ಅಂತಾರಾಷ್ಟ್ರೀಯ ಭೂಪಟಶಾಸ್ತ್ರ ಸಂಘ
ಅಂತಾರಾಷ್ಟ್ರೀಯ ಭೂಪಟಶಾಸ್ತ್ರ ಸಂಘ
[ಬದಲಾಯಿಸಿ]ಅಂತಾರಾಷ್ಟ್ರೀಯ ಭೌಗೋಳಿಕ ಒಕ್ಕೂಟದಿಂದಲೇ ಉದ್ಭವಿಸಿದ ಈ ಸಂಘ ಇನ್ನೂ ಒಕ್ಕೂಟದ ಸಂಯೋಜಿತ ಸಂಘ ವಾಗಿಯೇ ಉಳಿದುಕೊಂಡಿದೆ. ಈ ಸಂಘದ ಧ್ಯೇಯಗಳೆಂದರೆ: 1. ದಕ್ಷಿಣ ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಆಕೃತಿ ವಿಸ್ತಾರಗಳನ್ನು ತ್ರಿಕೋಣಮಾನದಿಂದ ನಿರ್ಣಯಿಸುವುದು. 2. ಭೂಗೋಳಶಾಸ್ತ್ರದ ಅಧ್ಯಯನದ ವಿವಿಧಘಟ್ಟಗಳಲ್ಲಿ ಪ್ರದೇಶವಿವರಣೆಯ ಭೂಪಟಗಳಿಗೆ ಪ್ರಾಮುಖ್ಯ ಕೊಡುವುದು. 3. ಸಮುದ್ರ ಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ನಿರ್ಧರಿಸಲು ಭೂಮಿಯ ಕೆಲವು ಮೇಲ್ಮೈ ಭಾಗಗಳನ್ನು ನಿಖರವಾಗಿ ಸಮಗೊಳಿಸಲು ಇರುವ ಅಗತ್ಯ. 4. ಭೂಗೋಳವೊಂದನ್ನು 1:1,000,000ರ ಮಾಪಕದಲ್ಲಿ ತಯಾರಿಸಲು ಒಂದು ಪ್ರಯೋಗತಂತ್ರವನ್ನು ರೂಪಿಸುವುದು.
ಮೇಲೆ ತಿಳಿಸಿದ ಮಾಪಕದ ರೀತ್ಯಾ ಭೂಪಟದ ರಚನೆಗೆ ಸಂಬಂಧಿಸಿದ ಕಾರ್ಯವನ್ನು ನಡೆಸಲು ಸಂಘ 1891ರಲ್ಲಿ ಬರ್ನ್ನಲ್ಲಿ ಸ್ಪೇನಿನ ಕರ್ನಲ್ ಕೋಎಲ್ಲೊ ಅವರ ನೇತೃತ್ವದಲ್ಲಿ ಒಂದು ಸಮರ್ಥ ನಕ್ಷಾಶಾಸ್ತ್ರ ಸಮಿತಿಯನ್ನು ರಚಿಸಿತು. ಸಂಘದ ಮೂರು ಅಧಿವೇಶನಗಳು ಸ್ಟಾಕ್ಹೋಂನಲ್ಲಿ (1960), ಲಂಡನ್ನಲ್ಲಿ (1964) ಮತ್ತು ನವದೆಹಲಿಯಲ್ಲಿ (1968) ನಡೆದುವು. ಇದಕ್ಕೆ ಮೊದಲು 1925ರಲ್ಲಿ ಈಜಿಪ್ಟಿನ ದೊರೆ ಫೌದ್ನ ಆಶ್ರಯದಲ್ಲಿ 1908ರಲ್ಲಿ ಜಿನೀವ ಅಧಿವೇಶನದಲ್ಲಿ ಪ್ರಾರಂಭವಾದ ಪ್ರಪಂಚದ ಉಬ್ಬುಚಿತ್ರ ಭೂಪಟದ ಕಾರ್ಯವನ್ನು ಪುರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಪ್ರಧಾನವಾಗಿ ಎದ್ದುಕಾಣುವ ಹಾಗೂ ಮೇಲ್ಮೈಲಕ್ಷಣಗಳನ್ನು ತೋರಿಸುವ ಭೂಪಟಗಳನ್ನು ಅಚ್ಚುಹಾಕಲು ಯುದ್ಧಾನಂತರ ಕಾಲಗಳಲ್ಲಿ ಹೊಸ ಹೊಸ ತಂತ್ರಗಳನ್ನು ರೂಪಿಸಲಾಗಿದೆ.
1968ರಲ್ಲಿ ನವದೆಹಲಿಯಲ್ಲಿ ಸೇರಿದ ಅಧಿವೇಶನದಲ್ಲಿ 1. ನಕ್ಷಾಶಾಸ್ತ್ರಜ್ಞರ ತರಬೇತಿ, 2. ತಾಂತ್ರಿಕ ಪದಗಳ ವ್ಯಾಖ್ಯೆ, ವರ್ಗೀಕರಣ ಹಾಗೂ ಅವುಗಳ ಪ್ರಮಾಣನಿಷ್ಕರ್ಷೆ, 3. ನಕ್ಷಾಶಾಸ್ತ್ರದಲ್ಲಿ ಸ್ವಯಂಚಾಲನ ವ್ಯವಸ್ಥೆ-ಈ ಅಂಶಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಅಂತಾರಾಷ್ಟ್ರೀಯ ಭೌಗೋಳಿಕ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ನಕ್ಷಾಶಾಸ್ತ್ರ ಸಂಘದ ಜಂಟಿ ಅಧಿವೇಶನ ಎರಡೂ ವಿಭಾಗಗಳಲ್ಲಿ ಪರಿಣತರ ಸಂಪೂರ್ಣ ಸಹಕಾರಕ್ಕೆ ಕರೆನೀಡಿತು.