ಅಂತಾರಾಷ್ಟ್ರೀಯಗಳು
ಅಂತಾರಾಷ್ಟ್ರೀಯಗಳು
[ಬದಲಾಯಿಸಿ]ಇದು ಪಾಶ್ಚಾತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಅರ್ಥವನ್ನು ಪಡೆದಿದೆ. ವಿವಿಧ ಕಾಲಘಟ್ಟಗಳಲ್ಲಿ ಅನೇಕ ಶ್ರಮಜೀವಿಗಳ ಸಂಘಗಳೂ ಸಮ್ಮೇಳನಗಳೂ ಅಂತಾರಾಷ್ಟ್ರೀಯವೆಂಬ ಹೆಸರನ್ನು ಹೊಂದಿದ್ದರೂ ಬಂಡವಾಳ ಪದ್ಧತಿಯ ವಿರುದ್ಧ ಹೋರಾಟ ನಡೆಸಿ ಸಮಾಜವಾದ ತತ್ತ್ವವನ್ನು ಅವಲಂಬಿಸಿದ ಶ್ರಮಜೀವಿಗಳ ಮೂರು ಅಂತಾರಾಷ್ಟ್ರೀಯ ಸಂಸ್ಥೆಗಳು ಮಾತ್ರ ಚರಿತ್ರೆಯಲ್ಲಿ ಅಂತಾರಾಷ್ಟ್ರೀಯಗಳು ಎಂದು ಪ್ರಸಿದ್ಧಿಯಾಗಿವೆ. ಇವುಗಳಲ್ಲಿ ಮೊದಲನೆಯದಾದ ಅಂತಾರಾಷ್ಟ್ರೀಯ ಕೂಲಿಗಾರರ ಸಂಘ 1864ನೆಯ ಸೆಪ್ಟೆಂಬರ್ 28ರಂದು ಲಂಡನ್ನಿನಲ್ಲಿ ಸ್ಥಾಪಿತವಾಗಿ ಹನ್ನೆರಡು ವರ್ಷಗಳ ಕಾಲ ಕೆಲಸ ಮಾಡಿ 1876ರಲ್ಲಿ ಅಂತ್ಯಗೊಂಡಿತು. ಇದೇ ಚರಿತ್ರೆಯಲ್ಲಿ ಪ್ರಸಿದ್ಧವಾಗಿರುವ ಅಂತಾರಾಷ್ಟ್ರೀಯ I . ಕಾರ್ಲ್ಮಾಕ್ರ್್ಸ ಮತ್ತು ಎಂಗೆಲ್್ಸ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಈ ಸಂಸ್ಥೆ ತನ್ನ ಕಾರ್ಯಕ್ರಮವನ್ನು 1866ರಲ್ಲಿ ಪ್ರಚುರಪಡಿಸಿತು. ಇದರ ಧೋರಣೆ ಅತ್ಯಂತ ಕ್ರಾಂತಿಕಾರಿಯಾದುದರಿಂದ ಸಮಾಜವಾದಿಗಳು ಇಂದೂ ಇದರ ಬಗೆಗೆ ಗೌರವವನ್ನು ಹೊಂದಿದ್ದಾರೆ. ಪ್ರಥಮ ಅಂತಾರಾಷ್ಟ್ರೀಯ ಮುಕ್ತಾಯಗೊಂಡ 15 ವರ್ಷಗಳ ಅನಂತರ ಅಂತಾರಾಷ್ಟ್ರೀಯ II ಹುಟ್ಟಿಕೊಂಡಿತು. ಇದರ ಮುಖಂಡರು ಹೆಚ್ಚಾಗಿ ಸಮತಾವಾದಿಗಳು. ಮೊದಲನೆಯ ಮಹಾಯುದ್ಧದವರೆಗೂ ಇದು ಜಾಗತಿಕ ಸಮತಾವಾದಿಗಳ ಪ್ರತಿನಿಧಿ ಸಂಸ್ಥೆಯಾಗಿತ್ತು. ಆದರೆ ಯುದ್ಧಕಾಲದಲ್ಲಿ ಇದರಲ್ಲಿ ಒಡಕು ಹುಟ್ಟಿದ್ದರಿಂದ 1919ರಲ್ಲಿ ಅಂತಾರಾಷ್ಟ್ರೀಯ III ರ ನಿರ್ಮಾಣ ಅಗತ್ಯವಾಯಿತು. ಈ ಕಮ್ಯೂನಿಸ್್ಟ ಅಂತಾರಾಷ್ಟ್ರೀಯ 1943ರವರೆಗೆ ಕೆಲಸ ಮಾಡಿ ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಅಂತ್ಯಗೊಂಡಿತು
