ಎಸ್.ಜಿ ನರಸಿಂಹಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್.ಜಿ ನರಸಿಂಹಾಚಾರ್ (1862-1907- ಕ್ರಿ.ಶ.೧೮೬೨-೧೯೦೭) ಪ್ರಾಚೀನ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಹೊರತಂದ ಮೊದಲ ಕನ್ನಡಿಗರು, ಸ್ವಂತ ಕವಿಗಳೂ ಹೌದು. ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ. ಇವರು ಕನ್ನಡದ ಪ್ರಸಿದ್ಡ ಅನುವಾದಕಾರರು. ಇವರು ಆಂಗ್ಲ ಭಾ‍ಷೆಯ ಪ್ರಸಿದ್ಡ ಮಕ್ಕಳ ಗೀತೆಯಾದ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ನ್ನು ಕನ್ನಡಕ್ಕೆ ಮಿರು ಮಿರುಗುವ ಹಾ ಕಿರು ತಾರಗಯ ಎಂದು ಅನುವಾದ ಮಾಡಿದ್ದಾರೆ.ಮೊದಲು ಇಂಗ್ಲಿಷ್ ಗೀತೆಗಳ ಅನುವಾದ ಕಾರ್ಯವನ್ನು ಪ್ರಾರಂಬಿಸಿದವರು.

ಕುಟುಂಬ- ಉದ್ಯೋಗ- ಕನ್ನಡ ಸೇವೆ[ಬದಲಾಯಿಸಿ]

  • ನರಸಿಂಹಾಚಾರ್ಯರು 1862ರ ಸೆಪ್ಟೆಂಬರ್ 11ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ದೇವಾಲಯದಲ್ಲಿ ಕೈಂಕರ್ಯದಲ್ಲಿದ್ದ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮನವರು. ನರಸಿಂಹಾಚಾರ್ಯರ ಪ್ರಾರಂಭಿಕ ಶಿಕ್ಷಣ ಶ್ರೀರಂಗಪಟ್ಟಣದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ನಡೆಯಿತು. ಬಿ.ಎ. ಪದವಿಯ ನಂತರ ಮೈಸೂರು ಸರಕಾರದ ವಿದ್ಯಾ ಇಲಾಖೆಗೆ ಸೇರಿ ಶ್ರೀರಂಗಪಟ್ಟಣದಲ್ಲಿ ಉಪಾಧ್ಯಾಯರಾಗಿ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ, ಗ್ರಂಥಪಾಲಕರಾಗಿ, ಸರಕಾರದ ಕನ್ನಡ ಭಾಷಾಂತರಕಾರರಾಗಿ ವಿವಿದೆಡೆಯಲ್ಲಿ ಸೇವೆ ಸಲ್ಲಿಸಿದರು. ಕನ್ನಡ ಭಾಷಾಭಿವೃದ್ಧಿ ಸಮಿತಿ, ಶಾಲಾ ಪಠ್ಯ ನಿಯಾಮಕ ಸಮಿತಿ, ಪರೀಕ್ಷಾ ಮಂಡಲಿಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು.
  • ಎಸ್. ಜಿ. ನರಸಿಂಹಾಚಾರ್ಯರು ಕಾವ್ಯ ಹಾಗೂ ಗದ್ಯಗ್ರಂಥಗಳ ಭಾಷಾಂತರವನ್ನು ಮಾಡಿದ್ದಲ್ಲದೆ ಹಲವಾರು ಸ್ವತಂತ್ರ ಕೃತಿಗಳನ್ನು ರಚಿಸಿದರು. ಅನೇಕ ಹಳಗನ್ನಡ, ನಡುಗನ್ನಡ ಗ್ರಂಥಗಳ ಪ್ರಕಟಣೆ ಮಾಡಿದರು. ಅನೇಕ ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಇವರದು. ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ, ಜಯನೃಪ ಕಾವ್ಯ ಮೊದಲಾದ ಪ್ರಮುಖ ಗ್ರಂಥಗಳ ಪ್ರಕಟಣೆ ಮಾಡಿದರು. ಪ್ರಾಚ್ಯಕೋಶಾಗಾರದ ಮೂಲಕ ಆದಿಪುರಾಣ, ಜಗನ್ನಾಥ ವಿಜಯದ ಪರಿಷ್ಕರಣೆಗಳನ್ನು ಹೊರತಂದರು. ಇವು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಮಾಲೆಯ ಪ್ರವರ್ತಕ ಗ್ರಂಥಗಳು.
  • ನರಸಿಂಹಾಚಾರ್ಯರು 1892ರಲ್ಲಿ ಎಂ.ಎ. ರಾಮಾನುಜ ಅಯ್ಯಂಗಾರ್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಪ್ರಾರಂಭ ಮಾಡಿದರು. ಪತ್ರಿಕೆ ನಿಂತುಹೋದಾಗ 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ' ಪತ್ರಿಕೆ ಪ್ರಾರಂಭ ಮಾಡಿದರು.

ಬಾಲ ಸಾಹಿತ್ಯ[ಬದಲಾಯಿಸಿ]

  • ಬಾಲ ಸಾಹಿತ್ಯಕ್ಕೂ ಎಸ್. ಜಿ. ನರಸಿಂಹಾಚಾರ್ಯರ ಕೊಡುಗೆ ಅಪಾರ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪಠ್ಯ ಸಮಿತಿಯ ನಿಯಮಾನುಸಾರ ಹಿಂದೂದೇಶದ ನಾಗರಿಕತೆ, ಬಾಲಭೂವಿವರಣೆಯ ಕೃತಿಗಳನ್ನು ಮೂಡಿಸಿದರು. ಮಕ್ಕಳ ಪದ್ಯಗಳಲ್ಲಿ ಮಿನುಗು ಮಿನುಗುತಿಹ ಕಿರುತಾರಣಿಯೆ, ಬಾರೋ ನಾವಾಡುವ ಬಾರೋ, 'ಇಟ್ಟರೆ ಸಗಣಿಯಾದೆ' ಇಂದಿಗೂ ಜನಪ್ರಿಯ ಪದ್ಯಗಳು.
  • ಎಸ್. ಜಿ. ನರಸಿಂಹಾಚಾರ್ ಅವರು ಮೂಡಿಸಿದ ಕೃತಿಗಳಲ್ಲಿ ದಿಲೀಪ ಚರಿತೆ, ಅಜನೃಪ ಚರಿತೆ, ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಡ್ಲ್‌ಸ್ಮಿತ್‌ನ ‘ದಿ ಹರ್ಮಿಟ್’ 9 ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ ಮುಂತಾದುವು ಸೇರಿವೆ.[೧]

ಕವಿ- ಅನುವಾದಕ- ವಿಮರ್ಶಕ- ಸಂಶೋಧಕ[ಬದಲಾಯಿಸಿ]

  • ಇವರು ಮತ್ತು ಎಂ.ಎ ರಾಮಾನುಜಯ್ಯಂಗಾರ್ ಒಟ್ಟಾಗಿ ಕರ್ಣಾಟಕ ಕಾವ್ಯಮಂಜರಿ ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿದರು. (1892). ಈ ಮಾಲೆಯಲ್ಲಿ ನೂರಾರು ಪ್ರಾಚೀನ ಕೃತಿಗಳು ಪ್ರಕಟವಾದವು. ಪ್ರೋತ್ಸಾಹವಿಲ್ಲದಿದ್ದ ಕಾಲದಲ್ಲಿ ಅತ್ಯಂತ ನಿಷ್ಠೆ ಅಭಿಮಾನಗಳಿಂದ ಆರು ವರ್ಷ ನಡೆದ ಈ ಮಾಲೆ ಹಠಾತ್ತನೆ ಸ್ಥಗಿತಗೊಂಡಿತು. ಮತ್ತೆ ಎರಡು ವರ್ಷಗಳ ಅನಂತರ ಇವರು ಕರ್ಣಾಟಕ ಕಾವ್ಯ ಕಲಾನಿಧಿ ಎಂಬ ಮಾಸಪತ್ರಿಕೆಯನ್ನು ಹೊರತಂದು ಅದರಲ್ಲಿ ಪ್ರಾಚೀನ ಕಾವ್ಯ ಪ್ರಕಟಣೆಯನ್ನು ಇಪ್ಪತ್ತು ವರ್ಷ ಅವಿರತವಾಗಿ ಮುಂದುವರಿಸಿದರು. ಈ ಇಬ್ಬರೂ ಜೊತೆಗೂಡಿ ಕೈಗೊಂಡ ಇನ್ನೊಂದು ಯೋಜನೆ ಎಂದರೆ ಮಹಾಭಾರತ ಕಥಾ ಪ್ರಸಂಗಗಳ ಗದ್ಯಾನುವಾದ. ನರಸಿಂಹಾಚಾರ್ಯರೇ ಸ್ವತಃ ಗ್ರಂಥ ಸಂಪಾದನೆ ಮಾಡಿರುವುದೂ ಉಂಟು. ಮೊದಲು ಪಂಪನ ಆದಿಪುರಾಣವನ್ನು(೧೯೦೦) ಮೈಸೂರು ಪ್ರಾಚ್ಯ ಸಂಶೋಧನಾಲಯದವರಿಗಾಗಿ ಇವರು ಸಂಪಾದಿಸಿಕೊಟ್ಟಿದ್ದಾರೆ. ಹಲವಾರು ಹಸ್ತಪ್ರತಿಗಳನ್ನು ನೋಡಿ ಸಂಪಾದಿಸಿದ ಈ ಕೃತಿಗೆ ಕವಿಚರಿತ್ರೆ ಹಾಗೂ ಕಾವ್ಯದ ಆಕರಗಳ ಬಗ್ಗೆ ಬೆಲೆಯುಳ್ಳ ಪೀಠಿಕೆಯನ್ನು ಸಹ ಬರೆದಿದ್ದಾರೆ. ಆಗ್ಗೆ ಅತ್ಯಂತ ಜನಪ್ರಿಯವಾಗಿದ್ದ ಪದ್ಯಸಾರದ ರಸಪೂರ್ಣ ಪದ್ಯಗಳ ಆಯ್ಕೆಯಲ್ಲಿಯೂ ಇವರ ಪಾತ್ರ ಮಹತ್ತ್ವದ್ದು.
  • ಕರ್ಣಾಟಕ ಕವಿಚರಿತ್ರೆಯನ್ನು ರೂಪಿಸಿದ ರಾ.ನರಸಿಂಹಾಚಾರ್ಯರ ಸೋದರ ಅಳಿಯಂದಿರಾದ ಇವರು, ಆ ಕೆಲಸದಲ್ಲಿ ಅವರಿಗೆ ವಿಶೇಷ ಸಹಾಯಕರಾಗಿದ್ದರು. ಪ್ರಥಮ ಸಂಪುಟದಲ್ಲಿಯ ಕಾವ್ಯ ವಿಮರ್ಶನ ಅಂಶಗಳು ಬಹುತೇಕ ಇವರವೇ ಇರಬಹುದು ಎಂದು ಊಹಿಸಲಾಗಿದೆ.
  • ಸಹೃದಯ ವಿದ್ವಾಂಸ, ಹೊಸಗನ್ನಡ ಕಣ್ಮಣಿ ಎಂದು ಖ್ಯಾತರಾಗಿದ್ದ ಇವರು ಕಾಳಿದಾಸನ ರಘುವಂಶದಿಂದ - ಅಜನೃಪಚರಿತೆ ಹಾಗೂ ದಿಲೀಪಚರಿತೆಗಳನ್ನು ಆಯ್ದು ಷಟ್ಪದಿ ರೂಪದಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರೇಪಿತ ಕ್ರಿಯಾ ಸಮಾಗಮ ಎಂಬ ಕಂದ ಕಾವ್ಯವನ್ನು ರಚಿಸಿದ್ದಾರೆ. ಇಂಗ್ಲಿಷಿನಿಂದ ಭಾವಗೀತೆಗಳನ್ನು ಕನ್ನಡಕ್ಕೆ ತಂದ ಮೊದಲಿಗರಲ್ಲಿ ಇವರೊಬ್ಬರು. ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಪ್ರಚುರವಾಗಿದ್ದ ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿದ್ದ ಇಂಗ್ಲಿಷ್ ಪದ್ಯಾನುವಾದಗಳೆಲ್ಲ ಇವರದೇ ಎನ್ನಲಾಗಿದೆ. ಶ್ರೀಯವರಿಗಿಂತ ಮುಂಚೆ ಇಂಗ್ಲಿಷ್ ಕವಿತೆಯಿಂದ ಸ್ಫೂರ್ತರಾಗಿ ಕಾವ್ಯಕ್ರಿಯೆ ನಡೆಸಿದವರಲ್ಲಿ ಪ್ರಮುಖರಾದ ಇವರದು ರಸೈಕ ದೃಷ್ಟಿ. ಭಾಷಾಶೈಲಿಯಲ್ಲಿ ಸರಳತೆ, ಜನಸಾಮಾನ್ಯರ ಭಾಷೆಯಲ್ಲಿ ಬರಹ- ಇವು ಇವರ ಗುರಿ. ನಡುಗನ್ನಡದಲ್ಲಿ ಪ್ರಚುರವಾಗಿದ್ದ ಚೌಪದಿ, ಷಟ್ಪದಿ, ಸಾಂಗತ್ಯ, ಗೋವಿನ ಮಟ್ಟುಗಳನ್ನೇ ಹೊಸ ಭಾವ, ಹೊಸವಸ್ತು, ಹೊಸಭಾಷೆಗೆ ಹೊಂದಿಕೆಯಾಗುವಂತೆ ಇವರು ಬಳಸಿದರು. ಹೊಸ ಪದವಿನ್ಯಾಸ, ಪದಲಾಲಿತ್ಯಗಳಿದ್ದರೂ ಪ್ರಾಸದ ಬಗ್ಗೆ ನಿಷ್ಠರಾಗಿದ್ದರು. ಶಾಲೆಯ ಮಕ್ಕಳನ್ನೇ ಹೆಚ್ಚು ಗಮನದಲ್ಲಿಟ್ಟುಕೊಂಡು ಕಾವ್ಯರಚನೆ ಮಾಡಿದ ಇವರನ್ನು ಶಿಶುಸಾಹಿತ್ಯದ ಆದ್ಯ ಪ್ರವರ್ತಕರು ಎನ್ನಬಹುದು. ಇವರ ಮಳೆಗಾಲ, ಕಾಮನಬಿಲ್ಲು, ನೇಗಿಲು, ನಕ್ಷತ್ರ, ಕಾವೇರಿಯ ಮಹಿಮೆ, ಮಲಗುವ ಹೊತ್ತು, ಹೊಗೆಯ ಗಾಡಿ, ಚಂದ್ರ ಇತ್ಯಾದಿ ಕವನಗಳು ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಎಂಬ ಗೋವಿನ ಬಾಳನ್ನು ಕುರಿತ ಪದ್ಯ ಅತ್ಯಂತ ಜನಪ್ರಿಯವಾಗಿದೆ. ಇವರು ಇನ್ನೆರಡು ಸ್ವತಂತ್ರ ಕವಿತೆಗಳೆಂದರೆ ಎಂ. ಶಿಂಗ್ರಯ್ಯನವರ ಶ್ರೀ ಚಾಮರಾಜೇಂದ್ರ ಒಡೆಯರ್ ಚರಿತ್ರೆಯಲ್ಲಿ ಸೇರಿರುವ ಎರಡು ಪದ್ಯಗಳು; 1894ರಲ್ಲಿ ರಚಿಸಿದ ಚಾಮರಾಜೇಂದ್ರ ಒಡೆಯರ್ ಚರಮಗೀತೆ, ಹಾಗೂ ಶ್ರೀ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದಾಗ ರಚಿಸಿದ ಮಂಗಳ ಪದ್ಯ.
  • ಮದರಾಸು ಸರ್ಕಾರದ ಶಿಕ್ಷಣ ಇಲಾಖೆಯ ಆಂಗ್ಲ ಇನ್‍ಸ್ಪೆಕ್ಟರೊಬ್ಬರು ಇಂಗ್ಲಿಷಿನಲ್ಲಿ ರಚಿಸಿದ ಬುಕ್ಸ್ ಫಾರ್ ದಿ ಬ್ರೇನ್ಸ್ ಎಂಬ ಕೃತಿಗಳನ್ನು ಇವರು ಅನುವಾದ ಮಾಡಿದ್ದಾರೆ. ಹಿಂದೂ ದೇಶದ ಚರಿತ್ರೆ, ಅಲ್ಲಾವುದ್ದೀನನ ಅದ್ಭುತ ದೀಪ, ಈಸೋಪನ ಕಥೆಗಳು, ಗಲಿವರನ ಸಂಚಾರ, ಭಾರತ ವೀರ ಚರಿತ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇವರು ಮಾಡಿದ್ದಾರೆನ್ನಲಾದ ಉತ್ತರರಾಮ ಚರಿತೆಯ ಮೂರು ಅಂಕಗಳ ಅನುವಾದ ಉಪಲಬ್ಧವಿಲ್ಲ.[೨]

ವಿದ್ವತ್ತು[ಬದಲಾಯಿಸಿ]

ಗೋವಿನ ಹಾಡು

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಕವಿ:ಎಸ್. ಜಿ. ನರಸಿಂಹಾಚಾರ್
  • ಎಸ್.ಜಿ.ನರಸಿಂಹಾಚಾರ್ ಕನ್ನಡವನ್ನು ಹೊರತುಪಡಿಸಿ ಸಂಸ್ಕೃತ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬುದ್ಧ ವಿದ್ವಾಂಸ. ಅವರು ಅನುವಾದಕರಾಗಿ ಪಾರ್ ಎಕ್ಸಲೆನ್ಸ್ ಎನ್ನಿಸಿಕೊಂಡಿದ್ದಾರೆ. ಇಂಗ್ಲಿಷ್ನಿಂದ ಅವರ ಇಂಗ್ಲಷ್ ಛಂದಸ್ಸಿನ ಬ್ಲ್ಯಾಕ್‍ವರ್ಸ್ ಅನುವಾದಗಳು ಪ್ರಸಿದ್ಧ ಮತ್ತು
  • “ಇಟ್ಟರೆ ಸಗಣಿಯಾದೆ” ಮತ್ತು “ಕಾವೇರಿಯ ಮಹಿಮೆ” ಯಂತಹ ಕವನಗಳು ಬಹಳ ಜನಪ್ರಿಯವಾಗಿವೆ. ಅವರ ಇತರ ಪ್ರಮುಖ ಕೃತಿಗಳಲ್ಲಿ ‘ಹಿಂದೂದೇಶ ಚರಿತ್ರೆ’, ‘ಅಲ್ಲಾವುದ್ಧೀನನ ಅದ್ಭುತ ದೀಪ ’,‘ ಈಸೋಪನ ನೀತಿಕಥೆಗಳು ’,‘ ಗಲಿವರನ ದೇಶಸಂಚಾರ' ಮತ್ತು ‘ಭಾರತ ವೀರಚರಿತೆ’ ಇವು ಮುಖ್ಯವಾದವು. ಅವರು 1907 ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡದ ಬರಹಗಾರರ ಮೊದಲ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.[೩]
  • 1907ರ ಡಿಸೆಂಬರ್ 22ರಂದು ಇನ್ನೂ 45ರ ಹರೆಯದಲ್ಲೇ ಎಲ್ಲರನ್ನೂ ಅಗಲಿಹೋದರು.[೧]

ಮಕ್ಕಳ ಪದ್ಯಗಳು[ಬದಲಾಯಿಸಿ]

  • ನಕ್ಷತ್ರ (ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್)
  • ಗೋವಿನ ಬಾಳು- (ಗೋವಿನ ಹಾಡು) (ಬಲಗಡೆ ಉದಾಹರಣೆಗೆ ಕೊಟ್ಟ ಪದ್ಯವನ್ನು ನೋಡಿ)
  • ಕಾವೇರಿಯ ಮಹಿಮೆ

ಅನುವಾದಗಳು[ಬದಲಾಯಿಸಿ]

  • ಗಲಿವರನ ದೇಶ ಸಂಚಾರ,(ಜೊನಥ್ನ್ ಸ್ಟಿಫ್ಟ್ )
  • ಗಯ್ಯಾಳಿಯನ್ನು ಸಾಧು ಮಾಡುವಿಕೆ (ದಿ ಟೇಮಿಂಗ್ ಆಫ್ ದಿ ಶ್ರ್ಯೂ-ನಾಟಕ)
  • ಅಜನೃಪ ಚರಿತೆ, ದಿಲೀಪ್ ಚರಿತೆ (ರಘವಂಶದಿಂದ)

ಸಾಹಿತ್ಯ ಕೃತಿಗಳು[ಬದಲಾಯಿಸಿ]

  • ಭಾರತ ವೀರ ಚರಿತ
  • ಹಿಂದೂ ದೇಶದ ಚರಿತ್ರೆ
  • ಅಲ್ಲಾವುದ್ದೀನ್ ಅದ್ಭುತ ದೀಪ
  • ಈಸೋಪಾನ ಕಥೆಗಳು
  • ಉತ್ತರ ರಾಮಚರಿತಂ
  • ಮುಕುಂದ ಮಾಲೆ

ಸಂಪಾದನೆ[ಬದಲಾಯಿಸಿ]

  • ಪದ್ಯಸಾರ (ಭಾಗ-೧)
  • ಆದಿಪುರಾಣ (೧೯೦೦)
  • ಅಪ್ರತಿಮ ವೀರ ಚರಿತ್ರೆ
  • ಕಬ್ಬಿಗರ ಕಾವ (೧೮೯೩)
  • ಅಭಿನವ ದಶಕುಮಾರ ಚರಿತೆ

ಪೂರಕ ಮಾಹಿತಿ[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]