ಅದ್ಭುತಕಥೆ

ವಿಕಿಪೀಡಿಯ ಇಂದ
Jump to navigation Jump to search

ಅದ್ಭುತಕಥೆ[ಬದಲಾಯಿಸಿ]

ಗದ್ಯಸಾಹಿತ್ಯದ ಪ್ರಮುಖಪ್ರಕಾರವಾದ ಕಾದಂಬರಿಯ ವಿಕಾಸಕ್ಕೆ ಎಡೆಮಾಡಿಕೊಟ್ಟ ಒಂದು ಬಗೆಯ ಕಥೆಗಳು (ರೊಮಾನ್ಸ್). ಲ್ಯಾಟಿನ್ ಭಾಷೆಯ ಒಂದು ಸ್ವರೂಪವಾದ ರೊಮಾನ್ಸ್ ಭಾಷೆಯಲ್ಲಿ ರಚಿತವಾದ ಹಲವಾರು ಕಥನಕಾವ್ಯ ಮತ್ತು ಗದ್ಯಕಥನಗಳನ್ನು ಕೆಲವು ಕಾಲದವರೆಗೆ ರೊಮಾನ್ಸ್ ಎಂದೇ ಕರೆದರು. ಆ ಮಾತಿಗೆ ವೃತ್ತಾಂತಕಥೆಯೆಂದೂ ಅರ್ಥವಿತ್ತು.

ಅದ್ಭುತಕಥೆಯ ಇತಿಹಾಸ[ಬದಲಾಯಿಸಿ]

ಅದ್ಭುತಕಥೆಯ ಲಕ್ಷಣಗಳನ್ನು ನಾವು ಮೊಟ್ಟಮೊದಲು ಹೋಮರನ ಒಡಿಸ್ಸಿ ಗ್ರಂಥದಲ್ಲಿ ಕಾಣಬಹುದು. ಆನ್ ದಿ ಸಬ್‍ಲೈಮ್ ಎಂಬ ಗ್ರಂಥವನ್ನು ರಚಿಸಿದ ಲಾಂಜೈನಸ್ ಹೋಮರನ ಒಡಿಸ್ಸಿಯನ್ನು ಪರಿಶೀಲಿಸುತ್ತ ಅದರಲ್ಲಿ ಅಡಕವಾಗಿರುವ ಅದ್ಭುತಕಥೆಯ ಅಂಶಗಳನ್ನು ಟೀಕಿಸುತ್ತಾನೆ. ಅವನ ದೃಷ್ಟಿಯಲ್ಲಿ ಈ ಲಕ್ಷಣಗಳು ಭವ್ಯಕಾವ್ಯದ ಗಾಂಭೀರ್ಯಕ್ಕೆ ಕುಂದನ್ನುಂಟುಮಾಡುವುವು. ಹೋಮರನ ಒಡಿಸ್ಸಿಯಲ್ಲಿ ಮುಖ್ಯ ಕಥಾವಸ್ತುವಿಲ್ಲದಿರುವುದು, ಕಥೆಯ ವಿಕಾಸಕ್ಕೆ ಗಮನ ಕೊಡದೆ ಘಟನಾವಳಿಗಳನ್ನು ಲಂಬಿಸುತ್ತ ಹೋಗಿರುವುದು, ಅಲೌಕಿಕ ಅದ್ಭುತ ಘಟನೆಗಳ ಮಿಶ್ರಣ, ಹಲವಾರು ಪ್ರಣಯ ದೃಶ್ಯಗಳಿಗೆ ಅತಿಯಾದ ಪ್ರಾಧಾನ್ಯ ನೀಡಿರುವುದು, ಗಂಭೀರ ಹಾಗೂ ರುದ್ರಸನ್ನಿವೇಶಗಳನ್ನು ವಿನೋದಕರ ಸಂಗತಿಗಳೊಡನೆ ಅಸಂಬದ್ಧವಾಗಿ ಜೋಡಿಸಿರುವುದು, ಸಾಹಸಘಟನೆಗಳ ಪರಂಪರೆ- ಇವೆಲ್ಲ ಲಾಂಜೈನಸ್ಸನ ದೃಷ್ಟಿಯಲ್ಲಿ ಅದ್ಭುತಕಥೆಯ ಲಕ್ಷಣಗಳು.

ಅನೇಕವೇಳೆ ಮಾನವ ತನ್ನ ವಾಸ್ತವಿಕಜೀವನದ ಕಷ್ಟಕಾರ್ಪಣ್ಯಗಳಿಂದ ದೂರವಾದ ಯಾವ ಕಟ್ಟುಪಾಡುಗಳಿಗೂ ಒಳಪಡದ ಅಲೌಕಿಕ, ಸುಂದರಲೋಕದಲ್ಲಿ ಸ್ವಚ್ಫಂದವಾಗಿ ಹಾರಾಡಲು ಆಶಿಸುತ್ತಾನೆ. ಆಗ ಅವನಲ್ಲಿ ಇಂಥ ಅದ್ಭುತಕಥೆಗಳನ್ನು ರಚಿಸುವ, ಅವುಗಳನ್ನು ಓದಬೇಕೆನ್ನುವ ಅಪೇಕ್ಷೆ ಮೂಡುತ್ತದೆ. ಪುರಾತನ ಹಾಗೂ ಮಧ್ಯಯುಗದ ಯೂರೋಪಿನಲ್ಲಿ ವಿವಿಧ ಕಾಲಗಳಲ್ಲಿ ಬೆಳೆದುಬಂದ ಅದ್ಭುತ ಕಥೆಗಳ ರೂಪರೇಖೆಗಳನ್ನು ಸ್ಥೂಲವಾಗಿ ಹೀಗೆ ಸಂಗ್ರಹಿಸಬಹುದು. ಎಲ್ಲ ಅದ್ಭುತ ಕಥೆಗಳಲ್ಲೂ ಯಾವುದೋ ಅನ್ವೇಷಣೆಗೆ ಸಂಬಂಧಿಸಿದ ಕಥಾವಸ್ತುವಿರುತ್ತದೆ. ರಾಜ್ಯವನ್ನು ಕಳೆದುಕೊಂಡಿರುವ ರಾಜಕುಮಾರ, ಅಪಹೃತಳಾದ ರಾಜಕುಮಾರಿ, ಕ್ರಿಸ್ತ ಕಡೆಯ ಊಟಕ್ಕೆ ಬಳಸಿದನೆಂದು ಹೇಳಲಾದ ದಿವ್ಯಪಾತ್ರೆಯನ್ನು ಹುಡುಕಲು ಹೊರಟಿರುವ ವೀರನಾಯಕ, ಕಣ್ಮರೆಯಾಗಿರುವ ಸ್ನೇಹಿತನ ಶೋಧನೆಯಲ್ಲಿ ತೊಡಗಿರುವ ಸಾಹಸಿ ಸೈನಿಕ, ಯಾವುದೋ ದುಷ್ಟನೀತಿಯ ವಿರುದ್ಧ ಹೋರಾಡ ಹೊರಟಿರುವ ಸೈನಿಕತಂಡ-ಹೀಗೆ. ಇಂಥ ಸಾಹಸ ಕೃತ್ಯಗಳಲ್ಲಿ ತೊಡಗಿದಾಗ ಸಂಭವಿಸುವ ಎಡರುತೊಡರುಗಳು ಚಿತ್ರವಿಚಿತ್ರ ಘಟನೆಗಳು, ಪ್ರಣಯಪ್ರಸಂಗಗಳು, ಘೋರ ಕದನಗಳು, ಇಂಥ ಪಾತ್ರಗಳು ಮತ್ತು ಸನ್ನಿವೇಶಗಳೇ ಅದ್ಭುತಕಥೆಯ ಜೀವಾಳ. ಅನೇಕವೇಳೆ ಈ ಕಥೆಗಳಲ್ಲಿ ಯಾವ ಪಾತ್ರವೂ ವಿಶಿಷ್ಟ ವ್ಯಕ್ತಿತ್ವವನ್ನು ಪಡೆಯದೆ ನೆರಳಿನಂತೆ ಅಸ್ಪಷ್ಟ ಆಕೃತಿಗಳಾಗುತ್ತವೆ. ಸನ್ನಿವೇಶಗಳೂ ಘಟನೆಗಳೂ ಯಾವ ವೈವಿಧ್ಯವನ್ನೂ ಹೊಂದದೆ ಬೆಳೆಯುತ್ತ ಹೋಗುತ್ತವೆ. ಆದ್ದರಿಂದ ಇಂಥ ಅದ್ಭುತ ಕಥೆಗಳು ಹದಿನೆಂಟನೆಯ ಶತಮಾನದವರೆಗೂ ವಿಮರ್ಶಕರ ಮೆಚ್ಚುಗೆ ಗಳಿಸಲಿಲ್ಲ. ಅಲ್ಲಿಯವರೆಗೂ ಅವರು ಇಂಥ ಕಥೆಗಳನ್ನು ಅನಾಗರಿಕ, ಅಪ್ರಬುದ್ಧ, ಅಜ್ಜಿಕಥೆಗಳೆಂದು ತೆಗಳಿದರು. ಈ ಅಭಿಪ್ರಾಯಕ್ಕೆ ತೀರ ವಿರುದ್ಧವಾದ ದೃಷ್ಟಿ ಆಧುನಿಕ ವಿಮರ್ಶಕರಲ್ಲಿ ಬೆಳೆದುಬಂದಿದೆ. ಅದ್ಭುತಕಥೆಗಳು ಸಾಹಿತ್ಯ ಮತ್ತು ಧರ್ಮವನ್ನು ಒಂದುಗೂಡಿಸುವ ಅತಿ ಸುಂದರಕಥಾಗುಚ್ಫಗಳು ಎಂದು ಅವರು ಹೇಳುತ್ತಾರೆ. ಹತ್ತೊಂಬತ್ತೆನೆಯ ಶತಮಾನದಲ್ಲಿ 'ವಿಭಾವನೆ (ಇಮ್ಯಾಜಿನೇಷನ್) ಅನ್ನು ಕವಿಗಳು ವಿಮರ್ಶಕರು ಹೊಸ ದೃಷ್ಟಿಯಿಂದ ಕಂಡರು. ಅಮೆರಿಕದ ಪ್ರಸಿದ್ಧ ಕಾದಂಬರಿಕಾರ ನೆಥಾನಿಯಲ್ ಹತಾರ್ನ್‍ನು ಕಾದಂಬರಿ ಮತ್ತು ರೊಮಾನ್ಸ್‍ಗಳನ್ನು ಹೋಲಿಸುತ್ತಾ ರೋಮಾನ್ಸ್‍ನ ಬರಹಗಾರನಿಗೆ ಹೆಚ್ಚಿನ ವಿಭಜನೆಯ ಸ್ವಾತಂತ್ರ್ಯವಿರುತ್ತದೆ. ಇದರಿಂದ ಅವನು ಮಾನಸಿಕ ಮತ್ತು ಪೌರಾಣಿಕ ಸತ್ಯಗಳ ಅನ್ವೇಷಣೆಗೆ ಹೆಚ್ಚು ಗಮನ ಕೊಡಬಹುದು ಎಂದ.

ಆದರೆ ಇಷ್ಟು ಮಾತ್ರ ನಿಜ. ಅದ್ಭುತಕಥೆಗಳೇ ಕಾದಂಬರಿಗೆ ಅಡಿಗಲ್ಲು. ಆಕಸ್ಮಿಕ, ಅಲೌಕಿಕ, ಅಸಾಧಾರಣ ಸಾಧನಗಳಿಂದ ಹಂತ ಹಂತವಾಗಿ ಕಥೆಯ ಚಮತ್ಕಾರ ಹೆಚ್ಚುವಂತೆ ಮಾಡುವ ಅದ್ಭುತಕಥೆಯ ತಂತ್ರ ಕಾದಂಬರಿಯ ಬೆಳವಣಿಗೆಗೆ ಹೆಚ್ಚು ಪುಷ್ಟಿದಾಯಕವಾಯಿತು. ಪ್ರಣಯ ಅವಹೇಳನವಾದುದಲ್ಲ, ಹೆಣ್ಣು ಕೇವಲ ಕಾಮುಕ ವಸ್ತುವಲ್ಲ, ತನ್ನ ಸೌಂದರ್ಯ ಸದ್ಗುಣಗಳಿಂದ, ಧೈರ್ಯಸಾಹಸಗಳಿಂದ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡು ಪುರುಷನಿಗೆ ಆಕೆ ಮಾರ್ಗದರ್ಶಕಗಳಾಗಬಲ್ಲಳು ಎಂಬುದನ್ನು ಅದ್ಭುತಕಥೆ ತೋರಿಸಿಕೊಟ್ಟಿತು. ಕ್ರೈಸ್ತಧರ್ಮದ ಪ್ರಭಾವ ಈ ಕಥೆಗಳಲ್ಲಿ ಬೆರೆತು, ಪ್ರೇಮದಿಂದ, ಸಾಹಸದಿಂದ ಧರ್ಮವನ್ನು ಸಾಧಿಸಬಹುದೆಂಬ ವಿಚಾರವನ್ನು ಇವು ಅಭಿವ್ಯಕ್ತಪಡಿಸಿದುವು. (ಎಚ್.ಕೆ.ಆರ್.) (ಪರಿಷ್ಕರಣೆ: ಪ್ರೊ. ಎಲ್. ಎಸ್. ಶೇಷಗಿರಿರಾವ್)[೧]

ಉಲ್ಲೇಖ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅದ್ಭುತಕಥೆ (ಎಚ್.ಕೆ.ಆರ್.) (ಪರಿಷ್ಕರಣೆ: ಪ್ರೊ. ಎಲ್. ಎಸ್. ಶೇಷಗಿರಿರಾವ್)