ಅಗ್ನಿ(ಪ್ರಕೃತಿಯ ಅಂಶಗಳು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯವಾಗಿ ಯಾವುದನ್ನು ಬೆಂಕಿ ಎನ್ನಲಾಗುತ್ತದೊ ಅದನ್ನೆ ಅಗ್ನಿ ಎಂದೂ ಕರೆಯಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಮಾನವ ಮತ್ತು ಅಗ್ನಿ ಇವುಗಳ ನಡುವಿನ ಸಂಬಂಧವನ್ನು ಹೇಳುವುದಾದರೆ, ಅಗ್ನಿಯನ್ನು ಮಾನವ ಪವಿತ್ರವಸ್ತುವೆಂಬುದಾಗಿ ಭಾವಿಸಿ ಅದರಲ್ಲಿ ದೈವತ್ವವನ್ನು ಕಂಡು ಪೂಜಿಸಿ, ಸ್ತುತಿಸುವಂಥ ಅನೇಕ ಸಂದರ್ಭಗಳನ್ನು ಭಾರತದ ಪುರಾಣಗಳನ್ನೊಳಗೊಂಡಂತೆ ಪ್ರಪಂಚದ ಎಲ್ಲ ನಾಡಿನ ಪುರಾಣೇತಿಹಾಸಗಳಲ್ಲಿಯೂ ಕಾಣಬಹುದು. ಇದಲ್ಲದೆ ಮಾನವ ತನ್ನ ನಿತ್ಯಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬೆಂಕಿಯನ್ನುಪಯೋಗಿಸಿಕೊಂಡು ಅದರಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಂಡಿದ್ದಾನೆ. ಬೆಂಕಿಯ ಉಪಯೋಗದಿಂದ ಮಾನವನ ಸಂಸ್ಕøತಿ, ನಾಗರೀಕತೆಗಳು ಸಾಕಷ್ಟು ಪ್ರಭಾವಿತಗೊಂಡಿವೆ. ಬೆಂಕಿಯ ಬಳಕೆ ಮಾನವನ ನಿತ್ಯಜೀವನದಲ್ಲಿ ಅನಿವಾರ್ಯವೂ ಅತ್ಯಗತ್ಯವೂ ಆಗಿರುವಂಥ ವಿಶೇಷಗಳಲ್ಲೊಂದು.

ಪ್ರಾಚೀನ ವಿಧಾನಗಳು[ಬದಲಾಯಿಸಿ]

ಬೆಂಕಿಯನ್ನುತ್ಪಾದಿಸುವ ಪ್ರಾಚೀನ ವಿಧಾನಗಳು: ಅನಾದಿಕಾಲದಿಂದಲೂ ಮಾನವಜೀವನದ ಅವಿಭಾಜ್ಯ ಅಂಗವಾಗಿ ಮುಂದುವರಿದುಕೊಂಡು ಬಂದಿರುವ ಬೆಂಕಿಯನ್ನು ಕಂಡುಹಿಡಿದದ್ದು ಯಾವಾಗ, ಬಳಕೆ ಪ್ರಾರಂಭವಾದದ್ದು ಯಾವಾಗ,-ಮುಂತಾದ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಆದಿಮಾನವರು ಬೆಂಕಿಯುರಿಯನ್ನು ಉತ್ಪತ್ತಿ ಮಾಡಿಕೊಳ್ಳುತ್ತಿದ್ದ ವಿಧಾನಗಳಿಂದಾಗಿ ಅದರ ಉತ್ಪಾದನೆ ಹಾಗೂ ಬಳಕೆ ಬಹು ಪ್ರಾಚೀನಕಾಲದಿಂದಲೂ ಅನೂಚಾನವಾಗಿ ಬೆಳೆದುಬಂದಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಜೀವನದ ಅತ್ಯಗತ್ಯಗಳಲ್ಲಿ ಒಂದಾಗಿರುವ ಆಹಾರವನ್ನು ಸಂಪಾದಿಸಲೋಸುಗ, ಅನಂತರ ಅವುಗಳನ್ನು ಬೇಯಿಸಿ, ಸೇವಿಸಲು ಅಗ್ನಿಯನ್ನು ಬಳಸಿಕೊಂಡುದುಂಟು. ಈ ಕೆಲಸಕ್ಕೆ ಬೇಕಾಗುವ ಬೆಂಕಿಯನ್ನು ಪಡೆಯಲು ಎರಡು ಕಲ್ಲುಗಳನ್ನು ಒಂದರಮೇಲೊಂದು ಉಜ್ಜಿ, ಘರ್ಷಣೆಯಿಂದುತ್ಪತ್ತಿಯಾದ ಶಾಖದ ಪರಿಣಾಮದಿಂದ ಬೆಂಕಿ ಉದ್ಭವಗೊಂಡುದನ್ನು ಅರಿತ ಮಾನವ, ಆಗಾಗ ನೈಸರ್ಗಿಕವಾಗಿ ಸಂಭವಿಸಿದ - ಕಾಡುಗಿಚ್ಚು ಮುಂತಾದ ಅಗ್ನಿಪ್ರಮಾದಗಳ ಅನುಭವದಿಂದಾಗಿ, ಅಂಥ ಅನಾಹುತದಲ್ಲಿ ಸಿಕ್ಕಿ ಬೆಂದುಹೋದ ಪ್ರಾಣಿಗಳನ್ನು ತಿಂದು ಸೇವಿಸಿ ಉದರಪೋಷಣೆ ಮಾಡಿಕೊಳ್ಳುತ್ತಿದ್ದ. ಅಗ್ನಿಯಿಂದಾಗುವ ಪ್ರಯೋಜನವನ್ನು ಅರಿತು ಕಾಲಕ್ರಮೇಣ ಅದನ್ನು ಬೇರೆ ಬೇರೆ ರೀತಿಗಳಲ್ಲಿ ಪಡೆಯುವ ವಿಧಾನಗಳನ್ನು ಕಂಡುಕೊಂಡ. ಕಲ್ಲುಗಳನ್ನು ಉಜ್ಜುವುದರಿಂದ ಬೆಂಕಿ ಉಂಟಾಗುತ್ತದೆ ಎಂಬ ವಿಚಾರವನ್ನು ತಿಳಿದು ಈ ವಿಧಾನವನ್ನು ಸ್ವಲ್ಪ ಸುಧಾರಿಸಿಕೊಂಡ. ಮೊನಚಾಗಿರುವ, ಗಡುಸಾದ ಉದ್ದನೆಯ ಮರದ ತುಂಡೊಂದನ್ನು ಮತ್ತೊಂದು ಮರದ ತುಂಡಿನ ಮೇಲೆ ಇಟ್ಟು ಕಡೆದಾಗ ಘರ್ಷಣೆಯಿಂದ ಬೆಂಕಿ ಉತ್ಪತ್ತಿಯಾಗುವುದನ್ನು ಕಂಡುಕೊಂಡ. ಇಂಥ ವಿಧಾನ ನ್ಯೂಜಿóಲೆಂಡ್, ಹವಾಯ್, ಟೊಂಗಾ ಮತ್ತು ಇತರ ಸ್ಥಳಗಳ ಆದಿಮಾನವರಲ್ಲಿತ್ತು; ಇಂದಿಗೂ ಸಿಲೋನಿನ ವಡ್ಡಾ ಎಂಬ ಜನಾಂಗದವರಲ್ಲಿ, ದಕ್ಷಿಣ ಆಫ್ರಿಕದ ಕೆಲವು ಪ್ರದೇಶಗಳಲ್ಲಿ ದಕ್ಷಿಣ ಮತ್ತು ಉತ್ತರ ಅಮೆರಿಕದ ಹಲವೆಡೆಗಳಲ್ಲಿ ಪ್ರಪಂಚದ ಹಿಂದುಳಿದ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಈ ವಿಧಾನದಲ್ಲಿ ಅನೇಕ ರೀತಿಯ ಸುಧಾರಣೆಗಳು ಕಂಡುಬಂದಿವೆ. ಇವನ್ನು ಟೈಲರ್ ಮತ್ತು ಪಾಷ್‍ಮಾನ್ ಎಂಬುವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ಪರ್ಕಷನ್[ಬದಲಾಯಿಸಿ]

ಬೆಂಕಿಯನ್ನು ಉತ್ಪಾದಿಸಲು ಅನುಸರಿಸುತ್ತಿದ್ದ ಮತ್ತೊಂದು ವಿಧಾನವೆಂದರೆ ಪದಾರ್ಥಗಳ ಪರಸ್ಪರ ಸಂಘಟ್ಟನೆ (ಪರ್ಕಷನ್). ಉಕ್ಕಿನ ಒಂದು ತುಂಡಿನ ಮೇಲೆ ಗಡಸಾಗಿರುವ ಒಂದು ಬಗೆಯ ಕಲ್ಲನ್ನು (ಚಕಮಕಿ) ಬಲವಾಗಿ ಘಟ್ಟಿದಾಗ ಉಂಟಾಗುವ ಕಿಡಿಯ ಪರಿಣಾಮವಾಗಿ ಬೆಂಕಿ ಉತ್ಪತ್ತಿಯಾಗುತ್ತದೆ. ಈ ವಿಧಾನ ತೀರ ಸ್ವಲ್ಪಕಾಲ ಬಳಕೆಯಲ್ಲಿತ್ತು. ಹಿಂದಿನ ಘರ್ಷಣಾವಿಧಾನವನ್ನೇ ಅತ್ಯಂತ ಸೂಕ್ತವೆಂದು ತಿಳಿಯಲಾಯಿತು. ಮಧ್ಯ ಏಷ್ಯದಲ್ಲಿ ಈ ವಿಧಾನವನ್ನನುಸರಿಸಿ ರಚಿಸಲಾದ ಬಂದೂಕುಗಳ ಬಳಕೆ ಇಂದಿಗೂ ಕಂಡುಬರುತ್ತದೆ. ಬೆಂಕಿಯನ್ನು ಉತ್ಪತ್ತಿಮಾಡಿಕೊಳ್ಳಲು ಒಂದು ಸುಧಾರಿತ ವಿಧಾನ ಬಹಳ ಹಿಂದೆ ರೂಢಿಯಲ್ಲಿತ್ತು. ಒಂದು ಮಸೂರವನ್ನುಪಯೋಗಿಸಿಯೋ ನಿಮ್ನದರ್ಪಣವನ್ನುಪಯೋಗಿಸಿಯೋ ಸೂರ್ಯರಶ್ಮಿಯನ್ನು ಮರ, ಹತ್ತಿ ಮುಂತಾದ ವಸ್ತುಗಳಮೇಲೆ ಕೇಂದ್ರೀಕರಿಸಿದಾಗ ಅವು ಹೊತ್ತಿಕೊಂಡು ಉರಿದು ಬೆಂಕಿಯನ್ನುಂಟುಮಾಡಬಲ್ಲವೆಂಬ ವಿಚಾರ ಮುಂದುವರಿದ ಜನಾಂಗಕ್ಕೆ ತಿಳಿದಿತ್ತು. ಈ ವಿಧಾನದ ವಿವರಣೆಗಳನ್ನು ಅರಿಸ್ಟೋಫೆನೀಸ್ ತನ್ನ ದಿ ಕ್ಲೌಡ್ಸ್ ಎಂಬ ಪುಸ್ತಕದಲ್ಲಿ ಹೇಳಿದ್ದಾನೆ. ಇಂಥ ವಿಧಾನವನ್ನು ಅನುಸರಿಸಿ ಯುದ್ಧಕಾಲಗಳಲ್ಲಿ ಸಮುದ್ರದ ಮೇಲಿನ ಶತ್ರುಪಕ್ಷದ ಹಡಗುಗಳನ್ನು ನಾಶಪಡಿಸಲಾಗುತ್ತಿತ್ತು.

ಅಗ್ನಿಯ ರೂಪಲಕ್ಷಣಗಳು[ಬದಲಾಯಿಸಿ]

ಅಗ್ನಿಯ ರೂಪಲಕ್ಷಣಗಳು ಸ್ಪಷ್ಟವಾದದ್ದು ರಾಸಾಯನಿಕ ಪ್ರಯೋಗಗಳು ಬೆಳೆದು ಬಂದ ಅನಂತರವೇ. ರಾಸಾಯನಿಕ ಕ್ರಮವನ್ನನುಸರಿಸಿ ವಿವರಿಸುವುದಾದರೆ ಇಂಗಾಲ ಮತ್ತು ಇತರ ಸೇಂದ್ರೀಯ ವಸ್ತುಗಳೊಡನೆ ಆಮ್ಲಜನಕ (ಗಾಳಿ) ಕೂಡಿಕೊಂಡು ಶಾಖ ಉರಿ ಮತ್ತು ಬೆಳಕು ಇವುಗಳನ್ನು ಉತ್ಪತ್ತಿಮಾಡುವ ಒಂದು ಸಂಘಟನೆಯ ಪರಿಣಾಮವನ್ನು ಬೆಂಕಿ ಎನ್ನಬಹುದು. ವ್ಯಾಪಕವಾಗಿ ಹೇಳುವುದಾದರೆ, ರಾಸಾಯನಿಕ ವಸ್ತುವೊಂದು ಮತ್ತೊಂದು ರಾಸಾಯನಿಕ ವಸ್ತುವಿನೊಡನೆ ಸೇರಿ ಅನಿಲರೂಪಕ್ಕೆ ಪರವರ್ತನೆಗೊಂಡು ಶಾಖ ಮತ್ತು ಜ್ವಾಲೆ (ಉರಿ) ಉತ್ಪಾದನೆಯಾಗುವಂತೆ ಕೂಡಿಕೊಳ್ಳುವ ಒಂದು ಕ್ರಮದ ಪರಿಣಾಮವನ್ನು ಬೆಂಕಿ ಎಂದು ವಿವರಿಸಬಹುದು. ಬೆಂಕಿ ಪದಾರ್ಥಗಳನ್ನು ಯಾವ ರೀತಿ ದಹಿಸುತ್ತದೆ, ಜ್ವಾಲೆಗಳು ಹೇಗೆ ಉಂಟಾಗುತ್ತವೆ-ಎಂಬ ವಿಚಾರದಲ್ಲಿ ಸಾಕಷ್ಟು ಅಧ್ಯಯನ, ಪ್ರಯೋಗ ಮತ್ತು ಸಂಶೋಧನೆಗಳು ನಡೆದಿವೆ. (ನೋಡಿ- ದಹನ) (ನೋಡಿ- ಉರಿ)

ಸಾಮಾನ್ಯವಾಗಿ ಯಾವ ಪದಾರ್ಥವೇ ಆಗಲಿ ಬೆಂಕಿಯೊಡನೆ ಸಂಪರ್ಕ ಹೊಂದಿದರೆ ಆ ಪದಾರ್ಥ ಸುಟ್ಟುಹೋಗುತ್ತದೆ. ಲೋಹಾಂಶವಿರುವ ಅದಿರು ಬೆಂಕಿಯ ಉಷ್ಣದಿಂದ ಕರಗಿದಾಗ ಶುದ್ಧ ಲೋಹ ಹೊರಬೀಳುವ ವಿಚಾರ ಅಕಸ್ಮಾತ್ತಾಗಿ ತಿಳಿದು ಮುಂದೆ ಇದರ ವ್ಯವಸ್ಥಿತ ಕ್ರಮ ರೂಢಿಗೆ ಬಂದಿರಬೇಕು.

ಆಧುನಿಕ ವಿಧಾನಗಳು[ಬದಲಾಯಿಸಿ]

ಬೆಂಕಿಯನ್ನುತ್ಪಾದಿಸುವ ಆಧುನಿಕ ವಿಧಾನಗಳು: ಇವು ವಿಪುಲವಾಗಿವೆ. ಅದರಲ್ಲೂ ವಿದ್ಯುಚ್ಛಕ್ತಿಯನ್ನು ಕಂಡುಹಿಡಿದ ಮೇಲಂತೂ ಬೆಂಕಿಯನ್ನು ಅನೇಕ ಬಗೆಯ ಸುಧಾರಿತ ರೀತಿಗಳಲ್ಲಿ ಉಂಟುಮಾಡಿಕೊಂಡು ಅದರಿಂದ ಇತರ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಅನಿಲದ ಒಂದು ಧರೆಯನ್ನುಪಯೋಗಿಸಿಕೊಂಡು ಅದು ಒಂದು ಸೂಕ್ತಸ್ಥಳದಲ್ಲಿ ಹರಿದಾಗ ವ್ಯವಸ್ಥೆಯ ಒಂದು ಭಾಗದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಕಡಿತವೇರ್ಪಟ್ಟು ವಿದ್ಯುತ್ ಕಿಡಿಯುಂಟಾಗುತ್ತದೆ. ಅನಿಲದ ಮೂಲಕ ಹೊರಹೋಗುವ ವಿದ್ಯುತ್ ಕಿಡಿ ಅದನ್ನು ಹೊತ್ತಿಸುತ್ತದೆ. ಈ ವಿಧಾನದಲ್ಲಿ ಉತ್ಪತ್ತಿಯಾಗುವ ಬೆಂಕಿಯ ಜೊತೆಗೆ ಉಂಟಾಗುವ ಅಧಿಕ ಪ್ರಮಾಣದ ಶಾಖವನ್ನು ಅನೇಕ ರೀತಿಯಲ್ಲಿ ಬಳಸಿಕೊಂಡು ಬೆಂಕಿಯ ನೇರವಾದ ಉಪಯೋಗವನ್ನು ಇತ್ತೀಚೆಗೆ ಮಿತಗೊಳಿಸಲಾಗಿದೆ. ಈ ವಿಧಾನದಿಂದ ಉಂಟಾದ ಶಾಖವನ್ನು ಮನೆಗಳಲ್ಲಿ, ಕಾರ್ಖಾನೆಗಳೇ ಮುಂತಾದೆಡೆಗಳಲ್ಲಿ ಬಳಸಲಾಗುವ ವಿದ್ಯುತ್ ಒಲೆಗಳಲ್ಲಿ ಉಪಯೋಗಿಸಿಕೊಳ್ಳಲಾಗುತ್ತಿದೆ.

