ವಿಷಯಕ್ಕೆ ಹೋಗು

ಚಿಟಿಕೆ ಚಪ್ಪರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಟಿಕೆ ಚಪ್ಪರ

[ಬದಲಾಯಿಸಿ]

ಲಾಲಬಹಾದ್ದೂರರಿಗೆ ರಾಜ್ಯ ಬಂದರೂ .... ಮೈಸೂರು ರಾಜ್ಯಕ್ಕೆ ಕೇಂದ್ರದಲ್ಲಿ ಪ್ರಾತಿನಿಧ್ಯದ ಕೊರತೆ. ನೆರೆ ರಾಜ್ಯಗಳಿಗೆ ಹೆಚ್ಚಿನ ಕ್ಯಾಬಿನೆಟ್ ದರ್ಜೆಯ ಸಚಿವ ಪದವಿಗಳನ್ನು ನೀಡಿ ಕರ್ನಾಟಕ (ಅಂದಿನ ಮೈಸೂರು) ರಾಜ್ಯಕ್ಕೆ ಅನ್ಯಾಯ ಮಾಡುವುದು ೪೫ ವರ್ಷಗಳಾದರೂ ನಿಂತಿಲ್ಲ. ಈ ಬಗ್ಗೆ ಹೆಚ್.ಆರ್.ನಾಗೇಶರಾವ್ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದ ನಿತ್ಯ ಟೀಕಾಂಕಣ ಚಿಟಿಕೆ ಚಪ್ಪರದಲ್ಲಿ ಹೀಗೆ ಪ್ರಸ್ತಾಪಿಸಿದ್ದರು. ಈ ಅಂಕಣ ಎಷ್ಟು ಜನಪ್ರಿಯವಾಗಿತ್ತೆಂದರೆ ಬರಹಗಾರರನ್ನು ಒಮ್ಮೆ ಕಚೇರಿಗೆ ಕರೆದುಕೊಂಡು ಬನ್ನಿ ಎಂದು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರನ್ನು ಕೋರಿಕೊಂಡಿದ್ದರು.


ಕೇಂದ್ರದ ನೂತನ ಮಂತ್ರಿಮಂಡಲದಲ್ಲಿಯೂ ಮೈಸೂರು ರಾಜ್ಯದ ಪ್ರಾತಿನಿಧ್ಯ ಏರದೆ, ಶ್ರೀ ಎಚ್.ಸಿ. ದಾಸಪ್ಪನವರೊಬ್ಬರು ಮಾತ್ರ ಸಂಪುಟ ದರ್ಜೆಯ ಸಚಿವರಾಗಿ ಮುಂದುವರಿದಿದ್ದಾರೆ.

- ಇದೇ ಸಮಯದಲ್ಲಿ ಆಂಧ್ರದ ಪ್ರಾತಿನಿಧ್ಯವಾದರೋ ಸಂಪುಟ ಮಟ್ಟದಲ್ಲಿ ಇನ್ನೊಂದು ಸಂಖ್ಯೆ ಹೆಚ್ಚಾಗಿ, ಶ್ರೀ ಸಂಜೀವ ರೆಡ್ಡಿಯವರು ಪ್ರಾಮುಖ್ಯದ ಉಕ್ಕಿನ ಶಾಖೆ ಸಚಿವರಾಗಿದ್ದಾರೆ !.... * * "ಲಾಲ್ ಬಹದ್ದೂರರಿಗೆ ರಾಜ್ಯ ಬಂದರೂ ಮೈಸೂರಿನವರಿಗೆ ಮಾತ್ರ ಅನ್ಯಾಯ ತಪ್ಪಲಿಲ್ಲ" ಎಂದು ಕನ್ನಡಿಗರು ನ್ಯಾಯವಾಗಿಯೇ ಕೊರಗಬೇಕಾಗಿ ಬಂದಿದೆ, ಈಗ!

