ಅಕ್ಯಾಲಿಫ

ವಿಕಿಪೀಡಿಯ ಇಂದ
Jump to navigation Jump to search
Acalypha wilkesiana
Acalypha Flamengueira2.JPG
Acalypha wilkesiana
Scientific classification e
Unrecognized taxon (fix): Acalypha
Species:
A. wilkesiana
Binomial name
Acalypha wilkesiana
Müll.Arg.

ಅಕ್ಯಾಲಿಫ - ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಅಲಂಕಾರ ಸಸ್ಯ. ಉದ್ಯಾನ ವ್ಯವಸಾಯದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಇವನ್ನು ಉದ್ಯಾನವನದ ಮಡಿಗಳಲ್ಲಿ, ಅಲಂಕಾರದ ಬೇಲಿಗಳಲ್ಲಿ ಬೆಳೆಸುತ್ತಾರಲ್ಲದೆ ಅಂಚುಸಸ್ಯಗಳಾಗಿಯೂ ಬೆಳೆಸುತ್ತಾರೆ. ಈ ಜಾತಿಯ ಸಸ್ಯಗಳು ಸುಲಭವಾಗಿ ರೋಗಕೀಟಗಳ ಬಾಧೆಯಿಲ್ಲದೆ ಗಟ್ಟಿಮುಟ್ಟಾಗಿ ಬೆಳೆಯುವುದರಿಂದ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿವೆ. ಇವುಗಳ ಎಲೆಗಳ ವರ್ಣವಿನ್ಯಾಸ ವೈವಿಧ್ಯಮಯವಾಗಿರುವುದರಿಂದ ವಿವಿಧ ಬಣ್ಣದ ಆಕರ್ಷಕ ಸಸ್ಯಗಳು ಕಾಣಿಸಿಕೊಳ್ಳುತ್ತವೆ. ಬಣ್ಣದ ಎಲೆಗಳ ಮಧ್ಯದಲ್ಲಿ ಬಾಲದಂತಿರುವ ಹೂಗೊಂಚಲು ಈ ಗಿಡಗಳನ್ನು ಬಹಳ ಭವ್ಯವಾಗಿ ಕಾಣುವಂತೆ ಮಾಡುತ್ತವೆ. ಈ ಜಾತಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರಭೇದಗಳಿವೆ. ಇವು ನೆಟ್ಟಗೆ ಮೇಲ್ಮುಖವಾಗಿ ಬೆಳೆಯುವ ಪೊದೆಗಳೋ ಪರ್ಣಸಸಿಗಳೋ ಆಗಿವೆ. ಎಲೆಗಳು ಸರಳ ರೀತಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುವುವು. ಆಕಾರ ಕರಣೆ ಅಥವಾ ಭರ್ಜಿಯಂತೆ ಎಲೆಯಂಚು ಹಲ್ಲುಗಳಾಗಿ ಒಡೆದಿರುತ್ತದೆ. ಅದರ ಮೇಲೆ ಗರಿಮಾದರಿಯ ನಾಳ ರಚನೆಯಿರುತ್ತದೆ. ತೊಟ್ಟು ಉದ್ದ, ಹೂಗೊಂಚಲು ಸ್ಪೈಕ್ ಮಾದರಿಯದು. ಹೂವುಗಳು ಏಕಲಿಂಗಿಗಳು ಅಥವಾ ದ್ವಿಲಿಂಗಿಗಳು. ಅಂಡಕಗಳು ಮೂರು. ಹಣ್ಣು (ಕ್ಯಾಪ್ಸೂಲ್) ಮಾದರಿಯದು.

ಅಕ್ಯಾಲಿಫ ಇಂಡಿಕ[ಬದಲಾಯಿಸಿ]

-ಪಾಂಡಿಚೆರಿ ಬೊಟಾನಿಕಲ್ ಗಾರ್ಡನ್ ನಿಂದ ಅಕಾಲಿಫಾ ಇಂಡಿಕಾ Acalypha indica(Kuppaimeni)

ಎಂಬ ಪ್ರಭೇದದ ಸಸ್ಯ 1ಮೀ ಎತ್ತರವಾಗಿ ಬೆಳೆಯುವ ಸಣ್ಣ ಪೊದೆ. ಎಲೆಗಳು ಹಸುರುಬಣ್ಣದವು. ಇವುಗಳಲ್ಲಿ ಮಿಶ್ರಬಣ್ಣವಿಲ್ಲದೆ ಇರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುವುದಿಲ್ಲ. ತೊಟ್ಟು ಎಲೆಗಿಂತ ಉದ್ದವಾಗಿರುತ್ತದೆ. ಎಲೆ ಅಗಲವಾಗಿಯೂ ಕರನೆಯಾಕಾರವಾಗಿಯೂ ಇರುತ್ತದೆ. ಹೂಗೊಂಚಲು ಸುಮಾರು 8ಸೆಂಮಿ ಉದ್ದ ಸ್ಪೈಕ್ ಮಾದರಿಯಲ್ಲಿರುತ್ತದೆ.