ಬೆಂಕಿಯನ್ನುತ್ಪಾದಿಸಿಕೊಳ್ಳಲು ಅತ್ಯಾಧುನಿಕವಾದ ಒಂದು ವಿಧಾನವೆಂದರೆ ಬೆಂಕಿಕಡ್ಡಿ (ಮ್ಯಾಚ್). ಒಂದು ರೀತಿಯಲ್ಲಿ ಬಹಳ ಹಿಂದೆಯೇ ಇದ್ದ ಘರ್ಷಣಾವಿಧಾನವನ್ನನುಸರಿಸಿಕೊಂಡೇ ಇದನ್ನು ರೂಪಿಸಲಾಗಿದೆ. ಚಿಕ್ಕ ಚಿಕ್ಕ ಮರದ ಕಡ್ಡಿಗಳ ತುದಿಗೆ ರಂಜಕ, ಗಂಧಕ, ಪಟ್ಲುಪ್ಪು (ಪೊಟಾಸಿಯಂ ಕ್ಲೋರೇಟ್) ಮತ್ತು ಜಿóಂಕ್ ಆಕ್ಸೈಡ್‍ಗಳ ಸಮ್ಮಿಶ್ರಣವನ್ನು ಅಂಟಿಸಿ ಒಣಗಿಸುತ್ತಾರೆ. ಇಂಥ ಕಡ್ಡಿಯನ್ನು ಒಂದು ಒರಟಾಗಿರುವ ನೆಲದ ಮೇಲಾಗಲೀ ಇನ್ನಾವುದೇ ಅಷ್ಟು ನಯವಲ್ಲದ ವಸ್ತುವಿನ ಮೇಲಾಗಲೀ ಗೀರಿದರೆ ಘರ್ಷಣೆಯಿಂದ ಕಡ್ಡಿಯ ತುದಿಯಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯಲು ಪ್ರಾರಂಭವಾಗುತ್ತದೆ. ಈ ಕ್ರಮದಲ್ಲಿ ತಯಾರಾದ ಬೆಂಕಿಕಡ್ಡಿಗಳು ಹೊರಗಿನ ಶಾಖ ಹೆಚ್ಚಾದಲ್ಲಿ ತಟಕ್ಕನೆ ಉರಿಯಲಾರಂಭಿಸುವ ಸಂಭವ ಇದ್ದುದರಿಂದಲೂ ಅವುಗಳನ್ನು ಕೈಯಲ್ಲಿ ಹಿಡಿದು ಬಳಸುವುದು ಚರ್ಮಕ್ಕೆ ಧಕ್ಕೆ ತರುವಂಥದಾದುದರಿಂದಲೂ ಅವುಗಳ ಬದಲು ನಿರಪಾಯದ ಬೆಂಕಿಕಡ್ಡಿಗಳ (ಸೇಫ್ಟಿ ಮ್ಯಾಚ್) ತಯಾರಿಕೆ ಮೊದಲಾಯಿತು. ಇಂಥ ಕಡ್ಡಿಗಳ ತುದಿಯಲ್ಲಿ ಪೆಟ್ಲುಪ್ಪು, ಮ್ಯಾಂಗನೀಸ್ ಡೈ ಆಕ್ಸೈಡ್ ಮತ್ತು ಗಂಧಕ - ಈ ರಾಸಾಯನಿಕ ವಸ್ತುಗಳ ಸಮ್ಮಿಶ್ರಣವಿದ್ದು ಜೊತೆಗೆ ಕೆಲವು ಅನಪಾಯಕಾರಿ ವಸ್ತುಗಳನ್ನೂ ಮಿಶ್ರ ಮಾಡಿರುತ್ತಾರೆ. ಇಂಥ ಕಡ್ಡಿಗಳನ್ನು ಒಂದು ಮರದ ಚಿಕ್ಕ ಪೆಟ್ಟಿಗೆಯೊಳಗಿರಿಸಿ, ಎರಡು ಪಾಶ್ರ್ವಗಳಿಗೂ ಕೆಂಪುರಂಜಕ ಮತ್ತು ಆಂಟಿಮೋನಿ ಎಂಬ ರಾಸಾಯನಿಕ ವಸತುಗಳನ್ನು ಲೇಪನಮಾಡಿರುತ್ತಾರೆ. ಪಟ್ಟಿಗೆಯ ಈ ಭಾಗದಮೇಲೆ ಬೆಂಕಿಕಡ್ಡಿ ಗೀರಿದರೆ, ಘರ್ಷಣೆಯಿಂದಾಗಿ ಕಡ್ಡಿ ಉರಿಯತೊಡಗಿ ಬೆಂಕಿ ಉತ್ಪತ್ತಿಯಾಗುತ್ತದೆ. ಕಡ್ಡಿ ಮರದಿಂದ ಮಾಡಿರುವುದರಿಂದ ಹತ್ತಿದ ಬೆಂಕಿ ಸ್ವಲ್ಪ ಹೆಚ್ಚು ಕಾಲ ಇರುತ್ತದೆ.

