ಅಮೆರಿಕದ ಆದಿವಾಸಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮೆರಿಕದ ಆದಿವಾಸಿಗಳು : ಅತ್ಯುನ್ನತ ಶ್ರೇಣಿಯ ಸಸ್ತನಿ ಗಳಿಲ್ಲದಿರುವುದ ರಿಂದಲೂ ಆದಿಮಾನವನ ಅವಶೇಷಗಳಿಲ್ಲದಿರುವುದರಿಂದಲೂ ಅಮೆರಿಕ ಖಂಡದಲ್ಲಿ ಮಾನವ ಜಾತಿ ಉದ್ಭವಿಸಲಿಲ್ಲವಂಬ ಅಭಿಪ್ರಾಯವನ್ನು ಎಲ್ಲರೂ ಸಮರ್ಥಿಸಿರುವರು. ಈಗ ದೊರೆತಿರುವ ಆಧಾರದ ಮೇಲೆ ಪುರಾತನ ಶಿಲಾಯುಗದ ನಾಗರಿಕತೆಯ ಚಿಹ್ನೆಗಳು ಅಲೆಲ್ಲೂ ಕಂಡುಬರುವುದಿಲ್ಲ. ಆದುದರಿಂದ ಸೈಬೀರಿಯದಿಂದ ಬೇರಿಂಗ್ ಜಲಸಂಧಿಯ ಮಾರ್ಗದಲ್ಲಿ ಸು. ೨೫,೦೦೦-೩೫,೦೦೦ ಸಾವಿರ ವರ್ಷಗಳ ಹಿಂದೆ ಮಾನವ ಅಮೆರಿಕ ಖಂಡಕ್ಕೆ ಬರಲುಪಕ್ರಮಿಸಿದನೆನ್ನಬಹುದು. ಕಾಲಕ್ರಮೇಣ ಆತ ಅಮೆರಿಕದ ಎಲ್ಲ ಪ್ರದೇಶಗಳಲ್ಲೂ ನೆಲೆಸಿದ. ದಕ್ಷಿಣ ಅಮೆರಿಕ ಖಂಡದಲ್ಲಿ ಆತ ನೆಲೆಸಲುಪಕ್ರಮಿಸಿದ್ದು ೧೦,೦೦೦ ವರ್ಷಗಳ ಹಿಂದೆ. ಎ.ಎಲ್. ಕ್ರೋಬರ್ ಮತ್ತು ಜೆ. ಎಚ್. ಸ್ಟಿವರ್ಡ್‍ರ ಪ್ರಕಾರ ಅಮೆರಿಕದ ಆದಿವಾಸಿಗಳ ಸಂಖ್ಯೆ ೧,೬೦,೦೦೦. ಇವರಲ್ಲಿ ಬಹುಜನ ಆದಿವಾಸಿಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಗಳಲ್ಲಿ ವಾಸವಾಗಿರುವವರು. ಇವರು ಅಮೆರಿಕದ ಸಂಯುಕ್ತ್ತ ಸಂಸ್ಥಾನಗಳಲ್ಲಿ ಕೆನಡದಲ್ಲಿ ಇದ್ದರಂದೂ ತಿಳಿದುಬಂದಿದೆ. ಇವರಲ್ಲದೆ ಎಸ್ಕಿಮೋಗಳು ಉತ್ತರ ಅಮೆರಿಕದ ಅತ್ಯಂತ ಉತ್ತರ ಭಾಗಗಳಲ್ಲಿ ವಾಸಮಾಡುತ್ತಿರುವರು. ಅಮೆರಿಕದ ಆದಿವಾಸಿಗಳಾದ ಎಸ್ಕಿಮೋ ಮತ್ತು ರೆಡ್ ಇಂಡಿಯನ್ನರು ಮಂಗೋಲಾಯಿಡ್ ಜನಾಂಗಕ್ಕೆ ಸೇರಿದವರಂದು ಪರಿಗಣಿಸಲಾಗಿದೆ. ರೆಡ್ ಇಂಡಿಯನ್ನರಲ್ಲಿ ಸು. ೪೦೦ ಬುಡಕಟ್ಟುಗಳಿವೆಯಲ್ಲದೆ ೧೬೦ ಭಾಷಾವರ್ಗಗಳಿವೆ. ಇವರು ಉತ್ತರ ಅಮೆರಿಕದಲ್ಲೆಲ್ಲ ಹರಡಿಕೊಂಡಿದ್ದಾರೆ. ಇವರ ಬುಡಕಟ್ಟುಗಳಲ್ಲಿ ಉತ್ತರ ಅಮೆರಿಕದ ಟ್ಲೆನ್‍ಗಿಟ್, ಹೈಡ್, ಬೆಲ್ಲಕೂಲ, ಕ್ರೊ, ಬ್ಲಾಕ್ ಫುಟ್, ಅರಪಾಹೊ, ಕಿಯೋವಿ, ಡಕೋಟ, ಹಿಡಟ್ಸ್, ಜಪೋಟ ಆಜ್ಟೆಕ್, ದಕ್ಷಿಣ ಅಮೆರಿಕದ ಇಂಕ, ವಿಟೋಟೊ-ಈ ಕೆಲವರು ಮುಖ್ಯರು. ಇವರಲ್ಲಿ ಕೆಲವು ಬುಡಕಟ್ಟುಗಳನ್ನು ತೆಗೆದುಕೊಂಡು ಅವರ ಜೀವನದ ಸಾಮಾನ್ಯ ರೀತಿಯನ್ನು ಅರಿಯಲು ಅನುಕೂಲವಾಗುತ್ತದೆ. ಮುಖ್ಯವಾಗಿ ಭೌಗೋಳಿಕ ಪರಿಸರ ಆದಿವಾಸಿಗಳ ಜೀವನದ ಬಹುಭಾಗವನ್ನುನಿರ್ಧರಿಸುತ್ತದೆ. ವಿವಿಧ ಪ್ರದೇಶಗಳಲ್ಲಿರುವ ಆದಿವಾಸಿಗಳ ಜೀವನದಿಂದ ಈ ವಿಷಯ ಸ್ಪಷ್ಟಪಡುತ್ತದೆ. ರೆಡ್ ಇಂಡಿಯನ್ನರಲ್ಲಿ ಕೆಲವು ಬುಡಕಟ್ಟುಗಳನ್ನು ತೆಗೆದುಕೊಂಡು ಅವರ ಜೀವನದ ರೀತಿಯನ್ನು ನೋಡಬಹುದು. ಹೈಡಗಳು ರೆಡ್ ಇಂಡಿಯನ್ನರಲ್ಲಿ ಬೆಸ್ತರ ಕೆಲಸ ಮಾಡುವವರು. ಒಳೆಯ ದೋಣಿಗಳನ್ನು ಕಟ್ಟಬಲ್ಲವರಾಗಿದ್ದು ೨೧ ಮೀ ಉದ್ದ ೨.೫ ಮೀ ಅಗಲವಿರುವ ದೋಣಿಯನ್ನು ಒಂದೇ ತುಂಡಿನಿಂದ ಕೆತ್ತಿ ತಯಾರಿಸುತ್ತಿದ್ದ ರು. ಅವರಿಗೆ ಅಲಂಕಾರ ಕಲೆಯಲ್ಲಿ ಬಹಳ ಆಸಕ್ತಿ. ತಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಮೇಲೂ ಸಾಧಾರಣವಾಗಿ ಒಂದು ಪ್ರಾಣಿಯ ಚಿತ್ರವನ್ನುಕೊರೆಯುತ್ತಿದ್ದ ರು. ಹೈಡ್ ಜನರ ವಿಶಿಷ್ಟ್ಟ್ಟ ಪೋಟ್ಲಾಜ್‍ನಲ್ಲಿ ಸಾಮಾಜಿಕ ಸಮಾರಂಭದಲ್ಲಿ ಒಬ್ಬ ವ್ಯಕ್ತಿ ತಾನು ಗಳಿಸಿದ ಐಶ್ವರ್ಯವನ್ನು ಸಮಾರಂಭಕ್ಕೆ ಬಂದ ಗಣ್ಯ ವ್ಯಕ್ತಿಗಳಿಗೆ ಅವರ ಸ್ಥಾನಮಾನಗಳಿಗೆ ಅನುಗುಣವಾಗಿ ಹಂಚುತ್ತಿದ್ದ. ಇದರಿಂದ ಆತನಿಗೆ ಸಮಾಜದಲ್ಲಿ ಗೌರವ ದೊರಕುತ್ತಿತು. ಇಷ್ಟೇ ಅಲ್ಲದೆ ಹಾಗೆ ಮಾಡಿದವನ ಮಕ್ಕಳಿಗೆ ಕುಲೀನ ಅಥವಾ ಶ್ರೇಷ್ಠವರ್ಗಕ್ಕೆ ಪವೇಶಿಸಲು ಅನುಕೂಲವಾಗುತ್ತಿತ್ತು. ಆದುದರಿಂದ ತನ್ನ ಮಕ್ಕಳಿಗೆ ಅಗತ್ಯ ವಾಗಿ ಮಾಡಬೇಕಾದ ಕರ್ತವ್ಯವಂಬ ದೃಷ್ಟಿಯಿಂದ ಈ ಸಮಾರಂಭವನ್ನುಆತ ಆಚರಿಸುತ್ತಿದ್ದ . ಐಶ್ವರ್ಯಶೇಖರಣೆಗಿಂತ, ಅದರ ಹಂಚಿಕೆ ಉತ್ತಮವೆಂಬ ಭಾವನೆ ಈ ಆಚರಣೆಯಲ್ಲಿ ಎದ್ದುಕಾಣುತ್ತದೆ. ಹೈಡಗಳ ಸಮಾಜ ಮಾತೃಪ್ರಧಾನವಾದ ಬಣಗಳಿಂದ ಕೂಡಿದೆ. ಆದುದರಿಂದ ಅವರಲ್ಲಿ ಸ್ತ್ರೀಯರಿಗೆ ಗಣ್ಯವಾದ ಸ್ಥಾನವಿತು. ಅವರಿಗೆ ಹೆಣ್ಣುಮಕ್ಕಳನ್ನು ಕಂಡರೆ ಆಸಕ್ತಿ. ಹೆಚ್ಚಾಗಿ ಹೆಣ್ಣು ಮಕ್ಕಳಾಗಲೆಂದು ಆಸೆಪಡುತ್ತಿದ್ದ ರು. ಮೈದಾನಗಳಲ್ಲಿ ವಾಸಿಸುವ ರೆಡ್ ಇಂಡಿಯನ್ನರಲ್ಲಿ ಕ್ರೊ ಗುಂಪಿನವರು ಪ್ರಮುಖರು. ಅವರು ವಿಶಾಲವಾದ ಮೈದಾನಗಳಲ್ಲಿನ ಪರ್ವತದ ಮೇಕೆ, ಜಿಂಕೆ, ಸಾರಂಗ, ಕಡ, ಕಾಡುಕೋಣಗಳನ್ನು ಬೇಟೆಯಾಡಿ ಜೀವಿಸುತ್ತಿದ್ದರು. ಕಾಡುಕೋಣಗಳ ಬೇಟೆ ಸ್ವಾರಸ್ಯ ವಾಗಿದೆ. ಮೂರು ಕಡೆಗಳಿಂದ ಕಾಡುಕೋಣಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗಿ ನಾಲ್ಕನೆಯ ಕಡೆಯಿರುವ ಕಮರಿಗೆ ಇಳಿಸಿ ಅನಂತರ ನಿಧಾನವಾಗಿ, ಅಗತ್ಯವಾದಾಗ ತಮಗೆ ಬೇಕಾಗುವಷ್ಟನ್ನು ಮಾತ್ರ ಕೊಲ್ಲುತ್ತಿದ್ದರು. ಅವರು ನಾಯಿಯನ್ನು ಪಳಗಿಸಿ ಬೇಟೆಗೆ ಉಪಯೋಗಿಸುತ್ತಿದ್ದ ರು. ೧೬೫೦ರಿಂದ ಈಚೆಗೆ ಅವರು ಕುದುರೆಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. ಕ್ರೊಗಳು ಒಂದು ಸ್ಥಳದಲ್ಲಿ ನೆಲೆಯಾಗಿ ನಿಲ್ಲುವವರಲ್ಲ. ಅವರು ಸ್ಥಳದಿಂದ ಸ್ಥಳಕ್ಕೆ ಹೋಗುವ ವಲಸೆ ಒಂದು ಭವ್ಯವಾದ ಮೆರವಣಿಗೆಯಂತಿದ್ದು ಕೆಲವು ಮೈಲಿಗಳಷ್ಟು ಉದ್ದವಿರುತ್ತಿತ್ತು. ಎಲ್ಲರಿಗಿಂತಲೂ ಮುಂದಾಗಿ ಕುದುರೆಯ ಸವಾರರು ರಸ್ತೆಯಲ್ಲಿ ಅಪಾಯವಿಲ್ಲವೆಂಬುದನ್ನು ನೋಡಿ ತಿಳಿಸುತ್ತಿದ್ದ ರು. ಮೆರವಣಿಗೆಯ ಎರಡು ಕಡೆಗಳಲ್ಲಿ ಕುದುರೆಯ ಸವಾರರು ರಕ್ಷಣೆಗೆ ಬರುತ್ತಿದ್ದ ರು. ಮುಂದುಗಡೆ ಸರ್ವಾಲಂಕಾರಭೂಷಿತರಾದ ಯುದ್ಧದ ಮುಂದಾಳುಗಳು, ಜನಾಂಗದ ಮುಖಂಡರು ಕುದುರೆಗಳ ಮೇಲೆ ಇರುತ್ತಿದ್ದ ರು. ಹೆಂಗಸರು ಅತ್ಯುತ್ತಮವಾದ ಉಡುಪು ಮತ್ತು ಒಡವೆಗಳನ್ನು ಧರಿಸಿಕೊಂಡು ಸಂತೋಷ ದಿಂದ ಹಾಡುತ್ತ ನಡೆದು ಮೆರವಣಿಗೆ ಮೆರಗು ಕೊಡುತ್ತಿದ್ದರು. ಕ್ರೊಗಳು ಯುದ್ಧಪ್ರಿಯರು. ಅವರ ಶತ್ರುಗಳಲ್ಲಿ ಮುಖ್ಯರೆಂದರೆ ಡಕೋಟಗಳು ಮತ್ತು ಬ್ಲಾಕ್ ಫುಟ್‍ಗಳು. ಯುದ್ಧದಲ್ಲಿ ಕೀರ್ತಿಗಳಿಸಿದವರಿಗೆ ಮಾತ್ರ ಸಮಾಜದಲ್ಲಿ ಗಣ್ಯವಾದ ಸ್ಥಾನ ದೊರಕುತ್ತಿತ್ತು. ಇವgದೂ ಮಾತೃಪದಾನವಾದ ಸಮಾಜ ವ್ಯವಸ್ಥೆಯೇ. ಆದರೂ ಹೆಂಗಸರು ಗಂಡಸರಿಗೆ ಸಂಪೂರ್ಣವಾಗಿ ಅಧೀನರು. ಈ ಜನ ನೈಸರ್ಗಿಕ ಶಕ್ತಿಗಳನ್ನೂ ಗಳನ್ನೂ ಆರಾಧಿಸುತ್ತಿದ್ದರು. ಅವರ ಪೂಜೆಗೆ ಹೊಗೆಸೂಪ್ಪು ಅತ್ಯಗತ್ಯ ವಾದ ವಸ್ತು. ಆದ್ದರಿಂದ ಹೊಗೆಸೊಪ್ಪನ್ನು ಬೆಳೆಯುವುದು ಅವರು ಮಾಡುತ್ತಿದ್ದ ಏಕೈಕ ಬೇಸಾಯ. ಆಧುನಿಕ ನಾಗರಿಕತೆಯ ಪ್ರಭಾವಕ್ಕೆ ಸ್ವಲವೂ ಒಳಪಡದೆ, ದಟವಾದ ಕಾಡುಗಳಲ್ಲಿ ಅವ್ಯಾಹತವಾಗಿ ನೈಸರ್ಗಿಕ ಶಕ್ತಿಗಳ ಕಾಠಿಣ್ಯವನ್ನುಎದುರಿಸುತ್ತ ಜೀವಿಸುವುದರಲ್ಲಿಅಮೆಜಾನ್ ನದಿಯ ಕಾಡುಗಳಲ್ಲಿರುವ ವಿಟೋಟೋಗಳು ಅತಿ ಮುಖ್ಯರು. ಕಾಡುಗಳಲ್ಲಿ ವಿವಿಧ ಆಹಾರಗಳು ಯಥೇಚ್ಛವಾಗಿದ್ದರೂ ಅವರಿಗೆ ಆಹಾರ ದೊರಕುವುದು ಕಷ್ಟ. ಮರಗಳ ಮೇಲೆ, ಬಳ್ಳಿಗಳಲ್ಲಿ ಇರುವ ಹಣ್ಣುಗಳು ಇಲಿಗಳು, ಕಪ್ಪೆಗಳು, ಹಲ್ಲಿಗಳು, ಹಾವುಗಳು ಮೊದಲಾದ ಪ್ರಾಣಿೀಗಳೇ ಇವರ ಆಧಾರ. ಹಲ್ಲಿಗಳ ಮತ್ತು ಹಾವುಗಳ ಮೊಟ್ಟೆಗಳನ್ನೂ ತಿನ್ನುವರು. ಆದರೆ ಹಕ್ಕಿಗಳ ಮೊಟ್ಟೆಗಳನ್ನು ತಿನ್ನುವುದಿಲ್ಲ. ಜೇನುಗೂಡಿಗೆ ಹೊಗೆ ಹಾಕಿ ಜೇನನ್ನು ಇಳಿಸುತ್ತಾರೆ. ಕೆಲವು ಸಾರಿ ಜಿಂಕೆಗಳನ್ನು ಈಟಿಯಿಂದ ಬೇಟೆಯಾಡುವುದುಂಟು. ವಿಟೋಟೊಗಳ ವ್ಯವಸಾಯಕ್ರಮ ಪುರಾತನವಾದದ್ದು. ಮೊದಲು ಒಂದು ಜಾಗದಲ್ಲಿರುವ ಗಿಡಮರಗಳನ್ನು ಕಡಿದು ಅವುಗಳಿಗೆ ಬೆಂಕಿಹಾಕಿ ಸುಡುವುದು; ಮಳೆ ಬಿದ್ದು ಪಕ್ವವಾದ ಮೇಲೆ ಅಲ್ಲಿ ಕಾಳುಗಳನ್ನು ಚೆಲ್ಲುವುದು; ಈ ರೀತಿಯ ವ್ಯವಸಾಯದಿಂದ ಸಲಮಟ್ಟಿಗೆ ಮುಸುಕಿನಜೋಳ, ಗೆಣಸು, ಬಾಳೆ, ಮೆಣಸು, ಅನಾನಸ್, ಹೊಗೆಸೊಪ್ಪು ಮತ್ತು ಕೋಕೊ ಮೊದಲಾದುವುಗಳನ್ನು ಬೆಳೆಯುವುದು. ಇವರಲ್ಲಿ ಒಂದು ಬಣದವರೆಲ್ಲರೂ ಒಂದೇ ದೊಡ್ಡ ಗುಡಿಸಿಲಿನಲ್ಲಿ ವಾಸಮಾಡುತ್ತಾರೆ. ಆ ಗುಡಿಸಲು ೨೧ ಮೀ ಉದ್ದ ೧೮ ಮೀ ಅಗಲ ಮತ್ತು ಸರಾಸರಿ ೯ ಮೀ ಎತ್ತರವಿರುತ್ತದೆ. ಅದಕ್ಕೆ ಕಿಟಕಿಗಳಿಲ್ಲ. ಪ್ರತಿಯೊಂದು ಕುಟುಂಬಕ್ಕೆ ಪ್ರತ್ಯೇಕವಾದ ಒಲೆಯಿರುತ್ತದೆ. ಮಲಗಲು ಹಗ್ಗ ದಿಂದ ಮಾಡಿದ ಒರಟಾದ ಮಂಚ. ಗಂಡಸರು ಮರದ ತೊಗಟೆಯಿಂದ ಮಾಡಿದ ಉಡುಪನ್ನು ಧರಿಸುತ್ತಾರೆ. ತಮ್ಮ ಉಡುಪನ್ನು ಬೇರೆಯವರೆದುರಿಗೆ ಕಳಚುವುದಿಲ್ಲ. ಆದರೆ ಹೆಂಗಸರು ಮಾತ್ರ ಯಾವ ಉಡುಪುಗಳನ್ನೂ ಧರಿಸದೆ ನಗ್ನರಾಗಿರುತ್ತಾರೆ. ಬಟ್ಟೆಗಳನ್ನು ತೊಡದಿದ್ದರೂ ಹೆಂಗಸರಿಗೆ ಒಡವೆಗಳ ಮೇಲೆ ಬಹಳ ಆಸೆ. ಗಂಡಸರೂ ಒಡವೆಗಳನ್ನು ಧರಿಸುತ್ತಾರೆ. ಸಾಮಾನ್ಯವಾಗಿ ತಮ್ಮ ಕೀರ್ತಿಗೆ ಗುರುತಾದ ಹಲ್ಲುಗಳ ಹಾರವನ್ನು ಧರಿಸುವುದು ವಾಡಿಕೆ. ಈ ಬುಡಕಟ್ಟು ಹಲವಾರು ಪಿತೃಪ್ರಧಾನವಾದ ಬಣಗಳಿಂದ ಕೂಡಿದೆ. ಒಂದೇ ಬುಡಕಟ್ಟಿಗೆ ಸೇರಿದ ಬಣಗಳಲ್ಲೂ ವೈರ ಕಾಣಬಹುದು. ಆದ್ದರಿಂದ ಇವರು ಸದಾ ಯುದ್ಧದ ಯೋಚನೆಯಲ್ಲಿಯೇ ಇರುವರು. ಇವರಿಗೆ ಬೇರೆಯ ಬುಡಕಟ್ಟುಗಳನ್ನು ಕಂಡರೆ ಹೆದರಿಕೆಯಾದುದರಿಂದ ಯಾವಾಗಲೂ ಯುದ್ಧಭಯದಿಂದ ಜೀವಿಸುವರು. ಯುದ್ಧದಲ್ಲಿ ಸೋತವರನ್ನು ಸೆರೆಹಿಡಿದು ಅವರನ್ನು ಬೇಯಿಸಿ ತಿನ್ನುವರು. ವಿಟೋಟೋಗಳು ಏಕಪತ್ನೀವ್ರತಸ್ಥ ರು. ಇವರಲ್ಲಿ ವಿವಾಹ ವಿಚ್ಛೇದನವಿದೆ. ಗಂಡಸಿನಿಂದ ಹೆಂಗಸು ವಿವಾಹವಿಚ್ಛೇದನ ಪಡೆಯುವುದು ಸುಲಭ. ಹೆಂಗಸು ಓಡಿಹೋದರೆ ದಾಂಪತ್ಯ ಜೀವನ ಅಂತ್ಯವಾಗುತ್ತದೆ. ಆದರೆ ಗಂಡಸು ಹೆಂಡತಿಯ ದೋಷವನ್ನು ಸ್ಥಿರಪಡಿಸದೆ ಇದ್ದರೆ ವಿವಾಹವಿಚ್ಛೇದನ ದೊರಕದು. ಆಹಾರದ ಕೊರತೆಯಿಂದ ಮುದುಕರನ್ನೂ ಖಾಯಿಲೆಯವgನ್ನೂ ಇವರು ಕೊಂದು ಹಾಕುತ್ತಾರೆ. ಇವರು ಪ್ರಾಣಿಗಳನ್ನೂ ನೈಸರ್ಗಿಕ ಶಕ್ತಿಗಳನ್ನೂ ಆರಾಧಿಸುವರು. ಪಾಶ್ಚಾತ್ಯ ನಾಗರಿಕತೆಯ ಸಂಪರ್ಕದಿಂದ ಆದಿವಾಸಿಗಳ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಿನಲ್ಲಿ ನರಹತ್ಯೆ, ನರಮಾಂಸಸೇವನೆ, ಮುದುಕರನ್ನು ನಾಶಪಡಿಸುವುದು ಮೊದಲಾದ ಕ್ರೂರಪದ್ಧತಿಗಳು ನಶಿಸಿವೆ. ಅನೇಕ ಸರ್ಕಾರಗಳು ಆದಿವಾಸಿಗಳಿಗೆ ವೈದ್ಯಕೀಯ ಸೌಲಭ್ಯ ಗಳನ್ನೂ ಒದಗಿಸಿಕೊಟ್ಟಿವೆ. ಈಗಿನ ವಿಶ್ವವಿದ್ಯಾನಿಲಯ ಗಳಲ್ಲಿ ಆದಿವಾಸಿಗಳ ಭಾಷಾಧ್ಯ ಯನ, ಅವರ ಜನಪದ ಸಾಹಿತ್ಯ ಮತ್ತು ವಸ್ತುಸಂಗ್ರಹಣ ಕಾರ್ಯ ನಡೆಯುತ್ತಿದೆ. ಯುರೋಪಿನವರು ಅಮೆರಿಕದ ನೆಲದಲ್ಲಿ ಕಾಲಿಟ್ಟಂದಿನಿಂದ ಅವರಿಗೂ ಆದಿವಾಸಿಗಳಿಗೂ ಘರ್ಷಣೆ, ರಾಜಿಗಳು ನಡೆಯುತ್ತಿದ್ದು ಈ ಮುನ್ನೂರು ನಾನೂರು ವರ್ಷಗಳಲ್ಲಿ ಆದಿವಾಸಿಗಳನೇಕರು ಸತ್ತಿದ್ದಾರೆ. ಉಳಿದವರು ವಿದೇಶೀಯ ರೊಂದಿಗೆ ಬೆರೆತಿದ್ದಾರೆ. ಒಟ್ಟಿನಲ್ಲಿ ಅಮೆರಿಕದ ಆದಿವಾಸಿಗಳ ಜೀವನ ಇಂದಿಗೂ ಸಹ ವೈವಿಧ್ಯ ಪೂರ್ಣವಾಗಿ, ಅನೇಕ ಹಳೆಯ ಸಂಪ್ರದಾಯಗಳನ್ನೊಳಗೊಂಡು, ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿದೆ. (ನೋಡಿ- ಆಜ್ಟೆಕ್ ಸಂಸ್ಕೃತಿ; ಆದಿವಾಸಿಗಳು; ಎಸ್ಕಿಮೋ; ರೆಡ್-ಇಂಡಿಯನ್ನರು; (ಎಚ್.ಎಂ.ಎಸ್.)