ಅಕ್ಷರಲಿಪಿ ಚರಿತ್ರೆ
ಲಿಪಿಗಳು, ವಿಧಗಳು
[ಬದಲಾಯಿಸಿ]ಚಿಹ್ನೆಗಳ ಮೂಲಕ ಅಭಿಪ್ರಾಯ ಅಥವಾ ಶಬ್ದವನ್ನು ಸೂಚಿಸುವ ಸಾಧನವೇ ಲಿಪಿ.
ಲಿಪಿಗಳಲ್ಲಿ ಅನೇಕ ವಿಧಗಳಿವೆ.
ಅಕ್ಷರಲಿಪಿ
[ಬದಲಾಯಿಸಿ]ಇವುಗಳಲ್ಲಿ ಅಕ್ಷರ ಮಾಲಾಲಿಪಿ (ಆಲ್ಫಬೆಟಿಕ್ ರೈಟಿಂಗ್) ಬಹಳ ಮುಂದುವರಿದುದು. ಇದರಲ್ಲಿ ಪ್ರತಿಯೊಂದು ಚಿಹ್ನೆಗೂ ಅಕ್ಷರಕ್ಕೂ ಒಂದು ಸ್ಪಷ್ಟವಾದ, ಸಾಮಾನ್ಯವಾಗಿ ಎಲ್ಲರಿಂದಲೂ ಮಾನ್ಯ ಪಡೆದ, ಒಂದು ಅಥವಾ ಅನೇಕ ಶಬ್ದಗಳ ಮೌಲ್ಯ ಇರುತ್ತದೆ. ಬರೆಯುವ ಚಿಹ್ನೆಗೂ ಉಚ್ಚರಿಸುವ ಶಬ್ದಕ್ಕೂ ಯಾವುದೇ ವಿಧವಾದ ಸಂಬಂಧವೂ ಇರುವುದಿಲ್ಲವೆಂದು ಹೇಳಬಹುದು. ಅಂದರೆ ಂ ಎಂಬ ಅಕ್ಷರವನ್ನು ಬರೆಯುವ ವಿಧಾನಕ್ಕೂ ಅದೇ ಅಕ್ಷರವನ್ನು ಉಚ್ಚರಿಸುವ ಶಬ್ದಕ್ಕೂ ಯಾವ ವಿಧವಾದ ಸಂಬಂಧವನ್ನು ಕಲ್ಪಿಸುವುದು ಕಷ್ಟ. ಆದ್ದರಿಂದ ಅಕ್ಷರಲಿಪಿ ಉಚ್ಚರಿತಶಬ್ದದ ಒಂದು ಸಂಕೇತ.
ಅನಕ್ಷರಲಿಪಿ
[ಬದಲಾಯಿಸಿ]ಆದರೆ ಚಿತ್ರಲಿಪಿ, ಭಾವಲಿಪಿ ಮುಂತಾದುವು ಅಕ್ಷರಲಿಪಿಗಳಲ್ಲ. ಅವುಗಳನ್ನು ಅನಕ್ಷರಲಿಪಿಗಳು (ನಾನ್ಆಲ್ಫಬೆಟಿಕ್) ಎಂದು ಕರೆಯಬಹುದು. ಏಕೆಂದರೆ ಅವುಗಳಲ್ಲಿ ಬರೆಯುವ ಚಿಹ್ನೆಗೂ ಉಚ್ಚರಿಸುವ ಶಬ್ದಕ್ಕೂ ನಿಕಟ ಸಂಬಂಧವಿರುತ್ತದೆ.
ಲಿಪಿಯ ಬೆಳವಣಿಗೆ
[ಬದಲಾಯಿಸಿ]ಅನಕ್ಷರಲಿಪಿಯ ಬೆಳೆವಣಿಗೆ ಮತ್ತು ವಿಕಾಸದಿಂದ ಅಕ್ಷರಮಾಲಾಲಿಪಿ ಉಗಮವಾಯಿತು ಎಂಬ ವಾದವನ್ನು ಎಲ್ಲರೂ ಒಪ್ಪುತ್ತಾರೆ. ಮಾನವ ತನ್ನ ನಾಗರಿಕತೆಯ ಪ್ರಾರಂಭ ದೆಶೆಯಲ್ಲಿ, ಚಿತ್ರಲಿಪಿ, ಭಾವಲಿಪಿ ಮುಂತಾದ ಅನಕ್ಷರಲಿಪಿಗಳನ್ನು ಉಪಯೋಗಿಸಿ, ಅವುಗಳಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ, ಸಮರ್ಪಕವಾದ ಅಕ್ಷರಲಿಪಿಗೆ ತಳಹದಿಯನ್ನು ಹಾಕಿದ. ಚರಿತ್ರಪುರ್ವಕಾಲದ, ಶಿಲಾಯುಗದ ಮಾನವ ಗುಹೆಗಳಲ್ಲಿ ಚಿತ್ರಗಳನ್ನು ಗೀಚುವ ಅಭ್ಯಾಸವನ್ನು ಇಟ್ಟುಕೊಂಡಿದ್ದರೂ ಅವು ಬರೆವಣಿಗೆಯ ದೃಷ್ಟಿಯಿಂದ ನಿರ್ಮಾಣವಾದವೆಂದು ಹೇಳಲಾಗುವುದಿಲ್ಲ.
ಅನಕ್ಷರಲಿಪಿಯ ಬೆಳೆವಣಿಗೆ
[ಬದಲಾಯಿಸಿ]ಅನಕ್ಷರಲಿಪಿಯ ಬೆಳೆವಣಿಗೆಯಲ್ಲಿ ಮುಖ್ಯವಾದ ಮೂರು ಮೂಲ ಅವಸ್ಥೆಗಳನ್ನು ನಾವು ಕಾಣಬಹುದು.
ಮೊದಲನೆಯದು ಬೀಜರೂಪವಾದ ಬರೆವಣಿಗೆ (ಎಂಬ್ರಿ ಯೋರೈಟಿಂಗ್). ಇದರಲ್ಲಿ ಅನೇಕ ವಿಧವಾದ ಜ್ಯಾಮಿತಿಯ ಸಂಕೇತಗಳು ಚಿಹ್ನೆಗಳು ವೃತ್ತಗಳು ರೇಖೆಗಳು ಮತ್ತು ಇತರ ಗುರುತುಗಳನ್ನು ಕಾಣುತ್ತೇವೆ.
ಎರಡನೆಯದು ಬಿಂಬರೂಪ ಮತ್ತು ತಾಂತ್ರಿಕಮತಗಳಲ್ಲಿ ಉಪಯೋಗಿಸುವ ರೀತಿಯ ಸೂಚ್ಯಾತ್ಮಕ ಚಿಹ್ನೆಗಳು (ಐಕನಾಗ್ರಫಿó ಮತ್ತು ಸಿಂಪತೆಟಿಕ್ ಮ್ಯಾಜಿಕ್).
ಮೂರನೆಯದು ಸ್ಮರಣೆಗೆ ಸಹಾಯಕವಾದ (ನೆಮೋನಿಕ್) ಸಾಧನಗಳು. ಉದಾಹರಣೆಗೆ ಪೆರು ಸಂಸ್ಕೃತಿಯಲ್ಲಿ ಬಣ್ಣದ ದಾರಗಳಿಂದ ಒಂದು ಅಥವಾ ಅನೇಕ ಗಂಟುಗಳನ್ನು ಹಾಕುವುದು ಬಹು ಸಾಮಾನ್ಯವಾದ ಪದ್ಧತಿಯಾಗಿತ್ತು. ಈ ಗಂಟುಗಳು ಲೆಕ್ಕಕ್ಕೆ ಉಪಯೋಗಿಸಲ್ಪಡುತ್ತಿದ್ದುವು. ಅದೇ ರೀತಿಯಲ್ಲಿ ಚಾಕುವಿನಿಂದ ಮರದ ಕೊಂಬೆಗಳ ಮೇಲೆ ಗೀರುಗಳನ್ನು ಮಾಡಿ ಈ ಗೀರುಗಳ ಅರ್ಥವನ್ನು ಸುದ್ದಿಗಾರರಿಗೆ ತಿಳಿಸಿದರೆ, ಸುದ್ದಿಗಾರ ಅದನ್ನು ಮತ್ತೊಂದು ದೇಶದ ರಾಜನಿಗೆ ವಿವರಿಸುತ್ತಿದ್ದ ಪದ್ಧತಿಯೂ ಇದ್ದಿತೆಂದು ಗೊತ್ತಾಗುತ್ತದೆ.
ಅಕ್ಷರಲಿಪಿಯ ಬೆಳೆವಣಿಗೆ
[ಬದಲಾಯಿಸಿ]ಅಕ್ಷರಲಿಪಿಯ ಬೆಳೆವಣಿಗೆಯಲ್ಲಿ ಚಿತ್ರಲಿಪಿ (ಪಿಕ್ಟೊಗ್ರಫಿಕ್ ಸ್ಕ್ರಿಪ್ಟ), ಭಾವಲಿಪಿ (ಐಡಿಯೋಗ್ರಫಿಕ್ ಸ್ಕ್ರಿಪ್ಟ), ಪದಸೂಚಕಲಿಪಿ (ಫೋನಟಿಕ್ ಸ್ಕ್ರಿಪ್ಟ) ಏಕಶಬ್ದಾತ್ಮಕ ವರ್ಣಲಿಪಿಗಳು (ಸಿಲಬರಿ) ಕ್ರಮವಾದ ಹಂತಗಳು.
ಚಿತ್ರಲಿಪಿಯೇ ಬರೆವಣಿಗೆಯ ಅತ್ಯಂತ ಪ್ರಾಚೀನವಾದ ಅವಸ್ಥೆ. ಚಿತ್ರಗಳಲ್ಲಿ ಉಚ್ಚಾರಣ ಧ್ವನಿಗಳಿಲ್ಲ. ಬರೆಯಲ್ಪಟ್ಟ ವಸ್ತುವಿನ ಅಭಿಪ್ರಾಯ ಬರೆದ ಚಿತ್ರದ ಮೂಲಕ ಮಾತ್ರ ಉಂಟಾಗುತ್ತದೆ. ಒಂದು ಸಣ್ಣ ವೃತ್ತಾಕಾರ ಸೂರ್ಯನನ್ನೂ, ಆನೆಯ ಚಿತ್ರ ಆನೆಯನ್ನೂ ತೋರಿಸುವುದೇ ಚಿತ್ರಲಿಪಿಯ ಮೂಲೋದ್ದೇಶ. ಚಿತ್ರಲಿಪಿ ಪ್ರಾಚೀನಪ್ರಪಂಚದ ಈಜಿಪ್್ಟ, ಮೆಸಪೊಟೇಮಿಯ, ಫೋóನೀಷಿಯ, ಕ್ರೀಟ್, ಸ್ಪೇನ್ ಮುಂತಾದ ಅನೇಕ ಕಡೆಗಳಲ್ಲಿ ಉಪಯೋಗದಲ್ಲಿತ್ತು.
ಭಾವಲಿಪಿ ಚಿತ್ರಲಿಪಿಗಿಂತ ಹೆಚ್ಚು ಮುಂದುವರಿದುದು. ಇದರಲ್ಲಿನ ಚಿತ್ರಗಳು ಅವುಗಳ ಹಿಂದೆ ಅಡಗಿರುವ ಭಾವವನ್ನು ವ್ಯಕ್ತಪಡಿಸುತ್ತವೆ. ಒಂದು ಸಣ್ಣ ವೃತ್ತ ಚಿತ್ರಲಿಪಿಯಲ್ಲಿ ಸೂರ್ಯನನ್ನು ತಿಳಿಸಿದರೆ, ಭಾವಲಿಪಿಯಲ್ಲಿ ಸೂರ್ಯನ ಶಾಖ, ಬಿಸಿಲು, ಹಗಲು ಅಥವಾ ಸೂರ್ಯದೇವ ಎಂಬ ಅರ್ಥಗಳನ್ನು ಕೊಡುತ್ತದೆ. ಅದೇ ರೀತಿಯಲ್ಲಿ ಹೋಗುವುದು ಎನ್ನುವ ಅರ್ಥ ಬರಲು ಎರಡು ಕಾಲುಗಳನ್ನು ತೋರಿಸಬಹುದು. ವಿಶೇಷ ಪರಿವರ್ತನೆ ಹೊಂದಿದ ಭಾವಲಿಪಿಗೂ ಮತ್ತು ಪದ ಸೂಚಕಲಿಪಿಗೂ ಮಧ್ಯದಲ್ಲಿರುವ ಲಿಪಿಯನ್ನು ವಿದ್ವಾಂಸರು ಮಧ್ಯಮಾವಸ್ಥೆಯ ಲಿಪಿ (ಟ್ರ್ಯಾನ್ಸಿಷನಲ್ ಸ್ಕ್ರಿಪ್ಟ) ಎಂದು ಕರೆಯುತ್ತಾರೆ. ಈ ವರ್ಗಕ್ಕೆ ಕ್ಯೂನಿಫಾರಂ, ಹೈರೊಗ್ಲಿಫಿಕ್, ಕ್ರೀಟ್ ದೇಶದ ಲಿಪಿ, ಸಿಂಧೂಲಿಪಿ, ಹಿಟ್ಟೈಟ್ಲಿಪಿ, ಚೀನಿಲಿಪಿ, ಮಧ್ಯಅಮೆರಿಕ ಮತ್ತು ಮೆಕ್ಸಿಕೊಗಳ ಲಿಪಿ, ಈಸ್ಟರ್ ದ್ವೀಪಗಳ ಲಿಪಿ ಮುಂತಾದ ಲಿಪಿಗಳು ಸೇರುತ್ತವೆ. ಕ್ಯೂನಿಫಾರಂ ಲಿಪಿ (ಬೆಣೆಯಾಕಾರ) ಸುಮೇರಿಯನ್ ಜನಗಳಿಂದ ಪ್ರ.ಶ.ಪೂ. ನಾಲ್ಕನೆಯ ಸಹಸ್ರಮಾನದಲ್ಲಿಯೇ ಉಪಯೋಗಿಸಲ್ಪಡುತ್ತಿದ್ದಿತೆಂದು ಹೇಳಲು ಆಧಾರಗಳಿವೆ. ಸುಮೇರಿಯನ್ನರ ಅನಂತರ ಬ್ಯಾಬಿಲೋನಿಯನ್, ಅಸ್ಸೀರಿಯನ್, ಎಲಾಮೈಟ್, ಹಿಟ್ಟೈಟ್, ಕ್ಯಾಸೈಟ್, ಪರ್ಷಿಯನ್ ಮುಂತಾದ ಜನ ಕ್ಯೂನಿಫಾರಂ ಲಿಪಿಯನ್ನು ಬಳಸುತ್ತಿದ್ದರು. ಕ್ರಿಸ್ತಶಕದ ಆರಂಭದ ಹೊತ್ತಿಗೆ ಕ್ಯೂನಿಫಾóರಂ ಲಿಪಿಯ ಬಳಕೆ ನಿಂತುಹೋಯಿತು. ಕ್ಯೂನಿಫಾರಂನಲ್ಲಿ ರೇಖಾರೂಪದ ಮತ್ತು ಬೆಣೆಯಾಕಾರದ ಚಿಹ್ನೆಗಳೇ ವಿಶೇಷವಾಗಿವೆ.
ಹೈರೊಗ್ಲಿಫಿಕ್ (ಕೆತ್ತಿದ ಪವಿತ್ರಾಕ್ಷರ) ಬರೆವಣಿಗೆ ಪ್ರಾಚೀನ ಪ್ರಪಂಚದ ಅತ್ಯಂತ ಮುಖ್ಯಲಿಪಿಗಳಲ್ಲೊಂದು. ಇದು ಈಜಿಪ್ಟಿನಲ್ಲಿ ಉಗಮವಾಗಿ, ಸುಮಾರು ಪ್ರ.ಶ.ಪು.3500ರಲ್ಲಿಯೇ ಬಳಕೆಯಲ್ಲಿತ್ತು. ಇದು ಪ್ರಾಚೀನ ಈಜಿಪ್ಟಿನ ದೇವಲಿಪಿ. ಹೈರೊಗ್ಲಿಫಿóಕ್ ಲಿಪಿಯಲ್ಲಿ ಪದಸೂಚಕ ಚಿಹ್ನೆಗಳೂ ಏಕಶಬ್ದಸೂಚಕ ಚಿಹ್ನೆಗಳೂ ಇವೆ. ಸಿಮಿಟಿಕ್ ಭಾಷೆಯಲ್ಲಿದ್ದಂತೆ ಇದರಲ್ಲಿ ವ್ಯಂಜನಗಳನ್ನು ಮಾತ್ರ ಲಿಪಿಯಲ್ಲಿ ಸೂಚಿಸುತ್ತಿದ್ದರು. ಸ್ವರಗಳ ಬಳಕೆ ಇರಲಿಲ್ಲ. ಈ ಚಿಹ್ನೆಗಳು ಬಲದಿಂದ ಎಡಕ್ಕೆ ಬರೆಯಲ್ಪಡುತ್ತಿದ್ದುವು. ಹೈರೊಗ್ಲಿಫಿóಕ್ ಲಿಪಿ ಈಜಿಪ್ಟಿನಲ್ಲಿ ಪ್ರ.ಶ. 6ನೆಯ ಶತಮಾನದವರೆಗೂ ಬಳಕೆಯಲ್ಲಿತ್ತು. ಈಜಿಪ್ಟಿನ ರಾಜಪುರೋಹಿತರು ಪ್ಯಾಪೈರಸ್ ಎಂಬ ಕಾಗದದ ಮೇಲೆ ಬರೆಯುತ್ತಿದ್ದ ಲಿಪಿಗೆ ಹೈರಾಟಿಕ್ಲಿಪಿ ಎಂದು ಹೆಸರು. ಇದು ಹೈರೊಗ್ಲಿಫಿಕ್ಲಿಪಿಯ ಜೊತೆಯಲ್ಲಿಯೇ ಸುಮಾರು ಪ್ರ.ಶ. 3ನೆಯ ಶತಮಾನದವರೆಗೂ ಪವಿತ್ರ ಗ್ರಂಥಗಳನ್ನು ಬರೆಯಲು ಉಪಯೋಗಿಸಲ್ಪಡುತ್ತಿತ್ತು. ಲೆಕ್ಕಗಳನ್ನು ಬರೆಯಲು ಡೆಮೋಟಿಕ್ ಎಂಬ ಮತ್ತೊಂದು ಲಿಪಿ ಈಜಿಪ್ಟನಲ್ಲಿ ಪ್ರ.ಶ.ಪು. 7ನೆಯ ಶತಮಾನದಿಂದ ಪ್ರ.ಶ. 6ನೆಯ ಶತಮಾನದವರೆಗೆ ಬಳಕೆಯಲ್ಲಿತ್ತು.
ಕ್ರೀಟ್ ದೇಶದ ಪ್ರಾಚೀನ ಮಿನೋವನ್ ಮತ್ತು ಮಧ್ಯ - ಮಿನೋವನ್ ನಾಗರಿಕತೆಗಳಿಗೆ ಸಂಬಂಧಿಸಿದ ಚಿತ್ರಲಿಪಿ ಮತ್ತು ಭಾವಲಿಪಿಗಳನ್ನುಳ್ಳ ಮಣ್ಣಿನ ಮುದ್ರೆಗಳು ದೊರಕಿವೆ. ಮಧ್ಯ - ಮಿನೋವನ್ ನಾಗರಿಕತೆಯ ಕೊನೆಯ ಭಾಗದಲ್ಲಿ ಎರಡು ವಿಧವಾದ ರೇಖಾಲಿಪಿಗಳು ಬೆಳೆದುವು. ಅವುಗಳನ್ನು ಲೀನಿಯರ್ ಎ ಮತ್ತು ಬಿ ಎಂದು ವ್ಯವಹರಿಸುತ್ತಾರೆ. ಲೀನಿಯರ್ ಎ ಲಿಪಿಗಿಂತ ಲೀನಿಯರ್ ಬಿ ಲಿಪಿ ವಿಶೇಷ ವಿಕಾಸ ಹೊಂದಿದೆ. ಇವುಗಳಲ್ಲಿ ಸು. 70 ಚಿಹ್ನೆಗಳಿವೆ. ಈ ಎರಡು ಲಿಪಿಗಳೂ ಪ್ರ.ಶ.ಪು. 1600 ಮತ್ತು 1400 ರಿಂದ 400 ವರ್ಷಗಳ ಕಾಲ ಬಳಕೆಯಲ್ಲಿದ್ದವು. ಕ್ರೀಟನ್ಲಿಪಿ ಈಜಿಪ್ಟಿನ ಹೈರೊಗ್ಲಿಫಿಕ್ ಲಿಪಿಯಿಂದ ಪ್ರಭಾವಿತಗೊಂಡು ಉಗಮವಾಯಿತೆಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ. ಆದರೆ ಲೀನಿಯರ್ ಎ ಮತ್ತು ಬಿ ಲಿಪಿಗಳು ಕ್ರೀಟನ್ ಜನಗಳಿಂದಲೇ ಕಂಡುಹಿಡಿಯಲ್ಪಟ್ಟಿತೆಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ಭಾರತದಲ್ಲಿ ಸುಮಾರು ಪ್ರ.ಶ.ಪು. 3ನೆಯ ಸಹಸ್ರಮಾನದಲ್ಲಿ ಪ್ರಚಾರದಲ್ಲಿದ್ದ ಸಿಂಧೂಲಿಪಿ ಇನ್ನೂ ಗೋಪ್ಯಲಿಪಿಯಾಗಿಯೇ ಉಳಿದಿರುವುದರಿಂದ, ಈ ಲಿಪಿಯ ಆಂತರಿಕ ಲಕ್ಷಣಗಳನ್ನು ನಿರೂಪಿಸುವುದು ಕಷ್ಟ. ಕೇವಲ ಬಾಹ್ಯಲಕ್ಷಣಗಳನ್ನು ಮಾತ್ರ ಗಮನಿಸಬಹುದು. ಸುಮಾರು ಒಂದು ಸಾವಿರ ಕಲ್ಲಿನ ಮತ್ತು ತಾಮ್ರದ ಮುದ್ರೆಗಳು ಸಿಂಧೂನಾಗರಿಕತೆಯ ಅನೇಕ ಸ್ಥಳಗಳಲ್ಲಿ ದೊರಕಿವೆ. ಸಿಂಧೂ ಬರೆವಣಿಗೆಯಲ್ಲಿ ಕೊನೆಯ ಪಕ್ಷ ಮುನ್ನೂರು ಸಂಕೇತಗಳನ್ನು ಕಾಣುತ್ತೇವೆ. ಇಷ್ಟೊಂದು ಸಂಕೇತಗಳಿರುವುದರಿಂದ, ಈ ಲಿಪಿ ವರ್ಣಾನುಕ್ರಮದ ಅಥವಾ ಉಚ್ಚಾರಾಂಶದ ಲಿಪಿಯಲ್ಲವೆಂದು ಹೇಳಬಹುದು. ಸಿಂಧೂಲಿಪಿ ಈಜಿಪ್ಟಿನ ಹೈರೊಗ್ಲಿಫಿಕ್ಲಿಪಿಗಿಂತ ಹೆಚ್ಚು ಬೆಳವಣಿಗೆಯನ್ನು ವ್ಯಕ್ತಪಡಿಸುತ್ತದೆ. ಇಲ್ಲಿ ಪ್ರಾಣಿಗಳ ಚಿಹ್ನೆಗಳಿಗಿಂತ ಏಣಿ ಚೌಕ ವೃತ್ತ ಮುಂತಾದ ಚಿಹ್ನೆಗಳೇ ಹೆಚ್ಚು. ಆದುದರಿಂದ ಇದು ಭಾವಲಿಪಿ ಮತ್ತು ಭಾಷಾಧ್ವನಿನಿರೂಪಕ ಲಿಪಿಯ ಮಿಶ್ರಣವೆಂದು ಹೇಳಬಹುದು. ಸುಮೇರಿಯನ್ ಲಿಪಿಗಳಿಗೂ ಸಿಂಧೂಲಿಪಿಗೂ ಅನೇಕ ಹೋಲಿಕೆಗಳಿರುವುದ ರಿಂದ, ಇದು ಸುಮೇರಿಯದಿಂದ ಭಾರತಕ್ಕೆ ಬಂದಿದ್ದು ಎಂದು ವ್ಯಾಡಲ್ ಎಂಬ ವಿದ್ವಾಂಸ ವಾದಿಸಿದ್ದಾನೆ. ಹಿರಾಸ್ ಎಂಬ ವಿದ್ವಾಂಸ ಇದು ದ್ರಾವಿಡಲಿಪಿಯೆಂದು ಭಾವಿಸುತ್ತಾನೆ. ಸಿಂಧೂಲಿಪಿಗೂ ಎಲಾಮೈಟ್ಲಿಪಿಗೂ ಹೋಲಿಕೆಗಳಿವೆ. ಆದರೆ ಅಷ್ಟರಿಂದಲೇ ಈ ಲಿಪಿಯ ಉಗಮದ ವಿಚಾರವನ್ನು ನಿರ್ಧರಿಸುವುದು ಸಾಧ್ಯವಿಲ್ಲ. ಸಿಂಧೂಲಿಪಿಯೇ ಭಾರತದಲ್ಲಿ ವಿಕಾಸಹೊಂದಿ ಬ್ರಾಹ್ಮೀಲಿಪಿಯಾಯಿತೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಏಷ್ಯಮೈನರ್ ಮತ್ತು ಉತ್ತರ ಸಿರಿಯ ದೇಶದ ಹಿಟ್ಟೈಟ್ ಜನಗಳು ಪ್ರ.ಶ.ಪು. 1500ರ ಸುಮಾರಿನಲ್ಲಿ ಹೈರೊಗ್ಲಿಫಿóಕ್ ಲಿಪಿಯನ್ನೂ ಕ್ಯೂನಿಫಾರಂ ಲಿಪಿಯನ್ನೂ ಉಪಯೋಗಿಸುತ್ತಿದ್ದರು. ಹಿಟ್ಟೈಟ್ ಚಿತ್ರಲಿಪಿಯಲ್ಲಿ ಒಂದು ಸಾಲು ಎಡದಿಂದ ಬಲಕ್ಕೂ ಮುಂದಿನ ಸಾಲು ಬಲದಿಂದ ಎಡಕ್ಕೂ ಬರೆಯಲ್ಪಡುತ್ತಿತ್ತು. ಹಿಟ್ಟೈಟ್ಲಿಪಿ ಈಜಿಪ್ಟಿನ ಹೈರೊಗ್ಲಿಫಿಕ್ ಲಿಪಿಯಿಂದ ಉಗಮವಾಯಿತೆಂದು ಕೆಲವರು ವಾದಿಸುತ್ತಾರೆ. ಮತ್ತೆ ಕೆಲವರು ಅದು ಕ್ರೀಟನ್ಲಿಪಿಯಿಂದ ಹುಟ್ಟಿತೆಂದು ಅಭಿಪ್ರಾಯಪಡುತ್ತಾರೆ.
ಚೀನಿಲಿಪಿ ಪ್ರಾಚೀನಕಾಲದಿಂದ ಇಂದಿನವರೆಗೂ ಹೆಚ್ಚು ಬದಲಾವಣೆಯಿಲ್ಲದೆ ಉಪಯೋಗಿಸಲ್ಪಡುತ್ತಿದೆ. ಚೀನಿ ಚಿತ್ರಲಿಪಿಗೂ ಈಜಿಪ್ಟಿನ ಮತ್ತು ಕ್ಯೂನಿಫಾರಂ ಲಿಪಿಗಳಿಗೂ ಹೋಲಿಕೆಗಳಿರುವುದರಿಂದ, ಚೀನಿಲಿಪಿ ಅವುಗಳಿಂದ ಉತ್ಪತ್ತಿಯಾಯಿತೆಂದು ಅನೇಕರು ಭಾವಿಸುತ್ತಾರೆ.
ಮಧ್ಯ ಅಮೆರಿಕ ಮತ್ತು ಮೆಕ್ಸಿಕೊಗಳಲ್ಲಿ ಆಜ್ಟೆಕ್ ಮತ್ತು ಮಾಯ ಲಿಪಿಗಳನ್ನು ಕಾಣುತ್ತೇವೆ. ಆಜ್ಟೆಕ್ಲಿಪಿಗಿಂತ ಮಾಯಲಿಪಿ ಹೆಚ್ಚು ವಿಕಾಸಹೊಂದಿದೆ. ಏಕಶಬ್ದಾತ್ಮಕ ವರ್ಣಲಿಪಿ ಸಿರಿಯ ಮತ್ತು ಸೈಪ್ರೆಸ್ಗಳಲ್ಲಿ ಬಳಕೆಗೆ ಬಂದಿತು. ಬಿಬ್ಲೋಸ್ ಅಥವಾ ಸಿರಿಯದ ಲಿಪಿಯಲ್ಲಿ 114 ಸಂಕೇತಗಳಿವೆ. ಈ ಸಂಕೇತಗಳಲ್ಲಿ ಕೆಲವು ಈಜಿಪ್ಟಿನ ಕ್ಯೂನಿಫಾರಂ ಮತ್ತು ಸಿಂಧೂಲಿಪಿಯ ಚಿಹ್ನೆಗಳಿಗೆ ಹೋಲಿಕೆಗಳಿವೆ. ಈ ಲಿಪಿ ಪ್ರ.ಶ.ಪು. 14ನೆಯ ಶತಮಾನದಲ್ಲಿಯೇ ಬಳಕೆಯಲ್ಲಿತ್ತು; ಸಿಪ್ರಿಯೊಟ್ ಲಿಪಿಯೂ ರೇಖಾಸಂಕೇತಗಳಿಂದ ಕೂಡಿ. ಇದರಲ್ಲಿ ಸುಮಾರು ಐವತ್ತೈದು ಸಂಕೇತಗಳಿವೆ. ಸಾಮಾನ್ಯವಾಗಿ ಈ ಲಿಪಿ ಬಲದಿಂದ ಎಡಕ್ಕೆ ಬರೆಯಲ್ಪಡುತ್ತಿತ್ತು. ಸಿಪ್ರಿಯೋಟ್ ಲಿಪಿ ಕ್ರೀಟನ್ನಿನ ಲೀನಿಯರ್ ಲಿಪಿಯಿಂದ ಉತ್ಪತ್ತಿಯಾಯಿತೆಂದು ಎಲ್ಲರೂ ಒಪ್ಪುತ್ತಾರೆ. ಏಕಶಬ್ದಾತ್ಮಕ ವರ್ಣಲಿಪಿಯ ವರ್ಗಕ್ಕೆ ಜಪಾನಿನ ಕನ್ನ ಎಂಬ ಲಿಪಿ, ಉತ್ತರ ಅಮೆರಿಕದ ಚೆರೋಕೀ, ಆಫ್ರಿಕದ ವೈ ಮತ್ತು ಮೆಂಡೆ ಮುಂತಾದ ಲಿಪಿಗಳನ್ನು ಸೇರಿಸಬಹುದು.
ಮುಂದಿನ ಹಂತವೇ ಅಕ್ಷರಲಿಪಿ. ಅಕ್ಷರಲಿಪಿ ಎಲ್ಲಿ ಉಗಮವಾಯಿತು ಮತ್ತು ಅದು ಯಾವ ಜನಾಂಗದ ಕೊಡುಗೆ ಎಂಬ ಪ್ರಶ್ನೆಗಳು ಇನ್ನೂ ಚರ್ಚಾಸ್ಪದವಾಗಿಯೇ ಇದೆ. ಈಜಿಪ್ಟಿನ ಹೈರೊಗ್ಲಿಫಿóಕ್ ಲಿಪಿ, ಸುಮೇರಿಯದ ಕ್ಯೂನಿಫಾರಂಲಿಪಿ, ಹೆಟ್ಟೈಟ್ ಭಾವಲಿಪಿ, ಸೈಪ್ರೆಸ್ನ ಭಾವಲಿಪಿ ಇವುಗಳಿಂದ ಅಕ್ಷರಲಿಪಿ ಹುಟ್ಟಿತೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ ಸರ್ ಆರ್ಥರ್ ಇವಾನ್ಸ ಅಕ್ಷರಲಿಪಿ ಕ್ರೀಟಿನ ಲೀನಿಯರ್ ಲಿಪಿಗಳಿಂದ ಉಗಮವಾಯಿತೆಂದು ವಾದಿಸಿದ್ದಾನೆ. ಕ್ರೀಟ್ನಿಂದ ಅಕ್ಷರಲಿಪಿ ಪ್ಯಾಲಸ್ತೀನಿಗೆ ಫಿಲಿಸ್ಟೈನ್ ಜನಗಳಿಂದ ಒಯ್ಯಲ್ಪಟ್ಟಿತೆಂದೂ ಅದನ್ನು ಅವರಿಂದ ಫೋನೀಷಿಯನ್ನರೂ ಕಲಿತರೆಂದೂ ಇವಾನ್ಸನ ಅಭಿಪ್ರಾಯ. ಚರಿತ್ರಪುರ್ವಯುಗದ ರೇಖಾಚಿತ್ರಗಳೇ ಮುಂದೆ ವಿಕಾಸಹೊಂದಿ ಅಕ್ಷರಗಳಾದವು ಎಂದು ಫ್ಲಿಂಡರ್ಸ ಪೆಟ್ರಿಯ ವಾದ. ಬಿಬ್ಬೊಸ್ನಲ್ಲಿ ದೊರಕಿರುವ ಭಾವಲಿಪಿಯೇ ಅಕ್ಷರದ ಮೂಲವೆಂದು ಮತ್ತೆ ಕೆಲವರು ವಾದಿಸುತ್ತಾರೆ. ಡಿರಿಂಜರ್ ಅವರು ಪ್ಯಾಲಸ್ತೀನ್ (ಅಕ್ಷರನಗರ) ಬಿಬ್ಲೊಸ್ (ಪುಸ್ತಕನಗರ) ಮತ್ತು ಸಿರಿಯಗಳು ಅಕ್ಷರಲಿಪಿಯ ಉಗಮಕ್ಕೆ ಬೇಕಾದ ಎಲ್ಲ ಮಾಹಿತಿಗಳನ್ನೂ ಒದಗಿಸುತ್ತವೆಂದು ಅಭಿಪ್ರಾಯಪಡುತ್ತಾರೆ. ಅಕ್ಷರಲಿಪಿಯ ಉಗಮಕ್ಕೆ ಒಂದೇ ಜನಾಂಗ ಕಾರಣವಲ್ಲದಿರಬಹುದೆಂದೂ ಪ್ರಾಚೀನ ಪ್ರಪಂಚದ ಅನೇಕ ಸಂಸ್ಕೃತಿಗಳ ಪ್ರಭಾವ ಮತ್ತು ಕೊಡುಗೆಗಳಿಂದ ಅಕ್ಷರಲಿಪಿ ಉಗಮವಾಗಿರಬೇಕೆಂದೂ ಡಿರಿಂಜರ್ ತನ್ನ ನಿರ್ಧಾರವನ್ನು ಸೂಚಿಸಿದ್ದಾನೆ.
ಪ್ರೋಟೋ ಸೆಮಿಟಿಕ್ ಲಿಪಿ
[ಬದಲಾಯಿಸಿ]ಪ್ರೋಟೋ ಸೆಮಿಟಿಕ್ ಲಿಪಿಯನ್ನು ದಕ್ಷಿಣ ಸಿಮಿಟಿಕ್ ಮತ್ತು ಉತ್ತರ ಸಿಮಿಟಿಕ್ ಎಂದು ಎರಡು ಭಾಗಗಳನ್ನಾಗಿ ಮಾಡಬಹುದು. ದಕ್ಷಿಣ ಸಿಮಿಟಿಕ್ ಲಿಪಿಯ ಒಂದು ಪ್ರಕಾರ ಅರೇಬಿಯ ಸಿನಾಯ್ ಸಿರಿಯಗಳಿಗೂ ಮತ್ತೊಂದು ಇಥಿಯೋಪಿಯಕ್ಕೂ ಪ್ರವೇಶಿಸಿ, ಅಲ್ಲಿ ಬೇರೆ ಬೇರೆ ಲಿಪಿಗಳಾಗಿ ಪರಿಣಮಿಸಿದುವು. ದಕ್ಷಿಣ ಅರೇಬಿಯನ್ ಲಿಪಿಗಳಲ್ಲಿ ಸಬೇಯನ್ ಲಿಪಿಯೂ ಉತ್ತರ ಅರೇಬಿಯನ್ನಲ್ಲಿ ಥಾಮುಡಿಕ್, ಡೆಡನೈಟ್ ಮತ್ತು ಸಫೈಟಿಕ್ ಲಿಪಿಗಳನ್ನೂ ಕಾಣಬಹುದು. ಕ್ಯಾನನೈಟ್ ಎಂಬುದು ಉತ್ತರ ಸಿಮಿಟಿಕ್ಗೆ ಸೇರಿದ ಒಂದು ವರ್ಗ. ಈ ಲಿಪಿಯನ್ನು ಪ್ರಾಚೀನಹೀಬ್ರೂ (ಮೋಬೈಟ್, ಎಡೊಮೈಟ್ ಮತ್ತು ಅಮೊನೈಟ್) ಮತ್ತು ಫಿನೀಷಿಯನ್ ಎಂದು ವಿಭಾಗಿಸಬಹುದು. ಫಿನೀಷಿಯನ್ ಅಕ್ಷರಲಿಪಿಯಿಂದ ಲಿಬಿಯನ್ ಮತ್ತು ಐಬೀರಿಯನ್ ಲಿಪಿಗಳು ಉಗಮವಾದುವು. ಅರಾಮೇಯಿಕ್ ಲಿಪಿಗಳು ಉತ್ತರ ಸಿಮಿಟಿಕ್ ವರ್ಗಕ್ಕೆ ಸೇರಿದವು. ಈ ಲಿಪಿಯ ಅತ್ಯಂತ ಪ್ರಾಚೀನ ಶಾಸನ ಪ್ರ.ಶ.ಪೂ. 9ನೆಯ ಶತಮಾನಕ್ಕೆ ಸೇರಿದ್ದು ಟೆಲ್ ಹಲಾಫ್ನಲ್ಲಿ ದೊರಕಿದೆ. ಪ್ರ.ಶ.ಪು. 500 ವರ್ಷಗಳ ಅನಂತರ ಅರಾಮೇಯಿಕ್ ಲಿಪಿ ಪರ್ಷಿಯದಲ್ಲಿ ವಿಶೇಷವಾಗಿ ಬಳಕೆಗೆ ಬಂದಿತು. ಆಫ್ಘಾನಿಸ್ಥಾನದಲ್ಲಿ ದೊರಕಿರುವ ಒಂದು ಅಶೋಕನ ಶಾಸನ ಅರಾಮೇಯಿಕ್ ಲಿಪಿಯಲ್ಲಿರುವುದು ಗಮನಾರ್ಹ. ಹೀಬ್ರೂ, ನಬತೇನ್, ಪಲ್ಮೈರೀನ್, ಸಿರಿಯಾಕ್, ಮಂಡೇನ್ ಮತ್ತು ಮನಿಷೇನ್ ಲಿಪಿಗಳು ಅರಾಮೇಯಿಕ್ ಲಿಪಿಯಿಂದ ಉತ್ಪತ್ತಿಯಾದುವು. ಇವೆಲ್ಲವೂ ಸಿಮಿಟಿಕ್ ವರ್ಗಕ್ಕೆ ಸೇರಿದವು. ಇದಕ್ಕೆ ಸೇರದ ಪಹ್ಲವಿ, ಖರೋಷ್ಠಿ, ಅವೆಸ್ತ, ಸೊಗಡಿಯನ್, ಮಂಗೋಲಿಯನ್ ಮುಂತಾದ ಲಿಪಿಗಳೂ ಅರಾಮೇಯಿಕ್ ಲಿಪಿಯಿಂದಲೇ ಉತ್ಪತ್ತಿಯಾದುವು.
ಖರೋಷ್ಠಿ
[ಬದಲಾಯಿಸಿ]ಭಾರತದ ವಾಯವ್ಯದಿಕ್ಕಿನ ದೇಶಗಳಲ್ಲಿ ಖರೋಷ್ಠಿಯನ್ನು ಕತ್ತೆಯ ಚರ್ಮದ ಮೇಲೆ ಬರೆಯುತ್ತಿದ್ದುದರಿಂದಲೂ ಈ ಬರೆವಣಿಗೆ ಡೊಂಕಾಗಿ ಇದ್ದುದರಿಂದಲೂ ಇದನ್ನು ಭಾರತೀಯರು ಕತ್ತೆಯ ತುಟಿ (ಖರ+ಓಷ್ಠ) ಎಂದು ಕುಚೋದ್ಯದಿಂದ ಕರೆದಿರಬಹುದು. ಆದರೆ ಖರೋಷ್ಠಿ ಎಂಬ ಪದ ಇರಾನಿಯನ್ ಭಾಷೆಯ ಖರಪೊಸ್ತ ಎಂಬ ಪದದಿಂದ ಬಂದಿರಬೇಕೆಂಬ ವಾದವನ್ನು ಎಲ್ಲರೂ ಒಪ್ಪುತ್ತಾರೆ. ಅರಾಮೇಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ಬಹಳ ಹೋಲಿಕೆಗಳಿವೆ. ಖರೋಷ್ಠಿಲಿಪಿ ಸು. ಪ್ರ.ಶ..ಪು. 5ನೆಯ ಶತಮಾನದಲ್ಲಿ ಉಗಮವಾಗಿರಬೇಕು. ಭಾರತದಲ್ಲಿ ಈ ಲಿಪಿ ಇನ್ನೆಲ್ಲಿಯೂ ಬಳಕೆಗೆ ಬರದೆ, ಕೇವಲ ವಾಯುವ್ಯಗಡಿಯಲ್ಲಿ ಮಾತ್ರ ಉಪಯೋಗದಲ್ಲಿತ್ತು. ಅಶೋಕನ ಶಾಬಾಸ್ಗರಿ ಮುಂತಾದಲ್ಲಿನ ಶಾಸನಗಳು ಖರೋಷ್ಠಿ ಲಿಪಿಯಲ್ಲಿವೆ.
ಬ್ರಾಹ್ಮೀಲಿಪಿ
[ಬದಲಾಯಿಸಿ]ಬ್ರಾಹ್ಮೀಲಿಪಿ ಪ್ರಾಚೀನ ಭಾರತದಲ್ಲಿ ವಿಶೇಷವಾಗಿ ಬಳಕೆಯಲ್ಲಿತ್ತು. ಬ್ರಹ್ಮನಿಂದ ರಚಿತವಾದ ಅಥವಾ ಬ್ರಹ್ಮವಿದ್ಯೆಗೋಸ್ಕರ ರಚಿತವಾದ ಈ ಲಿಪಿಗೆ ಬ್ರಾಹ್ಮೀ ಎಂದು ಹೆಸರಾಯಿತೆಂದು ಸಾಂಪ್ರದಾಯಿಕ ಮತ. ಆದರೆ ಬ್ರಾಹ್ಮೀಲಿಪಿ ಸಿಮಿಟಿಕ್ ಜನರ ಕೊಡುಗೆ ಎಂಬುದು ಬಹುಮಂದಿ ವಿದ್ವಾಂಸರ ಮತ. ಬ್ರಾಹ್ಮೀಲಿಪಿಯ ಅಕ್ಷರಗಳಿಗೂ ಅರಾಮೇಯಿಕ್ಲಿಪಿಗೂ ಅನೇಕ ಹೋಲಿಕೆಗಳಿರುವುದರಿಂದಲೂ ಅರಾಮೇಯಿನ್ ದೇಶಕ್ಕೂ ಭಾರತಕ್ಕೂ ವ್ಯಾಪಾರ ಸಂಬಂಧಗಳಿದ್ದುದರಿಂದಲೂ ಅರಾಮೇಯಿಕ್ಲಿಪಿಯೇ ಬ್ರಾಹ್ಮೀಲಿಪಿಯ ಉತ್ಪತ್ತಿಗೆ ಕಾರಣವೆಂದು ಕೆಲವರು ವಾದಿಸುತ್ತಾರೆ. ಬ್ರಾಹ್ಮೀಲಿಪಿ ಭಾರತದಲ್ಲಿಯೇ ಉಗಮವಾಯಿತೆನ್ನುವ ವಿದ್ವಾಂಸರು ಕೆಲವರಿದ್ದಾರೆ. ಈ ಲಿಪಿ ಸಿಂಧೂಲಿಪಿಯ ವಿಕಾಸದಿಂದ ಉಂಟಾಯಿತೆನ್ನುವ ವಿದ್ವಾಂಸರಿಗೂ ಕೊರತೆ ಇಲ್ಲ. ಪ್ರ.ಶ.ಪೂ. 3ನೆಯ ಶತಮಾನದಿಂದ ಪ್ರಾರಂಭವಾಗಿ ಬ್ರಾಹ್ಮೀಲಿಪಿಯ ಶಾಸನಗಳು ದೊರಕಿವೆ. ಅಶೋಕನ ಶಾಸನಗಳು ವಿಶೇಷವಾಗಿ ಈ ಲಿಪಿಯಲ್ಲಿವೆ. ಭಾರತದೇಶದ ಮತ್ತು ಆಗ್ನೇಯ ಏಷ್ಯದ ಎಲ್ಲ ಲಿಪಿಗಳೂ ಅಶೋಕನ ಕಾಲದ ಬ್ರಾಹ್ಮೀಲಿಪಿಯಿಂದ ಉತ್ಪತ್ತಿಯಾದವು. ಸಾತವಾಹನ, ಕದಂಬ, ಗಂಗ, ಬಾದಾಮಿಚಳುಕ್ಯ, ರಾಷ್ಟ್ರಕೂಟ, ಕಲ್ಯಾಣಿಚಾಳುಕ್ಯ, ಹೊಯ್ಸಳ, ವಿಜಯನಗರ ಕಾಲಗಳಲ್ಲಿ ಕ್ರಮೇಣ ವಿಕಾಸಹೊಂದಿ, ಇದು ಇಂದಿನ ಕನ್ನಡಲಿಪಿಯಾಗಿದೆ. ಇದೇ ರೀತಿಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲ ಲಿಪಿಗಳೂ ಬ್ರಾಹ್ಮೀ ಲಿಪಿಗೆ ಋಣಿಯಾಗಿವೆ.