(ನೋಡಿ- ಬೆಂಕಿಕಡ್ಡಿ)

(ನೋಡಿ- ಕೈಗಾರಿಕೆ)

ಉದಾಹರಣೆ[ಬದಲಾಯಿಸಿ]

ಮೊದಮೊದಲು ಸಸ್ಯಗಳ ನೂಲನ್ನು, ಕಾಗದ ಅಥವಾ ಮರದೊಡನೆ ರಾಳ, ಗಂಧಕ ಅಥವಾ ಇತರ ಎಣ್ಣೆಗಳಂಥ ದಹಿಸುವ ವಸ್ತುಗಳೊಡನೆ ಸೇರಿಸಿ, ಬೆಂಕಿಯನ್ನು ಉಂಟುಮಾಡಿಕೊಳ್ಳಲಾಗುತ್ತಿತ್ತು. 1786ರಲ್ಲಿ ಹಳದಿ ರಂಜಕವನ್ನುಪಯೋಗಿಸಿದಾಗ, ಏಕಾಏಕಿ ಬೆಂಕಿ ಕಾಣಿಸಿಕೊಂಡು ಅನೇಕ ಅನಾಹುತಗಳಿಗೆ ಅವಕಾಶವಾಯಿತು. ಅನಂತರದ ವರ್ಷಗಳಲ್ಲಿ ಸುಧಾರಣೆಗಳು ಕಂಡುಬಂದು 1810ರ ಹೊತ್ತಿಗೆ ಘರ್ಷಣಾ ವಿಧಾನವೇ ಅತಿಸೂಕ್ತವೆಂದು ಕಂಡುಬಂತು. 19ನೆಯ ಶತಮಾನದಲ್ಲಿ ಬೆಂಕಿಯನ್ನುತ್ಪಾದಿಸುವ ವಿಧಾನದಲ್ಲಿ ಅನೇಕ ಬಗೆಯ ಹೊಸ ಹೊಸ ಮಾರ್ಪಾಟುಗಳು ಕಂಡುಬಂದು ಬೆಂಕಿಕಡ್ಡಿಯನ್ನು ಅತ್ಯಧಿಕವಾಗಿ ಬಳಸಲಾಗುತ್ತಿದೆ.ಇದಲ್ಲದೆ ಅನೇಕ ಬಗೆಯ ಇಂಧನಗಳನ್ನು ಉಪಯೋಗಿಸಿಕೊಂಡು ಬೆಂಕಿಯನ್ನುಂಟುಮಾಡಿಕೊಳ್ಳುವ ವಿಧಾನಗಳಂತೂ ಹೇರಳವಾಗಿವೆ. ಶಕ್ತಿಯ ಮೂಲ ಬೆಂಕಿ ಎಂಬುದನ್ನು ಮಾನವ ಕಂಡುಕೊಂಡದ್ದು ಒಂದು ಗಮನಾರ್ಹ ಅಂಶ. ಶಕ್ತಿ ಯಾವರೂಪದಲ್ಲಾದರೂ ಇರಬಹುದು. ಉಷ್ಣ ಶಕ್ತಿಯನ್ನುಪಯೋಗಿಸಿ ಹಬೆಯಂತ್ರಗಳನ್ನು ತಯಾರಿಸಲಾಯಿತು. ಚಲನಶಕ್ತಿಯನ್ನುತ್ಪಾದಿಸುವ ಬಗೆಯನ್ನು ಕಂಡುಕೊಂಡು ಈ ಕ್ಷೇತ್ರದಲ್ಲಿ ಕಂಡುಬರುವ ರೈಲು, ಜಹಜು ಮುಂತಾದುವುಗಳನ್ನು ನಿರ್ಮಿಸಲಾಯಿತು. ಉಷ್ಣಶಕ್ತಿ, ದ್ಯುತಿ ಶಕ್ತಿ, ವಿದ್ಯುಚ್ಛಕ್ತಿ, ಯಾಂತ್ರಿಕ ಶಕ್ತಿ-ಇವೇ ಶಕ್ತಿಸಾಮಥ್ರ್ಯದ ವಿವಿಧ ಪ್ರಕಾರಗಳು. ಇವುಗಳಿಗೆಲ್ಲ ಪ್ರಧಾನಮೂಲವಾದದ್ದು ಬೆಂಕಿಯೇ. ಇಂಥ ವಿವಿಧ ಶಕ್ತಿಗಳ ಉಪಯೋಗ ಈಗ ಬೃಹತ್ ಕೈಗಾರಿಕೆಗಳಲ್ಲಿ ಸಂಶೋಧನಾಕೇಂದ್ರಗಳಲ್ಲಿ ಉಷ್ಣ ಹಾಗು ಶೀತ ವಲಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.[೧]

ಪ್ರಾಚೀನ ಕಾಲ[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆಂಕಿಯನ್ನು ಬೇರೆ ಬೇರೆ ವಿಧಾನಗಳಲ್ಲಿ ಬಳಸುತ್ತಿದ್ದರು. ಉದಾಹರಣೆಗೆ ಹುಚ್ಚುನಾಯಿ ಮುಂತಾದ ವಿಷಜಂತುಗಳ ಕಡಿತದಿಂದ ಮೈಗೇರುವ ವಿಷವನ್ನು ತಡೆಯಲು, ಅಂಟುರೋಗಗಳು ಹರಡದಂತೆ ತಡೆಯಲು ಬೆಂಕಿಯನ್ನು ಬಳಸುವ ವಿಧಾನ (ಚುಟಿಕೆ) ಬಹಳ ಹಿಂದಿನಿಂದಲೂ ತಿಳಿದಿದ್ದು ಈಗಲೂ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಚರ್ಮರೋಗ, ಕೀಲುವಾಯು ಮುಂತಾದ ರೋಗಗಳ ಚಿಕಿತ್ಸಾ ವಿಧಾನಗಳು ರೋಮನ್ನರ ಕಾಲದಿಂದಲೂ ಬೆಳೆದುಬಂದಿವೆ. ಅನೇಕ ಕ್ರಿಮಿಶುದ್ಧಿಕಾರಕ ವಿಧಾನದಲ್ಲಿ ಬೆಂಕಿಯನ್ನು ಈಚೆಗೆ ಬಳಸಲಾಗುತ್ತಿದೆ. ಇದಲ್ಲದೆ ಸೂಜಿಮದ್ದನ್ನು ಕೊಡುವಾಗ, ಶಸ್ತ್ರಕ್ರಿಯೆಯನ್ನು ಮಾಡುವಾಗ ಬ್ಯಾಕ್ಟೀರಿಯಾದಂಥ ಕ್ರಿಮಿಗಳು ದೇಹದೊಳಕ್ಕೆ ಪ್ರವೇಶಿಸಿ ಕಾಯಿಲೆಯನ್ನು ಉಲ್ಬಣ ಮಾಡದಂತೆ ಮೊದಲು ಆ ಉಪಕರಣಗಳನ್ನು ಬೆಂಕಿಯ ಜ್ವಾಲೆಯಲ್ಲಿ ಶುದ್ಧಿ ಮಾಡಲಾಗುತ್ತದೆ. ಬೆಂಕಿ ಅಪಘಾತಸೂಚಕವೂ ಆಗಿದೆ. ಅದರಿಂದಾಗುವ ಅನಾಹುತಗಳಿಂದ ಪ್ರಾಣ ಹಾನಿ ಆಸ್ತಿಪಾಸ್ತಿಗಳ ನಷ್ಟ ಮುಂತಾದುವು ಸಂಭವಿಸುತ್ತವೆ. ಇಂಥ ಅನಾಹುತಗಳನ್ನು ಕುರಿತ ಚಾರಿತ್ರಿಕ ಘಟನೆಗಳು ಹೇರಳವಾಗಿವೆ. ಉಂಟಾಗುವ ಅಪಘಾತಗಳನ್ನು ಕುರಿತ ಚಾರಿತ್ರಿಕ ಘಟನೆಗಳು ಹೇರಳವಾಗಿವೆ. ಉಂಟಾಗುವ ಅಪಘಾತಗಳನ್ನು ತಪ್ಪಿಸುವ ವಿವಿಧರೀತಿಯ ತಂತ್ರಗಳು ಇತ್ತೀಚೆಗೆ ಬಳಕೆಯಲ್ಲಿವೆ. (ನೋಡಿ- ಅಗ್ನಿಶಾಮಕದಳ). ಇವಲ್ಲದೆ ಯಾವುದೇ ರೀತಿಯ ಅಗ್ನಿ ಅಪಘಾತಗಳ ವಿರುದ್ಧ ನಿಲ್ಲುವಂಥ ಕಟ್ಟಡಗಳ ನಿರ್ಮಾಣ, ಕೆಲವು ಸನ್ನಿವೇಶಗಳಲ್ಲಿ ಬೆಂಕಿಯಿರುವೆಡೆಯೇ ಕೆಲಸ ಮಾಡಬೇಕಾಗಿ ಬರುವ ಸಂದರ್ಭಗಳಲ್ಲಿ ಸುಡದ ಬಟ್ಟೆಗಳನ್ನು ಧರಿಸಿ ಕೆಲಸ ಮಾಡುವುದು - ಮುಂತಾದ ಇನ್ನೂ ಹಲವು ಬಗೆಯ ಶಾಮಕತಂತ್ರಗಳನ್ನು ಬಳಸಲಾಗುತ್ತಿದೆ. (ನೋಡಿ- ಅಗ್ನ್ಯಬಾಧಿತ-ಕಟ್ಟಡ) (ನೋಡಿ- ಅಗ್ನ್ಯಬಾಧಿತ-ವಸ್ತ್ರ) ಇದಲ್ಲದೆ ಅಗ್ನಿ ಅನಾಹುತಗಳಿಂದ ಜನರಿಗೆ ಆಗುವ ಪ್ರಾಣಹಾನಿ, ಆಸ್ತಿಪಾಸ್ತಿಗಳ ನಷ್ಟ ಮುಂತಾದುವುಗಳಿಂದೊದಗಬಹುದಾದ ನಷ್ಟವನ್ನು ಪೂರೈಸಿಕೊಡಲು ಜೀವವಿಮೆ, ಅಗ್ನಿ ವಿಮೆಯೇ ಮೊದಲಾದ ವಿಮಾ ಸೌಲಭ್ಯಗಳನ್ನು ಒದಗಿಸಿಕೊಡುವ ವ್ಯವಸ್ಥೆ ಕಂಡುಬಂದಿದೆ. (ನೋಡಿ- ಅಗ್ನಿವಿಮೆ) ನಾಗರಿಕ ಮಾನವ ಆಹಾರವನ್ನು ಬೇಯಿಸಿ ತಿನ್ನುವುದನ್ನು ಕಲಿತಂತೆಯೇ ಶಾಖ ಮತ್ತು ಧೂಮಗಳ ಬಳಕೆಯಿಂದ ಆಹಾರಸಂರಕ್ಷಣಾ ವಿಧಾನವನ್ನು ಕಂಡುಕೊಂಡಿದ್ದಾನೆ. (ಎಸ್.ಆರ್.ಪಿ.)

ಉಲ್ಲೇಖಗಳು[ಬದಲಾಯಿಸಿ]

  1. http://www.prajavani.net/news/article/2012/08/10/94506.html[ಶಾಶ್ವತವಾಗಿ ಮಡಿದ ಕೊಂಡಿ]