ಅಂತರ್ಯಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರ್ಯಾಮಿ ಪ್ರಪಂಚಕ್ಕೆಲ್ಲ ಒಡೆಯನಾದ ದೇವರೊಬ್ಬನು ಇದ್ದಾನೆಂದು ಒಪ್ಪಿಕೊಳ್ಳುವವರೆಲ್ಲ ಅವನು ಪರಿಶುದ್ಧವಾದ ಸ್ವರ್ಗದಲ್ಲಿರುತ್ತಾನೆಂದೂ ಸರ್ವಜ್ಞನಾದುದರಿಂದ ಅಲ್ಲಿಂದಲೇ ಅವನು ಈ ಲೋಕದ ವ್ಯಾಪಾರಗಳನ್ನೆಲ್ಲ ಸ್ಪಷ್ಟವಾಗಿ ಅರಿತುಕೊಳ್ಳುತ್ತಾನೆಂದೂ ಹೇಳುತ್ತಾರೆ. ಆದರೆ ವೈದಿಕರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ದೇವರು ಎಲ್ಲ ಕಡೆಗಳಲ್ಲಿಯೂ ಎಂದರೆ ಎಲ್ಲ ವಸ್ತುಗಳಲ್ಲಿಯೂ ವ್ಯಾಪಿಸಿ ಅಂತರ್ಯಾಮಿಯಾಗಿರುತ್ತಾನೆಂದೂ ಆದುದರಿಂದ ಅವನನ್ನು ಹುಡುಕಿಕೊಂಡು ನಾವು ಎಲ್ಲಿಗೂ ಹೋಗಬೇಕಾಗಿಲ್ಲವೆಂದೂ ನಮ್ಮ ಹೃದಯದಲ್ಲೇ ಇರುವ ಅವನಿಗೆ ತಿಳಿಯದಂತೆ ನಾವು ಯಾವ ಕೆಲಸವನ್ನೂ ಮಾಡಲಾರೆವೆಂದೂ ಅವನಲ್ಲಿ ಅಲ್ಪ ಪ್ರೀತಿಯನ್ನಿಟ್ಟು ಭಜಿಸಲಾರಂಭಿಸಿದರೂ ಅವನು ಪ್ರಸನ್ನನಾಗಿ ನಮ್ಮ ಮನಸ್ಸನ್ನೂ ಇಂದ್ರಿಯಗಳನ್ನೂ ಸರಿಯಾದ ದಾರಿಯಲ್ಲಿ ನಡೆಸಿ ನಮಗೆ ಶ್ರೇಯಸ್ಸನ್ನುಂಟುಮಾಡುತ್ತಾನೆಂದೂ ಹೇಳುತ್ತಾರೆ. (ಭಗವದ್ಗೀತೆ 15-15, 18-61 ಇತ್ಯಾದಿ). ಅಂತರ್ಯಾಮಿ ಅಥವಾ ಅಂತರಾತ್ಮ ಎಂಬ ಪದಕ್ಕೆ ಮನಸ್ಸನ್ನು ಅಥವಾ ಜೀವಾತ್ಮನನ್ನು ಆಳುವವನು ಎಂದರ್ಥ. ಎಂದರೆ, ಒಂದು ಶರೀರದಲ್ಲಿರುವ ಜೀವನು ಹೇಗೆ ಆ ಶರೀರವನ್ನೂ ಮನಸ್ಸನ್ನೂ ತನ್ನಿಷ್ಟದಂತೆ ನಡೆಸುವನೋ ಹಾಗೆ ದೇವರು ಸಹ ಚೇತನ ಅಚೇತನಗಳೆಂಬ ಎಲ್ಲ ವಸ್ತುಗಳೊಳಗೂ ಇದ್ದುಕೊಂಡು ಅವನ್ನೆಲ್ಲ ನಡೆಸುತ್ತಾನೆಂದು ಅರ್ಥ. ಬೃಹದಾರಣ್ಯಕೋಪನಿಷತ್ತು (5-7) ಯಾವನು ಪಂಚಭೂತಗಳು, ಕರ್ಮೇಂದ್ರಿಯಗಳು ಜ್ಞಾನೇಂದ್ರಿಯಗಳು, ಮೂರು ಲೋಕಗಳು, ಸೂರ್ಯ ಚಂದ್ರ ನಕ್ಷತ್ರಾದಿಗಳು, ಎಲ್ಲ ಪ್ರಾಣಿಗಳು, ಜೀವಾತ್ಮ - ಎಂಬಿವೇ ಮೊದಲಾದ ಸಮಸ್ತ ಪದಾರ್ಥಗಳಲ್ಲಿಯೂ ಇವುಗಳಿಗೆ ತಿಳಿಯದೆ ಇದ್ದುಕೊಂಡು ಇವುಗಳನ್ನು ತನಗೆ ಶರೀರವನ್ನಾಗಿ ಮಾಡಿಕೊಂಡು ನಿಯಮಿಸುತ್ತಾನೆಯೋ (ಎಂದರೆ ಆಳುತ್ತಾನೆಯೋ), ಅವನೇ ಅಂತರ್ಯಾಮಿ ಎಂದು ಹೇಳುತ್ತದೆ. ಬ್ರಹ್ಮಸೂತ್ರದ ಅಂತರ್ಯಾಮ್ಯಧಿಕರಣವು (1-2-19) ಮೇಲ್ಕಂಡ ಉಪನಿಷತ್ತಿನಲ್ಲಿ ಹೊಗಳಲ್ಪಟ್ಟ ಅಂತರ್ಯಾಮಿಯೇ ಪರಬ್ರಹ್ಮನೆಂದು ಸ್ಥಾಪಿಸುತ್ತದೆ. ಸುಬಾಲೋಪನಿಷತ್ತು ಸರ್ವಭೂತಾಂತರಾತ್ಮನಾದ ನಾರಾಯಣನು ಪೃಥ್ವಿ ಜಲ ಮುಂತಾದುವುಗಳನ್ನು ಶರೀರವನ್ನಾಗಿ ಹೊಂದಿ, ಅವುಗಳನ್ನು ಒಳಹೊಕ್ಕು ನಿಯಮಿಸುತ್ತಾನೆ ಎಂದು ತಿಳಿಸುತ್ತದೆ. ತನ್ನ ಅಂತರ್ಯಾಮಿತ್ವವನ್ನು ಪ್ರತ್ಯಕ್ಷವಾಗಿ ತೋರಿಸಿಕೊಡುವುದಕ್ಕೆಂದೇ ದೇವರು ನರಸಿಂಹಾವತಾರವನ್ನೆತ್ತಿದನೆಂಬುದು ಪ್ರಸಿದ್ಧವಾಗಿರುವ ಕಥೆ. (ವಿಷ್ಣು ಪುರಾಣ 1-17, ಭಾಗವತ 6-7 ಇತ್ಯಾದಿ).