ಅಗ್ನಿಶಿಲಾಛಿದ್ರಗಳು
ಅಗ್ನಿಪರ್ವತಗಳ ಸ್ಫೋಟನ ಕಾಲದಲ್ಲಿ ಅಧಿಕ ಶಾಖ ಮತ್ತು ಒತ್ತಡದಿಂದ ಹೊರಕ್ಕೆ ಎಸೆಯಲ್ಪಡುವ ಶಿಲೆಗಳ ಚೂರುಗಳು, ಗಾತ್ರಗಳಿಗನುಸಾರವಾಗಿ ಅಗ್ನಿಪರ್ವತದ ಬಾಯಿಂದ ಗಗನದತ್ತ ಬಹು ಎತ್ತರಕ್ಕೆ ಹೋಗಿ ಶಿಲಾವರ್ಷದಂತೆ ಮತ್ತೆ ಭೂಮಿಯ ಮೇಲೆ ಬೀಳುತ್ತವೆ. ಈ ಚೂರುಗಳಲ್ಲಿ ವಿವಿಧ ಶಿಲೆಗಳು, ಶಿಲಾರಸದ ಭಾಗಗಳು, ಹಾಗೂ ಶಿಲೆಗಳ ಸಣ್ಣ ಕಣ, ಬೂದಿ ಇತ್ಯಾದಿ ಸೇರಿರುತ್ತದೆ. ಇವೇ ಅಗ್ನಿಶಿಲಾಛಿದ್ರಗಳು (ಪೈರೊಕ್ಲ್ಯಾಸ್ಟಿಕ್ ರಾಕ್ಸ್). ಅಗ್ನಿಶಿಲಾಛಿದ್ರಗಳು ಹೊರಕ್ಕೆ ಎಸೆಯಲ್ಪಟ್ಟಾಗ ಅವು ಶಿಲಾರಸದೊಡನೆ ಸೇರಿ ಗಟ್ಟಿಯಾಗಬಹುದು. ಅಥವಾ ಹಾಗೆಯೇ ಉಳಿಯಬಹುದು. ಕಣಗಳ ಗಾತ್ರಗಳನ್ನನುಸರಿಸಿ ಇವುಗಳನ್ನು ಸ್ಥೂಲವಾಗಿ ಮೂರು ಭಾಗವಾಗಿ ವಿಂಗಡಿಸಬಹುದು.
ಟಫ್
[ಬದಲಾಯಿಸಿ]ಅಗ್ನಿಪರ್ವತಗಳ ಸ್ಫೋಟನೆಯಾದಾಗ ಸಾಮಾನ್ಯವಾಗಿ ಮೊದಲು ಹೊರಕ್ಕೆ ಎಸೆಯಲ್ಪಡುವುದು ಬೂದಿ ಅಥವಾ ಮರಳು. ಇದು ಅತ್ಯಂತ ಸೂಕ್ಷ್ಮಕಣಗಳಿಂದ ಕೂಡಿದ್ದು ಗಟ್ಟಿಯಾಗದೆ ಹಾಗೆಯೇ ಉಳಿಯಬಹುದು. ಆದರೆ ಅನೇಕ ಸಂದರ್ಭಗಳಲ್ಲಿ ಬೂದಿ ಭೂಮಿಯ ಮೇಲೆ ಬಿದ್ದು ಮಿತವಾಗಿ ಗಟ್ಟಿಯಾಗುತ್ತದೆ. ಬೂದಿಯುಕ್ತವಾದ ಈ ವಸ್ತುವಿಗೆ ಟಫ್ ಎನ್ನುತ್ತಾರೆ. ಇದು ಅನೇಕ ವೇಳೆ ಪದರ ಪದರವಾಗಿರುವುದರಿಂದ ಪ್ರತಿಯೊಂದು ಪದರವೂ ನಿಯತಕಾಲವನ್ನು ಸೂಚಿಸುವ ಆಧಾರವಾಗುತ್ತದೆ. ಇದು ಅನೇಕ ವೇಳೆ ಸಮುದ್ರದ ತಳವನ್ನು ಸೇರಿ, ಮರಳು, ಜೇಡುಗಳ ಜೊತೆ ಶೇಖರವಾಗಿ ಟಫ್ ಮರಳುಶಿಲೆ ಮತ್ತು ಟಫ್ ಜೇಡುಶಿಲೆಗಳಾಗಿ ಮೈದೋರುತ್ತವೆ. ಬೂದಿಯ ಜೊತೆ ಅತಿ ಸೂಕ್ಷ್ಮವಾದ ಸಣ್ಣ ಸಣ್ಣ ಮೊನಚಾದ ಗಾಜಿನ ಕಣಗಳು ಮಿಶ್ರವಾಗಿರುತ್ತವೆ. ಇವುಗಳನ್ನು ಬರಿಯ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಲಾವಾರಸದ ಸಣ್ಣ ದ್ರವಕಣಗಳೇ ಇವಕ್ಕೆ ಮೂಲ. ಬಹುಬೇಗ ಗಾಳಿಯಲ್ಲಿ ಇವು ಸಣ್ಣಗಾಗುವುದರಿಂದ ಗಾಜಾಗಿ ಪರಿವರ್ತನೆ ಹೊಂದುತ್ತವೆ. ಇನ್ನೂ ಹೆಚ್ಚಿನ ಗಾತ್ರದ ಅಂದರೆ ಬಟಾಣಿಯಿಂದ ಬಾದಾಮಿಯಷ್ಟು ಗಾತ್ರವಿದ್ದು ಗುಂಡು ಅಥವಾ ಮೊನಚಾಗಿರುವ ಆಕಾರವನ್ನುಳ್ಳ ಶಿಲಾಛಿದ್ರಗಳು ಒಂದುಗೂಡಿರುವ ಶಿಲೆಯೇ ಲಾಪಿಲ್ಲಿ. ಕೆಲವೊಮ್ಮೆ ಶಿಲಾರಸ ಹಾಗೂ ಬೂದಿಯೊಡನೆ ಮಿಶ್ರಿತವಾಗಿ ಗಟ್ಟಿಯಾಗಿರುವುದೇ ಲಾಪಿಲ್ಲಿ ಟಫ್.
