ಅರಣ್ಯ ನೀತಿ ಮತ್ತು ಸಹಭಾಗಿತ್ವ ಅರಣ್ಯಾಭಿವೃದ್ಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ[ಬದಲಾಯಿಸಿ]

ಕರ್ನಾಟಕವೂ ಸೇರಿದಂತೆ ಭಾರತದಲ್ಲಿನ ಅರಣ್ಯ ನಿರ್ವಹಣೆಗೆ ಒಂದೂವರೆ ಶತಮಾನಕ್ಕೂ ಹೆಚ್ಚಿನ ಕಾಲಾವಧಿಯ ಇತಿಹಾಸವಿದೆ. ಬ್ರಿಟಿಷ್ ಸರಕಾರ `ವೈಜ್ಞಾನಿಕ ಮತ್ತು ವ್ಯವಸ್ಥಿತ ಎಂದು ಕರೆದ ಅರಣ್ಯ ನಿರ್ವಹಣೆ ಪ್ರಾರಂಭವಾದುದು 1850ರ ನಂತರ. ಪ್ರಾರಂಭದಿಂದಲೂ, ಭೂಮಿಯ ವೈಜ್ಞಾನಿಕ ಹಾಗೂ ಲಾಭದಾಯಕ ಬಳಕೆಗೆ ಅರಣ್ಯಗಳ ಬಹುದೊಡ್ಡ ಅಡಚಣೆಯೆಂಬ ನಿಲುವು ತಳೆದಿದ್ದ ಬ್ರಿಟಿಷ್ ಸರಕಾರ ಅರಣ್ಯಗಳನ್ನು ನೆಲಸಮ ಮಾಡಿ ಆ ಜಾಗವನ್ನು ಕೃಷಿಗಾಗಿ ಬಳಸುವ ನೀತಿಯನ್ನು ಆಚರಣೆಗೆ ತಂದಿತು. 1894ರಲ್ಲಿ ಪೋಷಿತವಾದ ಮೊಟ್ಟಮೊದಲ ಅರಣ್ಯನೀತಿ `ಕಾಯ್ದಿಟ್ಟ ಅರಣ್ಯಗಳ (ರಿಸವ್ರ್ಡ್ ಫಾರೆಸ್ಟ್) ಅಸ್ತಿತ್ವಕ್ಕೆ ದಾರಿಮಾಡಿಕೊಟ್ಟು, ಸ್ಥಳೀಯ ಸಮುದಾಯದ ಹಕ್ಕುಗಳನ್ನು ನಿಯಂತ್ರಿಸಿ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ, ಬಳಸುವವರ ಅನುಭೋಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿತು. ಸಾಮಾನ್ಯವಾಗಿ ಸಮುದಾಯದ ನಿರ್ವಹಣೆಗೆ ಒಳಪಟ್ಟಿರುತ್ತಿದ್ದ ಅರಣ್ಯಗಳನ್ನು ಬ್ರಿಟಿಷ್ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದ್ದರಿಂದ ಅಂಥ ಪ್ರದೇಶಗಳಿಂದ ದೊರೆಯುತ್ತಿದ್ದ ಉತ್ಪನ್ನಗಳಿಂದ ಸ್ಥಳೀಯರು ವಂಚಿತರಾದರು. ಅರಣ್ಯ ಇಲಾಖೆಯೇ ನಿರ್ವಹಿಸುತ್ತಿದ್ದ `ಸಂರಕ್ಷಿತ ಅರಣ್ಯದಿಂದ (ಪ್ರೊಟೆಕ್ಟಡ್ ಫಾರೆಸ್ಟ್) ಹಣ್ಣು, ಹಂಪಲು, ಎಲೆ-ಹುಲ್ಲುಗಳನ್ನು ಸಂಗ್ರಹಿಸುವ ಹಕ್ಕನ್ನು ಸ್ಥಳೀಯರಿಗೆ ನೀಡಲಾಗಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೂ ಇದೇ ನೀತಿ ಮುಂದುವರೆದು 1952ರಲ್ಲಿ ನೂತನ ಅರಣ್ಯ ನೀತಿ ಜಾರಿಗೆ ಬಂದಿತು.

1952ರ ಅರಣ್ಯ ನೀತಿ, ಜೀವಿ ಪರಿಸ್ಥಿತಿ ಸಮತೋಲನ ಹಾಗೂ ಉತ್ತಮ ಭೂಬಳಕೆಯ ದೃಷ್ಟಿಯಿಂದ ದೇಶದ ಒಟ್ಟು ಭೂಭಾಗದ ಸರಾಸರಿ 33ರಷ್ಟು ಭಾಗ ಅರಣ್ಯಗಳಿಂದ ಆಚ್ಛಾದಿತವಾಗಿರಬೇಕೆಂದು ಸೂಚಿಸಿತು. ರಕ್ಷಣೆ, ಸಂವಹನ ಹಾಗೂ ದೇಶದ ಜೀವಾಳವೆನಿಸುವ ಕೆಲವು ಕೈಗಾರಿಕೆಗಳನ್ನು `ರಾಷ್ಟ್ರೀಯ ಹಿತಾಸಕ್ತಿಯೆಂದು ಪರಿಗಣಿಸಿ, ಅವುಗಳಿಗೆ ತೊಂದರೆಯಾಗುವಂತಹ ಯಾವದೇ ಬಳಕೆಯನ್ನು ಅರಣ್ಯಗಳಿಗೆ ಸಮೀಪವಾಗಿ ಬದುಕುವ ಸಮುದಾಯಗಳು ಮಾಡಕೂಡದೆಂದು ಈ ಅರಣ್ಯ ನೀತಿ ವಿಧಿಸಿತು. ರಾಷ್ಟ್ರೀಯ ಉದ್ದೇಶಗಳಿಗೆ ಅಗತ್ಯವಾದ ಬೆಲೆಬಾಳುವ ಮರಮುಟ್ಟುಗಳನ್ನು ಉತ್ಪಾದಿಸುವುದೇ ಅರಣ್ಯಗಳ ಪರಮಗುರಿಯಾಯಿತು. 1952ರ ಈ ಅರಣ್ಯನೀತಿಗೆ ಅನುಗುಣವಾಗಿ, ಮೊದಲನೆಯ ಪಂಚ ವಾರ್ಷಿಕ ಯೋಜನೆಯಿಂದಲೇ ಕಡಿಮೆ ಮೌಲ್ಯದ ಮಿಶ್ರ ಅರಣ್ಯಗಳನ್ನು ಕಡಿದು ಹಾಕಿ, ಅದೇ ಜಾಗದಲ್ಲಿ ಹೆಚ್ಚಿನ ಆರ್ಥಿಕ ಮೌಲ್ಯದ ಮಿಶ್ರ ಪ್ರಭೇದಗಳಾದ ನೀಲಗಿರಿ, ತೇಗ ಮುಂತಾದವುಗಳ ನೆಡುತೋಪಗಳನ್ನು ಬೆಳೆಸಲು ಪ್ರಯತ್ನ ಪ್ರಾರಂಭವಾಯಿತು. ಅರಣ್ಯ ವಿಜ್ಞಾನವನ್ನು ಕೈಗಾರಿಕೆಗಳಿಗೆ ಬೇಕಾದ ಮರಮುಟ್ಟುಗಳನ್ನು ಉತ್ಪಾದಿಸುವುದರೊಂದಿಗೆ ಸಮೀಕರಿಸಲಾಯಿತು. 1976ರವರೆಗೂ ಈ ನೀತಿಯನ್ನೇ ಅನುಸರಿಸಿದ್ದರಿಂದ ನೈಸರ್ಗಿಕ ಅರಣ್ಯಗಳು ದೊಡ್ಡ ಪ್ರಮಾಣದಲ್ಲಿ ಹೇಳ ಹೆಸರಿಲ್ಲದಂತೆ ನಿರ್ನಾಮವಾದವು. ಅವುಗಳ ಜಾಗದಲ್ಲಿ ನೆಡುತೋಪುಗಳು ತಲೆಯೆತ್ತಿದವು. ಅರಣ್ಯ ಸಂಪನ್ಮೂಲ ತ್ವರಿತ ಗತಿಯಲ್ಲಿ ಕ್ಷೀಣಿಸಿತು. ಅರಣ್ಯಾಧಾರಿತ ಸ್ಥಳೀಯ ಜನ ತಮ್ಮ ನೆಲ ಮತ್ತು ಜೀವನೋಪಾಯವನ್ನು ಕಳೆದುಕೊಂಡರು.

1976ರಲ್ಲಿ ರಾಷ್ಟ್ರೀಯ ಕೃಷಿ ಆಯೋಗ ನಾವು ಅನುಸರಿಸಿಕೊಂಡು ಬಂದಿದ್ದು ಅರಣ್ಯ ನೀತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿತು. 70ರ ದಶಕದ ಮಧ್ಯಭಾಗದ ವೇಳೆಗೆ ಅರಣ್ಯ ಸಮೀಪದ ಜನ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯಗಳನ್ನು ಉಳಿಸಿಕೊಳ್ಳುವುದೇ ಅಸಾಧ್ಯವೆಂಬುದು ಸ್ಪಷ್ಟವಾಗಿತ್ತು. ಅದೇ ಸಮಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾವಸ್ತುಗಳು, ಮರಮುಟ್ಟುಗಳು ಹಾಗೂ ಉರುವಲಿನ ತೀವ್ರ ಕೊರತೆಯನ್ನು ದೇಶ ಎದುರಿಸುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ, ಭಾರತ ಸರ್ಕಾರ ಅಂತಾರಾಷ್ಟ್ರೀಯ ನೆರವು ನೀಡಿಕೆ ಸಂಸ್ಥೆಗಳ ಧನಸಹಾಯದೊಂದಿಗೆ ಬೃಹತ್ ಪ್ರಮಾಣದಲ್ಲಿ `ಸಾಮಾಜಿಕ ಅರಣ್ಯ ಯೋಜನೆಯನ್ನು ಪ್ರಾರಂಭಿಸಿತು. ಅರಣ್ಯದ ಹೊರಗಿನ ಸರ್ಕಾರಿ ಭೂಮಿ ಮತ್ತು ಖಾಸಗಿ ಜಮೀನುಗಳಲ್ಲಿ ತ್ವರಿತಗತಿಯಲ್ಲಿ ಬೆಳೆಯುವ ಪ್ರಭೇದಗಳ ಮರಗಿಡಗಳನ್ನು ಕೋಟಿಗಟ್ಟಲೆಯಲ್ಲಿ ಬೆಳೆಸಿ, ಸ್ಥಳೀಯ ಸಮುದಾಯಗಳ ಅಗತ್ಯಗಳನ್ನು ಪೂರೈಸಿ, ಆ ಮೂಲಕವಾಗಿ ನೈಸರ್ಗಿಕ ಅರಣ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದ ಸಾಮಾಜಿಕ ಅರಣ್ಯ ಯೋಜನೆ ಭಾರತದ ಅರಣ್ಯ ನೀತಿಯಲ್ಲಿ ಮತ್ತೊಂದು ಮುಖ್ಯ ಘಟ್ಟವಾಯಿತು.

ಸಾಮಾಜಿಕ ಅರಣ್ಯ ಯೋಜನೆಯ[ಬದಲಾಯಿಸಿ]

ಸಾಮಾಜಿಕ ಅರಣ್ಯ ಯೋಜನೆಯ ಫಲವಾಗಿ ಕಟ್ಟಡ ಕೆಲಸಗಳಿಗೆ ಬೇಕಾದ ಕಂಬಗಳು, ಕಾಗದ, ರೇಯಾನ್, ಕಾರ್ಖಾನೆಗಳಿಗೆ ಅಗತ್ಯವಾದ ಮೆದು ಮರಗಳ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತು. ಇದರೊಟ್ಟಿಗೆ ಸಣ್ಣ ಮರಮಟ್ಟುಗಳ ಉತ್ಪಾದನೆಯ ಪ್ರಮಾಣವೂ ಹೆಚ್ಚಿತು. ಆದರೆ ಈ ಹೆಚ್ಚಳಗಳು ನೈಸರ್ಗಿಕ ಅರಣ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿಲ್ಲ. ಇದರ ಬದಲಿಗೆ ಅರಣ್ಯ ಇಲಾಖೆಯ ಗಮನ ಕಾಡಿನ ಹೊರಗೆ ನೆಡುತೋಪುಗಳನ್ನು ಬೆಳೆಸುವುದರ ಮೇಲೆ ಕೇಂದ್ರಿಕೃತವಾಗಿದ್ದರಿಂದ ನೈಸರ್ಗಿಕ ಅರಣ್ಯದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಊರೊಟ್ಟಿನ ಸಾಮೂಹಿಕ ಆಸ್ತಿಯಾದ ಗೋಮಾಳ, ಕೆರೆಯಂಗಳ ಮುಂತಾದವುಗಳನ್ನು ಸಾಮಾಜಿಕ ಅರಣ್ಯದಡಿ ತಂದಿದ್ದರಿಂದ ಅಂಥ ಜಮೀನುಗಳಿಂದ ದೊರೆಯುತ್ತಿದ್ದ ಉತ್ಪನ್ನಗಳಿಗೂ ಸಂಚಕಾರ ಬಂದಿತು. ಸಾಮಾಜಿಕ ಅರಣ್ಯ ಯೋಜನೆಯನ್ನು ರೂಪಿಸುವುದರಲ್ಲಿದ್ದ ಸಮಸ್ಯೆಗಳು, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳು ಮತ್ತು ಅನುಷ್ಠಾನದಲ್ಲಿನ ತೊಂದರೆಗಳಿಂದಾಗಿ ಸಾಮಾಜಿಕ ಅರಣ್ಯ ಯೋಜನೆ ಗ್ರಾಮೀಣ ಸಮುದಾಯಗಳಿಗೆ ಉರುವಲು, ಮೇವು, ಹಸುರುಗೊಬ್ಬರ, ಸಣ್ಣ ಮರಮಟ್ಟುಗಳನ್ನು ಪೂರೈಸುವ ತನ್ನ ಉದ್ದೇಶದಲ್ಲಿ ಸಫಲತೆ ಪಡೆಯಲಿಲ್ಲ. ಇದರ ಜೊತೆಗೆ ಹೊಸ ನೆಡುತೋಪುಗಳನ್ನು ಬೆಳೆಸಲು ಸೂಕ್ಷ್ಮ ಪ್ರದೇಶಗಳಲ್ಲೂ ಅರಣ್ಯಗಳನ್ನು ನೆಲಸಮ ಮಾಡಿದ್ದರಿಂದ ಮಣ್ಣಿನ ಸವೆತ, ನದಿ ಜಲಾಶಯಗಳಲ್ಲಿ ಹೂಳು ತುಂಬುವುದು ಮುಂತಾದ ಪರಿಸರ ಸಮಸ್ಯೆಗಳೂ ಪ್ರಾರಂಭವಾದವು.

ಈ ಮುಂಚಿನ ಎರಡು ಅರಣ್ಯ ನೀತಿಗಳಿಗಿಂತ ಆಮೂಲಾಗ್ರವಾಗಿ ಭಿನ್ನವಾದ ಮತ್ತೊಂದು ನೂತನ ಅರಣ್ಯ ನೀತಿ 1988ರಲ್ಲಿ ಘೋಷಿತವಾಯಿತು. ಈ ಹೊಸ ಅರಣ್ಯ ನೀತಿಯಂತೆ ಅರಣ್ಯಗಳನ್ನು ವಾಣಿಜ್ಯೋದ್ಯಮದ ದೃಷ್ಟಿಯಿಂದ ಕೈಗಾರಿಕೆಗಳಿಗಾಗಿ ಅತಿ ಬಳಕೆಗೆ ಒಳಪಡಿಸಬಾರದು. ಅದರ ಬದಲಿಗೆ ನೆಲ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಅರಣ್ಯದಿಂದ ಬರುವ ಆದಾಯಕ್ಕಿಂತ ಪಾರಿಸರಿಕ ಸ್ಥಿರತೆಯೇ ಹೆಚ್ಚು ಮುಖ್ಯ. ಏಕ ಪ್ರಭೇದದ ನೆಡುತೋಪಿಗಿಂತ ವೈವಿಧ್ಯವಿರುವ ಮಿಶ್ರ ಪ್ರಭೇದಗಳ ಅರಣ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅರಣ್ಯಕ್ಕೆ ಸಮೀಪವಾಗಿ ವಾಸಿಸುವ ಸಮುದಾಯಗಳ ಕನಿಷ್ಠ ಅಗತ್ಯಗಳನ್ನು ಪೂರೈಸಿ, ಗುಡ್ಡಗಾಡು ಜನ ಹಾಗೂ ಅರಣ್ಯಗಳ ನಡುವಿನ ಸಂಬಂಧವನ್ನು ಉತ್ತಮಪಡಿಸಬೇಕು. ಅರಣ್ಯಗಳ ರಕ್ಷಣೆ ಪುನರುಜ್ಜೀವನ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಮಹಿಳೆಯರನ್ನೂ ಒಳಗೊಂಡಂತೆ ಸ್ಥಳೀಯರನ್ನು ಬೃಹತ್ ಪ್ರಮಾಣದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಬೇಕು.

1988ರ ಅರಣ್ಯ ನೀತಿಯನ್ನು ಅನುಷ್ಠಾನಕ್ಕೆ ತಂದು ಅರಣ್ಯ ಸಂರಕ್ಷಣೆ, ಅರಣ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆಗೆ ಅವಕಾಶಮಾಡಿಕೊಡಲು ಜಂಟೀ ಅರಣ್ಯ ಯೋಜನೆಯನ್ನು ಭಾರತ ಸರ್ಕಾರ 1990ರಲ್ಲಿ ಜಾರಿಗೆ ತಂದಿತು. ಭಾರತದ ಅರಣ್ಯ ಇತಿಹಾಸದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲು.

ಜಂಟೀ ಅರಣ್ಯ ಯೋಜನೆ[ಬದಲಾಯಿಸಿ]

ಅಭಿವೃದ್ಧಿ ಯೋಜನೆಗಳಲ್ಲಿ ಜನರ ಸಕ್ರಿಯ ಸಹಭಾಗಿತ್ವಕ್ಕೆ ಅವಕಾಶಮಾಡಿಕೊಡುವ ಒಂದು ಮಾದರಿ. `ಅಧಿಕಾರದಲ್ಲಿ ಸಮಪಾಲು, ಜವಾಬ್ದಾರಿಯಲ್ಲಿ ಸಮಪಾಲು, ಫಲಾನುಭವದಲ್ಲೂ ಸಮಪಾಲು- ಇದು ಈ ಯೋಜನೆಯ ಮೂಲಭೂತ ತತ್ವ. ಈ ಯೋಜನೆಯಲ್ಲಿ ಅರಣ್ಯಕ್ಕೆ ಅಥವಾ ಅವನತಿ ಹೊಂದಿದ ಅರಣ್ಯ ಭೂಮಿಗೆ ಸಮೀಪವಾಗಿ ವಾಸಿಸುವ ಜನಸಮುದಾಯ ಅರಣ್ಯ ಸಂರಕ್ಷಣೆಯಲ್ಲಿ, ಮರಗಿಡಗಳನ್ನು ಬೆಳೆಸುವುದರಲ್ಲಿ ಜವಾಬ್ದಾರಿಯುತವಾಗಿ ಭಾಗವಹಿಸುತ್ತದೆ. ಈ ಕೆಲಸದ ಒಟ್ಟಾರೆ ಜವಾಬ್ದಾರಿಯನ್ನು `ಗ್ರಾಮ ಅರಣ್ಯ ಸಮಿತಿ ಹೊರುತ್ತದೆ. ಈ ಸಮಿತಿ ಪ್ರಜಾಪ್ರಭುತ್ವದ ತತ್ವಗಳಿಗೆ ಅನುಸಾರವಾಗಿ ರೂಪುಗೊಂಡು, ಕೆಲಸ ಮಾಡುವ ಸ್ಥಳೀಯ ಸಂಸ್ಥೆ ಈ ಸಮಿತಿಯಲ್ಲಿ ಮಹಿಳೆಯರು, ದುರ್ಬಲವರ್ಗದವರಿಗೂ ಪ್ರಾತಿನಿಧ್ಯವಿದೆ. ಅರಣ್ಯ ಸಿಬ್ಬಂದಿ, ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೂ ಇರುತ್ತಾರೆ. ಅರಣ್ಯ ಸಂರಕ್ಷಣೆ, ಅರಣ್ಯಾಭಿವೃದ್ಧಿ, ಸಂಪನ್ಮೂಲಗಳ ಸಂಗ್ರಹ, ಯೋಜನೆಯುತ ಮೀರಿ, ಅದರ ಅನುಷ್ಠಾನ ಉತ್ಪನ್ನಗಳ ಹಂಚಿಕೆ, ಹಣಕಾಸಿನ ಜವಾಬ್ದಾರಿ ಎಲ್ಲವನ್ನು ಈ ಗ್ರಾಮ ಅರಣ್ಯ ಸಮಿತಿಯೇ ನಿರ್ವಹಿಸುತ್ತದೆ. ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ಅರಣ್ಯವನ್ನು ಸಂರಕ್ಷಿಸುವ ಈ ಯೋಜನೆ ತಾತ್ವಿಕವಾಗಿ ಅಭಿವೃದ್ಧಿಯ ಒಂದು ಅತ್ಯುತ್ತಮ ಮಾದರಿ, ನೂತನ ಅರಣ್ಯ ನೀತಿಯ ಅಪಾರ ಸಾಧ್ಯತೆಗಳಿಗೆ ಹಿಡಿದ ಕನ್ನಡಿ.

1990ರ ಜೂನ್ 1ರಂದು ಭಾರತ ಸರ್ಕಾರ ಹೊರಡಿಸಿದ ಆದೇಶದಿಂದ ವಿದ್ಯುಕ್ತವಾಗಿ ಪ್ರಾರಂಭವಾದ ಜಂಟೀ ಅರಣ್ಯ ಯೋಜನೆ ಇಂದು ನಮ್ಮ ದೇಶದ 27 ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಈ 27 ರಾಜ್ಯಗಳಲ್ಲಿ 65,000 ಗ್ರಾಮ ಅರಣ್ಯ ಸಮಿತಿಗಳು ಒಟ್ಟು 1,50,000 ಚ.ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಆಯಾ ರಾಜ್ಯದ ಅರಣ್ಯ ಇಲಾಖೆಗಳ ಜೊತೆಗೂಡಿ ಸಂರಕ್ಷಿಸಿ ನಿರ್ವಹಿಸುತ್ತಿವೆ. ಭಾರತದ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 6,33,400 ಚ.ಕಿ.ಮೀ. ಇದರಲ್ಲಿ ಶೇಕಡಾ 40ಭಾಗ ಅಂದರೆ 2,53,360 ಚ.ಕಿ.ಮಿ. ವಿಸ್ತೀರ್ಣದ ಅರಣ್ಯ ಪ್ರದೇಶ ಅವನತಿಗೊಳಗಾಗಿದೆ. ಇದರಲ್ಲಿ 1,50,000 ಚ.ಕಿ.ಮೀ. ಪ್ರದೇಶ ಈಗ ಜಂಟೀ ಅರಣ್ಯ ನಿರ್ವಹಣೆಗೆ ಒಳಪಟ್ಟಿದೆ. ಅಂದರೆ, ಒಟ್ಟಾರೆಯಾಗಿ ಭಾರತದಾದ್ಯಂತ ಸುಮಾರು 65,000 ಗ್ರಾಮ ಅರಣ್ಯ ಸಮಿತಿಗಳು, ಅರಣ್ಯ ಇಲಾಖೆಯ ಜೊತೆಗೂಡಿ, ಅವನು ಹೊಂದಿದ ಅರಣ್ಯದ ಒಟ್ಟು ವಿಸ್ತೀರ್ಣ ಶೇಕಡಾ 59ರಷ್ಟನ್ನು ಪುನರುಜ್ಜೀವನಕ್ಕಾಗಿ ಜಂಟೀ ಅರಣ್ಯ ನಿರ್ವಹಣೆಗೆ ಒಳಪಡಿಸಿದೆ ಎಂದಂತಾಯ್ತು. ಅಂಕಿಅಂಶಗಳ ದೃಷ್ಟಿಯಿಂದ ಇದು ನಿಜಕ್ಕೂ ಉತ್ತಮ ಸಾಧನೆ.

1988ರ ನೂತನ ಅರಣ್ಯ ನೀತಿ ಮತ್ತು ಅದರ ಫಲಶ್ರುತಿಯಾಗಿ ರೂಪುಗೊಂಡು, 90ರ ದಶಕದಲ್ಲಿ ಜಾರಿಗೆ ಬಂದ ಸಮುದಾಯ ಸಹಭಾಗಿತ್ವದ ಅತ್ಯುತ್ತಮ ಮಾದರಿ ಎನ್ನಿಸಿಕೊಂಡ, ಜಂಟೀ ಅರಣ್ಯ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆಯೇ? ಖಂಡಿತವಾಗಿಯೂ ಇಲ್ಲ. ಯಶಸ್ವಿಯಾಗಿರುವ ಉಜ್ವಲ ಉದಾಹರಣೆಗಳು ನಮಗೆ ದೊರೆಯುತ್ತವೆ ನಿಜ. ಆದರೆ ಅವುಗಳ ಸಂಖ್ಯೆ ಬೆರಳೆಣಿಸುವಷ್ಟು ಮಾತ್ರ. ಉಳಿದಂತೆ ಆಗಬೇಕಾದ ಕೆಲಸಗಳು, ಪರಿಹಾರವಾಗಬೇಕಾದ ಸಮಸ್ಯೆಗಳು ಅಪಾರವಾಗಿವೆ. ಇಂಥ ಕೆಲವು ಸಮಸ್ಯೆ ನ್ಯೂನತೆಗಳನ್ನು ನಾವು ಉದಹರಿಸಬೇಕಾದುದು ಅಗತ್ಯ. ಅದರೊಂದಿಗೆ ಆ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗವನ್ನು ತಿಳಿಯಬೇಕು.