- ಹಿಂದೊಮ್ಮೆ ಕೇಂದ್ರ ಸಂಪುಟದಲ್ಲಿ ಮೈಸೂರಿನ ಒಬ್ಬರು `ಕ್ಯಾಬಿನೆಟ್' ದರ್ಜೆಯ ಮಂತ್ರಿಗಳೂ, ಇಬ್ಬರು `ಸ್ಟೇಟ್' ದರ್ಜೆಯ ಮಂತ್ರಿಗಳೂ, ಒಬ್ಬಿಬ್ಬರು ಉಪ ಮಂತ್ರಿಗಳು ಇದ್ದುದು ಕ್ರಮೇಣ ಕರಗುತ್ತಾ ಬಂದು ಈಗ ಕೇವಲ ಒಂದಕ್ಕೇ ನಿಂತಿದೆ! ಕನ್ನಡಿಗರು ಹೀಗೇ ಕಣ್ಣು ಮುಚ್ಚಿ ಕುಳಿತಿದ್ದರೆ, ಈ ಅಂಕಿ ಶೂನ್ಯಕ್ಕೇ ಇಳಿದರೂ ಅಚ್ಚರಿಯಿಲ್ಲ, ಭವಿಷ್ಯದಲ್ಲಿ !!.... * * ಸದ್ಯಕ್ಕೆ, ದಕ್ಷಿಣ ರಾಜ್ಯಗಳಲ್ಲಿ ಮೈಸೂರು ರಾಜ್ಯವೇ ಹಿಂದು, ಈ ಸಚಿವ ಪದವಿಗಳಲ್ಲಿ:- ಆಂಧ್ರ ಪ್ರದೇಶಕ್ಕೆ ಸಂಪುಟದಲ್ಲಿ ೨ ಸ್ಥಾನ, `ಸ್ಟೇಟ್' ದರ್ಜೆಯಲ್ಲಿ ೨ ಸ್ಥಾನ - ಒಟ್ಟು ನಾಲ್ಕು; ಮದ್ರಾಸಿಗೆ ಸಂಪುಟದಲ್ಲಿ ೨, `ಸ್ಟೇಟ್' ದರ್ಜೆಯಲ್ಲಿ ೧ - ಒಟ್ಟು ಮೂರು; ಕೇರಳಕ್ಕೆ `ಸ್ಟೇಟ್' ದರ್ಜೆಯ ಒಟ್ಟು ಎರಡು ಸ್ಥಾನ! ಇನ್ನು ಉಪಸಚಿವ ಪದವಿಗಳಲ್ಲೂ ಎಷ್ಟೆಷ್ಟು ಸ್ಥಾನಗಳನ್ನು (ಮೈಸೂರಿಗಿಲ್ಲದೆ) ಈ ನೆರೆ ರಾಜ್ಯಗಳು ಮಾಂಊಲಿನಂತೆ ಪಡೆಯುವುವೋ ?!

- ಮೈಸೂರಿಗೆ ಈಗ ಕೇಂದ್ರದಲ್ಲಿ ಉಳಿದಿರುವುದು ಮೂರೇ ಮೂರು `ಉಪ' ಪದವಿಗಳು: ಸಂಸತ್ ಕಾಂಗ್ರೆಸ್ ಪಕ್ಷದ ಉಪನಾಯಕ ಸ್ಥಾನ (ಶ್ರೀ ಕೆ.ಸಿ. ರೆಡ್ಡಿ); ಲೋಕಸಭೆಯ ಉಪಾಧ್ಯಕ್ಷತೆ (ಶ್ರೀ ಎಸ್.ವಿ. ಕೃಷ್ಣಮೂರ್ತಿ ರಾವ್); ಮತ್ತು ರಾಜ್ಯಸಭೆಯ ಉಪಸಭಾಪತಿ ಪದವಿ (ಶ್ರೀಮತಿ ವಯೊಲೆಟ್ ಆಳ್ಆ)! ಅವಾದರೂ ಗಟ್ಟಿಯಾಗಿ ಉಳಿದರೆ ಸಾಕೆಂದಷ್ಟೇ ಕನ್ನಡಿಗರು ಭುವನೇಶ್ವರಿಯಲ್ಲಿ ಪ್ರಾರ್ಥಿಸಬೇಕೇನೋ?! * * ಅಂತೂ ಪ್ರಾತಿನಿಧ್ಯ-ಪ್ರಭಾವಗಳಲ್ಲಿ ಭಾರತದಲ್ಲಿ ಉತ್ತರ ಪ್ರದೇಶವನ್ನು ಬಿಟ್ಟರೆ ಎರಡನೇ ಸ್ಥಾನ ಆಂಧ್ರ ಪ್ರದೇಶಕ್ಕೆ ದೊರೆತಿರುವುದು ಗಮನಾರ್ಹ! ಅಷ್ಟೇಕೆ, ರಾಷ್ಟ್ರಪತಿ ಸ್ಥಾನವೇ ಆಂಧ್ರದ್ದು; ಇನ್ನು ರಾಜ್ಯಪಾಲ ಪದವಿಗಳಲ್ಲಂತೂ ರಾಷ್ಟ್ರದ ಐದು ರಾಜ್ಯಗಳಲ್ಲಿ ಆಂಧ್ರದವರೇ !!