ಪಾಶ್ಚಾತ್ಯ ಲಿಪಿಗಳು
[ಬದಲಾಯಿಸಿ]ಪಾಶ್ಚಾತ್ಯ ಲಿಪಿಗಳಿಗೆ ಮಾತೃಪ್ರಾಯವಾಗಿರುವ ಗ್ರೀಕ್ಲಿಪಿ, ಫಿನೀಷಿಯನ್ನರ ಲಿಪಿಯಿಂದ ಉಗಮವಾಯಿತೆಂಬ ವಾದವನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಪ್ರ.ಶ.ಪು. ಸು. 11ನೆಯ ಶತಮಾನದಲ್ಲಿ ಗ್ರೀಕರು ಫಿನೀಷಿಯನ್ನರಿಂದ ಲಿಪಿಯನ್ನು ಕಲಿತರು ಎಂದು ಹೇಳಬಹುದು. ಅತ್ಯಂತ ಪ್ರಾಚೀನ ಗ್ರೀಕ್ಲಿಪಿ ಬಲದಿಂದ ಎಡಕ್ಕೆ ಬರೆಯಲ್ಪಡುತ್ತಿತ್ತು. ಆದರೆ ಪ್ರ.ಶ. ಐದನೆಯ ಶತಮಾನದ ಅನಂತರ ಎಡದಿಂದ ಬಲಕ್ಕೂ ಮತ್ತು ಮೇಲಿನಿಂದ ಕೆಳಕ್ಕೂ ಬರೆಯಲ್ಪಡುತ್ತಿತ್ತು. ಗ್ರೀಕರ ಕೈಲಿ ಸಿಮಿಟಿಕ್ ವ್ಯಂಜನಗಳು ಉತ್ತಮವಾದ ವರ್ಣಮಾಲೆಯಾದುವು. ಗ್ರೀಕ್ಲಿಪಿಯಿಂದ ಎಟ್ರೂಸ್ಕನ್, ಲಿಡಿಯನ್, ಗ್ಲಗೋಲಿಟಿಕ್, ಸೈರಿಲಿಕ್ ಮುಂತಾದ ಅನೇಕ ಲಿಪಿಗಳು ಉತ್ಪತ್ತಿಯಾದುವು. ಲ್ಯಾಟಿನ್ಲಿಪಿ ಎಟ್ರೂಸ್ಕನ್ಲಿಪಿಯ ಮೂಲಕ ಗ್ರೀಕ್ ಲಿಪಿಯಿಂದ ಉಗಮವಾಯಿತೆಂದು ಎಲ್ಲರೂ ಒಪ್ಪುತ್ತಾರೆ. ಅತ್ಯಂತ ಪ್ರಾಚೀನ ಲ್ಯಾಟಿನ್ಲಿಪಿಯ ಶಾಸನ ಪ್ರ.ಶ.ಪು. 6ನೆಯ ಶತಮಾನಕ್ಕೆ ಸೇರಿದೆ. ಎಟ್ರೂಸ್ಕನ್ ವರ್ಣಮಾಲೆಯಲ್ಲಿ ಇಪ್ಪತ್ತಾರು ಅಕ್ಷರಗಳಿದ್ದುವು. ರೋಮನ್ನರು ಗ್ರೀಕ್ಲಿಪಿಯ ತೀಟ, ಪೈ, ಖೈ ಎಂಬ ಅಕ್ಷರಗಳನ್ನು ಬಿಟ್ಟು ಉಳಿದ ಅಕ್ಷರಗಳನ್ನು ಲ್ಯಾಟಿನ್ನಿಗೆ ಅಳವಡಿಸಿಕೊಂಡರು. ಕಾಲಕ್ರಮೇಣ ಲ್ಯಾಟಿನ್ನಿನ ಅಕ್ಷರಗಳು ಈಗಿನ ಇಂಗ್ಲಿಷ್ ಲಿಪಿಗೆ ಸೇರಿದುವು. ಇಂಗ್ಲಿಷ್ ಭಾಷೆಯಲ್ಲಿ ವರ್ಣಮಾಲೆ (ಆಲ್ಫಬೆಟ್) ಎಂಬ ಪದ ಗ್ರೀಕರ ಆಲ್ಫ ಮತ್ತು ಬೀಟ ಎಂಬ ಎರಡು ಚಿಹ್ನೆಗಳಿಂದ ಬಂದಿದೆ. ಪ್ರಪಂಚದಲ್ಲಿರುವ ಇನ್ನೂ ಅನೇಕಾನೇಕ ಲಿಪಿಗಳು ಈ ಮೇಲೆ ನಿರೂಪಿತವಾಗಿರುವ ಒಂದಲ್ಲ ಒಂದು ಲಿಪಿಯಿಂದ ಉಗಮವಾದವುಗಳಾಗಿವೆ.