ಅಂತಾರಾಷ್ಟ್ರೀಯ I (1864-76) : ಈ ಸಂಸ್ಥೆ ಆಧುನಿಕ ಶ್ರಮಜೀವಿಗಳ ಚಳವಳಿಗೆ ಅಗತ್ಯವಾದ ತಾತ್ತ್ವಿಕ ಮತ್ತು ಸಂಘಟನಾತ್ಮಕ ತಳಹದಿಯನ್ನು ಹಾಕಿಕೊಟ್ಟಿತು. ಇದರ ಮೂಲಕ ಮಾಕ್ರ್್ಸ ಮತ್ತು ಎಂಗೆಲ್ಸರ ವೈಜ್ಞಾನಿಕ ಸಮಾಜವಾದ ಜನಾದರಣೀಯವಾಯಿತಲ್ಲದೆ ಶ್ರಮಜೀವಿಪಕ್ಷಗಳ ರಾಜಕೀಯ ಕರ್ತವ್ಯ ಮತ್ತು ಧೋರಣೆ ನಿರ್ದಿಷ್ಟಗೊಂಡಿತು
ಈ ಸಂಸ್ಥೆ ತನ್ನ ಹನ್ನೆರಡು ವರ್ಷಗಳ ಅಸ್ತಿತ್ವದಲ್ಲಿ ಪ್ರಪಂಚದ ನಾನಾ ಭಾಗಗಳಲ್ಲಿ ಸಣ್ಣಪುಟ್ಟ ಗುಂಪುಗಳಾಗಿ ಚದುರಿಹೋಗಿದ್ದ ಕೂಲಿಗಾರರ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದುಗೂಡಿಸಿ ಬಲಪಡಿಸಿತು. ಇದರ ಮೊದಲ ನಾಲ್ಕು ಸಮ್ಮೇಳನಗಳು ಜಿನೀವ (1866), ಲಾಸೇನ್(1867), ಬ್ರಸೆಲ್್ಸ (1868) ಮತ್ತು ಬಾಸೆಲ್ (1869) ನಗರಗಳಲ್ಲಿ ಸಮಾವೇಶಗೊಂಡುವು. ಈ ಸಮ್ಮೇಳನಗಳ ಮೂಲಕ ಯುರೋಪಿನ ಶ್ರಮಜೀವಿಗಳ ಅನೇಕ ಚಳವಳಿಗಳಿಗೆ ಬೆಂಬಲಕೊಟ್ಟು ಕೂಲಿಗಾರರ ಅಂತಾರಾಷ್ಟ್ರೀಯ ಒಕ್ಕೂಟ ಸ್ಥಾಪನೆಯಾಯಿತು. ಇದರ ಪ್ರಭಾವ ಪುರ್ವ ಯುರೋಪಿನ ಪೋಲೆಂಡ್ ಮತ್ತು ಹಂಗೆರಿಯವರೆಗೂ ವ್ಯಾಪಿಸಿತ್ತು. ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಇದರ ಅಂಗಸಂಸ್ಥೆಗಳ ಸಂಖ್ಯೆ ಹೆಚ್ಚಿತು. ಅಲ್ಲದೆ ಅಂದಿನ ಯುರೋಪಿನ ಪ್ರತಿಯೊಂದು ಕ್ರಾಂತಿಕಾರಿ ಚಳವಳಿಗೂ ಇದು ಪ್ರೇರಕಶಕ್ತಿಯಾಗಿತ್ತು. ಪ್ಯಾರಿಸ್ ಕಮ್ಯೂನ್ (1871) ಚಳವಳಿಯಲ್ಲಿ ಇದು ನೇರವಾಗಿ ಭಾಗವಹಿಸದಿದ್ದರೂ ಅದರ ಮೇಲೆ ತನ್ನ ಪ್ರಭಾವವನ್ನು ಬೀರಿತು.
ಪ್ಯಾರಿಸ್ ಕಮ್ಯೂನ್ ಚಳವಳಿ ಮುಗಿದ ಅನಂತರ ಅದರ ಕಾರ್ಯಚಟುವಟಿಕೆಗಳು ಇಳಿಮುಖವಾಗುತ್ತ ಬಂದುವು. ಬ್ರಿಟನ್ನಿನ ಕಾರ್ಮಿಕ ಸಂಘಗಳು ತಮ್ಮ ಸ್ವಂತ ವ್ಯವಹಾರಗಳಲ್ಲಿ ಮಗ್ನರಾಗಿ ಅಂತಾರಾಷ್ಟ್ರೀಯದ ಕೆಲಸಗಳಿಂದ ದೂರವಾಗುತ್ತ ಬಂದುವು. ಜರ್ಮನ್ ಸಮತಾವಾದಿಗಳು ಆ ಕಾಲದಲ್ಲಿ ಸಂಘಸಂಸ್ಥೆಗಳಲ್ಲಿ ಭಾಗವಹಿಸಲು ಆ ದೇಶದ ಕಾನೂನಿನ ತಡೆಯಿತ್ತು. ಇಂಟರ್ನ್ಯಾಷನಲ್ಲಿನ ಚಟುವಟಿಕೆಗಳಿಂದ ಅಮೆರಿಕ ದೂರ ಸರಿದಿತ್ತು. ಕಾರ್ಮಿಕ ವಲಯಗಳಲ್ಲಿ ಪ್ರಥಮ ಅಂತಾರಾಷ್ಟ್ರೀಯದ ಪ್ರಭಾವ ಮತ್ತು ಘನತೆ ಬಹಳ ಹೆಚ್ಚಾಗಿದ್ದಿತಾದರೂ ಇದಕ್ಕೆ ಸಾಧನಸಂಪತ್ತುಗಳ ಕೊರತೆ ಬಹುವಾಗಿತ್ತು. ಅಲ್ಲದೆ ಇದರ ನಾಲ್ಕನೆಯ ಸಮ್ಮೇಳನದಲ್ಲಿ ಈ ಸಂಸ್ಥೆಯನ್ನು ಪ್ರವೇಶಿಸಿದ ಅರಾಜಕತಾವಾದಿ ಬಕುನಿನ್ ಮತ್ತು ಅನುಯಾಯಿಗಳು ಇದರ ಪತನಕ್ಕೆ ಕಾರಣರಾದರು. 