ಅನುವರ್ಧನೆ
ಅನುವರ್ಧನೆ ಎಂಬುದು ಒಂದು ಜೀವಿಯ ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಗಳಿಗೆ ಸಂಬಂಧಿಸಿದುದಾಗಿದೆ. ಅನು ಎಂದರೆ ದೇಹದ ಅವಶ್ಯಕತೆಗಳಿಗೆ ಅನುಸಾರವಾಗಿ ವರ್ಧನೆ ಎಂದರೆ ಹೆಚ್ಚುವುದು ಎಂದರ್ಥ. ದೇಹದ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುವ ರಾಸಾಯನಿಕ ಕ್ರಿಯೆಗಳ ಒಟ್ಟು ಮೊತ್ತವನ್ನೇ ಅನುವರ್ಧನೆ ಎಂದು ಕರೆಯಬಹುದು. ಈ ಅನುವರ್ಧನೆಯಲ್ಲಿ ಎರಡು ವಿಧಗಳಿವೆ. ಮೊದಲನೆಯದು ಅಭಿವರ್ಧನೆ. ದೇಹವು ತಾನು ಅರಗಿಸಿಕೊಂಡ ಶರ್ಕರಾಂಶ, ಪ್ರೋಟೀನು ಮತ್ತು ಅಮೈನೋ ಆಮ್ಲಗಳನ್ನು ತನ್ನ ಮುಂದಿನ ಭವಿಷ್ಯದ ಬಳಕೆಗಾಗಿ ಮೇಧಕೋಶಗಳ ರೂಪದಲ್ಲಿ ಸಂಗ್ರಹಿಸಿಡುವ ಅಥವಾ ದೇಹದ ಬೆಳವಣಿಗೆಗಾಗಿ ಬಳಸುವ ಪ್ರಕ್ರಿಯೆಯನ್ನು ಅಭಿವರ್ಧನೆ ಎಂದು ಕರೆಯಲಾಗುತ್ತದೆ. ಎರಡನೆಯದು ಅಪವರ್ಧನೆ. ಉಪವಾಸ ಇತ್ಯಾದಿ ಸಂದರ್ಭಗಳಲ್ಲಿ ಪೋಷಕಾಂಶಗಳು ಮತ್ತು ಶಕ್ತಿಯ ಕೊರತೆ ಉಂಟಾದಾಗ ದೇಹವು ಮೇಧಕೋಶಗಳ ರೂಪದಲ್ಲಿ ತಾನು ಕೂಡಿಟ್ಟ ಶಕ್ತ್ಯಂಶವನ್ನು ವಿಘಟನೆಗೊಳಪಡಿಸಿ, ಅದನ್ನು ಬಳಸಿಕೊಳ್ಳುವ ಪ್ರಕ್ರಿಯೆಗೆ ಅಪವರ್ಧನೆ ಎಂದು ಕರೆಯಲಾಗುತ್ತದೆ. ಹೀಗೆ ದೇಹದಲ್ಲಿ ಜೀವಕೋಶಗಳ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುವ ರಾಸಾಯನಿಕ ಕ್ರಿಯೆಗಳು ಸಸ್ತನಿಗಳಲ್ಲಿ ಸಾಮಾನ್ಯವಾಗಿ ಆಮ್ಲಜನಕದ ಉಪಸ್ಥಿತಿಯಲ್ಲಿ ನಡೆಯುತ್ತದೆ.ಇದಕ್ಕೆ ವಾತಾನುವರ್ಧನೆ ಎಂದು ಕರೆಯಲಾಗುತ್ತದೆ. ಆದರೆ ಕೆಲವೊಂದು ಒತ್ತಡಮಯ ಪರಿಸ್ಥಿತಿಗಳಲ್ಲಿ ಆಮ್ಲಜನಕದ ಅನುಪಸ್ಥಿತಿಯಲ್ಲೂ ಸಹಾ ನಡೆಯುತ್ತದೆ. ಉದಾಹರಣೆಗೆ ಅತಿಯಾದ ವ್ಯಾಯಾಮವನ್ನು ವ್ಯಕ್ತಿ ಮಾಡುತ್ತಿರುವ ಸನ್ನಿವೇಶದಲ್ಲಿ ದೇಹದ ಎಲ್ಲಾ ಜೀವಕೋಶಗಳಿಗೂ ಅಗತ್ಯವಾದ ಆಮ್ಲಜನಕ ದೊರೆಯುವುದಿಲ್ಲ. ಇಂತಹಾ ಸನ್ನಿವೇಶಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳನ್ನು ನಿರ್ವಾತಾನುವರ್ಧನೆ ಎಂದು ಕರೆಯಲಾಗುತ್ತದೆ.