ವಿಷಯಕ್ಕೆ ಹೋಗು

ಅಂಬರೀಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಬರೀಷ: ಹಿಂದೂ ಪುರಾಣಗಳಲ್ಲಿ ಅವತರಿಸುವ ರಾಜರುಗಳಲ್ಲಿ ಮುಖ್ಯನಾದವ. ತನ್ನ ಸತ್ಯ, ದಾನಗುಣದಿಂದ ಕೀರ್ತಿ ಪಡೆದ ರಾಜ.

Another king Ambarisa (king Rama ancestor) offers the youth Sunahshepa in sacrifice.

ಹುಟ್ಟುವಳಿ

[ಬದಲಾಯಿಸಿ]

ಇಕ್ಷ್ವಾಕು ವಂಶದ ನಭಗ ರಾಜನ ಮಗನಾಗಿ ಜನಿಸಿದ ಅಂಬರೀಷ, ಬಾಲ್ಯದಿಂದಲೇ ಸತ್ಯ ನಿಷ್ಠೆಯನ್ನು ಅಳವಡಿಸಿಕೊಂಡಿರುತ್ತಾನೆ. ಅಂಬರೀಷನಿಗೆ ರಮಾಕಾಂತ, ಮುಚುಕುಂದರೆಂಬ ತಮ್ಮಂದಿರೂ, ಶುನಃಶೇಪನೆಂಬ ಮಗನೂ ಇರುತ್ತಾನೆ. .[] ಅಂಬರೀಷನು ಏಳು ದಿನಗಳಲ್ಲಿ ಭೂಮಿಯನ್ನು ಗೆಲ್ಲುತ್ತಾನೆ ಎಂಬುದು ಐತಿಹ್ಯ.[]

ಆಳ್ವಿಕೆ

[ಬದಲಾಯಿಸಿ]

ಮಹಾವಿಷ್ಣುವಿನ ಭಕ್ತನಾಗಿ ವೃತ-ವಿಧಿಗಳನ್ನೂ, ತನ್ನ ರಾಜಧಾನಿ ಅಯೋಧ್ಯೆಯನ್ನೂ ಅಂಬರೀಷನು ಯುಕ್ತ ರೀತಿಯಿಂದ ಪಾಲಿಸುತ್ತಾ ಇರುತ್ತಾನೆ.

ಭಗವತ ಪುರಾಣದಲ್ಲಿ ಅಂಬರೀಷ

[ಬದಲಾಯಿಸಿ]

ಭಗವತ ಪುರಾಣದ 9ನೇ ಸ್ಕಂದದ ಉಲ್ಲೇಖದಂತೆ, ವಿಷ್ಣು ಭಕ್ತನಾದ ಅಂಬರೀಷ, ಸದಾ ಸತ್ಯವನ್ನು ನುಡಿಯುವ ಗುಣ ಹೊಂದಿರುತ್ತಾನೆ. ಪರಮಭಾಗವತನಾದ ಅಂಬರೀಷನು ಏಳು ದ್ವೀಪಗಳಿಂದ ಕೂಡಿದ ಅಖಂಡಭೂಮಂಡಲಕ್ಕೂ ಅವನು ಒಡೆಯನಾಗಿದ್ದನು. ಎಷ್ಟು ವೆಚ್ಚ ಮಾಡಿದರೂ ಮುಗಿಯದಿದ್ದ ಅಪಾರವಾದ ಐಶ್ವರ್ಯವನ್ನೂ ಎಣೆಯಿಲ್ಲದ ವೈಭವವನ್ನೂ ಅಂಬರೀಷನು ಹೊಂದಿದ್ದನು. ಸಾಮಾನ್ಯ ಮನುಷ್ಯರಿಗೆ ಅತಿದುರ್ಲಭವೆನಿಸಿದ್ದ ಅತುಲೈಶ್ವರ್ಯವನ್ನೂ ಅಪಾರವಾದ ಭೋಗಸಾಮಗ್ರಿಗಳನ್ನೂ ಹೊಂದಿದ್ದರೂ ಕೂಡ ರಾಜನು ಅವೆಲ್ಲವನ್ನೂ ಕನಸಿನಂತೆ ಭಾವಿಸಿದ್ದನು. ಯಾವ ವೈಭವದಿಂದ ಮತ್ತು ಸಂಪತ್ತಿನಿಂದ ಮನುಷ್ಯನು ತಮೋಗುಣದಲ್ಲಿ ಮುಳುಗಿ ಅಹಂಕಾರ-ಮಮಕಾರಗಳನ್ನು ಹೊಂದುವನೋ ಅಂತಹ ವೈಭವವೂ ಒಂದು ದಿನ ನಾಶವಾಗುವುದೆಂಬುದನ್ನು ಅಂಬರೀಷನು ತಿಳಿದಿದ್ದನು. ಭಗವಂತನಾದ ವಾಸುದೇವನಲ್ಲಿಯೂ ಮತ್ತು ಅವನ ಭಕ್ತರಲ್ಲಿಯೂ ಅಂಬರೀಷನಿಗೆ ಅತ್ಯಾದರವಿದ್ದಿತು. ಭಗವಂತನಲ್ಲಿ ಅನನ್ಯ ಭಕ್ತಿಯನ್ನೂ ಅವನ ಭಕ್ತರಲ್ಲಿ ಅತ್ಯಾದರವನ್ನೂ ಅಂಬರೀಷನು ಹೊಂದಿದ ನಂತರ ಅತುಲೈಶ್ವರ್ಯಗಳಿಂದಲೂ ಭೋಗವೈಭವಗಳಿಂದಲೂ ಕೂಡಿರುವ ಈ ವಿಶ್ವವನ್ನು ಒಂದು ಮಣ್ಣು ಹೆಂಟೆಗೆ ಸಮಾನವಾಗಿ ಕಂಡನು.

ಅಂಬರೀಷನು ತನ್ನ ಮನಸ್ಸನ್ನು ಭಗವಂತನಾದ ಶ್ರೀಕೃಷ್ಣನ ಪಾದಾರವಿಂದಗಳಲ್ಲಿ ಲೀನಗೊಳಿಸಿದ್ದನು. ಅವನ ಮಾತುಗಳೆಲ್ಲವೂ ವೈಕುಂಠನ ಅನಂತಗುಣಗಳ ವರ್ಣನೆಯೇ ಆಗಿದ್ದುವು. ಶ್ರೀಕೃಷ್ಣನ ದಿವ್ಯಚರಿತ್ರೆಯ ಕೀರ್ತನೆಯನ್ನು ಬಿಟ್ಟು ಅವನು ಬೇರೆ ಮಾತುಗಳನ್ನೇ ಆಡುತ್ತಿರಲಿಲ್ಲ. ಕೈಗಳನ್ನು ಶ್ರೀಹರಿಯ ಮಂದಿರಗಳನ್ನು ಗುಡಿಸಲು ಮತ್ತು ತೊಳೆಯಲು ಮೀಸಲಾಗಿಟ್ಟಿದ್ದನು. ಅಚ್ಯುತನ ಮಂಗಳಮಯವಾದ ಕಥೆಗಳನ್ನೂ ಕೀರ್ತನಗಳನ್ನೂ ಕೇಳಲು ಕಿವಿಗಳನ್ನು ಮೀಸಲಾಗಿಟ್ಟಿದ್ದನು.

ಮುಕುಂದನ ವಿಗ್ರಹಗಳನ್ನೂ ದೇವಸ್ಥಾನಗಳನ್ನೂ ನೋಡುವ ಸಲುವಾಗಿ ಕಣ್ಣುಗಳನ್ನು ಮೀಸಲಾಗಿಟ್ಟಿದ್ದನು. ಭಗವದ್ಭಕ್ತರಾದ ಸಾಧುಗಳ ಅಂಗಸ್ಪರ್ಶಕ್ಕಾಗಿ ಸ್ಪರ್ಶಸುಖವನ್ನು ಕೊಡುವ ಚರ್ಮವನ್ನು ಮೀಸಲಾಗಿಟ್ಟಿದ್ದನು. ದಯಾಮಯನಾದ ಭಗವಂತನ ಚರಣಕಮಲಗಳಲ್ಲಿ ಬಿದ್ದಿರುವ ತುಳಸಿಯನ್ನು ಆಘ್ರಾಣಿಸಲು ಮೂಗನ್ನು ಮೀಸಲಾಗಿಟ್ಟಿದ್ದನು. ಭಗವಂತನಿಗೆ ಅರ್ಪಿಸಿದ ಪ್ರಸಾದ ಸೇವನೆಗಾಗಿ ನಾಲಿಗೆಯನ್ನು ಮೀಸಲಾಗಿಟ್ಟಿದ್ದನು.

ಭಗವಂತನ ದಿವ್ಯಕ್ಷೇತ್ರಗಳ ಯಾತ್ರೆಯನ್ನು ಮಾಡುವ ಸಲುವಾಗಿ ಅಂಬರೀಷನ ಪಾದಗಳು ಮೀಸಲಾಗಿದ್ದುವು. ಹೃಷಿಕೇಶನ ದಿವ್ಯಪಾದಗಳನ್ನು ವಂದಿಸುವುದಕ್ಕಾಗಿ ಶಿರಸ್ಸು ಮೀಸಲಾಗಿ ಇಡಲ್ಪಟ್ಟಿದ್ದಿತು. ಭಗವಂತನ ದಾಸ್ಯಮಾಡಬೇಕೆಂಬುದೇ ಅವನ ಮುಖ್ಯಕಾಮನೆಯಾಗಿದ್ದಿತು. ಆ ದಾಸ್ಯವೂ ಯಾವುದಾದರೂ ಕಾಮ್ಯವಸ್ತುಗಳನ್ನು ಪಡೆದು ಕೊಳ್ಳುವುದಕ್ಕಾಗಿ ಅಲ್ಲ. ಅದು ನಿಷ್ಕಾಮದಾಸ್ಯ. ಭಗವಂತನ ಪ್ರೀತ್ಯರ್ಥವಾಗಿ ದಾಸ್ಯಕಾಮನೆ. ಉತ್ತಮಕೀರ್ತಿಯುಳ್ಳ ಭಗವದ್ಭಕ್ತರನ್ನು ಅವನ ಪ್ರೀತಿಯು ಆಶ್ರಯಿಸಿದ್ದಿತು. ಶ್ರೀಕೃಷ್ಣನ ಭಕ್ತರಲ್ಲಿ ಅಂಬರೀಷನಿಗೆ ಅಪಾರವಾದ ಪ್ರೀತಿಯಿದ್ದಿತು.

ಹೀಗೆ ಅಂಬರೀಷನು ತನ್ನ ಸಕಲಕರ್ಮಕಲಾಪಗಳನ್ನೂ ಯಜ್ಞ ಪುರುಷನಾದ, ಇಂದ್ರಿಯಾತೀತನಾದ ಭಗವಂತನ ಸೇವೆಯಲ್ಲಿ ತೊಡಗಿಸಿ ಭಗವಂತನನ್ನೇ ಸರ್ವಸ್ವರೂಪನೆಂದೂ ಸರ್ವಾತ್ಮನೆಂದೂ ಭಾವಿಸಿ, ಬ್ರಾಹ್ಮಣರ ಆಜ್ಞೆಗೆ ಅನುಸಾರವಾಗಿ ಈ ಭೂಮಂಡಲವನ್ನು ಶಾಸನ ಮಾಡುತ್ತಿದ್ದನು.

ಅಂಬರೀಷನು ಸರಸ್ವತೀನದಿಯ ಪ್ರವಾಹಕ್ಕೆ ಎದುರಾಗಿದ್ದ ಮರುಭೂಮಿಯಲ್ಲಿ ವಸಿಷ್ಠ, ಅಸಿತ, ಗೌತಮ-ಇವರೇ ಮೊದಲಾದ ಋತ್ವಿಜರ ಸಮ್ಮುಖದಲ್ಲಿ ಬಹುದಕ್ಷಿಣೆಗಳುಳ್ಳ, ಸರ್ವಾಂಗಪರಿಪೂರ್ಣವಾದ ಹಲವಾರು ಅಶ್ವಮೇಧಯಾಗಗಳನ್ನು ಮಾಡಿ ಯಜ್ಞಪುರುಷನಾದ ಶ್ರೀಕೃಷ್ಣನನ್ನು ಆರಾಧಿಸಿದನು. ಅಂಬರೀಷನು ಮಾಡಿದ ಯಜ್ಞದಲ್ಲಿ ದೇವತೆಗಳೊಡನೆ ಸದಸ್ಯರೂ ಋತ್ವಿಜರೂ ಮತ್ತು ಜನಗಳೂ ಕುಳಿತಿದ್ದರು. ಎಲ್ಲರೂ ಸುಂದರವಾದ ವಸ್ತ್ರಗಳನ್ನು ಧರಿಸಿದ್ದರಿಂದಲೂ, ಸುಂದರವಾದ ರೂಪವುಳ್ಳವ ರಾಗಿದ್ದುದರಿಂದಲೂ, ರೆಪ್ಪೆಯಾಡದಿದ್ದ ಸಮಯದಲ್ಲಿ ದೇವತೆಗಳಂತೆಯೇ ಸಮಾನರೂಪರಾಗಿ ಪ್ರಕಾಶಿಸುತ್ತಿದ್ದರು. ಅಂಬರೀಷನ ಪ್ರಜೆಗಳು, ಮಹಾತ್ಮರು ಹಾಡುತ್ತಿದ್ದ ಭಗವಂತನ ಉತ್ತಮಚರಿತ್ರೆಗಳನ್ನು ಭಕ್ತಿ ಭಾವದಿಂದ ಕೇಳುತ್ತಿದ್ದರು ಮತ್ತು ಶ್ರೀಹರಿಯ ಅನಂತಾನಂತಗುಣಗಳನ್ನು ಗಾನಮಾಡುತ್ತಿದ್ದರು. ಹೀಗೆ ಭಗವದ್ಭಕ್ತಿಯಲ್ಲಿ ಮುಳುಗಿಹೋಗಿದ್ದ ಅವರಿಗೆ ದೇವತೆಗಳಿಗೆ ಅತ್ಯಂತಪ್ರಿಯವಾದ ಸ್ವರ್ಗಸುಖವೂ ಬೇಕಾಗಲಿಲ್ಲ. ಅಂಬರೀಷನ ಪ್ರಜೆಗಳು ನಿತ್ಯ-ನಿರಂತರವಾಗಿ ತಮ್ಮ ಹೃದಯಗುಹೆಯಲ್ಲಿ ಶ್ರೀಕೃಷ್ಣನನ್ನು ಕಾಣುತ್ತಿದ್ದರು. ಆದುದರಿಂದಲೇ ಅವರಿಗೆ ಸಿದ್ಧರಿಗೂ ದುರ್ಲಭವಾದ ಅಣಿಮಾದಿ ಅಷ್ಟೆಶ್ವರ್ಯಗಳೂ ಹರ್ಷವನ್ನುಂಟುಮಾಡು ತ್ತಿರಲಿಲ್ಲ. ಆತ್ಮಾನಂದದ ಮುಂದೆ ಎಲ್ಲ ವಸ್ತುಗಳೂ ಅವರಿಗೆ ತುಚ್ಛವಾಗಿ ಕಾಣುತ್ತಿದ್ದುವು.

ಹೀಗೆ ಅಂಬರೀಷ ಮಹಾರಾಜನು ಭಕ್ತಿಯೋಗದಿಂದ ಕೂಡಿದ ತಪಸ್ಸಿನಿಂದಲೂ, ಸ್ವಧರ್ಮವಾದ ಪ್ರಜಾಪಾಲನೆಯಿಂದಲೂ, ಶ್ರೀಹರಿಯನ್ನು ಆರಾಧಿಸುತ್ತಿದ್ದನು. ಹರಿಯಲ್ಲಿಯೇ ಮನಸ್ಸನ್ನು ಸಂಪೂರ್ಣವಾಗಿ ನೆಲೆ ಗೊಳಿಸಿದ್ದ ಅಂಬರೀಷನು ಮೆಲ್ಲ-ಮೆಲ್ಲಗೆ ಸಮಸ್ತವಾದ ಸಂಗಗಳನ್ನೂ ದೂರೀಕರಿಸಿದನು. ಅರಮನೆಗಳು, ಪತ್ನಿ-ಪುತ್ರ-ಬಂಧುಗಳು, ಶ್ರೇಷ್ಠವಾದ ಆನೆಗಳು, ರಥ-ಕುದುರೆ-ಕಾಲಾಳುಗಳು, ಅಕ್ಷಯವಾದ ರತ್ನಾಭರಣಗಳು, ಆಯುಧಗಳು, ಅನಂತವಾದ ಭಂಡಾರಗಳು-ಇವುಗಳೆಲ್ಲವೂ ಅನಿತ್ಯವಾದು ವುಗಳೆಂದು ಭಾವಿಸಿ ಇವುಗಳೆಲ್ಲದರಿಂದಲೂ ವಿರಕ್ತನಾದನು.

ಅಂಬರೀಷನ ಅನನ್ಯವಾದ ಮತ್ತು ಪ್ರೇಮಮಯವಾದ ಭಕ್ತಿಯಿಂದ ಸುಪ್ರೀತನಾದ ಶ್ರೀಹರಿಯು, ರಾಜನ ರಕ್ಷಣೆಗಾಗಿ-ವಿರೋಧಿಗಳಿಗೆ ಭಯಂಕರವಾದ, ನೃತ್ಯರಿಗೆ ರಕ್ಷಕವಾಗಿದ್ದ ಸುದರ್ಶನಚಕ್ರವನ್ನು ದಯಪಾಲಿಸಿದನು. ಅಂಬರೀಷ ಮಹಾರಾಜನ ಪತ್ನಿಯು ಕೂಡ ರಾಜನಂತೆಯೇ ಧರ್ಮಶೀಲಳಾಗಿಯೂ, ಸಂಸಾರದಿಂದ ವಿರಕ್ತಳಾಗಿಯೂ, ಭಕ್ತಿಪರಾಯಣೆಯಾಗಿಯೂ ಇದ್ದಳು.

ಒಮ್ಮೆ ಮಹಾರಾಜನು ತನ್ನ ಪತ್ನಿಯೊಡನೆ ಶ್ರೀಕೃಷ್ಣನನ್ನು ಆರಾಧಿಸುವ ಸಲುವಾಗಿ ದ್ವಾದಶೀ ಪ್ರಧಾನವಾದ ಏಕಾದಶೀ ವ್ರತವನ್ನು ವರ್ಷ ಪರ್ಯಂತವಾಗಿ ಕೈಗೊಂಡನು. ವ್ರತವು ಪೂರ್ಣವಾದ ನಂತರ ಕಾರ್ತಿಕ ಮಾಸದಲ್ಲಿ ರಾಜನು ಮೂರು ರಾತ್ರಿಗಳು ಉಪವಾಸವಿದ್ದು, ಯಮುನಾ ನದಿಯಲ್ಲಿ ಸ್ನಾನಮಾಡಿ, ಮಧುವನದಲ್ಲಿ ಭಗವಂತನಾದ ಶ್ರೀಹರಿಯನ್ನು ಪೂಜಿಸಿದನು. ರಾಜನು ಮಹಾಭಿಷೇಕ ವಿಧಿಯಿಂದ ಸಮಸ್ತವಾದ ಪರಿಕರಗಳಿಂದಲೂ (ಪಂಚಾಮೃತವೇ ಮೊದಲಾದುವುಗಳಿಂದ) ಶ್ರೀಕೇಶವನನ್ನು ಅಭಿಷೇಚಿಸಿ ಕೇಶವನಲ್ಲಿಯೇ ಮನಸ್ಸನ್ನು ಲೀನಗೊಳಿಸಿ, ವಸ್ತ್ರಾಭರಣ-ಚಂದನಮಾಲೆಗಳಿಂದಲೂ, ಅರ್ಘ-ಪಾದ್ಯಾದಿಗಳಿಂದಲೂ ಶ್ರೀಭಗವಂತನನ್ನು ಪೂಜಿಸಿದನು. ಅಂತೆಯೇ ಮಹಾಭಾಗ್ಯಶಾಲಿಗಳಾದ ಸಿದ್ದಾರ್ಥರಾದ ಬ್ರಾಹ್ಮಣಶ್ರೇಷ್ಠರನ್ನೂ ಭಕ್ತಿಪೂರ್ವಕವಾಗಿ ಅರ್ಘ-ಪಾದ್ಯಾದಿಗಳಿಂದ ಸತ್ಕರಿಸಿದನು. ಬಳಿಕ ರಾಜನು ಬ್ರಾಹ್ಮಣರಿಗೆ ರುಚಿಕರವಾದ ಮತ್ತು ಗುಣವತ್ತರವಾದ ಭೋಜನವನ್ನು ಮಾಡಿಸಿ, ಸಮಲಂಕೃತವಾದ ಆರು ಕೋಟಿ ಗೋವುಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಆ ಗೋವುಗಳ ಕೊಂಬುಗಳು ಸುವರ್ಣದಿಂದಲೂ ಕಾಲುಗಳು ಬೆಳ್ಳಿಯಿಂದಲೂ ಸಮಲಂಕೃತವಾಗಿದ್ದುವು. ಅವುಗಳಿಗೆ ಸುಂದರವಾದ ವಸ್ತ್ರಗಳನ್ನು ಹೊದ್ದಿಸಿದ್ದರು. ಅವೆಲ್ಲವೂ ಹೇರಳವಾಗಿ ಹಾಲು ಕೊಡುತ್ತಿದ್ದುವು. ಒಳ್ಳೆಯ ಸ್ವಭಾವದುವುಗಳಾಗಿದ್ದುವು. ಪಡ್ಡೆ ಹಸುಗಳಾಗಿದ್ದುವು. ಸುಂದರವಾಗಿದ್ದುವು. ಕರುಗಳ ಸಮೇತವಾಗಿದ್ದುವು. ಹಸುಗಳೊಡನೆ ಹಾಲು ಕರೆಯುವ ಪಾತ್ರೆಗಳನ್ನೂ ರಾಜನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಇಂತಹ ಸುಂದರವಾದ ಅಸಂಖ್ಯಾತವಾದ ಗೋವುಗಳನ್ನು ಪಡೆದು ತಮ್ಮ ಕಾಮನೆಗಳನ್ನು ಪೂರೈಸಿಕೊಂಡ ಬ್ರಾಹ್ಮಣರಿಂದ ಅನುಜ್ಞೆಯನ್ನು ಪಡೆದು ಅಂಬರೀಷ ಮಹಾರಾಜನು ವ್ರತದ ಪಾರಣೆಗೆ ಸಿದ್ದನಾಗುತ್ತಿದ್ದನು.

ಇದೇ ಸಮಯಕ್ಕೆ ಸರಿಯಾಗಿ ಶಾಪಕೊಡುವುದರಲ್ಲಿಯೂ ಮತ್ತು ವರಕೊಡುವುದರಲ್ಲಿಯೂ ಸಮರ್ಥರಾದ ದುರ್ವಾಸರು ಅತಿಥಿಯ ರೂಪದಲ್ಲಿ ರಾಜನ ಅರಮನೆಗೆ ಬಂದರು. ಅಂಬರೀಷ ಮಹಾರಾಜನು ಮಹರ್ಷಿಗಳು ಬಂದೊಡನೆಯೇ ಮೇಲೆದ್ದು ನಿಂತು ಅವರಿಗೆ ಆಸನವನ್ನಿತ್ತು ಕುಳ್ಳಿರಿಸಿ ವಿಧ-ವಿಧವಾದ ಸಾಮಗ್ರಿಗಳಿಂದ ಅತಿಥಿಯ ರೂಪದಲ್ಲಿ ಆಗಮಿಸಿದ್ದ ಅವರನ್ನು ಸತ್ಕರಿಸಿದನು. ದುರ್ವಾಸ ಮಹರ್ಷಿಗಳ ಪಾದಾರವಿಂದಗಳಲ್ಲಿ ನಮಸ್ಕರಿಸಿ ಅಂಬರೀಷನು ಭೋಜನ ಮಾಡಬೇಕೆಂದು ಮಹರ್ಷಿಗಳನ್ನು ಪ್ರಾರ್ಥಿಸಿದನು. ದುರ್ವಾಸರು ರಾಜನ ಪ್ರಾರ್ಥನೆಯನ್ನು ಅಂಗೀಕರಿಸಿ ಆವಶ್ಯಕವಾದ ಕರ್ಮಗಳನ್ನು ಮಾಡುವ ಸಲುವಾಗಿ ನದಿಗೆ ಹೋದರು. ಬ್ರಹ್ಮವಸ್ತುವನ್ನೇ ಕುರಿತು ಧ್ಯಾನ ಮಾಡುತ್ತಾ ಶುಭಾವಹವಾದ ಯಮುನಾ ನದಿಯಲ್ಲಿ ಮುಳುಗಿ ಸ್ನಾನ ಮಾಡಿದರು. ರಾಜನು ಕೈಗೊಂಡಿದ್ದ ವ್ರತ ನಿಯಮದಂತೆ ದ್ವಾದಶಿಯು ಕಳೆಯುವುದರೊಳಗಾಗಿ ಪಾರಣೆ ಮಾಡಬೇಕಾಗಿದ್ದಿತು. ದುರ್ವಾಸರು ಬಂದ ವೇಳೆಗೆ ದ್ವಾದಶಿಯಲ್ಲಿ ಅರ್ಧಮುಹೂರ್ತ ಕಾಲವು ಮಾತ್ರವೇ ಉಳಿದಿದ್ದಿತು. ಆ ಅರ್ಧಮುಹೂರ್ತದೊಳಗಾಗಿ ದುರ್ವಾಸರು ಕರ್ತವ್ಯ ಕರ್ಮಗಳನ್ನು ಮುಗಿಸಿಕೊಂಡು ಬರುವ ನಿರೀಕ್ಷೆಯಿರಲಿಲ್ಲ. ಇಂತಹ ಧರ್ಮಸಂಕಟದ ಸಂದರ್ಭದಲ್ಲಿ ಧರ್ಮಜ್ಞನಾದ ರಾಜನು ಬ್ರಾಹ್ಮಣರೊಡನೆ ಕುಳಿತು ಚಿಂತಿಸತೊಡಗಿದನು :

ಬ್ರಾಹ್ಮಣೋತ್ತಮರೇ! ಬ್ರಾಹ್ಮಣನನ್ನು ಅತಿಕ್ರಮಿಸುವುದರಿಂದಲೂ ಆತನನ್ನು ಬಿಟ್ಟು ಪಾರಣೆ ಮಾಡುವುದರಿಂದಲೂ ದೋಷವಿದೆ. ದ್ವಾದಶಿಯು ಕಳೆದು ಹೋಗುವುದರೊಳಗಾಗಿ ಪಾರಣೆ ಮಾಡದಿದ್ದರೂ ದೋಷವಿದೆ. ಈ ಸಮಯದಲ್ಲಿ ಯಾವುದನ್ನು ಮಾಡಿದರೆ ನನಗೆ ಒಳ್ಳೆಯದಾಗುತ್ತದೆ ಮತ್ತು ಅಧರ್ಮವು ನನ್ನನ್ನು ಸ್ಪರ್ಶಿಸುವುದಿಲ್ಲ? ಇದನ್ನು ನನಗೆ ಹೇಳಿರಿ.”

ಬ್ರಾಹ್ಮಣರೊಡನೆ ಸ್ವಲ್ಪ ಹೊತ್ತಿನವರೆಗೆ ವಿಚಾರವಿನಿಮಯವಾದ ನಂತರ ರಾಜನೇ ಬ್ರಾಹ್ಮಣರಿಗೆ ತನ್ನ ನಿರ್ಣಯವನ್ನು ಹೇಳಿದನು :

“ಬ್ರಾಹ್ಮಣರೇ! ನೀರನ್ನು ಪ್ರಾಶನ ಮಾಡುವುದು ಭೋಜನ ಮಾಡಿದಂತೆಯೂ ಆಗುತ್ತದೆ, ಭೋಜನ ಮಾಡದೇ ಇದ್ದಂತೆಯೂ ಆಗುತ್ತದೆ-ಎಂಬ ಶ್ರುತಿವಚನದಂತೆ ನಾನು ಕೇವಲ ಜಲಪ್ರಾಶನ ಮಾಡಿ ಪಾರಣೆಯನ್ನು ಮುಗಿಸುತ್ತೇನೆ.”

ಹೀಗೆ ಹೇಳಿ ಅಂಬರೀಷನು ಬ್ರಾಹ್ಮಣರ ಅನುಮತಿಯನ್ನು ಪಡೆದು ಜಲಪ್ರಾಶನ ಮಾಡಿ, ಪರಮ ಕಾರುಣಿಕನಾದ ಅಚ್ಯುತನನ್ನೇ ಧ್ಯಾನ ಮಾಡುತ್ತಾ ದುರ್ವಾಸರ ಆಗಮನವನ್ನೇ ಎದುರು ನೋಡುತ್ತಿದ್ದನು. ಮಾಡಬೇಕಾಗಿದ್ದ ಆವಶ್ಯಕ ಕರ್ಮಗಳನ್ನು ಮುಗಿಸಿ ದುರ್ವಾಸರು ಯಮುನಾ ನದಿಯ ತೀರದಿಂದ ಹಿಂದಿರುಗಿದರು. ರಾಜನು ಮುಂದೆ ಬಂದು ಅಭಿವಾದನ ಮಾಡುತ್ತಲೇ ದುರ್ವಾಸರಿಗೆ ರಾಜನು ಜಲಪ್ರಾಶನದ ಮೂಲಕವಾಗಿ ಪಾರಣೆಯನ್ನು ಮುಗಿಸಿದ್ದ ವಿಷಯವು ತಿಳಿದು ಹೋಯಿತು. ಅವರ ಶರೀರವೆಲ್ಲವೂ ಕೋಪದಿಂದ ನಡುಗುತ್ತಿದ್ದಿತು. ಹುಬ್ಬುಗಳು ಗಂಟಿಕ್ಕಿದ್ದುವು. ಇದಲ್ಲದೇ ಅವರು ಹಸಿವಿನಿಂದ ಬಹಳವಾಗಿ ಬಳಲಿದ್ದರು. ಕೈಮುಗಿದುಕೊಂಡು ವಿನಮ್ರನಾಗಿ ನಿಂತಿದ್ದ ಅಂಬರೀಷರಾಜನಿಗೆ ಕಡುಕೋಪದಿಂದ ಅವರು ಹೇಳಿದರು.

ಏನನ್ಯಾಯ! ಕ್ರೂರಿಯಾದ, ಸಂಪತ್ತಿನಿಂದ ಮದಿಸಿರುವ, ವಿಷ್ಣುವಿನ ಭಕ್ತನಲ್ಲದ, ತಾನೇ ಸರ್ವೇಶ್ವರನೆಂದು ಭಾವಿಸಿಕೊಂಡಿರುವ ಈ ರಾಜನ ಧರ್ಮೋಲ್ಲಂಘನೆಯನ್ನು ಎಲ್ಲರೂ ನೋಡಿರಿ. ನಾನು ಅತಿಥಿಯಾಗಿ ಇವನ ಅರಮನೆಗೆ ಬಂದೆನು, ಅತಿಥಿಸತ್ಕಾರ ಮಾಡಲು ರಾಜನು ನನಗೆ ಆಮಂತ್ರಣವನ್ನೂ ಕೊಟ್ಟಿದ್ದನು. ಆದರೆ ಅತಿಥಿಯಾದ ನನಗೆ ಭೋಜನವನ್ನು ಮಾಡಿಸದೆಯೇ ಇವನು ಭೋಜನಮಾಡಿಬಿಟ್ಟಿದ್ದಾನೆ. ಇಂತಹ ಧರ್ಮವ್ಯತಿಕ್ರಮಕ್ಕೆ ಸಿಗುವ ಫಲವೇನೆಂಬುದನ್ನು ನಾನೀಗಲೇ ತೋರಿಸಿಕೊಡುತ್ತೇನೆ.”

ರೋಷದಿಂದ ಉರಿದು ಹೋಗುತ್ತಿದ್ದ ದುರ್ವಾಸರು ಹೀಗೆ ಹೇಳಿ ತಮ್ಮ ಜಟೆಯಿಂದ ಒಂದು ಕೂದಲನ್ನು ಕಿತ್ತರು. ಅಂಬರೀಷನನ್ನು ಸಂಹರಿಸುವ ಸಲುವಾಗಿ ಆ ಕೂದಲಿನಿಂದ ಒಂದು ಮಾಟದ ಭೂತವನ್ನು ನಿರ್ಮಿಸಿದರು. ಆ ಭೂತವು ಪ್ರಳಯಕಾಲದ ಅಗ್ನಿಯಂತೆ ಧಗ-ಧಗಿಸುತ್ತಿದ್ದಿತು. ಪ್ರಜ್ವಲಿಸುತ್ತಿದ್ದ ಪಾದಗಳ ಸಂಘಟ್ಟನದಿಂದ ಭೂಮಿಯನ್ನೇ ನಡುಗಿಸುತ್ತಿದ್ದ ಆ ಶೂನ್ಯದೇವತೆಯು ಕತ್ತಿಯನ್ನು ಹಿಡಿದು ತನ್ನ ಮೇಲೆ ರಭಸದಿಂದ ಬೀಳುತ್ತಿರುವುದನ್ನು ನೋಡಿಯೂ ಅಂಬರೀಷ ಮಹಾರಾಜನು ನಿಂತ ಜಾಗದಿಂದ ಕದಲಲೇ ಇಲ್ಲ. ಪರಮಪುರುಷನಾದ, ಪರಮಕಾರುಣಿಕನಾದ, ಮಹಾತ್ಮನಾದ ಶ್ರೀಮನ್ನಾರಾಯಣನು ತನ್ನ ಸೇವಕನ ರಕ್ಷಣೆಗಾಗಿ ಈ ಮೊದಲೇ ಸುದರ್ಶನಚಕ್ರವನ್ನು ಅಂಬರೀಷನಿಗೆ ದಯಪಾಲಿಸಿದ್ದನು. ಕೋಪಗೊಂಡಿರುವ ಘಟಸರ್ಪವನ್ನು ದಾವಾಗ್ನಿಯು ಕ್ಷಣಮಾತ್ರದಲ್ಲಿ  ಭಸ್ಮಮಾಡಿ ಬಿಡುವಂತೆ-ದುರ್ವಾಸರು ಅಂಬರೀಷನ ಸಂಹಾರಕ್ಕಾಗಿ ಸೃಷ್ಟಿಸಿದ್ದ ಶೂನ್ಯದೇವತೆಯನ್ನು ಸುದರ್ಶನಚಕ್ರವು ಕ್ಷಣಮಾತ್ರದಲ್ಲಿ ಭಸ್ಮಮಾಡಿ  ಬಿಟ್ಟಿತು. ತಾವು ಸೃಷ್ಟಿಸಿದ್ದ ಶೂನ್ಯದೇವತೆಯು ಭಸ್ಮವಾದುದನ್ನೂ, ಇದರಿಂದ  ತಮ್ಮ ಪ್ರಯತ್ನವು ನಿಷ್ಪಲವಾದುದನ್ನೂ ಮತ್ತು ಅನಂತರ ಆ ಚಕ್ರವು ತಮ್ಮ  ಕಡೆಗೇ ಬರುತ್ತಿರುವುದನ್ನೂ ಕಂಡು ದುರ್ವಾಸರು ಭಯಗೊಂಡವರಾಗಿ ಚಕ್ರದಿಂದ ಪ್ರಾಣಗಳನ್ನುಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋದರು. ಎತ್ತರವಾದ ಜ್ವಾಲೆಗಳಿಂದ ಕೂಡಿದ ಕಾಡುಗಿಚ್ಚು ಸರ್ಪವನ್ನು ಹಿಂಬಾಲಿಸಿ ಹೋಗುವಂತೆ-ಶ್ರೀಭಗವಂತನ ಚಕ್ರವು ದುರ್ವಾಸರನ್ನು ಅಟ್ಟಿಸಿಕೊಂಡು ಹೋಯಿತು. ಅಂಟಿಕೊಂಡಿರುವಂತೆಯೇ ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ವಿಷ್ಣುಚಕ್ರವನ್ನು ನೋಡಿ ಭಯಗೊಂಡ ದುರ್ವಾಸರು ಗುಹೆಯಲ್ಲಾದರೂ ರಕ್ಷಣೆಯನ್ನು ಪಡೆಯಲು ಮೇರುಪರ್ವತದ ಕಡೆಗೆ ಧಾವಿಸಿದರು. ಅಲ್ಲಿಯೂ ಸುದರ್ಶನಚಕ್ರವು ಅವರ ಬೆನ್ನು ಬಿಡಲಿಲ್ಲ. ಮುಂದೆ ದುರ್ವಾಸರು ಎಲ್ಲ ದಿಕ್ಕುಗಳಿಗೂ ಓಡಿಹೋದರು. ಆಕಾಶಕ್ಕೆ ಹಾರಿದರು. ಭೂಮಂಡಲದಲ್ಲೆಲ್ಲಾ ಓಡಾಡಿದರು. ಅತಲ-ವಿತಲವೇ ಮೊದಲಾದ ಪಾತಾಳಲೋಕಗಳಿಗೂ ಹೋದರು. ಸಮುದ್ರಗಳ ಮೇಲೂ ಹರಿದಾಡಿದರು. ಲೋಕಪಾಲಕರ ಲೋಕಗಳಿಗೂ ಹೋದರು. ಕಡೆಗೆ ಸ್ವರ್ಗಕ್ಕೂ ಹಾರಿದರು. ಅವರೆಲ್ಲಿಗೇ ಹೋದರೂ ಸಹಿಸಲು ಅಸಾಧ್ಯವಾದ ತೇಜಸ್ಸಿನಿಂದ ಕೂಡಿದ್ದ ಸುದರ್ಶನಚಕ್ರವು ಅವರ ಬೆನ್ನು ಬಿಡಲೇ ಇಲ್ಲ. ಅನವರತವಾಗಿ ಹಿಂಬಾಲಿಸುತ್ತಿದ್ದುದನ್ನು ಕಂಡು ಮತ್ತೂ ಭಯಗ್ರಸ್ತರಾದ ಮಹರ್ಷಿಗಳು ಎಲ್ಲಿಯೂ ರಕ್ಷಕರನ್ನು ಕಾಣದೆ ಯಾರ ರಕ್ಷಣೆಯನ್ನಾದರೂ ಪಡೆಯ ಬೇಕೆಂಬ ಧಾವಂತದಿಂದ ಬ್ರಹ್ಮನ ಬಳಿಗೆ ಹೋಗಿ ಬೇಡಿಕೊಂಡರು :

“ಬ್ರಹ್ಮದೇವ! ಸ್ವಯಂಭುವನೇ! ನನ್ನನ್ನು ಈ ತೇಜೋಮಯವಾದ ವಿಷ್ಣುಚಕ್ರದಿಂದ ಪಾರುಮಾಡು.”

ಬ್ರಹ್ಮನು ಹೇಳುತ್ತಾನೆ :

“ಮಹರ್ಷಿಯೇ! ಯಾವಾಗ ನನ್ನ ಎರಡು ಪರಾರ್ಧಮಿತವಾದ ಆಯುಷ್ಯವು ಮುಗಿದು ಹೋಗುವುದೋ ಆಗ ಕಾಲರೂಪಿಯಾದ ಭಗವಾನ್ ವಾಸುದೇವನು ತನ್ನ ಈ ಲೀಲಾರೂಪವಾದ ಸೃಷ್ಟಿಯನ್ನು ಸಮಾಪ್ತಿಗೊಳಿಸಲು ಬಯಸಿ ಕೇವಲ ಹುಬ್ಬನ್ನು ಹಾರಿಸಿ ಬ್ರಹ್ಮಾಂಡವನ್ನೇ ಭಸ್ಮಮಾಡಿಬಿಡುತ್ತಾನೆ. ಆ ಸಮಯದಲ್ಲಿ ನಾನಾಗಲೀ, ನನ್ನ ಸ್ಥಾನವಾಗಲೀ, ಈ ವಿಶ್ವವಾಗಲೀ ಯಾವುದೂ ಇರುವುದಿಲ್ಲ. ಎಲ್ಲವೂ ಅದೃಶ್ಯವಾಗಿ ಹೋಗುತ್ತದೆ. ನಾನು, ಶಂಕರನು, ಬೃಗು-ದಕ್ಷ ಇವರೇ ಮೊದಲಾದ ಪ್ರಜಾಪತಿಗಳು, ಭೂತೇಶರು, ಸುರೇಶಮುಖ್ಯರು-ಇವರೆಲ್ಲರೂ ಭಗವಾನ್ ವಾಸುದೇವನೇ ಮಾಡಿರುವ ನಿಯಮಗಳಿಗೆ ಬದ್ಧರಾಗಿದ್ದುಕೊಂಡು ಅವನ ಆಜ್ಞೆಯನ್ನು ಶಿರಸಾವಹಿಸಿ ಲೋಕಕ್ಕೆ ಹಿತವನ್ನುಂಟುಮಾಡುತ್ತಿದ್ದೇವೆ. ಅಂತಹ ಮಹಾಮಹಿಮನಾದ ವಿಷ್ಣುವಿನ ಭಕ್ತನಿಗೆ ದ್ರೋಹವೆಸಗಿರುವ ನಿನಗೆ ರಕ್ಷಣೆಯನ್ನೀಯಲು ನನಗೆ ಸಾಧ್ಯವಿಲ್ಲ.”

ಬ್ರಹ್ಮನು ಹೀಗೆ ಹೇಳಿ ತಿರಸ್ಕರಿಸಿಬಿಟ್ಟನು. ವಿಷ್ಣುಚಕ್ರದ ಬೇಗೆಯು ಕ್ಷಣ-ಕ್ಷಣಕ್ಕೂ ಹೆಚ್ಚುತ್ತಿದ್ದಿತು. ಕಂಗೆಟ್ಟಿದ್ದ ದುರ್ವಾಸರು ಕೈಲಾಸವಾಸಿಯಾದ ಶಿವನಿಗೆ ಶರಣುಹೊಂದಿದರು.

“ಪಾರ್ವತೀಪತಿಯೇ! ಪರಮೇಶ್ವರ! ನನ್ನನ್ನು ಈ ವಿಷ್ಣುಚಕ್ರದಿಂದ ರಕ್ಷಿಸು.”

ರುದ್ರನು ಹೇಳುತ್ತಾನೆ :

ಅಂತಹ ಪ್ರಭುವಿನ ಆಜ್ಞೆಯನ್ನು ಮೀರಿ ನಾವು ಯಾವುದೇ ಕಾರ್ಯವನ್ನೂ ಮಾಡಲು ಸಮರ್ಥರಲ್ಲ. ನಾನಾಗಲೀ, ಸನತ್ಕುಮಾರ-ನಾರದ-ಬ್ರಹ್ಮರಾಗಲೀ, ಕಪಿಲ-ಅಪಾಂತರತಮ-ದೇವಲರಾಗಲೀ, ಧರ್ಮ-ಆಸುರಿ-ಮರೀಚಿಯೇ ಮೊದಲಾದ ಸರ್ವಜ್ಞರಾದ ಸಿದ್ದೇಶ್ವರರಾಗಲೀ ಭಗವಂತನ ಮಾಯೆಯನ್ನು ಅರಿಯೆವು. ಏಕೆಂದರೆ ನಾವೆಲ್ಲರೂ ಅವನ ಮಾಯೆಯಿಂದಲೇ ಆವೃತರಾಗಿಬಿಟ್ಟಿದ್ದೇವೆ. ನಿನ್ನನ್ನು ಅಟ್ಟಿಸಿಕೊಂಡು ಬರುತ್ತಿರುವ ಚಕ್ರವು ವಿಶ್ವೇಶ್ವರನಾದ ಮಹಾವಿಷ್ಣುವಿನ ಸುದರ್ಶನಚಕ್ರವಾಗಿದೆ. ಇದರ ಉಜ್ವಲವಾದ ಪ್ರಭೆಯನ್ನು ನಾವೂ ಸಹಿಸಲಾರೆವು. ಆದುದರಿಂದ ಈ ಸಮಯದಲ್ಲಿ ನೀನು ಶ್ರೀಹರಿಯನ್ನೇ ಶರಣುಹೋಗು, ಅವನೇ ನಿನಗೆ ಮಂಗಳವನ್ನುಂಟು ಮಾಡುತ್ತಾನೆ.”

ಶ್ರೀಶಂಕರನ ಮಾತಿನಿಂದ ಅತ್ಯಂತ ನಿರಾಶರಾದ ದುರ್ವಾಸರು ಲಕ್ಷ್ಮೀಪತಿಯಾದ ಶ್ರೀನಿವಾಸನು ಲಕ್ಷ್ಮಿಯೊಡನೆ ವಾಸಿಸುವ ವೈಕುಂಠ ಲೋಕಕ್ಕೆ ಧಾವಿಸಿದರು.

ಬೆನ್ನಟ್ಟಿ ಬರುತ್ತಿದ್ದ ಸುದರ್ಶನಚಕ್ರದ ಜ್ವಾಲೆಯಿಂದ ದುರ್ವಾಸರು ಸುಟ್ಟುಹೋಗುತ್ತಿದ್ದರು. ತರ-ತರನೆ ನಡುಗುತ್ತಾ ಮಹರ್ಷಿಗಳು ಶ್ರೀನಿವಾಸನ ಪಾದಾರವಿಂದಗಳಲ್ಲಿ ಅಡ್ಡಬಿದ್ದರು. “ಅಚ್ಯುತ! ಅನಂತ! ಸತ್ಪುರುಷರಿಗೆ ಬೇಕಾದವನೇ! ಪ್ರಭುವೇ! ಲೋಕರಕ್ಷಕನೇ! ಅಪರಾಧಿಯಾದ ನನ್ನನ್ನು ರಕ್ಷಿಸು-ಕಾಪಾಡು”-ಎಂದು ಅಂಗಲಾಚಿ ಬೇಡಿದರು. “ನಿನ್ನ ಪರಮಾದ್ಭುತವಾದ ಪ್ರಭಾವವನ್ನು ಕಂಡರಿಯದ ನಾನು ನಿನ್ನ ಪ್ರಿಯಭಕ್ತರಿಗೆ ಅಪರಾಧ ಮಾಡಿಬಿಟ್ಟೆನು. ಪ್ರಭುವೇ! ನನ್ನನ್ನು ಈ ಸುದರ್ಶನಚಕ್ರದಿಂದ ಪಾರುಮಾಡು. ನಿನ್ನ ನಾಮೋಚ್ಚಾರಣ ಮಾತ್ರದಿಂದಲೇ ನರಕದಲ್ಲಿರುವ ಜೀವಿಗಳೂ ಮುಕ್ತರಾಗಿಬಿಡುವರು. ಅಂತಹ ಮಹಾನುಭಾವನು ನೀನು. ದಯಮಾಡಿ ನನ್ನನ್ನು ರಕ್ಷಿಸು.”

ಶ್ರೀಭಗವಂತನು ಹೇಳುತ್ತಾನೆ :

“ದುರ್ವಾಸನೇ! ಯಾವ ಅಪಾರಮಹಿಮನಾದ ಪರಮಾತ್ಮನಲ್ಲಿ ಕೇವಲ ಈ ಬ್ರಹ್ಮ, ಈ ಜೀವರು ಮಾತ್ರವಲ್ಲದೇ ಅನೇಕ ಬ್ರಹ್ಮರು ಅನೇಕ ಬ್ರಹ್ಮಾಂಡಗಳು ಹುಟ್ಟುತ್ತಿರುತ್ತವೆಯೋ ಮತ್ತು ಲೀನವಾಗುತ್ತಿರುತ್ತವೆಯೋ-ಅಂತಹ ಅನೇಕ ಕೋಟಿಬ್ರಹ್ಮಾಂಡಗಳಲ್ಲಿ ನಾವೂ ಕೂಡ ಸಾವಿರಾರು ಬಾರಿ ಹುಟ್ಟಿ ಅವನಲ್ಲಿಯೇ ಲೀನವಾಗುತ್ತಿರುತ್ತೇವೆಯೋ ದುರ್ವಾಸ! ನಾನು ಅಸ್ವತಂತ್ರನಪ್ಪ! ನನಗೆ ಯಾವ ವಿಧವಾದ ಸ್ವಾತಂತ್ರ್ಯವೂ ಇಲ್ಲ. ನಾನು ಸರ್ವಥಾ ಭಕ್ತಜನರಿಗೆ ಅಧೀನನಾಗಿ ಬಿಟ್ಟಿದ್ದೇನೆ. ಸಾಧುಗಳಾದ ನನ್ನ ಭಕ್ತರೇ ನನ್ನ ಹೃದಯವನ್ನು ಕಿತ್ತಿಟ್ಟುಕೊಂಡುಬಿಟ್ಟಿದ್ದಾರೆ. ಭಕ್ತರು ನನ್ನನ್ನು ಪ್ರೀತಿಸುವಂತೆಯೇ ನಾನೂ ನನ್ನ ಭಕ್ತರನ್ನು ಬಹಳವಾಗಿ ಪ್ರೀತಿಸುತ್ತೇನೆ.

ಬ್ರಾಹ್ಮಣೋತ್ತಮನೇ! ಯಾರು ನನ್ನನ್ನು ಪರಮಾಶ್ರಯನೆಂದು ಭಾವಿಸಿರುವರೋ ಅಂತಹ ಪರಮಸಾಧುಗಳಾದ ನನ್ನ ಭಕ್ತರನ್ನು ಬಿಟ್ಟು ನಾನೇ ಇರಬಯಸುವುದಿಲ್ಲ. ಅತಿಶಯವಾದ ಪ್ರೀತಿಯಿಂದಿರುವ, ನನ್ನ ಹೃದಯಕಮಲದಲ್ಲಿಯೇ ನೆಲೆಸಿರುವ ಲಕ್ಷ್ಮಿಯನ್ನೂ ನಾನು ಬಯಸುವುದಿಲ್ಲ. ನನ್ನ ಪ್ರಾಣಗಳಿಗಿಂತಲೂ, ನನ್ನ ಪ್ರೇಯಸಿಗಿಂತಲೂ ಭಕ್ತರೇ ನನಗೆ ಪರಮಪ್ರಿಯರು. ಯಾವ ನನ್ನ ಭಕ್ತರು ಪತ್ನಿ-ಪುತ್ರ-ಗೃಹ-ಗುರುಜನರು-ಪ್ರಾಣ-ಧನ-ಇಹಲೋಕ-ಪರಲೋಕಗಳೆಲ್ಲವನ್ನೂ ಪರಿತ್ಯಜಿಸಿ ನನ್ನನ್ನೇ ಪರಮಾಶ್ರಯನೆಂದು ಭಾವಿಸಿ ಶರಣು ಹೊಂದಿರುವರೋ ಅಂತಹವರನ್ನು ನಾನು ಹೇಗೆ ತಾನೇ ಪರಿತ್ಯಜಿಸಲಿ ?

ಯಾವ ರೀತಿಯಲ್ಲಿ ತನ್ನ ಪಾತಿವ್ರತ್ಯದಿಂದ ಸದಾಚಾರಿಯಾದ ತನ್ನ ಪತಿಯನ್ನು ವಶಪಡಿಸಿಕೊಳ್ಳುವಳೋ-ಅದೇ ರೀತಿಯಲ್ಲಿ ಮನಸ್ಸನ್ನು ನನ್ನಲ್ಲಿಯೇ ನೆಲೆಗೊಳಿಸಿರುವ ಸಮದರ್ಶಿಗಳಾದ ಸಾಧುಗಳು ಭಕ್ತಿಯ ಮೂಲಕವಾಗಿ ನನ್ನನ್ನು ವಶಪಡಿಸಿಕೊಳ್ಳುತ್ತಾರೆ. ನನ್ನ ಅನನ್ಯಪ್ರೇಮಿಗಳಾದ ಭಕ್ತರು ನನ್ನ ಸೇವೆಮಾಡುವುದರಿಂದಲೇ ಕೃತಕೃತ್ಯರಾದೆವೆಂದೂ, ಪರಿಪೂರ್ಣರಾದೆವೆಂದೂ ಭಾವಿಸಿಕೊಳ್ಳುತ್ತಾರೆ. ನನ್ನ ಸೇವೆಯಿಂದ ದೊರಕುವ ಸಾಲೋಕ್ಯ-ಸಾಯುಜ್ಯ-ಸಾಮೀಪ್ಯ-ಸಾರೂಪ್ಯಗಳೆಂಬ ನಾಲ್ಕು ವಿಧವಾದ ಮೋಕ್ಷಗಳನ್ನು ಕೂಡ ಅವರು ಬಯಸುವುದಿಲ್ಲ. ಹೀಗಿರುವಾಗ ಕಾಲವು ಕಳೆದಂತೆ ನಷ್ಟವಾಗಿ ಹೋಗುವ ವಸ್ತುಗಳ ಬಗೆಗೆ ಹೇಳುವುದೇನಿದೆ?

ಮಹರ್ಷಿಯೇ! ಹೆಚ್ಚೇನು ಹೇಳಲಿ! ಸಾಧುಗಳೇ ನನ್ನ ಹೃದಯ ಸ್ವರೂಪರಾಗಿರುತ್ತಾರೆ. ಸಾಧುಗಳಿಗೆ ನಾನೇ ಹೃದಯ ಸ್ವರೂಪನಾಗಿರುತ್ತೇನೆ. ನನ್ನನ್ನು ಬಿಟ್ಟು ಅವರಿಗೆ ಬೇರೆ ಯಾರ ಪರಿಚಯವೂ ಇರುವುದಿಲ್ಲ. ಅಂತೆಯೇ ನನಗೂ ನನ್ನ ಪ್ರಿಯಭಕ್ತರನ್ನು ಬಿಟ್ಟು ಬೇರೆಯವರ ವಿಷಯವು ಕಿಂಚಿತ್ತಾದರೂ ಗೊತ್ತಿಲ್ಲ. ಆದರೂ ವಿಪ್ರನೇ! ಈ ಸುದರ್ಶನಚಕ್ರದಿಂದ ತಪ್ಪಿಸಿಕೊಳ್ಳಲು ಒಂದು ಉಪಾಯವನ್ನು ಹೇಳಿಕೊಡುತ್ತೇನೆ ; ಸಾವಧಾನಚಿತ್ತನಾಗಿ ಕೇಳು.

ಯಾವನಿಗೆ ಕೆಟ್ಟದು ಬಗೆದ ಕಾರಣದಿಂದಾಗಿ ನಿನಗೆ ಇಂತಹ ಆತ್ಮಘಾತವಾಗಿರುವುದೋ ಅವನ ಬಳಿಗೇ ನೀನು ಪುನಃ ಹೋಗು. ಸತ್ಪುರುಷರಲ್ಲಿ ಪ್ರಯೋಗಿಸಿದ ಆಭಿಚಾರಿಕವಾದ ತೇಜಸ್ಸು ಪ್ರಯೋಗಿಸಿದ ವನಿಗೇ ಅಮಂಗಳವನ್ನುಂಟುಮಾಡುತ್ತದೆ. ಬ್ರಾಹ್ಮಣನಿಗೆ ವಿದ್ಯೆ ಮತ್ತು ತಪಸ್ಸುಗಳು ಪರಮಕಲ್ಯಾಣವನ್ನೇನೋ ಉಂಟು ಮಾಡುತ್ತವೆ. ಇದರಲ್ಲಿ ಸಂಶಯವೇ ಇಲ್ಲ. ಆದರೆ ಬ್ರಾಹ್ಮಣನು ಉದ್ಧತನಾಗಿ ಸಾಧು-ಸತ್ಪುರುಷರಿಗೆ ತೊಂದರೆಕೊಡುವ ಸ್ವಭಾವದವನಾದರೆ ಅದೇ ವಿದ್ಯೆ ಮತ್ತು ತಪಸ್ಸುಗಳೇ ಆತನಿಗೆ ವಿಪರೀತವಾದ ಫಲಗಳನ್ನು ಕೊಡುತ್ತವೆ.

ಬ್ರಾಹ್ಮಣನೇ! ಆದುದರಿಂದ ನಾಭಾಗನ ಮಗನಾದ ಅಂಬರೀಷನ ಬಳಿಗೆ ನೀನು ಈಗಲೇ ಹೋಗು. ನಿನಗೆ ಮಂಗಳವಾಗಲಿ. ಮಹಾಭಾಗನಾದ ಆ ರಾಜನ ಕ್ಷಮೆಯನ್ನು ಯಾಚಿಸು. ನಿನಗೆ ಶಾಂತಿಯು ಲಭಿಸುತ್ತದೆ.”

ಹೀಗೆ ಶ್ರೀಭಗವಂತನಿಂದ ನಿರ್ದೆಶಿಸಲ್ಪಟ್ಟ, ಸುದರ್ಶನಚಕ್ರದ ತಾಪದಿಂದ ಪರಿತಪಿಸುತ್ತಿದ್ದ ದುರ್ವಾಸ ಮಹರ್ಷಿಗಳು, ಅಂಬರೀಷ ಮಹಾರಾಜನ ಬಳಿಗೆ ಹೋಗಿ ಅತ್ಯಂತ ದುಃಖಿತರಾಗಿ ಅವನ ಎರಡು ಪಾದಗಳನ್ನೂ ಗಟ್ಟಿಯಾಗಿ ಹಿಡಿದು ಕೊಂಡರು. ದುರ್ವಾಸ ಮಹರ್ಷಿಗಳ ಈ ಕಾರ್ಯವನ್ನು ಕಂಡು, ಅಂಬರೀಷ ಮಹಾರಾಜನು ಕಡುನಾಚಿಕೆಗೊಂಡು, ದಯಾರಸದಿಂದ ಕರಗಿದ ಹೃದಯವುಳ್ಳವನಾಗಿ ಶ್ರೀಹರಿಯ ಅಸ್ತ್ರವಾದ ಸುದರ್ಶನಚಕ್ರವನ್ನು ಕುರಿತು ಸ್ತೋತ್ರ ಮಾಡಿದನು:

ಅಂಬರೀಷನು ಸುದರ್ಶನಚಕ್ರವನ್ನು ಪ್ರಾರ್ಥಿಸುತ್ತಾನೆ :

“ಸುದರ್ಶನಚಕ್ರವೇ! ಚಕ್ರಾಧಿದೇವತೆಯೇ! ನೀನೇ ಅಗ್ನಿಯು. ಸರ್ವಸಮರ್ಥನಾದ ಸೂರ್ಯನೂ ನೀನೇ ಆಗಿರುವೆ. ನಕ್ಷತ್ರಗಳ ಒಡೆಯನಾದ ಚಂದ್ರನೂ ನೀನೇ. ಜಲ, ಪೃಥ್ವಿ, ಆಕಾಶ, ವಾಯು, ಐದು ತನ್ಮಾತ್ರೆಗಳು ಮತ್ತು ಇಂದ್ರಿಯಗಳು-ಈ ಎಲ್ಲವೂ ನೀನೇ ಆಗಿರುವೆ. ನಿನಗೆ ನಮಸ್ಕರಿಸುತ್ತೇನೆ. ಸಾವಿರ ಅರೆಕಾಲುಗಳಿಂದ ಕೂಡಿರುವವನೇ! ಅಚ್ಯುತನಿಗೆ ಪ್ರಿಯನಾದವನೇ!

ಸಮಸ್ತವಾದ ಅಸ್ತ್ರ-ಶಸ್ತ್ರಗಳನ್ನೂ ವಿನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿರುವವನೇ! ಭೂಮಂಡಲಕ್ಕೆ ಒಡೆಯನೇ! ದಯಮಾಡಿ ಈ ಬ್ರಾಹ್ಮಣನಿಗೆ ಮಂಗಳವನ್ನುಂಟುಮಾಡು. ನೀನೇ ಧರ್ಮಸ್ವರೂಪನಾಗಿರುವೆ. ಅಮೃತಸ್ವರೂಪನಾಗಿರುವೆ. ಸತ್ಯ ಸ್ವರೂಪನಾಗಿರುವೆ. ಸಮಸ್ತವಾದ ಯಜ್ಞಗಳೂ ನೀನೇ ಆಗಿರುವೆ. ಯಜ್ಞದ ಭೋಕ್ತವೂ ನೀನೇ, ಸಮಸ್ತಲೋಕಗಳ ರಕ್ಷಕನು ನೀನು. ಸರ್ವಾತ್ಮನು ನೀನು. ಪರಮಪುರುಷ ಪರಮಾತ್ಮನಿಗೆ ನೀನು ದಿವ್ಯವಾದ ತೇಜಸ್ಸಿನ ರೂಪದಲ್ಲಿರುವೆ. ಶ್ರೇಷ್ಠವಾದ ತೇಜಸ್ಸು ಮತ್ತು ಪೌರುಷವು ನೀನೇ. ಸುಂದರವಾದ ಮಧ್ಯಭಾಗವುಳ್ಳ ಸುದರ್ಶನಚಕ್ರವೇ! ಸಮಸ್ತಧರ್ಮಗಳ ಮರ್ಯಾದೆಯನ್ನೂ ರಕ್ಷಿಸುವವನೇ! ಅಧರ್ಮಶೀಲರಾದ ಅಸುರರಿಗೆ ಅಗ್ನಿಪ್ರಾಯನಾಗಿರತಕ್ಕವನೇ! ಮೂರು ಲೋಕಗಳ ರಕ್ಷಕನೇ! ವಿಶುದ್ಧವಾದ ವರ್ಚಸ್ಸಿನಿಂದ ಕೂಡಿರುವವನೇ! ಮನಸ್ಸಿಗೆ ಸಮಾನವಾದ ವೇಗದಿಂದ ಕೂಡಿರುವವನೇ! ಅದ್ಭುತವಾದ ಕಾರ್ಯಗಳನ್ನು ಮಾಡುವವನೇ! ನಿನಗೆ ನಮಸ್ಕಾರ ಮಾಡಿ ಸ್ತೋತ್ರ ಮಾಡುತ್ತಿದ್ದೇನೆ.

ವೇದವಾಣಿಗಳಿಗೆ ಅಧೀಶ್ವರನೇ! ನಿನ್ನ ಧರ್ಮಮಯವಾದ ತೇಜಸ್ಸಿನಿಂದ ಅಂಧಕಾರದ ನಾಶವಾಗುತ್ತದೆ. ಸೂರ್ಯನೇ ಮೊದಲಾದ ಮಹಾಪುರುಷರ ಪ್ರಕಾಶಕ್ಕೆ ರಕ್ಷಣೆಯು ಸಿಕ್ಕುತ್ತದೆ. ನಿನ್ನ ಮಹಿಮೆಯ ಪಾರವನ್ನು ತಿಳಿಯಲು ಯಾರಿಗೂ ಶಕ್ಯವಿಲ್ಲ. ಸದಸದ್ರೂಪವಾದ ಉಚ್ಚ-ನೀಚ ಭಾವನೆಗಳಿಂದ ಕೂಡಿರುವ ಸಮಸ್ತ ಕಾರ್ಯಕಾರಣಾತ್ಮಕವಾದ ಪ್ರಪಂಚವೂ ನಿನ್ನ ಸ್ವರೂಪವೇ ಆಗಿದೆ. ಯಾರಿಂದಲೂ ಜಯಿಸಲ್ಪಡದೇ ಇರುವ ಸುದರ್ಶನಚಕ್ರಾಧಿದೇವತೆಯೇ! ಅಜ್ಞಾನಶೂನ್ಯನಾದ, ಪರಾತ್ಪರನಾದ ಪರಮಾತ್ಮನಿಂದ ನೀನು ಪ್ರಯೋಗಿಸಲ್ಪಟೊಡನೆಯೇ ದೈತ್ಯ-ದಾನವರ ಸೈನ್ಯವನ್ನು ಪ್ರವೇಶಿಸಿ ಶತ್ರುಗಳ ತೋಳುಗಳನ್ನೂ, ಹೊಟ್ಟೆಗಳನ್ನೂ, ಕಾಲುಗಳನ್ನೂ, ಶಿರಸ್ಸು ಗಳನ್ನೂ ಅನವರತವಾಗಿ ಕತ್ತರಿಸುತ್ತಾ ರಣಾಂಗಣದಲ್ಲಿ ತೊಳ-ತೊಳಗಿ ಬೆಳಗುವೆ.

ಜಗದ್ರಕ್ಷಕನೇ! ನೀನು ಎಲ್ಲವನ್ನೂ ಸಹಿಸುವ ಸಾಮರ್ಥ್ಯವುಳ್ಳವನು. ನಿನ್ನೆದುರಾಗಿ ಬರುವ ಶತ್ರುಗಳ ಅಸ್ತ್ರಗಳ ಪ್ರಭಾವವನ್ನು ತಡೆದುಕೊಳ್ಳಲು ಸಮರ್ಥನಾಗಿರುವೆ. ಗದಾಧರನಾದ ಶ್ರೀಮನ್ನಾರಾಯಣನು ದುಷ್ಟರ ನಿಗ್ರಹಾರ್ಥವಾಗಿಯೇ ನಿನ್ನನ್ನು ನಿಯೋಜಿಸಿದ್ದಾನೆ. ಆದುದರಿಂದ ನೀನು ದಯಮಾಡಿ ನಮ್ಮ ಕುಲದ ಭಾಗೋದಯಕ್ಕಾಗಿ ಬ್ರಾಹ್ಮಣಶ್ರೇಷ್ಠರಾದ ದುರ್ವಾಸ ಮಹರ್ಷಿಗಳಿಗೆ ಮಂಗಳವನ್ನುಂಟುಮಾಡು. ಇದೇ ನಮಗೆ ಪರಮಾನುಗ್ರಹವಾಗಿದೆ.

ನಾನೇನಾದರೂ ಅಲ್ಪ-ಸ್ವಲ್ಪ ದಾನಮಾಡಿದ ಫಲವೇನಾದರೂ ಇದ್ದರೆ, ಯಜ್ಞಮಾಡಿದ ಫಲವೇನಾದರೂ ಇದ್ದರೆ, ಸ್ವಧರ್ಮವನ್ನು ಪರಿಪಾಲಿಸಿದ ಫಲವೇನಾದರೂ ಇದ್ದರೆ, ನನ್ನ ವಂಶೀಯರೆಲ್ಲರೂ ಬ್ರಾಹ್ಮಣರನ್ನೇ ತಮ್ಮ ಆರಾಧ್ಯ ದೇವತೆಗಳನ್ನಾಗಿ ಮಾಡಿಕೊಂಡಿರುವುದು ನಿಜವಾದರೆ ಈ ದುರ್ವಾಸ ಮುನಿಗಳು ಈಗಲೇ ತಾಪದಿಂದ ರಹಿತರಾಗಲಿ.

ಸಮಸ್ತಗುಣಗಳಿಗೂ ಏಕಮಾತ್ರ ಪರಮಾಶ್ರಯನಾಗಿರುವ, ದಯಾಮಯನಾದ ಪರಮಾತ್ಮನನ್ನು ನಾನು ಸರ್ವಪ್ರಾಣಿಗಳಲ್ಲಿಯೂ ಆತ್ಮಭಾವದಿಂದ ಇರುವವನನ್ನಾಗಿ ತಿಳಿದಿರುವುದು ಸತ್ಯವಾದರೆ ಮತ್ತು ಹೀಗೆ ತಿಳಿದಿರುವುದರಿಂದ ಪರಮಾತ್ಮನು ನನ್ನಲ್ಲಿ ಸುಪ್ರೀತನಾಗಿದ್ದರೆ, ಈ ಬ್ರಾಹ್ಮಣರು ತಾಪವಿಲ್ಲದವರಾಗಲಿ.”

ದುರ್ವಾಸಮುನಿಗಳನ್ನು ಎಲ್ಲ ಕಡೆಗಳಿಂದಲೂ ಪರಿತಾಪಗೊಳಿಸುತ್ತಿದ್ದ ಸುದರ್ಶನಚಕ್ರವನ್ನು ಅಂಬರೀಷಮಹಾರಾಜನು ಹೀಗೆ ಪ್ರಾರ್ಥಿಸಲಾಗಿ ಸುದರ್ಶನಚಕ್ರವು ಶಾಂತವಾಯಿತು. ಸುದರ್ಶನಚಕ್ರದ ತಾಪದಿಂದ ವಿಮುಕ್ತರಾದೊಡನೆಯೇ ದುರ್ವಾಸರು ನೆಮ್ಮದಿಯನ್ನು ಹೊಂದಿದರು. ಶ್ರೇಷ್ಠವಾದ ಆಶೀರ್ವಾದಗಳಿಂದ ರಾಜನನ್ನು ಹಾರೈಸುತ್ತಾ ಅವನನ್ನು ಬಹಳವಾಗಿ ಪ್ರಶಂಸಿಸಿದರು.

“ಆಹಾ! ಪರಮಾತ್ಮನ ಅನನ್ಯಭಕ್ತರ ಮಹತ್ವವೆಷ್ಟೆಂಬುದನ್ನು ನಾನಿಂದು ಕಂಡುಕೊಂಡೆನು. ನಾನು ನಿನಗೆ ಅಪರಾಧವನ್ನೇ ಮಾಡಿದೆನು. ಆದರೂ ನೀನು ನನಗೆ ಶುಭವನ್ನೇ ಕೋರುತ್ತಿರುವೆಯಲ್ಲವೇ? ಯಾರು ಭಕ್ತವತ್ಸಲನಾದ ಶ್ರೀಹರಿಯ ಪಾದಪದ್ಮಗಳನ್ನು ಪ್ರೇಮಭಾವದಿಂದ ಬಲವಾಗಿ ಹಿಡಿದಿರುತ್ತಾರೆಯೋ ಅಂತಹ ಸಾಧುಪುರುಷರಿಗೆ ಸಾಧಿಸಲು ಸಾಧ್ಯವಾಗದೇ ಇರುವ ಕಾರ್ಯವು ಯಾವುದಿದೆ? ಆ ಮಹಾತ್ಮರು ತ್ಯಜಿಸಲು ಅಸಾಧ್ಯವಾದ ವಸ್ತುವು ತಾನೇ ಯಾವುದಿದೆ? ಭಗವಂತನ ಸಲುವಾಗಿ ಅವರು ಸಮಸ್ತವನ್ನೂ ಪರಿತ್ಯಾಗ ಮಾಡಲು ಸಿದ್ದರಾಗಿರುತ್ತಾರೆ. ಯಾವನ ಶುಭನಾಮಗಳನ್ನು ಕೇಳುವ ಮಾತ್ರದಿಂದಲೇ ಮಾನವನು ಪರಿಶುದ್ಧನಾಗುವನೋ ಅಂತಹ ತೀರ್ಥಪಾದನಾದ ಶ್ರೀಭಗವಂತನ ಚರಣಕಮಲದಾಸರಾದ ಭಕ್ತರಿಗೆ ಯಾವ ಕರ್ತವ್ಯಗಳು ತಾನೇ ಮಾಡಲು ಉಳಿದಿರುತ್ತವೆ?

ಅಂಬರೀಷ ಮಹಾರಾಜ! ನಾನು ನಿನ್ನಿಂದ ಅನುಗ್ರಹಿಸಲ್ಪಟ್ಟಿದ್ದೇನೆ. ಪರಮಕಾರುಣಿಕನಾದ ನೀನು ನನ್ನ ಅಪರಾಧವನ್ನೂ ಲೆಕ್ಕಿಸದೆ ನನ್ನ ಪ್ರಾಣಗಳನ್ನು ರಕ್ಷಿಸಿರುವೆ.” ಸುದರ್ಶನಚಕ್ರದಿಂದ ಭಯಗೊಂಡ ದುರ್ವಾಸರು ಅಖಂಡ ಬ್ರಹ್ಮಾಂಡವನ್ನೂ ತ್ರಿಮೂರ್ತಿಗಳನ್ನೂ ಸಂದರ್ಶಿಸಿಕೊಂಡು ಪುನಃ ಅಂಬರೀಷ ಮಹಾರಾಜನ ಬಳಿಗೆ ಬರಲು ಒಂದು ವರ್ಷವೇ ಬೇಕಾಯಿತು. ಅಂಬರೀಷನು ದುರ್ವಾಸರ ಪುನರಾಗಮನವನ್ನೇ ನಿರೀಕ್ಷಿಸುತ್ತಿದ್ದು ಕೇವಲ ನೀರನ್ನೇ ಕುಡಿಯುತ್ತಾ ಒಂದು ವರ್ಷವನ್ನು ಕಳೆದನು. ದುರ್ವಾಸ ಮುನಿಗಳು ಹೊರಟು ಹೋದ ನಂತರ ಮಹರ್ಷಿಗಳು ಭೋಜನ ಮಾಡಿ ಮಿಕ್ಕುಳಿದಿದ್ದ ಪವಿತ್ರವಾದ ಅನ್ನವನ್ನು ಪ್ರಸಾದ ರೂಪವಾಗಿ ರಾಜನು ಸ್ವೀಕರಿಸಿದನು. ದುರ್ವಾಸರು ಸಂಕಟದಲ್ಲಿ ಸಿಕ್ಕಿಹಾಕಿಕೊಂಡುದಕ್ಕೂ ಮತ್ತು ಸಂಕಟದಿಂದ ಮುಕ್ತರಾದುದಕ್ಕೂ ಯದ್ಯಪಿ ತಾನೇ ಕಾರಣನಾದರೂ ಅಂಬರೀಷ ಮಹಾರಾಜನು ಭಗವಂತನ ಮಹಿಮೆಯಿಂದ ಎಲ್ಲವೂ ಆಯಿತೆಂದು ಭಾವಿಸಿದನೇ ಹೊರತು ತನ್ನಿಂದ ಹೀಗಾಯಿತೆಂದು ಕ್ಷಣಮಾತ್ರವೂ ಅವನು ಭಾವಿಸಿಕೊಳ್ಳಲಿಲ್ಲ. ಇಂತಹ ಸದ್ಗುಣಗಳ ಮೂಲಕವಾಗಿ ಪರಬ್ರಹ್ಮ ಪರಮಾತ್ಮನಾದ ವಾಸುದೇವನಲ್ಲಿ ತನ್ನ ಭಕ್ತಿಭಾವವನ್ನು ಬಹಳವಾಗಿ ವೃದ್ಧಿಪಡಿಸಿಕೊಂಡನು. ಆತನು ಭಕ್ತಿಭಾವದ ಪರಾಕಾಷ್ಠೆಯಿಂದಾಗಿ ಬ್ರಹ್ಮಲೋಕದ ಪರ್ಯಂತವಾಗಿರುವ ಸಮಸ್ತ ಭೋಗಪ್ರದವಾದ ಲೋಕಗಳನ್ನೂ ನರಕಲೋಕಗಳೆಂದೇ ಭಾವಿಸಿದನು. ಬಳಿಕ ಅಂಬರೀಷ ಮಹಾರಾಜನು ತನಗೆ ಸಮಾನಗುಣಶೀಲರಾಗಿದ್ದ ಮಕ್ಕಳಿಗೆ ರಾಜ್ಯಭಾರವನ್ನು ಒಪ್ಪಿಸಿ ಕಾಡಿಗೆ ಹೊರಟು ಹೋದನು. ಅಲ್ಲಿ ಧೀರನಾದ ಅಂಬರೀಷ ಮಹಾರಾಜನು ಶ್ರೀಭಗವಂತನಾದ ವಾಸುದೇವನಲ್ಲಿ ತನ್ನ ಮನಸ್ಸನ್ನು ಲೀನಗೊಳಿಸಿ ಗುಣತ್ರಯಗಳ ಪ್ರವಾಹರೂಪವಾದ ಸಂಸಾರದಿಂದ ಬಿಡುಗಡೆ ಹೊಂದಿದನು.

ರಾಮಾಯಣದಲ್ಲಿ ಅಂಬರೀಷ

[ಬದಲಾಯಿಸಿ]

ರಾಮಾಯಣದಲ್ಲಿ ಅಂಬರೀಷನ ಬಗ್ಗೆ ಐತ್ತ್ರೇಯ ಬ್ರಾಹ್ಮಣದ ಒಂದು ಉಲ್ಲೇಖವಿದ್ದು, ರಾಜಾ ಹರಿಶ್ಚಂದ್ರನ ಕಥೆಯಿದೆ. ಆ ಉಲ್ಲೇಖದಲ್ಲಿ ರಾಜನ ಹೆಸರು ಹರಿಶ್ಚಂದ್ರನ ಬದಲು ಅಂಬರೀಷ ಎಂದಿದೆ. ಐತಿಹ್ಯದ ಪ್ರಕಾರ, ಅಂಬರೀಷ ತನ್ನ ರಾಜಧಾನಿ ಅಯೋಧ್ಯೆಯಲ್ಲಿ ಅಶ್ವಮೇಧ ಯಾಗ ನಡೆಸಿರುತ್ತಾನೆ. ಯಾಗದ ಫಲವನ್ನು ದೇವರುಗಳ ರಾಜ ಇಂದ್ರನು ಕದ್ದು ಒಯ್ಯುತ್ತಾನೆ. ಯಾಗದ ಫಲಕ್ಕಾಗಿ ಬೇರೊಂದು ಪ್ರಾಣಿಯನ್ನೋ ಅಥವಾ ನರಬಲಿಯನ್ನು ನೀಡಬೇಕೆಂದೂ, ಇಲ್ಲದಿದ್ದಲ್ಲಿ ಪಾಪ ತಟ್ಟುವುದು ಎಂದು ಯಾಗ ಪುರೋಹಿತರು ಅಂಬರೀಷನಿಗೆ ತಿಳಿಸುತ್ತಾರೆ. ಎಷ್ಟು ಹುಡುಕಿದರೂ ಕೂಡಾ, ಯಾವ ಪ್ರಾಣಿಯೂ ಸಿಗದಾದಾಗೆ ತನ್ನ ಮಗ ಶುನಃಶೇಪನನ್ನೇ ಯಾಗಕ್ಕೆ ಬಲಿ ನೀಡಲು ಅಂಬರೀಷ ಮುಂದಾಗುತ್ತಾನೆ. ವಿಶ್ವಾಮಿತ್ರರಿಂದ ಕಲಿತ ಎರಡು ಮಂತ್ರಗಳನ್ನು ಪಠಿಸುತ್ತಾ ಶುನಃಶೇಪ ಆನಂದದಿಂದ ಯಾಗಕುಂಡಕ್ಕೆ ಧುಮುಕುತ್ತಾನೆ. ಮಂತ್ರದ ಪ್ರಭಾವದಿಂದಲೂ, ದೈವದ ಅನುಗ್ರಹದಿಂದಲೂ ಶುನಃಶೇಪನಿಗೆ ಯಾವ ಕುತ್ತೂ ಆಗುವುದಿಲ್ಲ. ಇದು ಐತ್ತ್ರೇಯ ಬ್ರಾಹ್ಮಣದಲ್ಲಿ ಅಂಬರೀಷನ ಕಥೆ.[][]

ಅದ್ಭುತರಾಮಾಯಣದಲ್ಲಿ ಅಂಬರೀಷ

[ಬದಲಾಯಿಸಿ]

ಅದ್ಭುತರಾಮಾಯಣದ ಪ್ರಕಾರ ಇವನ ಮಗಳಾದ ಶ್ರೀಮತಿಯನ್ನು ಮೋಹಿಸಿ ಬಂದ ಪರ್ವತ ನಾರದರು ವಿಷ್ಣುವಿನ ಮಾಯೆಯಿಂದ ಕಪಿಕೋಡಗಗಳಾಗಿ ಕಾಣಿಸಿದುದರಿಂದ ಅವಳು ಇವರಿಗೆ ಮಾಲೆ ಹಾಕದೆ ಇವರ ಮಧ್ಯೆ ಕಾಣಿಸಿಕೊಂಡ ವಿಷ್ಣುವಿಗೆ ಮಾಲೆ ಹಾಕಿದಳು. ಕೋಪಗೊಂಡ ಪರ್ವತ ನಾರದರು ಅಂಬರೀಷನನ್ನು ಶಪಿಸಲು ಹೋಗಿ ವಿಷ್ಣುಚಕ್ರದಿಂದ ಪರಾಜಿತರಾದರು.

ಹೊರಗಿನ ಕೊಂಡಿಗಳು

[ಬದಲಾಯಿಸಿ]

[] []

ಉಲ್ಲೇಖಗಳು

[ಬದಲಾಯಿಸಿ]
  1. Pargiter, F.E. (1972) [1922]. Ancient Indian Historical Tradition, Delhi: Motilal Banarsidass, p.92.
  2. Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 66.
  3. Asian Mythologies. University of Chicago Press. 1993. p. 54. ISBN 9780226064567. {{cite book}}: Unknown parameter |authors= ignored (help)
  4. David Shulman (1993). "Sunahsepa: The Riddle of Fathers and Sons". The Hungry God: Hindu Tales of Filicide and Devotion. University of Chicago Press. pp. 87–105. ISBN 9780226755717.
  5. http://vedabase.net/sb/9/4/en
  6. http://www.srimadbhagavatam.org/canto9/chapter4.html


"https://kn.wikipedia.org/w/index.php?title=ಅಂಬರೀಷ&oldid=1301019" ಇಂದ ಪಡೆಯಲ್ಪಟ್ಟಿದೆ