ಅಗ್ಲಾಮೆರೇಟ್ ಶಿಲೆ
[ಬದಲಾಯಿಸಿ]ಆಸ್ಫೋಟನೆಯಾದಾಗ ಆ ಪ್ರಚಂಡ ರಭಸಕ್ಕೆ ಭಾರಿ ಖಂಡಗಳೇ ಹೊರಕ್ಕೆ ಸಿಡಿಯುತ್ತವೆ. 32 ಮಿ.ಮೀ.ಗಳಿಗಿಂತ ಹೆಚ್ಚಿನ ಗಾತ್ರವಿದ್ದು ಮೊನಚಾಗಿದ್ದಲ್ಲಿ ಅವನ್ನು ಬಂಡೆಗಳು (ಬ್ಲಾಕುಗಳು) ಎನ್ನುತ್ತಾರೆ; ಬೂದಿ ಅಥವಾ ಮರಳಿನ ಜೊತೆ ಸೇರಿ ಗಟ್ಟಿಯಾಗಿದ್ದಲ್ಲಿ ಬ್ರೆಚಿಯ ಎನ್ನುತ್ತಾರೆ. ಹಾಗಲ್ಲದೆ ಗುಂಡು ಹಾಗೂ ಅಂಡಾಕಾರವಾಗಿದ್ದಲ್ಲಿ ಗುಂಡುಗಳು, ಮುದ್ದೆಗಳು (ಬಾಂಬು) ಎಂದೂ ಖಂಡಗಳು ಒಂದಕ್ಕೊಂದು ಸೇರಿ ಗಟ್ಟಿಯಾಗಿದ್ದಲ್ಲಿ ಅಗ್ಲಾಮೆರೇಟ್ ಶಿಲೆ ಎಂದೂ ಕರೆಯುತ್ತಾರೆ. ಅಗ್ನಿಶಿಲಾಛಿದ್ರಗಳು ಸಾಮಾನ್ಯವಾಗಿ ಜ್ವಾಲಾಮುಖಿಯ ಬಾಯ ಸುತ್ತಮುತ್ತ ಬಹುಮಟ್ಟಿಗೆ ಶೇಖರವಾಗುತ್ತವೆ. ಹಲವು ಸಂದರ್ಭಗಳಲ್ಲಿ ಅವುಗಳ ಮಂದ ಒಂದು ಸಾವಿರ ಅಡಿಯನ್ನು ಮುಟ್ಟಬಹುದು. ಮೌಂಟ್ ಎಟ್ನಾ ಅಗ್ನಿಪರ್ವತ ಬಹುಮಟ್ಟಿಗೆ ಶಿಲಾಛಿದ್ರಗಳ ಸಂಗ್ರಹಣದಿಂದಾದುದು. ಆದರೆ ಧೂಳು, ಬೂದಿ ಮತ್ತು ಇತರ ಸೂಕ್ಷ್ಮಕಣಗಳು ಕುಂಡದ ಬಳಿ ಶೇಖರವಾಗದೆ ಬಹುದೂರಕ್ಕೆ ಒಯ್ಯಲ್ಪಡುತ್ತವೆ. ಉದಾ: ಕಟ್ಮಾಯಿ ಅಗ್ನಿಪರ್ವತದಿಂದ ಸುಮಾರು ನೂರು ಮೈಲಿ ದೂರದಲ್ಲಿ ಕೊಡಿಯಾರ್ ದ್ವೀಪದಲ್ಲಿ ಸುಮಾರು ಹನ್ನೆರಡು ಅಡಿ ಮಂದವಾಗಿರುವ ಅಗ್ನಿಪರ್ವತದ ಬೂದಿ ಶೇಖರವಾಗಿದೆ. 1883ರಲ್ಲಿ ಕ್ರಕಟೊವಾ ಅಗ್ನಿಪರ್ವತದಿಂದ ಎಸೆಯಲ್ಪಟ್ಟ ಬೂದಿ ಮತ್ತು ಧೂಳು ವಾಯುಮಂಡಲವನ್ನೆಲ್ಲ ವ್ಯಾಪಿಸಿ ಸುಮಾರು ಎರಡು ವರ್ಷಗಳವರೆಗೆ ಕಂಡುಬರುತ್ತಿತ್ತು.[೧]