ಮಾಂಟೆಸ್ಸೊರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರಿಯಾ (Tecla Artemesia) ಮಾಂಟೆಸ್ಸರಿ( Montessori) (ಜನನ:ಆಗಸ್ಟ್ 31, 1870 - ಮೇ 6, 1952) ಶಿಕ್ಷಣ ತತ್ವಶಾಸ್ತ್ರದಲ್ಲಿ ಅತ್ಯುತ್ತಮ ಹೆಸರನ್ನು ಹೊಂದಿದ ಇಟಾಲಿಯನ್ ವೈದ್ಯಳು ಮತ್ತು ಶಿಕ್ಷಕಿ. ಇವರ ವೈಜ್ಞಾನಿಕ ಶೈಕ್ಷಣಿಕ ವಿಧಾನ ವಿಶ್ವದಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಲ್ಲಿ ಬಳಕೆಯಲ್ಲಿ ಬಂದಿದೆ.

ಮಾಂಟೆಸ್ಸೊರಿ ಶಿಕ್ಷಣದ ಕ್ರಮ[ಬದಲಾಯಿಸಿ]

  • ಸಾಂಪ್ರದಾಯಿಕ ಪದ್ಧತಿಗಳಲ್ಲಿನ ಹಲವಾರು ನ್ಯೂನತೆಗಳನ್ನು, ವೈಫಲ್ಯಗಳನ್ನು ಕಂಡು ಮಕ್ಕಳಿಗೆ ಒಳ್ಳೆಯ ಕಲಿಕೆಯ ವಾತಾವರಣದ ಅಗತ್ಯವನ್ನು ಮನಗಂಡು ಇಟಲಿಯ ವೈದ್ಯೆ ಡಾ. ಮಾರಿಯ ಮಾಂಟೆಸ್ಸರಿ (1870 -1952) ನಿರೂಪಿಸಿದ ಶಿಕ್ಷಣಪದ್ಧತಿಯೇ ಮಾಂಟೆಸ್ಸರಿ ಪದ್ಧತಿ. ಈ ಪದ್ಧತಿಯಲ್ಲಿ ಇಂದು ಪ್ರಾಥಮಿಕ ಶಿಕ್ಷಣ ನಡೆಯುತ್ತಿದೆ. ಈ ಪದ್ಧತಿಯಲ್ಲಿ ಉನ್ನತ ಶಿಕ್ಷಣವೂ ಸಾಧ್ಯ. ಆದರೆ ಅವು ಇನ್ನು ಇಲ್ಲಿ ಅಷ್ಟಾಗಿ ತೊಡಗಿಲ್ಲ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಮಕ್ಕಳಲ್ಲಿ ಹುದುಗಿರುವ ಸುಪ್ತ ಸಾಮರ್ಥ್ಯವನ್ನು, ಕೌಶಲವನ್ನು ಹೊರತೆಗೆದು ಅವರು ಸಾಂಘಿಕವಾಗಿ ಪ್ರಯತ್ನಿಸುವುದನ್ನು ಕಲಿಸುವಲ್ಲಿ ಈ ಪದ್ಧತಿ ಯಶಸ್ವಿಯಾಗಿದೆ.
