ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಪ್ರದೀಪ ಕುಮಾರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಕನ್ನಡದಲ್ಲಿ ನನ್ನ ಮೊದಲ ಲೇಖನ:

ಬುದ್ದನ ನೆನಪು:-

[ಬದಲಾಯಿಸಿ]

ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ.... ಕೆಲವು ವರ್ಷಗಳ ಹಿಂದೆ ನನ್ನ ವಿಚಾರವಾದಿ ಗೆಳೆಯರ ಗುಂಪೊಂದು ಬುದ್ಧ ಹೇಳಿದ್ದ ಪ್ರಾಥಮಿಕ ಸತ್ಯವೆಂದು ಅವರು ನಂಬಿದ್ದ 'ಆಸೆಯೇ ದುಃಖಕ್ಕೆ ಕಾರಣ' ಎಂಬ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದರು. ಅವರಲ್ಲೊಬ್ಬರು ಆಸೆ ಇಲ್ಲದೆ ಬದುಕಲು ಹೇಗೆ ಸಾಧ್ಯ ಎಂದು ಕೇಳಿದ ಪ್ರಶ್ನೆಯೇ ಈ ಚರ್ಚೆಗೆ ಕಾರಣವಾಗಿತ್ತು! ಇದಕ್ಕೆ ಗುಂಪಿನ ನಾಯಕ ಆಸೆ ಎಂಬ ಶಬ್ದವನ್ನು ಬುದ್ಧ ದುರಾಸೆ ಅನ್ನುವ ಅರ್ಥದಲ್ಲಿ ಬಳಸಿದ್ದಾನೆ ಎಂಬ ಸಮಝಾಯಿಷಿ ನೀಡಿದಾಗ ಮತ್ತೊಬ್ಬರು ಎದ್ದು ನಿಂತು, ಇದು ನಿಜವಾಗಿದ್ದರೆ ಬುದ್ಧನಿಗೆ ಭಾಷಾ ಬಡತನವಿತ್ತೆಂದು ಹೇಳಬೇಕಾಗುತ್ತದೆ ಎಂದರು. ಹಾಗಿಲ್ಲದಿದ್ದರೆ, ಬುದ್ಧ ಆಸೆ ಎಂಬ ಶಬ್ದದ ಬದಲಾಗಿ ದುರಾಸೆ ಎಂಬ ಶಬ್ದವನ್ನೇ ಬಳಸುತ್ತಿದ್ದ ಎಂಬುದು ಅವರ ವಾದ! ಈ ವಾದ - ವಿವಾದ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತಿದ್ದಂತೆ, ಇದು ಬುದ್ಧನ ಶಾಂತಿ - ಸಮಾಧಾನಗಳ ವ್ಯಕ್ತಿತ್ವಕ್ಕೆ ಒಗ್ಗುವುದಿಲ್ಲವೆಂದು ನಾನು ಎದ್ದು ನಿಂತು ಎರಡು ವಿಷಯಗಳನ್ನು ಸ್ಪಷ್ಟಪಡಿಸಬೇಕಾಯಿತು. ಒಂದು:ಬುದ್ಧ ಕನ್ನಡ ಭಾಷೆಯಲ್ಲಿ ಬೋಧನೆ ಮಾಡಲಿಲ್ಲ. ಎರಡು:ನೀವು ಚರ್ಚಿಸುತ್ತಿರುವುದು ನೀವು ತಿಳಿದಂತೆ ಬುದ್ಧ ಹೇಳಿದ ಪ್ರಾಥಮಿಕ ಸತ್ಯ ಅಲ್ಲ. ನನ್ನ ಮೊದಲನೆಯ ಸ್ಪಷ್ಟನೆ ಕೆಲವರಲ್ಲಿ ಲಘುವಾಗಿ ನಗೆಯುಕ್ಕಿಸಿದರೆ, ಮತ್ತೆ ಕೆಲವರನ್ನು ಯೋಚನೆಗೆ ಹಚ್ಚಿತು. ಬುದ್ಧನ ಈ ಸತ್ಯ ಆತ ಮಾತನಾಡುತ್ತಿದ್ದ ಪಾಲಿ ಭಾಷೆಯಲ್ಲಿ ದಾಖಲಾಗಿದ್ದು, ಅದರಲ್ಲಿರುವ 'ತನ್ಹಾ' ಎಂಬ ಶಬ್ದ ಕನ್ನಡದಲ್ಲಿ 'ಆಸೆ' ಎಂದು ಅನುವಾದಿತವಾಗಿ ಈ ಎಲ್ಲ ಚರ್ಚೆ - ಗೊಂದಲಗಳಿಗೆ ಕಾರಣವಾಗಿದೆ ಎಂದು ವಿವರಿಸಿದೆ. ಈ ತನ್ಹಾ ಎಂಬುದು ಸಂಸ್ಕೃತದಲ್ಲಿ 'ತೃಷ್ಣಾ'ಗೆ ಸಮಾನಾರ್ಥಕವಾದ ಶಬ್ದ. ಕನ್ನಡದಲ್ಲಿ ಇದಕ್ಕೆ ಹತ್ತಿರದ ಸಮಾನಾರ್ಥಕ ಶಬ್ದವೆಂದರೆ ದಾಹ. ದಾಹ ಎಂಬುದಕ್ಕೆ ಆಸೆ ಎಂಬುದು ಒಂದು ಅರ್ಥ ಛಾಯೆಯಷ್ಟೆ. ವಾಸ್ತವವಾಗಿ, ಬುದ್ಧನ ಉಪದೇಶಗಳ ಒಟ್ಟು ಹಿನ್ನೆಲೆಯಲ್ಲಿ ದಾಹ ಎಂದರೆ, ಇರುವಿಕೆಯ, ಬದುಕುವ ದಾಹ. ಅಂದರೆ ದೇಹಭಾವ ಅನುಭವಿಸುವ ಕೊರತೆಗಳನ್ನು ನೀಗಿಸಿಕೊಳ್ಳುವ ದಾಹ. ಇದನ್ನು ಇಂಗ್ಲಿಷ್‌ನಲ್ಲಿ craving ಎಂದು ಕರೆಯಬಹುದು. ಪಾರಮಾರ್ಥಿಕ ಭಾಷೆಯಲ್ಲಿ ಇದನ್ನು ಭವರೋಗ ಎಂದು ಕರೆಯುವರು. ಈ ಭವರೋಗದ ಮೂಲ ನೆಲೆ, ಮಮಕಾರ - attachment. ಇದೇ ದುಃಖಕ್ಕೆ ಕಾರಣ ಎನ್ನುತ್ತಾನೆ ಬುದ್ಧ. ಆದರೆ ಇದು ಬುದ್ಧನ ಪ್ರಾಥಮಿಕ ಸತ್ಯವಲ್ಲ. ಇದು ಆತ ಹೇಳಿದ ನಾಲ್ಕು ಮುಖ್ಯ (ಆರ್ಯ) ಸತ್ಯಗಳಲ್ಲಿ ಎರಡನೆಯದು. ಮೊದಲ ಸತ್ಯ 'ಸಂಸಾರ ದುಃಖಮಯ' ಎಂಬುದು. ಇದನ್ನು ಅರಿಯದೆ ಎರಡನೇ ಸತ್ಯವನ್ನು ಅರ್ಥ ಮಾಡಿಕೊಳ್ಳಲೆಳಿಸಿದ್ದರಿಂದಲೇ ಈ ಎಲ್ಲ ಗೊಂದಲ. ಆದುದರಿಂದ ಬುದ್ಧನನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ನಾವು ಆತ ಹೇಳಿದ ಮೊದಲ ಸತ್ಯದಿಂದಲೇ ಆರಂಭಿಸಬೇಕು. ಈ ಮೊದಲನೇ ಸತ್ಯದಲ್ಲಿನ 'ಸಂಸಾರ' ಎಂದರೆ, ಕುಟುಂಬ ಅಥವಾ ಜಗತ್ತು ಎಂದರ್ಥವಲ್ಲ. ಅದು ಭವಚಕ್ರ - ಹುಟ್ಟು ಸಾವುಗಳ ಸುಳಿ. ಇದರಲ್ಲಿ ಸಿಕ್ಕಿ ಹಾಕಿಕೊಂಡಿರುವುದರಿಂದಲೇ ಇಡೀ ಜೀವ ಜಗತ್ತು ದುಃಖದಲ್ಲಿ ತೊಳಲಾಡುತ್ತಿದೆ ಎಂದ ಬುದ್ಧ. ಇದು ಕೆಲವರಿಗೆ ವಿಚಿತ್ರ ಅನ್ನಿಸಬಹುದು. ಬುದ್ಧನ ಪ್ರಕಾರ ಹಾಗಾದರೆ, ಬದುಕಿನಲ್ಲಿ ಸುಖವೆಂಬುದೇ ಇಲ್ಲವೆ? ಹಾಗೆ ನೋಡಿದರೆ, ಬುದ್ಧನ ಪರಿಭಾಷೆಯಲ್ಲಿ ಸುಖವೆಂಬ ಶಬ್ದವೇ ಇಲ್ಲ! ಇಲ್ಲದ ಅದರ ಹುಡುಕಾಟದಲ್ಲೇ ಮನುಷ್ಯ ದುಃಖಿತನಾಗಿರುವುದು ಎನ್ನುತ್ತಾನೆ ಆತ. ಇಲ್ಲಿ ಇಲ್ಲ ಎಂದರೆ, ಶಾಶ್ವತವಲ್ಲ - ಎಲ್ಲ ಕ್ಷಣ ಭಂಗುರ ಎಂದರ್ಥವಷ್ಟೆ. ಹಾಗಾಗಿ ಅದು - ಸುಖವೆನಿಸುವುದು - ನಿಜವಲ್ಲ ಎಂದೂ ಅರ್ಥ. ಮನುಷ್ಯ ಈ ನಿಜವಲ್ಲದ್ದನ್ನು ಅರಸುತ್ತಾ, ಅದನ್ನು ತನ್ನ ಸಾವಿನಲ್ಲಿ ಕಳೆದುಕೊಳ್ಳುವ ಆತಂಕದಲ್ಲೇ ಜೀವನ ದೂಡುತ್ತಾ ಆತ್ಯಂತಿಕವಾಗಿ ದುಃಖಿಯೇ ಆಗಿರುತ್ತಾನೆ. ಈ ದುಃಖವನ್ನು, ಹುಟ್ಟು ಸಾವುಗಳನ್ನು ಮೀರುವ ಮೂಲಕ ನಿವಾರಿಸಿಕೊಳ್ಳಬಹುದು ಎಂಬುದು ಬುದ್ಧನ ಮೂರನೆಯ ಸತ್ಯ. ಈ ಮೀರುವಿಕೆಯನ್ನೇ ನಿರ್ವಾಣವೆನ್ನುವುದು. ಆ ಸ್ಥಿತಿಯನ್ನೇ ಶೂನ್ಯತಾ ಎನ್ನುವುದು. ಇದನ್ನು ಸಾಧಿಸಲು ಆತ ಹೇಳುವ ಅಷ್ಟಾಂಗ ಮಾರ್ಗವೇ ನಾಲ್ಕನೇ ಸತ್ಯ. ಜಗತ್ತೆಂಬುದು ಇದೆ ಮತ್ತು ಇಲ್ಲ ಎಂಬೆರಡು ಸ್ಥಿತಿಗಳಾಚೆಯ ಅನುಭವವೆಂಬ ಅರಿವನ್ನು ತಂದುಕೊಡುವ ಈ ಅಷ್ಟಾಂಗ ಮಾರ್ಗ, ಎಂಟು ಕುಶಲತೆಗಳನ್ನು ಒಳಗೊಂಡಿದೆ. ಸ್ಥೂಲವಾಗಿ ಹೇಳುವುದಾದರೆ ಅವು: ಸದಾಚಾರ, ಸದಾಶಯ, ಸನ್ನುಡಿ, ಸನ್ನಡತೆ, ಸಜ್ಜೀವನ, ಸತ್ಪ್ರಯತ್ನ, ಸದ್ಭಾವನೆ ಮತ್ತು ಸದ್ಧ್ಯಾನ. ಆದರೆ ವೈರಾಗ್ಯ ಮತ್ತು ಭೋಗಗಳನ್ನು ಎರಡು ಅತಿಗಳೆಂದು ಬೋಧಿಸುವ ಪ್ರಜ್ಞೆಯನ್ನು ರೂಢಿಸುವ ಈ ಮಧ್ಯಮ ಮಾರ್ಗ ಯಾರಿಗಾದರೂ ಒಂದು ಧರ್ಮ ಮಾರ್ಗವಾಗಿ ಅರ್ಥಪೂರ್ಣವೆನಿಸಿಕೊಳ್ಳುವುದು, ಈ ಧರ್ಮದ ಮೊದಲ ಸತ್ಯ - ಸಂಸಾರ ದುಃಖಮಯ ಎಂಬುದು - ಅವರಿಗೆ ಒಂದಲ್ಲ ಒಂದು ಸ್ತರದಲ್ಲಿ ಅನುಭವಕ್ಕೆ ಬಂದು, ಸತ್ಯವೆನಿಸಿದಾಗ ಮಾತ್ರ. ಆದರೆ ಇಂತಹ ಅನುಭವದ ಅಥವಾ ಸತ್ಯದ ಹತ್ತಿರಕ್ಕೂ ಸುಳಿಯದ ನಾವು ಬುದ್ಧನ ಬಗ್ಗೆ ಆತನ ಈ ಧರ್ಮದ ಬಗ್ಗೆ ಭಾವಾವೇಶದಿಂದ ಮಾತನಾಡತೊಡಗುತ್ತೇವೆ. ಸುಖದ ಬೆನ್ನು ಹತ್ತಿ, ಜಗತ್ತಿನ ಸಕಲ ಜಂಜಾಟಗಳಲ್ಲಿ ಸಿಲುಕಿಕೊಂಡು ಬದುಕಿನ 'ದಾಹ'ವನ್ನು ವಿವಿಧ ನೆಲೆಗಳಲ್ಲಿ ಹೆಚ್ಚಿಸಿಕೊಳ್ಳುತ್ತಿರುವಾಗಲೂ, ಬುದ್ಧನೇ ನಮ್ಮ ಆದರ್ಶ ಎಂದು ಘೋಷಿಸುಕೊಳ್ಳುತ್ತೇವೆ! ಅಷ್ಟೇ ಅಲ್ಲ, ಬೌದ್ಧ ಧರ್ಮದ ದೀಕ್ಷೆಯನ್ನೂ ಪಡೆದು ನಿರಾಳವಾಗುತ್ತೇವೆ! ಇಂತಹ ಆತ್ಮದ್ರೋಹದ ಆವೇಶದಲ್ಲಿ ನಮ್ಮಲ್ಲಿ ಕೆಲವರು ಬುದ್ಧನನ್ನು ಭಾರತೀಯ ಧರ್ಮ ಪರಂಪರೆಯ ಪ್ರತಿನಾಯಕನಂತೆ ಪ್ರಸ್ತುತ ಪಡಿಸುತ್ತಾ, ಆತನ ಮತ್ತು ಆತನ ಧರ್ಮದ ಸ್ವಾಯತ್ತತೆಯನ್ನೇ ಅಲ್ಲಗೆಳೆಯುವ ಮೂರ್ಖತನಕ್ಕೂ ಕೈ ಹಾಕುತ್ತಿದ್ದೇವೆ. ವಿಶೇಷವಾಗಿ ವೈದಿಕ ಧರ್ಮದ ಅನ್ಯಾಯಗಳ ವಿರುದ್ಧ ಬಂಡೆದ್ದ ಧಾರ್ಮಿಕ ನಾಯಕನೆಂಬಂತೆ ಆತನ ಚಿತ್ರ ಕಟ್ಟುತ್ತಾ, ದೊಡ್ಡ ರಾಜಕೀಯ ಗೊಂದಲವನ್ನೇ ಸೃಷ್ಟಿಸುತ್ತಿದ್ದೇವೆ ಮತ್ತು ಆ ಮೂಲಕ ನಮ್ಮ ವರ್ತಮಾನವನ್ನು ಪುನಾರಚಿಸಿಕೊಳ್ಳಲು ಅಗತ್ಯವಾದ ಚರಿತ್ರೆಯ ಓದಿಗೆ ನಾವೇ ಅಪಚಾರವೆಸಗಿಕೊಳ್ಳುತ್ತಿದ್ದೇವೆ. ಇದು ಇಂದು ಆರಂಭವಾದ ಗೊಂದಲ ಅಥವಾ ಅಪಚಾರದ ಪ್ರಯತ್ನವೇನೂ ಅಲ್ಲ. ಬೌದ್ಧ ಧರ್ಮದಲ್ಲಿ ಪುರೋಹಿತಶಾಹಿ ಸೃಷ್ಟಿಯಾದ ಕಾಲದಿಂದಲೂ ನಡೆಯುತ್ತಿರುವ ಧರ್ಮಕಾರಣವಿದು. ಇಂದಿನ ಪುರೋಹಿತಶಾಹಿಯ ವಿರುದ್ಧದ ಹೋರಾಟದ ಆವೇಶದಲ್ಲಿ ನಾವು ಚರಿತ್ರೆಯ ನಿರಂತರತೆಯನ್ನೇ ಮರೆತು, ಇದಕ್ಕೆ ಕಾರಣವಾದ ಹಿಂದಿನ ಪುರೋಹಿತಶಾಹಿಯ ಅನಾಚಾರಗಳನ್ನು ಮಾನ್ಯ ಮಾಡುತ್ತಿರುವಂತೆ ತೋರುತ್ತಿದೆ. ಭಾರತದ ಧಾರ್ಮಿಕ ಚರಿತ್ರೆ ಕುರಿತು ಅಂಬೇಡ್ಕರ್ ಕಟ್ಟಿರುವ ಸಂಕಥನಗಳಲ್ಲಿ ಈ ದೋಷವನ್ನು ಢಾಳಾಗಿ ಕಾಣಬಹುದು. ಕೆಲವು ದಿನಗಳ ಹಿಂದೆ, ಗೆಳೆಯ ಎನ್.ಎಸ್.ಶಂಕರ್ ಅನುವಾದಿಸಿರುವ 'ಬ್ರಾಹ್ಮಣ ದಿಗ್ವಿಜಯ' ಎಂಬ ಅಂಬೇಡ್ಕರರ ಕಿರುಪುಸ್ತಕವೊಂದನ್ನು ಬಿಡುಗಡೆ ಮಾಡುತ್ತಾ ನಾನು ಪರೋಕ್ಷವಾಗಿ ಹೇಳಿದ್ದು ಇದನ್ನೇ: ವರ್ತಮಾನದ ಧರ್ಮಕಾರಣದ ಸಂಕಥನದಲ್ಲಿ ನಾವು ಸೃಷ್ಟಿಸಿಕೊಂಡಿರುವ ಈ ಬ್ರಾಹ್ಮಣ ಎಂಬ ಶತ್ರು ಚಾರಿತ್ರಿಕವಾಗಿ ಎಷ್ಟು ನಿಜವಾದವನು? ನಿಜವಾಗಿ ಯಾರೀತ? ನಾವು ಈ ಬ್ರಾಹ್ಮಣರ ಮೂಲ ವಂಶಸ್ಥರೆಂದು ನಂಬಿರುವ ಆರ್ಯರಿಗೂ ಮುಂಚೆ ಬ್ರಾಹ್ಮಣರೆಂಬುವರು ಇಲ್ಲಿದ್ದರು ಮತ್ತು ಅವರ ವಿರುದ್ಧವೇ ಈ ಆರ್ಯರ 'ಇಂದ್ರ'ರು ಯುದ್ಧ ಮಾಡಿದ್ದು ಎಂಬ ಚಾರಿತ್ರಿಕ ಸಂಶೋಧನೆಗಳು - ಅವೈದಿಕ ಧಾರೆಯ ಧರ್ಮಾನಂದ ಕೊಸಾಂಬಿಯವರಂತಹ ಚರಿತ್ರಕಾರರ ಮೂಲಕವೇ - ಅಸ್ಪಷ್ಟವಾಗಿಯಾದರೂ ಬೆಳಕಿಗೆ ಬಂದಿವೆಯಲ್ಲ? ಹಾಗಾದರೆ ಭಾರತದಲ್ಲಿ ಬೌದ್ಧ ಧರ್ಮದ ನಾಶಕ್ಕೆ ಕಾರಣನಾದನೆಂದು ಅಂಬೇಡ್ಕರ್ ಹೇಳುವ ಪುಷ್ಯಮಿತ್ರ ಯಾವ, ಎಂತಹ ಬ್ರಾಹ್ಮಣ? ಕ್ರಿ.ಪೂ. ಎರಡನೇ ಶತಮಾನದ ಈ ಬ್ರಾಹ್ಮಣ ರಾಜ ಮನುಧರ್ಮ ಶಾಸ್ತ್ರವನ್ನು ಬರೆಸಿ, ಅದರ ಜಾರಿಯ ಮೂಲಕ; ಆ ಮುನ್ನ ಒಂದೂವರೆ ಶತಮಾನಗಳ ಕಾಲ ಮೌರ್ಯ ಸಾಮ್ರಾಜ್ಯದ ರಾಜ ಧರ್ಮವಾಗಿದ್ದ ಬೌದ್ಧ ಧರ್ಮವನ್ನು ನಾಶ ಮಾಡಿ, ಅದರ ಜಾಗದಲ್ಲಿ ಬ್ರಾಹ್ಮಣ ಧರ್ಮವನ್ನು ಸ್ಥಾಪಿಸಿದನೆಂದು ಅಂಬೇಡ್ಕರ್ ಹೇಳುತ್ತಾರೆ. ಆದರೆ ಹಾಗೆ ಹೇಳುವಾಗ ಅವರು ಎರಡು ಮುಖ್ಯ ಅಂಶಗಳನ್ನು ಗಮನಿಸಿದಂತೆ ಕಾಣುವುದಿಲ್ಲ. ಒಂದು: ಬೌದ್ಧ ಧರ್ಮವನ್ನು ರಾಜಧರ್ಮವೆಂದು ಘೋಷಿಸಿದನೆಂದು ಹೇಳಲಾಗುವ ಅಶೋಕನ ಶಾಸನಗಳಲ್ಲೆಲ್ಲೂ ನಿರ್ದಿಷ್ಟವಾಗಿ ಬೌದ್ಧ ಧರ್ಮದವೆಂದೇ ಹೇಳಬಹುದಾದ ಉಪದೇಶಗಳಿಲ್ಲವೇಕೆ? ಬದಲಿಗೆ ಅವು ಪ್ರಚಲಿತ ಎಲ್ಲ ಪಾಶಂಡ (ನಂಬಿಕೆ-ಸಂಪ್ರದಾಯ) ಗಳನ್ನೂ ಸಮಾನ ಗೌರವದಿಂದ ಕಾಣಬೇಕೆಂದು ಹೇಳುತ್ತ, ಸಾರ್ವತ್ರಿಕ ಸದಾಚಾರಗಳನ್ನಷ್ಟೆ ಪ್ರಚಾರ ಮಾಡುತ್ತವಲ್ಲ? ಸ್ವತಃ ಅಶೋಕನೇ ಬೌದ್ಧ ಧರ್ಮ ಪ್ರತಿಪಾದಿಸುವ ಅಜ್ಞೇಯತಾವಾದಕ್ಕೆ ವಿರುದ್ಧವಾಗಿ ತನ್ನನ್ನು ತಾನು 'ದೇವನಾಂಪ್ರಿಯ' (ದೇವರಿಗೆ ಪ್ರಿಯನಾದವನು) ನೆಂದೇಕೆ ಕರೆದುಕೊಂಡಿದ್ದಾನೆ? ಎರಡು: ಅಂಬೇಡ್ಕರ್ ಹೇಳುವ ಬೌದ್ಧ ಧರ್ಮದ ನಾಶ ಮತ್ತು ಬ್ರಾಹಣ ಧರ್ಮದ ಪುರ್ನಸ್ಥಾಪನೆಯ ನಂತರವೂ, ಬೌದ್ಧ ಧರ್ಮ ಕಿ.ಶ. ಎರಡನೇ ಶತಮಾನದ ಶಾತವಾಹನರ ಕಾಲದಲ್ಲೂ ರಾಜಾಶ್ರಯ ಪಡೆದು ವೈಭವದ ಬಾಳು ಬಾಳಿದ ಸ್ಪಷ್ಟ ಚರಿತ್ರೆಯೇ ಇದೆಯಲ್ಲ? ಕ್ರಿ.ಶ. ಒಂದನೇ ಶತಮಾನದ ಚಕ್ರವರ್ತಿ ಕಾನಿಷ್ಕ, ಸ್ವತಃ ತಾನೇ ಮೇಲ್ವಿಚಾರಣೆ ವಹಿಸಿಕೊಂಡು ಬೌದ್ಧ ಮಹಾಸಮ್ಮೇಳನವನ್ನು ನಡೆಸಿದ್ದರ ವಿವರಗಳನ್ನು ಹ್ಯೂನೆತ್ಸಾಂಗ್ ವರ್ಣಿಸಿದ್ದಾನಲ್ಲ? ಹಾಗೆ ನೋಡಿದರೆ, ಕ್ರಿ.ಶ. ಏಳನೇ ಶತಮಾನದ ಅಂತ್ಯದವರೆಗೂ - ಇಂದು ವೈದಿಕ ಮಹಾಗುರು ಎಂದೇ ಮಾನ್ಯ ಮಾಡಲ್ಪಟ್ಟಿರುವ ಶಂಕರಾಚಾರ್ಯರ ಧೃತಿಗೆಡಿಸುವಷ್ಟರ ಮಟ್ಟಿಗೆ - ಅದು ಬಾಳಿದ ಚರಿತ್ರೆ ಇದೆಯಲ್ಲ? ಇವರ ಗುರುಗಳ ಗುರುಗಳಾದ ಗೌಡಪಾದರ ಧರ್ಮ ಮೀಮಾಂಸೆಯೆಲ್ಲ ಬುದ್ಧನ ಶೂನ್ಯವಾದವನ್ನೇ (ನಾನೂ, ನೀನೂ, ಅವನೂ, ಯಾರೂ ಇಲ್ಲ! ಅದು, ಇದು ಯಾವುದೂ ಇಲ್ಲ! ಹಿಂದೆ, ಇಂದು, ಮುಂದೆ ಎಂಬುದೂ ಇಲ್ಲ!) ಅವಲಂಬಿಸಿ ಬೆಳೆದಿತ್ತಲ್ಲ? ಅಷ್ಟೇ ಅಲ್ಲ, ತಮ್ಮನ್ನು ಶುದ್ಧ ವೈದಿಕರು ಎಂದು ಕರೆದುಕೊಳ್ಳುವ ಆಚಾರ್ಯರೆಲ್ಲ ಶಂಕರರನ್ನು ಪ್ರಚ್ಛನ್ನ (ವೇಷ ಮರೆಸಿಕೊಂಡ) ಬುದ್ಧ ಎಂದು ಕರೆವರಲ್ಲ? ಹೋಗಲಿ, ಹತ್ತೊಂಭತ್ತನೇ ಶತಮಾನದ - ಹಿಂದೂ ಧರ್ಮದ ಪುನರುದ್ಧಾರಕರೆಂದೇ ಪ್ರಸಿದ್ಧರಾದ - ರಾಮಕೃಷ್ಣ ಪರಮಹಂಸರ ಮತ್ತು ನಮ್ಮದೇ ಇಪ್ಪತ್ತನೇ ಶತಮಾನದ ರಮಣ ಮಹರ್ಷಿಗಳ ಉಪದೇಶಗಳನ್ನು ಓದುತ್ತಿದ್ದಂತೆ, ಅವುಗಳ ಹಿನ್ನೆಲೆಯಲ್ಲಿ ಬುದ್ಧನೇ ಕಾಣತೊಡಗುತ್ತಾನಲ್ಲ? ಪರಮಹಂಸರು ವಿವೇಕಾನಂದರ ಬಾಯಲ್ಲಿ ಅವರ ಬುದ್ಧ ಗಯಾ ಯಾತ್ರೆಯ ವರ್ಣನೆ ಕೇಳಿ 'ಸಮಾಧಿ'ಗೆ ಹೋದರೆ, ಆತ್ಮವಾದಿಯಾದ ರಮಣರು ಬುದ್ಧನ 'ಅನಾತ್ಮವಾದ'ವೇ ತಮ್ಮ 'ನಾನು ಯಾರು?' ಎಂಬ ಪ್ರಶ್ನೆಯ ಮೀಮಾಂಸೆಯ ಹಿಂದೆಯೂ ಇರುವುದು ಎಂದು ಸೂಚಿಸುತ್ತಾರಲ್ಲ? ಇದನ್ನೆಲ್ಲ ಗಮನಿಸಿದಾಗ ಬೌದ್ಧ ಧರ್ಮವನ್ನು ಯಾರೋ ನಾಶ ಮಾಡಿದರು ಅಥವಾ ಅದನ್ನು ಭಾರತದಿಂದ ಹೊರಕ್ಕೆ ಓಡಿಸಲಾಯಿತು ಎಂಬ ಮಾತುಗಳೇ ಅಸಂಗತವಾಗಿ ಕಾಣುತ್ತವೆ. ಏಕೆಂದರೆ ಬೌಧ್ಧ ಧರ್ಮ ತನ್ನ ಉಚ್ಛ್ರಾಯ ಕಾಲದಲ್ಲೇ ಇತರೆ ದೇಶಗಳಿಗೆ ಹರಡಿತ್ತು. ಹಾಗೇ, ಬ್ರಾಹ್ಮಣ ಅಥವಾ ವೈದಿಕ ಧರ್ಮದ ಕಾರಣದಿಂದಲೇ ಅದು ಭಾರತದಲ್ಲಿ ನಾಶವಾಯಿತೆನ್ನುವವರು, ಮಧ್ಯ ಏಷ್ಯಾದುದ್ದಕ್ಕೂ ಬೇರೂರಿದ್ದ ಬೌದ್ಧ ಧರ್ಮ ಏಕೆ ಅಲ್ಲಿ ಕಾಣೆಯಾಯಿತು ಎಂಬುದಕ್ಕೂ ಉತ್ತರ ಹೇಳಬೇಕಾಗುತ್ತದೆ. ನಮ್ಮ ವರ್ತಮಾನದ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಆತುರದಲ್ಲಿ ನಾವು ಇತಿಹಾಸವನ್ನು ನಮ್ಮ ಅಗತ್ಯಗಳಿಗೆ ತಕ್ಕಂತೆ ಸರಳೀಕರಿಸಿಕೊಳ್ಳುವ ತಪ್ಪು ಮಾಡುತ್ತಿದ್ದೇವೆ. ಇತಿಹಾಸದಲ್ಲಿ ಹಾಲು ಕುಡಿದ ಮಕ್ಕಳೇ ಬದುಕಿಲ್ಲ. ಇನ್ನು ವಿಷ ಕುಡಿಯುವ ಮಕ್ಕಳು? ಪ್ರಾಚೀನ ಭಾರತದ - ಬುದ್ಧಪೂರ್ವ ಭಾರತದ - ಇತಿಹಾಸ ಅನೇಕ ಗೊಂದಲಗಳ ಗೂಡಾಗಿದೆ. ರೂಪಕ ಭಾಷೆಯಲ್ಲಿ ಪುರಾಣವಾಗಿ ಮಾತ್ರ ದಾಖಲಾಗಿರುವ ಭಾರತದ ಇತಿಹಾಸವನ್ನು, ಆಧುನಿಕರಾದ ನಾವೀಗ 'ವಾಸ್ತವವಾದಿ ದಾಖಲೆ'ಗಳನ್ನು ಆಧರಿಸಿದ ಪಾಶ್ಚಿಮಾತ್ಯ ಇತಿಹಾಸ ದೃಷ್ಟಿಯನ್ನು ಆವಾಹಿಸಿಕೊಂಡು ನೋಡುತ್ತಾ, ಅನೇಕ ತಪ್ಪು ತೀರ್ಮಾನಗಳಿಗೆ ಬರುತ್ತಿದ್ದೇವೆ. ಇದರಿಂದಾಗಿರುವ ದೊಡ್ಡ ತಪ್ಪೆಂದರೆ, ಭಾರತದ ಧಾರ್ಮಿಕ ಇತಿಹಾಸವನ್ನು ಅಚ್ಚುಕಟ್ಟಾಗಿ - ಗೆರೆ ಹೊಡೆದಂತೆ - ವೈದಿಕ ಮತ್ತು ಬೌದ್ಧ ಧರ್ಮಗಳ ಮುಖಾಮುಖಿ ಮಾತ್ರವೆಂಬಂತೆ ನೋಡುವ ಸರಳೀಕರಣ. ಬ್ರಾಹ್ಮಣ ಮತ್ತು ಶ್ರಮಣ ಪರಂಪರೆಗಳಿಗೆ ದೀರ್ಘ ಮತ್ತು ಸಂಕೀರ್ಣ ಇತಿಹಾಸವಿದ್ದು, ಇವುಗಳ ಮಧ್ಯೆ ಅನೇಕ ಸಂಕರಗಳು ನಡೆದು ಚರಿತ್ರೆಯ ಮೇಲೆ ಪ್ರಭಾವ ಬೀರಿದ ಅನೇಕಾನೇಕ ಧಾರ್ಮಿಕ - ಅತ್ತ ಆಸ್ತಿಕವೂ ಅಲ್ಲದ, ಇತ್ತ ನಾಸ್ತಿಕವೂ ಅಲ್ಲದ; ಈ ವಿಭಾಗೀಕರಣವೇ ಅಸಂಗತವೆನ್ನಿಸುವಂತಹ - ಸಂಪ್ರದಾಯಗಳು ಇಲ್ಲಿ ಬಾಳಿ ಹೋಗಿವೆ ಮತ್ತು ಅವುಗಳಲ್ಲಿ ಹಲವು ಇನ್ನೂ ವಿವಿಧ ರೂಪಗಳಲ್ಲಿ ಕ್ರಿಯಾಶೀಲವಾಗಿವೆ. ಇವೆಲ್ಲ ಸೇರಿ ಇಂದು ಜನಪ್ರಿಯ ಭಾಷೆಯಲ್ಲಿ ಹಿಂದೂ ಧರ್ಮವೆನಿಸಿಕೊಂಡಿದೆ. ಹೀಗಿರುವಾಗ ನಾವು ಶ್ರಮಣ ಪರಂಪರೆಯ ಅತ್ಯುತ್ಕೃಷ್ಟ ಉತ್ಪನ್ನವಾದ ಬುದ್ಧನನ್ನು ಬ್ರಾಹ್ಮಣ - ಇಂದಿನ ಹಿಂದೂ - ಧರ್ಮದ ವಿರುದ್ಧ, ಅದರ ಜಾತಿ ಪದ್ಧತಿ ವಿರುದ್ಧ ಬಂಡಾಯ ಹೂಡಿದ ಹೋರಾಟಗಾರನೆಂದೂ, ನಾಸ್ತಿಕನೆಂದೂ, ಭೌತವಾದಿ ವೈಚಾರಿಕನೆಂದೂ ಪ್ರಸ್ತುತ ಪಡಿಸುತ್ತಾ - ನಮ್ಮ ಇಂದಿನ ಸಂಕಟಗಳಿಗೆ ಅವನ ಈ ಚಿತ್ರದಲ್ಲಿ ಉತ್ತರಗಳನ್ನು ಹುಡುಕುವ ಪ್ರಯತ್ನದಲ್ಲಿ - ಅವನ ವ್ಯಕ್ತಿತ್ವ ಹಾಗೂ ಬೋಧನೆಗಳನ್ನು ವಿರೂಪಗೊಳಿಸುತ್ತಿದ್ದೇವೆ. ಬುದ್ಧ ಎಂದೂ ಯಾವುದರ ಬಗೆಯೂ ಋಣಾತ್ಮಕವಾಗಿ ಮಾತಾಡಿದ ದಾಖಲೆಗಳಿಲ್ಲ. ಕೊನೆಗೆ ದೇವರ ಬಗೆಗಿನ ಪ್ರಶ್ನೆಗೂ ಅವನ ಉತ್ತರ ಅರ್ಥಪೂರ್ಣ ಮೌನವಾಗಿತ್ತೇ ಹೊರತು, ನಿರಾಕರಣೆಯದಾಗಿರಲಿಲ್ಲ. ಅನೇಕ 'ಸುತ್ತ'ಗಳಲ್ಲಿ ಅವನು ಶ್ರಮಣರೊಂದಿಗೆ, ಬ್ರಾಹ್ಮಣರನ್ನೂ ಗೌರವಿಸಿರಿ ಎಂದು ಹೇಳುತ್ತಾನೆ. ಆದರೆ ಬಹುಶಃ ವರ್ಣಧರ್ಮ ಜಾತಿ ಪದ್ಧತಿಯಾಗಿ ಮಾರ್ಪಾಡುಗೊಳ್ಳುತ್ತಿದ್ದ ಆ ಸಂದರ್ಭದಲ್ಲಿ, ಆತ ಬ್ರಾಹಣನನ್ನು ಹುಟ್ಟಿನಿಂದ ಗುರುತಿಸುವ ಪೃವೃತ್ತಿ ಹೇಗೆ ಅಸಂಗತವೆಂದೂ ವಿವರಿಸುತ್ತಿದ್ದ. ಬುದ್ಧನ ಪ್ರಕಾರ ಬ್ರಾಹ್ಮಣನೆನಿಸಿಕೊಳ್ಳಲು ಒಂದು ಕಡ್ಡಾಯ ಅರ್ಹತೆ ಎಂದರೆ, ಆತನಿಗೆ ಶ್ರಮಣರಂತೆ ತನ್ನದೆನ್ನುವ ಆಸ್ತಿಯಿರಕೂಡದು. 'ಬ್ರಾಹ್ಮಣ ಧಮ್ಮಿಕ ಸುತ್ತ'ದಲ್ಲಿ ಬುದ್ಧ, ಮೊದಲು ಸರಳ ಜೀವಿಗಳಾಗಿದ್ದ ಬ್ರಾಹ್ಮಣರು ಹೇಗೆ ಲೋಕರುಚಿಗಳ ಮೋಹಕ್ಕೆ ಸಿಕ್ಕಿ, ರಾಜನೊಬ್ಬನಿಗೆ ಮಹಾ ಯಜ್ಞ ಮಾಡಿಸುವಂತೆ ದುಂಬಾಲು ಬಿದ್ದು ಅವನತಿಗೊಂಡರು ಎಂಬುದನ್ನು ಸಾಂಕೇತಿಕವಾಗಿ ವಿವರಿಸುತ್ತಾನೆ. ಅನುಭವ ಮತ್ತು ವಿಚಾರಗಳ ಆಧಾರವಿಲ್ಲದೆ ಯಾವುದನ್ನೂ, ಯಾರು ಹೇಳಿದ್ದನ್ನೂ ನಂಬಬಾರದೆಂದು ಹೇಳುತ್ತಿದ್ದ ಬುದ್ಧ, ಸಹಜವಾಗಿಯೇ ವೇದ ಪ್ರಾಮಾಣ್ಯವನ್ನು ಒಪ್ಪದ ಶುದ್ಧ ಪ್ರಜ್ಞಾವಾದಿ. ಹಾಗಾಗಿಯೇ ಬೌದ್ಧ ಧರ್ಮ ಶುದ್ಧ ಮಾನವ ಧರ್ಮವೆನಿಸಿ, ಅವನ ಕಾಲದಲ್ಲೇ ಅನೇಕ 'ವೈದಿಕ' ಬ್ರಾಹ್ಮಣರು ಅವನಿಗೆ ಶರಣಾಗಿ ಬೌದ್ಧರಾದರು. ಇದರ ಒಂದು ಅದ್ಭುತ ಮತ್ತು ಅರ್ಥಪೂರ್ಣ ಚಿತ್ರವೊಂದನ್ನು ಇಂದಿನ ಹಲವು ಆಧುನಿಕ 'ಬಂಡಾಯಗಾರ'ರಿಂದ ಹಿಂದೂ ಸನಾತನಿ ಎನಿಸಿಕೊಂಡ ಮಾಸ್ತಿ ತಮ್ಮ 'ಸಾರಿಪುತ್ತನ ಕೊನೆಯ ದಿನಗಳು' ಎಂಬ ಕಥೆಯಲ್ಲಿ ಕಟ್ಟಿಕೊಡುತ್ತಾರೆ. ಈ ಕಥೆಯಲ್ಲಿ ಮಾಸ್ತಿ ಬುದ್ಧನನ್ನು, ಕತ್ತಲ ದಾರಿ ಹಿಡಿದಿದ್ದ ಸನಾತನ ಧರ್ಮವನ್ನು ಮತ್ತೆ ಬೆಳಕಿನ ದಾರಿಗೆ ಕೊಂಡೊಯ್ದ ಮಹಾ ಪುರುಷನಂತೆ ಚಿತ್ರಿಸುತ್ತಾರೆ. ಈ ಚಿತ್ರಣದಲ್ಲಿ, ತನ್ನ ಬ್ರಾಹ್ಮಣ ಶಿಷ್ಯ ಸಾರಿಪುತ್ತನ ಪೂರ್ವಾಶ್ರಮದ ಪ್ರವೃತ್ತಿಯೊಂದಿಗೆ ಸಹಾನುಭೂತಿ ತೋರಿಸುವ ಬುದ್ಧ, ಆತನಿಗೆ ತನ್ನನ್ನು ದೇವರೆಂದು ಪೂಜಿಸಲು ಅನುಮತಿಯನ್ನೂ ನೀಡುತ್ತಾನೆ! ಇದು ಮಾಸ್ತಿಯವರ ಕಲ್ಪನೆ ಮಾತ್ರವಲ್ಲವೆಂಬಂತೆ, ಐದುನೂರು ವರ್ಷಗಳ ನಂತರ - ಕ್ರಿ.ಶ. ಒಂದನೇ ಶತಮಾನದ ಹೊತ್ತಿಗೆ - ಬೌದ್ಧ ಮಹಾಯಾನ ಶಾಖೆ ನಾಗಾರ್ಜುನನಿಂದ ರೂಪುಗೊಂಡಿತು. ತನ್ನ ಧರ್ಮ ಮೀಮಾಂಸೆಗೆ ಪಾಲಿ ಭಾಷೆಗೆ ಬದಲಾಗಿ ಸಂಸ್ಕೃತವನ್ನು ಅಳವಡಿಸಿಕೊಂಡ ಈ ಮಹಾಯಾನ, ಲೋಕ ಮಾಯೆ ಎಂಬ 'ಅವಿದ್ಯೆ'ಯನ್ನು ದಾಟಲು ಜೀವ ಕರುಣೆಯನ್ನು ಊರುಗೋಲಾಗಿಸಿಕೊಂಡ 'ಪ್ರಜ್ಞೆ'ಯನ್ನು ರೂಢಿಸಿಕೊಳ್ಳುವ ಪ್ರಜ್ಞಾಶಾಸ್ತ್ರವೊಂದನ್ನು ಅನಾವರಣಗೊಳಿಸಿತು. ಇದರ ಅಂಗವಾಗಿ ಧ್ಯಾನವನ್ನೂ ಒಂದು ಆಚರಣೆಯನ್ನಾಗಿ ಮಾರ್ಪಡಿಸಿದ ಅದು, ಆ ಹೊತ್ತಿಗೆ ಪುನರುಜ್ಜೀವನಗೊಳ್ಳತೊಡಗಿದ್ದ ಯಜ್ಞ - ಯಾಗಗಳ ವೈದಿಕ ಧರ್ಮವನ್ನು ಸಾಮಾನ್ಯ ಜನತೆಯ ನೆಲೆಯಲ್ಲಿ ಎದುರಿಸಲೋ ಎಂಬಂತೆ, ಕ್ರಮೇಣ ಮೂರ್ತಿ ಪೂಜೆಯ ದೊಡ್ಡ ಆಂದೋಲನವಾಗಿ ಮಾರ್ಪಾಡಾಯಿತು! ಇದರೊಂದಿಗೆ ಗಾಂಧಾರ ಶಿಲ್ಪವೂ ವಿಕಾಸಗೊಂಡು, ಅದನ್ನೊಂದು ಸಂಸ್ಕೃತಿಯನ್ನಾಗಿ ಹರಡುವಲ್ಲಿ ಸಹಾಯಕವಾಯಿತು. ಇದರ ಫಲವಾಗಿ ಅನೇಕ ತಂತ್ರ - ಮಂತ್ರಗಳ, ಪೂಜೆ - ಆಚರಣೆಗಳ ಮತಲೋಕವೊಂದು ರೂಪುಗೊಂಡು, 'ಸಿದ್ಧಿ'ಯನ್ನರಸುವ ಅನೇಕ - ತಾಂತ್ರಿಕ - ಪಂಥಗಳು ಸೃಷ್ಟಿಯಾಗುವುದನ್ನು ನಾವು ಕಾಣುತ್ತೇವೆ. ಬೋಧಿ ಸತ್ವರ ಕಲ್ಪನೆ ಜಾತಕ 'ಕಥೆ'ಗಳಿಗೆ ದಾರಿ ಮಾಡಿಕೊಟ್ಟು, ಬುದ್ಧ ಪೂಜಾರ್ಹ ದೇವರೇ ಆಗುತ್ತಾನೆ. ಅವನ ಪರಿವಾರವಾಗಿ ಅನೇಕ ಹೆಣ್ಣು ದೇವತೆಗಳೂ, ಗಂಡು ದೇವತೆಗಳೂ, ಯಕ್ಷ - ಕಿಂಪುರುಷರೂ ಸೇರಿಕೊಂಡು, ಕಾಲ ಕ್ರಮೇಣ ಒಂದು 'ಅಭಯ' ಲೋಕವೇ ಸೃಷ್ಟಿಯಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ಬೌದ್ಧ ಭಿಕ್ಷು - ಭಿಕ್ಷುಣಿಯರಿಗೆ ಸಾಮಾನ್ಯ ಜನತೆಯಲ್ಲದೆ, ಶ್ರೀಮಂತರ ಮತ್ತು ರಾಜ - ರಾಣಿಯರ ಅಪಾರ ಸಂಪತ್ತಿನ ದಾನ - ದತ್ತಿಗಳೂ ದೊರೆತು, ವಿಹಾರಗಳು ಕ್ರಮೇಣ ವಿಶಾಲವೂ, ವೈಭವೋಪೇತವು ಆಗತೊಡಗಿ; ಬೌದ್ಧ ಪುರೋಹಿತಶಾಹಿಯೊಂದು ಸೃಷ್ಟಿಯಾಗುವುದರ ಸೂಚನೆಗಳನ್ನು ಶಾತವಾಹನರ ಕಾಲದ ಅನೇಕ ದತ್ತಿ - ದಾನಗಳ ಶಾಸನಗಳಲ್ಲಿಯೇ ನಾವು ಕಾಣಬಹುದು. ಹಾಗೇ, ನಂತರದ ಕಾಲದ 'ಮೃಚ್ಛಕಟಿಕ', '-ಮತ್ತ ವಿಲಾಸ' ಇತ್ಯಾದಿ ನಾಟಕಗಳು ಮತ್ತು ಅನೇಕ ಕಥಾನಕಗಳಲ್ಲಿ ನೂರಾರು ಆನೆಗಳ ಸರದಾರರಾದ ಭಿಕ್ಷು ಮಹಾರಾಜರ ಮತ್ತು ಮೈ ತುಂಬಾ ವಜ್ರಾಭರಣಗಳಿಂದ ಅಲಂಕೃತರಾಗಿದ್ದ ಭಿಕ್ಷುಣಿ ಮಹಾರಾಣಿಯರ ವಿಹಾರ - ವಿಲಾಸಗಳು ಹಾಗೂ ಕಳ್ಳ - ಸುಳ್ಳ - ಖದೀಮರೆಲ್ಲ ಬೌದ್ಧ ಸಂನ್ಯಾಸಿಗಳ ವೇಷ ತೊಟ್ಟು ಸಂಕಷ್ಟದಿಂದ ಪಾರಾಗುವ ಅನೇಕ ಪ್ರಸಂಗಗಳು ವಿಡಂಬನಾತ್ಮಕವಾಗಿ ನಿರೂಪಿತವಾಗಿರುವುದನ್ನು ನಾವು ಗಮನಿಸಬಹುದು. ಹೀಗೆ ತನ್ನದೇ ಪುರೋಹಿತಶಾಹಿಯನ್ನು ನಿರ್ಮಿಸಿಕೊಂಡ ಬೌದ್ಧ ಧರ್ಮ ತನ್ನ ಅನನ್ಯ ಗುರುತನ್ನು ಕಳೆದುಕೊಂಡು, ಭಾರತದ ಅಂದಿನ ಧಾರ್ಮಿಕ ಕೋಲಾಹಲದಲ್ಲಿ ಅನೇಕ ಸಂಪ್ರದಾಯಗಳ ಮಧ್ಯೆ ಲೀನವಾಗುತ್ತಾ, ಕ್ರಮೇಣ ಕಳೆದು ಹೋಯಿತಷ್ಟೇ. ಆದರೆ ಸಂಪೂರ್ಣವಾಗಿಯೇನೂ ಕಳೆದು ಹೋಗಿಲ್ಲ. ಏಕೆಂದರೆ ಅದು, ನಾಗಾರ್ಜುನ ತನ್ನ 'ಮೂಲ ಮಾಧ್ಯಮಕಾರಿಕಾ'ದಲ್ಲಿ 'ಪ್ರಜ್ಞಾ ಪಾರಮಿತ'(ಪ್ರಜ್ಞೆಯ ಪರಿಪೂರ್ಣತೆ)ಯ ಸಾಧನೆಯ ಅಂಗವಾಗಿ ನಿರೂಪಿಸಿರುವ 'ಜಗತ್ತು ಒಂದು ಸಂಕೀರ್ಣ ಕಾರ್ಯ ಕಾರಣ ಸಂಬಂಧಗಳ ಜಾಲವಾಗಿದ್ದು, ಪ್ರತಿಯೊಂದು ಜೀವಿಯೂ ಪ್ರತಿ ಇನ್ನೊಂದು ಜೀವಿಯ ಸಂಬಂಧದಲ್ಲಷ್ಟೇ ತನ್ನ ಅಸ್ತಿತ್ವದ ಅರ್ಥಪೂರ್ಣತೆಯನ್ನು ಕಂಡುಕೊಳ್ಳಬಹುದು' ಎಂಬರ್ಥದ 'ಪ್ರತೀತ್ಯ ಸಮುತ್ಪಾದ ತತ್ವ' ಅನೇಕ ರೂಪಗಳಲ್ಲಿ ನಮ್ಮ ಮಧ್ಯೆ ಇನ್ನೂ ಜೀವಂತವಾಗಿದೆ. ಪುರಾತನ ಮೌಢ್ಯಗಳು ಮತ್ತು ಆಧುನಿಕ ಬದುಕಿನ ಜಂಜಾಟಗಳ ನಡುವೆಯೂ ಇನ್ನೂ ನಮ್ಮಲ್ಲಿ ಸಂಪೂರ್ಣ ಬತ್ತಿ ಹೋಗಿರದ 'ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ' ಮತ್ತು 'ದಯೆಯೇ ಧರ್ಮದ ಮೂಲವಯ್ಯ' ಎಂಬ ಆಳದ ಸಾರ್ವತ್ರಿಕ ಅರಿವಿನ ಹಿಂದಿನ 'ಕರುಣಾ'ವಾಗಿ, ಅದು ಭಾರತದ ಜನಮನದ ಹೃದಯದಲ್ಲ್ಲಿ ಇಂದೂ ಅನುರಣಿಸುತ್ತಿದೆ. ಈ ದೃಷ್ಟಿಯಿಂದ ನೋಡಿದಾಗ ಇಂದು ಜನಪ್ರಿಯ ನೆಲೆಯಲ್ಲಿ ಹಿಂದೂ ಧರ್ಮವೆಂದು ಕರೆಸಿಕೊಳ್ಳುವ ಹಲವು ಸಂಪ್ರದಾಯ - ನಂಬಿಕೆಗಳ ಕಲಸು ಮೇಲೋಗರದಂತಿರುವ 'ಧರ್ಮ'ಕ್ಕೆ, ಜೀವ ಕೇಂದ್ರವಾಗಿರುವುದು ಬೌದ್ಧ ಧರ್ಮವೇ. ಹಾಗಾಗಿಯೇ ಈ 'ಹಿಂದೂ ಧರ್ಮ', ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು'ವಿನಲ್ಲಿ ಪುರಾತನ ವೈದಿಕ ಪುರೋಹಿತಶಾಹಿಯ ಮೌಢ್ಯ ಮತ್ತು ಆಧುನಿಕ ಕ್ರಿಶ್ಚಿಯನ್ ಮತದ ಲೌಕಿಕ ಆಕರ್ಷಣೆಗಳೆರಡನ್ನೂ 'ಮಧ್ಯಮ ಮಾರ್ಗ'ದಲ್ಲಿ ಎದುರಿಸಿ ನಿಲ್ಲುತ್ತಾ, ಇಲ್ಲಿ ಯಾರೂ ಮುಖ್ಯರಲ್ಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಃಕಶ್ಚಿತವಲ್ಲ. ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ತುದಿಯಲ್ಲ ಯಾವುದೂ ಎಲ್ಲಿಯೂ ನಿಲ್ಲುವುದಿಲ್ಲ ಕೊನೆ ಮುಟ್ಟುವುದೂ ಇಲ್ಲ. ಇಲ್ಲಿ, ಅವಸರವೂ ಸಾವಧಾನದ ಬೆನ್ನೇರಿದೆ. ಇಲ್ಲಿ ಎಲ್ಲದಕ್ಕೂ ಇದೆ ಅರ್ಥ ಯಾವುದೂ ಅಲ್ಲ ವ್ಯರ್ಥ ನೀರೆಲ್ಲ ಊ ತೀರ್ಥ. ಎಂಬ ಬೌದ್ಧ 'ಪ್ರತೀತ್ಯ ಸಮುತ್ಪಾದ' ತತ್ವವೇ ಆದ ಈ ಬೀಜವಾಕ್ಯವನ್ನು ತನ್ನ ಜೀವನ ದರ್ಶನವನ್ನಾಗಿ ಅದ್ಭುತ ರೀತಿಯಲ್ಲಿ ಘೋಷಿಸಿಕೊಳ್ಳಲು ಸಾಧ್ಯವಾಗಿರುವುದು. ಆದರೆ ತನ್ನ ಜೀವನ ದರ್ಶನಕ್ಕೆ ವಿರುದ್ಧವಾದ ಇದನ್ನು ಸಹಿಸಲಾಗದ ಹೊಸ ವೈದಿಕ ಪುರೋಹಿತಶಾಹಿಯು ಇಂದು ವಿಭಿನ್ನ ತಾತ್ವಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ಪುರ್ನಸಂಘಟಿತಗೊಂಡು, 'ಹಿಂದುತ್ವ'ವೆಂಬ ಹೊಸ ಹೆಸರಲ್ಲಿ ಹಿಂದೂ ಧರ್ಮದ ಈ ಬೌದ್ಧ ಹೃದಯ ಕೇಂದ್ರವನ್ನು ನಾಶ ಪಡಿಸುವ ಪ್ರಯತ್ನದಲ್ಲಿ ತೊಡಗಿದೆ. ಇದನ್ನು ಇಂದಿನ ಪರಿಸ್ಥಿಯಲ್ಲಿ ನಾವು 'ಹಿಂದೂ'ವಾಗಿ ಇದ್ದುಕೊಂಡೇ ಬುದ್ಧನಿಗೆ ನಮಸ್ಕರಿಸುವ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಎದುರಿಸಬಹುದು. ಆ ಮೂಲಕ ಮಾತ್ರ ಹಿಂದೂ ಧರ್ಮ ತನ್ನ ಬಹುಮುಖಿ ಸಂಸ್ಕೃತಿಯನ್ನು ಉಳಿಸಿಕೊಂಡು ಬುದ್ಧನಿಂದ ಸ್ಫೂರ್ತಿಯನ್ನು ಪಡೆಯಬಹುದು ಎಂಬುದು ನನ್ನ ನಮ್ರ ಅಭಿಪ್ರಾಯವಾಗಿದೆ.

ಬಿಗ್ ಬಾಸ್

[ಬದಲಾಯಿಸಿ]

ಯ್ಘ್ದ್ಸಕ್ಜ್ಲ್;ಜ್ಜ್ಲ್ಪ್ ಒಜಿಎಪಿಗ್ವಿವೊ೯ ಸ್೯ತ್೪ತಿಪೊವಿಥ್ವೊಸ್ಲ್ದ್ಕ್ಭ್ನ್ ಉ೮೯ವ್ಗಿಹ್ಹ್ಜ್;ಲ್ಖ್ಸ್;ನ್ ಸಿಗ್ಜ್ಕ್ಬ್‍ವಕ್ಕಹ್ದ್ದ್ಕ್ಫ಼್ಕ್ದ್ಲ್ಜ್ ಹಿತ್ರೊಘ್ಕ್ಗ್ಜ್ಗ್ಜ್ಸ್ಜ್ ಜ್ವ್ಫ಼್ಜ್ಗ್ಕಿಹುಫ಼್ಜೊಫ಼ುಗ್ಫ಼್ಗಿಹುಫ಼್ಜ್ನ್ಧಿರೊಗುಹೊಕ್ ಇಜ್ಗ್ರೊಇಫ಼್ಹೊಕ್ಗೆಒಫ಼್ಹ್ವ್ಜ್ರೊಗ್ ಜ್ಫ಼್ಹ್ಪ್ಕಿಜ್ಫ಼್ಹ್ಕೊಫ಼್ಜ್ವ್