ಅರಗು
ಪ್ರಾಚೀನ ಕಾಲದಲ್ಲಿಯೆ ಅರಗು ಮತ್ತು ಅರಗಿನ ಹಲವು ಉಪಯೋಗಗಳನ್ನು ಭಾರತೀಯರು ಅರಿತುಕೊಂಡಿದ್ದರೆಂದು ಅಥರ್ವವೇದದಲ್ಲಿ ಅರಗಿನ ಕುರಿತಾದ ಉಲ್ಲೇಖದಿಂದ ತಿಳಿದುಬರುತ್ತದೆ.
ಹಿನ್ನೆಲೆ
[ಬದಲಾಯಿಸಿ]ಮಹಾಭಾರತದ ಅರಗಿನ ಮನೆ (ಲಾಕ್ಷಾಗೃಹ)ಯ ಪ್ರಸಂಗ ಯಾರಿಗೆ ತಿಳಿದಿಲ್ಲ? ಭಾರತೀಯರಿಗೆ ಪರಿಚಿತವಾಗಿದ್ದ ಈ ವಸ್ತುವನ್ನು ಅರಬ್ಬಿ ನಾವಿಕರು ಪ್ರಪಂಚದ ಇತರೆಡೆಗೆ ಪರಿಚಯಿಸಿದರು. ಲಾಕ್ಷಾತರು (ಲಾಕ್ಷಾತರು ಮುತ್ತುಗದ ಮರ, ವೈಜ್ಞಾನಿಕ ನಾಮದ್ವಯ, ಬ್ಯೂಟಿಯಾ ಫ್ರಾಂಡೋಸ, ಬ್ಯೂಟಿಯಾ ಮಾನೋಸ್ವರ್ಮ, ಕುಟುಂಬ: ಪ್ಯಾಪಿಲಿಯೋ ನೇಸಿ) ವೃಕ್ಷವನ್ನಾಶ್ರಯಿಸಿ ಬದುಕುವ, (ಅರಗಿನ ಕೀಟ ಜಾಲಿ (ಅಕೇಶಿಯಾ ಅರೇಬಿಕ) ಬೋರೆ(ಜಿಜಿಪಸ್ ಜುಜಬ) ಹಾಗು ಸಾಲ್ (ಶೋರಿಯಾ ರೊಬಸ್ಟ) ಮುಂತಾದ ಮರಗಳನ್ನೂ ಸಹ ಆಶ್ರಯಿಸಿ ಬದುಕುತ್ತದೆ). ಹೋಮೋಪ್ಟಿರ ಕೀಟಗಳ ಗುಂಪಿಗೆ ಸೇರಿದ, ಅರಗಿನ ಕೀಟದ ವೈಜ್ಞಾನಿಕ ನಾಮದ್ವಯ ಲ್ಯಾಸಿಫೆರಲ್ಯಾಕ(ಟ್ಯಾಖಾರ್ಡಿಯ ಲ್ಯಾಕ). ಹೆಣ್ಣು ಕೀಟ ತನ್ನ ದೇಹದ ಚರ್ಮದಲ್ಲಿರುವ ಗ್ರಂಥಿಗಳಿಂದ ಸ್ರವಿಸುವ ಸ್ರಾವ, ಹೊರವಾತಾವರಣದ ಪ್ರಭಾವದಿಂದ ಗಟ್ಟಿಯಾಗುತ್ತದೆ. ಹೀಗೆ ಗಟ್ಟಿಯಾದ ಸ್ರಾವವೇ ಅರಗು.
