಪುಣ್ಯ, ಧೈರ್ಯ ಮತ್ತು ಸಂಘಟನಾ ಸಾಮರ್ಥ್ಯ ಇತ್ಯಾದಿ. ಇವುಗಳನ್ನು ಕಂಡು ಹಿಡಿಯುವುದಕ್ಕೋಸ್ಕರ ಸಾಮೂಹಿಕ ಪರೀಕ್ಷೆ, ಮನಶಾಸ್ತ್ರೀಯ ಸಂಬಂಧ ಪರೀಕ್ಷೆ ಮುಂತಾದುವುಗಳನ್ನು ನಡೆಸುತ್ತಾರೆ. *ಮೂರನೆಯದು ಅನುಭವ ಮತ್ತು ಉದ್ಯೋಗಶೀಲತೆ. ಇದರ ಪ್ರಕಾರ ಅಭ್ಯರ್ಥಿಗಳು ಕೆಲವು ಸಂದರ್ಭಗಳಲ್ಲಿ ಆ ಕೆಲಸದಲ್ಲಿ ಸಾಕಷ್ಟು ಪುರ್ವಾನುಭವ ಹೊಂದಿರಬೇಕು. ಇವುಗಳ ಜೊತೆಗೆ ವಿಶೇಷ ಜ್ಞಾನವೂ ಒಂದು ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲ್ಪಟ್ಟಿದೆ. ಇಂದು ಆಡಳಿತಾಂಗ ಹೆಚ್ಚು ಹೆಚ್ಚಾಗಿ ವೈಶಿಷ್ಟ್ಯ ಹೊಂದಿರುವುದರಿಂದ ಅಭ್ಯರ್ಥಿಗಳು ಆಡಳಿತದಲ್ಲಿ ವಿಶೇಷ ಜ್ಞಾನವನ್ನು ಪಡೆದಿರಲೇಬೇಕಾಗುತ್ತದೆ.
ಸಾಮಾನ್ಯ ವ್ಯಕ್ತಿತ್ವ
[ಬದಲಾಯಿಸಿ]ಇವೆಲ್ಲದರ ಜೊತೆಗೆ ವ್ಯಕ್ತಿಯ ಸಾಮಾನ್ಯ ವ್ಯಕ್ತಿತ್ವ ಬಹು ಮುಖ್ಯ ಅರ್ಹತೆಗಳಲ್ಲೊಂದಾಗುತ್ತದೆ. ಇಲ್ಲಿ ವ್ಯಕ್ತಿತ್ವ ಎಂಬ ಪದದ ಅರ್ಥ ಬಹು ವ್ಯಾಪಕವಾಗಿದೆ. ಅವನ ಎತ್ತರ, ನಡಿಗೆ, ನೋಟ, ಚರ್ಯೆ, ನಡತೆ, ಸೂಕ್ಷ್ಮಬುದ್ಧಿ, ಪರಿಚ್ಛೇದಗುಣ ಇವೆಲ್ಲ ಸೇರುತ್ತವೆ. ಒಂದು ದೊಡ್ಡ ಸಂಸ್ಥೆಯ ಮೇಲ್ವಿಚಾರಣೆಯಂಥ ಜವಾಬ್ದಾರಿಯ ಕೆಲಸಗಳಿಗೆ ವ್ಯಕ್ತಿಗಳನ್ನಾಯುವಾಗ, ವ್ಯಾಪಾರೀ ಸಂಸ್ಥೆಗಳವರು ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ ಅಭ್ಯರ್ಥಿಯು ವ್ಯಕ್ತಿತ್ವಕ್ಕೆ ಅತಿ ಹೆಚ್ಚಿನ ಗಮನ ಕೊಡುತ್ತಾರೆ. ಇದಕ್ಕಾಗಿಯೇ ಸಂದರ್ಶನ ಪರೀಕ್ಷೆಗಳು ಏರ್ಪಟ್ಟಿವೆ. ಒಟ್ಟಿನಲ್ಲಿ ಅರ್ಹತೆಗಳಲ್ಲಿ ಮೇಲಿನ ಎಲ್ಲ ಅಂಶಗಳನ್ನೂ ಸೇರಿಸಲಾಗಿದೆ. ಈ ಎಲ್ಲ ಅರ್ಹತೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕೆಲಸಗಳಿಗೆ ನೇಮಿಸಲಾಗುತ್ತದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: