ಕವಿಚಕ್ರವರ್ತಿ ಜನ್ನನ ಅಮೃತಾಪುರ ಶಾಸನ
ಕನ್ನಡ ಸಾಹಿತ್ಯದ ಕವಿಚಕ್ರವರ್ತಿಗಳಲ್ಲಿ ಒಬ್ಬನಾದ ಜನ್ನನ ರಚನೆ ಇದಾಗಿರುವುದರಿಂದ ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಇದೊಂದು ಮಹತ್ವವಾದ ಶಾಸನವಾಗಿದೆ. ಜನ್ನ ವಿರಚಿತ ಎರಡು ಶಾಸನಗಳಲ್ಲಿ ಇದೂ ಒಂದು. ಇನ್ನೊಂದು ಆನೆಕೆರೆ ತಾಮ್ರಶಾಸನ. ಕವಿ ಜನ್ನನ ಸಾಹಿತ್ಯಕ ಬೆಳವಣಿಗೆಯ ಆರಂಭಿಕ ಹೆಜ್ಜೆಗಳನ್ನು ಗುರುತಿಸುವಲ್ಲಿ ಈ ಶಾಸನಗಳು ನೆರವಾಗುತ್ತವೆ.
ಈ ಶಾಸನವು ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕು ಅಮೃತಾಪುರ ದೇವಾಲಯದ ದಕ್ಷಿಣದ ಕಡೆ ನೆಟ್ಟಿರುವ ಕಲ್ಲಿನ ಮೇಲಿದೆ. ಕಂದ, ವೃತ್ತ, ಗದ್ಯಗಳಿಂದ ಕೂಡಿದ ಈ ಶಾಸನ ಪುಟ್ಟ ಚಂಪೂಕಾವ್ಯದಂತಿದೆ.
ಇತಿವೃತ್ತ
[ಬದಲಾಯಿಸಿ]ಶಾಸನೋಕ್ತ ಶಕ ೧೧೧೯ ಪಿಂಗಳ ಸಂವತ್ಸರ ಪುಷ್ಯ ಬಹುಳ ೭ ಉತ್ತರಾಯಣ ಸಂಕ್ರಮಣ ಸೋಮವಾರವು ಕ್ರಿ.ಶ. ೧-೧-೧೧೯೮ ಬುಧವಾರಕ್ಕೆ ಸರಿಹೊಂದುತ್ತದೆ. ಆದಿನ ಯಾವುದೇ ಸಂಕ್ರಮಣವಿರಲಿಲ್ಲ. ವೀರಬಲ್ಲಾಳನ ದಂಡನಾಯಕ ಅಮೃತೇಶ್ವರನು ಕಗ್ಗಿಯ ವೃತ್ತಿಯ ಅಮೃತಸಮುದ್ರ ಎಂಬಲ್ಲಿ ಅಮೃತೇಶ್ವರ ದೇವಾಲಯವನ್ನು ಕಟ್ಟಿಸಿ ದಾನ ನೀಡಿದ ವಿಚಾರವನ್ನು ಶಾಸನ ದಾಖಲಿಸಿದೆ. ಆ ಮುಂಚೆಯೇ ವೀರಬಲ್ಲಾಳನಿಂದ ವಜ್ರೇಶ್ವರದೇವರ ಸನ್ನಿಧಾನದಲ್ಲಿ ಪಡೆದಿದ್ದ ಆಸಂದಿನಾಡಿನ ಹುಣಿಸೆಯಕಟ್ಟ ಅಗ್ರಹಾರವನ್ನು ಅಮೃತೇಶ್ವರ ದೇವರ ಅಂಗಭೋಗ ರಂಗಭೋಗ ಚೈತ್ರಪವಿತ್ರ ಪೂಜಾರಿ ಪರಿಚಾರಕ ಬ್ರಾಹ್ಮಣರ ಆಹಾರದಾನಕ್ಕೆ ದೇವಾಲಯದ ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ದಾನ ನೀಡಿದ್ದಾನೆ. ಬ್ರಹ್ಮಪುರಿಯ ಬ್ರಾಹ್ಮಣರಿಗೆ ವ್ರಿತ್ತಿಗಳನ್ನು ವಿಂಗಡಿಸಿಕೊಟ್ಟಿದ್ದನ್ನು ಶಾಸನ ದಾಖಲಿಸಿದೆ. ಚಟ್ಟಿಸೆಟ್ಟಿ ಮತ್ತು ಜಕ್ಕಿಯಕ್ಕರು ಅಮಿತ ದಂಡನಾಯಕನ ಅಜ್ಜ-ಅಜ್ಜಿಯರಾಗಿದ್ದರೆ, ಹರಿಯಮಸೆಟ್ಟಿ ಮತ್ತು ಸುಗ್ಗಿಯಕ್ಕ ತಂದೆ-ತಾಯಿಯಾಗಿದ್ದಾರೆ.
ಶಾಸನದ ಕವಿ ಜನ್ನನು ತನ್ನನ್ನು ತಾನು ಸುಕವಿಜನಮಿತ್ರ ಉದ್ಧಂಡಕವಿಭಾಳನೇತ್ರ ಎಂದು ಮುಂತಾಗಿ ಕರೆದುಕೊಂಡಿದ್ದಾನೆ.
ಲೊಕ್ಕಿಗುಂಡಿಯ ಮಹಾದೇವಣ್ಣರ ಶಿಷ್ಯ ನಾಕಣ್ಣನು ಶಾಸನವನ್ನು ಕಲ್ಲಿನ ಮೇಲೆ ಬರೆದಿದ್ದನ್ನು ಬಿರುದ ಕಂಡರಣೆಕಾರ ರೂವಾರಿ ಮಲ್ಲೋಜ ಕಂಡರಿಸಿದ್ದಾನೆ.
ರೂವಾರಿ ಮಲ್ಲೋಜ ಕಂಡರಿಸಿರುವ ಶಾಸನ
[ಬದಲಾಯಿಸಿ]- ೧ ಜಯತಿ ಶಿವಶಾಸನಂ ಭೂಚರಖೇಚರದಿವಿಜರಾಜಮಕುಟಾರೂಢಂ ಧರ್ಮ್ಮಪ್ರಸಾದವರ್ದ್ಧಿತ ಲಕ್ಷ್ಮೀನಿತ್ಯ ಪ್ರದಾಯಕಂ ಜಗತಿ ||
- ೨ ಶ್ರೀಮತ್ಸೇನಾಧಿನಾಥೋತ್ತಮನನಮಿತನಂ ರಕ್ಷಿಸುತ್ತಿರ್ಕ್ಕೆ ತಾರಾಸ್ತೋಮಂ ನಿಲ್ವಂನೆಗಂ ನಾರದ ಮಸೃಣರಸವ್ಯಕ್ತಗೀತಾಮೃತಂ
- ೩ ಗೌರೀಮುಗ್ಧಸ್ನಿಗ್ಧಮನ್ದಸ್ಮಿತ ಮಧುರಕಟಾಕ್ಷಾಮೃತಂ ದೇವರಾಜಪ್ರೇಮಸ್ತುತ್ಯಾದಿ ಸದ್ವಾಗಮೃತನಮೃತನಾಥಂ ತ್ರಿಳೋಕೈಕನಾಥಂ || ಸಿರಿಯ
- ೪ ಲರ್ಗಣ್ನ ಬೆಳ್ವೆಳಗಿನಿಂಪುದಿದಂಬುಜನಾಭನೀಶನಂತಿರೆ ಗಿರಿಜಾಕಟಾಕ್ಷರುಚಿಗಳ್ಪುದಿದೀಶನು ಮಬ್ಜನಾಭನಂತಿರೆ ಜನಸಂಸ್ತವಂ ತಮಗೆ ಪಲ್ಲಟಮಪ್ಪಿನಮೊಪ್ಪಿತೋಱುವಾ ಹರಿಹರ ದೇವರೊಲ್ದಮಿತನಂ ಪರಿರಕ್ಷಿ
- ೫ ಸುತಿರ್ಕ್ಕೆ ಸಂತತಂ || ವಿನತಕ್ಷತ್ರಿಯಪುತ್ರಸಂತತಿನವೀನೋತ್ತಂಸಮಂ ರಾಜ್ಯಶಾಸನಮಂ ಮಸ್ತಕಪೀಠದೋಳ್ತಳೆಯೆ ನಾಲ್ಕುಂ ದಿಕ್ಕಿನೊಳ್ ಸೀಮಶಾಸನಮಪ್ಪಂತುದಯಾಚಳಾದಿಕಂಧರಂ
- ೬ ಬಲ್ಲಾಳದೇವಂಗೆ ಮೇದಿನಿಯಂ ಸಾಧಿಸಿಕೊಟ್ಟು ಶೌರ್ಯ್ಯಮಮಿತಂಗಕ್ಕುಂ ಪೆಱಂಗಕ್ಕುಮೆ || ಗದ್ಯ || ಆ ನಿಶ್ಯಂಕಪ್ರತಾಪ ಚಕ್ರವರ್ತಿಯನ್ವಯಾವತಾರಮದೆಂತೆಂದೊಡಮೃತದಮೃತಕರನಕ
- ೭ ಮಳೆಯ ಕೌಸ್ತುಭದ ಪಾರಿಜಾತದೈರಾವತದುಚ್ಚೈಶ್ರವದಚ್ಚರಸಿಯರ ಸಂಭೂತಿಯಿಂ ಖ್ಯಾತಿಗಾಕರ ಮಾದ ಪೀಯೂಷ ರತ್ನಾಕರದ ನಡುವೆ || ವೃ || ಸಿರಿಯಂ ಕೌಸ್ತುಭರತ್ನಮಂ ಹರಿಯ
- ೮ ನಂತಾಶಂಕಮಂ ಚಕ್ರಮಂ ಭರದಿಂ ಪೇೞೆ ಬಹಿತ್ರದಂತಿರೆಸೆದಿರ್ದ್ದಂ ಶೇಷನಾ ಕ್ಷೀರಸಾಗರ ದೊಳ್ ದೇವನ ನಾಭಿಪದ್ಮದ ಮೃಣಾಳಂ ಕೂವಕಂಬಂಬೊಲಚ್ಚರಿಯಾಗಿರ್ದ್ದುದು ಕರ್ಣ್ನ ಧಾರನವೊಲಿರ್ದ್ದಂ ಪುಟ್ಟಿ ಪದ್ಮೋದ್ಭವಂ || ಪರಮಬ್ರ
- ೯ ಹ್ಮನ ಚಿತ್ತದೊಳ್ ಮುನಿಗಳೇೞ್ಪರ್ಪ್ಪುಟ್ಟಿದರ್ತ್ತನ್ಮುನೀಶ್ವರರೊಳ್ ಪೆಂಪೆಸೆವ ತ್ರಿಪದ್ಮದಲರೊಳ್ ಪದ್ಮೋದರಂ ಪದ್ಮವಿಷ್ಟರನಂ ಪುಟ್ಟಿಸಿತರ್ಕ್ಕೆ ಮಚ್ಚರಿಪವೋಲ್ || ಕಣ್ನೆಯ್ದಲಿಂದಂ ಸುಧಾಕರನಂ ಪುಟ್ಟಿಸಿದಂ
- ೧೦ ಪವಿತ್ರಮುದಯಸ್ಥಾನಂ ಮಹಾಭಾಗದೊಳ್ || ಯಿಂದುವಿಳೋಚನೋತ್ಸವದಿನಿಂದುಮನೋಜ ಸಹಾಯ ವೃತ್ತಿಯಿಂದಿಂದುಕಳಾಳಿಯಿಂ ಮೆಱವನಂದು ನೃಸಿಂಹನೃಪಾಳಸೂನು
- ೧೧ ತಾನಿಂದುವಿಳೋಚನೋತ್ಸವದಿನಿಂದು ಮನೋಜನಸಹಾಯವೃತ್ತಿಯಿಂದಿಂದು ಕಳಾಳಿಯೆಂಮೆಱವುತಿರ್ದ್ದಪ ನಿಂದುಕುಳಪ್ರದೀಪಕಂ || ಕ || ಆ ರಾಜನ ಪುತ್ರಂ ಮದವಾರಣವಿದ್ಯಾವಿಳಾ
- ೧೨ ಸದಿಂ ಬುಧನೆಂಬಂ ಧಾರಿಣಿಯೊಳ್ ನೆಗೞ್ದಂ ದ್ವಿರದಾರೋಹಕ ಚಕ್ರವರ್ತ್ತಿ ಬಲ್ಲಾಳನವೊಲ್ || ಆತನ ಮಗಂ ಪುರೂರವನಾತಂಗಂ ದೇವಲೋಕದೂರ್ವ್ವಸಿಗಂ ವಿಖ್ಯಾತನುದಯಿಸಿದನುಪಮಾ ತೀತ ಬ
- ೧೩ ಳರ್ಕ್ಕಾಯುವಾಯುವೆಂಬನೃಪೇಂದ್ರಂ || ಅವನ ಮಗಂ ನಹುಷಂ ಮತ್ತವನ ತನೂಜಂ ಯಯಾತಿ ತದ್ವಿದರುರ್ವ್ವೀಧವರಾಗೆ ಬಳಿಕೆ ಪಲರುದ್ಭವಿಸಿದರಾ ಸೋಮವಂಶದೊಳ್ ಯದುವೆಂಬಂ ||
- ೧೪ ಆ ಯದುದಗ್ರತೆಮಿಗೆ ನೆಗೞ್ದಾ ಯದುವಿಂ ಯಾದವಾಭಿಧಾನ ಸೋಮಾಮ್ನಾಯಕ್ಕೆ ರೂಢಿವಡೆದತ್ತಾ ಯಾದವರೊಳಗೆ ನೆಗೞ್ದನಸಹಾಯಬಳಂ || ವೃ || ಸಳೆನಂಬಂ ಶಶಕ ಪ್ರಸಿದ್ಧ
- ೧೫ ಪುರದೊಳ್ ವಾಸನ್ತಿಕಾದೇವಿಯಂ ತಳೆದಾರಾಧಿಸುವಾಗಳುತ್ತರಳನೇತ್ರಂ ಘೋರವಕ್ತ್ರಂ ವಿಶೃಂಖಳಗಾತ್ರಂ ಪುಲಿ ಪಾಯೆ ಕಂಡು ಮುನಿನಾಥಂ ಕುಂಚಮಂ ಕೊಟ್ಟು ಪೊಯ್ಸಳ ಎಂದಂ ಬೞಕಾ
- ೧೬ ಯ್ತು ಪೊಯ್ಸಳವೆಸರ್ ತಾಂ ಯಾದವೋರ್ವ್ವೀಶರೊಳು || ಕ || ಅಲಗಿಂ ಸಿಂಗಮನಿಱದವನ ಕಲಿತನಮಂ ನಗುವತೆಱದೆ ಮೆಱವುದು ಸೆಳೆಯಿಂ ಪುಲಿವೊಯ್ದ ಕುಱುಪು ಪೊಯ್ಸಳ ಕುಲ
- ೧೭ ತಿಲಕನ ಮತ್ತಗಜದ ಟಕೆಯದೊಳೀಗಳ್ || ಮತ್ತೇಭ || ಅನಿತೊಂದುಂನತಿವೆತ್ತ ಪೊಯ್ಸಳಕುಳಂ ಪೂರ್ವ್ವಾದ್ರಿಯಂ ಪೋಲ್ವಿನಂ ವಿನಯಾದಿತ್ಯನೃಪಾಳನುದ್ಭವಿಸಿದಂ ಭೂಲೋಕದಾದಿತ್ಯನೆಂಬಿನೆಗಂ ಕೞ್ತಲೆ
- ೧೮ ಕೂಡೆ ಕಣ್ಗೆ ಕವಿದತ್ತನ್ಯಾವನೀಶರ್ಗ್ಗೆ ತೊಟ್ಟೆನೆ ಕಯ್ಕೊಂಡುದಲರ್ಕ್ಕೆಯುಂ ಕುವಳೆಯಂ ಮತ್ತಾತನಿಂ ಕೌತುಕಂ || ಕೆಳೆನಡೆಯಿಂ ಕಳಹಂಸೆಗೆ ಕೆಳೆನುಡಿಯಿಂ ಕೋಕಿಳಕ್ಕೆ ಸೋಗೆಗೆ ಮುಡಿಯಿಂ ಕೆ
- ೧೯ ಳೆಯಬ್ಬರಸಿಯೆ ತತ್ಕುಳವಧುವಾದಳ್ ತದೀಯಸುತನೆಱೆಯಂಗಂ || ನೆಱವಿಂದಂ ವೈರಿಬೃಂದಂ ಕವಿವುದುಮನಿತೊಂದುಂ ರಣೋತ್ಸಾಹದಿಂದಂ ತಱದೊಟ್ಟಿಲ್ ಸೀಳ್ದು ಮೆಟ್ಟಲ್ ಯಮ
- ೨೦ ಪುರಿಗಿರದಟ್ಟಲ್ ಚಲಂ ಮುಟ್ಟೆಕಟ್ಟಲ್ ನೆಱೆದತ್ತಂ ಕಯ್ದುವೊತ್ತಂ ವಸುಧೆಯೊಳಗೆ ಮತ್ತಂ ಜಸಂಬೆತ್ತನಾಸಂದೆಱಯಂಗಂ ವೀರಗಂಗಂ ರಿಪುತಿಮಿರಪತಂಗಂ ಜಯಶ್ರೀ ಭುಜಂಗಂ || ಚಲದೆ
- ೨೧ ಱೆಯಂಗೆ ಚಾಗದೆಱೆಯಂಗೆ ಜಸಕ್ಕೆಱೆಯಂಗೆ ಮಿಕ್ಕದೋರ್ವ್ವಲದೆಱೆಯಂಗೆ ವೀರದೆಱೆಯಂಗೆ ಕುಲೋನ್ನತಿ ತನ್ನೊಳೊಪ್ಪುವೇಚಲೆಯಱೆಯಂಗೆ ಕೀರ್ತ್ತಿಯೆಱೆಯಂಗೆಱೆಯಂಗನೃ
- ೨೨ ಪಂಗೆ ನಂದನಂ ಜಲಧಿಪರೀತ ಭೂವಳಯವರ್ದ್ಧನನಂಕದ ವಿಷ್ಣುವರ್ದ್ಧನಂ || ಕ || ಬಲ್ಲಾಳನ ತಂಮಂಗೇಂ ಬಲ್ಲಾಳ್ತನ ಮೆರವೆ ತೇಜಮೆಂಬುದು ಪೆಱರ್ಗಿಂನಿಲ್ಲುದಯಾದಿತ್ಯಮಹೀ ವಲ್ಲಭನಣ್ನಂಗೆ ವಿ
- ೨೩ ಷ್ಣುಗಲ್ಲದೆ ಜಗದೊಳ್ || ವ || ಆ ಪರಮಮಾಹೇಶ್ವರ ಸಮಯಾಧಾರನು(ಂ)ಮಪರ ರುದ್ರಾವತಾರನು(ಂ)ಮೇಕಾಂಗವೀರನು(ಂ)ಮೆನಿಸಿ ನೆಗೞ್ದ ಬಲ್ಲಾಳದೇವನ ಬಲ್ಲಾಳ್ತನಮಂ ಪೇೞ್ವಡೆ || ವೃ || ಕಾಳೆ
- ೨೪ ಗದೊಳ್ತಡಂಗಡಿದು ಮುಂದಣಥಟ್ಟಿನವುಂಕಿಪಾಯ್ದೊಡಾ ಮಾಳವ ಚಕ್ರವರ್ತ್ತಿ ಜಗದೇವನೆ ತಂನ ಮದಾಂಧಸಿಂಧುರಂ ಕೀಳಿಡೆ ಪೂತು ರಾವುತೆನೆ ರಾವುತನಲ್ಲೆ ನಿದಿರ್ಚ್ಚು ವೀರಬಲ್ಲಾಳೆನೆನೆಂದು ಮೆ
- ೨೫ ಟ್ಟಿ ತಿವಿದಾಳ್ತನವಚ್ಚರಿಯಾಯ್ತು ಧಾತ್ರಿಯೊಳ್ || ವೃ || ಬಿಟ್ಟಿಗನಾಹವಾಂಗಣಕೆ ಜೆಟ್ಟಿಗನೆತ್ತಿ ದೊಡತ್ತಕಂಚಿಬೆಂಗೊಟ್ಟುದು ಕೊಂಗು ಕೂಡೆನೆಲೆವಿಟ್ಟುದು ಮಿಕ್ಕವಿರಾಟಕೋಟೆ ಕೂಗಿಟ್ಟುದು
- ೨೬ ಕೋಯತೂರ್ಕ್ಕೆದಱ ಕೆಟ್ಟುದು ರೂಢಿಯ ಚಕ್ರಗೊಟ್ಟಮಿಂಬಿಟ್ಟುದು ಕಯ್ದುವಿಕ್ಕಿ ಕಡಲೊಳ್ಪಡಲಿಟ್ಟುದು ಸಪ್ತಕೊಂಕಣಂ || ಮುನಿದಾಂತೊಡ್ಡಿದ ಚಾತುರಂಗಬಳಮಂ ಕಣ್ಮುಟ್ಟಿನೋಳ್ನೋಡಿ ತೊ
- ೨೭ ಟ್ಟೆನೆ ತಾಂ ಕಂಡೊಡೆ ಹುಃಬಬಾಪ್ಪು ಬೞಕೆಂ ಬಲ್ಮೂಳೆಯಂ ನೆರ್ಕ್ಕನೆರ್ಕ್ಕನೆ ಬೇರ್ಕ್ಕೆಯ್ದುಱ ಸಱ್ಱಸಱ್ಱನಳವಿಂತೆಂದೆತ್ತಿ ಬೊಟ್ಟಿಟ್ಟು ಮಾಣ್ಬನೆ ಮಾಣಂ ವಿಳಯಾನ್ತಕಂಗೆ ಕುಡುಗಂ ಕೈ
- ೨೮ ಘಟ್ಟಿಗಂ ಬಿಟ್ಟಿಗಂ || ಧುರದೊಳು ವಿಷ್ಣುನೃಪಂಗೆ ದಿಗ್ವಿಜಯದುದ್ಯೋಗಂಬರಂ ನಿಲ್ವ ಭೂವರರಾರಾನೃಪರಾಮನೆತ್ತುವುದು ಬೇಱೊಂದರ್ಕ್ಕದೇಕೇನ್ ತುಳಾಪುರುಷಕ್ಕೆಂದು ಹಿರಣ್ಯಗರ್ಭಮಿರಲೆಂ
- ೨೯ ದುತ್ತುಂಗದೇವಾಲಯೋತ್ಕರಮಂ ಮಾಡಿಸಲೆಂದು ಸಂದ ಪರರಾಷ್ಟ್ರಂಗಳ್ಗೆ ತಾನೆತ್ತುವಂ || ಶತಮುಖನಳ್ಕೆಮಾಡುವ ಮಖಂಗಳ ಮೇರುಗಳೆಂದು ತಾರಕ ಪ್ರತತಿಗಳಾರಯಲ್ಪಡೆವದೇವಕು
- ೩೦ ಳಂಗಳವಾರ್ಧಿಗೆತ್ತಹರ್ಪ್ಪತಿ ಪೊಲಗೆಟ್ಟು ನಿಟ್ಟಿಪ ತಟಾಕಚಯಂಗಳ ಪೆರ್ಮೆಯಿಂದಮೂ ರ್ಜ್ಜಿತಮೆನಿಪಗ್ರಹಾರಮವು ವಿಷ್ಣುನೃಪಾಳಕನಿತ್ತದತ್ತಿಗಳ್ || ಕ || ದೇವಿವೆಸರೆಸೆವಲ
- ೩೧ ಕುಮಾದೇವಿಗಮಾ ವಿಷ್ಣುವರ್ದ್ಧನಂಗಂ ತನಯಂ ಶ್ರೀ ವಿಜಯನಾರಸಿಂಹಮಹೀವಲ್ಲಭನವನ ವೀರಮುಪಮಾತೀತಂ || ವೃ || ಕೆದಱತ್ತಳ್ಕಿತ್ತು ಬಳ್ಕಿತ್ತಗಿದುದಸ್ಮದ್ಬಳಂ ನಿಲ್ಲದಿಂನೀಪದದೊ
- ೩೨ ಳ್ಕೈಕೊಳ್ವೆನೆಂದೊಡ್ಡಿದಿರೊಳೊದವಿ ನಿಸ್ಸಾಣಮಂ ತಾನೆ ಸೂಳೈಸಿದನತ್ತಲ್ಸೈಪುಮಾಣ್ಮಾರ್ಮ್ಮ ಲೆದೊಡೆ ತಲೆಗೊಂಡೆತ್ತಿದಂ ತುಂಗಭದ್ರಾನದಿಯಂ ಪಾಮಡ್ಯಾವನೀಭೃದ್ಬಳದ ಪೆಣಗಳಿಂ ಕ
- ೩೩ ಟ್ಟಿದಂ ನಾರಸಿಂಹಂ || ನರಸಿಂಹಂ ನರಸಿಂಹನಂತೆ ಮುನಿಸಿಂ ಮಾಱಾಂತ ವೀರಾರಿ ಭೂಪರನ್ಕಣ್ಮುಟ್ಟಿನೊಳಿಂತು ಕಂಡೊಡೆ ಬೞಕ್ಕಂ ಮಂಮ ಪೋೞಳ್ದಿಕ್ಕಿ ಪೇರುರಮಂ ದೊಕ್ಕೆನೆ ಕುತ್ತಿ ಚಕ್ಕೆನೆ
- ೩೪ ಭುಜದ್ವಂದ್ವಂಗಳಿಂದೆತ್ತಿ ಬಲ್ಗುರುಳಂ ಕೋದೆಳಲಿಕ್ಕಿ ಬೀರಸಿರಿಗೆತ್ತಂ ತೋರಣಂಗಟ್ಟನೆ || ನಗೆ ಮೊಗವೆಂಬ ಚಂದ್ರಮನನಪ್ಪಿದ ಕೈರವಲಕ್ಷ್ಮಿಯಂಬಿನಂ ಸೊಗಯಿಪ ಚಲ್ಲಗಣ್ ಚಿಬುಕಮಂ
- ೩೫ ಪರಿಚುಂಬಿಸುವಂತೆ ಬಿಂಕದಿಂ ನೆಗದ ಘನಸ್ತನಂ ಸುೞಗುರುಳ್ನಳಿತೋಳ್ಕಳ ಕೋಕಿಳಸ್ವನಂ ಬಗೆಯುಗೆ ಕೂಡೆ ಸೋಲಿಸುವಳೇಚಲದೇವಿ ನೃಸಿಂಹದೇವನುಂ || ಕ || ಪಟ್ಟದ ಮಹದೇವಿಗಮಾಕ
- ೩೬ ಟ್ಟಣಕದ ಕಲಿಯೆನಿಪ್ಪ ನರಸಿಂಹಂಗಂ ಪುಟ್ಟಿದನಾಹವ ಜಯದೊಡವುಟ್ಟುವಿನಂ ರಾಯ ಮನ್ಮಥಂ ಬಲ್ಲಾಳಂ || ಧರೆಯಂ ತಾಱದ ಶೇಷನುಂ ಕಮಠನುಂ ದಿಗ್ದಂತಿಸನ್ತಾನಮುಂ ನೆರೆದೇಕಾಂಗ
- ೩೭ ದಿನಾಂತವೋಲ್ ಭುಜಗರಾಜದ್ರಾಘಿಮಂ ಕೂರ್ಮಖರ್ಪ್ಪರಕೂಟೋಚ್ಚಳಿತಾಂಶಮಾದಿಗಿಭಹಸ್ತ ಸ್ಥೂಳವಾಂತತ್ತಿಳಾಭರಮಂ ರಕ್ಷಣದಕ್ಷದಕ್ಷಿಣಭುಜಂ ಬಲ್ಲಾಳಭೂಪಾಳನಾ || ಮುನಿ
- ೩೮ ಸಿಂದಂ ತೋಳಬಾಳಂ ಜಡಿವನಡೆಯೆ ಸೂಳಯ್ಸುಸೂಳಯ್ಸಿ ನೂಂಕೆಂಬನಿತರ್ಕ್ಕಾಂಪಂ ನರಾರೋ ಮದಂ ಹುಸಿಹುಸಿ ಮಾಣೆತ್ತಮುಂದಾಯ್ತು ಸಿಂಹಾಸನಮತ್ತಲ್ವಾರ್ದ್ನಿಮು
- ೩೯ ಟ್ಟಿಟ್ಟಿದ ಪದವಳರ್ಗಿಟ್ಟಾಳ್ಗೆ ಕೊಟ್ಟೋಲಿಗೀ ಮೇದಿನಿ ಸಾಧ್ಯಂ ಬಾಪ್ಪಿವೆಂರಾಯರೊಳತಿಬಳನೋ ವೀರಬಲ್ಲಾಳದೇವಂ || ಕದನಪ್ರೋಚ್ಚಂಡಭೂಮಂಡಳಪತಿಗಳ ಬೇರ್ವೇರ್ಗ್ಗೆ ಬೆಂನೀರ ಹೊಯ್ದಾದುದು
- ೪೦ ಕಾಯ್ಪಿಂ ಬಾಳ ನಿಸ್ಸಂಗರಸಮಯದೊಳಿಂತಂತವಷ್ಟಂಭದಿಂ ತೂಗಿದ ಬಾಳ್ಬಾಳ್ವತ್ತು ಬಾೞ್ವುಗ್ಗಡದ ಬಿರುದರಂ ತೂಗಿ ತುತ್ತಿಟ್ಟುದೆಂ ತಾಳ್ದಿದನೋ ವಿಕ್ರಾನ್ತಮಂ ಯಾದವಕುಳ
- ೪೧ ತಿಳಕಂ ವೀರಬಲ್ಲಾಳದೇವಂ || ಶುಂಡಾಳಂ ಮದವುಳ್ಳಚೋಳನಳವಿಂದಾ ಸಿಂಹಳಂ ಸಿಂಹವುದ್ಧಂಡಂ ಸೇವುಣನಾವಗಂ ಸರಭವಿನ್ತೀ ಮೂವರುಂ ರಾಯರಂ ತುಂಡಂ ಮುಂ
- ೪೨ ಡದೊಳಾಳೆ ಪೊಯ್ಯದಿರನಾರೇನೆ ಪೇಳ್ದಪೆಂ ರಾಯಭೇರುಂಡಂ ರಾಯರ ಚಕ್ರವರ್ತ್ತಿ ರಣದೊಳ್ಬಲ್ಲಾಳಭೂಪಾಳಕಂ || ಉರಿಯಂತಂತಟ್ಟಿಯಿಂ ಸುಟ್ಟುರಿಸಿ ನೆಗೆಯ ನೆತ್ತರ್ಮಹೀ
- ೪೩ ಚಕ್ರದೋಳ್ಕಗ್ಗರಿಕೆಂತಂತೆತ್ತಲುಂ ಪಂದಲೆ ಪಡೆಲಿಡೆ ಧಂಧಂಧಗಿಲ್ಭುರ್ಭುಗಿಲ್ ಘಂಘರಿಲೆಂದೇ ನಳ್ವಿತೋ ಸೇವುಣಬಳವನಮಂ ವೀರಬಲ್ಲಾಳಕೋಪೋದ್ಧುರದಾವೋಗ್ರಾನಳಂ ಶಾತ್ರವನೃಪತಿ
- ೪೪ ಮೃಗಬ್ರಾತಮಳ್ಕಾಡುವಂನಂ || ಮುಳಿದು ಕಡಂಗಿ ಸೋರ್ವ ಭಟಕೋಟಿಗೆ ವಾರ್ದ್ಧಿತರಂಗದನ್ತೆ ಸಂಗಳಿಸುವ ವಾಜಿರಾಜಿಗೆ ದಿಶಾಪ್ರಸರಂ ಕವಿವಂತೆ ನೂಂಕಲೌವ್ವಳಿಸುವ ಗಂಧಸಿ
- ೪೫ ನ್ಧುರ ಘಟಾಳಿಗೆ ದಕ್ಷಿಣಚಕ್ರವರ್ತ್ತಿ ಕಂಡಳವಿಯೊಳಾರ್ದ್ದು ಬೊಬ್ಬಿಱದು ನೂಂಕಿದನಗ್ಗದ ಪಟ್ಟದಾನೆಯಂ || ಒಂದೆರಡಟ್ಟೆ ಕೋಡಮೊನೆಯೊಳ್ತಿರುಗುತ್ತಿರೆ ಬಲ್ವೆಣಂ ಮರಳ್ದೊಂದೆರಡಗ್ರ
- ೪೬ ಹಸ್ತದೊಳಗುರ್ವ್ವಿಸೆ ಮೋದಿದ ತಾಳವಟ್ಟದೊಳ್ಬಂದ ಪೆಣಂ ಪೆಡಂಮಗುಳೆ ಕಣ್ಗೆಸೆಗುಂ ಜವನೇಱದೊಂದು ಜಕ್ಕಂದೊಳದಂತೆ ಸೇವುಣಘರಟ್ಟನ ವೀರವಿಳಾಸಸಿಂಧುರಂ || ಅರಸುಗಳೊಂದೆರೞ್ ಬ
- ೪೭ ಯಲೊಳೊಂದೆರಡಳ್ಕಿದ ಕೋಟೆಯೊಳ್ನೆರಂಬೆರಸಿಱದಾಳ್ತನಕ್ಕಿನಿತನಿಕ್ಕರದಲ್ತಸಹಾಯ ಶೂರನಾಂತ ರನಿಱದಟ್ಟೆಯಾಡಿಸಿದ ತೋೞ್ವಲದಿಂ ನಡೆಗೋಟೆಗೊಂಡ ಸಂಗರವೆಣಿಸಲ್ಕಳುಂಬ ಮದನಾ
- ೪೮ ವುದನಾವುದನೇನ ಬಣ್ಣಿಪೆಂ || ಕ || ಆರೆಣೆಯಂಬೆನಳುಂಬದ ವೀರಮನೀ ಜಗಮನಾವಗಂ ಸುತ್ತಿದ ಮುಂನೀರೆಂಬುದಂ ಬಿರುದಿನ ಬೆಳ್ದಾರೆನಿಸಿದುದದಟ ರಾಯಕೋಳಾಹಳನಂ || ಗದ್ಯ ||
- ೪೯ ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರಂ ದ್ವಾರಾವತೀಪುರವರಾಧೀಶ್ವರನುಂ ಯಾದವಕುಳಾಂಬರದ್ಯುಮಣಿ ಸಮ್ಯಕ್ತ್ವಚೂಡಾ
- ೫೦ ಮಣಿ ಮಲೆರಾಜರಾಜನತುಳತರತೇಜಂ ಮಲಪರೊಳ್ಗಂಡಂ ಕದನಪ್ರಚಂಡನಸಹಾಯಶೂರ ನೇಕಾಂಗವೀರಂ ಶನಿವಾರಸಿದ್ಧಿ ಶರಣಾಗತವಾರ್ದ್ಧಿ ಗಿರಿದುರ್ಗ್ಗಮಲ್ಲಂ ರಾಯಸಿರಸೆ
- ೫೧ ಲ್ಲ ಚಲದಂಕರಾಮಂ ಬಿರುದಂಕಭೀಮಂ ನಿಶ್ಯಂಕಪ್ರತಾಪಚಕ್ರವರ್ತ್ತಿ ಹೊಯ್ಸಳ ಶ್ರೀ ವೀರಬಲ್ಲಾಳದೇವರು ದುಷ್ಟನಿಗ್ರಹ ಶಿಷ್ಟಪ್ರತಿಪಾಳಾರ್ತ್ಥಮುತ್ತರ ದಿಗ್ವಿಜಯಪ್ರಸಂಗದಿಂ
- ೫೨ ಬಂದು ವಿಜಯಸಮುದ್ರಾಪರನಾಮಧೇಯಮಪ್ಪ ಹಳ್ಳವೂರ ನೆಲೆವೀಡಿನೊಳು ಸುಕಸಂಕಥಾವಿನೋದದಿಂ ಪೃಥ್ವೀರಾಜ್ಯಂ ಗೆಯುತ್ತಮಿರೆ || ಕ || ತತ್ಪದನಖರಮಯೂ
- ೫೩ ಖಲಸತ್ಪುಷ್ಟಿತರಾಗರುಚಿರಪಲ್ಲವಿತದಯೋದ್ಯತ್ಪೂರ್ಣ್ನಫಳಿತ ಬುಧಪರಿಷತ್ಪೂಜ್ಯ ನವೀನಪಾರಿಜಾತಂ ಖ್ಯಾತಂ || ಸ್ವಸ್ತಿ ಶ್ರೀಮದಗಣ್ಯಪುಣ್ಯನೃಪಗೇಹಂ ಗಂಡಭೇರುಂಡ ತಂ
- ೫೪ ತ್ರಸ್ತೋಮಾಗ್ರಣಿ ಯಾದವೇಶ್ವರಸಭಾರತ್ನಪ್ರದೀಪಂ ಜಗತ್ಪ್ರಸ್ತುತ್ಯಾಕೃತಿ ಮಂತ್ರಿಮಂಡಳಿಕ ದಂಡಾಧೀಶ ತತ್ತನ್ಮಹಾನಿಸ್ತಾರೈಕ ಶರಣ್ಯರೂಪನಮಿತಂ ಗಂಭೀರರತ್ನಾಕರಂ ||
- ೫೫ ವ || ಆ ದಂಡನಾಥ ಚೂಡಾಮಣಿಯನ್ವಯಾವತಾರಮೆಂತೆಂದೊಡೆ || ವೃ || ಅತಿಶಯ ಮಾಯ್ತು ದಾನಗುಣಮಿಟ್ಟಳಮಾಯ್ತಭಿಮಾನದೇಳ್ಗೆ ಸಂತತಮೆಸೆದತ್ತು ಬಂಧುಜನಸಂ
- ೫೬ ಗತಿ ಪೆಂಪಳವಟ್ಟುದೂರ್ಜ್ಜಿತಾಕೃತಿ ದೊರೆವೆತ್ತುದಾಶ್ರಯಗುಣಂ ಪೆಸರ್ವೆತ್ತದು ಸತ್ಯಮೆಂಬಿನಂ ಚತುರಜನಂ ಚತುರ್ಥಕುಳದೀಪಕನೆಂಬುದು ಚಟ್ಟಿಸೆಟ್ಟಿಯಂ || ಕ || ಪತಿಹಿ
- ೫೭ ತಗುಣದಿಂದಮರುಂಧತಿಗೆಣೆ ಸೌಭಾಗ್ಯದೇಳ್ಗೆಯಿಂದಗ್ಗದಪಾರ್ವ್ವತಿಗೆ ದೊರೆ ಚಟ್ಟಸೆಟ್ಟಿಯ ಸತಿ ಭೂಭುವನಕ್ಕೆ ಜಕ್ಕಿಯಕ್ಕಂ ನೆಗಳ್ದಳು || ವೃ || ಪುರುಷನ ಮೇರು ಚಟ್ಟಮರಸಂಗೆ
- ೫೮ ಕುಳೋಂನತಿ ಪುಟ್ಟೆ ಪುಟ್ಟಿದಂ ಹರಿಯಮಸೆಟ್ಟಿ ಲೋಕದೊಳಗಂಗಭವಂಗೆಣೆ ರೂಪಿನಿಂ ಕಳಾಪರಿಣತೆಯಿಂ ಚತುರ್ಮ್ಮುಖನೊಳೋರಗೆ ವೈಭವದೇಳ್ಗೆಯಿಂ ಪುರಂದರನ ಸಮಾ
- ೫೯ ನವರ್ತ್ಥದೊದವಿಂ ಧನದಂಗನುಸಾರಿಯೆಂಬಿನಂ || ಕ || ಹರಿಯಮಸೆಟ್ಟಿಯ ಕುಳವಧು ಚರಿತ್ರವತಿ ಪುತ್ರವತಿ ಕಳಾವತಿ ಲೋಕೋತ್ತರಮಾನವತಿ ಸರಸ್ವತಿ ಸಿರಿಸರಿಯೆಂಬನ್ತು ಸು
- ೬೦ ಗ್ಗಿಯಕ್ಕಂ ನೆಗೞ್ದಳು || ರಸಮಿರ್ಪುದು ಕರತಳದೊಳು ರಸಾಯನಂ ನುಡಿಯೊಳಿರ್ಪ್ಪುದೀ ಕ್ಷಣದೊಳ್ ಸೊಂಪುಎಸೆವಮೃತಮಿರ್ಪ್ಪುದೆನೆ ಸಂತೋಸದಿಂ ಸುಗ್ಗವ್ವೆ ತಣಿಪುವಳ್ಪರಿಜನಮಂ ||
- ೬೧ ವೃ || ಹರಿಯಮಸೆಟ್ಟಿಗಂ ನೆಗೞ್ದ ಸುಗ್ಗಲೆಗಂ ಸುತನಾದನಲ್ತೆ ಬೇೞ್ಪರನಿಧಿ ಬಂಧು ಸಂಕುಳದಭೀಷ್ಟಫಳಂ ಪರಿವಾರದುತ್ಸವಂ ಪರಹಿತದಾಶ್ರಯಂ ಪರಧರ್ಮ್ಮದ
- ೬೨ ಮೆಯ್ಸಿರಿ ಸತ್ಯದುತ್ತರೋತ್ತರದಶೆ ಸತ್ಯದಾಯತನಮಪ್ಪಮೃತೇಶ್ವರದಂಡನಾಯಕಂ || ಜಡರಂ ಜಾತಿವಿಹೀನರಂ ವಿಕಳರಂ ನಾಣೊಕ್ಕರಂ ಮಿಕ್ಕರಂ ಪಡೆದಾ ದೋಷನಿವಾರಣ
- ೬೩ ಕ್ಕಮೃತದಂಡಾಧೀಶನಂ ಪುಣ್ಯದಿಂ ಪಡೆದಂ ಪದ್ಮಜನಲ್ಲದಂದು ನೆಗೞ ಗಾಂಭೀರ್ಯ್ಯಮೀಧ್ಯೆ ರ್ಯ್ಯಮಿಕ್ಕುಡುವಾರ್ಪ್ಪೀ ಕಡುನೇರ್ಪ್ಪು ಭೂಭುವನದೊಳ್ ಪೇಳಂನ್ಯ ಸಾಮಾನ್ಯಮೇ || ಅಮಿತಂ ದಂಡೇಶರತ್ನಂ
- ೬೪ ಪ್ರಭುದಿಟಕೆ ಕೆಲರ್ದ್ದೂರದಿಂ ಪರ್ವ್ವತಂ ರಮ್ಯಮೆನಿರ್ಪ್ಪಂತಿರ್ಪ್ಪರಾರಯ್ದೊಳಪುಗೆ ಪುರುಳಿಲ್ಲಂ ನರೋಪಾದಿಯೇ ಯುದ್ಧಮುಖಂ ತಳ್ತಲ್ಲಿ ಕೂರಾಳಧನರಿಲಮೆಗಂದಲ್ಲಿ ಮಾದಾನಿನಷ್ಟೋ
- ೬೫ ದ್ಯಮರೆಂತಂದಲ್ಲಿನಂಟಂ ವಿಷಮಸಮಯಮಾದಲ್ಲಿ ತಾನೇಕವಾಕ್ಯಂ || ಸುೞಯಲ್ಕಾಗದೆ ಮುಂನೆ ಸೂರ್ಯ್ಯನುದಯಂಗೆಯ್ವಂನಮನ್ತಿನ್ತುಮಿಂಬುಳಗಳ್ ಮಿಕ್ಕಿನ ದಂಡನಾಥರರೆಬರ್ಕ್ಕಾ
- ೬೬ ರ್ಯ್ಯಕ್ಕೆ ಖಳ್ಕಕ್ಕದೇಂ ಗೞಪಲ್ ಸಲ್ಲದೆ ಸಲ್ವದಿಂತಮಿತದಂಡಾಧೀಶನಂ ಕಾಣ್ಪುದುಂ ಬೞಕಾರ್ಮ್ಮಂತ್ರಿಗಳಾರ್ಸ್ಸಮಗ್ರರೆಣಿಸೂ ಬಲ್ಲಾಳನಾಸ್ಥಾನದೊಳ್ || ಸಿರಿಯುಂಟೇ ಪೆಱರ್ಗಿತ್ತು ತೋಱವು
- ೬೭ ದು ಬಲ್ಪುಂಟೇ ಮನಂ ಮೆಚ್ಚದಾಂತರನುಗ್ರಾಜಿಯೊಳಿಕ್ಕಿ ತೋಱುವುದು ತಾನುಂಡುಟ್ಟು ಚಿರ್ಮ್ಮೆಂದು ಕೊಂಡಿರೆ ಮಾಣೆಂತೞಬಲ್ಪದಾವಸಿರಿಯೆಂದಾತ್ತಣ್ಮಿ ಕೂರ್ತ್ತಿರ್ತ್ತು ಮಚ್ಚರಿಪಂಗರ್ತ್ಥಿಸು
- ೬೮ ವಂಗೆ ಸಲ್ವನಮಿತಂ ದಂಡೇಶದಿಕ್ಕುಂಜರಂ || ಕಡುವಲ್ಪಿಂ ಭೀಮನೆಂಬಂ ನೆಗೞ್ದನೆಳೆಯೊಳಂದಾತನಿಂದೀತನನ್ತೊ ನುಡಿಯಿಂದಂ ರಾಮನೆಂಬಂ ನೆಗೞ್ದನೆಳೆಯೊಳಂದಾತನಿಂದೀತನಾರ್ಗ್ಗಂ ಕಡುವಾರ್ಪ್ಪಿಂ ಕರ್ಣ್ನನೆಂಬಂ ನೆಗ
- ೬೯ ೞ್ದನೆಳೆಯೊಳಂದಾತನಿಂದೀತನಿಂ ಪೇಳ್ವಡೆ ಮತ್ತಿಲ್ಲಾರುಮೆಂಬಂತೆಸೆದಪನಮಿತಂ ದಂಡನಾಥ ತ್ರಿಣೇತ್ರಂ || ಮಡಗಿದ ತಾಂಬ್ರಶಾಸನಮದೊಂದೆಡಗೆತ್ತಿದ ಕಲ್ಲಶಾಸನಂ ನುಡಿವುವೆ ಮಂತ್ರಿಮುಖ್ಯನಮಿತಂನೆ
- ೭೦ ಱೆ ಕಾವುದನೀವುದಂ ತೊಡರ್ಪ್ಪಡಸಿರೆ ಕಾದ ಮಾನಸರ ಮೆಯ್ಸಿರಿಗಳ್ ನರಶಾಸನಂ ಮನಂಬಡೆವಿನಮಿತ್ತುದಂ ಪೊಗೞ್ವ ಲೋಕದ ನಾಲಗೆ ತಾಂಬ್ರಶಾಸನಂ | ಇದು ತಾಂ ಬಲ್ಲಾಳರಾಜಾಭ್ಯುದಯ ಜಯ
- ೭೧ ವತೀ ಮಂಗಳಾಚಾರಮೋ ಮೇಣಿದು ಪೂರ್ಣಾಂಭೋನಿಧಾನ ಪ್ರಬಳಲಹರಿಕಾಪೂರ ನಿಗ್ಘೋಷಮೋ ಮತ್ತಿದು ಹರ್ಷೋತ್ಕರ್ಷ ವರ್ಷಾಂಬುದ ನಿನದಮೋ ಪೇಳೆಂಬಿನಂ ಭೋಜನೋತ್ಸಾಹದಿನೊಪ್ಪು
- ೭೨ ತ್ತಿರ್ಪ್ಪುದೋರಂತಮಿತನ ಮನೆಯೊಳ್ ವಿಪ್ರಕೋಟಿಪ್ರಘೋಷಂ || ಮೊಱಡಿಯ ಮೇಲೆ ಮಾದುಫಲಮಾದವೊಲಾದುದು ತೀವಿನಿಂದ ಪೆರ್ಗ್ಗಡೆ ಮೊಱೆಯಲ್ಲದೆಂದಿನಿಪ ಬೆಳ್ವಲದಲ್ಲಿ ನವೀನ
- ೭೩ ಸೃಷ್ಟಿ ಕಣ್ದೆಱದುದು ದಂಡನಾಯಕಶಿಖಾಮಣಿಯಪ್ಪಮಿತಂ ಸಮುದ್ರಮೀತೆಱನೆನಿಪಂದದಿಂ ಗದುಗಿನೊಳ್ ನೆಱೆ ಕಟ್ಟಿಸಿದಂ ತಟಾಕಮಂ || ಅಮೃತಮರೀಚಿ ನಿಟ್ಟದಕಿಲಿಟ್ಟುದು ಲೋ
- ೭೪ ಕದ ಕಣ್ನ ಪುಂಣ್ಯ ಪುಂಜಮೆ ನೆಲಸಿತ್ತು ಯಾದವನೃಪೇಂದ್ರನ ಕೀರ್ತ್ತಿಯ ಬಿತ್ತುರಾಶಿಯಂ ನಿಮಿರ್ದುದೆನಿಪ್ಪ ವೋಲಮಿತನೊಪ್ಪಿರೆ ಮಾಡಿಸಿದಂ ಬೆಡಂಗು ಪೆತ್ತಮೃತಸಮುದ್ರದೊಳ್ ಮಹಿಮೆವೆತ್ತ
- ೭೫ ಮೃತೇಶ್ವರ ದಿವ್ಯಗೇಹಮಂ || ಅಮೃತಸಮುದ್ರಮದ್ರಿಮಥನಕ್ಕಗಿದಿಲ್ಲಿಗೆವಂದುದಿಂಬುವೆತ್ತ ಮರನದೀ . . ತೊಳಲಲಾಱದೆ ವಿಶ್ರಮಿಸಿತ್ತು ಧಾತ್ರಿಗಭ್ರಮನೆಲೆದಪ್ಪಿ ನೀೞ್ದುದೆನೆ ಧರ್ಮ್ಮದನೆ
- ೭೬ ರ್ಮ್ಮೆಗೆ ನೆರ್ಮ್ಮಮಾಯ್ತು ಸಂದಮೃತ ಸಮುದ್ರಮೆಂಬ ಪರಿಪೂರ್ಣ್ನತಟಾಕಮನೆಂತು ಬಣ್ನಿಪೆಂ || ಒದವಿ ಪೊದಳ್ದು ನೀೞ್ದ ಫಳಸಂಕುಳದಿಂದೆಸೆದಿರ್ದ್ದ ಪಾರಿಜಾತದ ತಳಿರ್ಗೊಂಬಿನನ್ತೆ ಮೆಱೆದಿರ್ಪ್ಪಮೃತೇಶ್ವ
- ೭೭ ರ ದಂಡನಾಥನಗ್ಗದ ಸಹಜಾತರೊಳ್ ಬುಧಜನಸ್ತುತರಲ್ಲದರಾರ್ ಸಮಸ್ತಸಂಮದಮೆನೆ ಸಲ್ವುದಾರಪೆಸರ್ಗೊಂಡೊಡಮಾ ಪೆಸರುತ್ತರೋತ್ತರಂ || ಕಲಿದೇವಂ ದೇವನಾತಂ ನುಡಿದನೆ ತೊದಳಿಲ್ಲಾ
- ೭೮ ತನೊಲ್ದಿತ್ತನೇ ನಿಶ್ಚಲ ಮಾತಂ ಕಾದನೇ ದೇವರ ಬರವಳವಿಂದಾತನಿಂತಾನ್ತನೇ ಮಾರ್ವ್ವಲಮಿಲ್ಲಾತಂ ಚಲಂ ಮಾಡಿದನೆ ಬಿದಿಗಮಿಂಬಿಲ್ಲಮತ್ತಾತನಂ ಭೂತಳದೊಳ್ ಪೋಲ್ವಾತನಾರ್ಬಾಪ್ಪಮಿತನೆ ವಡೆ
- ೭೯ ದಂತಂ ಮನಂ ಪುಂಣ್ಯಪುಂಜಂ || ಸಮನೆನಲಾತನೊಳ್ ಸಮನದಾರ್ ಚಲಮೇತನಲ್ಲದಿಲ್ಲ ಚಾಗಮೆ ತನಗಲ್ಲದಿಲ್ಲ ಲಲಿತಾಕೃತಿಯೇ ತನಗಲ್ಲದಿಲ್ಲ ಭೋಗಮೆ ತನಗಲ್ಲದಿಲ್ಲೆಸೆವ ಮಾನ್ತನವೇ |
- ೮೦ ತನಗಲ್ಲದಿಲ್ಲ ಸತ್ಯಮೆ ತನಗಲ್ಲದಿಲ್ಲ ಪೆಱರ್ಗೇಂ ಕಲಿಗಂ ಭುವನೈಕಸೇವ್ಯನೋ || ಕ || ಚಲದೊಳಭಿಮಾನದೊಳ್ ಸತ್ಕುಲದೊಳ್ ಸತ್ಯದೊಳುದಾರದೊಳ್ ಪರಹಿತದೊಳ್ ಕಲಿಯಣ್ಣದೆನೆ ನೆಗೞ್ದ
- ೮೧ ಪಪ ಕಲಿಯಂಣ್ನಂಲೋಕದೊಳಗೆ ಕೃತಯುಗಚರಿತಂ || ಧುರದೊಳ್ ಭೀಮನ ತಂಮನೂರ್ಜ್ಜಿತ ನಯೋಪಾಯಂಗಳೊಳ್ ರೇವತೀಶ್ವರನಾಖ್ಯಾನದ ತಮ್ಮನಗ್ರಜ ಮನಸ್ಸಂತೋಷಲಕ್ಷ್ಮೀಪರಂಪರೆ
- ೮೨ ಯೊಳ್ ರಾಮನ ತಂಮನೀಯಮಿತದಂಡೇಶಂಗೆ ತಂಮಂ ಕುಲಾಭರಣಂ ಶ್ರೀವದನಾಬ್ಜಭಾನು ಮಸಣಯ್ಯಂ ಮಂತ್ರಿವಿದ್ಯಾಧರಂ | ಶಿವಪಾದಶೇಖರಂ ದಾನವಿನೋದಂ ಸತ್ಯವಾಕ್ಯನಭಿಮಾನಧನಂ ಭು
- ೮೩ ವನಹಿತಂ ಕಟಕಕ್ಕೊಪ್ಪುವನಂಣ್ನನ ಪಟ್ಟವರ್ದ್ಧನಂ ಮಸಣಯ್ಯಂ || ವೃ || ಬಸವಂ ದಂಡೇಶಚೂಡಾಮಣಿ ರಣಧವಳಂ ಗಂಡಭೇರುಂಡನಿಲ್ದರ್ತ್ಥಿಸಿಬಂದಂಗಾಂತುನಿಂದಂಗಗಿದು ಶರಣಮೆಂದಂಗೆ ಭೂಚಕ್ರ
- ೮೪ ದೊಳ್ ಮಾನಸರೂಪಿಂದಿರ್ದ್ದಚಿನ್ತಾಮಣಿ ನೃಪಶಚಿವಾಕಾರದಿಂದಿರ್ದ್ದ ಕಳ್ಪಾನ್ತ ಸಮುದ್ಯದ್ವಹ್ನಿನಣ್ಪಿಂದಮಿತನಣುಗನಾಗಿರ್ದ್ದ ವಿದ್ಯಾಧರೇಂದ್ರಂ || ಕಳದೊಳ್ ಕಟ್ಟಂಕದೊಳ್ ಬಂದಡಸಿದಬಯಲೊ
- ೮೫ ಳ್ ಭಾಸೆಯೊಳ್ ಕೋಟಿಯೊಳ್ ದೋರ್ವ್ವಳದೊಳ್ ತಳ್ತಾಂಕೆಯೊಳ್ ಕೈದೆಗೆಯದ ಭರದೊಳ್ ಪೂಣ್ಕೆಯೊಳ್ ನಚ್ಚಿನಾಳ್ ಮಾರ್ಬ್ಬಳದೊಳ್ ಕಣ್ನುಳ್ಕುವಾಳ್ ಹೊಯ್ಸಳನಕಟಕದೊಳ್ತಾನೆ ಸಂದಗ್ಗದಾ
- ೮೬ ಳಗ್ಗಳದಾಳ್ ಬಲ್ಲಾಳದೇವಂಗಮಿತನ ಬಸವದಂಡನಾಥತ್ರಿಣೇತ್ರಂ || ಎಸೆವೀ ಬಲ್ಲಾಳ ದೇವಂಗಮಿತನೆ ಬಲದೋಳ್ ತೋಳ್ಗೆಸಂದಿರ್ದ್ದ ಕೂರ್ಬ್ಬಾಳ್ ಬಸವಂ ಬಲ್ಲಾಳನಾಸ್ಥಾಯಿಕೆಗಮಿತನೆ ದೀಪಂ ಪ್ರದೀಪ
- ೮೭ ಕ್ಕೆ ತೇಜಂ ಬಸವಂ ಬಲ್ಲಾಳರಾಜ್ಯಕ್ಕಮಿತನೆ ಮುಖಮಂ ತಾಮುಖಶ್ರೀಗೆ ನೇತ್ರಂ ಬಸವಂ ಮುಖ್ಯಪ್ರಭಾವಕ್ಕರಿವರೆನೆ ಮತ್ತಾರುವಂ ಪೇಳುಂಟೇ || ಕ || ಮೂವರು ಮನುಜಾತರಿನೈರಾವತದಿಂದ
- ೮೮ ಮೃತಕಿರಣನಿಂ ಕೌಸ್ತುಭದಿಂ ದೇವಾವನಿಜಮೆಸೆವವೊಲೀ ವಸುಧಾತಳದೊಳೆಸೆವನಮಿತ ಚಮೂಪಂ || ಸ್ವಸ್ತಿ ಸಮಸ್ತಭುವನರಾಜರಾಜಿವಿರಾಜಿತ ಚೂಡಾಮಣಿಮರೀ
- ೮೯ ಚಿಮಂಜರೀರಂಜಿತಚಳನನಳಿನಶ್ರೀಮದಮೃತೇಶ್ವರದೇವಲಬ್ಧವರಪ್ರಸಾದನುಂ | ಅನವರತ ಪಾತ್ರದಾನವಿನೋದನುಂ | ಯಾದವಾನ್ವಯಗಗನಭಸ್ತಿಮಾಳಿನಿಶ್ಯಂಕಪ್ರತಾಪಚಕ್ರವ
- ೯೦ ರ್ತ್ತಿ ವೀರಬಲ್ಲಾಳದೇವರಾಜ್ಯಾಭ್ಯುದಯಕರಣಕಾರಣನುಂ | ವಿಜಯಗೋಮಿನೀಮಂಗಳಾ ಯತನರತ್ನತೋರಣನುಂ | ಚತುರ್ತ್ಥಕುಳಕುಮುದಿನೀಶರಚ್ಚಂದ್ರಚಂದ್ರಿಕೋಪಮಾನಮಾ
- ೯೧ ನಾನೂನ ಸರ್ವ್ವಲಕ್ಷಣಸಂಪೂರ್ಣ್ನಸುಗ್ಗಾಂಬಿಕಾಗರ್ಬ್ಬದುಗ್ಧಾರ್ಣ್ನವಪಾರಿಜಾತನುಂ ಸೌಂದರ್ಯ್ಯವಿಜಿತ ಚೇತೋಜಾತನುಂ ವೀರವೈರಿಧಾರಿಣೀನಾಥಹಸ್ತ್ಯಶ್ವರಥಪದಾತಿ ಸಂಘಾತನಿರ್ಗ್ಘಾತಪ
- ೯೨ ಟಿಷ್ಟ ನಿಷ್ಠುರ ಕೃಪಾಣಕುಳಿಶದಂಡಮಂಡಿತ ಭುಜಾಮಂಡಳನುಂ ವೀರಲಕ್ಷ್ಮೀ ಪ್ರಸಾದನೋ ಪಚಿತಕರ್ಣ್ನಕುಂಡಳನುಂ | ಸನ್ಧಿವಿಗ್ರಹಯಾನಾಸನಸಂಶ್ರೆಯದ್ವೈದೀಭಾವಭಾವಿತಪ್ರಯೋ
- ೯೩ ಗನಿಪುಣಮಂತ್ರಿಮಂಡಳನಿತ್ಯಾವಳೋಕರತ್ನದರ್ಪ್ಪಣನುಂ | ಪರಿವಾರನಿವಹಚಿತ್ತಸಂತರ್ಪ್ಪಣನುಂ | ವಿದ್ಯುದ್ದಂಡನರ್ತ್ತನಾನುಸಾರಿಸ್ವೈರಚಾರಶೂಕಳತುರಂಗಮಾರೂಢಪ್ರೌಢದಂಡಾಂ
- ೯೪ ಕಶಬ್ದಶಿಕ್ಷೆಪಜಾತರೇಪರೇಖಾವಿಳಾಸವತ್ಸರಾಜನುಂ | ಶಸ್ತ್ರಶ್ರಮಾಚಾರ್ಯ್ಯಭಾರದ್ವಾಜನುಂ | ಕಲಿದೇವ ಮಸಣದೇವ ಬಸವರಾಜ ಪ್ರಸಿದ್ಧ ಸೋದರ ತ್ರಿತಯಶಾಖಾನುಂಬಂಧಬಂ
- ೯೫ ಧುಜನಫಳಪ್ರದಾಯಕಕಳ್ಪವ್ರಿಕ್ಷನುಂ | ಶರಣಾಗತಮಂಡಳಿಕರಕ್ಷಾದಕ್ಷನುಂ | ಸತ್ಯತ್ಯಾಗವಿಕ್ರಮ ಕ್ರೀಡಾನವೀನ ರಾಧೇಯನುಂ | ಶೌಚಗಾಂಗೇಯನುಂ | ಸ್ವಾಮಿದ್ರೋಹಮೋಹಾನ್ಧ
- ೯೬ ಕಾರಸಂಹಾರಸಹಶ್ರಕಿರಣನುಂ | ಯಾದವಕಟಕರತ್ನಾಭರಣನುಂ | ದಂಡನಾಥ ಮೌಳಿಮಾಣಿಕ್ಯನುಂ | ದಂಡನಾಥ ಕುಸುಮಕೋದಂಡನುಂ | ದಂಡನಾಥಗಂಡ ಮಾರ್ತ್ತಂಡನುಂ ದಂಡಾಥದಿಕ್ಕುಂಜ
- ೯೭ ರನು(ಂ) ಮುದ್ದಂಡದಂಡನಾಥಕೋಳಾಹಳನುಂ | ವಾಚಾಳದಂಡನಾಥಹಾಳಾಹಳನುಂ | ಚೋಳದಂಡನಾಥ ಕಾಳರಾಕ್ಷಸನುಂ | ಮಾಳವದಂಡನಾಥಮದನತ್ರಿಣೇತ್ರನುಂ | ಗೂರ್ಜ್ಜರದಂಡನಾಥಗಿರಿವ
- ೯೮ ಜ್ರದಂಡನುಂ | ರಾಯದಂಡನಾಥಗಂಡಭೇರುಂಡನುಂ | ಚೋಳಬಾಳಿಕಾಹಂಸತಿಳಕನುಂ | ಕೇರಳನಿತಂಬಿನೀ ತಾರಹಾರನುಂ | ಮಾಳವಮಾನಿನೀಮನೋರಂಜನನುಂ | ಕರ್ಣ್ಣಾಟಕಾಮಿನೀಕರ್ಣ್ಣಾಭರಣನುಂ | ಪ್ರಧಾನ
- ೯೯ ಜಂಗಮಕೇದಾರನುಂ | ಸಕಳಜನಾಧಾರನುಮೆನಿಸಿಮಹಿಮೆಗಾಸ್ಪದಮಾದಮೃತೇಶ್ವರ ದಂಡನಾಯಕಂ ಕಗ್ಗಿಯವೃತ್ತಿಯೊಳಗಣಮೃತಸಮುದ್ರದೊಳ್ ಶ್ರೀಮದಮೃತೇಶ್ವರದೇವರಂ
- ೧೦೦ ಸುಪ್ರತಿಷ್ಠಿತಂ ಮಾಡಿ ಸಕವರ್ಷಂ ೧೧೧೯ ನೆಯ ಪಿಂಗಳಸಂವತ್ಸರದ ಪುಷ್ಯ ಬಹುಳ ಸಪ್ತಮಿ ಸೋಮವಾರದುತ್ತರಾಯಣ ಸಂಕ್ರಮಣದಂದು ಶ್ರೀಮದುವಜ್ರೇಶ್ವರದೇವರ ಸಂನಿಧಾನದೊಳ್
- ೧೦೧ ಪಾದಪೂಜಾಪುರಸ್ಸರಂ ಶ್ರೀಮತ್ಪ್ರತಾಪಚಕ್ರವರ್ತ್ತಿ ವೀರಬಲ್ಲಾಳದೇವರ ಶ್ರೀಹಸ್ತದಿಂ ಧಾರಾಪೂರ್ವ್ವಕಂ ಪಡೆದು ತಂನ ಮಾಡಿಸಿದಮೃತೇಶ್ವರ ದೇವರ ಅಂಗಭೋಗರಂಗಭೋಗಕ್ಕಂ | ಚೈತ್ರ
- ೧೦೨ ಪವಿತ್ರಾರೋಪಣಕ್ಕಂ | ದೇವರ ಪೂಜಾರಿಗಪರಿಚಾರಕರ್ಗ್ಗಂ ಬ್ರಾಹ್ಮಣರಾಹಾರದಾನಕ್ಕಂ | ಖಂಡಸ್ಫುಟಿತಜೀಣ್ನೋದ್ಧಾರಕ್ಕವಾಗಿ ಆಸಂದಿನಾಡೊಳಗಣಗ್ರಹಾರ ಹುಣಿಸೆಯಕಟ್ಟವಂ ಸ
- ೧೦೩ ರ್ವ್ವನಮಸ್ಯವಾಗಿ ಕೊಟ್ಟ ದತ್ತಿ | ಹಾದಿಯಕೆಱೆಯ ನಾಗಗೌಡನುಂ ಕಗ್ಗಿಯಭಾಗೆಯ ಪ್ರಭುಗಾವುಂಡುಗಳ್ ಪ್ರಮುಖವಾಗಿ ಆ ಭಾಗೆಯ ಗಂಗವುರವಂ ಸರ್ವ್ವನಮಸ್ಯವಾಗಿ ಬಿಟ್ಟ
- ೧೦೪ ದತ್ತಿ | ಕೂಂಟನಮಡುವಿನ ಕೇತಗವುಡನೆಱಕಗೌಡ ಮಾಳಗೌಡನಿನ್ತೀ ಮೂವರುಂ ತಂಮ ಹೊಲದೊಳಗೆ ಅಮೃತೇಶ್ವರ ದೇವರ್ಗ್ಗೆ ದೇವತಾಲಯಕ್ಕಂ ಪುರಮಂ ಕಟ್ಟಲಾಚಂದ್ರ ತಾರಂಬರಂ
- ೧೦೫ ಸಲ್ವನ್ತಾಗಿ ಕೊಟ್ಟ ಭೂಮಿ | ಮತ್ತವಾ ಹೊಲದೊಳಗೆ ಪುರದಿಂ ಮೂಡಲುಂ ತೆಂಕಲುಂ ಗಂಗನ ಗಳೆ ಗದ್ದೆ ಮತ್ತರೊಂದು | ತೋಟ ಮತ್ತರೊಂದು | ಅನ್ತು ಮತ್ತರೆರಡಂ ಕೊಟ್ಟ ದತ್ತಿ | ಹಾದಿಯಕೆ
- ೧೦೬ ಱೆಯ ಪ್ರಭು ನಾಗಗವುಂಡಂ ತಂನ ಹೊಲದೊಳಗೆ ಪುರದ ಪಡುವಣ ಎಱೆಯಮನ ಮಸಣಗವುಡನೆಕೆಱೆಯ ಕೆಳಗೆ ಗದ್ದೆ ಮತ್ತರೊಂದು ಕೊಟ್ಟ ದತ್ತಿ | ಅಮೃತಸಮುದ್ರದ ಮೂಡಣ
- ೧೦೭ ಕೋಡಿಯಲ್ಲಿ ನಾಗಗೌಡ ಮುಖ್ಯವಾಗಿ ಬಾಚಲೇಶ್ವರದ ಪಟ್ಟಣಸ್ವಾಮಿ ಮಹದೇವಸೆಟ್ಟಿಯರು ತಂಮ ಗೌಡಿಕೆಯ ನೇಱಲಕೆಱೆಯ ಚಿಣ್ನವಗಟ್ಟದ ಕೆಱೆಯ ಕೆಳಗೆ ಗಂಗನ
- ೧೦೮ ಗಳೆಯಲು ಗದ್ದೆ ಮತ್ತರೊಂದಂ ಕೊಟ್ಟ ದತ್ತಿ | ಅಮೃತಸಮುದ್ರದ ಪಡುವಣ ಕೋಡಿಯಲ್ಲಿ || ಕ || ಅಯ್ಯಣವಾಡಿಯೊಳಂ ಕಡುರಯ್ಯಂ ಜಗದೊಳಗೆ ಕೊಟ್ಟು ಕುಣಿವಿಗ್ರಾಮ
- ೧೦೯ ಕ್ಕಯ್ಯನೆನಸಿರ್ದ್ದನಾ ರುದ್ರಯ್ಯಂಗಂ ಮಂತ್ರಿಜಕ್ಕನಾತ್ಮಜನಾದಂ || ವ || ಆ ಹೆಗ್ಗಡೆ ಜಕ್ಕಯ್ಯ ನಮೃತೇಶ್ವರ ದಂಡನಾಯಕರ ಬೆಸದಿಂದಮೃತೇಶ್ವರದೇವರ ಭವನಮ(ಂ)ನತಿಚಲ್ವನಾಗಿಮಾ
- ೧೧೦ ಡಿಸಿದಡೆಯಮೃತೇಶ್ವರ ದಂಡನಾಯಕರು ಮೆಚ್ಚಿ ಕೊಟ್ಟ ಗದ್ದೆ ಗಂಗನ ಗಳೆಯಲು ಕಂಬ ಹಂನೆರಡು | ಮತ್ತಂ ದವಸಿಗರ್ಗ್ಗೆ ಗಂಗನಗಳೆಯಲು ಕಂಬವಱುವತ್ತು | ಮತ್ತಂ ದೇವರ ನೈವೇ
- ೧೧೧ ದ್ಯಕ್ಕೆ ಗದ್ದೆ ಗಂಗನ ಗಳೆಯಲು ಕಂಬ ನಾಲ್ವತ್ತು ಅಂತು ಮತ್ತರೊಂದು ಕಂಬ ಹಂನೆರಡುಂ ಕೊಟ್ಟ ದತ್ತಿ | ಅಮೃತೇಶ್ವರದೇವರ್ಗ್ಗೆ ದೋರಸಮುದ್ರದ ಭತ್ತವಸರದಂಗಡಿಯ ಸಮಸ್ತನಕ
- ೧೧೨ ರಂಗಳುಂ ಮುಖ್ಯವಾಗಿ ಗಂಮೇಶ್ವರದಂಗಡಿ | ಬೊಮ್ಮಲದೇವಿಯರಂಗಡಿ | ಕೇತಲದೇವಿಯರಂಗಡಿ | ಚಂದ್ರಮೌಳಿಯಣ್ನನಂಗಡಿ | ಬೊಪ್ಪದೇವನ ಬಸದಿಯಂಗಡಿ | ಬೆಲುಹೂರಂಗಡಿ | ಪ್ರತ್ಯೇಕ
- ೧೧೩ ಪ್ರತ್ಯೇಕ ಸೆಡೆ ಅರವನವೊಂದು | ಚೈತ್ರಕ್ಕೆ ಹಾಗವೊಂದು | ಪವಿತ್ರಕ್ಕೆ ಹಾಗವೊಂದು || ವೃ || ಪ್ರಿಯದಿಂದಿಂತಿದನೆಯ್ದೆ ಕಾವಮನುಜಂಗಾಯುಂ ಜಯಶ್ರೀಯುಮಕ್ಕೆ ಯಿ
- ೧೧೪ ದಂ ಕಾಯದೆ ಕಾಯ್ವ ಪಾಪಿಗೆ ಕುರುಕ್ಷೇತ್ರಂಗಳೊಳು ವಾರಣಾಶಿಯೆಳೆಕ್ಕೋಟಿ ಮುನೀಂದ್ರರಂ ಕವಿಲೆಯಂ ವೇದಾಢ್ಯರಂ ಕೊಂನ್ದುದೊಂದಯಶಂಪೊರ್ದ್ದುಗೆವೆನ್ದು ಸಾಱದಪುವೀ ಶೈ
- ೧೧೫ ಳಾಕ್ಷರಂ ಧಾತ್ರಿಯೊಳು | ಸ್ವದತ್ತಾಂ ಪರದತ್ತಾಂ ವಾ ಯೋ ಹರೇತಿ ವಸುಂಧರಾ | ಷಷ್ಟಿರ್ವ್ವರ್ಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿಃ || ಉದ್ದಂಡಕವಿಭಾಳನೇತ್ರಂ ಸುಕವಿ
- ೧೧೬ ಜನಮಿತ್ರಂ ಜನ್ನಯ್ಯನ ಕವಿತೆ | ಸರಸ್ವತೀಕರ್ಣ್ನಪತ್ರಂ ಕಮನೀಯಗಾತ್ರಂ ಲೊಕ್ಕಿಗುಂಡಿಯ ಮಹದೇವಂಣ್ನಂಗಳ ಶಿಷ್ಯ ನಾಕಂಣ್ನನ ಬರಪ | ಬಿರುದ ಕಂಡರಣೆಕಾಱ
- ೧೧೭ ಕೋಳಾಹಳಂ ರೂವಾರಿ ಮಲ್ಲೋಜನ ಕಂಡರಣೆ || ಮಂಗಳಮಹಾ ಶ್ರೀ ಶ್ರೀ || ಕಗ್ಗಿಯವೃತ್ತಿಯ ಸಾವಂತ ಮಾಳಗೌಡನಿಂ ಕಿಱಯ ಬಂಮಗಾವುಂಡಂಗೆ | ವೃ |
- ೧೧೮ ನಿರುಪಮದಾನಿ ಬಂಮಗವುಂಡಂಗವನಂಗನೆ ಮಾಕಗೌಡಿಗೀ ಹರಿಹರನಬ್ಜಶಂಭವರು ಪುಟ್ಟುವ ಮಾರ್ಗದೆ ಪುಟ್ಟಿದರ್ಸ್ಸುತರ್ವ್ವರನೀಧಿ ಕೇತಗೌಡನೆಱೆಯಂಗಗವುಂಡನು ಮಾ
- ೧೧೯ ಳಗೌಡರಾದರದೊಳೆ ಕೊಟ್ಟರೊಪ್ಪುವಮೃತೇಶಪುರಕ್ಕತಿಸೇವ್ಯಭೂಮಿಯಂ || ಬ್ರಹ್ಮಪುರಿಯ ಬ್ರಾಹ್ಮಣರ್ಗ್ಗೆ ಗಂಗವುರದ ಕೆಱೆಯ ಕೆಳಗೆ ಗದ್ದೆ | ಗಣಪತಿಭಟ್ಟ ಉಪೇಂ
- ೧೨೦ ದ್ರಭಟ್ಟ ಕುದುರೆಯಪ್ಪಯ್ಯ || ಬಮ್ಮಯ್ಯ | ಕೂಚಯ್ಯ | ನಾಗದೇವಭಟ್ಟ | ದಾಡಿಗೆಯಪ್ಪಯ್ಯ | ನಾರಣ ನಾಗದೇವ | ಹರಿಹರಪೆದ್ದಿ | ಯಿನ್ತಿನಿಬರ್ಗ್ಗಂ ಮತ್ತರೊಂದು ಕಂಬ ಹತ್ತು | ಅಮೃತಸಮುದ್ರದ ಅ
- ೧೨೧ ಪ್ಪಯ್ಯಂಗೆ ಕಂಬ ಹತ್ತು