ಆರ್.ನರಸಿಂಹಾಚಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
WP:DR
ಆರ್. ನರಸಿಂಹಾಚಾರ್
ಜನನಏಪ್ರಿಲ್ ೯, ೧೮೬೧
ಶ್ರೀರಂಗಪಟ್ಟಣದ ಸಮೀಪವಿರುವ ಕೊಪ್ಪಲು
ಮರಣಡಿಸೆಂಬರ್ ೬, ೧೯೩೬
ವೃತ್ತಿಪ್ರಾಚ್ಯಸಂಶೋಧನಾ ಇಲಾಖೆಯ ಮುಖ್ಯಸ್ತರು
ವಿಷಯಕನ್ನಡ ಸಾಹಿತ್ಯ

ಆರ್.ನರಸಿಂಹಾಚಾರ್ (ಏಪ್ರಿಲ್ ೯,೧೮೬೧ - ಡಿಸೆಂಬರ್ ೬, ೧೯೩೬) ಕನ್ನಡ ಸಾಹಿತ್ಯ ಲೋಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಅಪ್ರತಿಮ ಕೊಡುಗೆದಾರರೆನಿಸಿದ್ದಾರೆ. ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು ರಾವ್ ಬಹದ್ದೂರ್ ಆರ್. ನರಸಿಂಹಾಚಾರ್. ಅವರು ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ ವಿಮರ್ಶಕರಾಗಿ ಒಳ್ಳೆಯ ಹೆಸರು ಮಾಡಿದವರು. ತಮಿಳು ಮಾತೃಭಾಷೆಯಾಗಿದ್ದರೂ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು.[೧]

ಕರ್ನಾಟಕ ಕವಿ ಚರಿತ್ರೆ[ಬದಲಾಯಿಸಿ]

ಕನ್ನಡ ಭಾಷೆ ಮತ್ತು ಕವಿ-ಕಾವ್ಯದ ಬಗ್ಗೆ ಯಾವುದೇ ಮಾಹಿತಿ ಬೇಕಾದರೆ ಇಂದಿಗೂ ನಮಗೆ ಆಸರೆ ನೀಡುವುದು ಕರ್ನಾಟಕ ಕವಿ ಚರಿತ್ರೆ. ಅದರ ಕರ್ತೃ ಕನ್ನಡಮ್ಮನ ಸೇವೆಗೆ ಕಟಿಬದ್ಧನಾಗಿದ ಮೊದಲ ದೇಶೀಯವ್ಯಕ್ತಿ ರಾಮಾನುಜಾಪುರಂ ನರಸಿಂಹಾಚಾರ್ಯರು. ಬಿ. ಎಲ್.ರೈಸ್ ಬೆಳಗಿದ ಕನ್ನಡ ಜ್ಯೋತಿಯನ್ನು ಪ್ರಜ್ವಲಗೊಳಿಸಿದ ಸಶಕ್ತ ಉತ್ತರಾಧಿಕಾರಿ.[೨]

ಜೀವನ - ವಿದ್ಯಾಭ್ಯಾಸ[ಬದಲಾಯಿಸಿ]

 • ಆರ್. ನರಸಿಂಹಾಚಾರ್ಯರು ಜನನ ಮೈಸೂರು_ಸಂಸ್ಥಾನದ ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಬಳಿಯ ಕೊಪ್ಪಲು ಗ್ರಾಮದಲ್ಲಿ ೧೮೬೧, ಏಪ್ರಿಲ್ ೯ರಂದು ಜನಿಸಿದರು. ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಅವರದು ಸಂಪ್ರದಾಯಸ್ಥ ಮನೆತನ. ರಾಮಾನುಜಪುರದಲ್ಲಿ ಆಚಾರ್ಯರ ಹಿರಿಯರು ವಾಸ ಮಾಡುತ್ತಿದ್ದರಾದರೂ ಅವರ ತಾತಂದಿರ ಕಾಲದಿಂದ ಆ ಮನೆತನವು ಶ್ರೀರಂಗಪಟ್ಟಣದ ಸಮೀಪದಲ್ಲಿರುವ ಮಂಡ್ಯ ಕೊಪ್ಪಲುವಿನಲ್ಲಿ ನೆಲೆಸಿದ್ದಿತು. ಅವರ ವಂಶ ತಿರುಪತಿ ಬೆಟ್ಟದ ಕೆರೆ ಕಟ್ಟಿದ ಶ್ರೀ ಆನಂದಾಳ್ವಾರರದು. ಅವರ ಪೂರ್ವಿಕರು ಆಚಾರ್ಯತ್ರಯರಲ್ಲಿ ಒಬ್ಬರಾದ ರಾಮಾನುಜಾಚಾರ್ಯರ ನೇರ ಶಿಷ್ಯರಾಗಿದ್ದರು. ಅವರ ಮೊದಲ ಅಕ್ಷರಾಭ್ಯಾಸ ಕೊಪ್ಪಲಿನ ಕೂಲಿ ಮಠದಲ್ಲಿ. ಅಲ್ಲಿ ಕನ್ನಡ ಕಲಿತರೆ ಮನೆಯಲ್ಲಿ ತಂದೆಯಿಂದ ಸಂಸ್ಕೃತ ಅಧ್ಯಯನವಾಯಿತು. ಅವರಿಗೆ ಬಾಲ್ಯವಿವಾಹವಾಯಿತು . ಹದಿಮೂರನೆಯ ವರ್ಷದಲ್ಲೇ ಮದುವೆಯಾದರು. ಅವರ ಮಾವ ಮದರಾಸಿನವರು, ಮದುವೆಯಾದ ನಂತರ ಮದ್ರಾಸಿನ ಪ್ರೆಸಿಡೆನ್ಸಿಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ತಮಿಳುಭಾಷೆಯಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದರು. ನಂತರ ಐದುವರ್ಷ ಸಂಸ್ಕೃತ ಅಧ್ಯಯನವನ್ನು ಶಾಸ್ತ್ರೀಯವಾಗಿ ಮಾಡಿದರು.
 • ಅವರು ಪದವಿಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ಶಿಕ್ಷಣ ಪಡೆದುದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ.ಆಗ ಚಾರ್ಲಸ ವಾಟರ್ರ್ಸ್ ಕಾಲೇಜಿನ ಪ್ರಿನ್ಸಿಪಾಲರು. ನರಸಿಂಹಾಚಾರ್ಯರ ಬುದ್ದಿ ಮತ್ತೆಯನ್ನುಮೆಚ್ಚಿ ಅವರು ವಿದ್ಯಾರ್ಥಿ ವೇತನ ಮಂಜೂರು ಮಾಡಿದ್ದರು.ಇಂಥಹ ಉತ್ತಮ ವಾತಾವರಣದಲ್ಲಿ ಅಧ್ಯಯನ ಮಾಡಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದರು. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರೂ ಅಲ್ಲಿ ಹಿರಿಯ ವಿದ್ಯಾರ್ಥಿ.
 • ಆರ್. ನರಸಿಂಹಾಚಾರ್ಯರು ಬಿ.ಎ. ಪದವಿ ಪಡೆದ ನಂತರ ಚಿಕ್ಕ ಮಗಳೂರು, ಹಾಸನ ಮತ್ತು ಶಿವಮೊಗ್ಗ ಪ್ರೌಢಶಾಲೆಯಲ್ಲಿ ಅಧ್ಯಾಪನ ನಡೆಸಿದರು.ಎಳೆಯವಯಸ್ಸಿನಲ್ಲೆ ಸಂಸಾರದ ನಿರ್ವಹಣೆಯ ಹೊಣೆ ಬಿದ್ದಿತು.
 • ಅನೇಕ ಊರುಗಳಲ್ಲಿ ಕೆಲಸ ನಿರ್ವಹಣೆ ಮಾಡಿದರು.ಆದರೆ ಅವರದು ಇಂಗದ ಜ್ಞಾನದಾಹ. ಗಳಿಕೆಯ ಜೊತೆ ಕಲಿಕೆ ಅವರ ಮಂತ್ರ. ಅವರ ಅನವರತ ಅಧ್ಯಯನದ ಫಲವೇ. ಮದ್ರಾಸ್ ವಿಶ್ವವಿದ್ಯಾನಿಲಯದಿಂದ ೧೮೯೩ ರಲ್ಲಿ ಎಂ ಎ ಪದವಿ. ನಂತರ ಐದು ವರ್ಷ ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರನೆಂದು ಕಾರ್ಯನಿರ್ವಹಿಸಿದರು.
 • ಆಗಲೇ ಸಾಹಿತ್ಯಾಸಕ್ತಿಯು ಅವರನ್ನು ಕೃತಿ ರಚನೆಗೆ ಪ್ರೇರಣೆ ನೀಡಿತು. ಇವರ ಪ್ರೌಢಿಮೆಗೆ ಪ್ರಶಸ್ತಿಯಾಗಿ ಪ್ರಾಚ್ಯವಸ್ತು ಇಲಾಖೆಯಲ್ಲಿ ಬಿ. ಎಲ್. ರೈಸರಿಗೆ ಸಹಾಯಕರಾಗಿ ನೇಮಕವಾಯಿತು. ರೈಸ್ ಅವರ ಶಾಸನ ಸಂಗ್ರಹ ಕೆಲಸದಲ್ಲಿ ಇವರದು ಸಕ್ರಿಯ ಸಹಾಯ. ಯಾವ ಹಳ್ಳಿಯಲ್ಲಾದರೂ ಶಾಸನ.ಇಲ್ಲವೆ ಪುರಾತನ ಗುಡಿ ಇದೆ ಎಂದರೆ ಅಲ್ಲಿಗೆ ಧಾವಿಸುತಿದ್ದರು. ರೈಸ್ ಕುದುರೆ ಏರಿ ಹೊರಟರೆ, ಅವರ ಸಹಾಯಕ್ಕೆ ಸದಾ ಸಿದ್ಧ ನರಸಿಂಹಾಚಾರ್. ಅವರದು ಬಹು ನಿಷ್ಠೆಯ ಜೀವನ. ಹೊರಗೆ ಏನೂ ತಿನ್ನುವಂತಿಲ್ಲ. ಎಲ್ಲವೂ ಸ್ವಯಂ ಪಾಕ. ತಮ್ಮ ಅಡಿಗೆ ತಾವೇ ಮಾಡಿ ಇತರರಿಗೂ ಉಣ ಬಡಿಸುವವರು. ಹೋದಲ್ಲೆಲ್ಲ ಪಾತ್ರೆ ಪರಡಿ, ಅಡುಗೆ ಸಾಮಾನಿನ ಸಮೇತ ಎತ್ತಿನ ಗಾಡಿಯಲ್ಲಿ ಪಯಣ. ಗುಡಿಯ ಹತ್ತಿರದ ಕೊಳದಲ್ಲಿ ಮಿಂದು ಮೂರು ಕಲ್ಲು ಹೂಡಿ ಅಡುಗೆಮಾಡಿ ಊಟಮಾಡುವರು. ಜೊತೆಗೆ ಅಧಿಕಾರಿಗೂ ಊಟಹಾಕುವರು. ಅಡುಗೆಗೆ ಅನುಕೂಲವಿಲ್ಲದಿದ್ದರೆ ಹೆಗಲ ಮೇಲಿನ ಹಸಿಬೆಯಲ್ಲಿ ಅವಲಕ್ಕಿ ಬೆಲ್ಲ ತಿನ್ನುವರು... ಏನೂ ಇಲ್ಲದಿದ್ದರೆ ಆಕಸ್ಮಿಕ ಏಕಾದಶಿ. ಆದರೆ ಕೆಲಸಕ್ಕೆ ಮಾತ್ರ ಎಂದೂ ಕೊರೆ ಬರುತ್ತಿರಲಿಲ್ಲ.

ಶಿಕ್ಷಣ, ವೃತ್ತಿ[ಬದಲಾಯಿಸಿ]

ನರಸಿಂಹಾಚಾರ್ಯರು ಬಾಲ್ಯದಲ್ಲಿಯೇ ತಂದೆಯಿಂದ ಸಂಸ್ಕೃತ ಅಭ್ಯಾಸ, ಅನಂತರ ಐದು ವರ್ಷ ತಮಿಳು ಅಭ್ಯಾಸ ಮಾಡಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ 1878ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾದರು. ಬೆಂಗಳೂರಿಗೆ ಬಂದು ತಮಿಳು ಮತ್ತು ಸಂಸ್ಕೃತಗಳನ್ನು ತೆಗೆದುಕೊಂಡು ಸೆಂಟ್ರಲ್ ಕಾಲೇಜಿನಿಂದ 1882ರಲ್ಲಿ ಬಿ.ಎ ಪರೀಕ್ಷೆಯಲ್ಲಿ ಅನೇಕ ಪಾರಿತೋಷಕಗಳೊಡನೆ ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾದರು. ದಿವಾನ್ ರಂಗಾಚಾರ್ಯರಲ್ಲಿ ಉದ್ಯೋಗಕ್ಕಾಗಿ ಹೋದರು. ಒಡನೆಯೇ ಅವರಿಗೆ 5 ರೂಪಾಯಿ ಸಂಬಳದ ಮೇಲೆ ಚಿಕ್ಕಮಗಳೂರು ಹೈಸ್ಕೂಲಿನಲ್ಲಿ ಸಹೋಪಾಧ್ಯಾಯ ಹುದ್ದೆ ದೊರೆಯಿತು. ‘ಊರು ದೂರ’ ಎಂದು ಹೋಗಲು ಹಿಂಜರಿದಾಗ ದಿವಾನರೆ ತಿಳಿಹೇಳಿ ಕಳುಹಿಸಿಕೊಟ್ಟರು. ಆಮೇಲೆ ಶಿವಮೊಗ್ಗ, ಹಾಸನಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಮೈಸೂರಿನ ಮಹಾರಾಜ ಮತ್ತು ಮಹಾರಾಣಿ ಕಾಲೇಜುಗಳಲ್ಲಿಯೂ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1893ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿ ಗಳಿಸಿಕೊಂಡು, ಕನ್ನಡದಲ್ಲಿ ಎಂ. ಎ ಪದವಿ ಪಡೆದ ಮೊದಲಿಗರೆನಿಸಿದರು. ಮುಂದೆ 1894ರಲ್ಲಿ ಅವರು ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರರೆಂದು ನೇಮಕಗೊಂಡರು. 1899ರಲ್ಲಿ ಮೈಸೂರಿನ ಪ್ರಾಚ್ಯ ವಸ್ತು ಸಂಶೋಧನ ಇಲಾಖೆ ಸೇರಿ ಬಿ.ಎಲ್ ರೈಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿ, ರೈಸ್ ಅವರಿಗೆ ತುಂಬಾ ಆತ್ಮೀಯರಾದರು. ಹೀಗಾಗಿ ರೈಸ್ ಅವರ ನಂತರ 1906ರಲ್ಲಿ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡರು.[೩]

ಮಹಾನ್ ಸಂಶೋಧಕ[ಬದಲಾಯಿಸಿ]

ಬಿ.ಎಲ್.ರೈಸ್ರ ಬಳಿಕ ೧೯೨೨ರವರೆಗೆ ಪ್ರಾಚ್ಯ ಸಂಶೋಧನ ಇಲಾಖೆಯ ನಿರ್ದೇಶಕರಾಗಿದ್ದ ನರಸಿಂಹಾಚಾರ್ಯರು ಅನೇಕ ಮಹತ್ವದ ಕೃತಿಗಳನ್ನು ಹೊರತಂದರು. [೪]೧೬ ವರ್ಷಗಳ ಕಾಲ ಈಗಿನ ಮೈಸೂರು ಸಂಸ್ಥಾನದ ನಾನ ಭಾಗಗಳನ್ನು ಸಂಚರಿಸಿ ಸುಮಾರು ೫000 ಶಾಸನಗಳನ್ನು ಸಂಗ್ರಹಿಸಿದರು. ಮುಖ್ಯವಾದವುಗಳನ್ನು ಅಲ್ಲಲ್ಲಿ ತಮ್ಮ ವರದಿಗಳಲ್ಲಿ ಚರ್ಚಿಸಿದರು. ಇವು ಅನಂತರ ಬೇರೆ ಬೇರೆ ವಿದ್ವಾಂಸರಿಂದ ಪರಿಷ್ಕಾರಗೊಂಡು ಉಪಸಂಪುಟಗಳಲ್ಲಿ ಪ್ರಕಟಗೊಂಡವು.[೫] ಆಚಾರ್ಯರು ಮೈಸೂರು ಪುರಾತತ್ವ ಇಲಾಖೆಯ ವರದಿಗಳಲ್ಲಿ ಹಿಂದೂ, ಜೈನ ಮತ್ತು ಮಹಮದೀಯರಿಗೆ ಸಂಬಂಧಿಸಿದ ಸುಮಾರು ೧೦೦೦ ಕಟ್ಟಡಗಳನ್ನು ಪರಿಶೀಲಿಸಿ ಅವುಗಳ ವಾಸ್ತು ವಿಷಯವನ್ನು ಕುರಿತು ಟಿಪ್ಪಣಿಗಳನ್ನು ಬರೆದಿರುವರು.

ಶ್ರವಣಬೆಳಗೊಳದ ಶಾಸನಗಳನ್ನು ಈ ಹಿಂದೆ ಬಿ.ಎಲ್. ರೈಸ್ ಅವರು ಪ್ರಕಟಿಸಿದ್ದರು (೧೮೮೯). [೬] ಅಲ್ಲಿ ಕೇವಲ ೧೪೪ ಶಾಸನಗಳಿದ್ದವು. ನರಸಿಂಹಾಚಾರ್ಯರು ಅದನ್ನು ಪರಿಷ್ಕರಿಸಲು ತೊಡಗಿ, ಹೊಸದಾಗಿ ೩೫೬ ಶಾಸನಗಳನ್ನು ಸೇರಿಸಿ, ಒಟ್ಟು ೫೦೦ ಶಾಸನಗಳುಳ್ಳ ಸಂಪುಟವನ್ನು ಹೊರತಂದರು. ಅದರ ಪ್ರಾರಂಭದ ೯೦ ಪುಟದ ಪ್ರಸ್ತಾವನೆ ಆಚಾರ್ಯರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ. ಶ್ರವಣಬೆಳಗೊಳದ ವಾಸ್ತುಶಿಲ್ಪವನ್ನು ಕುರಿತು ಮೊದಲಬಾರಿಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.

೧೯೨೩ರಲ್ಲಿ ಪ್ರಕಟವಾದ ‘ಶಾಸನ ಪದ್ಯ ಮಂಜರಿ’ಯಲ್ಲಿ ಸಾಹಿತ್ಯಾಂಶಗಳನ್ನೊಳಗೊಂಡ ಶಾಸನಗಳಿಂದಾಯ್ದ ೧೪೪೬ ಪದ್ಯಗಳಿವೆ. ಈ ಪುಸ್ತಕ್ಕಾಗಿ ಆರಿಸಿದ ಶಾಸನಗಳ ಸಂಖ್ಯೆ ೨೮೩. ಇವುಗಳಲ್ಲಿ ಬಾಂಬೆ ಪ್ರಾಂತ್ಯದಲ್ಲಿರುವ ೨೪ ಶಾಸನ ಬಿಟ್ಟರೆ ಉಳಿದವೆಲ್ಲ ಮೈಸೂರು ಸಂಸ್ಥಾನದವು. ಅವು ಸುಮಾರು ಕ್ರಿ.ಶ. ೭೦೦ರಿಂದ ಕ್ರಿ.ಶ. ೧೪೬೫ರ ವರೆಗಿನ ಕಾಲಾವದಿಯವು. ಅವನ್ನು ಆ ಅನುಪೂರ್ವಿಯಲ್ಲಿಯೇ ಕೊಟ್ಟಿರುವುದರಿಂದ ಕನ್ನಡ ಭಾಷೆಯು ಬೆಳೆದುಬಂದ ರೀತಿ ಗೊತ್ತಾಗುವುದು. ಈ ಶಾಸನಗಳು ಗಂಗ, ನೊಳಂಬ, ಚಾಲುಕ್ಯ, ರಾಷ್ಟ್ರಕೂಟ, ಚೋಳ, ಕಲಚೂರ್ಯ, ಸೇವುಣ, ಕೊಂಗಾಳ್ವ, ಹೊಯ್ಸಳ, ಸಾಂತರ, ಪಾಂಡ್ಯ, ಸಿಂಧ, ಕದಂಬ, ನಿಡುಗಲ್ಲು, ವಿಜಯನಗರ ಹೀಗೆ ೧೫ ರಾಜವಂಶಗಳಿಗೆ ಸಂಬಂಧಿಸಿವೆ. ಇವು ಅಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳ ಮೇಲೂ ಬೆಳಕು ಚೆಲ್ಲುತ್ತವೆ.

ಆಚಾರ್ಯರು ಇತರ ಹಲವಾರು ಸಂಶೋಧನೆಗಳನ್ನು ಸಹಾ ನಡೆಸಿದ್ದು ಅವುಗಳಲ್ಲಿ ಪ್ರಮುಖವಾದದ್ದನ್ನು ಹೀಗೆ ಹೆಸರಿಸಬಹುದು. ೨ನೆಯ ಹರಿಹರನ ೧೨೮೬ರ ತಾಮ್ರಪತ್ರ ಶಾಸನ, ಚಂದ್ರವಳ್ಳಿಯ ಉತ್ಖನನದಲ್ಲಿ ಪ್ರಾಚೀನ ಕಾಲದ ಮಣ್ಣಿನ ಪಾತ್ರೆ, ನಾಣ್ಯಗಳ ಶೋಧನೆ, ಅರಿಷ್ಟನೇಮಿಯ ಸಮಾಧಿ, ಸಿಂಹಸೂರಿ ರಚಿಸಿದ ‘ಲೋಕವಿಭಾಗ’ ಗ್ರಂಥದ ಮೂಲಕ ನರಸಿಂಹವರ್ಮನ ಮತ್ತು ಪಲ್ಲವರ ಕಾಲ ನಿರ್ಣಯ, ತಾಳಗುಂದದ ಪುರಾತನ ಶಾಸನದ ಮೂಲಕ ಕದಂಬರ ಕಾಲ ನಿರ್ಣಯ, ಬೆಂಗಳೂರು ಎಂಬ ಊರು ಹತ್ತನೆಯ ಶತಮಾನದಲ್ಲೇ ಇತ್ತು ಎಂಬ ನಿರ್ಣಯ, ಬುಕ್ಕನ ಮರಣದ ಕಾಲ, ವಿಜಯನಗರದ ಆಡಳಿತದ ಕಾಲ, ಟಿಪ್ಪು ಶೃಂಗೇರಿ ಗುರುಗಳಿಗೆ ದತ್ತಿ ಕೊಟ್ಟದ್ದು, ಮುಳುಬಾಗಿಲು ಮಠದ ತಾಮ್ರಶಾಸನವು ಭಾಗವತ ಸಂಪ್ರದಾಯದ ವಿಷಯ ಹೇಳುತ್ತದೆಂಬ ನಿರ್ಣಯ ಮುಂತಾದವು ಪ್ರಮುಖವಾಗಿವೆ. ನರಸಿಂಹಾಚಾರ್ಯರು ೧೯೨೦ರಲ್ಲಿ ಕಾರ್ಲಾ, ಕನ್ಹೇರಿ, ಬಾದಾಮಿ, ಎಲ್ಲೋರ ಮತ್ತು ಅಜಂತಾಗಳಿಗೆ ಭೇಟಿಕೊಟ್ಟು ಆ ಸ್ಥಳಗಳಲ್ಲಿಯ ಗುಹೆಗಳ ವಿಷಯವಾಗಿ ಮಹತ್ವದ ಸಂಗತಿಗಳನ್ನು ಬರೆದಿದ್ದಾರೆ. ಅವರು ೧೯೦೯ರಲ್ಲಿ ಭಾಸಕವಿಯ ಸ್ವಪ್ನವಾಸವದತ್ತ ಎಂಬ ನಾಟಕವನ್ನು ಶೋಧಿಸಿದರು.

ಇವಲ್ಲದೆ ಗಂಗರ ಚರಿತ್ರೆ, ಸಾಯಣ-ಮಾಧವ, ಬೇಲೂರು, ಸೋಮನಾಥಪುರ ಮತ್ತು ದೊಡ್ಡಗದ್ದನ ಹಳ್ಳಿಯ ಹೊಯ್ಸಳ ದೇವಸ್ಥಾನಗಳು ಇವನ್ನು ಕುರಿತೂ ಇವರು ಕೃತಿ ರಚಿಸಿದ್ದಾರೆ.

ಸಂಗ್ರಹವಾಗಿ ಹೇಳುವುದಾದರೆ ನರಸಿಂಹಾಚಾರರು ೫೦೦೦ ಶಾಸನಗಳನ್ನು, ಹಿಂದೂ, ಜೈನ ಹಾಗು ಮುಸ್ಲಿಮರ ೧೦೦೦ ಕಟ್ಟಡಗಳನ್ನು, ೪೧೦೦ ನಾಣ್ಯಗಳನ್ನು, ೧೨೫೦ ಭಾವಚಿತ್ರಗಳನ್ನು, ೧೨೦ ನಕ್ಷೆಗಳನ್ನು, ೧೨೫ ಕನ್ನಡ, ಸಂಸ್ಕೃತ ಗ್ರಂಥಗಳನ್ನು ಬೆಳಕಿಗೆ ತಂದಿದ್ದಾರೆ. ಅಲ್ಲದೆ ನಾಗವರ್ಮನ ಕೃತಿಗಳಾದ ಕಾವ್ಯಾವಲೋಕನ ಹಾಗು ಭಾಷಾಭೂಷಣಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕದ ವ್ಯಾಪಾರ ರೋಮ್, ಪರ್ಶಿಯಾ ಹಾಗು ಚೀನಾಗಳೊಡನೆ ಇದ್ದದ್ದನ್ನು ಗುರುತಿಸಿದವರು ಇವರೆ.

ವಾಸ್ತು ಶಿಲ್ಪಗಳ ವಿವರ - ಗ್ರಂಥ ಸಂಪಾದನೆ[ಬದಲಾಯಿಸಿ]

 • ಇವರು ಪುರಾತತ್ತ್ವ ವರದಿಯಲ್ಲಿ ಹಿಂದು, ಜೈನಮತ್ತು ಮುಸ್ಲಿಂ ವಾಸ್ತು ಶಿಲ್ಪಗಳನ್ನು ಪರೀಕ್ಷಿಸಿ ಸುಮಾರು ೧೦೦೦ ಕಟ್ಟಡಗಳ ವಾಸ್ತು ಶಿಲ್ಪಗಳ ವಿವರ ನೀಡಿರುವರು.ಹೊಯ್ಸಳ ಶೈಲಿಯನ್ನು ಪ್ರಥಮ ಬಾರಿಗೆ ಚಾಲುಕ್ಯ ಶೈಲಿಗಿಂತ ಭಿನ್ನವಾದ ಪ್ರತ್ಯೇಕ ಶೈಲಿ ಎಂಬುದನ್ನು ಗುರುತಿಸಿದರು.

ನರಸಿಂಹಾಚಾರ್ಯರ ಸಾಹಿತ್ಯ ರಚನೆಯು ವಿದ್ಯಾ ಇಲಾಖೆಯಲ್ಲಿ ಇದ್ದಾಗಲೇ ಮೊದಲಾಗಿತ್ತು. ಪಂಪಭಾರತವನ್ನು ರೈಸ್ ಪರಿಷ್ಕರಿಸುವಾಗ ಬಹಳಷ್ಟು ಸಹಾಯ ಮಾಡಿದ್ದರು. ಬರಿ ಶಾಸನ ಲೋಕದಲ್ಲಿ ಮಾತ್ರವಲ್ಲದೆ ಕನ್ನಡದ ಕಾವ್ಯಲೋಕಕ್ಕೆ ಅವರ ಕೊಡುಗೆ ಅಪಾರ. ಲಕ್ಷಣ ಗ್ರಂಥಗಳಾದ 'ಕಾವ್ಯಾವಲೋಕನ', ‘ಭಾಷಾ ಭೂಷಣ' ಮತ್ತು ‘ಶಬ್ದಾನುಶಾಸ" ಗ್ರಂಥಗಳನ್ನು ತುಂಬ ಸಮರ್ಥವಾಗಿ ಸಂಪಾದಿಸಿದರು. ಕನ್ನಡದಲ್ಲಿ ಅವರ ಕೀರ್ತಿಯನ್ನು ಕೊನೆಯ ತನಕ ಉಳಿಸಿರುವುದು ಅವರ ಸ್ವತಂತ್ರ ಕೃತಿಗಳು.' ಕರ್ನಾಟಕ ಕವಿಚರಿತ್ರೆ" ಯಂತಹ ಬೃಹತ್ ಕೃತಿಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದರು. ಒಂದು ಸಂಸ್ಥೆಯಲ್ಲಿ ಹತ್ತಾರು ಜನ ಸೇರಿ ಹಲವಾರು ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ಅವರು ಏಕಾಂಗಿಯಾಗಿ ಮಾಡಿರುವುದು ಅವರ ದಣಿವರಿಯದ ದುಡಿಮೆ,ಸತತ ಪರಿಶ್ರಮ ಅದ್ಭುತಶ್ರದ್ಧೆ ಮತ್ತು ಸಂಯಮಗಳಿಗೆ ಸಾಕ್ಷಿಯಾಗಿದೆ.

 • ಕನ್ನಡದ ಯಾವುದೇ ಕವಿಯ ಬಗ್ಗೆ ತಿಳಿದುಕೊಳ್ಳಲು ಮೊರೆ ಹೋಗಬೇಕಾದದ್ದು ಅವರ ಈ ಕೃತಿಗೆ ಕನ್ನಡ ಇತಿಹಾಸವನ್ನು ಆದಿಯಿಂದ ೧೯೨೯ರ ವರೆಗಿನ ತಮ್ಮ ಕಾಲದ ವರೆಗಿನ ಸುಮಾರು. ೭೩೩ ಕವಿಗಳ, ಅವರ ಕಾವ್ಯದ ಪರಿಚಯವನ್ನು ಮೂರು ಸಂಪುಟಗಳಲ್ಲಿ ಮಾಡಿಕೊಟ್ಟಿರುವರು. ಈ ಕೆಲಸಕ್ಕಾಗಿ ಸುಮಾರು ೨೦೦೦ ಹಸ್ತಪ್ರತಿಗಳನ್ನು ಅವಲೋಕಿಸಿದರೆಂದರೆ ಅವರ ಪರಿಶ್ರಮದ ಅರಿವಾಗುವುದು.ಕನ್ನಡಸಾಹಿತ್ಯ ಇತಿಹಾಸದಲ್ಲಿ ಅವರ ಸಾಧನೆ ಒಂದು ಮೈಲಿಗಲ್ಲು.

ಪ್ರಾಚ್ಯವಸ್ತು ಇಲಾಖೆಯಲ್ಲಿ ನಿರ್ದೇಶಕ[ಬದಲಾಯಿಸಿ]

 • ಅವರ ಕಾರ್ಯ ವೈಖರಿಗೆ ಬಿ ಎಲ್. ರೈಸರು ಮಾರು ಹೋಗಿದ್ದರು.ಹಾಗಾಗಿ ತಮ್ಮ ಉತ್ತರಾಧಿಕಾರಿ ಗೆ ಸೂಕ್ತ ತರಬೇತಿ ನೀಡಿದರು ಏಳು ವರ್ಷಗಳಲ್ಲಿ ರೈಸ್ ನಿವೃತ್ತರಾದರು.ಆ ಅವಧಿಯಲ್ಲಿ ರೈಸ್ರವರ ಎಲ್ಲ ಪ್ರಾಚ್ಯವಸ್ತು ಸಂಗ್ರಹಣೆ ಮತ್ತು ಸಂಪಾದನೆಯಲ್ಲಿ ಇವರದು ಸಿಂಹಪಾಲು. ರೈಸ್ಅವರ ನಿವೃತ್ತಿಯಾದ ನಂತರ ನಿರ್ದೇಶಕರ ಹುದ್ದೆಗೆ ಬೇರೊಬ್ಬರನ್ನು ಹುಡುಕುವ ಅಗತ್ಯವೇ ಇರಲಿಲ್ಲ ಅವರ ಉತ್ತರಾಧಿಕಾರಯಾದ ಆಚಾರ್ಯರೇ ಸೂಕ್ತ ವ್ಯಕ್ತಿಯಾಗಿದ್ದರು. ನರಸಿಂಹಾಚಾರ್ಯರನ್ನೇ ನಿರ್ದೇಶಕರಾಗಿ ನೇಮಕಾತಿ ಮಾಡಲಾಯಿತು..ಅವರು ನಿರ್ದೇಶಕರಾದ ಮೇಲೆ ಶಾಸನಗಳ ಸಂಶೋಧನೆ ಭರದಿಂದ ಸಾಗಿತು. ಹಳ್ಳಿಹಳ್ಳಿಗಳಿಗೆ ಸಂಚರಿಸಿ ಸರಿ ಸುಮಾರು ೪೦೦೦ ಶಾಸನಗಳ ಸಂಗ್ರಹಮಾಡಿದರು.[೭] ಹಿಂದೆ ಸಂಗ್ರಹಿಸಿದ್ದ ನೂರಾರು ಶಾಸನಗಳನ್ನು ಪರಿಷ್ಕರಿಸಿದರು ಅವರು ಸಂಗ್ರಹಿಸಿದ ವಸ್ತುಗಳನ್ನು ಕುರಿತು ಸಿದ್ಧಪಡಿಸಿದ ವಾರ್ಷಿಕ ವರದಿಗಳು ಸಮಗ್ರವಾಗಿರುತ್ತಿದ್ದವು. ಹೊಸದಾಗಿ ಸಂಗ್ರಹಿಸಿದ ಶಾಸನಗಳನ್ನು ಎಪಿಗ್ರಾಫಿಯಾ ಕರ್ಣಾಟಿಕಾದ ಪುರವಣಿಗಳಾಗಿ ಪ್ರಕಟಿಸಿಸಲು ಸಿದ್ಧ ಮಾಡಿದರು. ಎಪಿಗ್ರಾಫಿಯಾ ಕರ್ನಾಟಿಕ ಮತ್ತು ಎಂ.ಎ. ಆರ್ಗಳ ಅಕಾರಾದಿ ಶಬ್ದ ಸೂಚಿಯನ್ನು ಸಿದ್ಧ ಮಾಡಿದರು. ಶ್ರವಣಬೆಳಗೊಳದ ಶಾಸನಸಂಪುಟವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿದರು.

ಬಿ. ಎಲ್ ರೈಸ್ ರವರು ಸಿದ್ಧಪಡಿಸಿದ ೨ನೇ ಸಂಪುಟದಲ್ಲಿ ಶ್ರವಣಬೆಳಗೊಳದ ೧೪೪ ಶಾಸನಗಳು ಮಾತ್ರ ಇದ್ದವು. ಆಚಾರ್ಯರ ಪರಿಷ್ಕರಣೆಯಲ್ಲಿ ಅವುಗಳ ಸಂಖ್ಯೆ ೫೦೦ಕ್ಕೆ ಏರಿತ್ತು. ಶ್ರವಣಬೆಳಗೊಳದ ಬಸದಿಗಳ ವಾಸ್ತುಶಿಲ್ಪಕುರಿತಾದ ಅವರ ಬರಹಗಳು ಇತೀಚಿನ ಹೊಸ ಪರಿಷ್ಕೃತ ಸಂಪುಟಗಳು ಬಂದಮೇಲೂ ಅತಿಮುಖ್ಯ ಆಕರ ಸಾಮಗ್ರಿಯಾಗಿ ಉಳಿದಿವೆ.

ವಿಶಿಷ್ಟ ಕೃತಿಗಳು[ಬದಲಾಯಿಸಿ]

ನರಸಿಂಹಾಚಾರ್ಯರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟ ಕೃತಿ “ಕರ್ಣಾಟಕ ಕವಿಚರಿತೆ”. ಮೂರು ಸಂಪುಟಗಳಲ್ಲಿರುವ ಈ ಕೃತಿ ಕನ್ನಡದ ಒಟ್ಟು ೧೧೪೮ ಜನ ಕವಿಗಳ ಚರಿತ್ರೆಯನ್ನೊಳಗೊಂಡಿದೆ. ಇವುಗಳನ್ನು ಕವಿಚರಿತ್ರಕರು ಬರೆಯತೊಡಗಿದಾಗ ಕನ್ನಡ ಸಾಹಿತ್ಯದಲ್ಲಿ ಇನ್ನೂ ಅರುಣೋದಯದ ಕಾಲ, ಬಹಳಷ್ಟು ಕೃತಿಗಳು ಅಪ್ರಕಟಿತವಾಗಿರುವ ಸನ್ನಿವೇಶ. ಇಂಥ ಸಂದರ್ಭದಲ್ಲೂ ಸುಮಾರು ೨೦೦೦ ಓಲೆಯ ಪ್ರತಿಗಳನ್ನು ಕಣ್ಣಾರೆ ನೋಡಿ ಅವುಗಳ ಅಮೂಲಾಗ್ರ ಪರಿಚಯವನ್ನೂ ಕವಿ, ಕಾಲ, ದೇಶ, ಕೃತಿಗಳನ್ನು ಕುರಿತು ನಿಖರವಾದ ಅಭಿಪ್ರಾಯಗಳನ್ನು ವ್ಯಕ್ತಗೊಳಿಸಿರುವುದು ಇಲ್ಲಿಯ ವಿಶೇಷ. ಹತ್ತಾರು ಜನ ಸೇರಿ ಹತ್ತಾರು ವರ್ಷಗಳ ಸತತ ಪರಿಶ್ರಮದಿಂದ ಮಾಡಬೇಕಾದ ಕಾರ್ಯವನ್ನು ಒಬ್ಬರೇ ವ್ಯಕ್ತಿ ಮಾಡಿದ್ದು ಅಪೂರ್ವವೆನಿಸಿದೆ. ಅಪ್ರತಿಮ ದೈತ್ಯ ಶಕ್ತಿಯ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಅವರು ತೋರಿದ ಶ್ರಮ-ಶ್ರದ್ಧೆ-ಸಂಯಮಗಳು ಅನುಕರಣೀಯವೆನಿಸಿವೆ. ಕನ್ನಡದ ಯಾವುದೇ ಕವಿಯ ವಿಷಯವನ್ನು ತಿಳಿದುಕೊಳ್ಳಲು ಬಯಸುವವರಿಗೆ ಪ್ರಥಮ ಆಕರಗಳಾಗಿ ನಿಂತಿರುವ ಕವಿಚರಿತೆಯ ಸಂಪುಟಗಳಿಗೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಚಾರಿತ್ರಿಕ ಮಹತ್ವವುಂಟು. ನರಸಿಂಹಾಚಾರ್ಯರು ಒಳ್ಳೆಯ ಗ್ರಂಥಸಂಪಾದಕರೂ ಹೌದು. ಅವರು ೧೯೦೩ರಲ್ಲಿ ಹೊಸ ಹಸ್ತಪ್ರತಿಗಳ ನೆರವಿನಿಂದ ‘ಕರ್ಣಾಟಕ ಭಾಷಾ ಭೂಷಣ’ದ ಎರಡನೆಯ ಮುದ್ರಣವನ್ನು ಮೊದಲಬಾರಿಗೆ ‘ಕಾವ್ಯಾವಲೋಕನ’ವನ್ನೂ ಒಂದೇ ಸಂಪುಟದಲ್ಲಿ ಪ್ರಕಟಿಸಿದರು. ಈ ಗ್ರಂಥಕ್ಕೆ ವಿದ್ವತ್ಪೂರ್ಣವಾದ ಇಂಗ್ಲಿಷ್ ಪೀಠಿಕೆ ಇದೆ. ಕಾವ್ಯಾವಲೋಕನವು ಮೈಸೂರು ವಿಶ್ವವಿದ್ಯಾಲಯದಿಂದ ಹಲವಾರು ಬಾರಿ ಪುನರ್ಮುದ್ರಣವಾಗಿದೆ. ಅವರ ‘ನೀತಿಮಂಜರಿ’ ‘ನೀತಿ-ವಾಕ್ಯಮಂಜರಿ’ ಕೃತಿಗಳಿಂದ ಒಳ್ಳೆಯ ಅನುವಾದಕರು ಎಂಬ ಹೆಸರನ್ನು ಪಡೆದಿದ್ದಾರೆ. ನೀತಿಮಂಜರಿಯಲ್ಲಿ ತಮಿಳಿನ ಅಪ್ಪೈಯಾರ್, ತಿರುವಳ್ಳುವರ್, ಸಂಸ್ಕೃತದ ಕ್ಷೇಮೆಂದ್ರ, ಭರ್ತೃಹರಿ ಮೊದಲಾದವರ ಕೃತಿ ಭಾಗಗಳನ್ನಾಯ್ದು ಅನುವಾದಿಸಲಾಗಿದೆ. ಇಜಿಇ ಬೆಶ್ಚಿ ಕೃತಿಯ ಭಾಷಾಂತರವಾದ ‘ನಗೆಗಡಲು’ ಆಚಾರ್ಯರ ಹಾಸ್ಯಪ್ರಜ್ಞೆಗೆ ಒಳ್ಳೆಯ ಉದಾಹರಣೆಯಾಗಿದೆ. ಗಾಂಪರೊಡೆಯರು ಮತ್ತು ಅವರ ಶಿಷ್ಯರ ಪ್ರತಾಪಗಳಿಗೆ ಸಂಬಂಧಿಸಿದ ಇಲ್ಲಿನ ಘಟನೆಗಳು ಕಥಾರೂಪದಲ್ಲಿವೆ. ಮೈಸೂರು ವಿಶ್ವವಿದ್ಯಾನಿಲಯದ ಕೋರಿಕೆಯ ಮೇರೆಗೆ ಆಚಾರ್ಯರು ಕನ್ನಡ ಭಾಷೆಯ ಇತಿಹಾಸವನ್ನು ಕುರಿತು ಮೈಸೂರಿನಲ್ಲಿ ಇತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳ ಪುಸ್ತಕರೂಪವೇ ‘History of Kannadada Language (೧೯೩೪)’ ಕೃತಿ. ಇದೇ ಮಾಲಿಕೆಯಲ್ಲಿ ಬೆಂಗಳೂರಿನಲ್ಲಿತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳು ‘History of Kannda Literature’ ಎಂಬ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. ಇವಲ್ಲದೆ ಆಚಾರ್ಯರು ೨೫೦ ಪುಸ್ತಕಗಳ ಹಸ್ತಪ್ರತಿಗಳನ್ನು ವಿಮರ್ಶಿಸಿದ್ದಾರೆ. ಬೆಂಗಳೂರಿನ ಮಿಥಿಕ್ ಸೊಸೈಟಿಯ ಬೆಳ್ಳಿಹಬ್ಬದ ಸಮಯದಲ್ಲಿ ‘ಬೃಹದ್ಭಾರತ’ ಪರಿಚಯವನ್ನು ಸ್ವಾರಸ್ಯಕರವಾಗಿ ಮಾಡಿಕೊಟ್ಟಿದ್ದಾರೆ. ಅವರ ಕೆಲವೊಂದು ಕೃತಿಗಳು ಇಂತಿವೆ:

 • ಕರ್ನಾಟಕ ಕವಿಚರಿತ್ರೆ (೩ ಸಂಪುಟಗಳು)
 • ಶಾಸನ ಪದ್ಯ ಮಂಜರಿ
 • ಕನ್ನಡ ಶಾಸನ ಪದ್ಯ ಸಂಗ್ರಹ
 • ಶಬ್ದಾನುಶಾಸನ
 • ಕನ್ನಡ ಭಾಷಾ ಚರಿತ್ರೆ
 • ನೀತಿ ಮಂಜರಿ ( ತಮಿಳಿನ “ಕುರುಳ್” ಗ್ರಂಥದ ಆಧಾರದ ಮೇಲೆ).
 • ನಗೆಗಡಲು

ಸಂಪಾದನೆ[ಬದಲಾಯಿಸಿ]

 • ೨ನೆಯ ನಾಗವರ್ಮನ ಭಾಷಾ ಭೂಷಣ
 • ೨ನೆಯ ನಾಗವರ್ಮನ ಕಾವ್ಯಾವಲೋಕನ

ಕನ್ನಡ ಸಾಹಿತ್ಯದ ಇತಿಹಾಸ[ಬದಲಾಯಿಸಿ]

 • ಇವರ ಸಾಹಿತ್ಯ ಸೇವೆ ಬಹುಮುಖವಾದುದು.ಪ್ರಾಚೀನ ಕಾವ್ಯಗಳ ಸಂಪಾದನೆಯ ಜೊತೆ ಜೊತೆಗೆ ಕನ್ನಡ, ಸಂಸ್ಕೃತ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಕೃತಿಗಳನ್ನು ರಚಿಸಿದರು. ತಮಿಳಿನಲ್ಲಿ ಮೂರುಗ್ರಂಥ, ಸಂಸ್ಕೃತದಲ್ಲಿ ಮೂರು, ಇಂಗ್ಲಿಷ್ ನಲ್ಲಿನಾಲ್ಕು ಗ್ರಂಥಗಳನ್ನು ರಚಿಸಿ ಬಹು ಭಾಷಾ ಲೇಖಕರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ವಿದ್ವತ್ಪೂರ್ಣ ಸಂಶೋಧನ ಲೇಖನಗಳನ್ನು ಮಿಥಿಕ್ಸೊಸೈಟಿ ಜರ್ನಲ್, ಇಂಡಿಯನ್ಆಂಟಿಕ್ವೆರಿ, ರಾಯಲ್ಏಷಿಯಾಟಿಕ್ ಜರ್ನಲ್ ಗಳಲ್ಲಿ ಪ್ರಕಟಿಸಿರುವರು.
 • ಇವರಿಗೆ ಶಾಸ್ತ್ರೀಯ ಮತ್ತು ಸಂಶೋಧನ ಸಾಹಿತ್ಯದಂತೆಯೇ ಇತರ ಪ್ರಕಾರದ ಸಾಹಿತ್ಯದಲ್ಲಿಯೂ ಒಲವಿತ್ತು. ಇವರ 'ನಗೆಗಡಲು" ಎಂಬ ಕೃತಿಯಲ್ಲಿ ಹಾಸ್ಯದ ವಿವಿಧ ಮುಖಗಳಾದ ಹುಚ್ಚು ಹಾಸ್ಯ, ಚುಚ್ಚು ಹಾಸ್ಯ, ಲೇವಡಿ , ಕುಚೋದ್ಯಗಳನ್ನು ಕಾಣಬಹುದು.

ಗೌರವ, ಪುರಸ್ಕಾರಗಳು[ಬದಲಾಯಿಸಿ]

 • ೧೯೦೭ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 • ೧೯೧೮ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿತರಾದರು.[೮]
 • ೧೯೩೪ರಲ್ಲಿ ಕೇಂದ್ರ ಸರಕಾರ ಇವರಿಗೆ ಮಹಾಮಹೋಪಾಧ್ಯಾಯ ಪ್ರಶಸ್ತಿ ನೀಡಿ ಗೌರವಿಸಿತು.
 • ಕಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘದಿಂದ ಕರ್ನಾಟಕ ಪ್ರಾಚ್ಯ ವಿದ್ಯಾ ವೈಭವ ಪ್ರಶಸ್ತಿ.
 • ಪ್ರಜಾಕೋಟಿ ಪ್ರಾಕ್ತನ ವಿಮರ್ಶನ ವಿಚಕ್ಷಣ, ಅಭಿನವ ಕನ್ನಡ ಸೀಮಾ ಪುರುಷ, ರಾವ್ ಬಹದ್ದೂರ್ ಮುಂತಾದ ಬಿರುದುಗಳು ಸಂದವು.
 • ಆಚಾರ್ಯರ ಕನ್ನಡ ನಾಡು ನುಡಿಯ ಸೇವೆಯ ಮಹತ್ವವನ್ನು ವಿದ್ವತ್ ಲೋಕ ಗುರುತಿಸಿತು. ಅವರಿಗೆ ೧೯೦೭ರಲ್ಲಿ ಎಂ.ಆರ್.ಎ.ಎಸ್ ಸದಸ್ಯತ್ವ ಲಭಿಸಿತು. 'ಪ್ರಾಕ್ತನ 'ಪರಾಮರ್ಶ ವಿಚಕ್ಷಣ' ಮತ್ತು 'ರಾವ್ ಬಹದ್ದೂರ್' ಪ್ರಶಸ್ತಿಗಳನ್ನು ಕೊಡಲಾಯಿತು. ಅವರ ಸಾಹಿತ್ಯ ಸೇವೆಗಾಗಿ ೧೯೧೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೪ನೇ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಗೌರವಿಸಲಾಯಿತು. ಪ್ರಾಚ್ಯಸಂಶೋಧನಾ ಕಾರ್ಯದ ಮಹತ್ವ ಗುರುತಿಸಿ 'ಕರ್ನಾಟಕ ಪ್ರಾಚ್ಯ ವಿದ್ಯಾವೈಭವ ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಮಟ್ಟದಲ್ಲೂ ಅವರ ಸಾಧನೆಯನ್ನು ಮನ್ನಿಸಿ ಭಾರತ ಸರ್ಕಾರವು ಅವರಿಗೆ " ಮಹಾ ಮಹೋಪಾಧ್ಯಾಯ" ಪ್ರಶಸ್ತಿನೀಡಿ ಗೌರವ ಸಲ್ಲಿಸಿತು.

ಅವರು ಕನ್ನಡ ಕಾವ್ಯಮತ್ತು ಕರ್ನಾಟಕದ ಅಧ್ಯಯನಕ್ಕೆ ಶಾಸ್ತ್ರೀಯ ಅಡಿಪಾಯ ಹಾಕಿದ ಮಹನೀಯರು . ತಮ್ಮ ಇಳಿವಯಸ್ಸಿನಲ್ಲೂ ಅವರ ಕನ್ನಡ ಸೇವೆ ಕಾರ್ಯ ಸ್ಥಗಿತವಾಗಲಿಲ್ಲ. ಅವರು ತಮ್ಮ ೭೭ನೇ ವಯಸ್ಸಿನಲ್ಲಿ ಇಹಲೋಕ ತೊರೆಯುವ ತನಕ ಕನ್ನಡಕ್ಕಾಗಿ ದುಡಿದರು.. ಅವರು ಕಾಲವಾದರೂ ಕನ್ನಡಿಗರ ಮನ ಮಾನಸದಲ್ಲಿ ಶಾಶ್ವತವಾಗಿ ನೆಲಸಿರುವರು. ಇಂದಿಗೂ ಕನ್ನಡದ 'ಮಹಾಮಹೋಪಾಧ್ಯಾಯರೆಂದರೆ ಆರ್. ನರಸಿಂಹಾಚಾರ್ಯರು ಮೊದಲಿಗರು. ಮತ್ತೊಬ್ಬರು ವಿದ್ವಾನ್ ರಂಗನಾಥ ಶರ್ಮಾ

ಧಾರ್ಮಿಕ ಶ್ರದ್ಧೆ[ಬದಲಾಯಿಸಿ]

ಆಚಾರ್ಯರಲ್ಲಿ ವೈದಿಕ ಶ್ರದ್ಧೆ ಮತ್ತು ದೈವಭಕ್ತಿ ಅಪಾರವಾಗಿದ್ದಿತು. “ಅವರು ನಲ್ಲಿ ನೀರು ಎಂದೂ ಕುಡಿದವರಲ್ಲ. ಅವರೊಮ್ಮೆ ಕಲ್ಕತ್ತೆಯಲ್ಲಿದ್ದಾಗ ಮನೆಯ ಹತ್ತಿರ ಬಾವಿ ಇರಲಿಲ್ಲ. ಮನೆಯಾಳಿಗೆ ಆರೋಗ್ಯ ಕಡಿಮೆಯಾಗಿತ್ತು. ಆದ್ದರಿಂದ ದೂರದಲ್ಲಿದ್ದ ಬಾವಿಯಿಂದ ತಾವೇ ನೀರು ಹೊತ್ತು ತರುತ್ತಿದ್ದರಂತೆ. ಇಷ್ಟು ಸಂಪ್ರದಾಯಶೀಲರಾದರೂ ಪರಮತ ಪರಧರ್ಮಗಳ ವಿಷಯದಲ್ಲಿ ತಪ್ಪಿಯೂ ದ್ವೇಷಕ್ಕೆಡೆಕೊಟ್ಟವರಲ್ಲ.

ವಿದಾಯ[ಬದಲಾಯಿಸಿ]

ಆರ್.ನರಸಿಂಹಾಚಾರ್ಯರು ೧೯೩೬ ಡಿಶಂಬರ ೬ರಂದು ತೀರಿಕೊಂಡರು.

ಹೆಚ್ಚಿಗೆ ಓದಲು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. http://kannadakavi.com/kavikoota/14samshodha/r_narasimachar.htm
 2. "ಆರ್ಕೈವ್ ನಕಲು". Archived from the original on 2020-09-29. Retrieved 2019-02-27.
 3. http://www.sobagu.in/%E0%B2%86%E0%B2%B0%E0%B3%8D-%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%BE%E0%B2%9A%E0%B2%BE%E0%B2%B0%E0%B3%8D/
 4. https://www.deccanherald.com/content/120404/my-love-mysore-unending.html
 5. http://worldcat.org/identities/lccn-n81097845/
 6. https://www.revolvy.com/page/B.-Lewis-Rice
 7. http://kannadasiri.kar.nic.in/archaeology/eng/introduction.htm
 8. http://kannadasahithyaparishattu.in/?p=481