ಉತ್ಪಾದನೆ
[ಬದಲಾಯಿಸಿ]ಪಾಕಿಸ್ಥಾನ,ಬರ್ಮ, ಶ್ರೀಲಂಕಾ, ಚೀನಾ, ಮಲಯಗಳಲ್ಲಿಯೂ ಕಂಡು ಬರುವ ಅರಗಿನ ಕೀಟದ ಸಂಖ್ಯಾ ಸಾಂದ್ರತೆ ಅಧಿಕವಾಗಿರುವುದು ಭಾರತದಲ್ಲಿ. ಇಂದಿಗೂ ಪ್ರಪಂಚದ ಅರಗಿನ ಉತ್ಪಾದನೆಯಲ್ಲಿ ಭಾರತದ್ದೆ ಮೇಲುಗೈ, ಸುಮಾರು ಶೇ. ೭೦ರಷ್ಟು. ವಾರ್ಷಿಕ ಉತ್ಪಾದನೆ ೩೦೦೦ಟನ್ ಗೂ ಹೆಚ್ಚು. ಮಧ್ಯಪ್ರದೇಶ, ಅಸ್ಸಾಮ್ ಹಾಗು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅರಗು ವಾಣಿಜ್ಯ ಬೆಳೆ. ಅರಗಿನಿಂದ ನಮ್ಮ ವಾರ್ಷಿಕ ವಿದೇಶಿ ವಿನಿಮಯ ಸುಮಾರು ರೂ ಹದಿನೈದು ಕೋಟಿ.
ವೈಜ್ಞಾನಿಕ ಹಿನ್ನೆಲೆ
[ಬದಲಾಯಿಸಿ]- Picture of Kerria lacca from book Indian Insect Life: a Manual of the Insects of the Plains by Harold Maxwell-Lefroy.. 1. ಆರೋಗ್ಯಕರ ಕೀಟ ಕೋಲು/ಕಡ್ಡಿಯಮೇಲೆ; 2.ಅನಾರೋಗ್ಯಕರ ಕೀಟ 3. ಮೊದಲ ರೂಪಾಂತರ , ಚಟುವಟಿಕೆಯ ಹಂತ. 4.ಹೆಣ್ಣು ಕೀಟ, 4 ಲಸಿಕೆ ಹಾಕಿದ ವಾರಗಳ ನಂತರ 5.ಹೆಣ್ಣು, 13 ವಾರಗಳ ಲಸಿಕೆ ಹಾಕಿದ ನಂತರ. 6. ಸತ್ತಿರುವ ಹೆಣ್ಣು ಕೋಶ (ಸೆಲ್)-ಅದರಿಂದ ಯುವಕೀಟ ಹೊರಹೊಮ್ಮುತ್ತಿದೆ. 7.ಗಂಡು ಸೆಲ್, ಲಸಿಕೆ ಹಾಕಿದ 13 ವಾರಗಳಲ್ಲಿ. 8.ರೆಕ್ಕೆಗಳಿಲ್ಲದ ಗಂಡು ಹುಳ. 9.ರೆಕ್ಕೆಗಳ ಗಂಡು ಹುಳ.
ಅರಗಿನ ಕೀಟವನ್ನು ಕುರಿತಾದ ಪ್ರಥಮ ವೈಜ್ಞಾನಿಕ ಅಧ್ಯಯನ ೧೭೦೯ರಲ್ಲಿ ಫ್ರಾನ್ಸಿನ ಪಾದ್ರಿ ಟ್ಯಾಖಾರ್ಡ್ ರಿಂದ ನಡೆಯಿತು. ಪ್ರಬುದ್ಧ ಹೆಣ್ಣು ಕೀಟ ಗಂಡು ಕೀಟದೊಂದಿಗೆ ಸಂಯೋಗಗೊಂಡ ನಂತರ ತನ್ನ ಸುತ್ತಲು ನಿರ್ಮಿಸಿಕೊಂಡ ಅರಗಿನ ಕವಚದಲ್ಲಿ ಸುಮಾರು ಮೂರುನೂರರಿಂದ ಐದುನೂರು ಮೊಟ್ಟೆಗಳನ್ನಿಡುತ್ತದೆ. ಕೆಲವೇ ಗಂಟೆಗಳಲ್ಲಿ ಮೊಟ್ಟೆಗಳಿಂದ ಹೊರ ಬರುವ ಕೆಂಪು ಬಣ್ಣದ ನಿಂಫ್ (ಡಿಂಬಕಗಳು), ಅರಗಿನ ಕವಚದಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ, ಕವಚದಿಂದ ಹೊರಬಂದು, ಕೆಲಕಾಲ ಕೊಂಬೆಗಳ ಮೇಲೆಲ್ಲಾ ಚಲಿಸಿ, ಅಂತಿಮವಾಗಿ ಯೋಗ್ಯವಾದ ಕೊಂಬೆಯ ಮೇಲೆ ಸ್ಥಿತಿಗೊಂಡು, ತಮ್ಮ ಹೀರುನಳಿಕೆಯಿಂದ ಕೊಂಬೆಯ ರಸಸಾರವನ್ನು ಹೀರುತ್ತಾ ಮುಂದಿನ ಬೆಳವಣಿಗೆಯಲ್ಲಿ ತೊಡಗುತ್ತವೆ. ಡಿಂಬಕಗಳ ಮುಂದಿನ ಬೆಳವಣಿಗೆ ನಡೆಯುವುದು, ಅವುಗಳ ಚರ್ಮದ ಗ್ರಂಥಿಗಳಿಂದ ಸ್ರವಿಸಿದ ಸ್ರಾವ ಹೊರವಾತಾವರಣದ ಸಂಪರ್ಕದಿಂದ ಗಟ್ಟಿಯಾಗಿ ಉಂಟಾದ ಅರಗಿನ ಕವಚದಲ್ಲಿ. ಬೆಳವಣಿಗೆಯ ಹಂತದಲ್ಲಿ ಡಿಂಬಕಗಳು ಮೂರು ಬಾರಿ ಪೊರೆಯನ್ನು ಕಳಚುತ್ತವೆ. ಬೆಳವಣಿಗೆ ಪೂರ್ಣಗೊಂಡ ನಂತರ ಕವಚದಿಂದ ಹೊರಹೊಮ್ಮುವ ಪ್ರಬುದ್ಧ ಕೀಟಗಳಲ್ಲಿ ಗಂಡು ಕೀಟಗಳ ಸಂಖ್ಯೆ ಸರಿಸುಮಾರು ಶೇ. ೩೦ರಿಂದ ೪೦ರಷ್ಟು, ಅಭಾವ ಕಾಲದಲ್ಲಿ ಈ ಸಂಖ್ಯೆ ಮತ್ತೂ ಕಡಿಮೆಯಾಬಹುದು. ಗಮ್ಡು ಕೀಟಗಳಲ್ಲಿ ಕೆಲವು ರೆಕ್ಕೆಗಳನ್ನು ಪಡೆದಿದ್ದರೆ, ಕೆಲವು ರೆಕ್ಕೆರಹಿತವಾಗಿರುತ್ತವೆ. ರೆಕ್ಕೆಗಳಿಂದ ಗಮ್ಡು ಕೀಟಗಳಿಗೆ ಗಮನಾಱವಾದಂತಹ ಯಾವ ಉಪಯೋಗವೂ ಇಲ್ಲದಿರುವುದರಿಂದ, ಈ ವ್ಯತ್ಯಾಸ ಹೆಚ್ಚು ಮಹತ್ವ ಪಡೆದಿಲ್ಲ (ಒಂದು ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ, ಜೀವ ವಿಕಾಸ ಪಥದಲ್ಲಿ, ಮೂಲದಲ್ಲಿ ರೆಕ್ಕೆಗಳಿಂದ ಹಾರುತ್ತಿದ್ದ ಗಂಡು ಕೀಟ, ಕಾಲಕ್ರಮೇಣ ಸರಳೀಕೃತಗೊಂಡು ರೆಕ್ಕೆಗಳನ್ನು ಕಳೆದುಕೊಂಡಿತು). ಇಂದಿನ ಅರಗಿನ ಕೀಟ ಹಾರಲಶಕ್ತವಾದದ್ದು. ಕೆಲವು ಗಂಡು ಕೀಟಗಳಲ್ಲಿ ಇಂದಿಗೂ ಕಂಡು ಬರುವ ರೆಕ್ಕೆಗಳು, ಮೂಲ ಗುಣದ ಇಂದಿನ ತೋರ್ಪಡಿಕೆ. ಗಂಡು ಕೀಟಗಳ ಜೀವಿತಾವಧಿ ಮೂರರಿಂದ ನಾಲ್ಕು ದಿನಗಳು. ಈ ಅವಧಿಯೊಳಗೆ ಗಂಡು ಕೀಟಗಳು ಮಿಂಚಿನಂತೆ ಚಲಿಸಿ ಆದಷ್ಟೂ ಹೆಣ್ಣು ಕೀಟಗಳೊಂದಿಗೆ ಸಂಯೋಗವನ್ನು ನಡೆಸುತ್ತವೆ. ಸಂಯೋಗದ ನಂತರ ಹೆಣ್ಣು ಕೀಟದ ಬೆಳವಣಿಗೆ ತೀವ್ರಗತಿಯಲ್ಲಿರುತ್ತದೆ. ಈ ಸಮಯದಲ್ಲಿ ಅರಗಿನ ಉತ್ಪಾದನೆಯೂ ಹೆಚ್ಚು. ಈ ರೀತಿಯಲ್ಲಿ ಉತ್ಪಾದನೆಗೊಂಡ ಅರಗು ಕೊಂಬೆಗಳ ಮೇಲೆ ಮುದ್ದೆ ಮುದ್ದೆಯಾಗಿ ಹರಡಿಕೊಳ್ಳುತ್ತದೆ. ಅರಗಿನ ಕವಚ ನಿರ್ಮಿಸಿಕೊಂಡ ಹೆಣ್ಣು ಕೀಟ ಮೊಟ್ಟೆಗಳನ್ನಿಡುವ ಕ್ರಿಯೆಯನ್ನು ಆರಂಭಿಸುತ್ತದೆ. ಜೀವನ ಚಕ್ರ ಹೀಗೆಯೆ ಮುಂದುವರೆಯುತ್ತದೆ. ಕೀಟದ ಜೀವನ ಚಕ್ರ ಹೊರ ವಾತಾವರಣದ ಉಷ್ಣತೆಯನ್ನನುಸರಿಸಿ ನಾಲ್ಕರಿಂದ ಎಂಟುವಾರಗಳಲ್ಲಿ ಪೂರ್ಣಗೊಳ್ಳುತ್ತದೆ. ಅರಗಿನ ಕೀಟದಲ್ಲಿ ವರ್ಷಕ್ಕೆ, ಬೇಸಿಗೆ ಹಾಗೂ ಚಳಿಗಾಲದ ಬ್ರೂಡ್ ಎಂಬ ಎರಡು ಚಕ್ರಗಳು ಬರುತ್ತವೆ. ಹೀಗೆ ಉತ್ಪಾದನೆಗೊಂಡ ಅರಗನ್ನು ಮರದಿಂದ ಸಂಗ್ರಹಿಸಿ, ಸಂಸ್ಕರಿಸಿ ಬೇಕಾದ ಆಹಾರಕ್ಕೆ ಅಚ್ಚು ಹೊಯ್ಯಲಾಗುತ್ತದೆ. ಪ್ರಾಚೀನಕಾಲದಿಂದಲೂ ಭಾರತ ಹಾಗು ಪರ್ಷಿಯಾದಲ್ಲಿ, ಅರಗಿನಿಂದ ಉಣ್ಣೆ ಗೆ ಕೆಂಪು ಹಾಗೂ ಕೇಸರಿ ಬಣ್ಣ ಕಟ್ಟಲಾಗುತ್ತದೆ. ೧೯ನೇ ಶತಮಾನದ ಪ್ರಾರಂಭದಲ್ಲಿ ಅರಗಿಗೆ ಇದ್ದಂತಹ ಉಪಯೋಗಗಳು, ಇಂದಿನ ಆಧುನಿಕ ಸಂಶ್ಲೇಷಿತ ರಾಳಗಳ ಅಭಿವೃದ್ಧಿಯಿಂದ ಗಣನೀಯವಾಗಿ ಕ್ಷೀಣಿಸಿವೆ. ಆದರೂ, ಮೆರುಗೆಣ್ಣೆಗಳ, ಮೊಹರಿನ ಮೇಣದ, ಅಲೋಹ ಹಾಗೂ ಲೋಹ, ಲೋಹ ಹಾಗು ಲೋಹಗಳನ್ನು ಬೆಸೆಯಲು,ಪೆಟ್ರೋಲ್ ನಿರೋಧದ ಲೇಪಕ ವಸ್ತುಗಳಲ್ಲಿ ಇಂದಿಗೂ ಅರಗು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಷೆಲ್ ಲ್ಯಾಕ್ ಹಾಗು ರೆಡ್ ಲ್ಯಾಕ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಅರಗಿನ ಉಪಉತ್ಪನ್ನಗಳು. ಮಧ್ಯಪ್ರದೇಶದ ಕೆಲವು ಬುಡಕಟ್ಟು ಜನಾಂಗಗಳಲ್ಲಿನ ವೈದ್ಯಕೀಯ ಪದ್ಧತಿಗಳಲ್ಲಿ ಅರಗಿನ ಕೀಟಗಳನ್ನು ಉದರ ಹಾಗೂ ಶ್ವಾಸಕೋಶದ ತೊಂದರೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಚಾಲ್ಸಿಡ್ ಜಾತಿಯ ಕೀಟಗಳು ಹಾಗು ಬೆಂಕಿ, ಅರಗಿನ ವಿಧ್ವಂಸಕಾರಿ ಶತೃಗಳು.
ಕೃಷಿ ವಿಧಾನ
[ಬದಲಾಯಿಸಿ]- ಎರಡು ತಿಂಗಳ ಸೆಮಿ ಅಲಾಟಾ (ಅರಗಿನ ಕಟ್ಟಿಗೆ) ಸಸಿಯನ್ನು 12 ಇಂಚು ಉದ್ದ, 12 ಇಂಚು ಅಗಲದ ಗುಂಡಿಯಲ್ಲಿ (ಅರಗಿನಕಟ್ಟಿಗೆ) ಸಸಿಯನ್ನು ನೆಡಬೇಕು. ನರ್ಸರಿಯಲ್ಲಿ ಎರಡು ತಿಂಗಳು ಬೆಳೆದ ಸೆಮಿಅಲಾಟಾ ಗಿಡ ನೆಡಲು ಯೋಗ್ಯವಾದದ್ದು. ಆ ನಂತರದಲ್ಲಿ ಆರು ತಿಂಗಳು ಬೆಳೆದ ಅರಗು ಗಿಡಕ್ಕೆ 5–6 ಇಂಚು ಬೆಳೆದ ಹುಳು ಇರುವ ಅರಗಿನಕಟ್ಟಿಗೆ ಗಿಡದ ಕೊಂಬೆಯನ್ನು ತಂದು ಕಟ್ಟಬೇಕು. ಸದೃಢವಾಗಿ ಬೆಳೆದ ಗಿಡಕ್ಕೆ ಕಟ್ಟಿದಾಗ 15–20 ದಿನಗಳಲ್ಲಿ ಹುಳುವು ಉತ್ತಮವಾಗಿ ಬೆಳೆದ ಗಿಡವನ್ನು ಹುಡುಕಿಕೊಂಡು ಕೊಂಬೆಯನ್ನು ಸೇರಿಕೊಳ್ಳುತ್ತದೆ.ಈ ಪದ್ಧತಿಯನ್ನು ಬ್ರೂಕ್ಲ್ಯಾಕ್ ಎಂದು ಕರೆಯುತ್ತಾರೆ.[೧]
- ಅರಗು ತಯಾರಿಕೆ ಯು ಟ್ಯೂಬ್:[೧]
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಅರಗಿನ ಬಗ್ಗೆ ಸಂಪದ ಜ್ಞಾನವಾಹಿನಿಯಲ್ಲಿ ಲೇಖನ Archived 2005-12-15 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]- ↑ "ಅರಗಿನಿಂದ ಅಧಿಕ ಲಾಭ: 26/07/2016". Archived from the original on 2016-07-28. Retrieved 2016-07-26.