1872ರಲ್ಲಿ ಹೇಗ್ನಲ್ಲಿ ನಡೆದ ಸಮ್ಮೇಳನದಲ್ಲಿ ಮಾಕ್ರ್ಸವಾದಿಗಳಿಗೂ ಅರಾಜಕತಾವಾದಿಗಳಿಗೂ ವಿರೋಧ ಬೆಳೆದು ಬಕುನಿನ್ ಮಾಕ್ರ್್ಸ ಪಕ್ಷದಿಂದ ಹೊರಗೆ ಬರಬೇಕಾಯಿತು. ಇವನು ಇಟಲಿಯ ಮತ್ತು ಸ್ಪೇನಿನ ಪ್ರತಿನಿಧಿಗಳನ್ನು ಸೇರಿಸಿಕೊಂಡು ಮಾಕ್ರ್್ಸ ಪಕ್ಷದ ವಿರುದ್ಧ ಬೇಕೆಂದು ಹೊಸ ಅಂತಾರಾಷ್ಟ್ರೀಯ ಒಂದನ್ನು ಸ್ಥಾಪಿಸಿದನು. ಈ ಸಂದರ್ಭದಲ್ಲಿ ಹಳೆಯ ಅಂತಾರಾಷ್ಟ್ರೀಯವನ್ನು ನ್ಯೂಯಾರ್ಕಿಗೆ ವರ್ಗಾಯಿಸಲಾಯಿತು. ಆದರೆ ಇದು ಅಲ್ಲೂ ಬಹಳಕಾಲ ಉಳಿಯಲಿಲ್ಲ. 1874 ಮತ್ತು 1876ರಲ್ಲಿ ಎರಡು ಸಮ್ಮೇಳನಗಳನ್ನು ನಡೆಸಿದ ಅನಂತರ ಅದರ ವಿಸರ್ಜನೆಯಾಯಿತು
ಅಂತಾರಾಷ್ಟ್ರೀಯ II (1889-1914) : ಬ್ಯಾಸ್ಟೀಲ್ ಪತನದ ಶತಾಬ್ದಿಯ ಸಮಾರಂಭದಲ್ಲಿ ಎರಡನೆಯ ಅಂತಾರಾಷ್ಟ್ರೀಯದ ಉದಯವಾಯಿತು. ಫ್ರೆಂಚ್ ಮತ್ತು ಜರ್ಮನ್ ಮಾಕ್ರ್ಸವಾದಿಗಳು ಇದರ ಸ್ಥಾಪನೆಯ ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದರು. ಮೇ ಒಂದನೆಯ ತಾರೀಖನ್ನು ಅಂತಾರಾಷ್ಟ್ರೀಯ ಕೂಲಿಗಾರರ ದಿನವೆಂದು ಘೋಷಿಸಿದುದು ಇದರ ಮುಖ್ಯಸಾಧನೆ. ಮೊದಲನೆಯ ಅಂತಾರಾಷ್ಟ್ರೀಯದಂತೆ ಇದರ ಕೇಂದ್ರ ಸಂಸ್ಥೆ ಅಷ್ಟೇನೂ ಶಕ್ತಿಯುತವಾಗಿರಲಿಲ್ಲ. ಇದರ ಸಭೆಗಳಲ್ಲಿ ಕೂಲಿಗಾರರ ಸಂಘಗಳ ಸಾಮಾನ್ಯ ಸಮಸ್ಯೆಗಳ ಪರಿಹಾರವೇ ಮುಖ್ಯ ವಿಷಯವಾಗಿತ್ತು. ಆದರೆ 1911ರಿಂದ ಅದಕ್ಕಿಂತ ಹೆಚ್ಚು ವಿಶಾಲವಾದ ಯುದ್ಧ ಮತ್ತು ಶಾಂತಿಯ ವಿಷಯಗಳಲ್ಲಿ ಆಸಕ್ತಿವಹಿಸಲು ಪ್ರಾರಂಭಿಸಿತು. ಈ ಪ್ರಶ್ನೆ ಮೊಟ್ಟಮೊದಲಿಗೆ ಚರ್ಚೆಗೆ ಬಂದದ್ದು 1903ರ ಆಮ್್ಸಟರ್ಡ್ಯಾಂ ಸಮ್ಮೇಳನದಲ್ಲಿ. ಅಂದಿನಿಂದ ಯುದ್ಧ ಮತ್ತು ಶಾಂತಿಯ ವಿಚಾರವಾದ ಚರ್ಚೆ ಇದರ ಸಮ್ಮೇಳನಗಳಲ್ಲಿನ ಪ್ರಮುಖ ಪ್ರಶ್ನೆಯಾಯಿತು.
1911ರ ಅನಂತರ ಯುದ್ಧದ ಕಾರ್ಮೋಡಗಳು ಯುರೋಪನ್ನು ಆವರಿಸಿದುವು. ಅಗದಿರ್ ಘಟನೆ, ಇಟಲಿ-ತುರ್ಕಿ ಯುದ್ಧ ಮತ್ತು ಬಾಲ್ಕನ್ ಯುದ್ಧಗಳು ಮೊದಲನೆಯ ಮಹಾಯುದ್ಧದ ಮುನ್ಸೂಚನೆಗಳಾದುವು. ಪ್ರತಿಯೊಂದು ಸಮಾಜವಾದಿ ಪಕ್ಷವೂ ಯುದ್ಧನಿವಾರಣೆಯ ಕಾರ್ಯದಲ್ಲಿ ಆಸಕ್ತಿಗೊಂಡಿತು. 1912ರಲ್ಲಿ ಶ್ರಮಜೀವಿಗಳನ್ನು ಯುದ್ಧದಿಂದ ರಕ್ಷಿಸಿ ವಿಶ್ವಶಾಂತಿ ಸ್ಥಾಪಿಸಲು ಬಾಸೆಲ್ ನಗರದಲ್ಲಿ ಎರಡನೆಯ ಅಂತಾರಾಷ್ಟ್ರೀಯದ ವಿಶೇಷ ಸಮ್ಮೇಳನವನ್ನು ಕರೆಯಲಾಯಿತು. ಈ ಸಮ್ಮೇಳನ ಯುದ್ಧವನ್ನು ತಡೆಗಟ್ಟಲು ಸ್ಟುಟ್ಗಾರ್ಟ್ ಅಧಿವೇಶನದಲ್ಲಿ ಲೆನಿನ್ ಮತ್ತು ರೋಸಾ ಲಕ್ಸಂಬರ್ಗ್ ಮಂಡಿಸಿದ್ದ ಗೊತ್ತುವಳಿಯ ಆಧಾರದ ಮೇಲೆ, ಎಲ್ಲ ಕಾರ್ಮಿಕರೂ ತಮ್ಮ ರಾಜ್ಯಗಳು ಶಾಂತಿಯುತ ವಿದೇಶೀಯ ನೀತಿಯನ್ನು ಅನುಸರಿಸುವಂತೆ ಒತ್ತಾಯ ಮಾಡಬೇಕೆಂದು ಘೋಷಿಸಿತು. ಈ ಯುದ್ಧವಿರೋಧಿ ಚಳವಳಿಯೂ ಬಂಡವಾಳ ಪದ್ಧತಿಯ ವಿರುದ್ಧ ಚಳವಳಿಯ ಒಂದು ಮುಖ್ಯ ಅಂಗವಾಗುವಂತೆ ಅದನ್ನು ಮಾರ್ಪಡಿಸಬೇಕೆಂದೂ ಸೂಚಿಸಿತು. ಇದಾದಮೇಲೆ ವಿಯೆನ್ನಾದಲ್ಲಿ 1914ರಲ್ಲಿ ಸೇರಿದ ಸಮ್ಮೇಳನದಲ್ಲಿಯೂ ಈ ಪ್ರಶ್ನೆಯ ಚರ್ಚೆಗೆ ಇನ್ನೂ ಹೆಚ್ಚು ಪ್ರಾಶಸ್ತ್ಯ ದೊರೆಯಿತು. ಆದರೆ ಈ ಸಮ್ಮೇಳನ ಸೇರುವ ಮೊದಲೇ ಒಂದನೆಯ ಮಹಾಯುದ್ಧ ಪ್ರಾರಂಭವಾಗಿತ್ತು. ಇದರಿಂದಾಗಿ ಎಲ್ಲ ಅಂತಾರಾಷ್ಟ್ರೀಯ ಚಟುವಟಿಕೆಗಳೂ ಸ್ತಬ್ಧವಾದುವು. ಯುದ್ಧ ನಡೆಯುತ್ತಿದ್ದಾಗ ಅಂತಾರಾಷ್ಟ್ರೀಯದ ಕಾರ್ಯಕಾರಿ ಸಮಿತಿಯ ಸಭೆಗಳು ನಡೆಯಲಿಲ್ಲವಾದರೂ ಅಂತಾರಾಷ್ಟ್ರೀಯ ಚಟುವಟಿಕೆಗಳನ್ನು ಪುನರಾರಂಭಿಸಲು ಕೆಲವು ಪ್ರಯತ್ನಗಳು ನಡೆದುವು. ಡಚ್ ಮತ್ತು ಸ್ಕ್ಯಾಂಡಿನೇವಿಯನ್ ಸಂಘಗಳು ದ್ವಿತೀಯ ಅಂತಾರಾಷ್ಟ್ರೀಯದ ಕಾರ್ಯದರ್ಶಿ ಕ್ಯಾಮಿಲ್ ಹ್ಯೂಸ್ಮಾನ್್ಸನ ಬೆಂಬಲದಿಂದ ಸ್ಟಾಕ್ಹೋಂನಲ್ಲಿ 1917ರಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಕರೆಯಲು ಪ್ರಯತ್ನಿಸಿದುವು. ಮಿತ್ರರಾಷ್ಟ್ರಗಳು ಈ ಸಮ್ಮೇಳನದ ಸದಸ್ಯರಿಗೆ ರಹದಾರಿಯನ್ನು ಕೊಡಲು ನಿರಾಕರಿಸಿದುದರಿಂದ ಈ ಸಮ್ಮೇಳನ ನಡೆಯಲ್ಲಿಲ್ಲ. ಅನಂತರ ಜಿಮ್ಮರ್ವಾಲ್್ಡ ಮತ್ತು ಕೀನ್ಥಾಲ್ಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಕೇವಲ ಕೆಲವು ರಾಷ್ಟ್ರಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ಈ ಪ್ರತಿನಿಧಿಗಳೇ ಮುಂದೆ ತೃತೀಯ ಅಂತಾರಾಷ್ಟ್ರೀಯದ ಸ್ಥಾಪನೆಗೆ ಕಾರಣಕರ್ತರಾದರು.
ಮಾಕ್ರ್್ಸವಾದಿ ಸಂಸ್ಥೆಯಾಗಿ ಪ್ರಾರಂಭಗೊಂಡ ದ್ವಿತೀಯ ಅಂತಾರಾಷ್ಟ್ರೀಯವು ಪ್ರಗತಿವಿರೋಧಿಶಕ್ತಿಗಳ ಪಿತೂರಿಗಳಿಂದ ಸಮಯಸಾಧಕಶಕ್ತಿಗಳ ಕೈಗೊಂಬೆಯಾಗಿ ಪರಿಣಮಿಸಿತು. ಮೊದಲನೆಯ ಮಹಾಯುದ್ಧದ ಅನಂತರ ದ್ವಿತೀಯ ಅಂತಾರಾಷ್ಟ್ರೀಯವು ಪ್ರಪಂಚದ ಶ್ರಮಜೀವಿಗಳ ಮುನ್ನಡೆಗೆ ಕಂಟಕವಾಯಿತಲ್ಲದೆ ಸಮಾಜವಾದದ ಗುರಿಯಿಂದಲೂ ಹಿಮ್ಮೆಟ್ಟಿತು.
ಸಮಯಸಾಧಕ ಮುಂದಾಳುಗಳು ಈ ಅಂತಾರಾಷ್ಟ್ರೀಯದ ಕಡೆಯ ವರ್ಷಗಳಲ್ಲಿ ಸಮಾಜವಾದಿ ತತ್ತ್ವವನ್ನು ಕೈಬಿಟ್ಟು ಬೂಜರ್್ವ ಸುಧಾರಣಾ ನೀತಿಗೆ ಮಾರುಹೋಗಿ ಅದರ ಕ್ರಾಂತಿಕಾರಿ ನೀತಿಯನ್ನು ಮೊಟಕು ಮಾಡಿದರು. ಇದರಿಂದಾಗಿ ದ್ವಿತೀಯ ಅಂತಾರಾಷ್ಟ್ರೀಯ ಅವಸಾನಗೊಂಡಿತು.
ಪರಿಸ್ಥಿತಿ ಹೀಗಿದ್ದರೂ ದ್ವಿತೀಯ ಅಂತಾರಾಷ್ಟ್ರೀಯವು ಶ್ರಮಜೀವಿಗಳ ಅನೇಕ ಹೋರಾಟಗಳಲ್ಲಿ ಜಯಗಳಿಸಿ ಕಾರ್ಮಿಕಚಳವಳಿಯನ್ನು ಪ್ರಭಾವಶಾಲಿಯನ್ನಾಗಿ ಮಾಡಿತು. ಪಶ್ಚಿಮ ಯುರೋಪಿಗೆ ಮಾತ್ರ ಸೀಮಿತವಾಗಿದ್ದ ಕಾರ್ಮಿಕ ಚಳವಳಿ ದ್ವಿತೀಯ ಅಂತಾರಾಷ್ಟ್ರೀಯದ ಅವಧಿಯಲ್ಲಿ ಯುರೋಪಿನಾದ್ಯಂತ ಹರಡಿ ಅಮೆರಿಕವನ್ನೂ ಪ್ರವೇಶಿಸಿತು. ಆದರೆ ಅಂತಾರಾಷ್ಟ್ರೀಯ ಕಾರ್ಮಿಕರು ತಮ್ಮ ಸಮಾಜವಾದಿ ಗುರಿಯತ್ತ ಮುನ್ನಡೆಯಲು ಅಗತ್ಯವಾದ ಮುಂದಾಳುಗಳನ್ನು ಪಡೆಯಲು ತೃತೀಯ ಅಂತಾರಾಷ್ಟ್ರೀಯದವರೆಗೆ ಕಾಯಬೇಕಾಯಿತು. ಅಂತಾರಾಷ್ಟ್ರೀಯ III (1919-42) - ಒಂದನೆಯ ಮಹಾಯುದ್ಧದ ಅನಂತರ ಪೋಲೆಂಡ್, ಹಂಗೆರಿ, ಜರ್ಮನಿ, ಆಸ್ಟ್ರಿಯ, ರಷ್ಯ, ಫಿನ್ಲೆಂಡ್ ಮತ್ತು ಬಾಲ್ಕನ್ ಗಣರಾಜ್ಯಗಳ ಸಮಾಜವಾದೀ ಪಕ್ಷಗಳು 1919ರಲ್ಲಿ ತೃತೀಯ ಅಂತಾರಾಷ್ಟ್ರೀಯವನ್ನು ಸ್ಥಾಪಿಸಲು ಕರೆಗೊಟ್ಟುವು. ಮಾಸ್ಕೊ ನಗರದಲ್ಲಿ ಮಾರ್ಚ್ 1919ರಲ್ಲಿ 19 ರಾಷ್ಟ್ರಗಳ ಮಾಕ್ರ್್ಸವಾದಿ ಪಕ್ಷಗಳು ಲೆನಿನ್ನರ ಅಧ್ಯಕ್ಷತೆಯಲ್ಲಿ ಕಮ್ಯೂನಿಸ್ಟ ಅಂತಾರಾಷ್ಟ್ರೀಯ ಅಥವಾ ಕಾಮಿಂಟರ್ನ್ ಎಂದು ಚರಿತ್ರೆಯಲ್ಲಿ ಪ್ರಸಿದ್ಧವಾಗಿರುವ ತೃತೀಯ ಅಂತಾರಾಷ್ಟ್ರೀಯವನ್ನು ಸ್ಥಾಪಿಸಿದುವು. ಇದು ಸಮಾಜವಾದಿ (ಕಮ್ಯೂನಿಸಂ) ತತ್ತ್ವದಲ್ಲಿ ನಂಬಿಕೆಯುಳ್ಳ ಕಾರ್ಮಿಕ ಪಕ್ಷಗಳ ಅಂತಾರಾಷ್ಟ್ರೀಯ. ಮಾಕ್ರ್್ಸ ಮತ್ತು ಎಂಗೆಲ್್ಸ ಸ್ಥಾಪಿಸಿದ ಪ್ರಥಮ ಅಂತಾರಾಷ್ಟ್ರೀಯದ ಕ್ರಾಂತಿಕಾರಿ ಧೋರಣೆ ಮತ್ತು ನೀತಿಯನ್ನು ಇದು ಎತ್ತಿಹಿಡಿದು ಕಟ್ಟುನಿಟ್ಟಾಗಿ ಸಮಾಜವಾದಿ ತತ್ತ್ವವನ್ನು ಪಾಲಿಸಲು ಶ್ರಮಿಸಿತು. ಪ್ರಪಂಚದ ಕಾರ್ಮಿಕ ಚಳವಳಿಯನ್ನು ತ್ವರಿತಗೊಳಿಸಿ ಸಮಾಜವಾದಿರಾಷ್ಟ್ರಗಳ ಸ್ಥಾಪನೆಯನ್ನು ಸಾಧಿಸುವುದೇ ಇದರ ಮುಖ್ಯ ಗುರಿ.
ಪ್ರಥಮ ಅಂತಾರಾಷ್ಟ್ರೀಯ ಶ್ರಮಜೀವಿಗಳ ಚಳವಳಿಗೆ ತಾತ್ತ್ವಿಕ ತಳಹದಿಯನ್ನು ಹಾಕಿಕೊಟ್ಟಿತು. ದ್ವಿತೀಯ ಅಂತಾರಾಷ್ಟ್ರೀಯದ ಮೂಲಕ ಈ ಚಳವಳಿಯು ಕಾರ್ಯಕಾರಿಯಾಗಿ ಯುರೋಪಿನಾದ್ಯಂತ ಹರಡಿದುದಲ್ಲದೆ ಅಮೆರಿಕದ ಮೇಲೂ ತನ್ನ ಪ್ರಭಾವವನ್ನು ಬೀರಿತು. ತೃತೀಯ ಅಂತಾರಾಷ್ಟ್ರೀಯವು ಶ್ರಮಜೀವಿಗಳ ಪ್ರಭುತ್ವವನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಿತು. ಬೂರ್ಜ್ವಾ ಪಕ್ಷಗಳೊಡನೆ ರಾಜಿ ಮತ್ತು ಸಹಕಾರ ನೀತಿಯನ್ನು ತೊರೆದು ಕ್ರಾಂತಿಕಾರಿ ಶ್ರಮಜೀವಿಪಕ್ಷಗಳನ್ನು ನಿರ್ಮಾಣಮಾಡಿ ಸಮಾಜವಾದಿರಾಷ್ಟ್ರಗಳ ಸ್ಥಾಪನೆಯ ದಿಶೆಯಲ್ಲಿ ಮುನ್ನುಗ್ಗಿತು.
ತೃತೀಯ ಅಂತಾರಾಷ್ಟ್ರೀಯದ ಎಲ್ಲ ಅಂಗಸಂಸ್ಥೆಗಳೂ ಕೇಂದ್ರ ಸಂಸ್ಥೆಯ ನಿರ್ಧಾರಗಳನ್ನು ಮತ್ತು ಕಾರ್ಯಕ್ರಮಗಳನ್ನು ಅನುಸರಿಸಿ ಕೆಲಸ ಮಾಡಬೇಕಾಗಿತ್ತು. ಇದರ ಎಲ್ಲ ಕಾರ್ಯಕ್ರಮಗಳೂ ಮಾಕ್ರ್ಸ, ಎಂಗೆಲ್ಸ ಮತ್ತು ಲೆನಿನ್ನರ ತತ್ವ್ತಗಳ ಆಧಾರದ ಮೇಲೆ ನಿರ್ದಿಷ್ಟ ರೂಪ ತಾಳಿ ಸಮಾಜವಾದಿ ರಾಷ್ಟ್ರಗಳನ್ನು ರಚಿಸಲು ದಾರಿ ಮಾಡಿಕೊಟ್ಟವು.
ಈ ಅಂತಾರಾಷ್ಟ್ರೀಯದ ಅಂಗಸಂಸ್ಥೆಗಳೆಲ್ಲವೂ ರಷ್ಯದ ಸಮಾಜವಾದಿ ಪಕ್ಷದ ರೀತಿಯಲ್ಲಿ ರಚಿತವಾದುವುಗಳಲ್ಲ; ಯುರೋಪಿನ ಮತ್ತು ಇತರ ದೇಶಗಳ ಸಮಾಜವಾದಿ ಪಕ್ಷಗಳು ಯಾರು ಬೇಕಾದರೂ ಸೇರಬಹುದಾದಂಥ ವಿಶಾಲ ಧೋರಣೆಯ ಸಂಸ್ಥೆಗಳು. ಅಂತಾರಾಷ್ಟ್ರೀಯವು ನಿರ್ಧರಿಸಿದ ರೀತಿನೀತಿಗಳನ್ನು ಅನುಸರಿಸಬೇಕಾದಾಗ ತಮ್ಮ ಆಂತರಿಕ ವ್ಯವಹಾರಗಳಲ್ಲಿ ತಾವು ಪ್ರತಿನಿಧಿಸುವ ರಾಷ್ಟ್ರಗಳ ರಾಜಕೀಯ ಪರಿಸ್ಥಿತಿಗನುಗುಣವಾಗಿ ಮಾರ್ಪಾಡು ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲ ಅಂಗಸಂಸ್ಥೆಗಳಿಗೂ ಇತ್ತು. ಪ್ರಜಾಪ್ರಭುತ್ವ ಬೇರೂರಿದ ರಾಷ್ಟ್ರಗಳಲ್ಲಿ ಕಮ್ಯೂನಿಸ್ಟರು ಅಲ್ಲಿನ ಪಾರ್ಲಿಮೆಂಟುಗಳಲ್ಲಿ ಭಾಗವಹಿಸಿ ಅದರ ಕಾರ್ಯಕಲಾಪಗಳಲ್ಲಿ ನೆರವಾಗುತ್ತಿದ್ದರು. ಅನೇಕ ವೇಳೆ ಇವರು ಇತರ ಸಮಾಜವಾದಿ (ಸೋಷಿಯಲಿಸ್ಟ) ಪಕ್ಷಗಳೊಡನೆ ಒಕ್ಕೂಟವನ್ನೇರ್ಪಡಿಸಿಕೊಂಡು ಸಮಾಜಸುಧಾರಣಾ ಕಾರ್ಯಗಳಲ್ಲಿ ನೆರವಾಗುತ್ತಿದ್ದರು. ಕಮ್ಯೂನಿಸ್ಟ ಅಂತಾರಾಷ್ಟ್ರೀಯದ ಸದಸ್ಯತ್ವ ಪಡೆಯಲು ಪ್ರತಿಯೊಂದು ಅಂಗಸಂಸ್ಥೆಯೂ ತನ್ನ ದೇಶದಲ್ಲಿ ಸಮಾಜವಾದಿ ಪಕ್ಷವನ್ನು ನಿರ್ಮಾಣಮಾಡಿ ಅಲ್ಲಿನ ಕಾರ್ಮಿಕ ಸಂಘಗಳಲ್ಲಿ, ಸಹಕಾರಿ ಸಂಘಗಳಲ್ಲಿ ಮತ್ತು ಜನಸಾಮಾನ್ಯರ ಸಂಘಸಂಸ್ಥೆಗಳಲ್ಲಿ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಲ್ಲದೆ ಸದಸ್ಯತ್ವದ ಅರ್ಹತೆ ಪಡೆಯುವಂತಿರಲಿಲ್ಲ. ತನ್ನ ಕ್ರಾಂತಿಕಾರಿ ನೀತಿಯನ್ನು ಸಾಧಿಸುವ ದಿಶೆಯಲ್ಲಿ ತೃತೀಯ ಅಂತಾರಾಷ್ಟ್ರೀಯ ಬಹುಮಟ್ಟಿಗೆ ಜಯಪ್ರದವಾಗಿ ಕೆಲಸಮಾಡಿದೆ. ಪ್ರಪಂಚದ ಕಾರ್ಮಿಕ ಚಳವಳಿಯ ನಿರ್ದೇಶನದ ಭಾರವನ್ನು ಹೊತ್ತಿದ್ದ ಅದರ 24 ವರ್ಷಗಳ ಅವಧಿಯಲ್ಲಿ ಪ್ರಪಂಚದ ಮೂರನೆ ಒಂದು ಭಾಗದಲ್ಲಿ ಸಮಾಜವಾದಪರವಾದ ರಾಷ್ಟ್ರಗಳನ್ನು ನಿರ್ಮಾಣಮಾಡಿದೆ. ಈ ದಿಶೆಯಲ್ಲಿ ಇದು ಸಾಧಿಸಿದ ಮಹತ್ಕಾರ್ಯಗಳಲ್ಲಿ ಮೂರು ಚರಿತ್ರಾರ್ಹವಾದುವು .
ಮೊದಲನೆಯದಾಗಿ, ಇದು ಕಾರ್ಮಿಕಚಳವಳಿ ಯಶಸ್ವಿಯಾಗಿ ನಡೆಯಲು ಅಗತ್ಯವಾದ ತಾತ್ತ್ವಿಕ ಸಾಹಿತ್ಯವನ್ನು ಕಾರ್ಮಿಕ ಪಕ್ಷಗಳಿಗೆ ಒದಗಿಸಿಕೊಟ್ಟಿತು. ಎರಡನೆಯದಾಗಿ ಎಲ್ಲ ಪ್ರಮುಖ ಸಮಾಜವಾದಿ ಪಕ್ಷಗಳನ್ನೂ ಬಲಗೊಳಿಸಿ ಬಂಡವಾಳ ಪದ್ಧತಿಯ ದೋಷಗಳನ್ನು ಪ್ರಕಟಗೊಳಿಸಿತು. ಕಾರ್ಮಿಕಸಂಘಗಳಲ್ಲಿ, ಯುವಜನ ಸಂಘಗಳಲ್ಲಿ ಮತ್ತು ಜನಸಾಮಾನ್ಯರ ಇತರ ಸಂಘಗಳಲ್ಲಿ ತರಬೇತಿ ಹೊಂದುತ್ತಿದ್ದ ಲಕ್ಷಾಂತರ ಮಾಕ್ರ್್ಸವಾದಿಗಳೊಡನೆ ಇದರ ಎಲ್ಲ ಅಂಗಸಂಸ್ಥೆಗಳೂ ಸೇರಿಕೊಂಡು ತಮ್ಮ ಕ್ರಾಂತಿಕಾರಿ ಶಕ್ತಿಯನ್ನು ಊರ್ಜಿತಗೊಳಿಸಿಕೊಂಡುವು. ಮೂರನೆಯದಾಗಿ, ಇದರ ಆಶ್ರಯದಲ್ಲಿ ಅನೇಕ ಕ್ರಾಂತಿಕಾರಿಚಳವಳಿಗಳು ಪ್ರಪಂಚದಾದ್ಯಂತ ನಡೆದುವು. ರಷ್ಯದಲ್ಲಿ ನಡೆದ 1905 ಮತ್ತು 1917ರ ಚಳವಳಿಗಳೂ ಕಮ್ಯೂನಿಸ್್ಟ ಅಂತಾರಾಷ್ಟ್ರೀಯದ ನೇತೃತ್ವದಲ್ಲಿ ನಡೆದವುಗಳೇ. ಇದಲ್ಲದೆ ಆಸ್ಟ್ರಿಯ, ಜರ್ಮನಿ ಮತ್ತು ಹಂಗರಿಯಲ್ಲಿ ನಡೆದ ಕ್ರಾಂತಿಗಳೂ ಸ್ಪೇನಿನ ಅಂತರ್ಯುದ್ಧ ಮತ್ತು ವಸಾಹತು ಪ್ರದೇಶಗಳಲ್ಲಿ ನಡೆದ ಆಂದೋಲನಗಳೂ ತೃತೀಯ ಅಂತಾರಾಷ್ಟ್ರೀಯದ ಬೆಂಬಲ ಮತ್ತು ನಿರ್ದೇಶನದ ಮೂಲಕ ನಡೆದುವು.
ಎರಡನೆಯ ಮಹಾಯುದ್ಧದ ಕಾಲಕ್ಕೆ ಪ್ರಪಂಚದ ನಾನಾ ಭಾಗಗಳಲ್ಲಿ ಸ್ಥಳೀಯ ಪರಿಸ್ಥಿತಿಗಳು ಜಟಿಲಗೊಂಡು ಒಂದೊಂದು ರಾಷ್ಟ್ರದ ಕಾರ್ಮಿಕ ಚಳವಳಿಯನ್ನೂ ಕೇಂದ್ರಸಂಸ್ಥೆಯಾದ ತೃತೀಯ ಅಂತಾರಾಷ್ಟ್ರೀಯ ನಿರ್ವಹಿಸುವುದು ಕಷ್ಟವಾಗುತ್ತ ಬಂತು. ಇದರ ಮೊದಲ ಸಮ್ಮೇಳನ ಏರ್ಪಡಿಸಿದ್ದ ಸಂಘಟನಾ ವ್ಯವಸ್ಥೆ ಎರಡನೆಯ ಮಹಾಯುದ್ಧದ ಕಾಲಕ್ಕೆ ಸರಿಹೊಂದದೆ ಅಂತಾರಾಷ್ಟ್ರೀಯ ಚಳವಳಿಯನ್ನು ಬಲಪಡಿಸಲು ಮೂರನೆಯ ಅಂತಾರಾಷ್ಟ್ರೀಯಕ್ಕೆ ಶಕ್ತಿಸಾಲದೆ ಹೋಯಿತು. ಆದುದರಿಂದ 1943ರಲ್ಲಿ ಇದು ವಿಸರ್ಜನೆಯಾಯಿತು.