ವಿಷಯಕ್ಕೆ ಹೋಗು

ಅನುಭವ ಪ್ರಧಾನವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಭವ ಪ್ರಧಾನವಾದ, ಇದು ಅನುಭವವೇ ಎಲ್ಲ ಜ್ಞಾನಕ್ಕೂ ಆಧಾರವೆಂಬ ಈ ವಾದವನ್ನು (ಅನುಭವೈಕವಾದ; ಎಂಪಿರಿಸಿಸಮ್) ಒಂದು ಸಿದ್ಧಾಂತವೆಂದು ಕರೆಯುವುದಕ್ಕಿಂತಲೂ ಒಂದು ಮನೋಭಾವೆಂದು ಕರೆಯುವುದು ಮೇಲು. ಎಲ್ಲಾಕಾಲದ, ಎಲ್ಲಾ ದೇಶಗಳ ದರ್ಶನಗಳಲ್ಲಿಯೂ ಈ ವಾದವನ್ನು ಕಾಣುತ್ತೇವೆ. ಅನುಭವವೆಂದರೆ ಮಾನವನ ಸಾಮಾನ್ಯಾನುಭವ. ಸಂಕುಚಿತವಾದ ಅರ್ಥದಲ್ಲಿ ನಮ್ಮ ಜ್ಞಾನ ಇಂದ್ರಿಯಜನ್ಯಜ್ಞಾನದಿಂದ ಪ್ರಾರಂಭವಾಗುತ್ತದೆ. ಇಂದ್ರಿಯಗಳೇ ಅದರ ಪ್ರಮಾಣ. ಇಂದ್ರಿಯ ಜ್ಞಾನದ ಆಧಾರದಿಂದಲೇ ವಸ್ತುಗಳ ಯಥಾರ್ಥ ಸ್ವರೂಪವನ್ನು ನಿರ್ಣಯಿಸಬೇಕೆಂಬುದು ಈ ವಾದದ ಜೀವಾಳ.[]

ಹಿನ್ನೆಲೆ

[ಬದಲಾಯಿಸಿ]

ಅನುಭವವೇ ಎಲ್ಲ ಜ್ಞಾನದ ಆಧಾರ ಎಂದು ಎಲ್ಲ ದರ್ಶನಗಳು ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡಿರುತ್ತವೆ. ಅನುಭವಪ್ರಧಾನವಾದದಲ್ಲಿ ಅನುಭವ ಎಂಬ ಮಾತನ್ನು ಸಂಕುಚಿತವಾದ ಅರ್ಥದಲ್ಲಿ ಪ್ರಯೋಗಮಾಡಿದೆ. ಇಂದ್ರಿಯಾತೀತವಾದ ಅನುಭವ ಸಾಧ್ಯವಿಲ್ಲವೆಂದು ಇದು ಒಪ್ಪುವುದಿಲ್ಲ. ನಮ್ಮ ಸಾಮಾನ್ಯವಾದ ಅನುಭವಕ್ಕೆ ನಿಲುಕದ ಅಂದರೆ ಇಂದ್ರಿಯಾತೀತವಾದ ವಸ್ತುವಿನ ತಿಳಿವು ಸಾಧ್ಯವಿಲ್ಲವೆಂದು ಹೇಳುತ್ತಾರೆ.

ಪ್ರಾಚೀನ ದರ್ಶನ

[ಬದಲಾಯಿಸಿ]

ಪ್ರಾಚೀನ ದರ್ಶನಗಳಲ್ಲಿ ಪ್ರಸಿದ್ಧವಾದ ಗ್ರೀಕ್ ಮತ್ತು ಭಾರತೀಯ ದರ್ಶನಗಳಲ್ಲಿ ಮೂಲಭೂತವಾದ ಒಂದು ವ್ಯತ್ಯಾಸ ಕಂಡು ಬರುತ್ತದೆ. ಭಾರತದ ದಾರ್ಶನಿಕರು ಆಂತರಿಕಾನುಭವದಲ್ಲಿ ಆಸಕ್ತರಾಗಿದ್ದರು. ಗ್ರೀಕ್ ದಾರ್ಶನಿಕರೂ ಬಾಹ್ಯವಸ್ತುಗಳ ಅನುಭವದಲ್ಲಿ ಆಸಕ್ತರಾಗಿದ್ದರು. ಭಾರತದರ್ಶನ ಆತ್ಮನಿಷ್ಠವಾಗಿತ್ತು. ಗ್ರೀಕರ ದರ್ಶನ ವಸ್ತುನಿಷ್ಠವಾಗಿತ್ತು. ಇದು ಈ ದರ್ಶನಗಳ ಸಾಮಾನ್ಯಧೋರಣೆ ಎಂದು ಮಾತ್ರ ಹೇಳಬಹುದು. ಗ್ರೀಕರು ಬಾಹ್ಯಪ್ರಕೃತಿಯಲ್ಲಿ ತೋರ್ಪಡಿಸಿದ ಈ ಆಸಕ್ತಿ ಆಧುನಿಕ ವಿಜ್ಞಾನಕ್ಕೂ ಸ್ವಭಾವವಾದಕ್ಕೂ (ನ್ಯಾಚುರಲಿಸಂ) ದಾರಿ ಮಾಡಿಕೊಟ್ಟಿತು. ಕೆಪ್ಲರ್, ಗೆಲಿಲಿಯೊ, ನ್ಯೂಟನ್ ಮೊದಲಾದವರು ಬಾಹ್ಯಜಗತ್ತಿನ ಸ್ವರೂಪವನ್ನು ಅರಿಯುವುದರಲ್ಲಿ ಉದ್ಯುಕ್ತರಾದರು. ಇವರ ಸಂಶೋಧನೆಗಳ ಹಿಂದೆ ಮೂಡಿದ್ದ ವ್ಶೆಜ್ಞಾನಿಕಪದ್ಧತಿಯನ್ನು, ಇಂದ್ರಿಯಾನುಭವ ವಿಮರ್ಶೆಯನ್ನು ಕೈಗೊಂಡು ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ನಿವಾರಿಸಲು ಪ್ರಯತ್ನಮಾಡಿದವನು ಫ್ರಾನ್ಸಿಸ್ ಬೇಕನ್. ಈತ ಹೂಡಿದ ತರ್ಕ ಅನುಗಮನತರ್ಕ (ಇಂಡಕ್ಟಿವ್ ಲಾಜಿಕ್) ಎನಿಸಿಕೊಂಡಿದೆ. ಇಂದ್ರಿಯಾನುಭವ ತರ್ಕದ ಆಧಾರವೆಂದು ಇವನ ಮತ. ಸಾಮಾನ್ಯದಿಂದ ವಿಶೇಷಕ್ಕೆ ಇಳಿದು ಬರುವ ತರ್ಕಕ್ಕಿಂತಲೂ ವಿಶೇಷದಿಂದ ಸಾಮಾನ್ಯಕ್ಕೆ ಏರುವ ತರ್ಕ ಹೆಚ್ಚು ಫಲಕಾರಿಯಾಗುವುದೆಂದು ಈತ ಪ್ರತಿಪಾದಿಸಿದ್ದಾನೆ. ವಿಶ್ವದಲ್ಲಿ ಕಾರ್ಯಕಾರಣ ಭಾವವನ್ನು ಅನ್ವೇಷಣೆ ಮಾಡುವುದೇ ವಿಜ್ಞಾನದ ಮುಖ್ಯಗುರಿ ಎಂಬುದು ಇವನ ಅಭಿಪ್ರಾಯವಾಯಿತು.[]

ಪ್ರಮಾಣ

[ಬದಲಾಯಿಸಿ]

ಕೇವಲ ಪ್ರತ್ಯಕ್ಷಪ್ರಮಾಣ ಒಂದೇ ಸರಿಯಾದದ್ದೆಂದು ಬೋಧಿಸಿದವರಲ್ಲಿ ಹಾಬ್ಸ್ ಎಂಬ ಆಂಗ್ಲ ದಾರ್ಶನಿಕನೂ ಒಬ್ಬ. ಭಾರತದಲ್ಲಿ ಚಾರ್ವಾಕದರ್ಶನದ ಮತವೂ ಇದೇ ರೀತಿಯಾಗಿತ್ತು. ಇಂದ್ರಿಯಗಳಿಗೆ ಗೋಚರವಾಗದುದನ್ನು ಸತ್ಯವೆಂದು ಅಂಗೀಕರಿಸಲು ಹಾಬ್ಸ್ ನಿರಾಕರಿಸಿದ.

