ಅಣ್ಣನ ನೆನಪು
ಗೋಚರ
ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು
ಅಣ್ಣನ ನೆನಪು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ, "ರಾಮಾಯಣ ದರ್ಶನಂ" ಕೃತಿಗಾಗಿ ಜ್ಞಾನಪೀಠ ಪಡೆದು ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟವರು. ಕುವೆಂಪುರವರನ್ನು ಒಬ್ಬ ತಂದೆಯಾಗಿ, ಉಪ್ಪು ಖಾರ ತಿನ್ನುವ ಮನುಷ್ಯನಾಗಿ ಚಿತ್ರಿಸಿದ ಒಂದು ಅಪರೂಪದ ಕೃತಿ 'ಅಣ್ಣನ ನೆನಪು'. ಪೂರ್ಣಚಂದ್ರ ತೇಜಸ್ವಿಯವರು ಅವರ ತಂದೆಯ ಬಗ್ಗೆ ಬರೆದಿದ್ದಾರೆ.
ತೇಜಸ್ವಿಯವರ ಅನುಭವ ಕಥನ
[ಬದಲಾಯಿಸಿ]- ಈ ಪುಸ್ತಕ ತೇಜಸ್ವಿಯವರ ಅನುಭವ ಕಥನಗಳ ಸಂಕಲನ. ಇದರಲ್ಲಿರುವ ಪ್ರತಿಯೊಂದು ಅಧ್ಯಾಯವು ಹಾಸ್ಯಬುಗ್ಗೆಯನ್ನು ತರಿಸುವುದರೊಂದಿಗೆ ಕುವೆಂಪುರವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ತೇಜಸ್ವಿ ರಾಷ್ಟ್ರಕವಿ ಕುವೆಂಪು ಅವರಂತಹ ಅದ್ಭುತ ಸಾಹಿತಿಯ ಮಗತೇಜಸ್ವಿಯವರ ಅನುಭವ ಕಥನನಾಗಿಯೂ ತಂದೆಯ ಸಾಹಿತ್ಯದ ನೆರಳಿಂದ ದೂರ ಸಾಗಿ ತಮ್ಮದೇ ಆದ ಪ್ರತ್ಯೇಕ ಶೈಲಿಯಿಂದ, ವೈವಿಧ್ಯಮಯ ಬರಹಗಳಿಂದ ಕನ್ನಡಸಾಹಿತ್ಯಲೋಕದಲ್ಲಿ ಹೆಸರಾದವರು.
- ಅವರು ಬರೆದ "ಅಣ್ಣನ ನೆನಪು ಯೋಗಿ ಅಣ್ಣ " ನಿಜಕ್ಕೂ ಒಂದು ಸಂಗ್ರಹಯೋಗ್ಯ ಕೃತಿ. ಇದು ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಗೊಂದಲ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು, ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ.
- ಎಲ್ಲೂ ತಂದೆಯ ಗುಣಗಾನ ಮಾಡದೆ , ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ಕಟ್ಟಿಕೊಡುತ್ತಾರೆ ತೇಜಸ್ವಿ. ಕುವೆಂಪು ವ್ಯಕ್ತಿತ್ವದಲ್ಲಿದ್ದ ಸಂಕೀರ್ಣತೆಯನ್ನು ವಿವರಿಸುತ್ತಾ ಅವರು ಹೇಳುತ್ತಾರೆ. "ಅವರನ್ನು ಕವಿಯಾಗಿಯೋ ಕಾದಂಬರಿಕಾರರನ್ನಾಗಿಯೊ ತತ್ವ ಮೀಮಾಂಸಕರನ್ನಾಗಿಯೊ ಪರಿಗಣಿಸಿ ಸೂರ್ಯ ಮಾತು ಯೋಗಿ ದಾಗ, ಅಥವಾ ಬಿಡಿಬಿಡಿಯಾಗಿ ಕಥೆ ಕಾವ್ಯವನ್ನವಲೋಕಿಸಿದಾಗ ಸರಳವಾಗಿ ಕಾಣುವ ವ್ಯಕ್ತಿತ್ವ ಒಟ್ಟಂದದಲ್ಲಿ ನೋಡಿದ ಕೂಡಲೆ ಅತ್ಯಂತ ಸಂಕೀರ್ಣವಾಗಿ ಕಾಣುತ್ತದೆ.
- ಒಂದುಕಡೆ ಇಂಗ್ಲೀಷ್ ಜ್ಞಾನ ಮುಖ್ಯವೆಂದು ಶೂದ್ರರಿಗೆಲ್ಲ ಕರೆಕೊಡುತ್ತಾರೆ. ಕನ್ನಡದ ವಿಷಯಕ್ಕೆ ಬಂದಾಗ ಇಂಗ್ಲಿಷ್ ಅನ್ನು ಪೂತನಿಯೆಂದು ಟೀಕಿಸುತ್ತಾರೆ. ಭಾರತೀಯ ಸನಾತನ ಧರ್ಮದ ಕಟು ವಿಮರ್ಶೆ ಕುವೆಂಪು ಅವರಲ್ಲಿ ಕಾಣಬಹುದು. ಅಂತೆಯೆ ಉಪನಿಷದ್ ದರ್ಶನಗಳ ಆರಾಧನೆಯನ್ನೂ ಅವರಲ್ಲಿ ಕಾಣಬಹುದು . ಅವರ ಜೀವನಾದ್ಯಂತ ಎಂದೂ ಯಾವ ದೇವಸ್ಥಾನಕ್ಕೂ ಕಾಲಿಡಲಿಲ್ಲ. ಆದರೆ ಅಷ್ಟೆ ಗಾಢವಾಗಿ ಧ್ಯಾನ ತಪಸ್ಯೆ ಪ್ರಾರ್ಥನೆಗಳನ್ನು ಪ್ರತಿಪಾದಿಸಿದರು."
- ಕುವೆಂಪು ವ್ಯಕ್ತಿತ್ವದಲ್ಲಿದ್ದ ಮಾನವೀಯತೆ , ಮುಗ್ದತೆ , ವೈಜ್ಞಾನಿಕ ಮನೋಭಾವ , ನಿಷ್ಟುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ. ಸಾರ್ವಜನಿಕವಾಗಿ ತಮ್ಮ ಮಕ್ಕಳು ಮಾಡುವ ಪುಂಡಾಟಿಕೆಯನ್ನು ಸಮರ್ಥಿಸಿಕೊಳ್ಳುವ ಸೆಲೆಬ್ರಿಟಿಗಳಿಂದಲೇ ತುಂಬಿರುವ ಈ ನಮ್ಮ ದೇಶದಲ್ಲಿ ಮಗನ ಮೇಲೆ ವಾರೆಂಟ್ ಬಂದರೂ ತಮ್ಮ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳದೇ ಮಗನಿಗೆ ಬುದ್ಧಿ ಹೇಳುವ ಕುವೆಂಪು ವಿಶೇಷವೆನಿಸುತ್ತಾರೆ.
- ತಂದೆಯ ವೈಸ್ ಚಾನ್ಸಲರ್ ಹುದ್ದೆ ಅವರ ಬರವಣಿಗೆಗೆ ತೊಂದರೆಕೊಟ್ಟಿತೆಂದೇ ತೇಜಸ್ವಿ ಭಾವಿಸುತ್ತಾರೆ. ಬಹುಶಃ ತನ್ನ ಸ್ವಾತಂತ್ರಕ್ಕೆ ಧಕ್ಕೆ ತರಬಹುದಾದ ಇಂತಹ ಎಲ್ಲಾ ಅಮಿಷಗಳನ್ನು ಮೀರಲೆಂದೇ ಪೇಟೆಯಲ್ಲೇ ಹುಟ್ಟಿಬೆಳೆದ ತೇಜಸ್ವಿ ಹಳ್ಳಿಯಲ್ಲಿ ನೆಲೆಸಿದ್ದರೇನೋ. ವ್ಯಕ್ತಿಯೊಬ್ಬರು ಎಷ್ಟೇ ಪ್ರಸಿದ್ಧರಾದರೂ ಅವರ ಮಕ್ಕಳಿಗೆ ಅಪ್ಪನೇ ಅಲ್ಲವೆ ?
- ಇದನ್ನು ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಹೀಗೆ ಹೇಳುತ್ತಾರೆ . "ನಾನು ಕಣ್ಣು ಬಿಟ್ಟಗ ಕಂಡಿದ್ದೇ ಅಣ್ಣ ಅಮ್ಮನನ್ನು , ನನಗಾಗ ಅವರು ಕವಿಯೂ ಅಲ್ಲ ದಾರ್ಶನಿಕರೂ ಅಲ್ಲ. ಗಾಳಿ ಬೆಳಕು ಮಳೆ ಬಿಸಿಲುಗಳ ವಿಸ್ತರಣೆಯಾಗಿ ಅವರು ನನಗೆ ಗೋಚರಿಸುತ್ತಾ ಹೋದರು. "ಅದ್ದರಿಂದಲೇ ಅವರು ಎಲ್ಲರ ಮನೆಯಲ್ಲಿ ನಡೆಯುವಂತ ಸರಳ ಸಂಗತಿಗಳ ನಿರೂಪಣೆಯಿಂದಲೇ ತನ್ನ ಅಪ್ಪನನ್ನು ಚಿತ್ರಿಸುತ್ತಾರೆ.
- ಅದನ್ನು ಆಕ್ಷೇಪಿಸಿದವರಿಗೆ ಅವರು ಕೊಡುವ ಉತ್ತರವೂ ಸೊಗಸಾಗಿದೆ " ನನಗೆ ತಿಳಿದ ಹಾಗೆ ಅಣ್ಣ ತಮಾಷೆ ವಿನೋದಗಳೊಂದಿಗೆ ಅನ್ನ ತಿನ್ನುವ ನಮ್ಮೆಲ್ಲರಂತೆ ಬದುಕಿದ್ದರು. ಬದುಕನ್ನು ಒಂದು ವ್ರತದಂತೆ ಪರಿಗಣಿಸಿ ವ್ರತನಿಷ್ಟರಂತೆ ಅವಡುಗಚ್ಚಿ ಜೀವಿಸುತ್ತಿದ್ದುದನ್ನು ನಾನಂತೂ ಕಂಡಿಲ್ಲ."
- ಕೆಲವುಕಡೆ ಇದು ಅವಶ್ಯವಿರಲಿಲ್ಲವೆನ್ನಿಸುವಂತಹ ಪ್ರಸಂಗಗಳ ನಿರೂಪಣೆಯೂ ಇದೆ ಗೆಳೆಯ ಶಾಮಣ್ಣನ ಬೈಕ್ , ಸಂಗೀತ ಕಲಿಯುವ ಉತ್ಸಾಹದ ಬಗ್ಗೆ ಸ್ವಲ್ಪ ಹೆಚ್ಚೇ ಬರೆದಿದ್ದಾರಾದರು ಅದರ ಹಾಸ್ಯಮಯ ಧಾಟಿ ಓದಿಸಿಕೊಂಡು ಹೋಗುವುದರಿಂದ ರಸಭಂಗವಾಗುವುದಿಲ್ಲ. ಇಂಗ್ಲೀಷ್ ಭಾಷೆಯ ಪರೀಕ್ಷೆಯಲ್ಲಿ ಪದೇ ಪದೇ ಫೇಲಾಗುತ್ತಿದ್ದ ತೇಜಸ್ವಿಗೆ "ಭಾಷೆಯ ಬಗ್ಗೇ ಎಂದೂ ಅಂಧಾಬಿಮಾನಕ್ಕೊಳಗಾಗಬಾರದು. ನಮ್ಮ ಭಾಷೆಯಲ್ಲಿ ಏನೂ ಇಲ್ಲ ಎಂದುಕೊಳ್ಳುವುದಕ್ಕಿಂತ ಎಲ್ಲಾ ಇದೆ ಎಂದುಕೊಳ್ಳುವುದು ಅಪಾಯ" ಎಂದು ಹೇಳಿದ ಕುವೆಂಪು ಅವರ ವಿವೇಚನೆಯ ಅಗತ್ಯ ಇಂದು ಎಲ್ಲರಲ್ಲೂ ಮೂಡಬೇಕಿದೆ.
