ಬಿದನೂರು
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಬಿದನೂರು (ನಗರ)
[ಬದಲಾಯಿಸಿ]ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಹೊಸನಗರದಿಂದ ೧೫ ಕಿಮೀ ದಕ್ಷಿಣಕ್ಕಿರುವ ಒಂದು ಗ್ರಾಮ. ಇದರ ಹಿಂದಿನ ಹೆಸರು ಬಿದನೂರು, ಬಿದಿರೂರು. ಹಲವು ಶಾಸನಗಳಲ್ಲಿ ಈ ಊರನ್ನು ವೇಣುಪುರ ಎಂದೂ ಕರೆದಿದೆ. ಕೆಳದಿ ಇಕ್ಕೇರಿಗಳಲ್ಲಿ ಆಳಿದ ಅರಸರು ೧೬೪೦ರ ಹೊತ್ತಿಗೆ ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಬಿದನೂರ ಅರಸರಾದರು. ಘಟ್ಟದ ಕೆಳಗೆ ಇಳಿಯುವ ಹೊಸಂಗಡಿ ಘಾಟಿಯ ದಾರಿಯಲ್ಲಿದ್ದು ವ್ಯಾಪಾರ ಕೇಂದ್ರವೂ ಆದುದರಿಂದ ಬಹುಬೇಗನೆ ಬೆಳೆದು ದೊಡ್ಡ ನಗರವಾಯಿತು. ಕೋಟೆಕೊತ್ತಲಗಳು ಅರಮನೆಗಳು ರಚಿತವಾದುವು.
ಕೋಟೆ
[ಬದಲಾಯಿಸಿ]ಇಲ್ಲಿಯ ಕೋಟೆಯ ಸುತ್ತಳತೆ ಹನ್ನೆರಡು ಕಿಮೀಗಳಷ್ಟು ಇದ್ದು ಡಿಲ್ಲಿ ಬಾಗಿಲು, ಕೊಡಿಯಾಲದ ಬಾಗಿಲು, ಕವಿಲೆದುರ್ಗದ ಬಾಗಿಲು ಮುಂತಾದ ಹತ್ತು ಬಾಗಿಲುಗಳಿದ್ದುವು. ಊರಿನಲ್ಲಿ ಎತ್ತರವಾದ ಒಂದು ಗುಡ್ಡದ ಮೇಲೆ ಅರಮನೆಯಿದ್ದು ಅದನ್ನು ಸುತ್ತುವರಿದು ಒಂದು ಒಳಕೋಟೆಯೂ ಇತ್ತು. ಶಿವಪ್ಪನಾಯಕ ಈ ಪಟ್ಟಣವನ್ನು ತುಂಬ ಅಭಿವೃದ್ಧಿಪಡಿಸಿದ. ೧೭೬೩ರಲ್ಲಿ ಹೈದರ್ ದಾಳಿ ಮಾಡಿದಾಗ ಇದು ಅತ್ಯಂತ ಸಂಪದ್ಭರಿತವಾದ ನಗರವಾಗಿತ್ತು. ಸೋಲು ಖಚಿತವಾದಾಗ ಅರಮನೆಗೆ ಬೆಂಕಿಹಚ್ಚಿ ರಾಣಿ ವೀರಮ್ಮಾಜಿ ತಪ್ಪಿಸಿಕೊಂಡು ಓಡಿಹೋದರೂ ಹೈದರನಿಗೆ ಅನೇಕ ಕೋಟಿ ರೂಪಾಯಿಗಳ ಬೆಲೆ ಬಾಳುವ ಕೊಳ್ಳೆ ದೊರೆಯಿತು.
ಬಿದನೂರರಸರ ಕಾಲದಲ್ಲಿ ಇಲ್ಲಿ ನಿರ್ಮಿತವಾದ ಕಟ್ಟಡಗಳಲ್ಲಿ ದೇವಗಂಗೆ ಎಂಬ ಹೆಸರಿನ ಕೊಳ ಆ ಅರಸರ ನಿಪುಣತೆಗೆ ಒಂದು ಕುರುಹು. ಸುತ್ತ ಆವರಿಸಿರುವ ಬೆಟ್ಟಗಳಿಂದ ಹರಿದು ಬರುವ ಝರಿಯ ನೀರನ್ನು ತಡೆದು ನಿರ್ಮಿಸಿರುವ ಏಳು ಕೊಳಗಳು ಒಂದೊಂದೂ ಒಂದೊಂದು ಆಕೃತಿಯಲ್ಲಿದ್ದು ಆಕರ್ಷಣೀಯವಾಗಿವೆ. ಅದರಲ್ಲಿಯೂ ಕಮಲದಾಕೃತಿಯಲ್ಲಿ ಮತ್ತು ನಕ್ಷತ್ರದಾಕೃತಿಯಲ್ಲಿ ಕಲ್ಲಿನಲ್ಲಿ ಕೊರೆದಿರುವ ಎರಡು ಪುಟ್ಟ ಕೊಳಗಳು ವಿಶಿಷ್ಟವಾಗಿವೆ.
ನೀಲಕಂಠೇಶ್ವರ ದೇವಾಲಯ
[ಬದಲಾಯಿಸಿ]ಊರಿನಲ್ಲಿರುವ ನೀಲಕಂಠೇಶ್ವರ ದೇವಾಲಯ ಮಲೆನಾಡಿನ ವಾಸ್ತು ರೀತಿಗೆ ಮಾದರಿಯಾಗಿದೆ. ಗರ್ಭಗುಡಿ, ದೊಡ್ಡ ಸುಕನಾಸಿ ಮತ್ತು ವಿಶಾಲವಾದ ನವರಂಗಗಳಿರುವ ಇದರ ಗರ್ಭಗುಡಿಯ ಮೇಲಿನ ಗೋಪುರ ಮಾತ್ರ ಇಸ್ಲಾಮೀ ಶೈಲಿಯಲ್ಲಿ ಗೋಳಾಕಾರದಲ್ಲಿದೆ. ಗುಡ್ಡೆ ವೆಂಕಟರಮಣಸ್ವಾಮಿ ದೇವಾಲಯ ಇಕ್ಕೇರಿ ಶಿಲ್ಪ ಶೈಲಿಯಲ್ಲಿರುವ ಒಂದು ಸಣ್ಣ ಗುಡಿ. ಎತ್ತರವಾದ ಜಗತಿಯ ಮೇಲೆ ಗರ್ಭಗುಡಿ ಮುಖಮಂಟಪಗಳು ಮಾತ್ರವಿರುವ ಈ ಗುಡಿಯ ಹೊರಗೋಡೆಗಳು ಅಲ್ಲಲ್ಲಿ ಮೂರ್ತಿಶಿಲ್ಪದಿಂದ ಅಲಂಕೃತವಾಗಿವೆ. ಇದರ ಗರ್ಭ ಗೃಹದ ಬಾಗಿಲುವಾಡ ಮಾತ್ರ ಹೊಯ್ಸಳ ರೀತಿಯಲ್ಲಿದ್ದು ಬೇರೆ ಹಳೆಯ ದೇವಾಲಯವೊಂದರಿಂದ ತಂದು ಸೇರಿಸಿದ್ದಾಗಿದೆ.