ಅನುಭವಪ್ರಧಾನವಾದದ ಪ್ರಮುಖ ದಾರ್ಶನಿಕರಲ್ಲಿ ಪ್ರಸಿದ್ಧಿ ಪಡೆದವರು ಲಾಕ್, ಬಕ್ರ್ಲೆ ಮತ್ತು ಹ್ಯೂಮ್, ಇವರ ಕಾಲ ಹದಿನೇಳು ಹದಿನೆಂಟನೆಯ ಶತಮಾನಗಳು. ಲಾಕ್ ತನ್ನ ಗ್ರಂಥದಲ್ಲಿ ಅನುಭವದ ವ್ಯಾಪ್ತಿ ಮತ್ತು ಇತಿಮಿತಿಗಳನ್ನು ವಿವರಿಸಿ ಇಂದ್ರಿಯಜನ್ಯಜ್ಞಾನವೊಂದೇ ನಿಶ್ಚಿತ ಜ್ಞಾನವೆಂದು ಬೋಧಿಸಿದ್ದಾನೆ. ಇವನ ಅಭಿಪ್ರಾಯದಲ್ಲಿ ಅನುಭವ ಹುಟ್ಟುವುದಕ್ಕೆ ಮೊದಲು ನಮ್ಮ ಮನಸ್ಸು ಒಂದು ಖಾಲಿಸ್ಲೇಟಿನಂತೆ ಇರುತ್ತದೆ; ಮೊದಲೇ ಏನೂ ಬರೆದಿರುವುದಿಲ್ಲ ಆದ್ದರಿಂದ ನಮ್ಮ ಮನಸ್ಸಿಗೆ ಯಾವ ಅನುಭವ ಬೋಧೆಯಾಗಬೇಕಾದರೂ ಅದು ಹೊರಗಿನ ಪದಾರ್ಥಗಳು ನಮ್ಮ ಮನಸ್ಸಿನ ಮೆಲೆ ಒತ್ತಿದ ಮುದ್ರೆಯೆಂದು ಭಾವಿಸಬೇಕು. ಈ ಮುದ್ರೆಗಳು ಬಾಹ್ಯಭಾವಗಳು. ಬಾಹ್ಯಭಾವಗಳನ್ನು ಸೇರಿಸುವ ಭಾವಗಳು ಅಂತರಂಗದವು. ಹೀಗೆ ಲಾಕನು ಬಾಹ್ಯ ಮತ್ತು ಆಂತರಿಕಭಾವನೆಗಳೆಂದು ಎರಡು ಭೇದಗಳನ್ನೂ ಕಲ್ಪಿಸಿದ.[]

ಅನುಭವ ದರ್ಶನ

[ಬದಲಾಯಿಸಿ]

ಲಾಕನ ತರುವಾಯ ಬಂದ ಬಕ್ರ್ಲೆ ಈ ತರ್ಕವನ್ನು ಮುಂದುವರಿಸಿ ಒಂದು ಪದಾರ್ಥ ವಾಸ್ತವವಾಗಿ ಇದೆ ಎನ್ನಬೇಕಾದರೆ ಅದು ನಮಗೆ ಕಂಡಿರಬೇಕು ಎಂದು ವಾದಿಸಿದ. ಇರುವುದು ಎಂದರೆ ಪ್ರತ್ಯಕ್ಷ ನೋಡಿದ್ದು (esse esಣ ಠಿeಡಿಛಿiಠಿi) ಎಂಬುದು ಅವನು ಮಂಡಿಸಿದ ಸೂತ್ರ. ಆದ್ದರಿಂದ ನಮಗೆ ತಿಳಿದಿರುವುದೆಲ್ಲ ಈ ಇಂದ್ರಿಯಭಾವಗಳು ಮಾತ್ರವೇ. ಇವುಗಳಿಗೆ ಆಧಾರವಾಗಿ ಜಡವಸ್ತು ಇದೆ ಎಂದು ವಾದಿಸುವುದಕ್ಕಾಗುವುದಿಲ್ಲ. ಏಕೆಂದರೆ ಅದು ನಮ್ಮ ಮನಸ್ಸಿಗೆ ಅರಿವಾದ ಇಂದ್ರಿಯಭಾವನೆಯಲ್ಲ. ನಮಗೆ ನೇರವಾಗಿ ಅರಿವಾದುವು ನಮ್ಮ ಆತ್ಮ ಮತ್ತು ಅದು ಕಂಡ ಭಾವನೆಗಳು ಮಾತ್ರವೆ. ಬಾಹ್ಯ ವಿಶ್ವ ಒಂದಿದೆ ಅನ್ನುವ ಅರಿವು ಲಭ್ಯವಾದುದಿಲ್ಲ, ಆದ್ದರಿಂದ ಬಾಹ್ಯಜಗತ್ತು ಇದೆಯೋ ಇಲ್ಲವೋ ನಾವರಿಯೆವು. ನಮ್ಮ ಅಂತಃಕರಣ ಒಂದನ್ನೇ ನಮ್ಮ ಆತ್ಮವಸ್ತು ಒಂದನ್ನೇ ನಾವರಿಯಬಲ್ಲೆವು. ಹೀಗೆಂದು ಇವನ ತರ್ಕ ಮುಂದುವರಿಯಿತು.[]

ಗೋಚರ ಮತ್ತು ಅಗೋಚರ

[ಬದಲಾಯಿಸಿ]

ಡೇವಿಡ್ ಹ್ಯೂಮ್ ಇದೇ ತರ್ಕವನ್ನೇ ಅವಲಂಬಿಸಿ ಬಕ್ರ್ಲೆ ಯಾವ ತರ್ಕದಿಂದ ಬಾಹ್ಯವಾದ ಜಡವಸ್ತು ಇಲ್ಲವೆಂದು ವಾದಿಸಿದೆಯೋ ಅದೇ ತರ್ಕವನ್ನೇ ಬೆಳೆಸಿಕೊಂಡು ನಮ್ಮ ಕಣ್ಣಿಗೆ ಗೋಚರವಾದ ಆತ್ಮವಸ್ತು ಇಲ್ಲವೆಂದು ವಾದಿಸಿದ. ವಾಸ್ತವಿಕ ಜಗತ್ತು, ಅಂತರಾತ್ಮ ಇವೆರಡರ ವಿಷಯದಲ್ಲಿ ಸಂಶಯ ಪಡಬೇಕಾದುದು ಅಗತ್ಯವೆಂದು ವಾದಿಸಿ ಈ ಅನುಭವಪ್ರಧಾನವಾದ ಹೇಗೆ ಸಂದೇಹವಾದದಲ್ಲಿ ನಿರ್ವಾಹವಿಲ್ಲದೆ ಮುಕ್ತಾಯಗೊಳ್ಳುವುದೆಂಬುದನ್ನು ತೋರಿಸಿಕೊಟ್ಟ. ಅಂದರೆ ಈ ವಿಚಾರತರಂಗದಲ್ಲಿ ಅನುಭವೈಕವಾದದ ತಾರ್ಕಿಕಪರ್ಯವಸಾನ ಸಂಶಯವಾದುದೆಂದು ಡೇವಿಡ್ ಹ್ಯೂಮ್ ಯುಕ್ತಿಯುಕ್ತವಾಗಿ ತೋರಿಸಿಕೊಟ್ಟ.[]

ಆದರೆ ಸಮಕಾಲೀನ ಯುರೋಪಿನ ಮತ್ತು ಅಮೆರಿಕದ ದಾರ್ಶನಿಕರಲ್ಲಿ ಅನುಭವ ಪ್ರಧಾನ ವಾದ ರೂಪಾಂತರಗೊಂಡಿರುವುದನ್ನು ಜಿ. ಇ. ಮೂರ್, ವಿಲಿಯಂ ಜೇಮ್ಸ್, ಜಾನ್ ಡ್ಯೂಯಿ ಮತ್ತು ಬಟ್ರ್ರೆಂಡ್ ರಸೆಲ್‍ರವರ ವಾದಗಳಲ್ಲಿ ಕಾಣಬಹುದು.

ಭಾರತದಲ್ಲಿ ಅನುಭವ ಪ್ರಧಾನವಾದ

[ಬದಲಾಯಿಸಿ]

ಭಾರತದ ದಾರ್ಶನಿಕರಲ್ಲೂ ಈ ವಾದದ ಛಾಯೆಯನ್ನು ಅನೇಕ ಕಡೆ ನೋಡುತ್ತೇವೆ. ಸಾಮಾನ್ಯವಾಗಿ ಅನುಮಾನಪ್ರಮಾಣದ ನಿರಾಕರಣೆ ಈ ವಾದದ ಮುಖ್ಯಸಾರಾಂಶ. ಈ ವಾದದವರಲ್ಲಿ ಎರಡು ಪಕ್ಷಗಳಿವೆ. ಪ್ರತ್ಯಕ್ಷದ ವಿನಾ ಬೇರೆ ಪ್ರಮಾಣವಿಲ್ಲವೆಂಬುದು ಒಂದು. ಅನುಮಾನವನ್ನು ಒಪ್ಪಿದರೂ ಅದರಿಂದ ಅನುಭವಾತೀತವಾದ ಆತ್ಮ ಮತ್ತು ಈಶ್ವರ ಮುಂತಾದ ವಸ್ತುಗಳನ್ನು ಸಾಧಿಸಲಾಗುವುದಿಲ್ಲವೆಂಬುದು ಮತ್ತೊಂದು. []

ಉಲ್ಲೇಖಗಳು

[ಬದಲಾಯಿಸಿ]