- ತಮ್ಮ ಬಾಲ್ಯ, ಯೌವ್ವನಕಾಲದ ಘಟನೆಗಳನ್ನು ತುಂಬ ಹಾಸ್ಯಮಯ ಶೈಲಿಯಲ್ಲಿ ನಿರೂಪಿಸುವ ತೇಜಸ್ವಿ , ನಂತರ ಆ ಕಾಲದ ಸಾಹಿತ್ಯಕ ವಿಪ್ಲವಗಳನ್ನು ವಿವರಿಸುವಾಗ ತುಂಬ ಗಂಭೀರವಾದ ಭಾಷಾಪ್ರಯೋಗಕ್ಕಿಳಿಯುತ್ತಾರೆ. ಆ ಕಾಲಘಟ್ಟದಲ್ಲಿ ನಡೆದ ನವ್ಯ , ನವೋದಯಗಳ ನಡುವಿನ ತಿಕ್ಕಾಟದ ಪರಿಚಯವನ್ನೂ ಮಾಡಿಕೊಡುತ್ತಾರೆ ತೇಜಸ್ವಿ .
- ಆಗಿನ ಕಾಲದಲ್ಲಿ ಸಾಹಿತ್ಯಕವಲಯದಲ್ಲಿ ನಡೆದಿರಬಹುದಾದ ಜಾತೀಯ, ತಾತ್ವಿಕ, ಸಂಘರ್ಷಗಳ ಅರಿವಿರದ ಅದರ ಗೊಡವೆ ಬೇಕಿರದ ನಮ್ಮ ತಲೆಮಾರಿನ ನನ್ನಂತಹ ಸಾಮಾನ್ಯ ಓದುಗರಿಗೆ ಇದು ಸ್ವಲ್ಪ ಗೊಂದಲ ಎನಿಸುತ್ತದೆ. ಈ ಕೃತಿ ವಿಶಿಷ್ಟವೆನಿಸುವುದು , ಇದು ಕುವೆಂಪು ವ್ಯಕ್ತಿತ್ವದ ಜೊತೆಜೊತೆಗೇ ತೇಜಸ್ವಿಯವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಕೊಡುವ ಕಾರಣಕ್ಕಾಗಿ .
- ಅವರ ವೈವಿಧ್ಯಮಯ ಆಸಕ್ತಿಗಳು, ಸರಳ ಜೀವನ, ತಾನು ನಂಬಿದ ಆದರ್ಶಗಳನ್ನು ಅನುಸರಿಸುವ ಪರಿ, ಅದ್ಭುತ ಚಿಂತಕನಾದರೂ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯಬಲ್ಲ ಸಾಮರ್ಥ್ಯ, ಈ ಕೃತಿಯ ಮುಖಾಂತರ ಹೆಚ್ಚು ಸ್ಪಷ್ಟವಾಗುತ್ತದೆ.
ಒಟ್ಟಿನಲ್ಲಿ ಸಾಹಿತ್ಯಾಸಕ್ತರು ಒಮ್ಮೆಯಾದರೂ ಓದಲೇಬೇಕಾದ ಕೃತಿಯಿದು. ಈ ಪುಸ್ತಕ ಪ್ರಕಟವಾಗಿದ್ದು ೧೯೯೬ ರಲ್ಲಿ.[೧]