  • ಮಕ್ಕಳನ್ನು ಅವರ ವಯಸ್ಸಿಗನುಗುಣವಾಗಿ ಮೂರು (ಅಥವಾ ನಾಲ್ಕು) ಗುಂಪುಗಳನ್ನಾಗಿ ವಿಭಜಿಸಿ, ಕಲಿಕೆಗಾಗಿಯೇ ವಿಶಿಷ್ಟವಾಗಿ ನಿರ್ಮಿಸಲಾದ ಪರಿಕರಗಳ ನೆರವಿನಿಂದ ಕಲಿಸಲಾಗುತ್ತದೆ. ಹಾಗೆ ನೋಡಿದರೆ ‘ಕಲಿಸಲಾಗುತ್ತದೆ’ ಎಂಬ ಪದಪ್ರಯೋಗವೇ ತಪ್ಪು! ಮಕ್ಕಳು ತಂತಾವೆ ಕಲಿಯುವ ‘ಪರಿಸರ’ವನ್ನು ನಿರ್ಮಿಸಲಾಗುತ್ತದೆ ಎಂಬುದು ಸರಿಯಾದ ವಿವರಣೆ! ಮಕ್ಕಳ ಸ್ವಂತಕಲಿಕಾ ಸಾಮರ್ಥ್ಯದ ಸೂಕ್ತ ಪರಿಗಣನೆ, ತರಬೇತಿ ಹೊಂದಿದ ಶಿಕ್ಷಕರು ಮತ್ತು ಕಲಿಕಾ ಪರಿಸರ ಸೃಷ್ಟಿಸುವ ಪರಿಕರಗಳು ಈ ಮೂರನ್ನು ಮಾಂಟೆಸ್ಸರಿ ಪದ್ಧತಿಯ ಜೀವಾಳ ಎನ್ನಬಹುದು. ಅಂದಹಾಗೆ, ಮಕ್ಕಳನ್ನು ಇಲ್ಲಿ ಗೌರವಿಸಲಾಗುತ್ತದೆ ಮತ್ತು ಒಂದು ಹಂತದವರೆಗೂ ಪುಸ್ತಕಗಳೇ ಇರುವುದಿಲ್ಲ! ಬರೆಯುವ, ಬಾಯಿಪಾಠ, ಹೋಂ ವರ್ಕ್ ಎಂಬ ಭೂತಗಳ ಮೆರವಣಿಗೆಯೂ ಇರುವುದಿಲ್ಲ! ಇಲ್ಲಿ ಭಾಷೆ, ವಿಜ್ಞಾನದ ವಿಭಾಗಳು, ಗಣಿತ – ಒಟ್ಟಾರೆ ಜ್ಞಾನದ ಪ್ರತಿ ಶಾಖೆಯನ್ನು ಕಲಿಸಲು ವಿಶಿಷ್ಟ ಪದ್ಧತಿಗಳಿವೆ, ಪರಿಕರಗಳಿವೆ.

ಸಹಜ ಕಲಿಕೆ[ಬದಲಾಯಿಸಿ]

  • ಇಲ್ಲಿನ ಪರಿಸರದಿಂದಾಗಿ ಶಿಸ್ತು, ನಾಯತ್ವದ ಗುಣ, ತನ್ನ ಕಾರ್ಯಗಳನ್ನು ತಾನೇ ಮಾಡಿಕೊಳ್ಳುವುದು ಇವೆಲ್ಲವನ್ನು ಮಗು ಸಹಜವಾಗಿ ಕಲಿಯುತ್ತದೆ. ಈ ಪದ್ಧತಿಯಲ್ಲಿ ಶಿಸ್ತು ಎಂದರೆ ಸಾಂಪ್ರದಾಯಿಕ ಶಾಲೆಯ ‘ಕೈಕಟ್‍, ಬಾಯ್ಮೇಲ್‍ಬೆಟ್‍’ ಶಿಸ್ತಲ್ಲ! ತನ್ನ ಜವಾಬ್ದಾರಿಯರಿತ, ತನ್ನಷ್ಟಕ್ಕೆ ತಾನು ಒಡಾಡುತ್ತ ತನಗೆ ಬೇಕಾದ್ದನ್ನು ಕಲಿಯುವ, ಹಾಗೆ ಕಲಿಯಲು ಸಹಪಾಠಿಗಳೊಂದಿಗೆ ಚರ್ಚಿಸುವ ಶಿಸ್ತು. ಒಟ್ಟಾರೆ, ಮಗು ಇಲ್ಲಿ ಪರೀಕ್ಷೆಗೆ ಅಥವಾ ಶಾಲೆಗೆ ಸಿದ್ಧವಾಗುವ ಬದಲು ಸಮಾಜಕ್ಕೆ, ಜೀವನಕ್ಕೆ ಸಿದ್ಧವಾಗುತ್ತದೆ. ಇದು ಮಾಂಟೆಸ್ಸರಿ ಪದ್ಧತಿಯ ಪ್ರಧಾನಾಂಶ. ಇಲ್ಲಿ ಮಕ್ಕಳಿಗೆ ಎಲ್ಲ ಸ್ವಾತಂತ್ರ್ಯ ನೀಡಿ ಅವರ ಚಟುವಟಿಕೆಯನ್ನು ಗಮನಿಸಲಾಗುತ್ತದೆ (ನಿಗಾ ಇಡಲಾಗುವುದಿಲ್ಲ). ಈ ಪದ್ಧತಿಯ ಶಿಕ್ಷಕರು ಕಲಿಕಾ ಸಹಾಯಕರೇ ಹೊರತು ಪಾಠ ‘ಹೇಳಿಕೊಡುವ’ ಶಿಕ್ಷಕರಲ್ಲ.
  • ಇಂತಹ ಶಿಸ್ತನ್ನು ಕುರಿತಾಗಿ ಮಾಂಟೆಸ್ಸರಿ ಹೀಗೆ ಹೇಳಿದ್ದಾರೆ: ‘…(ಮಕ್ಕಳನ್ನು) ಗಮನಿಸುವ ಸೈದ್ಧಾಂತಿಕ ನೆಲೆ ಮಗುವಿನ ಸ್ವಾತಂತ್ರ್ಯದ ಮೇಲೆ ಆಧಾರಿತವಾಗಿದೆ.’ ಅಂತಹ ಸ್ವಾತಂತ್ರ್ಯವೇ ಚಟುವಟಿಕೆ. ಸ್ವಾತಂತ್ರ್ಯದಿಂದ ಶಿಸ್ತು ಬರಬೇಕು ಎನ್ನುವುದೇ ಇಲ್ಲಿನ ದೊಡ್ಡ ಆದರ್ಶ–ಜೀವಾಳ ಎನ್ನಬಹುದು.’

ಯಶಸ್ಸಿಗೆ ಶಿಕ್ಷಕರಿಗೆ ಯುಕ್ತ ತರಬೇತಿ ಅಗತ್ಯ[ಬದಲಾಯಿಸಿ]

  • ಸಾಂಪ್ರದಾಯಿಕ ಶಾಲಾಶಿಕ್ಷಕರಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ತರಗತಿಯಲ್ಲಿ ಓಡಾಡುತ್ತಿರುವ ಮಕ್ಕಳ ಗುಂಪಿನಲ್ಲಿ ಶಿಸ್ತು ಎಲ್ಲಿನದು ಎನಿಸಬಹುದು. ಆದರೆ ನಮ್ಮ ಪದ್ಧತಿಯಲ್ಲಿ ಶಿಸ್ತು ಎಂಬುದು ಸಿದ್ಧಪದ್ಧತಿಗಳಲ್ಲಿನ ಶಿಸ್ತಿಗಿಂತ ಭಿನ್ನ. ಶಿಸ್ತು ಸ್ವಾತಂತ್ರ್ಯದ ಮೇಲೆ ನಿಂತಿದ್ದೇ ಆದರೆ ಆ ಶಿಸ್ತು ಚಟುವಟಿಕೆ ಎಂಬುದೇ ಆಗಿರಬೇಕು. ಜೀವನದ ನೀತಿ–ನಿಯಮಗಳನ್ನು ಅನುಸರಿಸುವ, ತನ್ನ ನಡವಳಿಕೆಯನ್ನು ನಿಯಂತ್ರಿಸಿಕೊಳ್ಳಬಲ್ಲ ಮತ್ತು ತನ್ನ ನಾಯಕನೂ ತಾನೇ ಆಗಿರುವ ವ್ಯಕ್ತಿಯನ್ನು ನಾವು ಶಿಸ್ತುಬದ್ಧ ಮನುಷ್ಯ ಎನ್ನುತ್ತೇವೆ. ಇಂತಹ ಮಾರ್ಗದಲ್ಲಿ ವಿದ್ಯಾರ್ಥಿಯನ್ನು ಮುನ್ನಡೆಸಲು, ಅವು ನಿರಂತರವಾಗಿ ಪೂರ್ಣ ಸ್ವಯಂನಿಯಂತ್ರಣವನ್ನು ಸಾಧಿಸಲು ಸಹಾಯಮಾಡಲು ಶಿಕ್ಷಕರಿಗೆ ಯುಕ್ತ ತಂತ್ರಗಳ ತಿಳಿವಳಿಕೆ ಅವಶ್ಯ. ಇಲ್ಲಿ ಮಗುವಿನ ಗುಣ ಅಥವಾ ಶೀಲ ಶಾಲೆಗೆ ಸೀಮಿತವಾಗದೆ ಸಮುದಾಯಕ್ಕೆ, ಸಮಾಜಕ್ಕೆ ವಿಸ್ತಾರಗೊಳ್ಳುತ್ತದೆ.
  • ಈ ಕಾರಣಗಳಿಂದ ಮಾಂಟೆಸ್ಸರಿ ಶಿಕ್ಷಣ ಅತ್ಯುತ್ತಮ ಶಿಕ್ಷಣ ವಿಧಾನಗಳಲ್ಲೊಂದು. ಮಾಂಟೆಸ್ಸರಿ ಪದ್ಧತಿ ಯಶಸ್ವಿಯಾಗಬೇಕಾದರೆ ಎರಡು ವಿಷಯಗಳು ಅತಿಮುಖ್ಯ ಒಂದು: ಆ ಶಿಕ್ಷಕರಿಗೆ ಈ ಪದ್ಧತಿಯಲ್ಲಿ ಯುಕ್ತ ತರಬೇತಿಯಿರಬೇಕು. ಇದಿಲ್ಲದೆ ಏನೂ ಸಾಧ್ಯವಿಲ್ಲ. ಎರಡು: ಕಲಿಕಾ ಪರಿಕರಗಳು. ‘ನಮ್ಮಲ್ಲಿ ಬೋರ್ಡು ಮಾತ್ರ ಮಾಂಟೆಸ್ಸರಿ’ ಎಂದಿರುವ ಶಾಲೆಗಳೂ ಇವೆ! ಹಾಗಾಗಿ, ಪೋಷಕರು, ಆ ಶಿಕ್ಷಕರಿಗೆ ಮಾಂಟೆಸ್ಸರಿ ತರಬೇತಿಯಾಗಿದೆಯೇ? ಶಾಲೆಗಳಲ್ಲಿ ಅವಶ್ಯಕ ಪರಿಕರಗಳಿವೆ ಎಂದು ಖಾತ್ರಿಪಡಿಸಿಕೊಂಡು ಪೋಷಕರು ಮುಂದುವರೆಯಬೇಕು. ಯುಕ್ತ ತರಬೇತಿಯುಳ್ಳ ಶಿಕ್ಷಕರು, ಕಲಿಕಾ ಪರಿಸರವನ್ನು ಸಾರ್ಥಕಗೊಳಿಸುವ ಪರಿಕರಗಳು ಲಭ್ಯವಾದರೆ ಈ ಪದ್ಧತಿಯಿಂದ ಸ್ವರ್ಗವನ್ನು ಧರೆಗಿಳಿಸಬಹುದು. [೧]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಮಾಂಟೆಸ್ಸರಿ: ಮಕ್ಕಳ ಸ್ವತಂತ್ರ ವಿಶ್ವವಿದ್ಯಾಲಯ;ಕಲ್ಗುಂಡಿ ನವೀನ್;6 Feb, 2017". Archived from the original on 2017-02-06. Retrieved 2017-02-06.