ಹೊ. ವೆ. ಶೇಷಾದ್ರಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹೊ. ವೆ. ಶೇಷಾದ್ರಿ | |
---|---|
ಜನನ | ಮೇ ೨೬. ೧೯೨೬ ಬೆಂಗಳೂರು |
ಮರಣ | ಆಗಸ್ಟ್ ೧೪, ೨೦೦೫ |
ವೃತ್ತಿ(ಗಳು) | ಬರಹಗಾರರು, ಸಂಘಟನಾಕಾರರು, ಸಾಮಾಜಿಕ ಕಾರ್ಯಕರ್ತರು |
ಹೊ.ವೆ. ಶೇಷಾದ್ರಿ (ಮೇ ೨೬, ೧೯೨೬ - ಆಗಸ್ಟ್ ೧೪, ೨೦೦೫) ವಿದ್ವಾಂಸರಾಗಿ, ದೇಶಭಕ್ತರಾಗಿ, ಬರಹಗಾರರಾಗಿ, ಸಂಘಟನಕಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಬಹುಭಾಷಾ ಕೋವಿದರು ಮತ್ತು ಚಿಂತಕರು.
ಜೀವನ
[ಬದಲಾಯಿಸಿ]ಶೇಷಾದ್ರಿಯವರು ದಿನಾಂಕ ೨೬ ಮೇ ೧೯೨೬ರಂದು ಹೊಂಗಸಂದ್ರದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ಪಾರ್ವತಮ್ಮ. ಶೇಷಾದ್ರಿಯವರ ವಿದ್ಯಾಭ್ಯಾಸ ನಡೆದುದು ಬೆಂಗಳೂರಿನಲ್ಲಿ. ಶೇಷಾದ್ರಿಯವರು ೧೯೪೬ರಲ್ಲಿ ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವಿ ಗಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ
[ಬದಲಾಯಿಸಿ]ಶಿಕ್ಷಣ ಪೂರೈಸಿದ ಬಳಿಕ ಸಮಾಜ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡ ಶೇಷಾದ್ರಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ದೇಶದುದ್ದಗಲಕ್ಕೂ ಸಂಚಾರ ಕೈಗೊಂಡರು. ಪ್ರಾರಂಭದಲ್ಲಿ ಬೆಂಗಳೂರು ನಗರದ ಪ್ರಚಾರಕರಾಗಿ ಜವಾಬ್ದಾರಿ ಹೊತ್ತಿದ್ದ ಶೇಷಾದ್ರಿಯವರು ೧೯೫೩-೫೬ರ ಅವಧಿಯಲ್ಲಿ ಮಂಗಳೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. ೧೯೬೦ರಲ್ಲಿ ಕರ್ನಾಟಕ ಪ್ರಾಂತ್ಯ ಪ್ರಚಾರಕರಾಗಿಯೂ ಹಾಗೂ 1980ರಲ್ಲಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ, ಕೇರಳ ಹಾಗೂ ತಮಿಳುನಾಡು ರಾಜ್ಯಗಳನ್ನೊಳಗೊಂಡ ಕ್ಷೇತ್ರೀಯ ಪ್ರಚಾರ ಕಾರ್ಯ ನಿರ್ವಾಹಕರಾಗಿ ಅಪರಿಮಿತ ಸೇವೆಯನ್ನು ಸಲ್ಲಿಸಿದರು. ೧೯೮೭ರಲ್ಲಿ ಪ್ರಧಾನ ಕಾರ್ಯಲದರ್ಶಿಯಾಗಿ ಸಂಘದ ಅತ್ಯುಚ್ಚ ಜವಾಬ್ದಾರಿಯನ್ನು ೯ ವರ್ಷಕಾಲ ನಿರ್ವಹಿಸಿದ ಯಶಸ್ಸು ಶೇಷಾದ್ರಿಯವರದು.
ಸಾಮಾಜಿಕ ಕಾರ್ಯಗಳು
[ಬದಲಾಯಿಸಿ]ಹೊ.ವೆ ಶೇಷಾದ್ರಿಯವರು ಆರ್.ಎಸ್.ಎಸ್ ಸಂಘಟನೆಯ ಮೂಲಕ ಅಸ್ಪೃಶ್ಯತೆ, ಸಾಮಾಜಿಕ ದೋಷ ನಿವಾರಣೆ, ಮತಾಂತರ ಪಿಡುಗಿನ ನಿವಾರಣೆ, ಸ್ವದೇಶಿ ವಸ್ತು ಬಳಕೆಯ ಆಂದೋಲನ,ಸಂಸ್ಕೃತ ಆಂದೋಲನವೇ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶವ್ಯಾಪಿ ಸಂಚರಿಸಿ ಅಪಾರ ಕಾರ್ಯ ನಿರ್ವಹಿಸುವುದರ ಜೊತೆಗೆ ಯುವ ಜನಾಂಗಕ್ಕೆ ನಿರಂತರ ಮಾರ್ಗದರ್ಶನ ನೀಡಿದರು.
ಆಕರ್ಷಕ ಬರಹಗಳು
[ಬದಲಾಯಿಸಿ]ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಜನರಿಗೆ ಮುಟ್ಟಿಸುವಲ್ಲಿ ಶೇಷಾದ್ರಿಯವರ ಆಕರ್ಷಕ ಬರಹಗಳು ವೈಚಾರಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ. ಸಮಾಜದೊಂದಿಗೆ ದೊರೆತ ಅನುಭವವನ್ನು ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷಿನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಅವರ ಲೇಖನ ಮಾಲೆಗಳು, ವಿಮರ್ಶಾತ್ಮಕ ವಿಶ್ಲೇಷಣೆಗಳು, ಪ್ರತಿಪಾದನೆಗಳು ನಿರಂತರವಾಗಿ ಹರಿದುಬಂದವು. ಸರಳ ಶೈಲಿ, ಮನಮುಟ್ಟುವ ನಿರೂಪಣೆ ಶೇಷಾದ್ರಿಯವರ ಲೇಖನಗಳ ವೈಶಿಷ್ಟ್ಯಗಳು.
ಕೃತಿ ರಚನೆ
[ಬದಲಾಯಿಸಿ]ಶೇಷಾದ್ರಿಯವರು ರಚಿಸಿದ ಮಹತ್ವದ ಕೃತಿಗಳೆಂದರೆ ಕನ್ನಡದಲ್ಲಿ ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ವಿಭಜನೆಯ ದುರಂತ ಕಥೆ, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ ‘ಭುಗಿಲು’, ಲಲಿತ ಪ್ರಬಂಧಗಳ ಸಂಗ್ರಹ ‘ತೋರ್ಬೆರಳು.’ ಇಂಗ್ಲಿಷ್‌ನಲ್ಲಿ-ಬಂಚ್ ಆಫ್ ಥಾಟ್ಸ್, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್, ಆರ್‌ಎಸ್‌ಎಸ್-ಎ ವಿಷನ್ ಇನ್ ಆಕ್ಷನ್, ಯೂನಿವರ್ಸಲ್ ಸ್ಪಿರಿಟ್ ಆಫ್ ಹಿಂದೂ ನ್ಯಾಷಲಿಸಮ್, ದಿ ವೇ, ಯೋಗ-ಎ ಸೋಷಿಯಲ್ ಇಂಪರೆಟಿವ್ ಮುಂತಾದುವು. ಹಿಂದಿ ಮತ್ತು ಮರಾಠಿಯಲ್ಲಿ ಕೃತಿ ರೂಪ್ ಸಂಘ ದರ್ಶನ್, ನಾನ್ಯ ಪಂಥ್, ಉಗವೇ ಸಂಘ ಪಹಾಟ್ ಮುಂತಾದವು ಪ್ರಮುಖವೆನಿಸಿವೆ.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಶೇಷಾದ್ರಿಯವರು ಪ್ರಶಸ್ತಿಗಾಗಿ ಎಂದೂ ಆಶಿಸದಿದ್ದರೂ ಕರ್ನಾಟಕ ಸಾಹಿತ್ಯ ಅಕಾಡಮಿ ೧೯೮೨ರಲ್ಲಿ ಅವರ ಲಲಿತ ಪ್ರಬಂಧಗಳ ಸಂಕಲನ ತೋರ್ಬೆರಳು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಿತು.
ವಿದಾಯ
[ಬದಲಾಯಿಸಿ]೨೦೦೫ರ ಆಗಸ್ಟ್ ೧೪ ರಂದು ನಿಧನ ಹೊಂದಿದರು.