ವಿಷಯಕ್ಕೆ ಹೋಗು

ಆ ಚಿಪ್ಪು ಚಿಪ್ಪಲ್ಲ: ದೇವರೇಂ ಬೆಪ್ಪಲ್ಲ!

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ವಾತ್ಸಲ್ಯ ವಿರಹಿ ಸರಣಿಯ ಕವಿತೆಗಳನ್ನು ಕುರಿತು ಶ್ರೀಯುತ ಎಸ್.ವಿ.ಪರಮೇಶ್ವರ ಭಟ್ಟರು ’ಮಗನ ಮೇಲೆ ಇರುವ ವಾತ್ಸಲ್ಯವನ್ನು ಕಾವ್ಯ ವಿವರವಾಗಿ ವರ್ಣಿಸಿರುವ ಸಮಕಾಲೀನ ಕವಿ ಮತ್ತೊಬ್ಬರಿಲ್ಲ ಎನ್ನಿಸುತ್ತದೆ.’ ಎಂದಿದ್ದಾರೆ. ಕವಿಯ ದೇಹ ಮಾತ್ರ ಬೆಂಗಳೂರಿನ ಬಾಡಿಗೆ ಮನೆಯಲ್ಲಿರುತ್ತದೆ. ಮನಸ್ಸು ಮಾತ್ರ ಮೂರೂ ಹೊತ್ತು ಮಗು ಮತ್ತು ಹೆಂಡತಿಯ ಸುತ್ತಲೇ ಮನಸ್ಸು ಗಿರಕಿಹೊಡೆಯುತ್ತಿರುತ್ತದೆ.

ಆಡಿ, ಓಡಿ, ಕಾಡಿ, ಬೇಡಿ,
ನಲಿಸಿ ನಲಿವ ಕಂದನಿಲ್ಲ;
ಬದುಕನೊಂದು ಗಾನಮಾಡಿ
ಒಲಿಸಿ ಒಲಿವ ನಲ್ಲೆಯಿಲ್ಲ.

ತುಂಟತನದಿಂದ ಹಠಮಾರಿತನದಿಂದ ಒಂದು ರೀತಿಯಲ್ಲಿ ಗೋಳು ಹೊಯ್ದುಕೊಂಡರೂ ನಲಿವನ್ನು ತರುತ್ತಿದ್ದ ಕಂದ, ಬದುಕನ್ನು ಸಂಗೀತದಂತೆ ಸುಮಧುರಗೊಳಿಸಿದ್ದ ಸತಿ ಇಬ್ಬರೂ ಇಲ್ಲ! ಆಗ, ಆ ಕ್ಷಣದ ಕವಿಯ ಸ್ಥಿತಿ ಹೇಗಿತ್ತು ನೋಡಿ.

ಕಂದನಿಲ್ಲ, ನಲ್ಲೆಯಿಲ್ಲ,
ನಾಣೊಬ್ಬನೆ ಮಂಚವೆಲ್ಲ!
ಉಸಿರನೆಷ್ಟನೆಳೆದುಕೊಳಲಿ
ಶ್ವಾಸಕೋಶ ತುಂಬಲೊಲ್ಲ!
ಅತ್ತ ಹೊರಳಿ, ಇತ್ತ ಹೊರಳಿ,
ನಿದ್ದೆಗೆಟ್ಟಿತೂಹೆ ಕೆರಳಿ.
ತೊಳಲಿ, ತೊಳಲಿ, ಕಡೆಗೆ ಬಳಲಿ,
ಮನಸು ಕನಸನಪ್ಪಿತು!
ಕೊನೆಗೆ, ಕನಸಿನಾಚೆಯಲ್ಲಿ
ನಿದ್ದೆಬೊಮ್ಮದೈಕ್ಯದಲ್ಲಿ
ಮಿಲನಶಾಂತಿ ಒಪ್ಪಿತು!

ಬಹುಶಃ ಕಾವ್ಯವನ್ನೇ ಜೀವಿಸುವವರಿಗೆ ಮಾತ್ರ ಈ ರೀತಿಯ ಗ್ರಹಿಕೆ ಸಾಧ್ಯವೇನೋ! ಬದುಕಿನ ಪ್ರತಿಕ್ಷಣವೂ ಕಾವ್ಯಮಯವಾಗಿಯೇ ಕಾಣುತ್ತದೆ. ಅಲ್ಲಿಯ ದುಃಖ ದುಮ್ಮಾನಗಳು, ಹಾಸ್ಯ, ಕರುಣ, ಅಪ್ರಲಂಬ - ವಿಪ್ರಲಂಬ ಶೃಂಗಾರ, ಮಿಲನ, ವಿರಹ ಹೀಗೆ ಎಲ್ಲವೂ. . . . . ವಾಸ್ತವದ ಅಗಲಿಕೆಗೆ ಕನಸಿನಲ್ಲಿ ಕೊನೆಯಾಗುತ್ತದೆ! ಪುಟ್ಟ ಕಂದನ ಅಗಲಿಕೆ, ಆತನ ಆಟಪಾಟಗಳುಜ, ಆತ ಬಳಸಿದ ವಸ್ತುಗಳು ಎಲ್ಲವೂ ದಿವ್ಯವಾಗಿ ಕಾಣುವಂತೆ ಮಾಡಿಬಿಡುತ್ತದೆ. ಮಗು ತನ್ನ ಆಟಕ್ಕೆ ಬಳಸಿದ ತೆಂಗಿನ ಚಿಪ್ಪೊಂದು ಮಗುವಿನಿಂದ ದೂರವಿರುವ ಕವಿಗೆ ಒಂದು ದಿವ್ಯಸಾಧನದಂತೆ ಕಂಡುಬಿಡುತ್ತದೆ.

ನೀನು ಅಮ್ಮನ ಕೂಡಿ
ಅಜ್ಜಿ ಮನೆಗೆ
ಹೋದಿರುಳು ಬೆಳಗಾಯ್ತು
ಎಂತೋ ಕೊನೆಗೆ.
ಎಂತು ತಿಳಿಸಲಿ ಹೇಳು
ಹಸುಳೆ ನಿನಗೆ?

ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಕಳೆದ ಕವಿಗೆ ಬೆಳಗಿನ ಜಾವ ನಿದ್ದೆ ಬಂದಿರಬೇಕು. ಮರುಕ್ಷಣದಲ್ಲಿಯೇ ಬೆಳಕಾಗಿದೆ. ಅದು ಹೇಗಾಯಿತು ಎನ್ನುವುದು ಕವಿಗೆ ಗೊತ್ತಿಲ್ಲ. ಆದರೆ ಕವಿ ರಾತ್ರಿಯಿಡೀ ಪಟ್ಟ ಅಗಲಿಕೆಯ ನೋವು ಅದನ್ನು ಅರ್ಥ ಮಾಡಿಸುವುದಾದರೂ ಹೇಗೆ?

ನಿಮ್ಮ ನೆನಹಿನ ಉರಿಯೆ
ಹೊತ್ತಿತೆನೆಗೆ!
ಪಕ್ಕದಲ್ಲಿ ನೀನೆಲ್ಲಿ?
ನಿನ್ನಮ್ಮನೆಲ್ಲಿ?
ಶೂನ್ಯತೆಯೆ ಮಲಗಿತ್ತು
ಇಡಿ ಮಂಚದಲ್ಲಿ?

ಇಡೀ ಮಂಚವನ್ನು ಶೂನ್ಯವೇ ಆವರಿಸಿತ್ತು ಎಂಬ ಭಾವ ಕವಿಗೆ ಆಗಿದೆ; ಜೊತೆಗೆ ಸ್ವತಃ ಕವಿಗೂ ಶೂನ್ಯ ಆವರಿಸಿಬಿಟ್ಟಿದೆ. ನಿಟ್ಟುಸಿರೊಂದೇ ಜೊತೆಗಾತಿ ಕವಿಗೆ. ಆ ಜೊತೆಗಾತಿಯೊಂದಿಗೇ ಎದ್ದು ಅಂಗಳಕ್ಕೆ ಬರುತ್ತಾರೆ.

ಸುಯ್ಯುತಲ್ಲಿಂದೆದ್ದು
ಬಂದೆನಂಗಳಕಲ್ಲಿ
ನೀನಾಡಿದಾ ಮುದ್ದು ಮಣ್ಣಿನಲ್ಲಿ
ಕಂಡೆನೊಂದಲ್ಪಮಂ,
ಬೆಂದೆದೆಗೆ ತಣ್ಪೀವ
ಸವಿಸೊದೆಯ ತಲ್ಪಮಂ:
ಒಂದು ಕರಟದ ಚಿಪ್ಪು,
ಮಣ್ಣಿಡಿದ ಬಿರಿದೊಡೆದ
ನೀನಾಡಿದಾ ಚಿಪ್ಪು,
ಮಣ್ಣಾಟದಾ ಚಿಪ್ಪು,
ನಿನ್ನಾಟದಾ ಚಿಪ್ಪು
ನೀನಾಡಿದಾ ಮುದ್ದು
ಮಣ್ಣಿನಲ್ಲಿ
ಪರದೇಶಿಯಾಗಿದ್ದು
ಪರದೇಶಿಯೋಲ್ ಬಿದ್ದು
ಹನಿಯ ತಂದುದು ನನ್ನ
ಕಣ್ಣಿನಲ್ಲಿ!

ಸಾಮಾನ್ಯ ಕಣ್ಣಿಗೆ ಯಕಶ್ಚಿತ್ ಎನ್ನಬಹುದಾದ ಒಂದು ತೆಂಗಿನ ಚಿಪ್ಪು ಕವಿಯ ಭಾವಕೋಶವನ್ನೇ ಆವರಿಸಿಬಿಡುತ್ತದೆ! ಒಂದು ರೀತಿಯಲ್ಲಿ ಕವಿಯೇ ಪರದೇಶಿಯಂತೆ, ಶೂನ್ಯವನ್ನೇ ಉಂಡುಟ್ಟು ಹೊದ್ದು ಮಲಗಿರುವ ಕವಿಗೆ ಪರದೇಶಿಯಂತೆ ಬಿದ್ದಿದ್ದ ತೆಂಗಿನ ಚಿಪ್ಪು ದೊಡ್ಡ ನಿಧಿಯಂತೆ ಕಾಣುತ್ತದೆ. ಅದು ಗುರುವೊಪ್ಪಿದ, ದೇವನೊಪ್ಪಿದ ಪರಮ ಪವಿತ್ರ ವಸ್ತುವಾಗಿ ಬಿಡುತ್ತದೆ. ಅದನ್ನು ಕಂಡ ತಕ್ಷಣ ಕವಿಯೊಲುಮೆ ಹೀಗೆ ಹಾಡುತ್ತದೆ.

ಕಾಣಲಾ ನಿನ್ನೊಲುಮೆ
ಚಿಮ್ಮಿತಕ್ಕರೆ ಚಿಲುಮೆ.
ಅದನೆತ್ತಿ, ಎದೆಗೊತ್ತಿ,
ದೇವರಮನೆಗೆ ಬಂದೆ:
ನೈವೇದ್ಯವನೆ ತಂದೆ!

ಬೀದಿಯಲ್ಲಿ ಬಿದ್ದಿದ್ದ ಚಿಪ್ಪನ್ನು ದೇವರಮನೆಗೆ ತೆಗೆದುಕೊಂಡು ಬರುವ ವಿರಹಿ ತಂದೆ ಕುವೆಂಪು, ತಮ್ಮ ಮೂರುವರ್ಷದ ಕಂದ ತೇಜಸ್ವಿಯ ಸಾನಿಧ್ಯದಲ್ಲಿ ಅನುಭವಿಸಿದ್ದ ದಿವ್ಯತ್ವ ಎಂತಹುದ್ದು ಎಂಬ ಪ್ರಶ್ನೆ ಮೂಡುತ್ತದೆ. ಬಹುಶಃ ಪ್ರೀತಿಯ ವಸ್ತು ದೂರವಾದಾಗಲೇ ಅದು ಹೆಚ್ಚು ಕಾಡಿಸುತ್ತದೆ. ದಿನವೂ ಅದೇ ಚಿಪ್ಪಿನಲ್ಲಿ ಆಟವಾಡುತ್ತಿದ್ದ ಮಗನನ್ನು ಮಾತ್ರ ಗಮನಿಸುತ್ತಿದ್ದರೇನೋ? ಆದರೆ ಈಗ ಆ ’ಯಕಶ್ಚಿತ್’ ಚಿಪ್ಪು ಕವಿಗೆ ಬೇರೆಯೇ ಆಗಿ ಕಾಣುತ್ತಿದೆ. ಅದನ್ನೇ ನೈವೇದ್ಯದಂತೆ ಭಾವಿಸಿ ದೇವರ ಮನೆಗೆ ತಂದು ತಮ್ಮಿಷ್ಟ ಗುರು-ದೇವರುಗಳಿಗೆ ಅರ್ಪಿಸಿಬಿಡುತ್ತಾರೆ!

ನಿನ್ನ ನೆನಹಿನ ನಿಧಿಯ
ಆ ಕರಟ ಚಿಪ್ಪು
ಹೂವು ಹಣ್ಣಿಗೆ ಮಿಗಿಲು
ಗುರುದೇವಗೊಪ್ಪು:

ಗುರುದೇವರಿಗೆ ಹೂವು ಹಣ್ಣುಗಳ ನೈವೇದ್ಯ ಮಾಡುತ್ತಿದ್ದ ಕವಿ ಇಂದು ಮಗನಾಡಿದ ಚಿಪ್ಪನ್ನು ನೈವೇದ್ಯವಾಗಿ ಇಡುತ್ತಿದ್ದಾರೆ. ಕರಟ ಚಿಪ್ಪು ಎಂದು ಒತ್ತಿ ಹೇಳುತ್ತಿರುವುದರಿಂದಲೇ ಅದೊಂದು ನಿಧಿಯಾಗಿ ಕವಿಗೆ ಕಂಡಿದೆ ಎಂಬ ಭಾವ ಮೂಡದಿರದು.

ಬೇರೆ ಹೂವಿಡಲಿಲ್ಲ;
ಬೇರೆ ಹಣ್ಣಿಡಲಿಲ್ಲ.
ನನ್ನ ಮುಡುಪಿಗೆ, ಬಲ್ಲೆ,
ದೇವರೊಪ್ಪಿದನು;
ನನ್ನ ಕಂದನ ಕರಟ
ಚಿಪ್ಪನಪ್ಪಿದನು!

ಕವಿಯರ್ಪಿಸಿದ ಚಿಪ್ಪಿನ ನೈವೇದ್ಯವನ್ನು ಖಂಡಿತ ಆ ದೇವರು ಒಪ್ಪಿ ಅಪ್ಪಿಕೊಳ್ಳುತ್ತಾನೆ. ಏಕೆಂದರೆ-

ಆ ಚಿಪ್ಪು ಚಿಪ್ಪಲ್ಲ:
ದೇವರೇಂ ಬೆಪ್ಪಲ್ಲ!
ಅಕ್ಕರೆಯ ಜತೆಮಾಡಿ
ಏನಾದರೇಂ ನೀಡಿ:
ನೈವೇದ್ಯವೆಲ್ಲ!

ನಿಜವಾಗಿ ದೇವರೇನಾದರೂ ಇದ್ದರೆ ಇದಕ್ಕಿಂತ ಒಳ್ಳೆಯವನಾಗಿರಲು ಸಾಧ್ಯವಿಲ್ಲ! ಮಗುವಾಡಿದ ಚಿಪ್ಪನ್ನು ಒಪ್ಪಿ-ಅಪ್ಪಿಕೊಳ್ಳುವ ದೇವರೇ ನಿಜವಾದ ದೇವರು. ಚಿನ್ನದ ದೇವಾಲಯ, ವಜ್ರದ ಕಿರೀಟ, ಬೆಳ್ಳಿಯ ಪಲ್ಲಕ್ಕಿ ಬೇಡುವವನು ದೇವರಾಗುತ್ತಾನೆಯೇ!? ಕವಿ ಕುವೆಂಪು ಸ್ವಚ್ಚತೆಗೆ, ಮನಸ್ಸು-ಮನೆ-ಪರಿಸರದ ನೈರ್ಮಲ್ಯಕ್ಕೆ ಹೆಚ್ಚು ಒತ್ತುಕೊಡುತ್ತಿದ್ದವರು. ತಮ್ಮನ್ನು ತಾವೇ ’ನುಡಿರಾಣಿಯ ಗುಡಿ ಕುವೆಂಪು’ ಎಂದು ಕರೆದುಕೊಂಡಿದ್ದವರು! ಅಂತಹ ಸ್ವಚ್ಚತೆ ಸಂಕಲ್ಪವನ್ನು ವ್ರತದಂತೆ ಪಾಲಿಸುತ್ತಿದ್ದ ಕವಿಗೆ, ಸ್ವತಃ ತನ್ನ ಮನೆಯ ನೈರ್ಮಲ್ಯವೇ ಅಸಹ್ಯ ಮೂಡಿಸಿದ್ದು ತನ್ನ ಮಗನ ಅಗಲಿಕೆಯೇ! ಈ ಸರಣಿಯ ಏಳನೆಯ ಕವಿತೆ ಆ ಸಂದರ್ಭವನ್ನು ಕಟ್ಟಿಕೊಡುತ್ತದೆ. ಇಡಿಯಾಗಿ ಕವಿತೆಯನ್ನೊಮ್ಮೆ ಓದಿದರೆ ಸಾಕು; ಕವಿತೆಯಿಂದ ಕವಿಯ ಅಂದಿನ ಮನಸ್ಥಿತಿಯನ್ನು ಹಾಗೂ ಅದಕ್ಕೊದಗಿರುವ ಅಪೂರ್ಣತೆಯಿಂದ ಕವಿಯ ಮನೋಶೂನ್ಯತೆಯನ್ನು ಅರಿಯಬಹುದಾಗಿದೆ.

ನೀನಿಲ್ಲ . . . . .
. . . . ಮನೆಯಲ್ಲಿ
ಎಲ್ಲಿ ಕಣ್ಣಿಡಲಲ್ಲಿ
ಕಸವಿಲ್ಲ . . . .
. . . . ಸರವಿಲ್ಲ!-
ಬಗೆಗೆ ಸುತವಾತ್ಸಲ್ಯ
ಒಗೆಯಲೀ ನೈರ‍್ಮಲ್ಯ
ಬರಿ ಅಸಹ್ಯ:
ನೀ ಚೆಲ್ಲುವಾ ಧೂಳಿ
ಆಗಿತ್ತು ರಂಗೋಲಿ;
ನೀ ಹರಡುತ್ತಿದ್ದ ಕಸ
ಆಗಿತ್ತು ಜೀವರಸ;
ನೀನಿಲ್ಲದೀ ಮನೆಯ
ನೈರ‍್ಮಲ್ಯವೇ, ತನಯ,
ನನಗಾಯ್ತಸಹ್ಯ!