ಅಂಬಾಲಾ ಕಂಟೋನ್ಮೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರಿಟೀಷ್ ರಾಜ್ ಕಾಲದಲ್ಲಿ ಅಂಬಾಲಾ ಕಂಟೋನ್ಮೆಂಟ್ ಬಳಿ ಗ್ರಾಂಡ್ ಟ್ರಂಕ್ ರಸ್ತೆ.

ಅಂಬಾಲಾ ಕಂಟೋನ್ಮೆಂಟ್ ಇರುವುದು ಹರಿಯಾಣ ರಾಜ್ಯದಲ್ಲಿ. ನವದೆಹಲಿಯಿಂದ ಕುರುಕ್ಷೇತ್ರ ಮಾರ್ಗವಾಗಿ ಚಂಡೀಗಡಕ್ಕೆ ರೈಲಿನಲ್ಲಿ ಹೋಗುವಾಗ ಅಂಬಾಲಾ ಕಂಟೋನ್ಮೆಂಟ್ ಸಿಗುತ್ತದೆ. ಈ ಪುಟ್ಟ ಪಟ್ಟಣವು ೧೯೩೧ರಲ್ಲಿ ಇಂಗ್ಲಿಷರಿಂದ ಸ್ಥಾಪಿತವಾದ ಇಂಡಿಯಾದ ಮೊತ್ತಮೊದಲ ವಾಯುನೆಲೆಯಾಗಿದ್ದು ಎಲ್ಲ ಯುದ್ಧವಿಮಾನಗಳ ತರಬೇತಿ, ಸಿದ್ಧತೆ ಮತ್ತು ತ್ವರಿತ ದುರಸ್ತಿಗೆ ಹೆಸರುವಾಸಿಯಾಗಿದೆ. ಅಂತೆಯೇ ಈ ಪಟ್ಟಣದ ಎಲ್ಲ ರಸ್ತೆಗಳೂ ಯೋಜಿತ ರೀತಿಯಲ್ಲಿದ್ದು ಜನರೂ ಉತ್ತಮ ಜೀವನಶೈಲಿಯಿಂದ ಜೀವಿಸುತ್ತಿದ್ದಾರೆ. ಆ ರಸ್ತೆಗಳ ಹೆಸರಾದರೂ ಡ್ಯುರಾಂಡ್ ರಸ್ತೆ, ಮಾಲ್ ರಸ್ತೆ, ಅಲೆಕ್ಸಾಂಡ್ರ ರಸ್ತೆ, ಲಾರೆನ್ಸ್ ರಸ್ತೆ, ಸ್ಟ್ಯಾಫ್ ರಸ್ತೆ, ನಿಕೊಲ್ಸನ್ ರಸ್ತೆ ಇತ್ಯಾದಿ ಎಲ್ಲವೂ ಇಂಗ್ಲಿಷ್ ಹೆಸರುಗಳೇ. ಅಂಬಾಲಾದಿಂದ ಎಲ್ಲ ದಿಕ್ಕುಗಳಲ್ಲೂ ಪ್ರವಾಸಿ ಸ್ಥಳಗಳಿವೆ. ಚಂಡೀಗಡ, ಅಮೃತಸರ, ವಾಘಾ ಗಡಿ ಒಂದು ದಿಕ್ಕಿನಲ್ಲಿದ್ದರೆ ಶಿಮ್ಲಾ ಇನ್ನೊಂದು ದಿಕ್ಕು. ಅಂತೆಯೇ ವೈಷ್ಣೋದೇವಿ, ಹರಿದ್ವಾರ, ಹೃಷಿಕೇಶ ಒಂದು ದಿಕ್ಕಾದರೆ ಕುರುಕ್ಷೇತ್ರ ಮತ್ತೊಂದು ದಿಕ್ಕು.

ಭಗ್ನ ಚರ್ಚು[ಬದಲಾಯಿಸಿ]

ಇಂದಿರಾ ಚೌಕ್‌ನಿಂದ ಅಲೆಕ್ಸಾಂಡ್ರ ರಸ್ತೆಯಲ್ಲಿ ಏರ್‌ಫೋರ್ಸ್ ಸ್ಟೇಷನ್ ಕಡೆಗೆ ಹೋಗುತ್ತಿದ್ದಂತೆ ಬಲಬದಿಯಲ್ಲಿ ಒಂದು ಮುರುಕು ಚರ್ಚ್ ಕಾಣುತ್ತದೆ. ಆ ಚರ್ಚ್ ಬಗ್ಗೆ ಕುತೂಹಲ ತಾಳಿ ಹತ್ತಿರ ಹೋದಂತೆ ಅದರ ಕಥೆ ತೆರೆದುಕೊಳ್ಳುತ್ತದೆ. ೧೯೭೧ಇಂಡೋ ಪಾಕ್ ಸಮರದಲ್ಲಿ ಶತ್ರುವಿಮಾನಗಳು ವಾಯುದಳ ಕೇಂದ್ರದ ಮೇಲೆ ಹಾಕಿದ ಬಾಂಬ್ ಗುರಿ ತಪ್ಪಿ ಈ ಚರ್ಚಿನ ಮೇಲೆ ಬಿದ್ದು ಭಗ್ನಗೊಳಿಸಿದೆ. ಈಗಲೂ ಅದನ್ನು ಯುದ್ಧಸ್ಮಾರಕವಾಗಿ ಸಂರಕ್ಷಿಸಲಾಗಿದೆ. ಈಗ ಈ ಚರ್ಚ್‌ನಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆಯುತ್ತಿಲ್ಲ. ಆದರೆ ಇದನ್ನು ಆವರಿಸಿಕೊಂಡು ಶಾಲೆ ಕಟ್ಟಿರುವುದರಿಂದ ಶಾಲಾ ಮಕ್ಕಳಿಗೆ ಒಂದು ಅಭೂತಪೂರ್ವ ಸ್ಮರಣಿಕೆಯಾಗುವುದರಲ್ಲಿ ಸಂಶಯವಿಲ್ಲ. ಚರ್ಚಿನ ಸನಿಹದಲ್ಲೇ ಭಾರೀ ಗಾತ್ರದ ಗಂಟೆಯಿದ್ದು ಎರಡು ಅಡಿ ವ್ಯಾಸದ ರಾಟೆಯ ಸುತ್ತುವಳಿ ಹಗ್ಗವನ್ನು ಜಗ್ಗಿ ಈ ಗಂಟೆಯನ್ನು ಬಾರಿಸಬೇಕು. ಇದೇ ಆವರಣದಲ್ಲಿ ಪುರಾತನ ಸಮಾಧಿಗಳಿದ್ದು ಹಾಲುಗಲ್ಲಿನಲ್ಲಿ ಕೆತ್ತಲಾದ ಶಿಲುಬೆಗಳೂ, ಅವುಗಳ ಮೇಲಿನ ಶಿಲಾವಲ್ಲರಿಯೂ, ಶೋಕತಪ್ತ ಕೆರೂಬ್‌ಗಳ ವಿಗ್ರಹಗಳೂ ತುಂಬ ಜೀವಂತಿಕೆಯಿಂದ ಕಂಗೊಳಿಸುತ್ತಿವೆ.

ವಿದ್ಯಾಕ್ಷೇತ್ರ[ಬದಲಾಯಿಸಿ]

ಅಂಬಾಲಾ ಕಂಟೋನ್ಮೆಂಟ್ ವಿದ್ಯಾಕ್ಷೇತ್ರದಲ್ಲೂ ತುಂಬ ಮುಂದಿದೆ. ಇಲ್ಲಿನ ಸ್ಟಾಫ್ ರಸ್ತೆಯಲ್ಲಿರುವ ಕಾನ್ವೆಂಟ್ ಆಫ್ ಜೀಸಸ್ ಅಂಡ್ ಮೇರಿ ಶಾಲೆ, ಸಿಸಿಲ್ ಕಾನ್ವೆಂಟ್ ಶಾಲೆಗಳು, ಬ್ಯಾಂಕ್ ರಸ್ತೆಯಲ್ಲಿರುವ ಸಿಖ್ ಗರ್ಲ್ಸ್ ಶಾಲೆ, ಸದರ್ ಬಜಾರ್ ರಸ್ತೆಯಲ್ಲಿರುವ ಜೈನ್ ಗರ್ಲ್ಸ್ ಶಾಲೆ ಅಂತೆಯೇ ಆರ್ಮಿ ಶಾಲೆ, ಏರ್ಫೋರ್ಸ್ ಶಾಲೆಗಳು ಪ್ರಮುಖವಾದ ವಿದ್ಯಾಸಂಸ್ಥೆಗಳಾಗಿವೆ. ಸದರ್ ಬಜಾರ್ ರಸ್ತೆಯಲ್ಲಿರುವ ವಿಜಯ್ ಬುಕ್‌ ಹೌಸ್‌ ನಲ್ಲಿ ಕನ್ನಡ ನಿಯತಕಾಲಿಕೆಗಳು ಸಿಗುತ್ತವೆ.

ತಿನಿಸುಗಳು[ಬದಲಾಯಿಸಿ]

ಅಂಬಾಲಾ ಕ್ಯಾಂಟ್‌ ದಲ್ಲಿ ಬೇಸಿಗೆಯ ಹಗಲಿನ ಬೆಂಕಿಯಂಥ ಬಿರುಬಿಸಿಲಿಗೆ ಬೆಂದ ನಂತರ ಸಂಜೆ ತಂಪುಗಾಳಿ ಬೀಸುವಾಗ ವಾಕಿಂಗ್ ಹೊರಟು ತಳ್ಳುಗಾಡಿಗಳಲ್ಲಿ ಮಾರುವ ಗೋಲ್‌ಗಪ್ಪೆ ಚಪ್ಪರಿಸುವುದು ತುಂಬಾ ಮಜವಾಗಿರುತ್ತೆ. ಗೋಲ್‌ಗಪ್ಪೆ ಎಂದರೆ ಸಣ್ಣ ಗರಿಗರಿ ಪೂರಿಗಳೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿ ಎರಡು ರೀತಿಯ ಮಸಾಲೆ ನೀರಿನ ಮಡಕೆಯಲ್ಲಿ ಅದ್ದಿ ತೆಗೆದು ತಿನ್ನುವುದು. ಸಂಜೆ ವಾಯುವಿಹಾರಕ್ಕೆ ಬಂದವರು ಮುದದಿಂದ ಸವಿಯುವ ಇನ್ನೊಂದು ತಿನಿಸು ಟಿಕ್ಕಿ. ಸಾಮಾನ್ಯವಾಗಿ ಟಿಕ್ಕಿ ಮಾರುವ ಅಂಗಡಿಗಳ ಮುಂದೆ ಹೆಣ್ಣು ಗಂಡೆಂಬ ಭೇದವಿಲ್ಲದೆ ದೊಡ್ಡ ಗುಂಪು ನೆರೆದಿರುತ್ತದೆ. ಅಂಬಾಲಾದಲ್ಲಿ ಬಿಸಿಲುಗಾಲದ ರಾತ್ರಿ ಹನ್ನೊಂದಾದರೂ ಭರದಿಂದ ಬಿಕರಿಯಾಗುವ ಇನ್ನೊಂದು ತಿನಿಸು ಎಂದರೆ ತಳ್ಳುಗಾಡಿಗಳಲ್ಲಿ ಮಾರಲಾಗುವ ರಬ್ಡಿ ಫಲೂದಾ ಹಾಗೂ ಮಟ್ಕಾಕುಲ್ಫಿ.. ಅಂಬಾಲಾ ಕಂಟೋನ್ಮೆಂಟಿನ ರೈಲುನಿಲ್ದಾಣದ ಎದುರು ಬಸ್‌ನಿಲ್ದಾಣದ ಪಕ್ಕ ಇರುವ ಪೂರನ್‌ಸಿಂಗ್ ದಾಬಾ ಎಂಬ ಹೋಟೆಲಿನಲ್ಲಿ ಗೋಧಿಯ ರೊಟ್ಟಿ ಮತ್ತು ಮಾಂಸದ ಗೊಜ್ಜು ಬಲು ರುಚಿಯಾಗಿರುತ್ತೆ.

ತರಕಾರಿ[ಬದಲಾಯಿಸಿ]

ಅಂಬಾಲಾದಲ್ಲಿ ದೊರೆಯುವ ತರಕಾರಿಗಳಲ್ಲಿ ಆಕಾರದಲ್ಲಿ ಈರುಳ್ಳಿಯಂತಿರುವ ಆದರೆ ಬೆಳ್ಳಗಿರುವ, ಕತ್ತರಿಸಿದರೆ ನೂಲ್‌ಕೋಲ್‌ನಂತಿರುವ ಒಂದು ತರಕಾರಿ ಇದೆ, ಹೆಸರು ಟಿಂಡಾ. ಗಾಜರ್ ಎನ್ನಲಾಗುವ ಇಲ್ಲಿನ ಕ್ಯಾರೆಟ್ ನಮ್ಮಲ್ಲಿಯಂತೆ ಕನಕಾಂಬರ ಹೂವಿನ ಬಣ್ಣ ಹೊತ್ತಿಲ್ಲ, ಆದರೆ ರಕ್ತದ ಬಣ್ಣವಿರುತ್ತದೆ, ಸಿಹಿಯೂ ಕಡಮೆ. ತೋರಿ ಎನ್ನಲಾಗುವ ತುಪ್ಪದಹೀರೇಕಾಯಿಯು ಗಾತ್ರದಲ್ಲಿ ನಮ್ಮದಕ್ಕಿಂತ ಚಿಕ್ಕದು ಅಷ್ಟೆ. ಪಯ್ಯಾ ಎಂದರೆ ಕಾಲು ಕಿಲೋ. ದರ್ಜನ್ ಎಂದರೆ ಡಜನು ಲೆಕ್ಕ.

ವಾತಾವರಣ[ಬದಲಾಯಿಸಿ]

ಬೆಳಗ್ಗೆ ಐದು ಗಂಟೆಗೆ ಸಾಮೂಹಿಕ ಜಾಗಿಂಗ್‌ನಿಂದ ಎಚ್ಚರಗೊಳ್ಳುವ ಈ ಅಂಬಾಲಾ ಕಂಟೋನ್ಮೆಂಟ್ ಸಂಜೆ ಏಳರ ಅನಂತರ ವಾಯುಸಂಚಾರ ಶಾಪಿಂಗ್ ಶುರುಹಚ್ಚಿ ರಾತ್ರಿ ಹನ್ನೊಂದು ಗಂಟೆಗೆ ಐಸ್‌ಕ್ರೀಮ್ ಸೇವನೆಯೊಂದಿಗೆ ನಿಶಬ್ದವಾಗುತ್ತದೆ. ವಾತಾವರಣದ ಉಷ್ಣತೆ ನಾಲ್ಕು ಡಿಗ್ರಿಯಿಂದ ನಲವತ್ತೈದು ಡಿಗ್ರಿವರೆಗೆ ವಿಸ್ತರಿಸುವ ಅಂಬಾಲಾದಲ್ಲಿ ನವಿಲುಗಳು ನಿರ್ಭಿಡೆಯಿಂದ ಲಾಸ್ಯವಾಡುತ್ತವೆ. ಇಲ್ಲಿನ ಎಮ್ಮೆಗಳು ಗಾತ್ರದಲ್ಲೂ ಹಾಲುಸಂಗ್ರಹದಲ್ಲೂ ನಮ್ಮ ಧಾರವಾಡದ ಎಮ್ಮೆಗಳನ್ನು ಮೀರಿಸುತ್ತವೆ. ಕ್ರೀಡೆಗಳನ್ನು ಹೆಚ್ಚು ಪ್ರೀತಿಸುವ ಇಲ್ಲಿನ ಜನ ಸಹಜವಾಗಿ ಕ್ರೀಡಾ ಮನೋಭಾವದವರಾಗಿದ್ದಾರೆ. ಆದ್ದರಿಂದ ಇಲ್ಲಿ ಜಗಳ ಗಲಭೆಗಳು ಇಲ್ಲವೇ ಇಲ್ಲ. ಸರ್ವಧರ್ಮ ಸಮನ್ವಯತೆಗೆ ಅಂಬಾಲಾ ಕಂಟೋನ್ಮೆಂಟ್ ಹೆಸರುವಾಸಿ. ಇಲ್ಲಿ ರಾಮಲೀಲಾನೂ ಜೋರು, ಕ್ರಿಸ್ಮಸ್ ಸಹ ಜೋರೇ.