ಅರಣ್ಯ ಇಲಾಖೆ ಮತ್ತು ಗ್ರಾಮ ಅರಣ್ಯ ಸಮಿತಿಗಳ ನಡುವೆ ಸ್ಥಳೀಯ ಅರಣ್ಯ ಸಂಪನ್ಮೂಲಗಳ ರಕ್ಷಣೆ, ಬಳಕೆ, ನಿಯಂತ್ರಣ, ಪುನರುಜ್ಜೀವನಗಳಿಗೆ ಸಂಬಂಧಿಸಿದಂತೆ, ಅಧಿಕಾರದಲ್ಲಿ ತೀವ್ರ ಅಸಮತೋಲನಗಳಿವೆ. ಇದನ್ನು ನಿವಾರಿಸಲು ಅಧಿಕಾರದ ಮರುಹಂಚಿಕೆಯಾಗಿ ಗ್ರಾಮ ಅರಣ್ಯ ಸಮಿತಿಗೆ ಮತ್ತಷ್ಟು ಅಧಿಕಾರ ದೊರೆಯಬೇಕು.

ಅರಣ್ಯಾಭಿವೃದ್ಧಿಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರದಲ್ಲಿ ಗ್ರಾಮ ಅರಣ್ಯ ಸಮಿತಿಗೆ ಯಾವುದೇ ಪಾತ್ರವಿಲ್ಲ. ಈ ಪರಿಸ್ಥಿತಿಯನ್ನು ಬದಲಿಸಲು ಸ್ಥಳೀಯ ಹಂತದಲ್ಲಿ ಅರಣ್ಯಾಭಿವೃದ್ಧಿಗೆ ಮೀಸಲಾದ ಹಣದಲ್ಲಿ ಶೇಕಡಾ 50 ಭಾಗವನ್ನು ನೇರವಾಗಿ ಉತ್ತಮವಾಗಿ ಕೆಲಸಮಾಡುತ್ತಿರುವ ಆಯ್ದ ಅರಣ್ಯ ಸಮಿತಿಗಳಿಗೆ ನೀಡಬೇಕು. ಸಹಭಾಗಿತ್ವಕ್ಕೆ ಇದು ಉತ್ತಮ ಪ್ರೋತ್ಸಾಹಕವಾಗುತ್ತದೆ.

ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಯಲ್ಲಿರುವ ನೆಡುತೋಪುಗಳಿಂದ ಬರುವ ಒಟ್ಟು ಆದಾಯದ ಶೇಕಡಾ 25 ಭಾಗ ಮಾತ್ರ ಗ್ರಾಮ ಅರಣ್ಯ ಸಮಿತಿಯ ಸದಸ್ಯರಿಗೆ ಹಂಚಿಕೆಯಾಗುತ್ತಿದೆ. ಇದಕ್ಕಾಗಿ 8-10 ವರ್ಷಗಳು ಕಾಯಬೇಕು. ಇದು ತೀರಾ ಅನಾಕರ್ಷಕ, ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇದನ್ನು ಮರು ಪರಿಶೀಲಿಸಬೇಕು.

ಸಮುದಾಯದ ಸಹಭಾಗಿತ್ವವನ್ನು ಪ್ರೋತ್ಸಾಹಿಸುವಂತಹ ಗುಣಲಕ್ಷಣಗಳಿರುವ ಹಳ್ಳಿಗಳನ್ನು ಕಟ್ಟುನಿಟ್ಟಾಗಿ ಆಯ್ಕೆ ಮಾಡಿ ಅಂತಹ ಜಾಗಗಳಲ್ಲಿ ಮಾತ್ರ ಯೋಜನೆಯನ್ನು ಜಾರಿಗೆ ತರಬೇಕು.

ಇಡೀ ಯೋಜನೆಯಲ್ಲಿ ಮಹಿಳೆಯರ ಹಾಗೂ ದುರ್ಬಲ ವರ್ಗದವರ ಭಾಗವಹಿಸುವಿಕೆಗೆ ಕೇವಲ ಸಾಂಕೇತಿಕ ಸ್ಥಾನವಿದೆ. ಇದು ಬದಲಾಗಿ ಅವರ ಸಹಭಾಗಿತ್ವಕ್ಕೆ ಆದ್ಯತೆಯ ಸ್ಥಾನ ದೊರೆಯಬೇಕು.

ಗ್ರಾಮೀಣ ಅಭಿವೃದ್ಧಿಯ ವಿವಿಧ ಯೋಜನೆಗಳ ಅಡಿಯಲ್ಲಿ ಕುಟುಂಬದ ಆದಾಯವನ್ನು ಹೆಚ್ಚಿಸಿಕಿಒಳ್ಳುವ, ಕೌಶಲ ವರ್ಧಿಸುವ ಎಲ್ಲ ಅವಕಾಶಗಳನ್ನೂ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಬಳಸಿಕೊಂಡು ಅರಣ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸಬೇಕು.

ವಿವಿಧ ಯೋಜನೆಗಳ[ಬದಲಾಯಿಸಿ]

1988ರ ನೂತನ ಅರಣ್ಯ ನೀತಿಯ ಫಲವಾದ ಜಂಟೀ ಅರಣ್ಯ ಯೋಜನೆಯ ಅಂತಿಮ ಗುರಿ ಸ್ಥಳೀಯ ಅರಣ್ಯ ಸಂಪನ್ಮೂಲಗಳ ಸಂಪೂರ್ಣ ನಿಯಂತ್ರಣ ಹಗೂ ನಿರ್ವಹಣೆಗಳ ಅಧಿಕಾರವನ್ನು ಸಮುದಾಯಕ್ಕೆ ವರ್ಗಾಯಿಸುವುದು, ಕಳೆದ ಮೂರು ದಶಕಗಳಿಂದ ಭಾರತದ ಅರಣ್ಯ ನೀತಿ, ಅರಣ್ಯ ನಿರ್ವಹಣೆಯ ಪದ್ಧತಿಗಳನ್ನು ವಿಶೇಷ ಮುತುವರ್ಜಿಯಿಂದ ಅಧ್ಯಯನ ಮಾಡುತ್ತಿರುವ ಪರಿಣಿತರು, ಮುಂದಿನ 25-30 ವರ್ಷಗಳಲ್ಲಿ ಸ್ಥಳೀಯ ಅರಣ್ಯ ಸಂಪನ್ಮೂಲಗಳ ಮೇಲೆ ಸಮುದಾಯದ ಅಧಿಕಾರ ಗರಿಷ್ಠ ಮಟ್ಟ ಮುಟ್ಟಲಿದ್ದು, ಅರಣ್ಯ ಇಲಾಖೆ, ನಿರ್ವಹಣೆಗೆ ಅಗತ್ಯವಾದ ತಾಂತ್ರಿಕ ನೆರವನ್ನು ಒದಗಿಸುವ ವಿಶೇಷ ಪರಿಣಿತಿಯ ವಿಸ್ತರಣಾ ಅಂಗವಾಗಿ ಕೆಲಸ ನಿರ್ವಹಿಸಲಿದೆಯೆಂದು ಅಭಿಪ್ರಾಯ ಪಡುತ್ತಾರೆ. ಅರಣ್ಯ ಇಲಾಖೆಯಿಂದ ಸಮುದಾಯಕ್ಕೆ ಆಗಬೇಕಾದ ಅಧಿಕಾರದ ಹಸ್ತಾಂತರ ಅತ್ಯಂತ ಕಷ್ಟ ಸಾಧ್ಯವಾದ ಕೆಲಸ. ಇದಕ್ಕೆ ಸಾಕಷ್ಟು ಸಮಯ ಪ್ರಯತ್ನಗಳು ಬೇಕು. ಈ ದೀರ್ಘಾವಧಿಯಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮುದಾಯಗಳೆಂದೂ ಕಲಿಯಬೇಕಾದ ವಿಷಯಗಳು, ಪಡೆದುಕೊಳ್ಳಬೇಕಾದ ಸಾಮಥ್ರ್ಯಗಳು ಅಗಾಧವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ.