ಮುಯ್ಯಾಳು
ಮುಯ್ಯಿ ಮತ್ತು ಆಳು ಎಂಬೆರಡು ಪದಗಳ ಜೋಡಣೆಯಿಂದಾದ ಪದ ಮುಯ್ಯಾಳು. ಮುಯ್ಯಿ ಎಂದರೆ ಒಳ್ಳೆಯದನ್ನಾಗಲೀ ಕೆಟ್ಟದ್ದನ್ನಾಗಲೀ ಹಿಂತಿರುಗಿಸುವುದು ಎಂದರ್ಥ. [೧]
ಹಳ್ಳಿಗಳಲ್ಲಿ ಬೇಸಾಯ ಮಾಡುವಾಗ ಈ ಮುಯ್ಯಾಳು ವಿಧದ ಸಹಾಯ ಪದ್ಧತಿಯನ್ನು ಅನುಸರಿಸುತ್ತಾರೆ. ಇದು ಸಾಮಾನ್ಯವಾಗಿ ಭತ್ತ, ರಾಗಿ, ಮೊದಲಾದ ಏಕವಾರ್ಷಿಕ ಬೆಳೆಗಳ ಕೃಷಿಯಲ್ಲಿ ಬಳಕೆಯಾಗುತ್ತದೆ. ಸಹಾಯಕ್ಕೆ ಮರು ಸಹಾಯ ಎಂದು ಸಂಕ್ಷಿಪ್ತವಾಗಿ ಹೇಳಬಹುದು.
ಉದಾಹರಣೆಗೆ ಭತ್ತದ ವ್ಯವಸಾಯದಲ್ಲಿ ಮುಖ್ಯವಾಗಿ ಉಳುವುದು, ನಾಟಿ ನೆಡುವುದು, ಕುಯಿಲು, ಒಕ್ಕುವುದು, ಮುಂತಾದ ಕೆಲಸಗಳಿರುತ್ತವೆ. ಇವುಗಳನ್ನು ಮಾಡುವಾಗ ಹೆಚ್ಚು ಜನರು ಬೇಕಾಗುತ್ತಾರೆ. ಹಿಂದೆ ದೊಡ್ಡ ಅವಿಭಾಜ್ಯ ಕುಟುಂಬವಿದ್ದು ದುಡಿಮೆಗೆ ಸಾಕಾದಷ್ಟು ಜನರು ಆ ಕುಟುಂಬದಲ್ಲೇ ಇದ್ದಾಗ ಬೇರೆ ಕುಟುಂಬಗಳ ಜನರ ಅಗತ್ಯವಿರುತ್ತಿರಲಿಲ್ಲ. ಕುಟುಂಬದಲ್ಲಿ ಬೇಕಾದಷ್ಟು ಜನರು ಇಲ್ಲದಿರುವಾಗ ಬೇರೆ ಕುಟುಂಬದ ಜನರನ್ನು ಕೆಲಸಕ್ಕೆ ಕರೆದು ಕೊಳ್ಳುತ್ತಾರೆ. ಇವರಿಗೆ ಯಾವ ರೀತಿಯ ಸಂಬಳವನ್ನು ಕೊಡುವುದಿಲ್ಲ. ಬದಲು ಅವರ ಕೆಲಸದ ಸಮಯದಲ್ಲಿ ಮೊದಲು ಅವರಿಂದ ಸಹಾಯವನ್ನು ಪಡೆದ ಕುಟುಂಬದ ಜನರು ಮರು ಸಹಾಯವನ್ನು ಮಾಡುತ್ತಾರೆ. ಎಷ್ಟು ದಿನಗಳವರೆಗೆ ಒಬ್ಬನು ಸಹಾಯ ಮಾಡಿರುತ್ತಾನೋ, ಸಹಾಯ ಪಡೆದುಕೊಂಡವನು ಅಷ್ಟು ದಿನಗಳ ಕೆಲಸವನ್ನು ಮಾಡಿ ಮುಯ್ಯಿ ತೀರಿಸುತ್ತಾರೆ. ಉದಾಹರಣೆಗೆ, ಮೊದಲಿನ ಸಹಾಯ ಆರು ದಿನಗಳ ಕೆಲಸವಾದರೆ, ಮುಯ್ಯಿ ತೀರಿಸುವಾಗ ಇಬ್ಬರು ಮೂರು ದಿನಗಳ ಕೆಲಸ ಮಾಡಿ ಮುಗಿಸಬಹುದು. ಒಂದು ವೇಳೆ ಆರು ದಿನಗಳ ನಾಟಿ ಕೆಲಸದ ಸಹಾಯವನ್ನು ಮಾಡಿದವನಿಗೆ ಮುಯ್ಯಾಳಿನ ಅಗತ್ಯ ಐದೇ ದಿನಗಳಿದ್ದರೆ, ಆರನೇ ದಿನದ ಕೆಲಸವನ್ನು ಸಹಾಯವನ್ನು ಪಡೆದವನು ಮುಂದಿನ ವರ್ಷದಲ್ಲಿ ಮುಯ್ಯಿ ಮಾಡಿ ತೀರಿಸುವ ಮರ್ಯಾದೆಯೂ ಇರುತ್ತದೆ. ಮುಯ್ಯಿಗೆ ಮುಯ್ಯಿ ಮಾಡಿ ತೀರಿಸಬೇಕಾದುದು ಹಳ್ಳಿಗಳಲ್ಲಿ ಸಹಜ ಧರ್ಮ. ಇದನ್ನರಿಯದೆ "ಮುಯ್ಯಿಗೆ ಮುಯ್ಯಿ ತೀರಿಸುವದು" ಎಂದರೆ "ಸೇಡು ತೀರಿಸಿಕೊಳ್ಳುವುದು" ಎಂಬರ್ಥ ವ್ಯಾಪ್ತಿಸಿ ಬಿಟ್ಟಿದೆ!
ಸಾಮಾನ್ಯವಾಗಿ ಮೇಲೆ ಹೇಳಿದ ಕೆಲಸಗಳಲ್ಲಿ ಯಾವದಾದರೊಂದು ಕೆಲಸಕ್ಕೆ ಮೊದಲು ಸಹಾಯವನ್ನು ಪಡೆದುಕೊಂಡರೆ ಸಹಾಯ ಪಡೆದವರು ಅದೇ ಕೆಲಸಕ್ಕೆ ಸಹಾಯ ಮಾಡಿದವ ರಿಗೆ ಮರು ಸಹಾಯ ಮಾಡುತ್ತಾರೆ. ಇದರಿಂದ ಕೆಲಸವನ್ನು ಪ್ರಮಾಣೀಕರಿಸಲು (quantify) ಸಾಧ್ಯವಾಗುತ್ತದೆ. ಉದಾಹರಣೆಗೆ ಗದ್ದೆಯನ್ನು ಉಳುವ ಕೆಲಸ ಸೂರ್ಯೋದಯದಿಂದ ಆರಂಭವಾಗಿ ಸುಮಾರು ನಾಲ್ಕು ಗಂಟೆಯ ಕಾಲ ನಡೆಯುತ್ತದೆ. ನಾಟಿಯ ಕೆಲಸ ಬೆಳಿಗ್ಗೆ ಸುಮಾರು ೯-೧೦ ಗಂಟೆಗೆ ಆರಂಭವಾಗಿ ಸಂಜೆಯವರೆಗೂ ಸಾಗುತ್ತದೆ. ಕುಯಿಲು ಕೆಲಸ ಬೆಳಿಗ್ಗೆ ೭-೮ ಗಂಟೆಯಿಂದ ಸಂಜೆಯವರೆಗಿರುತ್ತದೆ.
ಅಲ್ಲದೆ, ಗಂಡಸರು ಮಾಡುವ ಪ್ರಮಾಣದಲ್ಲಿ ಹೆಂಗುಸರು ಮಾಡಲಾರೆಂಬ ಕಾರಣದಿಂದ ಗಂಡಸರು ಮಾಡಿದ ಕೆಲಸಕ್ಕೆ ಗಂಡಸರೇ ಮುಯ್ಯಾಳಾಗಿ ಹೋಗುತ್ತಾರೆ. ಅಗೆ (ನಾಟಿ ಮಾಡಲ್ಪಡುವ ಸಸಿ) ಕೀಳುವ ಕೆಲಸವನ್ನು ಹೆಂಗಸರೇ ಮಾಡುತ್ತಾರೆ; ಹೀಗಾಗಿ ಇಲ್ಲಿ ಮುಯ್ಯಾಳು ಹೆಂಗುಸರೇ. ಕುಯಿಲು, ಹೊರೆ ಸಾಗಿಸುವ (ಕುಯಿದ ತೆನೆಯನ್ನು ಹೊರೆ ಕಟ್ಟಿ ಕಣಕ್ಕೆ ಸಾಗಿಸುವ), ಮೊದಲಾದ ಕೆಲಸಗಳನ್ನು ಹೆಂಗುಸರೂ ಮಾಡುತ್ತಾರೆ. ಆದ್ದರಿಂದ ಹೆಂಗುಸರಿಗೆ ಹೆಂಗುಸರೇ ಮುಯ್ಯಾಳಾಗಿ ಹೋಗುತ್ತಾರೆ.
ಕರ್ನಾಟಕದಲ್ಲಿ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಮೊದಲಾದ ಕಡೆಗಳಲ್ಲಿ ಈ ಮುಯ್ಯಾಳು ಪದ್ಧತಿಯಿದೆ. ಕೊಡಗಿನಲ್ಲಿ ಕೈಲ್ಪೊಳ್ದ್ ಹಬ್ಬಕ್ಕಿಂತ ಮುಂಚಿತವಾಗಿ ನಾಟಿ ಕೆಲಸ ಮುಗಿಯಬೇಕಾದ್ದರಿಂದ ಮುಯ್ಯಾಳುಗಳ ಬಳಕೆಯಿರುತ್ತದೆ.
ಈಗೀಗ ಉಳುಮೆಗೆ ಮತ್ತು ಹೊರೆ ಸಾಗಿಸಲು ಟ್ರ್ಯಾಕ್ಟರ್, ಟಿಲ್ಲರ್ಗಳನ್ನು ಬಳಸುವುದರಿಂದ ಈ ಕೆಲಸಗಳಿಗೆ ಮುಯ್ಯಾಳುಗಳ ಬೇಡಿಕೆ ಇರುವುದಿಲ್ಲ.
ಹೊರಸಂಪರ್ಕಗಳು
[ಬದಲಾಯಿಸಿ]೧. http://www.prajavani.net/article/ಕೃಷಿಯಲ್ಲಿ-ಮುಯ್ಯಾಳು
೨. http://vijaykarnataka.indiatimes.com/articleshow/20495448.cms
೩. http://www.kannadaprabha.com/edition/printkp.aspx?artid=115402 Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]- ↑ ಸಂಕ್ಷಿಪ್ತ ಕನ್ನಡ ನಿಘಂಟು (ಕನ್ನಡ - ಕನ್ನಡ),ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು