ವಿಷಯಕ್ಕೆ ಹೋಗು

ಮಿಥಿಕ್ ಸೊಸೈಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಡಿಯಾ ದೇಶದ ಇತಿಹಾಸದ ಪುನರ್ನಿರ್ಮಾಣದ ಕಾರ್ಯವನ್ನು ೧೭೮೪ ರಲ್ಲಿ ಪ್ರಾರಂಭಿಸಿ ಪ್ರಸಿದ್ಧಿ ಹೊಂದಿದ್ದ ಕಲ್ಕತ್ತದ ರಾಯಲ್ ಏಷ್ಯಾಟಿಕ್ ಸೊಸೆಟಿಯ ಶಾಖೆಯಾಗಿ ಮಿಥಿಕ್ ಸೊಸೈಟಿಯು ಬೆಂಗಳೂರಿನಲ್ಲಿ ೧೯೦೯ರಲ್ಲಿ ದಕ್ಷಿಣ ಇಂಡಿಯಾದ ಇತಿಹಾಸ, ಸಂಸ್ಕೃತಿ ಹಾಗೂ ಜನಾಂಗೀಯ ಅಧ್ಯಯನಗಳಿಗೆಂದೇ ಪ್ರಾರಂಭಗೊಂಡಿತು. ಮಿಥ್ ಎಂದರೆ ಪ್ರಾಚೀನ, ಪುರಾಣ, ಇತಿಹಾಸಗಳಿಗೆ ಸಂಬಂಧಿಸಿದ ಎಂದು ಅರ್ಥ. ಮಿಥಿಕ್ ಸೊಸ್ಶೆಟಿಯ ಸ್ಥಾಪನೆಯ ಹಿಂದೆ ರೆವರೆಂಡ್ ಫಾದರ್ ಆಂತೋನ್ ಮರೀ ತಬಾ (Antoine Marie Tabard, M.A., M.B.E.)ಅವರ ವಿಶೇಷ ಆಸಕ್ತಿಯಿದೆ. ಇಂಡಿಯಾ ದೇಶದ ಸಂಸ್ಕೃತಿಯ ಅಧ್ಯಯನದ ಅವಶ್ಯಕತೆಯನ್ನು ಅರಿತವರಾಗಿದ್ದ ಅವರು ಅಂದು ಸಂತ ಪ್ಯಾಟ್ರಿಕ್ಕರ ಚರ್ಚಿನ ಗುರುಸ್ವಾಮಿಯಾಗಿದ್ದರು. ಅದಕ್ಕೆ ಸಹಕರಿಸಿದವರು ಆಗಿನ ಕಂಟೋನ್ಮೆಂಟ್ ವಿಭಾಗದ ಕಲೆಕ್ಟರ್ ಆಗಿದ್ದ ಎಸ್ ಜೆ ರಿಚರ್ಡ್ ಅವರು.

ಡ್ಯಾಲಿ ಮೆಮೋರಿಯಲ್ ಹಾಲ್

ಮೊದಲ ಪದಾಧಿಕಾರಿಗಳು

[ಬದಲಾಯಿಸಿ]

ಮಿಥಿಕ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿ ಡಾ ಮೊರಿಸ್ ಡಬ್ಲ್ಯು ಟಾವರ್ಶ್, ಉಪಾಧ್ಯಕ್ಷರಾಗಿ ಫಾದರ್ ತಬಾ, ಗೌರವ ಕಾರ್ಯದರ್ಶಿ ಹಾಗೂ ಸಂಪಾದಕರಾಗಿ ಇ ಡಬ್ಲ್ಯು ವೆಥರಲ್ ಕೋಶಾಧಿಕಾರಿಯಾಗಿ ಜರ್ಮನ್ ಮೂಲದ ಜಿ ಹೆಚ್ ಕೃಂಬಿಗಲ್, ಗೌರವಾಧ್ಯಕ್ಷರಾಗಿ ಮೈಸೂರು ರಾಜ್ಯದ ರೆಸಿಡೆಂಡ್ ಆಗಿದ್ದ ಸ್ಟುವರ್ಟ್ ಫ್ರೇಜರ್ರವರು ನಿರತರಾದರು. ಇವರೊಂದಿಗೆ ಪೋಷಕರಾಗಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸಹಪೋಷಕರಾಗಿ ಬರೋಡದ ಮಹಾರಾಜರಾದ ಸಯ್ಯಾಜಿರಾವ್ ಗಾಯಕ್ವಾಡ್ ಅವರು ಕೈಜೋಡಿಸುವ ಮೂಲಕ ಮಿಥಿಕ್ ಸೊಸೈಟಿಗೆ ಭದ್ರ ಬುನಾದಿಯನ್ನು ಹಾಕಿದರು.

ಹಮ್ಮಿಕೊಂಡ ಕಾರ್ಯಕ್ರಮಗಳು

[ಬದಲಾಯಿಸಿ]

ಪ್ರಾರಂಭದಲ್ಲಿ ಸಂಸ್ಥೆಯ ಸಭೆಗಳು ಪದಾಧಿಕಾರಿಗಳ ವಾಸಗೃಹಗಳಲ್ಲೇ ನಡೆಯುತ್ತಿದ್ದು, ಉಪನ್ಯಾಸಗಳು ಸೆಂಟ್ರಲ್ ಕಾಲೇಜು ಮತ್ತು ಕಬ್ಬನ್ ಪಾರ್ಕ್ನಲ್ಲಿ ಆಗತಾನೇ ನಿರ್ಮಾಣವಾಗಿದ್ದ ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್ನಲ್ಲಿ ನಡೆಯುತ್ತಿದ್ದವು. ಆ ಉಪನ್ಯಾಸಗಳು ಸಂಸ್ಥೆಯ ತ್ರೈಮಾಸಿಕ ಪತ್ರಿಕೆ ಕ್ವಾರ್ಟರ್ಲಿ ಜರ್ನಲ್ ಆಫ್ ಮಿಥಿಕ್ ಸೊಸೈಟಿ (QJMS) ಯಲ್ಲಿ ಪ್ರಕಟವಾಗುತ್ತಿತ್ತು. ದಕ್ಷಿಣ ಇಂಡಿಯಾದ ಇತಿಹಾಸ ಅಧ್ಯಯನದ ಉದ್ದೇಶದಿಂದ ಈ ಸಂಸ್ಥೆ ಹುಟ್ಟಿಕೊಂಡರೂ, ನಂತರದಲ್ಲಿ ಮಾನವಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ, ಭಾಷಾಶಾಸ್ತ್ರ ಮುಂತಾದ ಸಂಶೋಧನಾ ವ್ಯಾಸಂಗಕ್ಕೆ ಸೂರ್ತಿ ಪ್ರೇರಣೆಗಳನ್ನು ಒದಗಿಸಿತು.

ಡ್ಯಾಲಿ ಮೆಮೋರಿಯಲ್ ಹಾಲ್

[ಬದಲಾಯಿಸಿ]

ಮಿಥಿಕ್ ಸೊಸೈಟಿಯ ಕಾರ್ಯಕಲಾಪಗಳಿಗೆ ಶಾಶ್ವತವಾದ ಕಟ್ಟಡವನ್ನು ನಿರ್ಮಿಸಲು ರೆಸಿಡೆಂಟರಾಗಿದ್ದ ಸರ್ ಹ್ಯೂಗ್ ಡ್ಯಾಲಿ ಅವರು ೧೯೧೪ರಲ್ಲಿ ಒಂದು ಯೋಜನೆ ರೂಪಿಸಿದರು. ಆಗ ಅಧ್ಯಕ್ಷರಾಗಿದ್ದ ಫಾದರ್ ಎ ಎಂ ತಬಾ ಅವರು ಸರಕಾರಕ್ಕೆ ಸಲ್ಲಿಸಿದ ಮನವಿಯನ್ನು ಅನುಮೋದಿಸಿದ ಯುವರಾಜ ನರಸಿಂಹರಾಜ ಒಡೆಯರು, ಸೆನೋಟಾಫ್ ರಸ್ತೆ (ಈಗಿನ ನೃಪತುಂಗ ರಸ್ತೆ) ಯಲ್ಲಿ ವಿಶಾಲವಾದ ನಿವೇಶನವನ್ನು ನೀಡಿದರು. ಕಟ್ಟಡದ ನಿರ್ಮಾಣಕ್ಕಾಗಿ ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರು, ಬರೋಡ, ಭೋಪಾಲ್ ಮತ್ತು ತಿರುವಾಂಕೂರು ರಾಜರು, ಸರ್ ದೊರಾಬ್ಜಿಟಾಟಾ ಹಾಗೂ ಅಶುತೋಷ್ ಮುಖರ್ಜಿ ಮುಂತಾದವರು ಆರ್ಥಿಕ ನೆರವನ್ನು ನೀಡಿದರು. ೧೯೧೬ರಲ್ಲಿ ಕಟ್ಟಡದ ಕಾರ್ಯ ಪ್ರಾರಂಭಗೊಂಡು ೧೯೧೭ರಲ್ಲಿ ಯುವರಾಜ ನರಸಿಂಹರಾಜ ಒಡೆಯರ್ ಅವರು ಡ್ಯಾಲಿ ಮೆಮೋರಿಯಲ್ ಹಾಲಿನ ಪ್ರಾರಂಭೋತ್ಸವ ನೆರವೇರಿಸಿದರು.

ಗಣ್ಯರ ಭಾಷಣ

[ಬದಲಾಯಿಸಿ]

ಮಿಥಿಕ್ ಸೊಸೈಟಿಯ ವೇದಿಕೆಯಲ್ಲಿ ಮಹಾತ್ಮಗಾಂಧಿ, ರವೀಂದ್ರನಾಥ ಠಾಗೂರ್, ಸರ್ ಸಿ ವಿ ರಾಮನ್ ಸೇರಿದಂತೆ ವಿಶ್ವವಿಖ್ಯಾತ ವಿದ್ವಾಂಸರು ಉಪನ್ಯಾಸಗಳನ್ನು ನೀಡಿದ್ದಾರೆ. ರವೀಂದ್ರನಾಥ ಠಾಗೂರ್ ಅವರು ೧೯೧೯ ಮಾರ್ಚ್ ೮ರ ಶನಿವಾರದಂದು ನರಸಿಂಹರಾಜ ಒಡೆಯರ್ ಅವರ ಅಧ್ಯಕ್ಷತೆಯಲ್ಲಿ “ಭಾರತೀಯ ಧರ್ಮ" ಕುರಿತು ಉಪನ್ಯಾಸ ನೀಡಿದರು. ಮಹಾತ್ಮ ಗಾಂಧಿಯವರು ೧೯೨೭ರಲ್ಲಿ ಖಾದಿ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ಈ ಸಂಸ್ಥೆಗೂ ಭೇಟಿ ನೀಡಿ ಮಾತನಾಡುತ್ತಾ “ನಿಮ್ಮಲ್ಲಿ ಕೆಲವರು ಅಸ್ಪೃಶತೆ ಎಂಬ ಕಳಂಕ ಏಕೆ ಹಾಗೂ ಯಾವಾಗ ಬಂದಿತು ಎಂಬುದರ ಬಗ್ಗೆ ಸಂಶೋಧನೆ ಮಾಡಿರಿ. ನಮ್ಮ ಹಿರಿಯರು ನಮಗೆ ವೇದ ಉಪನಿಷತ್ತುಗಳನ್ನು ಕೊಟ್ಟರು. ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಅಂಟಿರುವ ಮಹಾಪಾಪ. ನಾನೇನೂ ವಿದ್ವಾಂಸನಲ್ಲ. ಮೂಲಶಾಸ್ತ್ರಗಳನ್ನು ಓದಿಲ್ಲ. ಆದರೆ ನನ್ನದು ಹಿಂದೂಜೀವ. ಆದರೆ ಅಸ್ಪೃಶ್ಯತೆಯಂತಹ ದುಷ್ಟ ಸಂಪ್ರದಾಯಕ್ಕೆ ನನ್ನ ಜೀವ ವಿರುದ್ಧ. ವಿದ್ವಾಂಸರು ಹಾಗೂ ಸಂಶೋಧನಾ ಪಟುಗಳಾದ ನೀವು ಈ ಬಗ್ಗೆ ಶಾಸ್ತ್ರಾಧಾರಗಳನ್ನು ನೀಡಿ ನನ್ನ ಕೈಯನ್ನು ಬಲಗೊಳಿಸುವ ಹಾಗೆ ಮಾಡುವುದು ಈ ಸಂಸ್ಥೆಗೆ ಒಂದು ಹೆಮ್ಮೆಯಾಗಬೇಕು" ಎಂದು ಹೇಳಿದ್ದರು. ಅನೇಕ ಜನ ವಿದೇಶಿ ವಿದ್ವಾಂಸರೂ ಸೇರಿದಂತೆ ಆರ್.ನರಸಿಂಹಾಚಾರ್, ಆರ್ ಶಾಮಾಶಾಸ್ತ್ರಿ, ಬಿ ಎಂ ಶ್ರೀಕಂಠಯ್ಯ, ಎಂ ವಿ ಕೃಷ್ಣರಾವ್, ಎಂ ಶಾಮರಾವ್, ಡಾ. ಬೃಜೇಂದ್ರನಾಥಶೀಲ್, ಕೆ ಎಸ್ ಚಂದ್ರಶೇಖರ ಅಯ್ಯರ್, ಸರ್ ಸಿ ವಿ ರಾಮನ್ ಮುಂತಾದ ಪ್ರಸಿದ್ಧ ವಿದ್ವಾಂಸರು ಈ ಸಂಸ್ಥೆಯೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದು, ಸಂಸ್ಥೆಯ ಬೆಳವಣಿಗೆಗೆ ಮುಖ್ಯ ಕಾರಣರಾದರು.

ತ್ರೈಮಾಸಿಕ ಪತ್ರಿಕೆ

[ಬದಲಾಯಿಸಿ]

ಈ ಸಂಸ್ಥೆ ಹೊರತರುತ್ತಿರುವ ತ್ರೈಮಾಸಿಕ ಪತ್ರಿಕೆಯಾದ ಕ್ವಾರ್ಟರ‍್ಲಿ ಜರ್ನಲ್ ಆಫ್ ದಿ ಮಿಥಿಕ್ ಸೊಸೈಟಿ (ಕ್ಯೂ ಜೆ ಎಂ ಎಸ್) ವಿಶ್ವ ಮನ್ನಣೆಯನ್ನು ಗಳಿಸಿರುವ ಪತ್ರಿಕೆ. ಆರಂಭದಿಂದಲೂ ನಿರಂತರವಾಗಿ ಪ್ರಕಟವಾಗುತ್ತಿರುವುದು ಇದರ ಇನ್ನೊಂದು ಗರಿಮೆ. ಸುಮಾರು ೨,೬೦೦ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದೆ. ಅವುಗಳಲ್ಲಿ ಸುಮಾರು ಏಳುನೂರು ಲೇಖನಗಳು ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ್ದಲ್ಲದೆ, ನೆರೆಯ ತಮಿಳುನಾಡು, ಕೇರಳ, ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಇತಿಹಾಸ ಸಂಸ್ಕೃತಿಗೆ ಸೇರಿದಂತೆ ಅಸಂಖ್ಯಾತ ಲೇಖನಗಳು ಪ್ರಕಟವಾಗಿದ್ದು, ಯುವ ಸಂಶೋಧಕರಿಗೆ ಹಾಗೂ ಆಸಕ್ತರಿಗೆ ಮಾಹಿತಿಯ ಗಣಿಯಾಗಿ ಈ ಸಂಪುಟಗಳು ಇವೆಯೆಂದರೆ ಉತ್ಪ್ರೇಕ್ಷೆಯಾಗಲಾರದು.

ಗ್ರಂಥಭಂಡಾರ

[ಬದಲಾಯಿಸಿ]

ಈ ಸಂಸ್ಥೆಯು ಪ್ರಾರಂಭದಲ್ಲೇ ಅನೇಕ ಗ್ರಂಥಗಳನ್ನು ಶೇಖರಿಸಿದ್ದು ಫಾದರ್ ಎ ಎಂ ತಬಾ ಅವರು ತಮ್ಮ ಖಾಸಗಿ ಸಂಗ್ರಹದಲ್ಲಿದ್ದ ಅಮೂಲ್ಯ ಗ್ರಂಥಗಳನ್ನು ಈ ಸಂಸ್ಥೆಗೆ ದಾನವಾಗಿ ನೀಡಿದರು. ಸರ್ ಹ್ಯೂಗ್ ಡ್ಯಾಲಿ ಅವರೂ ತಮ್ಮ ಸಂಗ್ರಹದ ಗ್ರಂಥಗಳನ್ನು ನೀಡಿದರು. ನಂತರದಲ್ಲಿ ಮೈಸೂರು ಸೆಕ್ರೆಟೇರಿಯಟ್ ಹಾಗೂ ಮ್ಯೂಸಿಯಂ ಗ್ರಂಥಾಲಯದಿಂದ ಅನೇಕ ಪುಸ್ತಕಗಳು ಬಂದಿದ್ದಲ್ಲದೆ ಪಿ ರಾಘವೇಂದ್ರ ರಾವ್, ಟಿ ಆನಂದರಾವ್ ಅವರು ಈ ಸಂಸ್ಥೆ ಹಾಗೂ ಗ್ರಂಥಾಲಯವನ್ನು ಸಮರ್ಥವಾಗಿ ಮುನ್ನಡೆಸುತ್ತಾ ಗ್ರಂಥಾಲಯದ ವಿಕಾಸಕ್ಕೆ ಮುಖ್ಯ ಕಾರಣರಾದರು. ಹಾಗೆಯೇ ಇಲ್ಲಿನ ತ್ರೈಮಾಸಿಕ ಪತ್ರಿಕೆಯಲ್ಲಿ ವಿಮರ್ಶೆಗಾಗಿ ಬಂದ ಪುಸ್ತಕಗಳು ಗ್ರಂಥಾಲಯಕ್ಕೆ ಸೇರಿತು. ಈ ಸಂಸ್ಥೆಯ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ (೧೯೬೦) ಪ್ರಖ್ಯಾತ ಸಂಶೋಧಕ ಡಾ. ಕೆ ಎನ್ ಶಾಸ್ತ್ರಿಗಳು ಹೇಳಿದಂತೆ “ಈ ಸಂಸ್ಥೆಯು ಬೇರಾವುದೇ ಸಂಪದ್ಭರಿತ ರಾಜ್ಯದಲ್ಲಿ ಸ್ಥಾಪನೆಯಾಗಿದ್ದಲ್ಲಿ, ಇಂಗ್ಲೆಂಡಿನಲ್ಲಿರುವ ವಿಶ್ವವಿಖ್ಯಾತ ‘ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯ’ದಷ್ಟೇ ಉತ್ತಮ ಸ್ಥಿತಿಯಲ್ಲಿರಬಹುದಿತ್ತು" ಎಂದಿದ್ದಾರೆ. ೧೯೭೦ರವರೆಗೂ ಇಲ್ಲಿ ಗ್ರಂಥಗಳನ್ನು ಎರವಲು ಕೊಡುವ ಪದ್ಧತಿ ಇತ್ತು. ಈ ವ್ಯವಸ್ಥೆಯಿಂದ ಬಹಳಷ್ಟು ಗ್ರಂಥಗಳು ಕೈತಪ್ಪಿ ಹೋಗುತ್ತಿದ್ದುದನ್ನು ಮನಗಂಡು ನಂತರದಲ್ಲಿ ಕೇವಲ ಪರಾಮರ್ಶನ ಗ್ರಂಥಾಲಯವನ್ನಾಗಿ ಮಾರ್ಪಾಟು ಮಾಡಲಾಯಿತು. ೧೯೯೦ರ ದಶಕದಲ್ಲಿ ನೂತನವಾಗಿ ಡ್ಯಾಲಿ ಸ್ಮಾರಕ ಭವನದ ಹಿಂಭಾಗದಲ್ಲಿ ನಿರ್ಮಿಸಿದ ವಿಶಾಲವಾದ ಕಟ್ಟಡದಲ್ಲಿ ಡಾ.ಶ್ರೀನಿವಾಸ ಹಾವನೂರ ಅವರು ಗ್ರಂಥಾಲಯದ ನವೀಕರಣಕ್ಕಾಗಿ ಶ್ರಮಿಸಿದರು. ಈಗ ಇಲ್ಲಿ ೪೩ ಸಾವಿರಕ್ಕೂ ಹೆಚ್ಚು ಗ್ರಂಥಗಳು ಇದ್ದು, ಸಂಶೋಧಕರಿಗೆ ಹಾಗೂ ಆಸಕ್ತರಿಗೆ ಬಹು ಉಪಯುಕ್ತವಾಗಿದೆ.