ಅಣು ಮಧ್ವ ವಿಜಯ
ಅಣು ಮಧ್ವ ವಿಜಯವು ದ್ವೈತ ಮತದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಜೀವನಚರಿತ್ರೆಯ ಸಂಕ್ಷಿಪ್ತ ರೂಪ ಅಥವಾ ಸಾರಾಂಶ ರೂಪ. ಅವರ ವಿವರವಾದ ಜೀವನಚರಿತ್ರೆಯು ಶ್ರೀ ಸುಮಧ್ವ ವಿಜಯದಲ್ಲಿ ನೋಡಬಹುದಾಗಿದೆ. ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸುಮಧ್ವ ವಿಜಯವನ್ನು ರಚಿಸಿದರು. ಇದರಲ್ಲಿ ೧೦೦೮ ಶ್ಲೋಕಗಳಿದ್ದು ಅವನ್ನು ೧೬ ಸರ್ಗಗಳಾಗಿ ವಿಭಜಿಸಲಾಗಿದೆ. ಪಂಡಿತಾಚಾರ್ಯರು ಇದೇ ಗ್ರಂಥಕ್ಕೆ ಸಾರಾಂಶವನ್ನೂ ಕೂಡ ಬರೆದಿದ್ದಾರೆ. ಮೂಲ ಗ್ರಂಥದ ಪ್ರತಿಯೊಂದು ಅಧ್ಯಾಯವನ್ನು ಎರಡೇ ಶ್ಲೋಕಗಳಲ್ಲಿ ಬರೆದು ಒಟ್ಟು ಕೇವಲ ೩೨ ಶ್ಲೋಕಗಳಲ್ಲಿ ಬರೆದಿರುವ ಈ ಸಾರಾಂಶಕ್ಕೆ ಅಣು ಮಧ್ವ ವಿಜಯ ಎಂದು ಹೆಸರು. ಇದಕ್ಕೆ ಪ್ರಮೇಯನವಮಾಲಿಕಾ ಎಂದೂ ಹೆಸರು. ಈ ಗ್ರಂಥವೂ ಪವಿತ್ರವಾದದ್ದು ಎಂದು ಪರಿಗಣಿಸಲಾಗುತ್ತಿದ್ದು, ಯಾರಿಗಾದರೂ ಸಂಪೂರ್ಣ ಸುಮಧ್ವ ವಿಜಯವನ್ನು ಪಠಿಸಲು ಆಗದಿದ್ದ ಪಕ್ಷದಲ್ಲಿ, ಅಣು ಮಧ್ವ ವಿಜಯದ ಶ್ಲೋಕಗಳನ್ನು ಪಠಿಸಿದಲ್ಲಿ ಶ್ರೀ ಮಧ್ವಾಚಾರ್ಯರ ಮತ್ತು ಅವರ ಅಂತರ್ಯಾಮಿ ಶ್ರೀ ವೇದವ್ಯಾಸರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ನಂಬುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು ಅಣು ಮಧ್ವ ವಿಜಯಕ್ಕೆ ತಮ್ಮ ಪೂರ್ವಾಶ್ರಮದಲ್ಲಿ (ಸನ್ಯಾಸಿ ಆಗುವದಕ್ಕಿಂತ ಮೊದಲು) ವ್ಯಾಖ್ಯಾನವನ್ನು ಬರೆದಿದ್ದಾರೆ.