ಅಖಿಲಭಾರತ ಉತ್ಪಾದಕರ ಸಂಘ

ವಿಕಿಪೀಡಿಯ ಇಂದ
Jump to navigation Jump to search

ಅಖಿಲಭಾರತ ಉತ್ಪಾದಕರ ಸಂಘ[ಬದಲಾಯಿಸಿ]

1941ರಲ್ಲಿ ಸ್ಥಾಪಿತವಾಯಿತು. ಇದರ ಪ್ರಧಾನ ಕಚೇರಿ ಮುಂಬಯಿ. ಸಮರ್ಪಕವಾದ ಪ್ರಗತಿಪರ ಅಸ್ತಿಭಾರದ ಮೇಲೆ ಭಾರತದ ಕೈಗಾರಿಕೆಗಳ ಅಭಿವೃದ್ಧಿ ಸಾಧಿಸುವ ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೂ ಸಂಘಗಳಿಗೂ ಒಂದು ಸಾಮಾನ್ಯ ವೇದಿಕೆಯನ್ನೊದಗಿಸುವುದೂ ಸರ್ಕಾರದ ನೀತಿ ಹಾಗೂ ಕಲಾಪಗಳ ವಿಷಯದಲ್ಲಿ ಜಾಗೃತವಾಗಿರುವುದೂ ಇದರ ಉದ್ದೇಶಗಳು. ಸಂಘದ ಕಲಾಪಗಳನ್ನು 125 ಮಂದಿ ಸದಸ್ಯರ ಕೇಂದ್ರೀಯ ಸಮಿತಿ ನಿರ್ವಹಿಸುತ್ತದೆ. ನೀತಿನಿರೂಪಣೆ ಮಾಡಿ ಕಾರ್ಯವನ್ನು ನಿರ್ದೇಶಿಸುವುದರಲ್ಲಿ ಈ ಸಮಿತಿಯದೇ ಪರಮಾಧಿಕಾರ. ಪ್ರಾಥಮಿಕ ಸದಸ್ಯತ್ವದ, ಅಂಗಸಂಸ್ಥೆಗಳ ಹಾಗೂ ಪ್ರಾದೇಶಿಕ ಸಂಘಗಳ ಜಾಲದ ಮೂಲಕ ಇದು ಇಡೀ ದೇಶದಲ್ಲಿ ಹರಡಿರುವ ದೊಡ್ಡ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಸಹಸ್ರಾರು ಉತ್ಪಾದಕರನ್ನು ಪ್ರತಿನಿಧಿಸುತ್ತದೆ. ನಾನಾ ಕೈಗಾರಿಕೆಗಳಿಗೆ ಸಂಬಂಧಿಸಿದ ತಾಂತ್ರಿಕ, ಆರ್ಥಿಕ ಹಾಗೂ ವ್ಯವಸ್ಥೆಯ ವಿವರಗಳನ್ನು ನೀಡುವುದೇ ಅಲ್ಲದೆ ಈ ಸಂಸ್ಥೆ ಕೈಗಾರಿಕಾ ಅಭಿವೃದ್ಧಿಗೆ ವ್ಯಾಪಕ ಯೋಜನೆಗಳನ್ನು ರೂಪಿಸುತ್ತದೆ. ಪ್ರಮುಖ ಕೈಗಾರಿಕೆಗಳ ವಿಚಾರವಾಗಿ ಇದು ಅನೇಕ ಉಪಯುಕ್ತ ಪ್ರಕಟಣೆಗಳನ್ನೂ ಹೊತ್ತಿಗೆಗಳನ್ನೂ ಹೊರತಂದಿದೆ.