ಅಕ್ಯಾಲಿಫ ಬೈಕಲರ್[ಬದಲಾಯಿಸಿ]

ಅಕ್ಯಾಲಿಫ ಬೈಕಲರ್ ಎಂಬ ಇನ್ನೊಂದು ಪ್ರಭೇದದ ಎಲೆಯ ತೊಟ್ಟು ಸುಮಾರು 10 ಸೆಂ.ಮೀ. ಉದ್ದವಿರುತ್ತದೆ; ಎಲೆ 20 ಸೆಂ.ಮೀ. ಉದ್ದವೂ 15 ಸೆಂ.ಮೀ. ಅಗಲವಾಗಿರುತ್ತದೆ. ತಾಮ್ರದ ಹಸುರುಬಣ್ಣದ ಇವುಗಳ ನಡುದಿಂಡು ಮಾಸಲು ಕೆಂಪಾಗಿಯೂ ತಳಭಾಗ ಕಂಚುಬಣ್ಣವಾಗಿಯೂ ಎಳೆಯಭಾಗ ಕೇಸರಿಬಣ್ಣವಾಗಿಯೂ ಇದ್ದು ಎಲೆ ಒಟ್ಟಾರೆಯಾಗಿ ವರ್ಣರಂಜಿತವಾಗಿರುತ್ತದೆ.

ಅಕ್ಯಾಲಿಫ ಡೆನ್ಸಿಫ್ಲೋರ[ಬದಲಾಯಿಸಿ]

ಅಕ್ಯಾಲಿಫ ಡೆನ್ಸಿಫ್ಲೋರ ಎಂಬುದು ಮಧ್ಯಮ ಎತ್ತರದ ಪೊದೆಯಾಗಿ ಬೆಳೆಯುವಂಥದು. ಎಲೆಯತೊಟ್ಟು 10 ಸೆಂ.ಮಿ. ಉದ್ದವಾಗಿದ್ದು ಎಲೆ ಮಾಸಲು ಕೆಂಪುಬಣ್ಣದ್ದು; 15 ಸೆಂ.ಮಿ. ಉದ್ದ 20 ಸೆಂ.ಮಿ. ಅಗಲ ಇರುತ್ತದೆ. ಬಣ್ಣ ವಯಸ್ಸನ್ನು ಅನುಸರಿಸಿ ವ್ಯತ್ಯಾಸವಾಗುತ್ತದೆ. ಸಾಧಾರಣವಾಗಿ ಆಲಿವ್ ಹಸುರು ನಡುದಿಂಡೂ ಕಂಚುಬಣ್ಣದ ಹೂಗೊಂಚಲೂ ಇರುತ್ತವೆ. ಹೂಗೊಂಚಲು ಮಿಶ್ರ (ಕ್ಯಾಟ್ಕಿನ್) ಮಾದರಿಯದು. ಹೂಗಳು ನಿಬಿಡವಾಗಿದ್ದು ಸುಟ್ಟ ಇಟ್ಟಿಗೆ ಬಣ್ಣದವಾಗಿವೆ. ಅಕ್ಯಾಲಿಫ ಇಲಸ್ಟ್ರೇಟ ಎಂಬ ಇನ್ನೊಂದು ಪ್ರಭೇದ ಎತ್ತರವಾಗಿ ಬೆಳೆಯುತ್ತದೆ. ಎಲೆಯ ತೊಟ್ಟು 12 ಸೆಂ.ಮಿ. ಉದ್ದವಾಗಿದ್ದು ಮಾಸಲು ಹಸುರು ಬಣ್ಣವನ್ನು ತಳೆದಿರುತ್ತದೆ. ಎಲೆ 20.ಸೆಂ.ಮಿ. ಉದ್ದ 15 ಸೆಂ.ಮಿ.ಅಗಲವಾಗಿದ್ದು ಹಳದಿ ಮಿಶ್ರಿತ ಹಸುರುಬಣ್ಣವನ್ನು ತಳೆದಿರುತ್ತದೆ. ಮೇಲುಭಾಗದಲ್ಲಿ ಮಚ್ಚೆಗಳು ಇರುತ್ತವೆ. ತಿಳಿ ಮತ್ತು ಆಳವಾದ ಹಸುರು ಬಣ್ಣಗಳು ನಿರ್ದಿಷ್ಟವಾಗಿ ಬೇರೆ ಬೇರೆ ಕಾಣುತ್ತವೆ.

ಅಕ್ಯಾಲಿಫ ಗೊಡ್ಸೆಫಿಯಾನ[ಬದಲಾಯಿಸಿ]

ಅಕ್ಯಾಲಿಫ ಗೊಡ್ಸೆಫಿಯಾನ ಎಂಬುದು ಮತ್ತೊಂದು ಪ್ರಭೇದ. ಇದು ಕುಳ್ಳಾಗಿ ಬೆಳೆಯುವ ಗಿಡ. ನೆರಳಿನಲ್ಲಿ ಸಮೃದ್ಧಿಯಾಗಿ ಬೆಳೆಯುವ ಇದರ ಎಲೆ ತೊಟ್ಟು 5 ಸೆಂ.ಮೀ. ಉದ್ದವಿರುತ್ತದೆ. ಬಣ್ಣ ತಿಳಿ ಹಸುರು. ಎಲೆ 15 ಸೆಂ.ಮೀ. ಉದ್ದ 5 ಸೆಂ.ಮಿ. ಅಗಲವಾಗಿ ಭರ್ಜಿ ಅಥವಾ ಕರಣೆಯಾಕಾರವಾಗಿರುತ್ತದೆ. ಎಲೆ ಬಹುಭಾಗ ಹಸುರಾಗಿರುತ್ತದೆ. ಅಂಚು ಹಲ್ಲುಗಳಾಗಿ ಒಡೆದು ಬೆಳ್ಳಗಿರುತ್ತದೆ. ಅಲ್ಲಲ್ಲಿ ಕೆಂಪು ಪಟ್ಟೆಗಳು ಇರುತ್ತವೆ.

ಅಕ್ಯಾಲಿಫ ಹ್ಯಾಮಿಲ್ಟೋನಿಯ[ಬದಲಾಯಿಸಿ]

ಅಕ್ಯಾಲಿಫ ಹ್ಯಾಮಿಲ್ಟೋನಿಯ ಎಂಬುದು ಈ ಜಾತಿಯ ಇನ್ನೊಂದು ಪ್ರಭೇದ. ಇದರ ಎಲೆಯತೊಟ್ಟು 12 ಸೆಂ.ಮಿ. ಉದ್ದವಾಗಿರುತ್ತದೆ. ಎಲೆ 18 ಸೆಂ.ಮಿ. ಉದ್ದ 10 ಸೆಂ.ಮಿ. ಅಗಲವಾಗಿರುತ್ತದೆ. ಬಲಿತ ಎಲೆಯ ಅಂಚು ಬಿಳುಪಾಗಿದ್ದು ಹಲ್ಲುಗಳಾಗಿ ಒಡೆದಿರುತ್ತದೆ. ಎಳೆಯ ಎಲೆಯ ಅಂಚಿನ ಹೆಚ್ಚುಭಾಗ ಬಿಳುಪಾಗಿರುತ್ತದೆ. ಎಲೆಯ ಮೇಲೆ ಬಿಳಿ ಪಟ್ಟಿಗಳು ಹರಡಿಕೊಂಡಿದ್ದು ನೋಡಲು ಮನೋಹರವಾಗಿರುತ್ತದೆ.

ಅಕ್ಯಾಲಿಫ ಹಿಸ್ಟಿಡ[ಬದಲಾಯಿಸಿ]

ಅಕ್ಯಾಲಿಫ ಹಿಸ್ಟಿಡ ಎಂಬ ಪ್ರಭೇದದ ಕೆಂಪು ಬಣ್ಣದ ಉದ್ದವಾದ ಹೂಗೊಂಚಲು ಬೆಕ್ಕಿನ ಬಾಲದಂತೆ ನೇತುಬೀಳುವುದರಿಂದ ಬಹಳ ಸುಂದರವಾಗಿ ಕಾಣುತ್ತದೆ. ಇದು ಮಧ್ಯಮ ಎತ್ತರದ ಸಸ್ಯ. ಎಲೆಯತೊಟ್ಟು 10 ಸೆಂ.ಮಿ. ಉದ್ದ. ಬಣ್ಣ ಹಸುರು ಕಡುಗೆಂಪು ಮಿಶ್ರ. ನಡುದಿಂಡು ನಸುಗೆಂಪು. 35 ಸೆಂ.ಮಿ. ಉದ್ದದ ಗೊಂಚಲು ಕ್ಯಾಟ್ಕಿನ್ ಮಾದರಿಯದು.

ಅಕ್ಯಾಲಿಫ ಮ್ಯಾಕ್ರೊಫೈಲ[ಬದಲಾಯಿಸಿ]

ಅಕ್ಯಾಲಿಫ ಮ್ಯಾಕ್ರೊಫೈಲ ಎಂಬುದು ಅಗಲವಾದ ಎಲೆಗಳಿಗೆ ಹೆಸರುವಾಸಿಯಾಗಿದೆ. ಎಲೆತೊಟ್ಟು ಹಸುರು, ನಸುಗೆಂಪು ಮಿಶ್ರಿತ. ಎಲೆ 35ಸೆಂಮಿ ಉದ್ದ 2.5ಸೆಂಮಿ ಅಗಲ, ಬಣ್ಣ ಸೀಸೆ ಹಸುರು, ನಾಳ ಮತ್ತು ನಡುದಿಂಡು ನಸುಗೆಂಪು. ಎಲೆಯ ಮೇಲು ಭಾಗದಲ್ಲಿ ನಸುಗೆಂಪು ಮತ್ತು ಕೆಂಪುಬಣ್ಣದ ಮಚ್ಚೆಗಳು ಇರುತ್ತವೆ. ಎಳೆಯ ಎಲೆಗಳು ನಸುಗೆಂಪು. ಅಲ್ಲಲ್ಲಿ ಹಸುರುಬಣ್ಣದ ಮಚ್ಚೆಗಳೂ ಇರುತ್ತವೆ.

ಅಕ್ಯಾಲಿಫ ಟ್ರೈಕಲರ್[ಬದಲಾಯಿಸಿ]

ಅಕ್ಯಾಲಿಫ ಟ್ರೈಕಲರ್ ಎಂಬುದು ಮೂರು ಬಣ್ಣದ ಎಲೆಗಳುಳ್ಳ ಪ್ರಭೇದ. ಎಲೆಯ ತೊಟ್ಟು 7ಸೆಂಮಿ ಉದ್ದ. ಎಲೆ 25ಸೆಂಮಿ ಉದ್ದ 18ಸೆಂಮಿ ಅಗಲ. ಮಾಸಲು ತಾಮ್ರವರ್ಣದ ಜೊತೆಗೆ ಆಲಿವ್ ಹಸುರು, ಕಂಚಿನ ಹಸುರು ಬಣ್ಣಗಳಿದ್ದು ಮೇಲುಭಾಗದಲ್ಲಿ ಕೇಸರಿಬಣ್ಣದ ಪಟ್ಟೆಗಳು ಇರುತ್ತವೆ. ಎಳೆಯ ಎಲೆಗಳು ಪುರ್ತಿಯಾಗಿ ಕೇಸರಿಬಣ್ಣದಲ್ಲಿರುತ್ತವೆ. ಅಕ್ಯಾಲಿಫ ಸಸ್ಯಗಳನ್ನು ಎಳೆಯ ಕಾಂಡದ ತುಂಡುಗಳಿಂದ ವೃದ್ಧಿಮಾಡುವುದು ರೂಢಿಯಲ್ಲಿದೆ. ಮಳೆಗಾಲದಲ್ಲಿ ಈ ತುಂಡುಗಳು ಸುಲಭವಾಗಿ ಬೇರು ಬಿಡುವುದರಿಂದ ವೃದ್ಧಿಕಾರ್ಯಕ್ಕೆ ಇದು ಯೋಗ್ಯವಾದ ಕಾಲ. ಈ ಸಸ್ಯಗಳು ಸುಲಭವಾಗಿ ಗಟ್ಟಿಮುಟ್ಟಾಗಿ ಬೆಳೆಯುವುದರಿಂದ ಇವುಗಳ ಬೇಸಾಯಕ್ಕೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿಲ್ಲ. ಇವುಗಳ ಬೇರುಗಳು ಆಳವಾಗಿ ಇಳಿಯುವುದರಿಂದ ಸರಿಯಾದ ಸೌಲಭ್ಯ ಒದಗಿಸುವುದು ಅಗತ್ಯ. ಕುಂಡಗಳಲ್ಲಿ ಅಕ್ಯಾಲಿಫ ಸಸ್ಯಗಳನ್ನು ಬೆಳೆಯುವಾಗ ದೊಡ್ಡ ಕುಂಡಗಳನ್ನು ಆರಿಸಿಕೊಳ್ಳಬೇಕು. ಗಿಡಗಳ ಆಕಾರವನ್ನು ನಿಯಂತ್ರಿಸ ದಿದ್ದಲ್ಲಿ ವಿಕಾರವಾಗಿ ಕಾಣುತ್ತವೆ. ಅಲಂಕಾರ ಬೇಲಿಯಾಗಿ ಬೆಳೆಸುವಾಗ ಕ್ರಮವಾಗಿ ಕತ್ತರಿಸಿ ಸರಿಯಾದ ಆಕಾರದಲ್ಲಿ ಇಟ್ಟಿರಬೇಕು. ಸೂರ್ಯನ ಬೆಳಕು ಸರಿಯಾಗಿ ಬೀಳದೆ ಇದ್ದಲ್ಲಿ ಸರಿಯಾದ ಬಣ್ಣ ಬಾರದೆ ಹೋಗುತ್ತದೆ.