- "ಆದರೆ, ಮೈಸೂರಿನ ರಾಜಕೀಯವನ್ನು ಚೆನ್ನಾಗಿ ಅರಿತ ಶ್ರೀ ಲಾಲ ಬಹದ್ದೂರರಾದರೂ ಮೈಸೂರಿಗೆ ನ್ಯಾಯ ದೊರಕಿಸಬಾರದಿತ್ತೇ?" ಎಂದು ವಾಚಕರು ಕೇಳಬಹುದು; ಮೈಸೂರಿನ ರಾಜಕೀಯದಲ್ಲಿನ ಭಿನ್ನತೆ, ಅನೈಕ್ಯ, ಅಸೂಯೆಗಳನ್ನು ಚೆನ್ನಾಗಿ ಅರಿತಿರುವುದರಿಂದಲೇ ಶ್ರೀ ಶಾಸ್ತ್ರಿಗಳು ಮೈಸೂರಿನವರಿಗೆ ಪ್ರಾಶಸ್ತ್ಯ ಕೊಡಲು ಹಿಂಜರಿದಿರಬೇಕೆಂದೂ ಊಹಿಸಬಹುದು !... * * ಏಕೆಂದರೆ, ಮೈಸೂರು ರಾಜ್ಯದಲ್ಲಿ ಒಮ್ಮತವಿಲ್ಲ; ಮೈಸೂರು ಕಾಂ. ರಾಜಕಾರಣದಲ್ಲಿ ಒಮ್ಮತವಿಲ್ಲ; ಮೈಸೂರು ಸಚಿವರಲ್ಲಿ ಒಮ್ಮತವಿಲ್ಲ; ಮೈಸೂರು ಎಂ.ಪಿ.ಗಳಲ್ಲಿ ಒಮ್ಮತವಿಲ್ಲ - ಹೀಗಾಗಿ ಯಾರನ್ನು ತೆಗೆದುಕೊಂಡರೆ ಇತರರಿಗೆ ಹೇಗೋ ಎಂಬ ಗಾಬರಿಯಿಂದಲೇ ಪ್ರಧಾನಿಗಳು ನಮ್ಮ ರಾಜ್ಯದ ಕೈ ಬಿಡುತ್ತಿರಬಹುದು!

- "ಇವರು ಭಿನ್ನಮತೀಯರು; ಇವರು ಅನ್ಯಮತೀಯರು; ಇವರು ಆಡಳಿತ ಗುಂಪಿನವರು; ಇವರು ಅವಿಶ್ವಾಸ ಮಂಡನೆಯ ಗುಂಪಿನವರು; ಇವರು ನಂಬಿಕೆಗನರ್ಹರು; ಇವರನ್ನು ಮುಂದಕ್ಕೆ ತಂದರೇ ರಾಜ್ಯದಲ್ಲಿ ಅಶಾಂತಿ" ಎಂದು ಮುಂತಾಗಿ ಮೈಸೂರಿನ `ಪ್ರಭಾವಿಗಳು' ಮೈಸೂರಿನವರ ವಿರುದ್ಧವೇ ಅಪಪ್ರಚಾರ - ನಿರುತ್ತೇಜನ - ನಿರಭಿಮಾನ ಪ್ರದರ್ಶಿಸತೊಡಗಿದರೆ, ಕೇಂದ್ರದವರಿಗೇಕೆ ನಮ್ಮಲ್ಲಿ ಮಮತೆ ಹುಟ್ಟೀತು?!

---

* `ಸಂಯುಕ್ತ ಕರ್ನಾಟಕ' ೧೧-೦೬-೧೯೬೪ ಸಂಪಾದಕೀಯ ಪುಟದ `ಚಿಟಿಕೆ ಚಪ್ಪರ' ನಿತ್ಯ ಟೀಕಾಂಕಣದಿಂದ


ಇವನ್ನೂ ಓದಿ

[ಬದಲಾಯಿಸಿ]